



ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 28ರಂದು ಬೆಳಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒಳಗೊಂಡಿರುವ ಸಕ್ರಿಯ ಆಡಳಿತ ಮತ್ತು ಸಮಯೋಚಿತ ಅನುಷ್ಠಾನಕ್ಕಾಗಿ ಐಸಿಟಿ ಆಧರಿತ ಬಹುಮಾದರಿ ವೇದಿಕೆಯಾದ 42ನೇ ಪ್ರಗತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ 12 ಪ್ರಮುಖ ಮಹತ್ವಾಕಾಂಕ್ಷಿ ಯೋಜನೆಗಳ ಪ್ರಗತಿ ಪರಾಮರ್ಶೆ ನಡೆಸಲಾಯಿತು. 12 ಯೋಜನೆಗಳ ಪೈಕಿ 7 ಯೋಜನೆಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ, 2 ಯೋಜನೆಗಳು ರೈಲ್ವೆ ಸಚಿವಾಲಯಕ್ಕೆ ಮತ್ತು ತಲಾ 1 ಯೋಜನೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಉಕ್ಕು ಸಚಿವಾಲಯ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ಸೇರಿದ್ದವಾಗಿವೆ. ಈ ಯೋಜನೆಗಳ ಒಟ್ಟಾರೆ ವೆಚ್ಚ 1,21,300 ಕೋಟಿ ರೂ. ಆಗಿದೆ. 10 ರಾಜ್ಯಗಳಾದ ಛತ್ತೀಸ್‌ಗಢ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಒಡಿಶಾ ಮತ್ತು ಹರಿಯಾಣ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ, ದಾದ್ರಾ ಮತ್ತು ನಗರ ಹವೇಲಿಗೆ ಈ ಯೋಜನೆಗಳು ಸೇರಿವೆ.
ಪ್ರಧಾನ ಮಂತ್ರಿ ಅವರು ರಾಜ್‌ಕೋಟ್, ಜಮ್ಮು, ಅವಂತಿಪೋರಾ, ಬೀಬಿನಗರ, ಮಧುರೈ, ರೇವಾರಿ ಮತ್ತು ದರ್ಭಾಂಗದಲ್ಲಿ ಏಮ್ಸ್(ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಮಹಾಸಂಸ್ಥೆ) ಕಟ್ಟಡಗಳ ನಿರ್ಮಾಣ ಯೋಜನೆಗಳ ಪ್ರಗತಿ ಪರಿಶೀಲಿಸಿದರು. ಈ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಇರುವ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ಬದ್ಧರಾಗಿರುವಂತೆ ಎಲ್ಲಾ ಪಾಲುದಾರರಿಗೆ ಪ್ರಧಾನ ಮಂತ್ರಿ ಸೂಚನೆ ನೀಡಿದರು.
ಸಂವಾದದ ವೇಳೆ ಪ್ರಧಾನ ಮಂತ್ರಿ ಅವರು 'ಪ್ರಧಾನ ಮಂತ್ರಿಗಳ ಸ್ವನಿಧಿ ಯೋಜನೆ'ಯನ್ನು ಸಹ ಪರಿಶೀಲಿಸಿದರು. ನಗರ ಪ್ರದೇಶಗಳಲ್ಲಿ ಅದರಲ್ಲೂ 2 ಮತ್ತು 3ನೇ ಹಂತದ ನಗರಗಳಲ್ಲಿ ಇರುವ ಎಲ್ಲಾ ಅರ್ಹ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ, ಅವರಿಗೆ ಸರ್ಕಾರದ ಸವಲ್ತುಗಳನ್ನು ಒದಗಿಸಿ, ಖಾತ್ರಿಪಡಿಸುವಂತೆ ಪ್ರಧಾನಿ ಅವರು ಮುಖ್ಯ ಕಾರ್ಯದರ್ಶಿಗಳನ್ನು ಒತ್ತಾಯಿಸಿದರು. ಬೀದಿ ಬದಿ ವ್ಯಾಪಾರಿಗಳಿಂದ ಡಿಜಿಟಲ್ ವಹಿವಾಟನ್ನು ಕಾರ್ಯಾಚರಣೆ ಮಾದರಿಯಲ್ಲಿ(ಮಿಷನ್ ಮೋಡ್) ಉತ್ತೇಜಿಸಲು ಮತ್ತು ಸ್ವನಿಧಿ ಸೆ ಸಮೃದ್ಧಿ ಅಭಿಯಾನದ ಮೂಲಕ ಸ್ವನಿಧಿಫಲಾನುಭವಿಗಳ ಕುಟುಂಬ ಸದಸ್ಯರಿಗೆ ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನ ಒದಗಿಸಬೇಕು ಎಂದು ಪ್ರಧಾನಿ ಸೂಚನೆ ನೀಡಿದರು.
ಜಿ-20 ಶೃಂಗಸಭೆಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಪ್ರಧಾನ ಮಂತ್ರಿ ಅವರು ಎಲ್ಲಾ ಮುಖ್ಯ ಕಾರ್ಯದರ್ಶಿಗಳನ್ನು ಅಭಿನಂದಿಸಿದರು. ತಮ್ಮ ರಾಜ್ಯಗಳಿಗೆ ವಿಶೇಷವಾಗಿ ಪ್ರವಾಸೋದ್ಯಮ ಮತ್ತು ರಫ್ತುಗಳ ಉತ್ತೇಜನಕ್ಕಾಗಿ ಈ ಶೃಂಗಸಭೆಗಳಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯುವಂತೆ ಅವರು ಸಲಹೆ ನೀಡಿದರು.
ಇದುವರೆಗೆ ನಡೆದ ಪ್ರಗತಿ ಸಭೆಗಳಲ್ಲಿ ಒಟ್ಟು 17.05 ಲಕ್ಷ ಕೋಟಿ ರೂ.ವೆಚ್ಚದ 340 ಯೋಜನೆಗಳ ಪರಾಮರ್ಶೆ ನಡೆಸಲಾಗಿದೆ.