‘ಯಾಸ್’ ಚಂಡಮಾರುತದಿಂದ ಎದುರಾಗಲಿರುವ ಪರಿಸ್ಥಿತಿಯನ್ನು ನಿಭಾಯಿಸಲು ಸಂಬಂಧಿಸಿದ ರಾಜ್ಯಗಳು ಮತ್ತು ಕೇಂದ್ರ ಸಚಿವಾಲಯಗಳು/ಸಂಸ್ಥೆಗಳು ಕೈಗೊಂಡಿರುವ ಸಿದ್ಧತಾ ಕ್ರಮಗಳ ಪರಾಮರ್ಶೆಗೆ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.
‘ಯಾಸ್’ ಚಂಡಮಾರುತವು ಪ್ರತಿ ಗಂಟೆಗೆ 155-165 ಕಿ.ಮೀ.ನಿಂದ ಹಿಡಿದು 185 ಕಿ.ಮೀ. ವೇಗದಲ್ಲಿ ಸಾಗಿ ಮೇ. 26ರ ಸಂಜೆ ವೇಳೆಗೆ ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾ ಕರಾವಳಿಯನ್ನು ತಲುಪುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಡಿಎಂಡಿ) ಹೇಳಿದೆ. ಪಶ್ಚಿಮ ಬಂಗಾಳ ಮುತ್ತು ಉತ್ತರ ಒಡಿಶಾದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕರಾವಳಿ ಪ್ರದೇಶದಲ್ಲಿ ಚಂಡಮಾರುತ ಸುಮಾರು 2 ರಿಂದ 4 ಮೀಟರ್ ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಸಂಬಂಧಿಸಿದ ರಾಜ್ಯಗಳಿಗೆ ಹವಾ ಮುನ್ಸೂಚನೆಯ ತಾಜಾ ಮಾಹಿತಿಯನ್ನು ಐಎಂಡಿ ನಿರಂತರವಾಗಿ ನೀಡುತ್ತಿದೆ.
2021ರ ಮೇ 22ರಂದು ಸಂಪುಟ ಕಾರ್ಯದರ್ಶಿಗಳು ಸಂಬಂಧಿಸಿದ ಎಲ್ಲಾ ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೇಂದ್ರ ಸಚಿವಾಲಯಗಳು/ ಸಂಸ್ಥೆಗಳೊಂದಿಗೆ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ(ಎನ್ ಸಿಎಂಸಿ) ಸಭೆಯನ್ನು ನಡೆಸಿದ್ದರು ಎಂದು ಪ್ರಧಾನಮಂತ್ರಿ ಅವರಿಗೆ ಮಾಹಿತಿ ನೀಡಲಾಯಿತು.
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್ಎ) ದಿನದ 24 ಗಂಟೆಯೂ ಪರಿಸ್ಥಿತಿಯನ್ನು ಪರಾಮರ್ಶಿಸುತ್ತಿದೆ ಮತ್ತು ಅದು ಸಂಬಂಧಿಸಿದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರದ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಎಂಎಚ್ಎ ಈಗಾಗಲೇ ಎಲ್ಲಾ ರಾಜ್ಯಗಳಿಗೆ ಮುಂಗಡವಾಗಿ ಎಸ್ ಡಿಆರ್ ಎಫ್ ನ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಿದೆ. ಎನ್ ಡಿಆರ್ ಎಫ್ ದೋಣಿ, ಮರ ಕಟಾವು ಯಂತ್ರ, ದೂರಸಂಪರ್ಕ ಉಪಕರಣಗಳು ಇತ್ಯಾದಿ ಹೊಂದಿದ 46 ತಂಡಗಳನ್ನು ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿಯೋಜಿಸಿದೆ. ಅಲ್ಲದೆ ಇಂದು 13 ತಂಡಗಳನ್ನು ವಿಮಾನದ ಮೂಲಕ ರವಾನಿಸಲಾಗಿದೆ ಹಾಗೂ ಹತ್ತು ತಂಡಗಳನ್ನು ಸನ್ನದ್ಧವಾಗಿಟ್ಟಿದೆ.
ಭಾರತೀಯ ಕರಾವಳಿ ಪಡೆ ಮತ್ತು ನೌಕಾಪಡೆ ಪರಿಹಾರ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಹಡಗುಗಳು ಹಾಗೂ ಹೆಲಿಕಾಪ್ಟರ್ ಗಳನ್ನು ನಿಯೋಜಿಸಿದೆ. ಸೇನೆಯ ಇಂಜಿನಿಯರಿಂಗ್ ಕಾರ್ಯಪಡೆ ಘಟಕ ಮತ್ತು ವಾಯುಪಡೆ ಹಡಗುಗಳು ಮತ್ತು ರಕ್ಷಣಾ ಉಪಕರಣಗಳ ಸಹಿತ ನಿಯೋಜನೆಗೆ ಸನ್ನದ್ಧವಾಗಿವೆ. ಮಾನವೀಯ ನೆರವು ಮತ್ತು ಪ್ರಕೋಪ ಪರಿಹಾರ ಘಟಕಗಳನ್ನು ಹೊಂದಿರುವ ಏಳು ಹಡಗುಗಳನ್ನು ಪಶ್ಚಿಮ ಕರಾವಳಿಯಲ್ಲಿ ಸನ್ನದ್ಧವಾಗಿಡಲಾಗಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸಮುದ್ರದಲ್ಲಿನ ಎಲ್ಲಾ ತೈಲ ಸ್ಥಾವರಗಳ ಸುರಕ್ಷತೆಗೆ ಕ್ರಮಗಳನ್ನು ಕೈಗೊಂಡಿದೆ ಮತ್ತು ಸಮುದ್ರದಲ್ಲಿದ್ದ ತನ್ನ ಹಡಗುಗಳನ್ನು ಸುರಕ್ಷಿತವಾಗಿ ಬಂದರಿಗೆ ವಾಪಸ್ ಕರೆಸಿಕೊಂಡಿದೆ. ಇಂಧನ ಸಚಿವಾಲಯ ತನ್ನ ತುರ್ತು ಪ್ರತಿಸ್ಪಂದನಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ ಮತ್ತು ತಕ್ಷಣ ವಿದ್ಯುತ್ ಮರು ಸ್ಥಾಪನೆಗೆ ಟ್ರಾನ್ಸ್ ಫಾರ್ಮರ್ ಗಳು, ಡಿಜಿ ಸೆಟ್ ಮತ್ತು ಉಪಕರಣಗಳನ್ನು ಸಿದ್ಧವಾಗಿ ಇಟ್ಟುಕೊಂಡಿದೆ. ದೂರಸಂಪರ್ಕ ಸಚಿವಾಲಯ ಎಲ್ಲಾ ಟೆಲಿಕಾಂ ಟವರ್ ಗಳು ಮತ್ತು ವಿನಿಮಯ ಕೇಂದ್ರಗಳ ಮೇಲೆ ನಿಗಾ ಇರಿಸಿದ್ದು, ದೂರಸಂಪರ್ಕ ಜಾಲದ ಮರುಸ್ಥಾಪನೆಗೆ ಸಂಪೂರ್ಣವಾಗಿ ಸಜ್ಜಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಾಧಿತವಾಗಲಿರುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆಯನ್ನು ನೀಡಿ, ಬಾಧಿತವಾಗಲಿರುವ ಪ್ರದೇಶದಲ್ಲಿ ಕೋವಿಡ್ ನಿರ್ವಹಣೆಗೆ ಆರೋಗ್ಯ ವಲಯವನ್ನು ಸನ್ನದ್ಧವಾಗಿಟ್ಟುಕೊಳ್ಳುವಂತೆ ಸೂಚಿಸಿದೆ. ಬಂದರು, ಶಿಪ್ಪಿಂಗ್ ಮತ್ತು ಒಳನಾಡು ಸಚಿವಾಲಯ ಎಲ್ಲಾ ಮೀನುಗಾರಿಕೆ ಹಡಗುಗಳ ಭದ್ರತೆಗೆ ಕ್ರಮ ಕೈಗೊಂಡಿದೆ ಮತ್ತು ತುರ್ತು ಹಡಗುಗಳನ್ನು(ಟಗ್ಸ್) ನಿಯೋಜಿಸಿದೆ.
ಎನ್ ಡಿಆರ್ ಎಫ್ ರಾಜ್ಯಗಳಿಗೆ ಆಯಕಟ್ಟಿನ ಜಾಗಗಳಿಂದ ಜನರನ್ನು ಸ್ಥಳಾಂತರಿಸಲು ಕೈಗೊಂಡಿರುವ ಸಿದ್ಧತೆಗಳಿಗೆ ನೆರವು ನೀಡುತ್ತಿದೆ ಮತ್ತು ಚಂಡಮಾರುತ ಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಕುರಿತು ಸಮುದಾಯ ಜಾಗೃತಿ ಅಭಿಯಾನಗಳನ್ನು ನಿರಂತರವಾಗಿ ನಡೆಸುತ್ತಿದೆ.
ಹೆಚ್ಚು ಅಪಾಯವಿರುವ ಪ್ರದೇಶಗಳಿಂದ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ರಾಜ್ಯಗಳ ಜೊತೆ ನಿಕಟ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಲ್ಲದೆ ಅವರು ಸಮುದ್ರ ತೀರದ ಚಟುವಟಿಕೆಗಳಲ್ಲಿ ತೊಡಗಿರುವವರ ಸಕಾಲಿಕ ಸ್ಥಳಾಂತರವನ್ನು ಖಾತ್ರಿಪಡಿಸಲು ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿದ್ಯುತ್ ಪೂರೈಕೆ ಮತ್ತು ಸಂವಹನ ಜಾಲ ಕಡಿತಗೊಂಡಾಗ ಅದರ ಮರುಸ್ಥಾಪನೆ ಕ್ಷಿಪ್ರವಾಗಿ ಮತ್ತು ಕನಿಷ್ಠ ಸಮಯದಲ್ಲಿ ಆಗುವ ಅಗತ್ಯವಿದೆ ಎಂದು ಅವರು ಹೇಳಿದರು. ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ಮತ್ತು ಲಸಿಕೀಕರಣದಲ್ಲಿ ಯಾವುದೇ ವ್ಯತ್ಯಯವಾಗದಂತೆ ರಾಜ್ಯ ಸರ್ಕಾರಗಳೊಂದಿಗೆ ಸೂಕ್ತ ಸಮನ್ವಯ ಮತ್ತು ಯೋಜನೆಗಳನ್ನು ಖಾತ್ರಿಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಯಾವುದೇ ಸೀಮಾತೀತ ಸಮನ್ವಯ ಮತ್ತು ಉತ್ತಮ ಪದ್ಧತಿಗಳಿಂದ ಕಲಿತಿರುವ ಆಧಾರದ ಮೇಲೆ ಯೋಜನೆ ಮತ್ತು ಸಿದ್ಧತಾ ಪ್ರಕ್ರಿಯೆಗಳಲ್ಲಿ ಜಿಲ್ಲಾಡಳಿತಗಳನ್ನು ಸೇರ್ಪಡೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಅವರು ಚಂಡಮಾರುತದ ಸಮಯದಲ್ಲಿ ಯಾವ ಕೆಲಸಗಳನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂಬ ಮಾರ್ಗಸೂಚಿಗಳು ಮತ್ತು ಸಲಹೆಗಳನ್ನು ಸುಲಭವಾಗಿ ಅರ್ಥವಾಗುವಂತೆ ಸಿದ್ಧಪಡಿಸಿ, ಅವುಗಳನ್ನು ಬಾಧಿತವಾಗುವ ಜಿಲ್ಲೆಗಳ ಜನರಿಗೆ ಸ್ಥಳೀಯ ಭಾಷೆಯಲ್ಲಿ ದೊರಕಿಸಿ ಕೊಡಬೇಕು ಎಂದರು. ಕರಾವಳಿಯ ಸಮುದಾಯ, ಕೈಗಾರಿಕೆಗಳು ಮತ್ತಿತರ ಭಾಗೀದಾರರನ್ನು ನೇರವಾಗಿ ತಲುಪುವ ಮೂಲಕ ಮತ್ತು ಅವರನ್ನು ಸಂವೇದನೆಗೊಳಿಸುವ ಮೂಲಕ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಸಭೆಯಲ್ಲಿ ಗೃಹ ಸಚಿವರು, ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವರು, ಸಂಪುಟ ಕಾರ್ಯದರ್ಶಿ, ಗೃಹ, ದೂರಸಂಪರ್ಕ, ಮೀನುಗಾರಿಕೆ, ನಾಗರಿಕ ವಿಮಾನಯಾನ, ಇಂಧನ, ಬಂದರು, ಶಿಪ್ಪಿಂಗ್ ಮತ್ತು ಒಳನಾಡು, ಭೂವಿಜ್ಞಾನಗಳ ಸಚಿವಾಲಯಗಳು/ಇಲಾಖೆಗಳ ಕಾರ್ಯದರ್ಶಿಗಳು, ರೈಲ್ವೆ ಮಂಡಳಿ ಅಧ್ಯಕ್ಷರು, ಎನ್ ಡಿಎಂಎ ಸದಸ್ಯ ಕಾರ್ಯದರ್ಶಿ ಮತ್ತು ಸದಸ್ಯರು, ಐಎಂಡಿ ಮತ್ತು ಎನ್ ಡಿಆರ್ ಎಫ್ ನ ಮಹಾ ನಿರ್ದೇಶಕರು ಹಾಗೂ ಪಿಎಂಒ, ಎಂಎಚ್ಎ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.