ರಾಜಸ್ಥಾನ ಹೈಕೋರ್ಟ್ ಮ್ಯೂಸಿಯಂ ಉದ್ಘಾಟನೆ
"ರಾಷ್ಟ್ರೀಯ ಏಕತೆ ಭಾರತದ ನ್ಯಾಯಾಂಗ ವ್ಯವಸ್ಥೆಯ ಅಡಿಪಾಯವಾಗಿದೆ ಮತ್ತು ಅದರ ಬಲಪಡಿಸುವಿಕೆ ರಾಷ್ಟ್ರ ಹಾಗೂ ಅದರ ವ್ಯವಸ್ಥೆಗಳನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತದೆ".
"ಭಾರತೀಯ ನ್ಯಾಯ ಸಂಹಿತೆಯ ಸ್ಫೂರ್ತಿಯನ್ನು ಸಾಧ್ಯವಾದಷ್ಟು ಪರಿಣಾಮಕಾರಿಯಾಗಿ ಮಾಡುವುದು ಈಗ ನಮ್ಮ ಜವಾಬ್ದಾರಿಯಾಗಿದೆ"
"ನಾವು ಸಂಪೂರ್ಣವಾಗಿ ಅಪ್ರಸ್ತುತವಾಗಿದ್ದ ನೂರಾರು ವಸಾಹತುಶಾಹಿ ಕಾನೂನುಗಳನ್ನು ರದ್ದುಗೊಳಿಸಿದ್ದೇವೆ"
"ಭಾರತೀಯ ನ್ಯಾಯ ಸಂಹಿತೆ ನಮ್ಮ ಪ್ರಜಾಪ್ರಭುತ್ವವನ್ನು ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತಗೊಳಿಸುತ್ತದೆ".
"ಇಂದು, ಭಾರತದ ಕನಸುಗಳು ದೊಡ್ಡದಾಗಿವೆ ಮತ್ತು ನಾಗರಿಕರ ಆಕಾಂಕ್ಷೆಗಳು ಹೆಚ್ಚಾಗಿವೆ".
"ನ್ಯಾಯಾಂಗವು ರಾಷ್ಟ್ರೀಯ ವಿಷಯಗಳ ಬಗ್ಗೆ ಜಾಗರೂಕವಾಗಿ ಎಚ್ಚರಿಕೆಯ ಮತ್ತು ಸಕ್ರಿಯವಾಗಿರುವ ನೈತಿಕ ಜವಾಬ್ದಾರಿಯನ್ನು ನಿರಂತರವಾಗಿ ನಿರ್ವಹಿಸಿದೆ"
"ವಿಕಸಿತ ಭಾರತದಲ್ಲಿ ಪ್ರತಿಯೊಬ್ಬರಿಗೂ ಸರಳ, ಲಭ್ಯವಾಗಬಹುದಾದ ಮತ್ತು ಸುಲಭ ನ್ಯಾಯವನ್ನು ಖಾತರಿಪಡಿಸುವುದು ಬಹಳ ಮುಖ್ಯ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜಸ್ಥಾನದ ಜೋಧಪುರದಲ್ಲಿ ರಾಜಸ್ಥಾನ ಹೈಕೋರ್ಟ್ ನ ಪ್ಲಾಟಿನಂ ಜುಬಿಲಿ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಷಣ ಮಾಡಿದರು. ಅವರು ರಾಜಸ್ಥಾನ ಹೈಕೋರ್ಟ್ ವಸ್ತುಸಂಗ್ರಹಾಲಯವನ್ನೂ ಉದ್ಘಾಟಿಸಿದರು.

ಮಹಾರಾಷ್ಟ್ರದಿಂದ ನಿರ್ಗಮಿಸುವಾಗ ಉಂಟಾದ ಪ್ರತಿಕೂಲ ಹವಾಮಾನದಿಂದಾಗಿ ಸ್ಥಳಕ್ಕೆ ಬರಲು ವಿಳಂಬವಾದ ಕಾರಣ ಆಗಿರುವ ಅನಾನುಕೂಲತೆಗೆ ವಿಷಾದಿಸುವ ಮೂಲಕ ಪ್ರಧಾನಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ರಾಜಸ್ಥಾನ ಹೈಕೋರ್ಟಿನ ಪ್ಲಾಟಿನಂ ಜುಬಿಲಿ ಆಚರಣೆಯ ಭಾಗವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಭಾರತದ ಸಂವಿಧಾನವು ತನ್ನ 75 ವರ್ಷಗಳನ್ನು ಪೂರೈಸುತ್ತಿರುವ ಸಮಯದಲ್ಲಿ ರಾಜಸ್ಥಾನ ಹೈಕೋರ್ಟ್ 75 ವರ್ಷಗಳನ್ನು ಪೂರೈಸುತ್ತಿದೆ ಎಂದು ಹೇಳಿದರು. ಆದ್ದರಿಂದ, ಇದು ಅನೇಕ ಮಹಾನ್ ವ್ಯಕ್ತಿಗಳ ನ್ಯಾಯ, ಸಮಗ್ರತೆ ಮತ್ತು ಸಮರ್ಪಣೆಯನ್ನು ಆಚರಿಸುವ ಸಂದರ್ಭವಾಗಿದೆ ಎಂದು ಪ್ರಧಾನಿ ಹೇಳಿದರು. "ಇಂದಿನ ಕಾರ್ಯಕ್ರಮವು ಸಂವಿಧಾನದ ಬಗ್ಗೆ ರಾಷ್ಟ್ರದ ನಂಬಿಕೆಗೆ ಒಂದು ಉದಾಹರಣೆಯಾಗಿದೆ" ಎಂದು ಪ್ರಧಾನಿ ಹೇಳಿದರು, ಈ ಸಂದರ್ಭದಲ್ಲಿ ನ್ಯಾಯದ ಎಲ್ಲಾ ಧ್ವಜಧಾರಿಗಳನ್ನು ಮತ್ತು ರಾಜಸ್ಥಾನದ ಜನರನ್ನು ಅವರು ಅಭಿನಂದಿಸಿದರು.

 

ರಾಜಸ್ಥಾನ ಹೈಕೋರ್ಟ್ ನ ಅಸ್ತಿತ್ವವು ಭಾರತದ ಏಕತೆಯ ಇತಿಹಾಸಕ್ಕೆ ಸಂಬಂಧಿಸಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 500 ಕ್ಕೂ ಹೆಚ್ಚು ರಾಜ್ಯಗಳನ್ನು ಒಟ್ಟುಗೂಡಿಸಿ ಭಾರತವನ್ನು ರೂಪಿಸಲು ಏಕತೆಯ ಒಂದೇ ಎಳೆಯಲ್ಲಿ ಹೆಣೆಯಲು ಮಾಡಿದ ಪ್ರಯತ್ನಗಳನ್ನು ಸ್ಮರಿಸಿದ ಪ್ರಧಾನಿ, ರಾಜಸ್ಥಾನದ ವಿವಿಧ ರಾಜಪ್ರಭುತ್ವದ ರಾಜ್ಯಗಳಾದ ಜೈಪುರ, ಉದಯಪುರ ಮತ್ತು ಕೋಟಾಗಳು ತಮ್ಮದೇ ಆದ ಹೈಕೋರ್ಟ್ ಗಳನ್ನು ಹೊಂದಿದ್ದು, ಅವುಗಳನ್ನು ರಾಜಸ್ಥಾನ ಹೈಕೋರ್ಟ್ ಅಸ್ತಿತ್ವಕ್ಕೆ ತರಲು ಸಂಯೋಜಿಸಲಾಗಿದೆ ಎಂದರು. "ರಾಷ್ಟ್ರೀಯ ಏಕತೆಯು ಭಾರತದ ನ್ಯಾಯಾಂಗ ವ್ಯವಸ್ಥೆಯ ಅಡಿಪಾಯವಾಗಿದೆ ಮತ್ತು ಅದನ್ನು ಬಲಪಡಿಸುವುದೆಂದರೆ  ರಾಷ್ಟ್ರ ಮತ್ತು ಅದರ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಿದಂತಾಗುತ್ತದೆ" ಎಂದು ಶ್ರೀ ಮೋದಿ ಹೇಳಿದರು.

ನ್ಯಾಯವು ಸರಳ ಮತ್ತು ಸ್ಪಷ್ಟವಾಗಿದೆ, ಆದರೆ ಕೆಲವೊಮ್ಮೆ ಕಾರ್ಯವಿಧಾನಗಳು ಅದನ್ನು ಸಂಕೀರ್ಣಗೊಳಿಸುತ್ತವೆ ಎಂದು ಪ್ರಧಾನಿ ಹೇಳಿದರು. ನ್ಯಾಯವನ್ನು ಸಾಧ್ಯವಾದಷ್ಟು ಸರಳ ಮತ್ತು ಸ್ಪಷ್ಟಗೊಳಿಸಲು ಎಲ್ಲ ಪ್ರಯತ್ನಗಳನ್ನು ಮಾಡುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಶ್ರೀ ಮೋದಿ ಹೇಳಿದರು. ಈ ದಿಕ್ಕಿನಲ್ಲಿ ಭಾರತವು ಅನೇಕ ಐತಿಹಾಸಿಕ ಮತ್ತು ನಿರ್ಣಾಯಕ ಪ್ರಯತ್ನಗಳನ್ನು ಕೈಗೊಂಡಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು. ಸರ್ಕಾರವು ಅನೇಕ ಅಪ್ರಸ್ತುತ ವಸಾಹತುಶಾಹಿ ಕಾನೂನುಗಳನ್ನು ರದ್ದುಗೊಳಿಸಿದೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಬಂದ  ದಶಕಗಳ ನಂತರ, ವಸಾಹತುಶಾಹಿ ಮನಸ್ಥಿತಿಯಿಂದ ಹೊರಬಂದ ಭಾರತವು ಭಾರತೀಯ ದಂಡ ಸಂಹಿತೆಯ ಬದಲಿಗೆ ಭಾರತೀಯ ನ್ಯಾಯ ಸಂಹಿತಾವನ್ನು ಅಳವಡಿಸಿಕೊಂಡಿದೆ ಎಂಬುದರತ್ತ ಶ್ರೀ ಮೋದಿ ಬೆಟ್ಟು ಮಾಡಿದರು. ಭಾರತೀಯ ನ್ಯಾಯ ಸಂಹಿತೆಯು 'ಶಿಕ್ಷೆಯ ಸ್ಥಾನದಲ್ಲಿ ನ್ಯಾಯ' ಎಂಬ ಆದರ್ಶಗಳನ್ನು ಆಧರಿಸಿದೆ, ಇದು ಭಾರತೀಯ ಚಿಂತನೆಯ ಮೂಲವಾಗಿದೆ ಎಂದು ಅವರು ಹೇಳಿದರು. ಭಾರತೀಯ ನ್ಯಾಯ ಸಂಹಿತೆಯು ಮಾನವ ಚಿಂತನೆಯನ್ನು ಮುನ್ನಡೆಸುತ್ತದೆ ಮತ್ತು ವಸಾಹತುಶಾಹಿ ಮನಸ್ಥಿತಿಯಿಂದ ನಮ್ಮನ್ನು ಮುಕ್ತಗೊಳಿಸುತ್ತದೆ ಎಂಬ ವಿಶ್ವಾಸವನ್ನು ಶ್ರೀ ಮೋದಿ ವ್ಯಕ್ತಪಡಿಸಿದರು. "ಭಾರತೀಯ ನ್ಯಾಯ ಸಂಹಿತಾದ ಸ್ಫೂರ್ತಿಯನ್ನು ಸಾಧ್ಯವಾದಷ್ಟು ಪರಿಣಾಮಕಾರಿಯಾಗಿ ಮಾಡುವುದು ಈಗ ನಮ್ಮ ಜವಾಬ್ದಾರಿಯಾಗಿದೆ" ಎಂದು ಅವರು ಹೇಳಿದರು.

 

ಕಳೆದ ದಶಕದಲ್ಲಿ ದೇಶವು ವೇಗವಾಗಿ ಪರಿವರ್ತನೆಗೊಂಡಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಭಾರತವು 10 ನೇ ಸ್ಥಾನದಿಂದ ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಗೆ ಏರಿರುವುದನ್ನು ಉಲ್ಲೇಖಿಸಿದರು. "ಇಂದು, ಭಾರತದ ಕನಸುಗಳು ದೊಡ್ಡದಾಗಿವೆ ಮತ್ತು ನಾಗರಿಕರ ಆಕಾಂಕ್ಷೆಗಳು ಹೆಚ್ಚಾಗಿವೆ" ಎಂದು ಪ್ರಧಾನಿ ಮೋದಿ ಹೇಳಿದರು. ನವ ಭಾರತದ ಅಗತ್ಯಗಳಿಗೆ ಅನುಗುಣವಾಗಿ ಹೊಸ ಆವಿಷ್ಕಾರಗಳು ಮತ್ತು ವ್ಯವಸ್ಥೆಗಳ ಆಧುನೀಕರಣದ ಅಗತ್ಯವನ್ನು ಅವರು ಒತ್ತಿ ಹೇಳಿದರು. 'ಎಲ್ಲರಿಗೂ ನ್ಯಾಯ' ಸಾಧನೆಯಾಗುವುದೂ   ಅಷ್ಟೇ ಮುಖ್ಯ ಎಂದು ಅವರು ಹೇಳಿದರು. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರುವಲ್ಲಿ ತಂತ್ರಜ್ಞಾನದ ಮಹತ್ವದ ಪಾತ್ರವನ್ನು ಪ್ರಧಾನಿ ಎತ್ತಿ ತೋರಿಸಿದರು ಮತ್ತು 'ಇ-ನ್ಯಾಯಾಲಯ' ಯೋಜನೆಯ ಉದಾಹರಣೆ ನೀಡಿದರು. ದೇಶದಲ್ಲಿ ಈವರೆಗೆ 18,000 ಕ್ಕೂ ಹೆಚ್ಚು ನ್ಯಾಯಾಲಯಗಳನ್ನು ಗಣಕೀಕರಣಗೊಳಿಸಲಾಗಿದೆ ಮತ್ತು 26 ಕೋಟಿಗೂ ಹೆಚ್ಚು ನ್ಯಾಯಾಲಯ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ ಮೂಲಕ ಕೇಂದ್ರೀಕೃತ ಆನ್ಲೈನ್ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. 3000 ಕ್ಕೂ ಹೆಚ್ಚು ನ್ಯಾಯಾಲಯ ಸಂಕೀರ್ಣಗಳು ಮತ್ತು 1200 ಕ್ಕೂ ಹೆಚ್ಚು ಜೈಲುಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯಗಳೊಂದಿಗೆ ಜೋಡಿಸಲಾಗಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ಕಾಗದರಹಿತ ನ್ಯಾಯಾಲಯಗಳು, ಇ-ಫೈಲಿಂಗ್, ಎಲೆಕ್ಟ್ರಾನಿಕ್ ಸಮನ್ಸ್ ಸೇವೆ ಮತ್ತು ವರ್ಚುವಲ್ ವಿಚಾರಣೆಯ ಸೌಲಭ್ಯಗಳಿಗೆ ಅನುವು ಮಾಡಿಕೊಡುವ ನೂರಾರು ನ್ಯಾಯಾಲಯಗಳನ್ನು ಗಣಕೀಕರಣಗೊಳಿಸಿರುವ ದಿಕ್ಕಿನಲ್ಲಿ ರಾಜಸ್ಥಾನ ಕೈಗೊಂಡ ಕೆಲಸದ ವೇಗದ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು. ಈ ಹಿಂದೆ ಅಸ್ತಿತ್ವದಲ್ಲಿದ್ದ ನ್ಯಾಯಾಲಯಗಳ ನಿಧಾನಗತಿಯ ಪ್ರಕ್ರಿಯೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಸಾಮಾನ್ಯ ನಾಗರಿಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ರಾಷ್ಟ್ರವು ಕೈಗೊಂಡ ಪರಿಣಾಮಕಾರಿ ಕ್ರಮಗಳು ಭಾರತದಲ್ಲಿ ನ್ಯಾಯಕ್ಕೆ ಹೊಸ ಭರವಸೆಯನ್ನು ನೀಡಿವೆ ಎಂದರು. ರಾಷ್ಟ್ರದ ನ್ಯಾಯಾಂಗ ವ್ಯವಸ್ಥೆಯನ್ನು ನಿರಂತರವಾಗಿ ಸುಧಾರಿಸುವ ಮೂಲಕ ಈ ಹೊಸ ಭರವಸೆಯನ್ನು ಉಳಿಸಿಕೊಳ್ಳುವಂತೆ ಪ್ರಧಾನಿ ಸಲಹೆ ಮಾಡಿದರು. 

ನಮ್ಮ ಮಧ್ಯಸ್ಥಿಕೆ ಪ್ರಕ್ರಿಯೆಯ ಶತಮಾನಗಳಷ್ಟು ಹಳೆಯ ವ್ಯವಸ್ಥೆಯನ್ನು ತಾವು ಈ ಹಿಂದೆ ಹಲವು ಸಂದರ್ಭಗಳಲ್ಲಿ ನಿರಂತರವಾಗಿ ಉಲ್ಲೇಖಿಸಿರುವುದಾಗಿ ಪ್ರಧಾನಿ ಹೇಳಿದರು. "ಪರ್ಯಾಯ ವಿವಾದ ಪರಿಹಾರ" ಕಾರ್ಯವಿಧಾನವು ಇಂದು ದೇಶದಲ್ಲಿ ಕಡಿಮೆ ವೆಚ್ಚದಾಯಕ ಮತ್ತು ತ್ವರಿತ ನಿರ್ಧಾರಗಳಿಗೆ ಪ್ರಮುಖ ಮಾರ್ಗವಾಗಿದೆ ಎಂದು ಅವರು ಒತ್ತಿ ಹೇಳಿದರು. ಪರ್ಯಾಯ ವಿವಾದ ಕಾರ್ಯವಿಧಾನದ ಈ ವ್ಯವಸ್ಥೆಯು ದೇಶದಲ್ಲಿ ಜೀವನವನ್ನು ಸುಲಭಗೊಳಿಸುತ್ತದೆ ಮತ್ತು ನ್ಯಾಯವನ್ನು ಸುಲಭಗೊಳಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಮತ್ತು ಹೊಸ ನಿಬಂಧನೆಗಳನ್ನು ಸೇರಿಸುವ ಮೂಲಕ ಸರ್ಕಾರ ಈ ದಿಕ್ಕಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ನ್ಯಾಯಾಂಗದ ಬೆಂಬಲದೊಂದಿಗೆ ಈ ವ್ಯವಸ್ಥೆಗಳು ಹೆಚ್ಚು ಸದೃಢವಾಗುತ್ತವೆ ಎಂಬ ಭರವಸೆಯನ್ನು ಶ್ರೀ ಮೋದಿ ವ್ಯಕ್ತಪಡಿಸಿದರು

 

"ನ್ಯಾಯಾಂಗವು ರಾಷ್ಟ್ರೀಯ ವಿಷಯಗಳ ಬಗ್ಗೆ ಜಾಗರೂಕವಾಗಿ ಎಚ್ಚರಿಕೆಯಿಂದ ಮತ್ತು ಸಕ್ರಿಯವಾಗಿ ಕಾರ್ಯನಿರ್ವಹಿಸುವ ನೈತಿಕ ಜವಾಬ್ದಾರಿಯನ್ನು ನಿರಂತರವಾಗಿ ಹೊತ್ತುಕೊಂಡು ನಿಭಾಯಿಸಿದೆ" ಎಂದು ಪ್ರಧಾನಿ ಹೇಳಿದರು. ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ರದ್ದುಪಡಿಸಿರುವುದು ಭಾರತದ ಏಕೀಕರಣಕ್ಕೆ ಪರಿಪೂರ್ಣ ಉದಾಹರಣೆಯಾಗಿದೆ ಎಂದು ಅವರು ಪ್ರತಿಪಾದಿಸಿದರು. ಸಿಎಎಯ ಮಾನವೀಯ ಕಾನೂನನ್ನು ಉಲ್ಲೇಖಿಸಿದ ಅವರು, ನ್ಯಾಯಾಲಯದ ನಿರ್ಧಾರಗಳು ನೈಸರ್ಗಿಕ ನ್ಯಾಯದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿವೆ ಎಂದು ಹೇಳಿದರು. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳು 'ರಾಷ್ಟ್ರ ಮೊದಲು' ಸಂಕಲ್ಪವನ್ನು ಬಲಪಡಿಸಿವೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಒತ್ತಿ ಹೇಳಿದರು. ಕೆಂಪು ಕೋಟೆಯಿಂದ ಮಾಡಿದ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಜಾತ್ಯತೀತ ನಾಗರಿಕ ಸಂಹಿತೆಯನ್ನು ಪ್ರಸ್ತಾಪಿಸಿದ  ಅವರು, ಪ್ರಸ್ತುತ ಸರ್ಕಾರ ಈಗ ಈ ವಿಷಯವನ್ನು ಎತ್ತಿದ್ದರೂ, ಭಾರತದ ನ್ಯಾಯಾಂಗವು ಸದಾ ಅದರ ಪರವಾಗಿ ವಾದಿಸಿದೆ ಎಂದು ಹೇಳಿದರು. ರಾಷ್ಟ್ರೀಯ ಏಕತೆಯ ವಿಷಯಗಳಲ್ಲಿ ನ್ಯಾಯಾಲಯದ ನಿಲುವು ನಾಗರಿಕರಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ ಎಂದು ಅವರು ನುಡಿದರು.

'ಏಕೀಕರಣ' ಎಂಬ ಪದವು 21 ನೇ ಶತಮಾನದ ಭಾರತದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಸಾರಿಗೆ ವಿಧಾನಗಳು, ಡೇಟಾ, ಆರೋಗ್ಯ ವ್ಯವಸ್ಥೆಯ ಏಕೀಕರಣ - ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿರುವ ದೇಶದ ಎಲ್ಲಾ ಐಟಿ ವ್ಯವಸ್ಥೆಗಳನ್ನು ಸಂಯೋಜಿಸಬೇಕು ಎಂಬುದು ನಮ್ಮ ಚಿಂತನೆ/ದೃಷ್ಟಿಕೋನವಾಗಿದೆ. ಪೊಲೀಸ್, ವಿಧಿವಿಜ್ಞಾನ, ಪ್ರಕ್ರಿಯೆ ಸೇವಾ ಕಾರ್ಯವಿಧಾನಗಳು,  ಭಾರತದ ಸರ್ವೋಚ್ಚ ನ್ಯಾಯಾಲಯದಿಂದ ಹಿಡಿದು ಜಿಲ್ಲಾ ನ್ಯಾಯಾಲಯಗಳವರೆಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು", ಎಂದು ಪ್ರಧಾನಿ ನುಡಿದರು. ಇಂದು ರಾಜಸ್ಥಾನದ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರಾರಂಭಿಸಲಾದ ಏಕೀಕರಣ ಯೋಜನೆಗೆ ಅವರು ಶುಭ ಹಾರೈಸಿದರು.

 

ಇಂದಿನ ಭಾರತದಲ್ಲಿ ಬಡವರ ಸಬಲೀಕರಣಕ್ಕಾಗಿ ತಂತ್ರಜ್ಞಾನದ ಬಳಕೆಯು ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ಸೂತ್ರವಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಕಳೆದ 10 ವರ್ಷಗಳಲ್ಲಿ ಭಾರತವು ಅನೇಕ ಜಾಗತಿಕ ಏಜೆನ್ಸಿಗಳು ಮತ್ತು ಸಂಸ್ಥೆಗಳಿಂದ ಪ್ರಶಂಸೆಯನ್ನು ಪಡೆದಿದೆ ಎಂದು ಅವರು ಹೇಳಿದರು. ಡಿಬಿಟಿಯಿಂದ ಯುಪಿಐವರೆಗೆ ಹಲವು ಕ್ಷೇತ್ರಗಳಲ್ಲಿ ಭಾರತ ಹೇಗೆ ಕಾರ್ಯನಿರ್ವಹಿಸುತ್ತಿದೆ ಮತ್ತು ಜಾಗತಿಕ ಮಾದರಿಯಾಗಿ ಹೊರಹೊಮ್ಮಿದೆ ಎಂಬುದನ್ನು ಶ್ರೀ ಮೋದಿ ಒತ್ತಿ ಹೇಳಿದರು. ಇದೇ ಅನುಭವವನ್ನು ನ್ಯಾಯಾಂಗ ವ್ಯವಸ್ಥೆಯಲ್ಲೂ ಜಾರಿಗೆ ತರಬೇಕು ಎಂದು ಅವರು ಸಲಹೆ ಮಾಡಿದರು. ಈ ದಿಕ್ಕಿನಲ್ಲಿ, ತಂತ್ರಜ್ಞಾನ ಮತ್ತು ಜನರಿಗೆ ತಮ್ಮದೇ ಆದ ಸ್ವಂತ ಭಾಷೆಯಲ್ಲಿ ಕಾನೂನು ದಾಖಲೆಗಳ ಲಭ್ಯತೆಯು ಬಡವರನ್ನು ಸಬಲೀಕರಣಗೊಳಿಸುವ ಅತ್ಯಂತ ಪರಿಣಾಮಕಾರಿ ಸಾಧನವಾಗಲಿದೆ ಎಂದು ಶ್ರೀ ಮೋದಿ ನುಡಿದರು. ಸರ್ಕಾರವು ದಿಶಾ ಎಂಬ ನವೀನ ಪರಿಹಾರವನ್ನು ಉತ್ತೇಜಿಸುತ್ತಿದೆ ಮತ್ತು ಈ ಅಭಿಯಾನದಲ್ಲಿ ಸಹಾಯ ಮಾಡಲು ಕಾನೂನು ವಿದ್ಯಾರ್ಥಿಗಳು ಮತ್ತು ಇತರ ಕಾನೂನು ತಜ್ಞರನ್ನು ಆಹ್ವಾನಿಸಿದೆ ಎಂದು ಅವರು ಹೇಳಿದರು. ಕಾನೂನು ದಾಖಲೆಗಳು ಮತ್ತು ತೀರ್ಪುಗಳನ್ನು ಸ್ಥಳೀಯ ಭಾಷೆಗಳಲ್ಲಿ ಜನರಿಗೆ ಲಭ್ಯವಾಗುವಂತೆ ಮಾಡುವ ಕೆಲಸ ಮಾಡಬೇಕಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ನ್ಯಾಯಾಂಗ ದಾಖಲೆಗಳನ್ನು 18 ಭಾಷೆಗಳಿಗೆ ಭಾಷಾಂತರಿಸಬಹುದಾದ ಸಾಫ್ಟ್ವೇರ್ ಸಹಾಯದಿಂದ ಭಾರತದ ಸುಪ್ರೀಂ ಕೋರ್ಟ್ ಈಗಾಗಲೇ ಇದನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ನ್ಯಾಯಾಂಗವು ಕೈಗೊಂಡಿರುವ ಎಲ್ಲ ವಿಶಿಷ್ಟ ಪ್ರಯತ್ನಗಳನ್ನು ಶ್ರೀ ಮೋದಿ ಶ್ಲಾಘಿಸಿದರು.

ನ್ಯಾಯದ ಸುಗಮ ವಿತರಣೆಗೆ  ನ್ಯಾಯಾಲಯಗಳು ಹೆಚ್ಚಿನ ಆದ್ಯತೆ ನೀಡುವುದನ್ನು ಮುಂದುವರಿಸುತ್ತವೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು. "ವಿಕಸಿತ ಭಾರತ ದಲ್ಲಿ ಪ್ರತಿಯೊಬ್ಬರಿಗೂ ಸರಳ, ಕೈಗೆಟಕುವ ಮತ್ತು ಸುಲಭ ನ್ಯಾಯವನ್ನು ಖಾತರಿಪಡಿಸುವುದು ಬಹಳ ಮುಖ್ಯ" ಎಂದು ಹೇಳಿ ಶ್ರೀ ಮೋದಿ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

ರಾಜಸ್ಥಾನದ ರಾಜ್ಯಪಾಲ ಶ್ರೀ ಹರಿಭಾವು ಬಗಾಡೆ, ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರಾದ (ಸ್ವತಂತ್ರ ಉಸ್ತುವಾರಿ), ಶ್ರೀ ಅರ್ಜುನ್ ರಾಮ್ ಮೇಘವಾಲ್, ಭಾರತದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi