ಟಿಬಿ ಮುಕ್ತ ಪಂಚಾಯತ್ ಉಪಕ್ರಮಕ್ಕೆ ಚಾಲನೆ, ಕ್ಷಯರೋಗಕ್ಕೆ ಕುಟುಂಬ ಕೇಂದ್ರಿತ ಆರೈಕೆ ಮಾದರಿ ಮತ್ತು ದೇಶಾದ್ಯಂತ ಟಿಬಿ ತಡೆಗಟ್ಟುವ ಕಿರು ಚಿಕಿತ್ಸೆಗೆ ಅಧಿಕೃತ ಚಾಲನೆ
ಕ್ಷಯ ಮುಕ್ತ ಸಮಾಜವನ್ನು ಖಾತ್ರಿಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದ ಭಾರತ
2025ರ ವೇಳೆಗೆ ಕ್ಷಯರೋಗವನ್ನು ಕೊನೆಗೊಳಿಸಲು ಭಾರತವು ಅತ್ಯುತ್ತಮ ಯೋಜನೆ, ಮಹತ್ವಾಕಾಂಕ್ಷೆ ಮತ್ತು ಚಟುವಟಿಕೆಗಳ ಉತ್ತಮ ಅನುಷ್ಠಾನವನ್ನು ಹೊಂದಿದೆ: ಸ್ಟಾಪ್ ಟಿಬಿ ಕಾರ್ಯನಿರ್ವಾಹಕ ನಿರ್ದೇಶಕರು
"ಟಿಬಿಯಂತಹ ರೋಗದ ವಿರುದ್ಧದ ಹೋರಾಟದಲ್ಲಿ ಜಾಗತಿಕ ನಿರ್ಣಯಗಳಿಗೆ ಕಾಶಿ ಹೊಸ ಶಕ್ತಿಯನ್ನು ನೀಡುತ್ತದೆ"
"ಒಂದು ವಿಶ್ವ ಟಿಬಿ ಶೃಂಗಸಭೆಯ ಮೂಲಕ ಭಾರತವು ಜಾಗತಿಕ ಒಳಿತಿನ ಮತ್ತೊಂದು ನಿರ್ಣಯವನ್ನು ಪೂರೈಸುತ್ತಿದೆ"
"ಭಾರತದ ಪ್ರಯತ್ನಗಳು ಕ್ಷಯರೋಗದ ವಿರುದ್ಧದ ಜಾಗತಿಕ ಸಮರಕ್ಕೆ ಹೊಸ ಮಾದರಿಯಾಗಿದೆ"
"ಕ್ಷಯರೋಗದ ವಿರುದ್ಧದ ಹೋರಾಟದಲ್ಲಿ ಜನರ ಭಾಗವಹಿಸುವಿಕೆಯು ಭಾರತದ ದೊಡ್ಡ ಕೊಡುಗೆಯಾಗಿದೆ"
"ಭಾರತವು ಈಗ 2025ರ ವೇಳೆಗೆ ಕ್ಷಯರೋಗವನ್ನು ಕೊನೆಗೊಳಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ"
"ಹೆಚ್ಚು ಹೆಚ್ಚು ದೇಶಗಳು ಭಾರತದ ಎಲ್ಲಾ ಅಭಿಯಾನಗಳು, ಆವಿಷ್ಕಾರಗಳು ಮತ್ತು ಆಧುನಿಕ ತಂತ್ರಜ್ಞಾನದ ಪ್ರಯೋಜನವನ್ನು ಪಡೆಯಬೇಕೆಂದು ನಾನು ಬಯಸುತ್ತೇನೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರಾಣಸಿಯ ರುದ್ರಾಕ್ಷ್ ಸಮಾವೇಶ ಕೇಂದ್ರದಲ್ಲಿ ಒಂದು ವಿಶ್ವ ಟಿಬಿ ಶೃಂಗಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ಅವರು ಟಿಬಿ ಮುಕ್ತ ಪಂಚಾಯತ್, ಅಲ್ಪಾವಧಿಯ ಟಿಬಿ ತಡೆಗಟ್ಟುವ ಚಿಕಿತ್ಸೆಗೆ (ಟಿಪಿಟಿ)ನ್ನು ಭಾರತದಾದ್ಯಂತ ಅಧಿಕೃತ ಅನುಷ್ಠಾನ, ಕ್ಷಯರೋಗಕ್ಕೆ ಕುಟುಂಬ ಕೇಂದ್ರಿತ ಆರೈಕೆ ಮಾದರಿ ಮತ್ತು ಭಾರತದ ವಾರ್ಷಿಕ ಟಿಬಿ ವರದಿ 2023 ರ ಬಿಡುಗಡೆ ಸೇರಿದಂತೆ ವಿವಿಧ ಉಪಕ್ರಮಗಳಿಗೆ ಚಾಲನೆ ನೀಡಿದರು. ಪ್ರಧಾನಮಂತ್ರಿಯವರು ರಾಷ್ಟ್ರೀಯ ರೋಗ ನಿಯಂತ್ರಣ ಮತ್ತು ಹೈ ಕಂಟೈನ್ಮೆಂಟ್ ಪ್ರಯೋಗಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ವಾರಣಾಸಿಯಲ್ಲಿ ಮೆಟ್ರೋಪಾಲಿಟನ್ ಸಾರ್ವಜನಿಕ ಆರೋಗ್ಯ ಕಣ್ಗಾವಲು ಘಟಕದ ತಾಣವನ್ನು ಉದ್ಘಾಟಿಸಿದರು. ಕ್ಷಯ ರೋಗವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸಾಧಿಸಿರುವ ಪ್ರಗತಿಗಾಗಿ ಆಯ್ದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಜಿಲ್ಲೆಗಳಿಗೆ ಪ್ರಧಾನಮಂತ್ರಿಯವರು ಪ್ರಶಸ್ತಿ ಪ್ರದಾನ ಮಾಡಿದರು. ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮಟ್ಟದಲ್ಲಿ ಕರ್ನಾಟಕ ಮತ್ತು ಜಮ್ಮು ಮತ್ತು ಕಾಶ್ಮೀರ ಹಾಗೂ ಜಿಲ್ಲಾ ಮಟ್ಟದಲ್ಲಿ ನೀಲಗಿರಿ, ಪುಲ್ವಾಮಾ ಮತ್ತು ಅನಂತ್ ನಾಗ್ ಈ ಪ್ರಶಸ್ತಿಗಳನ್ನು ಪಡೆದಿವೆ.

ಸ್ಟಾಪ್ ಟಿಬಿಯ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ಲೂಸಿಕಾ ದಿತಿಯು ಮಾತನಾಡಿ, ವಿಶ್ವದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾದ ವಾರಣಾಸಿಯಲ್ಲಿ ಶೃಂಗಸಭೆ ನಡೆಯುತ್ತಿದ್ದು, ವಿಶ್ವದಲ್ಲಿ ಸಾವಿರ ವರ್ಷಗಳ ಹಳೆಯ ಕಾಯಿಲೆಯಾದ ಕ್ಷಯ ಅಥವಾ ಟಿಬಿಯ ಬಗ್ಗೆ ವಾರಾಣಸಿಯಲ್ಲಿ ಚರ್ಚಿಸಲಾಗುತ್ತಿದೆ. ಭಾರತವು ಕ್ಷಯರೋಗದ ಹೆಚ್ಚಿನ ಹೊರೆಯನ್ನು ಹೊತ್ತಿದ್ದರೂ, ಉತ್ತಮ ಯೋಜನೆ, ಮಹತ್ವಾಕಾಂಕ್ಷೆ ಮತ್ತು ಚಟುವಟಿಕೆಗಳ ಉತ್ತಮ ಅನುಷ್ಠಾನವಿದೆ ಎಂದು ಅವರು ಹೇಳಿದರು. ಭಾರತದ ಜಿ -20 ಅಧ್ಯಕ್ಷತೆಯಲ್ಲಿ ಜಾಗತಿಕ ಕಲ್ಯಾಣವನ್ನು ಅಳವಡಿಸಿಕೊಂಡಿರುವ ಬಗ್ಗೆ ಅವರು ಒತ್ತಿಹೇಳಿದರು ಮತ್ತು ಒಂದು ವಿಶ್ವ ಒಂದು ಆರೋಗ್ಯ ಎಂಬ ವಿಷಯದ ಮಹತ್ವವನ್ನು ವಿವರಿಸಿದರು. ಪ್ರಧಾನಮಂತ್ರಿಯವರ ನಾಯಕತ್ವದಲ್ಲಿ ಭಾರತವು 2025ರ ವೇಳೆಗೆ ಕ್ಷಯರೋಗವನ್ನು ಕೊನೆಗೊಳಿಸುವ ಹಾದಿಯಲ್ಲಿದೆ ಎಂದು ಅವರು ಹೇಳಿದರು. ಭಾರತದಂತಹ ದೇಶಗಳ ಪ್ರಯತ್ನದಿಂದಾಗಿ, ಕ್ಷಯರೋಗಕ್ಕೆ ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆಯದ ಜನರ ಸಂಖ್ಯೆ ಇತಿಹಾಸದಲ್ಲಿ ಮೊದಲ ಬಾರಿಗೆ 30ಲಕ್ಷಕ್ಕಿಂತ ಕಡಿಮೆಯಾಗಿದೆ ಎಂದು ಅವರು ಹೇಳಿದರು. ಟಿಬಿಯನ್ನು ನಿಭಾಯಿಸುವಲ್ಲಿ ಭಾರತದ ಪ್ರಮಾಣ ಮತ್ತು ಟಿಬಿ ಮುಕ್ತ ಭಾರತ ಉಪಕ್ರಮವನ್ನು ಅವರು ಶ್ಲಾಘಿಸಿದರು ಮತ್ತು ಭಾರತದ ಬೆಂಬಲದೊಂದಿಗೆ ಭಾರತವು 2025ರ ವೇಳೆಗೆ ಕ್ಷಯರೋಗವನ್ನು ಕೊನೆಗೊಳಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಸೆಪ್ಟೆಂಬರ್ 22 ರಂದು ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಟಿಬಿ ಕುರಿತು ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಭೆ ನಡೆಯುತ್ತಿರುವ ಬಗ್ಗೆಯೂ ಅವರು ಮಾಹಿತಿ ನೀಡಿದರು ಮತ್ತು ಸಭೆಯಲ್ಲಿ ಪ್ರಧಾನಮಂತ್ರಿಯ ಉಪಸ್ಥಿತಿಯನ್ನು ಕೋರಿದರು. ಟಿಬಿ ವಿರುದ್ಧದ ಈ ಹೋರಾಟದಲ್ಲಿ ಇತರ ವಿಶ್ವ ನಾಯಕರನ್ನು ಮುನ್ನಡೆಸಬೇಕು ಮತ್ತು ಪ್ರೇರೇಪಿಸಬೇಕು ಎಂದು ಅವರು ಪ್ರಧಾನಮಂತ್ರಿಯವರನ್ನು ಆಗ್ರಹಿಸಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ವಾರಣಾಸಿಯಲ್ಲಿ ಒಂದು ವಿಶ್ವ ಕ್ಷಯರೋಗ ಶೃಂಗಸಭೆ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು ಮತ್ತು ತಾವು ಈ ನಗರದ ಸಂಸತ್ ಸದಸ್ಯರೂ ಆಗಿರುವುದಾಗಿ ತಿಳಿಸಿದರು. ಕಾಶಿ ನಗರವು ಸಾವಿರಾರು ವರ್ಷಗಳಿಂದ ಮಾನವೀಯತೆಯ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳಿಗೆ ಸಾಕ್ಷಿಯಾದ ಶಾಶ್ವತ ವಾಹಿನಿಯಂತಿದೆ ಎಂದು ಅವರು ಒತ್ತಿ ಹೇಳಿದರು. "ಅಡೆತಡೆಗಳು ಏನೇ ಇರಲಿ, 'ಸಬ್ಕಾ ಪ್ರಯಾಸ್' (ಎಲ್ಲರ ಪ್ರಯತ್ನ) ದಿಂದ ಹೊಸ ಮಾರ್ಗಗಳನ್ನು ರೂಪಿಸಲಾಗುತ್ತದೆ ಎಂದು ಕಾಶಿ ಸದಾ ಸಾಬೀತುಪಡಿಸಿದೆ" ಎಂದು ಅವರು ಹೇಳಿದರು. ಟಿಬಿಯಂತಹ ರೋಗದ ವಿರುದ್ಧದ ಹೋರಾಟದಲ್ಲಿ ಕಾಶಿ ಜಾಗತಿಕ ನಿರ್ಣಯಗಳತ್ತ ಹೊಸ ಶಕ್ತಿಯನ್ನು ತರುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಒಂದು ದೇಶವಾಗಿ, ಭಾರತದ ಸಿದ್ಧಾಂತದ ಪ್ರತಿಬಿಂಬವನ್ನು ವಸುದೈವ ಕುಟುಂಬಕಂ ಸ್ಫೂರ್ತಿಯಲ್ಲಿ ಕಾಣಬಹುದು ಅಂದರೆ ಇಡೀ ಜಗತ್ತು ಒಂದು ಕುಟುಂಬವಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಈ ಪ್ರಾಚೀನ ಸಿದ್ಧಾಂತವು ಇಂದಿನ ಮುಂದುವರಿದ ಜಗತ್ತಿಗೆ ಸಮಗ್ರ ದೃಷ್ಟಿಕೋನ ಮತ್ತು ಸಮಗ್ರ ಪರಿಹಾರಗಳನ್ನು ನೀಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಜಿ 20 ಅಧ್ಯಕ್ಷನಾಗಿ, ಭಾರತವು ಅಂತಹ ನಂಬಿಕೆಗಳ ಆಧಾರದ ಮೇಲೆ 'ಒಂದು ಕುಟುಂಬ, ಒಂದು ಜಗತ್ತು, ಒಂದು ಭವಿಷ್ಯ' ಎಂಬ ವಿಷಯವನ್ನು ಆಯ್ಕೆ ಮಾಡಿದೆ ಎಂದು ಅವರು ಉಲ್ಲೇಖಿಸಿದರು. "ಜಿ-20 ಶೃಂಗಸಭೆಯ ಧ್ಯೇಯ ಇಡೀ ವಿಶ್ವದ ಹಂಚಿಕೆಯ ಭವಿಷ್ಯದ ಸಂಕಲ್ಪವಾಗಿದೆ", ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವು 'ಒಂದು ಭೂಮಿ, ಒಂದು ಆರೋಗ್ಯ'ದ ದೃಷ್ಟಿಕೋನವನ್ನು ವಿಶ್ವದಲ್ಲಿ ಪಸರಿಸುತ್ತಿದೆ ಮತ್ತು ಒಂದು ವಿಶ್ವ ಕ್ಷಯ ಶೃಂಗಸಭೆಯೊಂದಿಗೆ ಜಾಗತಿಕ ಒಳಿತಿನ ಸಂಕಲ್ಪಗಳನ್ನು ಸಾಕಾರಗೊಳಿಸುತ್ತಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

2014ರ ನಂತರ ಕ್ಷಯರೋಗವನ್ನು ನಿಭಾಯಿಸಲು ಭಾರತ ತನ್ನನ್ನು ಸಮರ್ಪಿಸಿಕೊಂಡ ಬದ್ಧತೆ ಮತ್ತು ದೃಢನಿಶ್ಚಯ ಅಭೂತಪೂರ್ವವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕ್ಷಯರೋಗದ ವಿರುದ್ಧದ ಜಾಗತಿಕ ಯುದ್ಧಕ್ಕೆ ಇದು ಹೊಸ ಮಾದರಿಯಾಗಿರುವುದರಿಂದ ಭಾರತದ ಪ್ರಯತ್ನಗಳು ಮಹತ್ವದ್ದಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು.  ಕಳೆದ 9 ವರ್ಷಗಳಲ್ಲಿ ಕ್ಷಯರೋಗದ ವಿರುದ್ಧ ಬಹುಮುಖಿ ವಿಧಾನವನ್ನು ಅವರು ವಿವರಿಸಿದರು. ಜನರ ಪಾಲ್ಗೊಳ್ಳುವಿಕೆ, ಪೌಷ್ಟಿಕಾಂಶ ಹೆಚ್ಚಳ, ಚಿಕಿತ್ಸೆಯ ನಾವೀನ್ಯತೆ, ತಂತ್ರಜ್ಞಾನ ಏಕೀಕರಣ ಮತ್ತು ಸ್ವಾಸ್ಥ್ಯ ಹಾಗೂ ರೋಗ ತಡೆಗಟ್ಟುವಿಕೆಗೆ ನೆರವಾಗುವ ಫಿಟ್ ಇಂಡಿಯಾ, ಯೋಗ ಮತ್ತು ಖೇಲೋ ಇಂಡಿಯಾ ಮಾದರಿಯ ಮಧ್ಯಸ್ಥಿಕೆಗಳಂತಹ ಅವರು ಪಟ್ಟಿ ಮಾಡಿದರು.

ಜನರ ಪಾಲ್ಗೊಳ್ಳುವಿಕೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಕ್ಷಯ ರೋಗಿಗಳಿಗೆ ನೆರವಾಗುವ ನಿ-ಕ್ಷಯ್ ಮಿತ್ರ ಅಭಿಯಾನದ ಬಗ್ಗೆ ಮಾತನಾಡಿದರು. ಸುಮಾರು 10 ಲಕ್ಷ ಕ್ಷಯ ರೋಗಿಗಳನ್ನು ನಾಗರಿಕರು ದತ್ತು ಪಡೆದಿದ್ದಾರೆ ಮತ್ತು 10-12 ವರ್ಷ ವಯಸ್ಸಿನ ಮಕ್ಕಳು ಸಹ ಮುಂದೆ ಬಂದಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಈ ಕಾರ್ಯಕ್ರಮದ ಅಡಿಯಲ್ಲಿ ಟಿಬಿ ರೋಗಿಗಳಿಗೆ ಆರ್ಥಿಕ ನೆರವು ಒಂದು ಸಾವಿರ ಕೋಟಿ ರೂಪಾಯಿಗಳವರೆಗೆ ತಲುಪಿದೆ ಎಂದರು. ಈ ಆಂದೋಲನವನ್ನು 'ಸ್ಪೂರ್ತಿದಾಯಕ' ಎಂದು ಕರೆದ ಅವರು, ಪ್ರವಾಸಿ ಭಾರತೀಯರು ಸಹ ಇದರಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಕ್ಷಯ ರೋಗಿಗಳಿಗೆ ಪೌಷ್ಟಿಕಾಂಶ ಪೂರೈಕೆಯ ಪ್ರಮುಖ ಸವಾಲನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಕ್ಷಯ ರೋಗಿಗಳಿಗೆ ಸಹಾಯ ಮಾಡುವಲ್ಲಿ ನಿ-ಕ್ಷಯ್ ಮಿತ್ರ ಅಭಿಯಾನದ ಕೊಡುಗೆಗಳನ್ನು ಒತ್ತಿ ಹೇಳಿದರು. ಸರ್ಕಾರವು 2018 ರಲ್ಲಿ ಟಿಬಿ ರೋಗಿಗಳಿಗೆ ನೇರ ಸವಲತ್ತು ವರ್ಗಾವಣೆ ಯೋಜನೆಯನ್ನು ಘೋಷಿಸಿದೆ ಮತ್ತು ಇದರ ಪರಿಣಾಮವಾಗಿ, ಸುಮಾರು 2000 ಕೋಟಿ ರೂ.ಗಳನ್ನು ಅವರ ಚಿಕಿತ್ಸೆಗಾಗಿ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು, ಅಲ್ಲಿ ಸರಿಸುಮಾರು 75 ಲಕ್ಷ ಟಿಬಿ ರೋಗಿಗಳು ಇದರಿಂದ ಪ್ರಯೋಜನ ಪಡೆದಿದ್ದಾರೆ. "ನಿ-ಕ್ಷಯ್ ಮಿತ್ರ ಈಗ ಎಲ್ಲ ಕ್ಷಯ ರೋಗಿಗಳಿಗೆ ಹೊಸ ಶಕ್ತಿಯ ಮೂಲವಾಗಿವೆ" ಎಂದು ಪ್ರಧಾನಮಂತ್ರಿ ಹೇಳಿದರು. ಹಳೆಯ ವಿಧಾನಗಳನ್ನು ಅನುಸರಿಸುವ ಮೂಲಕ ಹೊಸ ಪರಿಹಾರಗಳನ್ನು ಕಂಡುಕೊಳ್ಳುವುದು ಅತ್ಯಂತ ಕಷ್ಟ ಎಂದು ಹೇಳಿದ ಪ್ರಧಾನಮಂತ್ರಿಯವರು, ಕ್ಷಯ ರೋಗಿಗಳು ತಮ್ಮ ಚಿಕಿತ್ಸೆಯಿಂದ ಹೊರಗುಳಿಯದಂತೆ ಸರ್ಕಾರ ಹೊಸ ಕಾರ್ಯತಂತ್ರಗಳೊಂದಿಗೆ ಶ್ರಮಿಸಿದೆ ಎಂದು ಹೇಳಿದರು. ಕ್ಷಯರೋಗದ ತಪಾಸಣೆ ಮತ್ತು ಚಿಕಿತ್ಸೆಗಾಗಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಾರಂಭಿಸಿರುವುದು, ದೇಶದಲ್ಲಿ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ಟಿಬಿ ರೋಗಿಗಳ ಸಂಖ್ಯೆ ಹೆಚ್ಚಿರುವ ನಗರಗಳನ್ನು ಗುರಿಯಾಗಿಸುವ ಮೂಲಕ ಪ್ರದೇಶ-ನಿರ್ದಿಷ್ಟ ಕಾರ್ಯನೀತಿಗಳನ್ನು ರೂಪಿಸುವ ಉದಾಹರಣೆಗಳನ್ನು ಅವರು ನೀಡಿದರು. ಇದೇ ಮಾದರಿಯಲ್ಲಿ ಇಂದು 'ಟಿಬಿ ಮುಕ್ತ ಪಂಚಾಯತ್ ಅಭಿಯಾನ' ಎಂಬ ಹೊಸ ಅಭಿಯಾನಕ್ಕೂ ಚಾಲನೆ ನೀಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಟಿಬಿ ತಡೆಗಟ್ಟುವಿಕೆಗಾಗಿ ಸರ್ಕಾರವು 6 ತಿಂಗಳ ಕೋರ್ಸ್ ಬದಲಿಗೆ 3 ತಿಂಗಳ ಚಿಕಿತ್ಸಾ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. ಈ ಮೊದಲು, ರೋಗಿಗಳು ಪ್ರತಿದಿನ 6 ತಿಂಗಳವರೆಗೆ ಔಷಧಿಗಳನ್ನು ತೆಗೆದುಕೊಳ್ಳಬೇಕಾಗಿತ್ತು ಆದರೆ ಈಗ, ಹೊಸ ವ್ಯವಸ್ಥೆಯಲ್ಲಿ, ರೋಗಿಯು ವಾರಕ್ಕೆ ಒಮ್ಮೆ ಮಾತ್ರ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಟಿಬಿ ಮುಕ್ತ ಭಾರತ ಅಭಿಯಾನದಲ್ಲಿ ತಂತ್ರಜ್ಞಾನ ಏಕೀಕರಣದ ಬಗ್ಗೆ ಪ್ರಧಾನಮಂತ್ರಿ ಮಾಹಿತಿ ನೀಡಿದರು. ಈ ನಿಟ್ಟಿನಲ್ಲಿ ನಿ-ಕ್ಷಯ್ ಪೋರ್ಟಲ್ ಮತ್ತು ದತ್ತಾಂಶ ವಿಜ್ಞಾನದ ಬಳಕೆ ಬಹಳ ದೂರ ಸಾಗುತ್ತಿದೆ ಎಂದರು. ಆರೋಗ್ಯ ಸಚಿವಾಲಯ-ಐಸಿಎಂಆರ್ ಉಪ-ರಾಷ್ಟ್ರೀಯ ರೋಗ ಕಣ್ಗಾವಲಿಗೆ ಹೊಸ ವಿಧಾನವನ್ನು ಅಭಿವೃದ್ಧಿಪಡಿಸಿದೆ, ಇದು ಡಬ್ಲ್ಯುಎಚ್ಒ ಹೊರತುಪಡಿಸಿ, ಈ ರೀತಿಯ ಮಾದರಿಯನ್ನು ಹೊಂದಿರುವ ಏಕೈಕ ದೇಶ ಭಾರತವಾಗಿದೆ ಎಂದು ಅವರು ಹೇಳಿದರು.

ಕ್ಷಯ ರೋಗಿಗಳ ಸಂಖ್ಯೆ ಕ್ಷೀಣಿಸುತ್ತಿರುವುದನ್ನು ಮತ್ತು ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಇಂದು ಪ್ರಶಸ್ತಿಯನ್ನು ಪ್ರದಾನ ಮಾಡಿದ್ದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, 2030ರ ಜಾಗತಿಕ ಗುರಿಯ ಬದಲಾಗಿ 2025ರ ವೇಳೆಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡುವ ಭಾರತದ ಮತ್ತೊಂದು ಪ್ರಮುಖ ಸಂಕಲ್ಪವನ್ನು ಉಲ್ಲೇಖಿಸಿದರು. ಸಾಂಕ್ರಾಮಿಕ ಸಮಯದಲ್ಲಿ ಸಾಮರ್ಥ್ಯ ಮತ್ತು ಆರೋಗ್ಯ ಮೂಲಸೌಕರ್ಯ ವರ್ಧನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ರೋಗದ ವಿರುದ್ಧದ ಹೋರಾಟದಲ್ಲಿ ರೋಗಪತ್ತೆ, ಪರೀಕ್ಷೆ, ಶೋಧ, ಚಿಕಿತ್ಸೆ ಮತ್ತು ತಂತ್ರಜ್ಞಾನದ ಹೆಚ್ಚಿನ ಬಳಕೆಯ ಬಗ್ಗೆ ಒತ್ತಿ ಹೇಳಿದರು. "ಭಾರತದ ಈ ಸ್ಥಳೀಯ ವಿಧಾನದಲ್ಲಿ ಬೃಹತ್ ಜಾಗತಿಕ ಸಾಮರ್ಥ್ಯವಿದೆ" ಎಂದ ಅವರು ಆ ಸಾಮರ್ಥ್ಯವನ್ನು ಸಾಮೂಹಿಕವಾಗಿ ಬಳಸುವ ಅಗತ್ಯವನ್ನು ಒತ್ತಿ ಹೇಳಿದರು. ಶೇ.80ರಷ್ಟು ಕ್ಷಯರೋಗ ಔಷಧಿಗಳನ್ನು ಭಾರತದಲ್ಲಿಯೇ ತಯಾರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. "ಭಾರತದ ಇಂತಹ ಎಲ್ಲಾ ಅಭಿಯಾನಗಳು, ಆವಿಷ್ಕಾರಗಳು ಮತ್ತು ಆಧುನಿಕ ತಂತ್ರಜ್ಞಾನದ ಲಾಭವನ್ನು ಹೆಚ್ಚು ಹೆಚ್ಚು ದೇಶಗಳು ಪಡೆಯಬೇಕೆಂದು ನಾನು ಬಯಸುತ್ತೇನೆ. ಈ ಶೃಂಗಸಭೆಯಲ್ಲಿ ಭಾಗಿಯಾಗಿರುವ ಎಲ್ಲಾ ದೇಶಗಳು ಇದಕ್ಕಾಗಿ ಒಂದು ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಬಹುದು. ನಮ್ಮ ಈ ಸಂಕಲ್ಪ ಖಂಡಿತವಾಗಿಯೂ ಈಡೇರುತ್ತದೆ ಎಂಬ ಖಾತ್ರಿ ನನಗಿದೆ - ಹೌದು, ನಾವು ಕ್ಷಯರೋಗವನ್ನು ನಿರ್ಮೂಲನೆ ಮಾಡಬಹುದು", ಎಂದು ಪ್ರಧಾನಮಂತ್ರಿ ಹೇಳಿದರು.

 ಕುಷ್ಠರೋಗ ನಿರ್ಮೂಲನೆಗೆ ಮಹಾತ್ಮಾ ಗಾಂಧಿಯವರ ಕೊಡುಗೆಗಳನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಅಹ್ಮದಾಬಾದ್ ನಲ್ಲಿ ಕುಷ್ಠರೋಗ ಆಸ್ಪತ್ರೆಯನ್ನು ಉದ್ಘಾಟಿಸಲು ಗಾಂಧೀಜಿಯವರನ್ನು ಆಹ್ವಾನಿಸಿದ ಘಟನೆಯನ್ನು ಹಂಚಿಕೊಂಡರು. ಬಾಗಿಲುಗಳಿಗೆ ಹಾಕಿದ ಬೀಗ ನೇತಾಡುತ್ತಿರುವುದನ್ನು ನೋಡಿದಾಗ ತಮಗೆ ಸಂತೋಷವಾಗುತ್ತದೆ ಎಂದು ಗಾಂಧೀಜಿ ಆ ಸಂದರ್ಭದಲ್ಲಿ ಹಾಜರಿದ್ದ ಜನರಿಗೆ ಹೇಳಿದ್ದರು ಎಂದು ಅವರು ಸ್ಮರಿಸಿದರು. ಆಸ್ಪತ್ರೆಯು ದಶಕಗಳಿಂದ ಇದೇ ರೀತಿ ಮುಂದುವರೆದಿದೆ ಮತ್ತು ಕುಷ್ಠರೋಗ ಕೊನೆಯಾಗಿಲ್ಲ ಎಂದು ಪ್ರಧಾನಮಂತ್ರಿ ವಿಷಾದಿಸಿದರು. 2001 ರಲ್ಲಿ ಗುಜರಾತಿನ ಜನರು ತಮಗೆ ಅವಕಾಶ ನೀಡಿದಾಗ ಕುಷ್ಠರೋಗದ ವಿರುದ್ಧದ ಅಭಿಯಾನಕ್ಕೆ ಹೊಸ ವೇಗ ನೀಡಲಾಯಿತು ಮತ್ತು ಗುಜರಾತ್ ನಲ್ಲಿ ಕುಷ್ಠರೋಗದ ಪ್ರಮಾಣವು ಶೇ.23 ರಿಂದ ಶೇ.1ಕ್ಕಿಂತ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದರು. 2007ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ಕುಷ್ಠರೋಗ ಆಸ್ಪತ್ರೆಯನ್ನು ಮುಚ್ಚಲಾಯಿತು. ಇದರಲ್ಲಿ ಸಾಮಾಜಿಕ ಸಂಘಟನೆಗಳು ಮತ್ತು ಸಾರ್ವಜನಿಕರ ಭಾಗವಹಿಸುವಿಕೆಯ ಪಾತ್ರವನ್ನು ಅವರು ಎತ್ತಿ ತೋರಿಸಿದರು ಮತ್ತು ಕ್ಷಯರೋಗದ ವಿರುದ್ಧ ಭಾರತದ ಯಶಸ್ಸಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. "ಇಂದಿನ ನವ ಭಾರತವು ತನ್ನ ಗುರಿಗಳನ್ನು ಸಾಧಿಸಲು ಹೆಸರುವಾಸಿಯಾಗಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ಬಯಲು ಬಹಿರ್ದೆಸೆ ಮುಕ್ತವಾಗುವ ಪ್ರತಿಜ್ಞೆಯನ್ನು ಸಾಧಿಸಿದ ಉದಾಹರಣೆಗಳನ್ನು ನೀಡಿದರು, ಸೌರ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಗುರಿಯನ್ನು ಸಾಧನೆ ಮತ್ತು ನಿಗದಿತ ಶೇಕಡಾವಾರು ಎಥೆನಾಲ್ ಮಿಶ್ರಣದ ಗುರಿಯನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೆಟ್ರೋಲ್ ನಲ್ಲಿ ಮಿಶ್ರಣ ಮಾಡುವ ಗುರಿಯನ್ನು ಸಾಧಿಸಲಾಗಿದೆ. "ಸಾರ್ವಜನಿಕ ಪಾಲ್ಗೊಳ್ಳುವಿಕೆಯ ಶಕ್ತಿಯು ಇಡೀ ವಿಶ್ವದ ವಿಶ್ವಾಸವನ್ನು ಹೆಚ್ಚಿಸುತ್ತಿದೆ" ಎಂದು ಅವರು ಅಭಿಪ್ರಾಯಪಟ್ಟರು ಮತ್ತು ಕ್ಷಯರೋಗದ ವಿರುದ್ಧದ ಭಾರತದ ಹೋರಾಟದ ಯಶಸ್ಸಿಗೆ ಸಾರ್ವಜನಿಕ ,ಪಾಲ್ಗೊಳ್ಳುವಿಕೆ ಕಾರಣ ಎಂದು ಹೇಳಿದರು. ಟಿಬಿ ರೋಗಿಗಳಿಗೆ ರೋಗದ ಬಗ್ಗೆ ಅರಿವು ಮೂಡಿಸಲು ಪ್ರತಿಯೊಬ್ಬರೂ ಸಮಾನ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದರು. 

ಕಾಶಿಯಲ್ಲಿ ಆರೋಗ್ಯ ಸೇವೆಗಳ ವಿಸ್ತರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಪ್ರಧಾನಮಂತ್ರಿ ಮಾಹಿತಿ ನೀಡಿದರು. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ವಾರಣಾಸಿ ಶಾಖೆಯನ್ನು ಇಂದು ಉದ್ಘಾಟಿಸಲಾಯಿತು. ಸಾರ್ವಜನಿಕ ಆರೋಗ್ಯ ಕಣ್ಗಾವಲು ಘಟಕ ಕಾರ್ಯಾಚರಣೆ ಪ್ರಾರಂಭಿಸಿತು. ಬಿಎಚ್.ಯುನಲ್ಲಿ ಮಕ್ಕಳ ಆರೈಕೆ ಸಂಸ್ಥೆ, ರಕ್ತ ಬ್ಯಾಂಕ್ ಗಳ ಆಧುನೀಕರಣ, ಆಧುನಿಕ ತುರ್ತು ಚಿಕಿತ್ಸಾ ಕೇಂದ್ರ, ಸೂಪರ್ ಸ್ಪೆಷಾಲಿಟಿ ವಿಭಾಗ ಮತ್ತು ಪಂಡಿತ್ ಮದನ್ ಮೋಹನ್ ಮಾಳವೀಯ ಕ್ಯಾನ್ಸರ್ ಕೇಂದ್ರವನ್ನು ಉಲ್ಲೇಖಿಸಿದ ಅವರು, ಅಲ್ಲಿ 70 ಸಾವಿರಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಕಬೀರ್ ಚೌರಾ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಡಯಾಲಿಸಿಸ್ ಸೌಲಭ್ಯಗಳು, ಸಿ.ಟಿ ಸ್ಕ್ಯಾನ್ ಸೌಲಭ್ಯಗಳು ಮತ್ತು ಕಾಶಿಯ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳ ವಿಸ್ತರಣೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು.  ವಾರಣಾಸಿಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ 1.5 ಲಕ್ಷಕ್ಕೂ ಹೆಚ್ಚು ರೋಗಿಗಳು ಉಚಿತ ಚಿಕಿತ್ಸೆ ಪಡೆದಿದ್ದಾರೆ ಮತ್ತು 70 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಔಷಧಿಗಳನ್ನು ಒದಗಿಸುತ್ತಿವೆ ಎಂದರು. 

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಮಂತ್ರಿಯವರು, ರಾಷ್ಟ್ರದ ಅನುಭವ, ಪರಿಣತಿ ಮತ್ತು ಇಚ್ಛಾಶಕ್ತಿಯನ್ನು ಬಳಸಿಕೊಂಡು ಕ್ಷಯ ರೋಗವನ್ನು ನಿರ್ಮೂಲನೆ ಮಾಡುವ ಅಭಿಯಾನದಲ್ಲಿ ಭಾರತ ತೊಡಗಿಸಿಕೊಂಡಿದೆ ಎಂದು ಒತ್ತಿ ಹೇಳಿದರು. ಅಗತ್ಯವಿರುವ ಪ್ರತಿಯೊಂದು ದೇಶಕ್ಕೂ ಸಹಾಯ ಮಾಡಲು ಭಾರತ ನಿರಂತರವಾಗಿ ಸಿದ್ಧವಾಗಿದೆ ಎಂದು ಅವರು ಉಲ್ಲೇಖಿಸಿದರು. "ಟಿಬಿ ವಿರುದ್ಧದ ನಮ್ಮ ಅಭಿಯಾನವು ಸಬ್ಕಾ ಪ್ರಯಾಸ್ (ಎಲ್ಲರ ಪ್ರಯತ್ನಗಳು) ನಿಂದ ಮಾತ್ರ ಯಶಸ್ವಿಯಾಗುತ್ತದೆ. ಇಂದಿನ ನಮ್ಮ ಪ್ರಯತ್ನಗಳು ನಮ್ಮ ಸುರಕ್ಷಿತ ಭವಿಷ್ಯದ ಅಡಿಪಾಯವನ್ನು ಬಲಪಡಿಸುತ್ತವೆ ಮತ್ತು ನಮ್ಮ ಭವಿಷ್ಯದ ಪೀಳಿಗೆಗೆ ಉತ್ತಮ ಜಗತ್ತನ್ನು ಹಸ್ತಾಂತರಿಸುವ ಸ್ಥಾನದಲ್ಲಿರುತ್ತೇವೆ ಎಂದು ನಾನು ನಂಬುತ್ತೇನೆ", ಎಂದು ಪ್ರಧಾನಮಂತ್ರಿ ಮಾತು ಮುಗಿಸಿದರು.

ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀ ಅನಂದಿಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವೀಯ, ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಶ್ರೀ ಬ್ರಿಜೇಶ್ ಪಾಠಕ್ ಮತ್ತು ಸ್ಟಾಪ್ ಟಿಬಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಲ್ಯೂಸಿಕಾ ದಿಟಿಯು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಹಿನ್ನೆಲೆ

ವಿಶ್ವ ಕ್ಷಯರೋಗ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಒಂದು ವಿಶ್ವ ಕ್ಷಯರೋಗ ಶೃಂಗಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ಈ ಶೃಂಗಸಭೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂಒಎಚ್ಎಫ್ಡಬ್ಲ್ಯೂ) ಮತ್ತು ಸ್ಟಾಪ್ ಟಿಬಿ ಪಾಲುದಾರಿಕೆಯಲ್ಲಿ ಆಯೋಜಿಸಲಾಗಿತ್ತು. 2001 ರಲ್ಲಿ ಸ್ಥಾಪಿತವಾದ ಸ್ಟಾಪ್ ಟಿಬಿ ಪಾಲುದಾರಿಕೆ ವಿಶ್ವಸಂಸ್ಥೆಯ ಆರಂಭಿಸಿದ ಸಂಸ್ಥೆಯಾಗಿದ್ದು, ಇದು ಟಿಬಿ ಪೀಡಿತ ಜನರು, ಸಮುದಾಯಗಳು ಮತ್ತು ದೇಶಗಳ ಧ್ವನಿಯಾಗಿದೆ.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಟಿಬಿ ಮುಕ್ತ ಪಂಚಾಯತ್ ಉಪಕ್ರಮ ಸೇರಿದಂತೆ ವಿವಿಧ ಉಪಕ್ರಮಗಳಿಗೆ ಚಾಲನೆ ನೀಡಿದರು; ಕಡಿಮೆ ಅವಧಿಯ ಕ್ಷಯರೋಗ ಚಿಕಿತ್ಸೆಯ (ಟಿಪಿಟಿ)ನ್ನು ಅಧಿಕೃತವಾಗಿ ದೇಶಾದ್ಯಂತ ಆರಂಭಿಸಿದರು; ಕ್ಷಯರೋಗಕ್ಕೆ ಕುಟುಂಬ ಕೇಂದ್ರಿತ ಆರೈಕೆ ಮಾದರಿ ಮತ್ತು ಭಾರತದ ವಾರ್ಷಿಕ ಟಿಬಿ ವರದಿ 2023ರ ಬಿಡುಗಡೆ ನೆರವೇರಿಸಿದರು. ಕ್ಷಯ ರೋಗವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸಾಧಿಸಿರುವ ಪ್ರಗತಿಗಾಗಿ ಆಯ್ದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಜಿಲ್ಲೆಗಳಿಗೆ ಪ್ರಧಾನಮಂತ್ರಿಯವರು ಪ್ರಶಸ್ತಿ ಪ್ರದಾನ ಮಾಡಿದರು.

ಮಾರ್ಚ್ 2018 ರಲ್ಲಿ, ನವದೆಹಲಿಯಲ್ಲಿ ನಡೆದ ಟಿಬಿ ಕೊನೆಗಾಣಿಸುವ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರು, ನಿಗದಿತ ಸಮಯಕ್ಕಿಂತ ಐದು ವರ್ಷ ಮುಂಚಿತವಾಗಿ 2025 ರ ವೇಳೆಗೆ ಟಿಬಿ ಸಂಬಂಧಿತ ಎಸ್.ಡಿ.ಜಿ ಗುರಿಗಳನ್ನು ಸಾಧಿಸುವಂತೆ ಭಾರತಕ್ಕೆ ಕರೆ ನೀಡಿದರು. ಒಂದು ವಿಶ್ವ ಟಿಬಿ ಶೃಂಗಸಭೆಯು ದೇಶವು ತನ್ನ ಟಿಬಿ ನಿರ್ಮೂಲನೆ ಉದ್ದೇಶಗಳನ್ನು ಪೂರೈಸಲು ಮುಂದುವರಿಯುತ್ತಿರುವಂತೆ ಗುರಿಗಳ ಬಗ್ಗೆ ಮತ್ತಷ್ಟು ಚರ್ಚಿಸಲು ಅವಕಾಶವನ್ನು ಒದಗಿಸುತ್ತದೆ. ರಾಷ್ಟ್ರೀಯ ಟಿಬಿ ನಿರ್ಮೂಲನಾ ಕಾರ್ಯಕ್ರಮಗಳಿಂದ ಕಲಿತ ವಿಷಯಗಳನ್ನು ಪ್ರದರ್ಶಿಸಲು ಇದು ಒಂದು ಅವಕಾಶವಾಗಿದೆ. ಶೃಂಗಸಭೆಯಲ್ಲಿ 30 ಕ್ಕೂ ಹೆಚ್ಚು ದೇಶಗಳ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಭಾಗಿಯಾಗಿದ್ದಾರೆ.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
PM to attend Christmas Celebrations hosted by the Catholic Bishops' Conference of India
December 22, 2024
PM to interact with prominent leaders from the Christian community including Cardinals and Bishops
First such instance that a Prime Minister will attend such a programme at the Headquarters of the Catholic Church in India

Prime Minister Shri Narendra Modi will attend the Christmas Celebrations hosted by the Catholic Bishops' Conference of India (CBCI) at the CBCI Centre premises, New Delhi at 6:30 PM on 23rd December.

Prime Minister will interact with key leaders from the Christian community, including Cardinals, Bishops and prominent lay leaders of the Church.

This is the first time a Prime Minister will attend such a programme at the Headquarters of the Catholic Church in India.

Catholic Bishops' Conference of India (CBCI) was established in 1944 and is the body which works closest with all the Catholics across India.