ಜವಾದ್ ಚಂಡಮಾರುತ ರಚನೆ ಸಾಧ್ಯತೆಯಿಂದ ಉಂಟಾಗಲಿರುವ ಪರಿಸ್ಥಿತಿಯನ್ನು ಎದುರಿಸಲು ರಾಜ್ಯಗಳು ಮತ್ತು ಕೇಂದ್ರ ಸಚಿವಾಲಯಗಳು ಹಾಗೂ ಸಂಬಂಧಿಸಿದ ಸಂಸ್ಥೆಗಳು ಕೈಗೊಂಡಿರುವ ಸಿದ್ಧತೆಗಳ ಕುರಿತಂತೆ ಪರಾಮರ್ಶಿಸಲು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.
ಜನರ ಸುರಕ್ಷಿತ ಸ್ಥಳಾಂತರಕ್ಕೆ ಎಲ್ಲ ಸಾಧ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು ಜನರಿಗೆ ವಿದ್ಯುತ್, ದೂರಸಂಪರ್ಕ, ಆರೋಗ್ಯ, ಕುಡಿಯುವ ನೀರು ಸೇರಿದಂತೆ ಎಲ್ಲಾ ಅಗತ್ಯ ಸೇವೆಗಳ ನಿರ್ವಹಣೆಯನ್ನು ಖಾತ್ರಿಪಡಿಸಬೇಕು ಮತ್ತು ಒಂದು ವೇಳೆ ಅವುಗಳಿಗೆ ತೊಂದರೆ ಆದರೆ ತಕ್ಷಣವೇ ಅವುಗಳ ಪುನರ್ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಮಂತ್ರಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಅಗತ್ಯ ಔಷಧಗಳು ಮತ್ತು ಪೂರೈಕೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳಬೇಕು ಮತ್ತು ಅವುಗಳನ್ನು ಯಾವುದೇ ಅಡೆತಡೆ ಇಲ್ಲದೆ ಸಾಗಾಣೆ ಮಾಡಲು ಕ್ರಮ ಕೈಗೊಳ್ಳಬೇಕೆಂದರು. ಅಲ್ಲದೆ, ಕಂಟ್ರೋಲ್ ರೂಮ್ ಗಳು ದಿನದ 24 ಗಂಟೆಗಳೂ ಸಹ ಕಾರ್ಯ ನಿರ್ವಹಿಸುವಂತಿರಬೇಕು ಎಂದು ಪ್ರಧಾನಿ ನಿರ್ದೇಶನ ನೀಡಿದರು.
ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಜವಾದ್ ಚಂಡಮಾರುತ ತೀವ್ರಗೊಳ್ಳುವ ನಿರೀಕ್ಷೆ ಇದೆ ಮತ್ತು ಅದು ಗಂಟೆಗೆ ಸುಮಾರು 100 ಕಿ.ಮೀ ವೇಗದಲ್ಲಿ ಚಲಿಸಿ, 2021ರ ಡಿಸೆಂಬರ್ 4ರಂದು ಶನಿವಾರ ಬೆಳಿಗ್ಗೆ ಉತ್ತರ ಆಂಧ್ರಪ್ರದೇಶ- ಒಡಿಶಾದ ಕರಾವಳಿಯನ್ನು ತಲುಪುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ. ಇದರಿಂದ ಆಂಧ್ರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಐಎಂಡಿ ಸಂಬಂಧಿಸಿದ ರಾಜ್ಯಗಳಿಗೆ ನಿರಂತರ ಬುಲೆಟಿನ್ ಗಳ ಮೂಲಕ ತಾಜಾ ಮಾಹಿತಿಯನ್ನು ಒದಗಿಸುತ್ತಿದೆ.
ಸಂಪುಟ ಕಾರ್ಯದರ್ಶಿ ಅವರೂ ಸಹ ಪರಿಸ್ಥಿತಿ ಎದುರಿಸಲು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಸಂಬಂಧಿಸಿದ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಕೇಂದ್ರ ಸಚಿವಾಲಯಗಳು ಮತ್ತು ಸಂಸ್ಥೆಗಳ ನಡುವೆ ಪರಿಶೀಲನಾ ಸಭೆ ನಡೆಸಿದ್ದರು. ಗೃಹ ವ್ಯವಹಾರಗಳ ಸಚಿವಾಲು ದಿನದ 24 ಗಂಟೆಗೂ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದೆ ಮತ್ತು ಅದು ಸಂಬಂಧಿಸಿದ ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರೀಯ ಸಂಸ್ಥೆಗಳ ಜೊತೆ ನಿರಂತರ ಸಂಪರ್ಕದಲ್ಲಿದೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಈ ಎಲ್ಲ ರಾಜ್ಯಗಳಿಗೆ ಎಸ್ ಡಿಆರ್ ಎಫ್ ನ ಮೊದಲ ಕಂತಿನ ಹಣವನ್ನೂ ಸಹ ಬಿಡುಗಡೆ ಮಾಡಿದೆ.
ಮರ ಕತ್ತರಿಸುವ ಯಂತ್ರಗಳು, ದೂರವಾಣಿ ಸಾಧನಗಳು ಮತ್ತು ಇತರೆ ಅಗತ್ಯ ಯಂತ್ರೋಪಕರಣ ಹೊಂದಿರುವ 29 ತಂಡಗಳನ್ನು ಎನ್ ಡಿಆರ್ ಎಫ್ ಆಯಕಟ್ಟಿನ ಜಾಗಕ್ಕೆ ನಿಯೋಜಿಸಿದೆ ಮತ್ತು 33 ತಂಡಗಳನ್ನು ಸರ್ವ ಸನ್ನದ್ಧವಾಗಿ ಇಡಲಾಗಿದೆ.
ಪರಿಹಾರ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಹೆಲಿಕಾಪ್ಟರ್ ಮತ್ತು ಹಡಗುಗಳನ್ನು ಭಾರತೀಯ ಕರಾವಳಿ ಪಡೆ ಮತ್ತು ನೌಕಾಪಡೆ ನಿಯೋಜಿಸಿವೆ. ಸೇನೆಯ ವಾಯು ಪಡೆ ಮತ್ತು ಎಂಜಿನಿಯರ್ ಕಾರ್ಯಪಡೆ ಘಟಕಗಳು ದೋಣಿಗಳು ಮತ್ತು ರಕ್ಷಣಾ ಸಾಮಗ್ರಿಗಳೊಂದಿಗೆ ನಿಯೋಜನೆಗೆ ಸಜ್ಜಾಗಿವೆ. ಕಣ್ಗಾವಲು ವಿಮಾನಗಳು ಮತ್ತು ಹೆಲಿಕಾಪ್ಟರ್ ಗಳು ಕರಾವಳಿಯಾದ್ಯಂತ ನಿರಂತರವಾಗಿ ಕಣ್ಗಾವಲು ನಡೆಸುತ್ತಿವೆ. ಪೂರ್ವ ಕರಾವಳಿಯಾದ್ಯಂತ ಆಯಕಟ್ಟಿನ ಜಾಗಗಳಲ್ಲಿ ವಿಪತ್ತು ಪರಿಹಾರ ತಂಡಗಳು ಮತ್ತು ವೈದ್ಯಕೀಯ ತಂಡಗಳನ್ನು ಸನ್ನದ್ಧವಾಗಿಡಲಾಗಿದೆ.
ಇಂಧನ ಸಚಿವಾಲಯವು ತುರ್ತು ನಿರ್ವಹಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ ಮತ್ತು ಅದು ವಿದ್ಯುತ್ ಪರಿವರ್ತಕಗಳು, ಡಿಜಿ ಸೆಟ್ ಗಳು ಮತ್ತು ಸಾಮಗ್ರಿ ಸೇರಿದಂತೆ ಇನ್ನಿತರ ಸಾಧನಗಳ ಸಹಿತ ವಿದ್ಯುತ್ ಸಂಪರ್ಕ ಕಡಿತವಾದರೆ ತಕ್ಷಣ ಮರುಸ್ಥಾಪನೆಗೆ ಸಜ್ಜಾಗಿದೆ. ದೂರಸಂಪರ್ಕ ಸಚಿವಾಲಯವು, ಎಲ್ಲ ಟೆಲಿಕಾಂ ಟವರ್ ಗಳು ಮತ್ತು ವಿನಿಮಯ ಕೇಂದ್ರಗಳ ಮೇಲ್ವಿಚಾರಣೆ ನಡೆಸುತ್ತಿದೆ ಹಾಗೂ ದೂರಸಂಪರ್ಕ ಜಾಲ ಮರುಸ್ಥಾಪನೆಗೆ ಸಂಪೂರ್ಣ ಸಜ್ಜಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಾಧಿತವಾಗಲಿರುವ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆಯನ್ನು ನೀಡಿದ್ದು, ಕೋವಿಡ್ ಬಾಧಿತ ಪ್ರದೇಶಗಳು ಮತ್ತು ಆರೋಗ್ಯ ವಲಯದ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದೆ.
ಬಂದರು, ನೌಕಾ ಮತ್ತು ಜಲಮಾರ್ಗಗಳ ಸಚಿವಾಲಯ ಹಡಗುಗಳನ್ನು ಸುರಕ್ಷಿತವಾಗಿರಿಸಲು ಕ್ರಮ ಕೈಗೊಂಡಿದೆ ಮತ್ತು ತುರ್ತು ಕಾರ್ಯಕ್ಕೆ ಹಡಗುಗಳನ್ನು ನಿಯೋಜಿಸಿದೆ. ಕರಾವಳಿ ತೀರದಲ್ಲಿರುವ ರಾಸಾಯನಿಕ ಮತ್ತು ಪೆಟ್ರೋ ಕೆಮಿಕಲ್ ಕೈಗಾರಿಕಾ ಸಂಸ್ಥೆಗಳು ಎಚ್ಚರದಿಂದ ಇರುವಂತೆ ರಾಜ್ಯಗಳು ಮುನ್ಸೂಚನೆ ನೀಡಿವೆ.
ಎನ್ ಡಿಆರ್ ಎಫ್, ರಾಜ್ಯದ ಸಂಸ್ಥೆಗಳಿಗೆ ಸೂಕ್ಷ್ಮ ಪ್ರದೇಶಗಳಿಂದ ಜನರನ್ನು ಸ್ಥಳಾಂತರ ಮಾಡಲು ಸಿದ್ಧತೆಗೆ ಸಹಾಯ ಮಾಡುತ್ತಿದೆ ಮತ್ತು ಚಂಡಮಾರುತದ ಸ್ಥಿತಿಯನ್ನು ಹೇಗೆ ಎದುರಿಸಬೇಕು ಎಂಬ ಕುರಿತು ನಿರಂತರವಾಗಿ ಸಮುದಾಯ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ.
ಸಭೆಯಲ್ಲಿ ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಎನ್ ಡಿಆರ್ ಎಫ್ ಮಹಾನಿರ್ದೇಶಕರು ಮತ್ತು ಐಎಂಡಿ ಮಹಾನಿರ್ದೇಶಕರು ಭಾಗವಹಿಸಿದ್ದರು.