ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ, ಮುಂಬರುವ ‘ಬಿಪೊರ್ ಜೋಯ್’ ಚಂಡಮಾರುತದಿಂದ ಉಂಟಾಗುವ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಮತ್ತು ಗುಜರಾತ್ ನ ಸಚಿವಾಲಯಗಳು / ಸಂಸ್ಥೆಗಳ ಪೂರ್ವಭಾವಿ ಸನ್ನದ್ಧತೆಗಳನ್ನು ಪರಿಶೀಲಿಸಿದರು.
ದುರ್ಬಲ ಸ್ಥಳಗಳಲ್ಲಿ ವಾಸಿಸುವ ಜನರನ್ನು ರಾಜ್ಯ ಸರ್ಕಾರವು ಸುರಕ್ಷಿತವಾಗಿ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ವಿದ್ಯುತ್, ದೂರಸಂಪರ್ಕ, ಆರೋಗ್ಯ, ಆಹಾರ, ಕುಡಿಯುವ ನೀರು ಮುಂತಾದ ಎಲ್ಲಾ ಅಗತ್ಯ ಸೇವೆಗಳ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರುಗಳ ವಸ್ತುಗಳಿಗೆ ಉಂಟಾದ ಹಾನಿಯ ಸಂದರ್ಭದಲ್ಲಿ ತಕ್ಷಣವೇ ವ್ಯವಸ್ಥೆಗಳನ್ನು ಪುನಃಸ್ಥಾಪಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಪ್ರಧಾನಮಂತ್ರಿ ಅವರು ಸೂಚಿಸಿದರು. ಪ್ರಾಣಿಗಳ ಸುರಕ್ಷತೆಯನ್ನೂ ಖಾತ್ರಿಪಡಿಸಬೇಕು ಮತ್ತು ನಿಯಂತ್ರಣ ಕೊಠಡಿಗಳು 24*7 ಕಾರ್ಯನಿರ್ವಹಣೆ ಮಾಡಬೇಕು ಎಂದು ಅವರು ನಿರ್ದೇಶನ ನೀಡಿದರು.
ಸಭೆಯಲ್ಲಿ, ಜೂನ್ 15 ರ ಮಧ್ಯಾಹ್ನದ ವೇಳೆಗೆ ಜಖೌ ಬಂದರು (ಗುಜರಾತ್) ಬಳಿ ಮಾಂಡ್ವಿ (ಗುಜರಾತ್) ಮತ್ತು ಕರಾಚಿ (ಪಾಕಿಸ್ತಾನ) ನಡುವೆ ಸೌರಾಷ್ಟ್ರ ಮತ್ತು ಕಚ್ ಪ್ರದೇಶವನ್ನು ಗಂಟೆಗೆ 125-135 ಕಿ.ಎಂ. ನಿರಂತರ ಗಾಳಿಯ ವೇಗದೊಂದಿಗೆ ಗರಿಷ್ಠ ಗಂಟೆಗೆ 145 ಕಿ.ಎಂ. ವರೆಗಿನ ವೇಗದಲ್ಲಿ ಚಂಡಮಾರುತವು ದಾಟುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಇದರಿಂದಾಗಿ ಜೂನ್ 14-15 ರಂದು ಗುಜರಾತ್ ನ ಕಚ್, ದೇವಭೂಮಿ ದ್ವಾರಕಾ ಮತ್ತು ಜಾಮ್ ನಗರಗಳಲ್ಲಿ ಅತಿ ಹೆಚ್ಚು ಮಳೆ ಬೀಳಲಿದೆ ಮತ್ತು ಗುಜರಾತ್ ನ ಪೋರ್ ಬಂದರ್, ರಾಜ್ಕೋಟ್, ಮೊರ್ಬಿ ಮತ್ತು ಜುನಾಗರ್ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಭಾರಿ ಮಳೆ ಸೇರಿದಂತೆ ಗುಜರಾತ್ ನ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜೂನ್ 6 ರಂದು ಸೈಕ್ಲೋನಿಕ್ ಸಿಸ್ಟಮ್ ಪ್ರಾರಂಭವಾದಾಗಿನಿಂದ ಇತ್ತೀಚಿನ ಮುನ್ಸೂಚನೆಯೊಂದಿಗೆ ಎಲ್ಲಾ ರಾಜ್ಯಗಳು ಮತ್ತು ಸಂಸ್ಥೆಗಳಿಗೆ ಭಾರತೀಯ ಹವಾಮಾನ ಇಲಾಖೆಯು (ಐ.ಎಂ.ಡಿ.) ಸಕಾಲಿಕವಾಗಿ ಸುದ್ದಿ(ಬುಲೆಟಿನ್)ಯನ್ನು ಬಿಡುಗಡೆ ಮಾಡುತ್ತಿದೆ ಎಂದು ಐ.ಎಂ.ಡಿ. ತಿಳಿಸಿದೆ.
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಪರಿಸ್ಥಿತಿಯನ್ನು ದಿನದ 24*7 ಗಂಟೆಯೂ ಪರಿಶೀಲಿಸುತ್ತಿದೆ ಮತ್ತು ರಾಜ್ಯ ಸರ್ಕಾರ ಮತ್ತು ಕೇಂದ್ರೀಯ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದೆ ಎಂದು ತಿಳಿಸಿದೆ. ಈ ಪ್ರದೇಶಗಳಲ್ಲಿ ಎನ್.ಡಿ.ಆರ್.ಎಫ್. ತನ್ನ 12 ತಂಡಗಳನ್ನು ಈ ಮೊದಲೇ ಇರಿಸಿದ್ದು, ಅದರಲ್ಲಿ ದೋಣಿಗಳು, ಮರ ಕಡಿಯುವವರು, ಟೆಲಿಕಾಂ ಉಪಕರಣಗಳು ಇತ್ಯಾದಿಗಳನ್ನು ಅಳವಡಿಸಲಾಗಿದೆ ಮತ್ತು 15 ತಂಡಗಳನ್ನು ಹೆಚ್ಚುವರಿಯಾಗಿ(ಸ್ಟ್ಯಾಂಡ್ಬೈ) ಇರಿಸಲಾಗಿದೆ.
ಭಾರತೀಯ ಕೋಸ್ಟ್ ಗಾರ್ಡ್ ಮತ್ತು ನೌಕಾಪಡೆಯು ಪರಿಹಾರ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಹಡಗುಗಳು ಮತ್ತು ಹೆಲಿಕಾಪ್ಟರ್ಗಳನ್ನು ನಿಯೋಜಿಸಿದೆ. ವಾಯುಪಡೆ ಮತ್ತು ಇಂಜಿನಿಯರ್ ಕಾರ್ಯಪಡೆಯ ಘಟಕಗಳು, ದೋಣಿಗಳು ಮತ್ತು ರಕ್ಷಣಾ ಸಾಧನಗಳೊಂದಿಗೆ, ನಿಯೋಜನೆಗಾಗಿ ಸ್ಟ್ಯಾಂಡ್ಬೈ ಆಗಿ ಸನ್ನದ್ಧರಾಗಿವೆ. ಕಣ್ಗಾವಲು ವಿಮಾನಗಳು ಮತ್ತು ಹೆಲಿಕಾಪ್ಟರ್ಗಳು ಕರಾವಳಿಯಾದ್ಯಂತ ಸರಣಿ ಕಣ್ಗಾವಲು ನಡೆಸುತ್ತಿವೆ. ಸೇನೆ, ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ನ ವಿಪತ್ತು ಪರಿಹಾರ ತಂಡಗಳು (ಡಿ.ಆರ್.ಟಿ.ಗಳು) ಮತ್ತು ವೈದ್ಯಕೀಯ ತಂಡಗಳು (ಎಂ.ಟಿ.ಗಳು) ಕೂಡಾ ಸಿದ್ಧವಾಗಿವೆ.
ಚಂಡಮಾರುತವನ್ನು ಎದುರಿಸಲು ಗುಜರಾತ್ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಸವಿವರವಾಗಿ ಪ್ರಧಾನಮಂತ್ರಿ ಅವರಿಗೆ ವಿವರಿಸಲಾಯಿತು. ಮುಖ್ಯಮಂತ್ರಿಗಳ ಮಟ್ಟದಲ್ಲಿ ಜಿಲ್ಲಾಡಳಿತದೊಂದಿಗೆ ಪರಿಶೀಲನಾ ಸಭೆ ನಡೆಸಲಾಗಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ರಾಜ್ಯದ ಇಡೀ ಆಡಳಿತ ಯಂತ್ರ ಸಜ್ಜಾಗಿದೆ. ಅಲ್ಲದೆ, ಗುಜರಾತ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕೇಂದ್ರ ಸಚಿವಾಲಯಗಳು / ಸಂಬಂಧಿಸಿದ ಸಂಸ್ಥೆಗಳೊಂದಿಗೆ ಸಂಪುಟ ಕಾರ್ಯದರ್ಶಿ ಮತ್ತು ಗೃಹ ಕಾರ್ಯದರ್ಶಿಗಳು ನಿರಂತರ ಸಂಪರ್ಕದಲ್ಲಿದ್ದಾರೆ.
ಸಭೆಯಲ್ಲಿ ಕೇಂದ್ರ ಗೃಹ ಸಚಿವರು, ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.