ಬುಡಕಟ್ಟು ಸಮುದಾಯಗಳ ಅವಿಸ್ಮರಣೀಯ ವೀರರು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ, ಬಲಿದಾನಗೈದ ಹುತಾತ್ಮರಿಗೆ ಗೌರವ ನಮನ
" ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್‌ ಜನರ ಪಾಲಿನ ಮಂಗರವು ಪರಂಪರೆಯಾಗಿದೆ"
"ಗೋವಿಂದ ಗುರುಗಳಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಭಾರತದ ಸಂಪ್ರದಾಯ ಮತ್ತು ಆದರ್ಶಗಳ ಪ್ರತಿನಿಧಿಗಳಾಗಿದ್ದಾರೆ"
"ಬುಡಕಟ್ಟು ಸಮುದಾಯವಿಲ್ಲದೆ ಭಾರತದ ಭೂತಕಾಲ, ಇತಿಹಾಸ, ಪ್ರಸ್ತುತ ಮತ್ತು ಭವಿಷ್ಯವು ಎಂದಿಗೂ ಪೂರ್ಣವಾಗದು"
"ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳು ಮಂಗರ್‌ನ ಸಮಗ್ರ ಅಭಿವೃದ್ಧಿಯ ಮಾರ್ಗಸೂಚಿಗಾಗಿ ಒಟ್ಟಾಗಿ ಕೆಲಸ ಮಾಡುತ್ತವೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ‘ಮಂಗರ್ ಧಾಮ್ ಕಿ ಗೌರವ್ ಗಾಥಾ’ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬುಡಕಟ್ಟು ಸಮುದಾಯಗಳ ಬೆಳಕಿಗೆ ಬಾರದ ಅವಿಸ್ಮರಣೀಯ ವೀರರು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ, ಬಲಿದಾನಗೈದ ಹುತಾತ್ಮರಿಗೆ ಅವರು ಗೌರವ ನಮನ ಸಲ್ಲಿಸಿದರು. ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದ ಪ್ರಧಾನಿ ಅವರು ಧುನಿ ದರ್ಶನ ಪಡೆದು, ಗೋವಿಂದ ಗುರುಗಳ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ನಮ್ಮ ಬುಡಕಟ್ಟು ಸಮುದಾಯಗಳ ವೀರ ಹೃದಯಗಳ ತಪಸ್ಸು, ತ್ಯಾಗ, ಶೌರ್ಯ ಮತ್ತು ತ್ಯಾಗದ ಪ್ರತೀಕವಾಗಿರುವ ಪುಣ್ಯಭೂಮಿ ‘ಮಂಗರ್‌’ನಲ್ಲಿ ಇರುವುದು ಸದಾ ಸ್ಫೂರ್ತಿದಾಯಕವಾಗಿದೆ. "ಮಂಗ(ರ)ಢವು ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್‌ ಜನರ ಪಾಲಿನ ನಿಜವಾದ ಪರಂಪರೆಯಾಗಿದೆ" ಎಂದು ಅವರು ಹೇಳಿದರು. ಅಕ್ಟೋಬರ್ 30ರ ಪುಣ್ಯತಿಥಿ ಸ್ಮರಣಾರ್ಥ ಗೋವಿಂದ ಗುರುಗಳಿಗೆ ಪ್ರಧಾನಮಂತ್ರಿ ಅವರು ಶ್ರದ್ಧಾಂಜಲಿ ಸಲ್ಲಿಸಿದರು.

ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಗುಜರಾತಿನ ಭಾಗವಾಗಿರುವ ಮಂಗರ್ ಪ್ರದೇಶಕ್ಕೆ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದ ಮೋದಿ ಅವರು, ಗೋವಿಂದ ಗುರುಗಳು ತಮ್ಮ ಜೀವನದ ಕೊನೆಯ ವರ್ಷಗಳನ್ನು ಇಲ್ಲಿ ಕಳೆದಿದ್ದರು. ಅವರ ಶಕ್ತಿ ಮತ್ತು ಜ್ಞಾನವನ್ನು ಈ ನೆಲದ ಮಣ್ಣಿನಲ್ಲಿ ಇನ್ನೂ ಅನುಭವಿಸಬಹುದಾಗಿದೆ. ಹಸಿರು ಬೆಳೆಸುವಂತೆ ವನ ಮಹೋತ್ಸವ ವೇದಿಕೆಯ ಮೂಲಕ ಪ್ರತಿಯೊಬ್ಬರಿಗೆ ಕರೆ ನೀಡಿದ ನಂತರ, ಬರಡು ಭೂಮಿಯಾಗಿದ್ದ ಇಡೀ ಈ ಪ್ರದೇಶವು ಹಸಿರಿನಿಂದ ಕಂಗೊಳಿಸುತ್ತಿದೆ. ವನ ಮಹೋತ್ಸವ ಆಂದೋಲನದಲ್ಲಿ ನಿಸ್ವಾರ್ಥವಾಗಿ ದುಡಿಯುತ್ತಿರುವ ಬುಡಕಟ್ಟು ಸಮುದಾಯಕ್ಕೆ ಧನ್ಯವಾದಗಳು ಎಂದು  ಪ್ರಧಾನಮಂತ್ರಿ ತಿಳಿಸಿದರು.

ಈ ಅಭಿವೃದ್ಧಿಯು ಸ್ಥಳೀಯ ಜನರ ಜೀವನ ಗುಣಮಟ್ಟ ಸುಧಾರಿಸುವ ಜತೆಗೆ, ಗೋವಿಂದ ಗುರುಗಳ ಬೋಧನೆಗಳ ಪ್ರಚಾರಕ್ಕೂ ಕಾರಣವಾಯಿತು. ಗೋವಿಂದ ಗುರುಗಳಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಭಾರತದ ಸಂಪ್ರದಾಯ ಮತ್ತು ಆದರ್ಶಗಳ ಪ್ರತಿನಿಧಿಯಾಗಿದ್ದಾರೆ. ಗೋವಿಂದ ಗುರುಗಳು ತಮ್ಮ ಕುಟುಂಬವನ್ನು ಕಳೆದುಕೊಂಡರು, ಆದರೆ ಎಂದಿಗೂ ತಮ್ಮ ಹೃದಯವನ್ನು ಕಳೆದುಕೊಳ್ಳಲಿಲ್ಲ. ಆದರೆ ಪ್ರತಿ ಬುಡಕಟ್ಟು ವ್ಯಕ್ತಿಯನ್ನು ಅವರ ಕುಟುಂಬವನ್ನಾಗಿ ಮಾಡಿಕೊಂಡರು. ಗೋವಿಂದ ಗುರುಗಳು ಬುಡಕಟ್ಟು ಸಮುದಾಯದ ಹಕ್ಕುಗಳಿಗಾಗಿ ಬ್ರಿಟಿಷರ ವಿರುದ್ಧ ಹೋರಾಡುವ ಜತೆಗೆ, ಅವರು ಸಮಾಜ ಸುಧಾರಕರಾಗಿ, ಆಧ್ಯಾತ್ಮಿಕ ನಾಯಕರಾಗಿ, ಸಂತರಾಗಿ ತಮ್ಮದೇ ಸಮುದಾಯದ ಕೆಡುಕುಗಳು, ಅನಿಷ್ಟಗಳ ವಿರುದ್ಧವೂ ವ್ಯಾಪಕ ಪ್ರಚಾರ ಮಾಡಿದರು. ಅವರ ಬೌದ್ಧಿಕ ಮತ್ತು ತಾತ್ವಿಕ ವಿಚಾರಧಾರೆಗಳು ಅವರ ಧೈರ್ಯ ಮತ್ತು ಸಾಮಾಜಿಕ ಕ್ರಿಯಾಶೀಲತೆಯಷ್ಟೇ ರೋಮಾಂಚಕವಾಗಿವೆ ಎಂದು ಪ್ರಧಾನಿ ಹೇಳಿದರು.

1913 ನವೆಂಬರ್ 17ರಂದು ಮಂಗರ್‌ನಲ್ಲಿ ನಡೆದ ಹತ್ಯಾಕಾಂಡ ನೆನಪಿಸಿದ ಪ್ರಧಾನಿ, ಇದು ಭಾರತದಲ್ಲಿ ಬ್ರಿಟಿಷರ ಆಡಳಿತದ ಅತ್ಯಂತ ಕ್ರೌರ್ಯದ ನಡವಳಿಕೆಗಳಿಗೆ ಉದಾಹರಣೆಯಾಗಿದೆ. ಒಂದೆಡೆ ನಮ್ಮಲ್ಲಿ ಸ್ವಾತಂತ್ರ್ಯ ಬಯಸುತ್ತಿದ್ದ ಅಮಾಯಕ ಆದಿವಾಸಿಗಳಿದ್ದರೆ, ಮತ್ತೊಂದೆಡೆ ಬ್ರಿಟಿಷ್ ವಸಾಹತುಶಾಹಿ ದೊರೆಗಳು ಹಗಲಿನಲ್ಲಿ ಮಂಗರ್ ಬೆಟ್ಟಗಳನ್ನು ಸುತ್ತುವರೆದು ಸುಮಾರು 1,500ಕ್ಕೂ ಹೆಚ್ಚು ಮುಗ್ಧ ಪುರುಷರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಕೊಂದರು. ದುರದೃಷ್ಟಕರ ವಿಷಯವೇನೆಂದರೆ, ಸ್ವಾತಂತ್ರ್ಯ ಹೋರಾಟದ ಇಂತಹ ಮಹತ್ವದ ಮತ್ತು ಪ್ರಭಾವಶಾಲಿ ಘಟನೆಯು ಇತಿಹಾಸದ ಪುಸ್ತಕಗಳಲ್ಲಿ ಸ್ಥಾನ ಪಡೆಯಲಿಲ್ಲ. “ಈ ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಭಾರತವು ಈ ಶೂನ್ಯವನ್ನು ತುಂಬುತ್ತಿದೆ, ದಶಕಗಳ ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸುತ್ತಿದೆ” ಎಂದು ಪ್ರಧಾನಿ ತಿಳಿಸಿದರು.

ಬುಡಕಟ್ಟು ಸಮುದಾಯವಿಲ್ಲದೆ ಭಾರತದ ಭೂತಕಾಲ, ಇತಿಹಾಸ, ವರ್ತಮಾನ ಮತ್ತು ಭವಿಷ್ಯವು ಎಂದಿಗೂ ಪೂರ್ಣವಾಗುವುದಿಲ್ಲ. ನಮ್ಮ ಸ್ವಾತಂತ್ರ್ಯ ಹೋರಾಟ ಕಥೆಯ ಪ್ರತಿಯೊಂದು ಪುಟವು ಬುಡಕಟ್ಟು ಸಮುದಾಯಗಳ ಅಪಾರ ಶೌರ್ಯ, ತ್ಯಾಗ, ಬಲಿದಾನದಿಂದ ತುಂಬಿದೆ. 1780ರ ದಶಕದಷ್ಟು ಹಿಂದೆಯೇ ತಿಲ್ಕಾ ಮಾಂಝಿ ನೇತೃತ್ವದಲ್ಲಿ ಸಂತಾಲ್ ಸಂಗ್ರಾಮ್ ಸೆಣಸಿದ ಅದ್ಭುತ ಹೋರಾಟಗಳನ್ನು ಪ್ರಧಾನಿ ನೆನಪಿಸಿಕೊಂಡರು. 1830-32ರಲ್ಲಿ ಬುಧು ಭಗತ್ ನೇತೃತ್ವದಲ್ಲಿ ದೇಶದಲ್ಲಿ ಲಾರ್ಕಾ ಆಂದೋಲನ ನಡೆದದ್ದನ್ನು ಪ್ರಧಾನಿ ಉಲ್ಲೇಖಿಸಿದರು. 1855ರಲ್ಲಿ ಸಿಧು-ಕನ್ಹು ಅವರು ನಡೆಸಿದ ಕ್ರಾಂತಿ ರಾಷ್ಟ್ರಕ್ಕೆ ಶಕ್ತಿ ತುಂಬಿತು. ಭಗವಾನ್ ಬಿರ್ಸಾ ಮುಂಡಾ ಅವರು ತಮ್ಮ ಶಕ್ತಿ, ಚೈತನ್ಯ ಮತ್ತು ದೇಶಭಕ್ತಿಯಿಂದ ಎಲ್ಲರಿಗೂ ಸ್ಫೂರ್ತಿ ನೀಡಿದರು. ಶತಮಾನಗಳ ಹಿಂದಿನ ಗುಲಾಮಗಿರಿಯ ಆರಂಭದಿಂದ ಪ್ರಾರಂಭವಾದ 20ನೇ ಶತಮಾನದವರೆಗೆ ಆಜಾದಿಯ ಜ್ವಾಲೆ ಉರಿಯಲು ಬುಡಕಟ್ಟು ಸಮುದಾಯವು ಅಪಾರ ಕೊಡುಗೆ ನೀಡಿತು. ಆಂಧ್ರ ಪ್ರದೇಶದಲ್ಲಿ ಅಲ್ಲೂರಿ ಸೀತಾರಾಮ ರಾಜು ಅವರ ಸ್ವಾತಂತ್ರ್ಯ ಹೋರಾಟವನ್ನು ಪ್ರಧಾನಿ ಪ್ರಸ್ತಾಪಿಸಿದರು. ರಾಜಸ್ಥಾನದಲ್ಲಿ ಅದಕ್ಕೂ ಮುನ್ನವೇ ಆದಿವಾಸಿ ಸಮುದಾಯವು ಮಹಾರಾಣಾ ಪ್ರತಾಪನೊಂದಿಗೆ ಹೋರಾಟಕ್ಕೆ ನಿಂತಿತ್ತು. ಹಾಗಾಗಿ, ನಾವು ಬುಡಕಟ್ಟು ಸಮುದಾಯಕ್ಕೆ ಮತ್ತು ಅವರ ತ್ಯಾಗಕ್ಕೆ ಋಣಿಯಾಗಿದ್ದೇವೆ. ಈ ಸಮುದಾಯವು ಪ್ರಕೃತಿ, ಪರಿಸರ, ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ಭಾರತದ ಘನತೆ, ಗೌರವವನ್ನು ಸಂರಕ್ಷಿಸಿದೆ. ಈ ಸಮುದಾಯಕ್ಕೆ ಸೇವೆ ಸಲ್ಲಿಸುವ ಮೂಲಕ ಅವರಿಗೆ ಧನ್ಯವಾದ ಸಲ್ಲಿಸುವ ಸಮಯ ಇಂದು ಬಂದಿದೆ”, ಎಂದು ಪ್ರಧಾನಮಂತ್ರಿ ಹೇಳಿದರು.

ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನ ನವೆಂಬರ್ 15ರಂದು ದೇಶವು ಜನಜಾತಿಯ ಗೌರವ್ ದಿವಸ್ ಆಚರಿಸಲಿದೆ. ಜನಜಾತಿಯ ಗೌರವ್ ದಿವಸ್ ಕಾರ್ಯಕ್ರಮವು ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಜನಾಂಗದ ಇತಿಹಾಸದ ಬಗ್ಗೆ ಜನಸಾಮಾನ್ಯರಿಗೆ ಶಿಕ್ಷಣ ನೀಡುವ ಪ್ರಯತ್ನವಾಗಿದ. ಬುಡಕಟ್ಟು ಸಮಾಜದ ಇತಿಹಾಸವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ಉದ್ದೇಶದಿಂದ ಬುಡಕಟ್ಟು ಸಮುದಾಯದ ಸ್ವಾತಂತ್ರ್ಯ ಹೋರಾಟಗಾರರಿಗೆ ಮೀಸಲಾಗಿರುವ ವಿಶೇಷ ವಸ್ತುಸಂಗ್ರಹಾಲಯಗಳನ್ನು ದೇಶಾದ್ಯಂತ ನಿರ್ಮಿಸಲಾಗುತ್ತಿದೆ. ಈ ಭವ್ಯ ಪರಂಪರೆಯು ಈಗ ಚಿಂತನಾ ಪ್ರಕ್ರಿಯೆಯ ಭಾಗವಾಗಲಿದೆ ಮತ್ತು ಯುವ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ದೇಶದಲ್ಲಿ ಬುಡಕಟ್ಟು ಸಮಾಜದ ಪಾತ್ರವನ್ನು ವಿಸ್ತರಿಸಲು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುವ ಅಗತ್ಯವಿದೆ. ರಾಜಸ್ಥಾನ ಮತ್ತು ಗುಜರಾತ್‌ನಿಂದ ಈಶಾನ್ಯ ಮತ್ತು ಒಡಿಶಾದವರೆಗೆ ದೇಶದ ಎಲ್ಲಾ ಭಾಗಗಳಲ್ಲಿರುವ ವೈವಿಧ್ಯಮಯ ಬುಡಕಟ್ಟು ಸಮಾಜಕ್ಕೆ ಸೇವೆ ಸಲ್ಲಿಸಲು ದೇಶವು ಸ್ಪಷ್ಟ ನೀತಿಗಳೊಂದಿಗೆ ಕೆಲಸ ಮಾಡುತ್ತಿದೆ. ವನಬಂಧು ಕಲ್ಯಾಣ ಯೋಜನೆಯ ಮೂಲಕ ಬುಡಕಟ್ಟು ಜನರಿಗೆ ನೀರು ಮತ್ತು ವಿದ್ಯುತ್ ಸಂಪರ್ಕಗಳು, ಶಿಕ್ಷಣ, ಆರೋಗ್ಯ ಸೇವೆಗಳು ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಲಾಗುತ್ತಿದೆ ಎಂದು ಪ್ರಧಾನ ಮಂತ್ರಿ ತಿಳಿಸಿದರು. ಇಂದು ದೇಶದಲ್ಲಿ ಅರಣ್ಯ ಪ್ರದೇಶವು ಹೆಚ್ಚಾಗುತ್ತಿದೆ, ಅರಣ್ಯ ಸಂಪನ್ಮೂಲಗಳನ್ನು ರಕ್ಷಿಸಲಾಗುತ್ತಿದೆ. ಅದೇ ಸಮಯದಲ್ಲಿ, ಬುಡಕಟ್ಟು ಪ್ರದೇಶಗಳನ್ನು ಡಿಜಿಟಲ್ ಇಂಡಿಯಾದೊಂದಿಗೆ ಸಂಪರ್ಕಿಸಲಾಗುತ್ತಿದೆ. ಸಾಂಪ್ರದಾಯಿಕ ಕೌಶಲಗಳ ಜತೆಗೆ ಬುಡಕಟ್ಟು ಯುವಕರಿಗೆ ಆಧುನಿಕ ಶಿಕ್ಷಣದ ಅವಕಾಶಗಳನ್ನು ಒದಗಿಸುವ ಏಕಲವ್ಯ ವಸತಿ ಶಾಲೆಗಳ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು. ಗೋವಿಂದ ಗುರು ಜಿ ಅವರ ಹೆಸರಿನ ವಿಶ್ವವಿದ್ಯಾಲಯದ ಭವ್ಯವಾದ, ಸುಸಜ್ಜಿತವಾದ ಆಡಳಿತ ಕ್ಯಾಂಪಸ್ ಉದ್ಘಾಟಿಸಲು ಜಂಬೂಗೋಡಕ್ಕೆ ಹೋಗುತ್ತಿರುವೆ ಎಂದು ಪ್ರಧಾನಿ ತಿಳಿಸಿದರು.

ಕಳೆದ ಸಂಜೆಯಷ್ಟೇ ಅಹಮದಾಬಾದ್-ಉದಯಪುರ ಬ್ರಾಡ್ ಗೇಜ್ ಮಾರ್ಗದ ರೈಲಿಗೆ ಹಸಿರುನಿಶಾನೆ ತೋರಲಾಗಿದೆ. ರಾಜಸ್ಥಾನದ ಜನರಿಗೆ 300 ಕಿಮೀ ಮಾರ್ಗದ ಈ ರೈಲು ಯೋಜನೆಯಿಂದ ಅನೇಕ ಅನುಕೂಲಗಳು ಸಿಗಲಿವೆ. ಏಕೆಂದರೆ ಇದು ಗುಜರಾತ್‌ನ ಅನೇಕ ಬುಡಕಟ್ಟು ಪ್ರದೇಶಗಳನ್ನು ರಾಜಸ್ಥಾನದ ಬುಡಕಟ್ಟು ಪ್ರದೇಶಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಪ್ರದೇಶಗಳಲ್ಲಿ ಕೈಗಾರಿಕಾ ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಉತ್ತೇಜನ ಸಿಗುತ್ತದೆ. ಮಂಗರ್ ಧಾಮದ ಸಮಗ್ರ ಅಭಿವೃದ್ಧಿಯ ಕುರಿತ ಚರ್ಚೆಯ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ಮಂಗರ್ ಧಾಮದ ಸಮಗ್ರ ಅಭಿವೃದ್ಧಿ ವಿಸ್ತರಣೆ ಇಂದಿನ ಅಗತ್ಯವಾಗಿದೆ. ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ 4 ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಲು ಮತ್ತು ಗೋವಿಂದ್ ಗುರು ಜಿ ಅವರ ಈ ಸ್ಮಾರಕ ಸ್ಥಳವು ವಿಶ್ವ ಭೂಪಟದಲ್ಲಿ ಸ್ಥಾನ ಪಡೆಯುವಂತೆ ಮಾರ್ಗಸೂಚಿ ಸಿದ್ಧಪಡಿಸುವ ಬಗ್ಗೆ ವಿವರವಾದ ಚರ್ಚೆ ನಡೆಸುವಂತೆ ಪ್ರಧಾನಿ ಮನವಿ ಮಾಡಿದರು. ಮಂಗರ್ ಧಾಮದ ಅಭಿವೃದ್ಧಿಯು ಈ ಪ್ರದೇಶವನ್ನು ಹೊಸ ಪೀಳಿಗೆಗೆ ಸ್ಫೂರ್ತಿಯ ತಾಣವನ್ನಾಗಿ ಮಾಡುತ್ತದೆ ಎಂಬುದು ನನಗೆ ಖಾತ್ರಿಯಿದೆ ಎಂದು ಮೋದಿ ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಅಶೋಕ್ ಗೆಹ್ಲೋಟ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶದ ರಾಜ್ಯಪಾಲರಾದ ಶ್ರೀ ಮಂಗುಭಾಯ್ ಪಟೇಲ್, ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವ ಶ್ರೀ ಅರ್ಜುನ್ ರಾಮ್ ಮೇಘವಾಲ್, ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಶ್ರೀ ಫಗ್ಗನ್ ಸಿಂಗ್ ಕುಲಸ್ತೆ, ಸಂಸದರು, ಶಾಸಕರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ
ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಬುಡಕಟ್ಟು ಸಮುದಾಯಗಳ ಅವಿಸ್ಮರಣೀಯ ವೀರರನ್ನು ಸ್ಮರಿಸಲು, ಅವರ ತ್ಯಾಗ, ಬಲಿದಾನಗಳನ್ನು ಜನರಿಗೆ ಮುಟ್ಟಿಸಲು ಸರ್ಕಾರವು ಹಲವಾರು ಕ್ರಮಗಳನ್ನು ಪ್ರಾರಂಭಿಸಿದೆ. ಇವುಗಳಲ್ಲಿ 15ನೇ ನವೆಂಬರ್ (ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮದಿನ) ಅನ್ನು 'ಜಂಜಾಟಿಯ ಗೌರವ್ ದಿವಸ್' ಆಚರಣೆ ಘೋಷಿಸಲಾಗಿದೆ. ಬುಡಕಟ್ಟು ಜನರು ನಮ್ಮ ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಗುರುತಿಸಲು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಅವರ ತ್ಯಾಗದ ಬಗ್ಗೆ ಜಾಗೃತಿ ಮೂಡಿಸಲು ದೇಶದಾದ್ಯಂತ ಬುಡಕಟ್ಟು ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಈ ದಿಸೆಯಲ್ಲಿ ಮತ್ತೊಂದು ಹೆಜ್ಜೆಯಾಗಿ, ಪ್ರಧಾನ ಮಂತ್ರಿ ಅವರು ರಾಜಸ್ಥಾನದ ಬನ್ಸ್ವಾರಾದ ಮಂಗರ್ ಹಿಲ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು - 'ಮಂಗರ್ ಧಾಮ್ ಕಿ ಗೌರವ್ ಗಾಥಾ', ಬುಡಕಟ್ಟು ಸಮುದಾಯಗಳ ವೀರರು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ, ಬಲಿದಾನಗೈದ  ಹುತಾತ್ಮರಿಗೆ ಅವರು ಗೌರವ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಭಿಲ್ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಗೋವಿಂದ್ ಗುರುಗಳಿಗೆ ಪುಷ್ಪನಮನ ಸಲ್ಲಿಸಿದರು. ನಂತರ ಅವರು  ಭಿಲ್ ಆದಿವಾಸಿಗಳು ಮತ್ತು ಈ ಪ್ರದೇಶದ ಇತರ ಬುಡಕಟ್ಟು ಜನರನ್ನು ಉದ್ದೇಶಿಸಿ ಭಾಷಣ ಮಾಡಿದರು.

ರಾಜಸ್ಥಾನ, ಗುಜರಾತ್ ಮತ್ತು ಮಧ್ಯಪ್ರದೇಶದ ಭಿಲ್ ಸಮುದಾಯ ಮತ್ತು ಇತರ ಬುಡಕಟ್ಟುಗಳಿಗೆ ಮಂಗರ್ ಬೆಟ್ಟವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಿಲ್‌ಗಳು ಮತ್ತು ಇತರ ಬುಡಕಟ್ಟು ಜನಾಂಗದವರು ಬ್ರಿಟಿಷರೊಂದಿಗೆ ಸುದೀರ್ಘ ಹೋರಾಟದಲ್ಲಿ ತೊಡಗಿದ್ದರು, 1913 ರ ನವೆಂಬರ್ 17 ರಂದು ಶ್ರೀ ಗೋವಿಂದ್ ಗುರುಗಳ ನೇತೃತ್ವದಲ್ಲಿ 1.5 ಲಕ್ಷಕ್ಕೂ ಹೆಚ್ಚು ಭಿಲ್‌ಗಳು ಮಂಗರ್ ಹಿಲ್‌ನಲ್ಲಿ ರ‍್ಯಾಲಿ ನಡೆಸಿದರು. ಬ್ರಿಟಿಷರು ಈ ಸಭೆಯ ಮೇಲೆ ಗುಂಡು ಹಾರಿಸಿದರು, ಇದು ಮಂಗರ್ ಹತ್ಯಾಕಾಂಡಕ್ಕೆ ಕಾರಣವಾಯಿತು, ಅಲ್ಲಿ ಸುಮಾರು 1500 ಬುಡಕಟ್ಟು ಜನರು ಹುತಾತ್ಮರಾದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ನವೆಂಬರ್ 2024
November 21, 2024

PM Modi's International Accolades: A Reflection of India's Growing Influence on the World Stage