ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ದೇಶದ ಕೋವಿಡ್ -19 ಸಾಂಕ್ರಾಮಿಕದ ಪರಿಸ್ಥಿತಿ ಮತ್ತು ಲಸಿಕೆಯ ಪೂರೈಕೆ, ವಿತರಣೆ ಹಾಗೂ ಆಡಳಿತ ಕುರಿತಂತೆ ಪರಾಮರ್ಶೆ ನಡೆಸಿದರು.
ಸಭೆಯಲ್ಲಿ ಕೇಂದ್ರ ಸಚಿವರುಗಳಾದ ಶ್ರೀ ಹರ್ಷವರ್ಧನ್, ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ನೀತಿ ಆಯೋಗದ (ಆರೋಗ್ಯ) ಸದಸ್ಯ, ಪ್ರಧಾನ ವೈಜ್ಞಾನಿಕ ಸಲಹೆಗಾರ, ಹಿರಿಯ ವಿಜ್ಞಾನಿಗಳು, ಪ್ರಧಾನಮಂತ್ರಿಗಳ ಕಾರ್ಯಾಲಯ ಮತ್ತು ಭಾರತ ಸರ್ಕಾರದ ಇತರ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ದೈನಿಕ ಕೋವಿಡ್ ಪ್ರಕರಣಗಳು ಮತ್ತು ವೃದ್ಧಿ ದರದ ನಿರಂತರ ಇಳಿಕೆಯನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು.
ಭಾರತದಲ್ಲಿ ಮೂರು ಲಸಿಕೆಗಳು ಅಭಿವೃದ್ಧಿಯ ಮುಂದುವರಿದ ಹಂತದಲ್ಲಿದ್ದು, ಈ ಪೈಕಿ ಎರಡು 2ನೇ ಹಂತ ಮತ್ತು ಇನ್ನೊಂದು 3ನೇ ಹಂತದಲ್ಲಿದೆ. ಭಾರತೀಯ ವಿಜ್ಞಾನಿಗಳು ಮತ್ತು ಸಂಶೋಧಕರ ತಂಡ ನೆರೆಯ ದೇಶಗಳ ಅಂದರೆ ಆಫ್ಘಾನಿಸ್ತಾನ, ಭೂತಾನ್, ಬಾಂಗ್ಲಾದೇಶ, ಮಾಲ್ಡೀವ್ಸ್, ಮಾರಿಷಸ್, ನೇಪಾಳ ಮತ್ತು ಶ್ರೀಲಂಕಾದ ಸಂಶೋಧನಾ ಸಾಮರ್ಥ್ಯದ ಬಲವರ್ಧನೆಗೆ ಸಹಯೋಗ ನೀಡುತ್ತಿವೆ. ತಮ್ಮ ದೇಶಗಳಲ್ಲಿ ಚಿಕಿತ್ಸಾಲಯ ಪ್ರಯೋಗ ನಡೆಸುವಂತೆ ಭೂತಾನ್, ಖತಾರ್, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಗಳಿಂದಲೂ ಹೆಚ್ಚಿನ ಮನವಿಗಳು ಬಂದಿವೆ. ಲಸಿಕೆ, ಔಷಧ ಮತ್ತು ಲಸಿಕೆ ವಿತರಣೆ ವ್ಯವಸ್ಥೆಗಾಗಿ ಐಟಿ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಜಾಗತಿಕ ಸಮುದಾಯಕ್ಕೆ ನೆರವಾಗುವ ಪ್ರಯತ್ನವಾಗಿ ನಾವು, ನಮ್ಮ ಪ್ರಯತ್ನಗಳನ್ನು ಕೇವಲ ನಮ್ಮ ಹತ್ತಿರದ ನೆರೆಯವರಿಗಷ್ಟೇ ಅಲ್ಲದೆ ಇಡೀ ವಿಶ್ವಕ್ಕೆ ನೆರವಾಗಬೇಕು ಎಂದು ಪ್ರಧಾನಮಂತ್ರಿಯವರು ಹೇಳಿದರು.
ಕೋವಿಡ್ -19 ಲಸಿಕೆ ಆಡಳಿತ ಕುರಿತ ರಾಷ್ಟ್ರೀಯ ತಜ್ಞರ ಗುಂಪು (ಎನ್.ಇ.ಜಿ.ವಿ.ಎ.ಸಿ.) ರಾಜ್ಯ ಸರ್ಕಾರಗಳು ಮತ್ತು ಎಲ್ಲ ಸೂಕ್ತ ಬಾಧ್ಯಸ್ಥರೊಂದಿಗೆ ಸಮಾಲೋಚಿಸಿ ಲಸಿಕೆ ಸಂಗ್ರಹಣೆ, ವಿತರಣೆ ಮತ್ತು ಆಡಳಿತದ ವಿವರವಾದ ನೀಲನಕ್ಷೆಯನ್ನು ಸಿದ್ಧಪಡಿಸಿದ್ದಾರೆ ಮತ್ತು ಪ್ರಸ್ತುತಪಡಿಸಿದ್ದಾರೆ. ತಜ್ಞರ ತಂಡ ರಾಜ್ಯಗಳೊಂದಿಗೆ ಸಮಾಲೋಚಿಸಿ ಲಸಿಕೆಯ ಆದ್ಯತೆಯ ವಿತರಣೆ ಮತ್ತು ಪೂರೈಕೆಯ ಬಗ್ಗೆ ಸಕ್ರಿಯವಾಗಿ ಕಾರ್ಯೋನ್ಮುಖವಾಗಿವೆ.
ದೇಶದ ಭೌಗೋಳಿಕ ವ್ಯಾಪ್ತಿ ಮತ್ತು ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಲಸಿಕೆ ದೊರಕುವುದನ್ನು ತ್ವರಿತವಾಗಿ ಖಾತ್ರಿಪಡಿಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ನಿರ್ದೇಶಿಸಿದರು. ಸಾಗಣೆ, ವಿತರಣೆ ಮತ್ತು ಆಡಳಿತದ ಪ್ರತಿಯೊಂದು ಹೆಜ್ಜೆಯನ್ನೂ ಕಠಿಣವಾಗಿ ಜಾರಿಗೆ ತರಬೇಕು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇದು ಶೀಥಲೀಕರಣ ಘಟಕಗಳ ಸರಪಳಿಗಳ ಸುಧಾರಿತ ಯೋಜನೆ, ವಿತರಣಾ ಜಾಲ, ಮೇಲ್ವಿಚಾರಣಾ ಕಾರ್ಯವಿಧಾನ, ಮುಂದುವರಿದ ಮೌಲ್ಯಮಾಪನ ಮತ್ತು ಅಗತ್ಯವಿರುವ ಪೂರಕ ಸಾಧನಗಳಾದ ವೈಲ್ಸ್, ಸಿರಿಂಜ್ ಇತ್ಯಾದಿಗಳನ್ನು ತಯಾರಿಕೆಯನ್ನು ಒಳಗೊಂಡಿರಬೇಕು ಎಂದರು.
ನಾವು ದೇಶದಲ್ಲಿ ಚುನಾವಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಮತ್ತು ವಿಪತ್ತು ನಿರ್ವಹಣೆ ಮಾಡಿರುವ ಅನುಭವವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದೂ ಅವರು ಸೂಚಿಸಿದರು. ಇದೇ ರೀತಿಯಲ್ಲಿ ಲಸಿಕೆಯ ಪೂರೈಕೆ ಮತ್ತು ಆಡಳಿತ ವ್ಯವಸ್ಥೆಯನ್ನು ಅನುಷ್ಠಾನ ಮಾಡಬೇಕು ಎಂದರು. ಇದರಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು/ ಜಿಲ್ಲಾ ಮಟ್ಟದ ಕಾರ್ಯ ನಿರ್ವಾಹಕರು, ನಾಗರಿಕ ಸಮಾಜದ ಸಂಘಟನೆಗಳು, ಸ್ವಯಂ ಸೇವಕರು, ನಾಗರಿಕರು ಮತ್ತು ಅಗತ್ಯವಿರುವ ಕ್ಷೇತ್ರಗಳ ತಜ್ಞರನ್ನು ತೊಡಗಿಸಿಕೊಳ್ಳಬೇಕು ಎಂದರು. ಇಡೀ ಪ್ರಕ್ರಿಯೆಗೆ ಬಲವಾದ ಐಟಿಯ ಬೆಂಬಲವಿರಬೇಕು ಮತ್ತು ನಮ್ಮ ಆರೋಗ್ಯ ವ್ಯವಸ್ಥೆಗೆ ಶಾಶ್ವತವಾದ ಮೌಲ್ಯವನ್ನು ಹೊಂದುವಂತೆ ವ್ಯವಸ್ಥೆಯನ್ನು ವಿನ್ಯಾಸಗೊಳಿಸಬೇಕು. ಐಸಿಎಂಆರ್ ಮತ್ತು ಡಿ/ಒ ಬಯೋ-ಟೆಕ್ನಾಲಜಿ (ಡಿಬಿಟಿ) ಭಾರತದಲ್ಲಿ ನಡೆಸಿದ ಜೀನೋಮ್ ಆಫ್ ಎಸ್ಎಆರ್.ಸಿ.ಒವಿ -2 (ಕೋವಿಡ್ -19 ವೈರಾಣು) ಕುರಿತ ಎರಡು ಭಾರತಾದ್ಯಂತದ ಅಧ್ಯಯನಗಳು ಈ ವೈರಾಣು ತಳೀಯವಾಗಿ ಸ್ಥಿರವಾಗಿದ್ದು ವೈರಾಣುವಿನಲ್ಲಿ ಯಾವುದೇ ಪ್ರಮುಖ ರೂಪಾಂತರಗಳಿಲ್ಲ ಎಂಬುದನ್ನು ಸೂಚಿಸುತ್ತದೆ.
ಪ್ರಧಾನಮಂತ್ರಿಯವರು, ಇಳಿಕೆಯ ತೃಪ್ತಿಯಿಂದ ಅನುಸರಣೆಯ ಬಗ್ಗೆ ಎಚ್ಚರಿಕೆ ವಹಿಸುವಂತೆ ಮತ್ತು ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಪ್ರಯತ್ನಗಳನ್ನು ಮುಂದುವರಿಸುವಂತೆ ತಿಳಿಸಿದರು. ಮುಂಬರುವ ಹಬ್ಬದ ಪರ್ವದ ಹಿನ್ನೆಲೆಯಲ್ಲಿ, ವ್ಯಕ್ತಿಗತ ಅಂತರ, ಮಾಸ್ಕ್ ಧಾರಣೆ, ನಿಯಮಿತವಾಗಿ ಕೈ ತೊಳೆಯುವುದು ಮತ್ತು ನೈರ್ಮಲ್ಯ ಮುಂತಾದ ಕೋವಿಡ್ ನಿಯಂತ್ರಣಕ್ಕೆ ಸೂಕ್ತವಾದ ನಡವಳಿಕೆ ಪಾಲನೆಗೆ ಅವರು ಒತ್ತಾಯಿಸಿದರು.