ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಾರಾಣಸಿಯಲ್ಲಿ ಸಂತ ಗುರು ರವಿದಾಸ್ ಅವರ 647ನೇ ಜನ್ಮ ದಿನಾಚರಣೆಯನ್ನುದ್ದೇಶಿಸಿ ಭಾಷಣ ಮಾಡಿದರು. ಬಿಎಚ್ ಯು ಬಳಿಯ ಗೋವರ್ಧನಪುರದ ಸಂತ ಗುರು ರವಿದಾಸ್ ಜನ್ಮಸ್ಥಳದ ಪಕ್ಕದ ರವಿದಾಸ್ ಪಾರ್ಕ್ ನಲ್ಲಿ ಹೊಸದಾಗಿ ಸ್ಥಾಪಿಸಲಾದ ಸಂತ ರವಿದಾಸ್ ಅವರ ಪ್ರತಿಮೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ಸಂತ ರವಿದಾಸ್ ಜನ್ಮಸ್ಥಾಳದ ಸುತ್ತ ಸುಮಾರು 32 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಅವರು ಉದ್ಘಾಟಿಸಿದರು. ನಂತರ ಸಂತ ರವಿದಾಸ್ ವಸ್ತುಸಂಗ್ರಹಾಲಯಕ್ಕೆ ಶಂಕುಸ್ಥಾಪನೆಯನ್ನು ಮಾಡಿದ ಪ್ರಧಾನಮಂತ್ರಿಯವರು, ಸುಮಾರು 62 ಕೋಟಿ ರೂ.ಗಳ ಉದ್ಯಾನವನದ ಸೌಂದರ್ಯೀಕರಣಕ್ಕೆ ಶಂಕುಸ್ಥಾಪನೆಯನ್ನು ಕೂಡಾ ನೆರವೇರಿಸಿದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸಂತ ರವಿದಾಸ್ ಅವರ 647ನೇ ಜನ್ಮ ಜಯಂತಿಯಂದು ಅವರ ಜನ್ಮಸ್ಥಳಕ್ಕೆ ಎಲ್ಲರನ್ನೂ ಸ್ವಾಗತಿಸಿದರು. ದೇಶಾದ್ಯಂತದಿಂದ ಬಂದ ಭಕ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಪಂಜಾಬ್ ನಿಂದ ಕಾಶಿಗೆ ಬರುವ ಭಕ್ತರ ಉತ್ಸಾಹವನ್ನು ವಿಶೇಷವಾಗಿ ಶ್ಲಾಘಿಸಿದರು. ಕಾಶಿಯು ಮಿನಿ ಪಂಜಾಬ್ ಅನ್ನು ಹೋಲುತ್ತದೆ ಎಂದು ಹೇಳಿದರು. ಸಂತ ರವಿದಾಸ್ ಅವರ ಜನ್ಮಸ್ಥಳವನ್ನು ಭೇಟಿಮಾಡಿ, ಅವರ ಆದರ್ಶಗಳು ಮತ್ತು ಸಂಕಲ್ಪವನ್ನು ಪಾಲಿಸಲು ಮುಂದಾದ ಜನತೆಗೆ ಪ್ರಧಾನಿ ಕೃತಜ್ಞತೆ ಸಲ್ಲಿಸಿದರು.
ಕಾಶಿಯ ಪ್ರತಿನಿಧಿಯಾಗಿ ಸಂತ ರವಿದಾಸ್ ಅವರ ಅನುಯಾಯಿಗಳ ಸೇವೆ ಮಾಡುವ ಅವಕಾಶ ದೊರೆತಿದ್ದಕ್ಕಾಗಿ ಪ್ರಧಾನಿಯವರು ಸಂತಸ ವ್ಯಕ್ತಪಡಿಸಿದರು. ದೇವಾಲಯ ಪ್ರದೇಶದ ಅಭಿವೃದ್ಧಿ, ಸಂಪರ್ಕ ರಸ್ತೆಗಳ ನಿರ್ಮಾಣ, ಪೂಜೆ, ಪ್ರಸಾದ ವಿನಿಯೋಗ ಇತ್ಯಾದಿಗಳ ವ್ಯವಸ್ಥೆ ಸೇರಿದಂತೆ ಸಂತ ರವಿದಾಸ್ ಅವರ ಜನ್ಮಸ್ಥಳವನ್ನು ಅಭಿವೃದ್ದಿಪಡಿಸುವ ಯೋಜನೆಗಳನ್ನು ಪ್ರಧಾನಿಯವರು ಉಲ್ಲೇಖಿಸಿದರು. ಪ್ರಧಾನಮಂತ್ರಿಯವರು ಸಂತ ರವಿದಾಸ್ ಅವರ ಹೊಸ ಪ್ರತಿಮೆಯ ಬಗ್ಗೆಯೂ ಮಾತನಾಡಿದರು. ನಂತರ ಅವರು ಸಂತ ರವಿದಾಸ್ ವಸ್ತುಸಂಗ್ರಹಾಲಯಕ್ಕೆ ಶಂಕುಸ್ಥಾಪನೆಯನ್ನೂ ನೆರವೇರಿಸಿದರು.
ಇಂದು ಮಹಾನ್ ಸಂತ ಮತ್ತು ಸಮಾಜ ಸುಧಾರಕ ಗಾಡ್ಗೆ ಬಾಬಾರವರ ಜನ್ಮ ಜಯಂತಿಯೂ ಆಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ವಂಚಿತರು ಮತ್ತು ಬಡವರ ಉನ್ನತಿಗಾಗಿ ಅವರು ನೀಡಿದ ಕೊಡುಗೆಗಳನ್ನು ಎತ್ತಿ ತೋರಿಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಗಾಡ್ಗೆ ಬಾಬಾ ಅವರ ದೊಡ್ಡ ಅಭಿಮಾನಿಯಾಗಿದ್ದರು ಮತ್ತು ಗಾಡ್ಗೆ ಬಾಬಾ ಕೂಡ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ಪ್ರಭಾವಿತರಾಗಿದ್ದರು ಎಂದು ಪ್ರಧಾನಿಮಂತ್ರಿಯವರು ಮಾಹಿತಿ ನೀಡಿದರು. ಗಾಡ್ಗೆ ಬಾಬಾ ಅವರ ಜನ್ಮ ದಿನದಂದು ಪ್ರಧಾನಮಂತ್ರಿಯವರು ಅವರಿಗೂ ನಮನ ಸಲ್ಲಿಸಿದರು.
ಸಂತ ರವಿದಾಸ್ ಅವರ ಬೋಧನೆಗಳು ಯಾವಾಗಲೂ ತಮಗೆ ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಸಂತ ರವಿದಾಸ್ ಅವರ ಆದರ್ಶಗಳನ್ನು ಪೂರೈಸಲು ತಮಗೆ ಸಾಧ್ಯವಾಗಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು. ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಸಂತ ರವಿದಾಸ್ ಅವರ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.
"ಅಗತ್ಯದ ಸಮಯದಲ್ಲಿ ಸಂತ, ಋಷಿ ಅಥವಾ ಮಹಾನ್ ವ್ಯಕ್ತಿಗಳ ರೂಪದಲ್ಲಿ ರಕ್ಷಕರು ಜನಿಸುವುದು ಭಾರತದ ಇತಿಹಾಸವಾಗಿದೆ" ಎಂದು ಒತ್ತಿ ಹೇಳಿದ ಪ್ರಧಾನಿಯವರು, ಸಂತ ರವಿದಾಸ್ ಅವರು ವಿಭಜಿತ ಮತ್ತು ಛಿದ್ರಗೊಂಡ ಭಾರತಕ್ಕೆ ಶಕ್ತಿ ತುಂಬಿದ ಭಕ್ತಿ ಚಳವಳಿಯ ಪ್ರತಿಪಾದಕರಾಗಿದ್ದರು ಎಂದು ಹೇಳಿದರು. ಸಂತ ರವಿದಾಸ್ ಅವರು ಸಮಾಜದಲ್ಲಿ ಸ್ವಾತಂತ್ರ್ಯಕ್ಕೆ ಅರ್ಥವನ್ನು ತುಂಬಿದವರು ಮತ್ತು ಸಾಮಾಜಿಕ ವಿಭಜನೆಯನ್ನು ನಿವಾರಿಸಿದವರು ಎಂದು ಪ್ರಧಾನಿಯವರು ಹೇಳಿದರು. ಸಂತ ರವಿದಾಸ್ ಅವರು ಅಸ್ಪೃಶ್ಯತೆ, ವರ್ಗವಾದ ಮತ್ತು ತಾರತಮ್ಯದ ವಿರುದ್ಧ ಧ್ವನಿ ಎತ್ತಿದವರು. "ಸಂತ ರವಿದಾಸ್ ಅವರು ಅಭಿಪ್ರಾಯ ಮತ್ತು ಧರ್ಮದ ಸಿದ್ಧಾಂತಗಳಿಗೆ ಕಟ್ಟುಬಿದ್ದವರಲ್ಲ," "ರವಿದಾಸ್ ಎಲ್ಲರಿಗೂ ಸೇರಿದವರು ಮತ್ತು ಎಲ್ಲರೂ ಅವರನ್ನು ಗೌರವಿಸುತ್ತಾರೆ" ಎಂದು ಅವರು ಹೇಳಿದರು. ವೈಷ್ಣವ ಸಮುದಾಯವು ಸಂತ ರವಿದಾಸ್ ಅವರನ್ನು ಜಗದ್ಗುರು ರಮಾನಂದರ ಶಿಷ್ಯರಾಗಿ ತಮ್ಮ ಗುರು ಎಂದು ಪರಿಗಣಿಸುತ್ತದೆ. ಸಿಖ್ ಸಮುದಾಯವು ಅವರನ್ನು ಬಹಳ ಆರಾಧನಾಪೂರ್ವಕವಾಗಿ ಗೌರವಿಸುತ್ತದೆ ಎಂದು ಅವರು ಉಲ್ಲೇಖಿಸಿದರು. ಗಂಗಾನದಿಯಲ್ಲಿ ಪರಿತ್ರತೆಯನ್ನು ಕಂಡುಕೊಂಡವರು ಮತ್ತು ವಾರಣಾಸಿಗೆ ಸೇರಿದ ಭಾರತೀಯರು ಸಂತ ರವಿದಾಸ್ ಅವರಿಂದ ಸ್ಫೂರ್ತಿ ಪಡೆಯುತ್ತಾರೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಪ್ರಸ್ತುತ ಸರ್ಕಾರವು 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಎಂಬ ಮಂತ್ರವನ್ನು ಅನುಸರಿಸುತ್ತಾ ಸಂತ ರವಿದಾಸ್ ಅವರ ಬೋಧನೆಗಳು ಮತ್ತು ಆದರ್ಶಗಳನ್ನು ಮುಂದುವರೆಸುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಸಮಾನತೆ ಮತ್ತು ಒಗ್ಗಟ್ಟಿನ ಬಗ್ಗೆ ಸಂತ ರವಿದಾಸ್ ಅವರ ಬೋಧನೆಯನ್ನು ವಿವರಿಸಿದ ಪ್ರಧಾನಮಂತ್ರಿಯವರು, ವಂಚಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಆದ್ಯತೆ ನೀಡಿದಲ್ಲಿ ಸಮಾಜದಲ್ಲಿ ಸಮಾನತೆಯನ್ನು ತರಬಹುದು ಎಂದರು. ಅವರು ಅಭಿವೃದ್ಧಿಯಲ್ಲಿ ಹಿಂದುಳಿದ ಜನರಿಗೆ ಸರ್ಕಾರದ ಉಪಕ್ರಮದ ಪ್ರಯೋಜನಗಳನ್ನು ತಲುಪಿಸುವ ಸರ್ಕಾರದ ಪ್ರಯತ್ನಗಳನ್ನು ಒತ್ತಿ ಹೇಳಿದರು. 'ವಿಶ್ವದ ಅತಿದೊಡ್ಡ ಕಲ್ಯಾಣ ಯೋಜನೆಗಳನ್ನು' ಉಲ್ಲೇಖಿಸಿದ ಪ್ರಧಾನಿಯವರು ಅದರಲ್ಲಿ, 80 ಕೋಟಿ ಭಾರತೀಯರಿಗೆ ಉಚಿತ ಪಡಿತರ ವಿತರಣೆಯನ್ನು ಕೂಡಾ ಉಲ್ಲೇಖಿಸಿದರು. "ಈ ಪ್ರಮಾಣದ ಯೋಜನೆಯು ವಿಶ್ವದ ಯಾವುದೇ ದೇಶದಲ್ಲಿಲ್ಲ" ಎಂದು ಪ್ರಧಾನಿಯವರು ಹೇಳಿದರು. ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಶೌಚಾಲಯಗಳ ನಿರ್ಮಾಣದಿಂದ ದಲಿತರು, ಹಿಂದುಳಿದವರು ಮತ್ತು ಎಸ್ಸಿ/ಎಸ್ಟಿ/ಒಬಿಸಿ ಮಹಿಳೆಯರಿಗೆ ಹೆಚ್ಚು ಪ್ರಯೋಜನವಾಗಿದೆ. ಅಂತೆಯೇ, ಜಲ ಜೀವನ್ ಮಿಷನ್ 5 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ 11 ಕೋಟಿಗೂ ಹೆಚ್ಚು ಮನೆಗಳಿಗೆ ಕೊಳವೆ ನೀರನ್ನು ಪೂರೈಸಿದೆ ಮತ್ತು ಆಯುಷ್ಮಾನ್ ಕಾರ್ಡ್ ಹೊಂದಿದ ಬಡವರು ಸುರಕ್ಷತೆಯ ಭಾವನೆಯನ್ನು ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು. ಜನ್ ಧನ್ ಖಾತೆಗಳ ಮೂಲಕ ಬೃಹತ್ ಪ್ರಮಾಣದ ಆರ್ಥಿಕ ಸೇರ್ಪಡೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ನೇರ ಲಾಭ ವರ್ಗಾವಣೆಯು ಭಾರಿ ಪ್ರಯೋಜನಗಳಿಗೆ ಕಾರಣವಾಗಿದೆ ಎಂದ ಅವರು, ಅವುಗಳಲ್ಲಿ ಒಂದು ಕಿಸಾನ್ ಸಮ್ಮಾನ್ ನಿಧಿಯ ವರ್ಗಾವಣೆಯಾಗಿದ್ದು, ಇದು ಅನೇಕ ದಲಿತ ರೈತರಿಗೆ ಪ್ರಯೋಜನವನ್ನು ನೀಡುತ್ತಿದೆ ಎಂದರು. ಫಸಲ್ ಬಿಮಾ ಯೋಜನೆ ಕೂಡ ಇದಕ್ಕೆ ನೆರವಾಗುತ್ತಿದೆ ಎಂದರು. 2014ರಿಂದ ವಿದ್ಯಾರ್ಥಿವೇತನ ಪಡೆಯುವ ದಲಿತ ಯುವಕರ ಸಂಖ್ಯೆಯು ದ್ವಿಗುಣಗೊಂಡಿದ್ದು, ದಲಿತ ಕುಟುಂಬಗಳು ಪಿಎಂ ಆವಾಸ್ ಯೋಜನೆಯಡಿ ಕೋಟಿ ರೂಪಾಯಿಗಳ ನೆರವು ಪಡೆದಿವೆ ಎಂದು ಪ್ರಧಾನಿ ಮೋದಿಯವರು ಮಾಹಿತಿ ನೀಡಿದರು.
ದಲಿತರು, ವಂಚಿತರು ಮತ್ತು ಬಡವರ ಉನ್ನತಿಯೇ ಸರ್ಕಾರದ ಉದ್ದೇಶವಾಗಿದ್ದು, ಇಂದು ಜಗತ್ತಿನಲ್ಲಿ ಭಾರತದ ಪ್ರಗತಿಗೆ ಅದು ಕಾರಣವಾಗಿದೆ ಎಂದು ಪ್ರಧಾನಿ ಮೋದಿಯವರು ತಿಳಿಸಿದರು. ಸಂತರ ಮಾತುಗಳು ಪ್ರತಿ ಯುಗದಲ್ಲಿಯೂ ಜನತೆಯ ಹಾದಿಯನ್ನು ಬೆಳಗಿಸಿ, ನಮ್ಮನ್ನು ಎಚ್ಚರಿಸುತ್ತವೆ ಎಂದು ಅವರು ಹೇಳಿದರು. ಸಂತ ರವಿದಾಸ್ ಅವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಹೆಚ್ಚಿನ ಜನರು ಜಾತಿ-ಮತದ ಸಿಕ್ಕಿನಲ್ಲಿ ಸಿಲುಕಿಕೊಂಡಿದ್ದಾರೆ. ಜಾತಿವಾದದ ರೋಗವು ಮಾನವೀಯತೆಯ ಹಾನಿಯಾಗಿದೆ ಎಂದು ಅವರು ಹೇಳಿದರು. ಜಾತಿಯ ಹೆಸರಿನಲ್ಲಿ ಯಾರಾದರೂ ಪ್ರಚೋದಿಸಿದರೆ, ಅದು ಮಾನವೀಯತೆಗೆ ಹಾನಿಯನ್ನುಂಟು ಮಾಡುತ್ತದೆ ಎಂದು ಅವರು ಹೇಳಿದರು.
ದಲಿತರ ಕಲ್ಯಾಣವನ್ನು ವಿರೋಧಿಸುವ ಶಕ್ತಿಗಳ ವಿರುದ್ಧ ಪ್ರಧಾನಿ ಎಚ್ಚರಿಕೆ ನೀಡಿದರು. ಅಂತಹ ಜನರು ಜಾತಿ ರಾಜಕಾರಣದ ಸೋಗಿನಲ್ಲಿ ವಂಶಪಾರಂಪರ್ಯ ಮತ್ತು ಕುಟುಂಬ ರಾಜಕೀಯ ಮಾಡುತ್ತಾರೆ ಎಂದು ಅವರು ಹೇಳಿದರು. ವಂಶಪಾರಂಪರ್ಯ ರಾಜಕೀಯವು ದಲಿತರು ಮತ್ತು ಬುಡಕಟ್ಟು ಜನಾಂಗದವರ ಏಳಿಗೆಗೆ ತೊಡಕಾಗಿ, ಅವರನ್ನು ಮುಂದುವರೆಯಲು ತಡೆಯುತ್ತದೆ ಎಂದು ಪ್ರಧಾನಿಯವರು ಹೇಳಿದರು. "ನಾವು ಜಾತಿವಾದದ ನಕಾರಾತ್ಮಕ ಮನಸ್ಥಿತಿಯನ್ನು ಮೀರಿ, ರವಿದಾಸ್ ಅವರ ಸಕಾರಾತ್ಮಕ ಬೋಧನೆಗಳನ್ನು ಅನುಸರಿಸಬೇಕು" ಎಂದು ಪ್ರಧಾನಿಯವರು ಹೇಳಿದರು.
ರವಿದಾಸ್ ಅವರನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, "ನಾವು ನೂರು ವರ್ಷ ಬದುಕಿದ್ದರೆ, ಜೀವನದುದ್ದಕ್ಕೂ ಕೆಲಸ ಮಾಡಬೇಕು ಏಕೆಂದರೆ ಕರ್ಮವು ಒಂದು ಧರ್ಮವಾಗಿದೆ ಮತ್ತು ಕೆಲಸವನ್ನು ನಿಸ್ವಾರ್ಥವಾಗಿ ಮಾಡಬೇಕು" ಎಂದು ಅವರು ವಿವರಿಸಿದರು. ಸಂತ ರವಿದಾಸ್ ಅವರ ಈ ಬೋಧನೆಯು ಇಂದು ಇಡೀ ದೇಶಕ್ಕೆ ಅನ್ವಯಿಸುತ್ತದೆ ಎಂದರು. ಭಾರತವು 'ಸ್ವಾತಂತ್ರ್ಯದ ಅಮೃತ ಕಾಲದಲ್ಲಿದ್ದು,' ವಿಕಸಿತ ಭಾರತ ನಿರ್ಮಾಣಕ್ಕೆ ಬಲವಾದ ಅಡಿಪಾಯ ಹಾಕಲಾಗಿದೆ ಎಂದು ಹೇಳಿದ ಅವರು, ಮುಂದಿನ 5 ವರ್ಷಗಳಲ್ಲಿ ವಿಕಸಿತ ಭಾರತದ ಅಡಿಪಾಯವನ್ನು ಬಲಪಡಿಸುವುದಾಗಿ ಒತ್ತಿ ಹೇಳಿದರು. ಬಡವರು ಮತ್ತು ವಂಚಿತರ ಸೇವೆಗಾಗಿ ಅಭಿಯಾನಗಳ ವ್ಯಾಪ್ತಿಯನ್ನು ವಿಸ್ತರಿಸುವುದು 140 ಕೋಟಿ ದೇಶವಾಸಿಗಳ ಭಾಗವಹಿಸುವಿಕೆಯಿಂದ ಮಾತ್ರ ಸಾಧ್ಯ ಎಂದು ಅವರು ಒತ್ತಿ ಹೇಳಿದರು. "ನಾವು ದೇಶದ ಬಗ್ಗೆ ಯೋಚಿಸಬೇಕು. ವಿಭಜಕ ವಿಚಾರಗಳಿಂದ ದೂರ ಉಳಿಯುವ ಮೂಲಕ ನಾವು ದೇಶದ ಏಕತೆಯನ್ನು ಬಲಪಡಿಸಬೇಕಾಗಿದೆ" ಎಂದು ಹೇಳಿದ ಅವರು, ಸಂತ ರವಿದಾಸ್ ಅವರ ಕೃಪೆಯಿಂದ ನಾಗರೀಕರ ಕನಸುಗಳು ನನಸಾಗುತ್ತವೆ ಎಂಬ ವಿಶ್ವಾಸವನ್ನು ಪ್ರಧಾನಿಯವರು ವ್ಯಕ್ತಪಡಿಸಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಮತ್ತು ಸಂತ ಗುರು ರವಿದಾಸ್ ಜನ್ಮಸ್ಥಾನ ದೇವಾಲಯ ಟ್ರಸ್ಟ್ ನ ಅಧ್ಯಕ್ಷರಾದ ಸಂತ ನಿರಂಜನ್ ದಾಸ್ ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Tributes to Sant Ravidas Ji. pic.twitter.com/sT2sKWTA7o
— PMO India (@PMOIndia) February 23, 2024
भारत का इतिहास रहा है, जब भी देश को जरूरत हुई है, कोई न कोई संत, ऋषि, महान विभूति भारत में जन्म लेते हैं: PM @narendramodi pic.twitter.com/eX43k1oVFz
— PMO India (@PMOIndia) February 23, 2024
रविदास जी सबके हैं, और सब रविदास जी के हैं। pic.twitter.com/sXJy0s2QIc
— PMO India (@PMOIndia) February 23, 2024
पहले जिस गरीब को सबसे आखिरी समझा जाता था, सबसे छोटा कहा जाता था, आज सबसे बड़ी योजनाएँ उसी के लिए बनी हैं: PM @narendramodi pic.twitter.com/aKGJ0Bk4Vs
— PMO India (@PMOIndia) February 23, 2024