ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಾಣಸಿಯ ರುದ್ರಾಕ್ಷಿ ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರದಲ್ಲಿ ಕಾಶಿ ಸಂಸದ್ ಸಾಂಸ್ಕೃತಿಕ ಮಹೋತ್ಸವ 2023 ರ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸುಮಾರು 1115 ಕೋಟಿ ರೂಪಾಯಿ ವೆಚ್ಚದಲ್ಲಿ ಉತ್ತರ ಪ್ರದೇಶದಾದ್ಯಂತ ನಿರ್ಮಿಸಲಾದ 16 ಅಟಲ್ ಅವಾಸಿಯ ವಿದ್ಯಾಲಯಗಳನ್ನು ಪ್ರಧಾನಿಯವರು ಉದ್ಘಾಟಿಸಿದರು. ಅವರು ಕಾಶಿ ಸಂಸದ್ ಖೇಲ್ ಪ್ರತಿಯೋಗಿತಾ ನೋಂದಣಿ ಪೋರ್ಟಲ್ ಗೆ ಚಾಲನೆ ನೀಡಿದರು. ಕಾಶಿ ಸಂಸದ್ ಸಾಂಸ್ಕೃತಿಕ ಮಹೋತ್ಸವದ ವಿಜೇತರಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಮಂತ್ರಿಯವರು ಅಟಲ್ ಅವಾಸಿಯಾ ವಿದ್ಯಾಲಯಗಳ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭಗವಾನ್ ಮಹಾದೇವನ ಆಶೀರ್ವಾದದಿಂದ ಕಾಶಿಯ ಗೌರವವು ನಿರಂತರವಾಗಿ ಬೆಳೆದಿದೆ ಮತ್ತು ನಗರಕ್ಕಾಗಿ ರೂಪಿಸಲಾದ ನೀತಿಗಳು ಹೊಸ ಎತ್ತರವನ್ನು ತಲುಪುತ್ತಿವೆ ಎಂದು ಟೀಕಿಸಿದರು. ಜಿ-20 ಶೃಂಗಸಭೆಯ ಯಶಸ್ಸಿನಲ್ಲಿ ಕಾಶಿಯ ಕೊಡುಗೆಗಳನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ನಗರಕ್ಕೆ ಭೇಟಿ ನೀಡಿದವರು ಕಾಶಿಯ ಸೇವೆ, ಸ್ವಾದ, ಸಂಸ್ಕೃತಿ ಮತ್ತು ಸಂಗೀತವನ್ನು ತಮ್ಮೊಂದಿಗೆ ಕೊಂಡೊಯ್ದಿದ್ದಾರೆ. ಜಿ-20 ಶೃಂಗಸಭೆಯ ಯಶಸ್ಸು ಭಗವಾನ್ ಮಹಾದೇವನ ಆಶೀರ್ವಾದಕ್ಕೆ ಸಲ್ಲುತ್ತದೆ ಎಂದರು.
ಮಹಾದೇವನ ಆಶೀರ್ವಾದದಿಂದ ಕಾಶಿಯು ಅಭಿವೃದ್ಧಿಯ ಅಭೂತಪೂರ್ವ ಆಯಾಮಗಳನ್ನು ಪಡೆಯುತ್ತಿದೆ ಎಂದು ಅವರು ಹೇಳಿದರು. ವಾರಾಣಸಿಯಲ್ಲಿ ಇಂದು ಶಂಕುಸ್ಥಾಪನೆ ನೆರವೇರಿಸಿದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಹಾಗೂ 16 ಅಟಲ್ ವಸತಿ ಶಾಲೆಗಳ ಲೋಕಾರ್ಪಣೆ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಉತ್ತರ ಪ್ರದೇಶದ ಕಾಶಿ ಮತ್ತು ಶ್ರಮಿಕ ಕುಟುಂಬಗಳಿಗೆ ಅಭಿನಂದನೆ ಸಲ್ಲಿಸಿದರು.
2014 ರಿಂದ ಈ ಕ್ಷೇತ್ರದ ಸಂಸದನಾಗಿ ಕಾಶಿಯ ಅಭಿವೃದ್ಧಿಗಾಗಿ ತಮ್ಮ ದೂರದೃಷ್ಟಿ ಅಂತಿಮವಾಗಿ ಸಾಕಾರಗೊಳ್ಳುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಕಾಶಿ ಸಾಂಸ್ಕೃತಿಕ ಮಹೋತ್ಸವದಲ್ಲಿ ಅಪಾರ ಭಾಗವಹಿಸುವಿಕೆಯನ್ನು ಅವರು ಶ್ಲಾಘಿಸಿದರು ಮತ್ತು ಈ ಭಾಗದ ವಿವಿಧ ಪ್ರತಿಭೆಗಳೊಂದಿಗೆ ಬೆರೆಯುವ ಅವಕಾಶವನ್ನು ಪಡೆದಿದ್ದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು. ಇದು ಮಹೋತ್ಸವದ ಮೊದಲ ಆವೃತ್ತಿಯಾಗಿದೆ ಎಂದು ತಿಳಿಸಿದ ಪ್ರಧಾನಿ, ಸರಿಸುಮಾರು 40,000 ಕಲಾವಿದರು ಭಾಗವಹಿಸಿದ್ದರು ಮತ್ತು ಲಕ್ಷಾಂತರ ಸಂದರ್ಶಕರು ಅದನ್ನು ವೀಕ್ಷಿಸಲು ಸ್ಥಳದಲ್ಲಿ ನೆರೆದಿದ್ದರು ಎಂದು ತಿಳಿಸಿದರು. ಜನಬೆಂಬಲದಿಂದ ಕಾಶಿ ಸಂಸದ್ ಸಾಂಸ್ಕೃತಿಕ ಮಹೋತ್ಸವ ಮುಂದಿನ ದಿನಗಳಲ್ಲಿ ಹೊಸತನವನ್ನು ಸೃಷ್ಟಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಶಿ ಪ್ರಪಂಚದಾದ್ಯಂತ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
ಕಾಶಿ ಮತ್ತು ಸಂಸ್ಕೃತಿ ಒಂದೇ ಶಕ್ತಿಯ ಎರಡು ಹೆಸರುಗಳು ಮತ್ತು ಕಾಶಿಯು ಭಾರತದ ಸಾಂಸ್ಕೃತಿಕ ರಾಜಧಾನಿ ಎಂಬ ಹೆಗ್ಗಳಿಕೆಯನ್ನು ಹೊಂದಿದೆ ಎಂದು ಶ್ರೀ ಮೋದಿ ಹೇಳಿದರು. ನಗರದ ಮೂಲೆ ಮೂಲೆಯಲ್ಲೂ ಸಂಗೀತದ ಸುಧೆ ಹರಿಯುವುದು ಸಹಜ, ಅಷ್ಟಕ್ಕೂ ಇದು ನಟರಾಜನ ನಗರವಲ್ಲವೇ ಎMದು ಅವರು ಹೇಳಿದರು. ಎಲ್ಲಾ ಕಲಾ ಪ್ರಕಾರಗಳ ಮೂಲ ಮಹಾದೇವ ಎಂದ ಪ್ರಧಾನಿ, ಈ ಕಲೆಯನ್ನು ಭರತ ಮುನಿಯಂತಹ ಪ್ರಾಚೀನ ಋಷಿಗಳು ಅಭಿವೃದ್ಧಿಪಡಿಸಿದರು ಮತ್ತು ವ್ಯವಸ್ಥೆಗೆ ಸೇರಿಸಿದರು ಎಂದು ಹೇಳಿದರು. ಸ್ಥಳೀಯ ಹಬ್ಬಗಳು ಮತ್ತು ಆಚರಣೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಕಾಶಿಯಲ್ಲಿ ಎಲ್ಲವೂ ಸಂಗೀತ ಮತ್ತು ಕಲೆಗಳಲ್ಲಿ ಆವರಿಸಿದೆ ಎಂದು ಹೇಳಿದರು.
ನಗರದ ವೈಭವದ ಶಾಸ್ತ್ರೀಯ ಸಂಗೀತ ಸಂಸ್ಕೃತಿ ಮತ್ತು ಪ್ರಾದೇಶಿಕ ಹಾಡುಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು ನಗರವು ತಬಲಾ, ಶೆಹನಾಯಿ, ಸಿತಾರ್, ಸಾರಂಗಿ ಮತ್ತು ವೀಣೆಯಂತಹ ಸಂಗೀತ ವಾದ್ಯಗಳ ಸಮ್ಮಿಲನವಾಗಿದೆ ಎಂದರು. ವಾರಾಣಸಿಯು ಖಯಾಲ್, ಠುಮ್ರಿ, ದಾದ್ರಾ, ಚೈತಿ ಮತ್ತು ಕಜ್ರಿ ಸಂಗೀತ ಶೈಲಿಗಳನ್ನು ಮತ್ತು ಭಾರತದ ಸುಮಧುರ ಆತ್ಮವನ್ನು ಜೀವಂತವಾಗಿಟ್ಟಿರುವ ಗುರು-ಶಿಷ್ಯ ಸಂಪ್ರದಾಯವನ್ನು ಸಹ ಶತಮಾನಗಳಿಂದ ಸಂರಕ್ಷಿಸಿದೆ ಎಂದು ಅವರು ಒತ್ತಿಹೇಳಿದರು. ತೇಲಿಯ ಘರಾನಾ, ಪಿಯಾರಿ ಘರಾನಾ ಹಾಗೂ ರಾಮಾಪುರ ಕಬೀರಚೌರ ಮುಹಲ್ಲಾದ ಸಂಗೀತಗಾರರನ್ನು ಪ್ರಸ್ತಾಪಿಸಿದ ಪ್ರಧಾನಿ, ವಾರಾಣಸಿಯಯು ಸಂಗೀತದಲ್ಲಿ ಹಲವಾರು ದಿಗ್ಗಜರನ್ನು ಸೃಷ್ಟಿಸಿ ಜಾಗತಿಕ ಮಟ್ಟದಲ್ಲಿ ಛಾಪು ಮೂಡಿಸಿದೆ ಎಂದರು. ವಾರಾಣಸಿಯ ಹಲವಾರು ಶ್ರೇಷ್ಠ ಸಂಗೀತಗಾರರ ಜೊತೆ ಸಂವಾದ ನಡೆಸುವ ಅವಕಾಶ ಸಿಕ್ಕಿರುವುದಕ್ಕೆ ಪ್ರಧಾನಮಂತ್ರಿಯವರು ಕೃತಜ್ಞತೆಯನ್ನೂ ವ್ಯಕ್ತಪಡಿಸಿದರು.
ಇಂದು ಆರಂಭಿಸಲಾದ ಕಾಶಿ ಸಂಸದ್ ಖೇಲ್ ಪ್ರತಿಯೋಗಿತಾ ಪೋರ್ಟಲ್ ಅನ್ನು ಉಲ್ಲೇಖಿಸಿದ ಪ್ರಧಾನಿ, ಖೇಲ್ ಪ್ರತಿಯೋಗಿತಾ ಅಥವಾ ಕಾಶಿ ಸಂಸದ್ ಸಾಂಸ್ಕೃತಿಕ ಮಹೋತ್ಸವ ಯಾವುದೇ ಆಗಿರಲಿ, ಇದು ಕಾಶಿಯಲ್ಲಿ ಹೊಸ ಸಂಪ್ರದಾಯಗಳ ಪ್ರಾರಂಭವಾಗಿದೆ ಎಂದು ಹೇಳಿದರು. ಕಾಶಿ ಸಂಸದ್ ಜ್ಞಾನ ಪ್ರತಿಯೋಗಿತಾ ಕಾರ್ಯಕ್ರಮವನ್ನೂ ಆಯೋಜಿಸಲಾಗುವುದು ಎಂದು ಅವರು ಪ್ರಕಟಿಸಿದರು. "ಕಾಶಿಯ ಸಂಸ್ಕೃತಿ, ಪಾಕಪದ್ಧತಿ ಮತ್ತು ಕಲೆಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವ ಪ್ರಯತ್ನ ಇದಾಗಿದೆ. ಕಾಶಿ ಸಂಸದ್ ಜ್ಞಾನ ಪ್ರತಿಯೋಗಿತಾವನ್ನು ಕಾಶಿಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿವಿಧ ಹಂತಗಳಲ್ಲಿ ಆಯೋಜಿಸಲಾಗುವುದು." ಎಂದು ಅವರು ಹೇಳಿದರು.
ಕಾಶಿ ನಗರದ ಜನರು ಕಾಶಿಯ ಬಗ್ಗೆ ಹೆಚ್ಚು ತಿಳುವಳಿಕೆಯುಳ್ಳವರಾಗಿದ್ದು, ಇಲ್ಲಿನ ಪ್ರತಿಯೊಬ್ಬ ನಿವಾಸಿಯೂ ಕಾಶಿಯ ನಿಜವಾದ ಬ್ರಾಂಡ್ ಅಂಬಾಸಿಡರ್ ಎಂದು ಪ್ರಧಾನಿ ಹೇಳಿದರು. ಈ ಜ್ಞಾನವನ್ನು ಸರಿಯಾಗಿ ತಿಳಿಸಲು ಅವರನ್ನು ಸಜ್ಜುಗೊಳಿಸಲು, ನಗರವನ್ನು ಸರಿಯಾಗಿ ವಿವರಿಸುವ ಗುಣಮಟ್ಟದ ಪ್ರವಾಸಿ ಮಾರ್ಗದರ್ಶಿಗಳ ವ್ಯವಸ್ಥೆಯನ್ನು ಬಲಪಡಿಸುವ ಕುರಿತು ಪ್ರಧಾನಿ ಪ್ರಸ್ತಾಪಿಸಿದರು. ಇದಕ್ಕಾಗಿ ಕಾಶಿ ಸಂಸದ್ ಪ್ರವಾಸಿ ಮಾರ್ಗದರ್ಶಿ ಸ್ಪರ್ಧೆಯನ್ನೂ ಆಯೋಜಿಸಲಾಗುವುದು ಎಂದರು. “ನನ್ನ ಕಾಶಿಯ ಬಗ್ಗೆ ಜಗತ್ತು ತಿಳಿಯಬೇಕೆಂದು ನಾನು ಬಯಸುವುದರಿಂದ ಇದನ್ನು ಮಾಡಲು ಬಯಸುತ್ತೇನೆ. ಕಾಶಿಯ ಪ್ರವಾಸಿ ಮಾರ್ಗದರ್ಶಕರು ವಿಶ್ವದಲ್ಲೇ ಅತ್ಯಂತ ಗೌರವಾನ್ವಿತರಾಗಬೇಕೆಂದು ನಾನು ಆಶಿಸುತ್ತೇನೆ”ಎಂದು ಅವರು ಹೇಳಿದರು.
ಪ್ರಪಂಚದಾದ್ಯಂತದ ಅನೇಕ ವಿದ್ವಾಂಸರು ಸಂಸ್ಕೃತ ಕಲಿಯಲು ಕಾಶಿಗೆ ಭೇಟಿ ನೀಡುತ್ತಾರೆ ಎಂದು ಒತ್ತಿ ಹೇಳಿದ ಪ್ರಧಾನಿ, ಈ ನಂಬಿಕೆಯನ್ನು ಗಮನದಲ್ಲಿಟ್ಟುಕೊಂಡು ಇಂದು 1100 ಕೋಟಿ ರೂಪಾಯಿ ವೆಚ್ಚದಲ್ಲಿ ಅಟಲ್ ಅವಾಸಿಯ ವಿದ್ಯಾಲಯಗಳನ್ನು ಉದ್ಘಾಟಿಸಲಾಗಿದೆ ಎಂದು ತಿಳಿಸಿದರು. ಶ್ರಮಿಕರು ಸೇರಿದಂತೆ ಸಮಾಜದ ದುರ್ಬಲ ವರ್ಗದವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಈ ಶಾಲೆಗಳನ್ನು ತೆರೆಯಲಾಗಿದೆ ಎಂದು ಅವರು ಒತ್ತಿ ಹೇಳಿದರು. "ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಪ್ರಾಣ ಕಳೆದುಕೊಂಡವರ ಮಕ್ಕಳನ್ನು ಶೂನ್ಯ ಶುಲ್ಕದಲ್ಲಿ ಈ ಶಾಲೆಗಳಿಗೆ ಸೇರಿಸಲಾಗುವುದು" ಎಂದು ಪ್ರಧಾನಮಂತ್ರಿ ಹೇಳಿದರು. ಇಲ್ಲಿ ಸಾಮಾನ್ಯ ಕೋರ್ಸ್ ಗಳ ಹೊರತಾಗಿ ಸಂಗೀತ, ಕಲೆ, ಕರಕುಶಲ, ತಂತ್ರಜ್ಞಾನ ಮತ್ತು ಕ್ರೀಡೆಗಳಿಗೆ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದರು. ಆದಿವಾಸಿ ಸಮಾಜಕ್ಕಾಗಿ 1 ಲಕ್ಷ ಏಕಲವ್ಯ ವಸತಿ ಶಾಲೆಗಳ ಅಭಿವೃದ್ಧಿಯನ್ನು ಪ್ರಧಾನಿ ಪ್ರಸ್ತಾಪಿಸಿದರು. “ಹೊಸ ಶಿಕ್ಷಣ ನೀತಿಯೊಂದಿಗೆ, ಸರ್ಕಾರವು ಚಿಂತನೆಯನ್ನು ಸಂಪೂರ್ಣವಾಗಿ ಪರಿವರ್ತಿಸಿದೆ. ಶಾಲೆಗಳು ಆಧುನಿಕವಾಗುತ್ತಿವೆ ಮತ್ತು ತರಗತಿಗಳು ಸ್ಮಾರ್ಟ್ ಆಗುತ್ತಿವೆ” ಎಂದು ಅವರು ಹೇಳಿದರು. ಆಧುನಿಕ ತಂತ್ರಜ್ಞಾನದ ನೆರವಿನಿಂದ ದೇಶದ ಸಾವಿರಾರು ಶಾಲೆಗಳನ್ನು ಆಧುನೀಕರಿಸುವ ʼಪ್ರಧಾನಮಂತ್ರಿ ಶ್ರೀ ಅಭಿಯಾನʼವನ್ನು ಶ್ರೀ ಮೋದಿ ಉಲ್ಲೇಖಿಸಿದರು.
ನಗರಕ್ಕಾಗಿ ತನ್ನ ಎಲ್ಲಾ ಪ್ರಯತ್ನಗಳಲ್ಲಿ ಕಾಶಿಯ ಜನರ ಸಂಪೂರ್ಣ ಸಹಕಾರವನ್ನು ಪ್ರಧಾನಮಂತ್ರಿ ಸ್ಮರಿಸಿದರು.
ವಲಸೆ ಕಾರ್ಮಿಕರ ಮಕ್ಕಳ ಆರೈಕೆಗಾಗಿ ಎಲ್ಲಾ ರಾಜ್ಯಗಳಿಗೆ ಲಭ್ಯವಿರುವ ಬಜೆಟ್ ಅನ್ನು ಉಲ್ಲೇಖಿಸಿದ ಶ್ರೀ ಮೋದಿ, ಅನೇಕ ರಾಜ್ಯಗಳು ಚುನಾವಣಾ ಉದ್ದೇಶಗಳಿಗಾಗಿ ಈ ಹಣವನ್ನು ಬಳಸಿದರೆ ಉತ್ತರ ಪ್ರದೇಶವು ಮುಖ್ಯಮಂತ್ರಿ ಯೋಗಿ ಅವರ ನೇತೃತ್ವದಲ್ಲಿ ಸಮಾಜದ ಬಡ ವರ್ಗಗಳ ಮಕ್ಕಳ ಭವಿಷ್ಯಕ್ಕಾಗಿ ಬಳಸಿದೆ ಎಂದು ಹೇಳಿದರು. ವಸತಿ ಶಾಲೆಯ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಪ್ರಧಾನಿ ಶ್ಲಾಘಿಸಿದರು. "ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ, ಮುಂದಿನ 10 ವರ್ಷಗಳಲ್ಲಿ ಈ ಶಾಲೆಗಳಿಂದ ಹೊರಬರುವ ಕಾಶಿಯ ವೈಭವವನ್ನು ನೀವು ನೋಡುತ್ತೀರಿ" ಎಂದು ಅವರು ತಮ್ಮ ಮಾತು ಮುಗಿಸಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಮತ್ತು ಉತ್ತರ ಪ್ರದೇಶ ಸರ್ಕಾರದ ಸಚಿವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಕಾಶಿಯ ಸಾಂಸ್ಕೃತಿಕ ಕಂಪನ್ನು ಬಲಪಡಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನವು ಕಾಶಿ ಸಂಸದ್ ಸಾಂಸ್ಕೃತಿಕ ಮಹೋತ್ಸವದ ಪರಿಕಲ್ಪನೆಗೆ ಕಾರಣವಾಗಿದೆ. ಮಹೋತ್ಸವದಲ್ಲಿ 17 ವಿಭಾಗಗಳ 37,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಅವರು ಗಾಯನ, ವಾದ್ಯ ನುಡಿಸುವಿಕೆ, ಬೀದಿ ನಾಟಕ, ನೃತ್ಯ ಇತ್ಯಾದಿಗಳಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು. ರುದ್ರಾಕ್ಷ ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮದ ಸಮಯದಲ್ಲಿ ಭಾಗವಹಿಸಿದ ಪ್ರತಿಭಾನ್ವಿತರು ತಮ್ಮ ಸಾಂಸ್ಕೃತಿಕ ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶವನ್ನು ಪಡೆದರು.
ಗುಣಮಟ್ಟದ ಶಿಕ್ಷಣದ ಪ್ರವೇಶವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ, ಸುಮಾರು 1115 ಕೋಟಿ ರೂಪಾಯಿ ವೆಚ್ಚದಲ್ಲಿ ಉತ್ತರ ಪ್ರದೇಶದಾದ್ಯಂತ ನಿರ್ಮಿಸಲಾದ 16 ಅಟಲ್ ಅವಾಸಿಯ ವಿದ್ಯಾಲಯಗಳನ್ನು ಕಾರ್ಮಿಕರು, ಕಟ್ಟಡ ಕಾರ್ಮಿಕರು ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಸಂತ್ರಸ್ತರಾದ ಅನಾಥ ಮಕ್ಕಳಿಗಾಗಿ ಪ್ರತ್ಯೇಕವಾಗಿ ಪ್ರಾರಂಭಿಸಲಾಗಿದೆ. ಗುಣಮಟ್ಟದ ಶಿಕ್ಷಣ ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗೆ ಸಹಾಯ ಮಾಡುವ ಗುರಿಯನ್ನು ಇದು ಹೊಂದಿದೆ. ಪ್ರತಿ ಶಾಲೆಯು 10-15 ಎಕರೆ ಪ್ರದೇಶದಲ್ಲಿ ತರಗತಿ ಕೊಠಡಿಗಳು, ಕ್ರೀಡಾ ಮೈದಾನ, ಮನರಂಜನಾ ಪ್ರದೇಶಗಳು, ಮಿನಿ ಸಭಾಂಗಣ, ಹಾಸ್ಟೆಲ್ ಸಂಕೀರ್ಣ, ಮೆಸ್ ಮತ್ತು ಸಿಬ್ಬಂದಿಗೆ ವಸತಿಗಳನ್ನು ನಿರ್ಮಿಸಲಾಗಿದೆ. ಈ ವಸತಿ ಶಾಲೆಗಳು ಅಂತಿಮವಾಗಿ ತಲಾ 1,000 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿವೆ.
बाबा की कृपा से काशी अब विकास के ऐसे आयाम गढ़ रही है, जो अभूतपूर्व हैं। pic.twitter.com/sVatuqxAWk
— PMO India (@PMOIndia) September 23, 2023
2014 में जब मैं यहाँ आया था, तो मैंने जिस काशी की कल्पना की थी, विकास और विरासत का वो सपना अब धीरे-धीरे साकार हो रहा है: PM @narendramodi pic.twitter.com/WsaB5vZQGD
— PMO India (@PMOIndia) September 23, 2023
Varanasi has been a centre of learning for centuries. pic.twitter.com/Sona7VFkYq
— PMO India (@PMOIndia) September 23, 2023
नई राष्ट्रीय शिक्षा नीति के जरिए हमने शिक्षा व्यवस्था की पुरानी सोच को भी बदला है। pic.twitter.com/ThPr6hrdem
— PMO India (@PMOIndia) September 23, 2023