ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒಳಗೊಂಡ ಆಡಳಿತ ಪರವಾದ ಮತ್ತು ಸಕಾಲಿಕ ಅನುಷ್ಠಾನ ಕುರಿತ ಐಸಿಟಿ ಆಧಾರಿತ ಬಹು ಮಾದರಿ ವೇದಿಕೆ ಪ್ರಗತಿಯ ಮೂಲಕ ಮೂವತ್ತೈದನೇ ಆವೃತ್ತಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಭೆಯಲ್ಲಿ ಒಂಬತ್ತು ಯೋಜನೆಗಳು ಮತ್ತು ಒಂದು ಕಾರ್ಯಕ್ರಮ ಸೇರಿ ಒಟ್ಟು ಹತ್ತು ವಿಚಾರಗಳನ್ನು ಪರಿಶೀಲನೆಗೆ ತೆಗೆದುಕೊಳ್ಳಲಾಗಿತ್ತು. ಒಂಬತ್ತು ಯೋಜನೆಗಳ ಪೈಕಿ, ಮೂರು ಯೋಜನೆಗಳು ರೈಲ್ವೆ ಸಚಿವಾಲಯದ್ದಾಗಿದ್ದರೆ, ಮೂರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಸಂಬಂಧಿಸಿದ್ದಾಗಿತ್ತು. ಡಿಪಿಐಐಟಿ, ಇಂಧನ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯಗಳ ತಲಾ ಒಂದೊಂದು ಯೋಜನೆಗಳೂ ಸೇರಿದ್ದವು. ಈ ಒಂಬತ್ತು ಯೋಜನೆಗಳ ಒಟ್ಟು ವೆಚ್ಚ 54,675 ಕೋಟಿ ರೂಪಾಯಿಗಳಾಗಿದ್ದು, 15 ರಾಜ್ಯಗಳಿಗೆ ಅಂದರೆ ಒಡಿಶಾ, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಛತ್ತೀಸಗಢ, ಪಂಜಾಬ್, ಜಾರ್ಖಂಡ್, ಬಿಹಾರ, ತೆಲಂಗಾಣ, ರಾಜಾಸ್ಥಾನ, ಗುಜರಾತ್, ಪಶ್ಚಿಮ ಬಂಗಾಳ, ಹರಿಯಾಣ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಕ್ಕೆ ಸಂಬಂಧಿಸಿದ್ದಾಗಿವೆ.
ಈ ಸಂವಾದದ ವೇಳೆ, ಪ್ರಧಾನಮಂತ್ರಿಯವರು, ಪ್ರಧಾನಮಂತ್ರಿ ಭಾರತೀಯ ಜನೌಷಧ ಪರಿಯೋಜನೆಯ ಪರಾಮರ್ಶೆಯನ್ನೂ ನಡೆಸಿದರು.
ಮೂಲಸೌಕರ್ಯ ಯೋಜನೆಗಳಿಗೆ ಅಡ್ಡಿಯಾಗುವ ಸಮಸ್ಯೆಗಳ ತ್ವರಿತ ಪರಿಹಾರವನ್ನು ಖಾತ್ರಿಪಡಿಸಿಕೊಳ್ಳಲು ಪ್ರಧಾನಮಂತ್ರಿಯವರು ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ವ್ಯಾಪಕ ಪ್ರಚಾರವನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಅದರ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸುವಂತೆ ಅವರು ಔಷಧ ಇಲಾಖೆಗಳು ಹಾಗೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರೋತ್ಸಾಹಿಸಿದರು.
ಪ್ರಗತಿ ಸಭೆಗಳ 34 ನೇ ಆವೃತ್ತಿಯವರೆಗೆ, ಒಟ್ಟು 13.14 ಲಕ್ಷ ಕೋಟಿ ವೆಚ್ಚದ 283 ಯೋಜನೆಗಳನ್ನು ಪರಿಶೀಲಿಸಲಾಗಿದೆ.