ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಿವೃತ್ತರಾಗುತ್ತಿರುವ ರಾಜ್ಯಸಭಾ ಸದಸ್ಯರಿಗೆ ಬೀಳ್ಕೊಡುಗೆ ನೀಡಿದರು.
ರಾಜ್ಯಸಭೆಯಲ್ಲಿ ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಲೋಕಸಭೆಯು ಪ್ರತಿ ಐದು ವರ್ಷಗಳಿಗೊಮ್ಮೆ ಬದಲಾಗುತ್ತದೆ ಮತ್ತು ರಾಜ್ಯಸಭೆಯು ಪ್ರತಿ ಎರಡು ವರ್ಷಗಳಿಗೊಮ್ಮೆ ಹೊಸ ಜೀವನ ಚೈತನ್ಯ ಪಡೆಯುತ್ತದೆ ಎಂದರು. ಅಂತೆಯೇ, ದ್ವೈವಾರ್ಷಿಕ ಬೀಳ್ಕೊಡುಗೆಯು ಹೊಸ ಸದಸ್ಯರಿಗೆ ಅಳಿಸಲಾಗದ ನೆನಪುಗಳನ್ನು ಮತ್ತು ಅಮೂಲ್ಯ ಪರಂಪರೆಯನ್ನು ಉಳಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಡಾ. ಮನಮೋಹನ್ ಸಿಂಗ್ ಅವರ ಕೊಡುಗೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, "ಸದನ ಮತ್ತು ರಾಷ್ಟ್ರಕ್ಕೆ ಮಾರ್ಗದರ್ಶನ ನೀಡಿದ ಅವರ ಸುದೀರ್ಘ ಅಧಿಕಾರಾವಧಿಯಿಂದಾಗಿ, ಅವರು ನಮ್ಮ ರಾಷ್ಟ್ರದ ಪ್ರಜಾಪ್ರಭುತ್ವದ ಪ್ರತಿಯೊಂದು ಚರ್ಚೆಯಲ್ಲೂ ಕಾಣಿಸಿಕೊಳ್ಳುತ್ತಾರೆ" ಎಂದು ಹೇಳಿದರು. ಮಾರ್ಗದರ್ಶಕ ದಾರಿ ದೀಪಗಳಾಗಿರುವ ಅಂತಹ ಗಣ್ಯ ಸದಸ್ಯರ ನಡವಳಿಕೆಯಿಂದ ಕಲಿಯಲು ಎಲ್ಲ ಸಂಸತ್ ಸದಸ್ಯರು ಪ್ರಯತ್ನಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದರು. ಸದನದಲ್ಲಿ ಮತ ಚಲಾಯಿಸಲು ಮಾಜಿ ಪ್ರಧಾನಿಯವರು ವ್ಹೀಲ್ ಚೇರ್ ಮೇಲೆ ಬಂದಿದ್ದನ್ನು ಸ್ಮರಿಸಿದ ಶ್ರೀ ಮೋದಿ ಅವರು, ಇದು ಸದಸ್ಯರೊಬ್ಬರು ತಮ್ಮ ಕರ್ತವ್ಯಗಳ ಬಗ್ಗೆ ಹೊಂದಿರುವ ಸಮರ್ಪಣಾ ಭಾವಕ್ಕೆ ಸ್ಫೂರ್ತಿದಾಯಕ ಉದಾಹರಣೆಯಾಗಿದೆ ಎಂದರು. "ಅವರು ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬಲು ಬಂದಿದ್ದರು ಎಂದು ನಾನು ನಂಬುತ್ತೇನೆ", ಎಂದು ಪ್ರಧಾನಿ ಹೇಳಿದರು. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಧಾನಿ ಮೋದಿ ಶುಭ ಹಾರೈಸಿದರು.
ಮತ್ತಷ್ಟು ವಿಸ್ತಾರವಾದ ಸಾರ್ವಜನಿಕ ವೇದಿಕೆಗೆ ತೆರಳುತ್ತಿರುವ ಸದಸ್ಯರು ರಾಜ್ಯಸಭೆಯ ಅನುಭವದಿಂದ ಭಾರಿ ಪ್ರಯೋಜನ ಪಡೆಯಲಿದ್ದಾರೆ ಎಂದು ಪ್ರಧಾನಿ ಹೇಳಿದರು. "ಇದು ಅನುಭವಗಳಿಂದ ರೂಪುಗೊಂಡ ಆರು ವರ್ಷಗಳ ವೈವಿಧ್ಯಮಯ ವಿಶ್ವವಿದ್ಯಾಲಯವಾಗಿದೆ. ಇಲ್ಲಿಂದ ಹೊರಹೋಗುವ ಯಾರಾದರೂ ಶ್ರೀಮಂತರಾಗುತ್ತಾರೆ ಮತ್ತು ರಾಷ್ಟ್ರ ನಿರ್ಮಾಣದ ಕೆಲಸವನ್ನು ಬಲಪಡಿಸುತ್ತಾರೆ " ಎಂದು ಅವರು ಹೇಳಿದರು.
ಪ್ರಸ್ತುತ ಕ್ಷಣದ ಮಹತ್ವವನ್ನು ಗುರುತಿಸಿದ ಪ್ರಧಾನಮಂತ್ರಿಯವರು, ಇಂದು ಹೊರಡುತ್ತಿರುವ ಸದಸ್ಯರಿಗೆ ಹಳೆಯ ಮತ್ತು ಹೊಸ ಕಟ್ಟಡಗಳೆರಡರಲ್ಲೂ ಕಲಾಪಕ್ಕೆ ಹಾಜರಾಗುವ ಅವಕಾಶ ದೊರೆತಿದೆ ಮತ್ತು ಅವರು ʻಅಮೃತಕಾಲʼ ಮತ್ತು ಸಂವಿಧಾನದ 75ನೇ ವರ್ಷಾಚರಣೆಗೆ ಸಾಕ್ಷಿಯಾಗಿ ಇಲ್ಲಿಂದ ತೆರಳುತ್ತಿದ್ದಾರೆ ಎಂದರು.
ಕೋವಿಡ್ ಸಾಂಕ್ರಾಮಿಕದಿಂದಾಗಿ ಅನಿಶ್ಚಿತತೆಗಳು ಉಲ್ಬಣಗೊಂಡ ಸಮಯವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಸದನದ ಕಾರ್ಯನಿರ್ವಹಣೆಗೆ ಯಾವುದೇ ಅಡಚಣೆಯಾಗಲು ಆಸ್ಪದ ಕೊಡದ ಸದಸ್ಯರ ಬದ್ಧತೆಯನ್ನು ಶ್ಲಾಘಿಸಿದರು. ಸಂಸತ್ ಸದಸ್ಯರು ತಮ್ಮ ಜವಾಬ್ದಾರಿಗಳನ್ನು ಪೂರೈಸಲು ಎದುರಿಸಿದ ದೊಡ್ಡ ಅಪಾಯಗಳನ್ನು ಅವರು ಸ್ಮರಿಸಿದರು. ಕೋವಿಡ್‌ನಿಂದಾಗಿ ಪ್ರಾಣ ಕಳೆದುಕೊಂಡ ಸದಸ್ಯರ ಬಗ್ಗೆ ಪ್ರಧಾನಿ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದರು. ಸದನವು ಈ ವಿಚಾರವನ್ನು ಸಹಾನುಭೂತಿಯಿಂದ ಸ್ವೀಕರಿಸಿ ಮುಂದುವರಿಯಿತು ಎಂದು ಹೇಳಿದರು.
ಪ್ರತಿಪಕ್ಷಗಳು ಕಪ್ಪು ಬಟ್ಟೆಗಳನ್ನು ಧರಿಸಿದ ಘಟನೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ದೇಶವು ಸಮೃದ್ಧಿಯ ಹೊಸ ಎತ್ತರಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಆ ಘಟನೆಯನ್ನು ರಾಷ್ಟ್ರದ ಪ್ರಗತಿಯ ಪ್ರಯಾಣಕ್ಕಾಗಿ 'ಕಲಾ ಟಿಕಾ' ಮೂಲಕ ದುಷ್ಟ ಕಣ್ಣುಗಳನ್ನು ದೂರವಿಡುವ ಪ್ರಯತ್ನವೆಂದು ನೋಡಬಹುದು ಎಂದರು.
ಪ್ರಾಚೀನ ಧರ್ಮಗ್ರಂಥಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಒಳ್ಳೆಯ ಸಹವಾಸವನ್ನು ಇಟ್ಟುಕೊಳ್ಳುವವರು ಇದೇ ರೀತಿಯ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ ಮತ್ತು ಕೆಟ್ಟವರ ನಡುವೆ ಇರುವ ಮೂಲಕ ತಾವೂ ದೋಷಪೂರಿತರಾಗುತ್ತಾರೆ ಎಂದು ವಿವರಿಸಿದರು. ನದಿ ಹರಿದಾಗ ಮಾತ್ರ ನದಿಯ ನೀರು ಕುಡಿಯಲು ಯೋಗ್ಯವಾಗಿರುತ್ತದೆ ಮತ್ತು ಅದು ಸಮುದ್ರವನ್ನು ಸೇರಿದ ತಕ್ಷಣ ಅದು ಉಪ್ಪಾಗುತ್ತದೆ ಎಂದು ಅವರು ಹೇಳಿದರು. ಈ ನಂಬಿಕೆಯೊಂದಿಗೆ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿಯವರು, ನಿವೃತ್ತರಾಗುತ್ತಿರುವ ಸದಸ್ಯರ ಅನುಭವವು ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು. ನಿವೃತ್ತ ಸದಸ್ಯರನ್ನು ಅಭಿನಂದಿಸಿದ ಪ್ರಧಾನಿ, ಅವರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು.