ಡಿಜಿಟಲ್ ಸುಪ್ರೀಂಕೋರ್ಟ್ ವರದಿಗಳು, ಡಿಜಿಟಲ್ ಕೋರ್ಟ್ಸ್ 2.0 ಮತ್ತು ಸುಪ್ರೀಂಕೋರ್ಟ್ ನ ನೂತನ ವೆಬ್ ಸೈಟ್ ಸೇರಿ ಹಲವು ತಾಂತ್ರಿಕ ಉಪಕ್ರಮಗಳಿಗೆ ಚಾಲನೆ
“ಸುಪ್ರೀಂಕೋರ್ಟ್ ಭಾರತದ ಸಕ್ರಿಯ ಪ್ರಜಾಪ್ರಭುತ್ವವನ್ನು ಬಲವರ್ಧನೆಗೊಳಿಸಿದೆ”
“ಇಂದಿನ ಆರ್ಥಿಕ ನೀತಿಗಳು ನಾಳಿನ ಉಜ್ವಲ ಭಾರತಕ್ಕೆ ಬುನಾದಿ”
“ಭಾರತದಲ್ಲಿ ಇಂದು ರೂಪಿಸುವ ಕಾನೂನುಗಳು ಭವಿಷ್ಯದಲ್ಲಿ ಉಜ್ವಲ ಭಾರತವನ್ನು ಮತ್ತಷ್ಟು ಬಲವರ್ಧನೆಗೊಳಿಸಲಿವೆ”
“ಸುಲಭ ನ್ಯಾಯ, ಪ್ರತಿಯೊಬ್ಬ ಭಾರತೀಯ ಪ್ರಜೆಯ ಹಕ್ಕಾಗಿದೆ ಮತ್ತು ಭಾರತದ ಸರ್ವೋನ್ನತ ನ್ಯಾಯಾಲಯ ಅದರ ಮಾಧ್ಯಮವಾಗಿದೆ”
“ದೇಶದಲ್ಲಿ ಸುಲಭ ನ್ಯಾಯಕ್ಕಾಗಿ ಸಾಕಷ್ಟು ಸುಧಾರಣೆಗಳನ್ನು ಕೈಗೊಂಡಿರುವ ಮುಖ್ಯ ನ್ಯಾಯಮೂರ್ತಿಗಳ ಪ್ರಯತ್ನಗಳಿಗೆ ನನ್ನ ಅಭಿನಂದನೆಗಳು”
“ದೇಶದ ನ್ಯಾಯಾಲಯಗಳ ಭೌತಿಕ ಮೂಲಸೌಕರ್ಯಕ್ಕಾಗಿ 2014ರ ನಂತರ 7000 ಕೋಟಿ ರೂ. ವಿನಿಯೋಗ”
“ಸುಪ್ರೀಂಕೋರ್ಟ್ ಕಟ್ಟಡ ಸಂಕೀರ್ಣದ ವಿಸ್ತರಣೆಗಾಗಿ ಕಳೆದ ವಾರ 800 ಕೋಟಿ ರೂ. ಅನುಮೋದನೆ”
“ವಿಕಸಿತ ಭಾರತಕ್ಕೆ ಬಲಿಷ್ಠ ನ್ಯಾಯಾಂಗ ವ್ಯವಸ್ಥೆ ಮುಖ್ಯ ಬುನಾದಿ”
“ಇ-ಕೋರ್ಟ್ಸ್ ಮಿಷನ್ ಯೋಜನೆಯ ಎರಡನೇ ಹಂತಕ್ಕೆ ಹೋಲಿಸಿದರೆ, ಮೂರನೇ ಹಂತಕ್ಕೆ ನಾಲ್ಕು ಪಟ್ಟು ಹೆಚ್ಚು ನಿಧಿ ನಿಗದಿ”
“ಸದ್ಯದ ಪರಿಸ್ಥಿತಿ ಮತ್ತು ಉತ್ತಮ ಪದ್ಧತಿಗಳಿಗೆ ಅನುಗುಣವಾಗಿ ಕಾನೂನುಗಳನ್ನು ಆಧುನೀಕರಣಗೊಳಿಸುವ ಕಾರ್ಯದಲ್ಲಿ ಸರ್ಕಾರ ಸಕ್ರಿಯವಾಗಿದೆ”
“ಹಳೆಯ ಕಾನೂನುಗಳಿಂದ ಹೊಸ ಕಾನೂನುಗಳಿಗೆ ಪರಿವರ್ತನೆ ಯಾವುದೇ ಅಡತಡೆ ಇಲ್ಲದೆ ಸಾಗಬೇಕು”
“ನ್ಯಾಯಮೂರ್ತಿ ಫಾತಿಮಾ ಬೀವಿ ಅವರಿಗೆ ಪದ್ಮ ಗೌರವ, ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ”

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದೆಹಲಿಯ ಸುಪ್ರೀಂಕೋರ್ಟ್  ಸಭಾಂಗಣದಲ್ಲಿ ಜನವರಿ 28ರಂದು ಭಾರತದ ಸರ್ವೋನ್ನತ ನ್ಯಾಯಾಲಯದ ವಜ್ರಮಹೋತ್ಸವ ಆಚರಣೆಯನ್ನು ಉದ್ಘಾಟಿಸಿದರು. ಅಲ್ಲದೆ ನಾಗರಿಕ ಕೇಂದ್ರಿತ ಮಾಹಿತಿ ವ್ಯವಸ್ಥೆ ಮತ್ತು ಡಿಜಿಟಲ್ ಸುಪ್ರೀಂಕೋರ್ಟ್ ರಿಪೋರ್ಟ್ಸ್ (ಡಿಜಿ ಎಸ್ ಸಿಆರ್), ಡಿಜಿಟಲ್ ಕೋರ್ಟ್ಸ್ 2.0 ಮತ್ತು ಸುಪ್ರೀಂಕೋರ್ಟ್ ನ ಹೊಸ ವೆಬ್ ಸೈಟ್ ಸೇರಿ ಹಲವು ತಾಂತ್ರಿಕ ಉಪಕ್ರಮಗಳಿಗೆ ಚಾಲನೆ ನೀಡಿದರು.

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಪ್ರತಿಯೊಬ್ಬರನ್ನೂ ಅಭಿನಂದಿಸಿದರು ಮತ್ತು ಇಂದು ಸರ್ವೋನ್ನತ ನ್ಯಾಯಾಲಯದ 75ನೇ ವರ್ಷಾಚಾರಣೆ ಆರಂಭವಾಗುತ್ತಿರುವ ಸಂದರ್ಭದಲ್ಲಿ ಉಪಸ್ಥಿತರಿರುವ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು ಹಾಗೂ ಎರಡು ದಿನಗಳ ಹಿಂದಷ್ಟೇ ಭಾರತದ ಸಂವಿಧಾನ ಕೂಡ 75ನೇ ವರ್ಷ ಆಚರಿಸಿಕೊಂಡಿತು ಎಂದು ಉಲ್ಲೇಖಿಸಿದರು.

 

ಭಾರತದ ಸಂವಿಧಾನ ನಿರ್ಮಾತೃಗಳು ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯವನ್ನು ಆಧರಿಸಿದ ಸ್ವತಂತ್ರ ಭಾರತದ ಕನಸು ಕಂಡಿದ್ದರು ಮತ್ತು ಸುಪ್ರೀಂಕೋರ್ಟ್ ಈ ತತ್ವಗಳನ್ನು ನಿರಂತರವಾಗಿ ಕಾಯ್ದುಕೊಂಡು ಬರುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ಅದು ಅಭಿವ್ಯಕ್ತಿ ಸ್ವಾತಂತ್ರ್ಯವಾಗಿರಬಹುದು, ವೈಯಕ್ತಿಕ ಸ್ವಾತಂತ್ರ್ಯ ಅಥವಾ ಸಾಮಾಜಿಕ ನ್ಯಾಯವಾಗಿರಬಹುದು. ಭಾರತದ ಸುಪ್ರೀಂಕೋರ್ಟ್ ದೇಶದ ಸಕ್ರಿಯ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲವರ್ಧನೆಗೊಳಿಸಿದೆ” ಎಂದು ಪ್ರಧಾನಮಂತ್ರಿ ಹೇಳಿದರು. ವೈಯಕ್ತಿಕ ಹಕ್ಕುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ತೀರ್ಪುಗಳು ಬಂದಿವೆ. ಅವು ರಾಷ್ಟ್ರದ ಸಾಮಾಜಿಕ, ಆರ್ಥಿಕ ಪರಿಸರಕ್ಕೆ ಹೊಸ ಆಯಾಮವನ್ನು ನೀಡಿವೆ ಎಂದು ಪ್ರಧಾನಮಂತ್ರಿ ಹೇಳಿದರು.

ಸರ್ಕಾರದ ಪ್ರತಿಯೊಂದು ಅಂಗಕ್ಕೂ ಮುಂದಿನ 25 ವರ್ಷಗಳ ಮಾನದಂಡಗಳ ಗುರಿಗಳನ್ನು ನೀಡಲಾಗಿದೆ ಎಂದು ಪುನರುಚ್ಛರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಇಂದಿನ ಆರ್ಥಿಕ ನೀತಿಗಳು, ನಾಳಿನ ಸದೃಢ ಭಾರತಕ್ಕೆ ಬುನಾದಿಯಾಗಲಿವೆ ಎಂದರು. “ಇಂದು ರೂಪಿಸುವ ಶಾಸನಗಳು ಭಾರತದ ಭವಿಷ್ಯ ಉಜ್ವಲವಾಗುವುದನ್ನು ಬಲವರ್ಧನೆಗೊಳಿಸಲಿವೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

 

ಜಾಗತಿಕ ಭೌಗೋಳಿಕ – ರಾಜಕೀಯ ಆಯಾಮಗಳು ಬದಲಾಗುತ್ತಿರುವುದರ ನಡುವೆಯೇ  ಪ್ರಧಾನಮಂತ್ರಿ ಅವರು ಇಡೀ ವಿಶ್ವದ ಕಣ್ಣು ಭಾರತದ ಮೇಲೆ ಬಿದ್ದಿದೆ ಮತ್ತು ವಿಶ್ವದ ವಿಶ್ವಾಸ ನಿರಂತರವಾಗಿ ಹೆಚ್ಚುತ್ತಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ನಮ್ಮ ಹಾದಿಯಲ್ಲಿ ಬರುವ ಎಲ್ಲ ಅವಕಾಶಗಳನ್ನು ನಾವು ಬಂಡವಾಳವನ್ನಾಗಿ ಮಾಡಿಕೊಳ್ಳುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು ಹಾಗೂ ಸುಲಭ ಜೀವನೋಪಾಯ, ಸುಲಭವಾಗಿ ವ್ಯಾಪಾರ ಮಾಡುವುದು, ಪ್ರಯಾಣ, ಸಂವಹನ ಮತ್ತು ಸುಲಭ ನ್ಯಾಯ ರಾಷ್ಟ್ರದ ಅಗ್ರ ಆದ್ಯತೆಗಳಾಗಿವೆ ಎಂದು ಹೇಳಿದರು. “ಸುಲಭ ನ್ಯಾಯ ಪ್ರತಿಯೊಬ್ಬ ಭಾರತೀಯ ಪ್ರಜೆಯ ಹಕ್ಕಾಗಿದೆ ಮತ್ತು ಅದನ್ನು ಭಾರತ ಸರ್ವೋನ್ನತ ನ್ಯಾಯಾಲಯ ಪೂರೈಸುವ ಒಂದು ಮಾಧ್ಯಮವಾಗಿದೆ’’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದರು. 

ಇಡೀ ದೇಶದ ನ್ಯಾಯಾಂಗ ವ್ಯವಸ್ಥೆಯ ಆಡಳಿತವನ್ನು ನಿರ್ವಹಣೆ ಮಾಡುವ ಜತೆಗೆ ಮಾರ್ಗದರ್ಶನ ನೀಡುವ ಹೊಣೆಯನ್ನು ಭಾರತದ ಸುಪ್ರೀಂಕೋರ್ಟ್ ಹೊಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸುಪ್ರೀಂಕೋರ್ಟ್ ಕೂಡ ದೇಶದ ದೂರದ ಭಾಗಗಳ ಜನರಿಗೂ ಲಭ್ಯವಾಗುವಂತೆ ಮಾಡಬೇಕು ಮತ್ತು ಇ-ಕೋರ್ಟ್ಸ್ ಮಿಷನ್ ಯೋಜನೆಯ ಮೂರನೇ ಹಂತಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಅವರು ಉಲ್ಲೇಖಿಸಿದರು. ಅನುದಾನ ಹಂಚಿಕ ಎರಡನೇ ಹಂತಕ್ಕೆ ಹೋಲಿಸಿದರೆ, ಮೂರನೇ ಹಂತಕ್ಕೆ 4 ಪಟ್ಟು ಹೆಚ್ಚಳ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದೇಶದ ಎಲ್ಲ ನ್ಯಾಯಾಲಯಗಳ ಡಿಜಿಟಲೀಕಣ ಕಾರ್ಯದ ಮೇಲ್ವಿಚಾರಣೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಅವರು ವಹಿಸುತ್ತಿದ್ದಾರೆ ಎಂದು ಹರ್ಷವ್ಯಕ್ತಪಡಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಂತಹ ಪ್ರಯತ್ನಗಳಿಗಾಗಿ ಮುಖ್ಯ ನ್ಯಾಯಮೂರ್ತಿಗಳನ್ನು ಅಭಿನಂದಿಸಿದರು.

ದೇಶದ ನ್ಯಾಯಾಲಯಗಳಲ್ಲಿ ಭೌತಿಕ ಮೂಲಸೌಕರ್ಯ ಸುಧಾರಣೆಗೆ ಸರ್ಕಾರದ ಬದ್ಧತೆಯನ್ನು ಪುನರುಚ್ಛರಿಸಿದ ಪ್ರಧಾನಮಂತ್ರಿ ಅವರು, 2014ರ ನಂತರ ಈ ಉದ್ದೇಶಕ್ಕಾಗಿ ಈಗಾಗಲೇ 7000 ಕೋಟಿ ರೂಪಾಯಿಗಳಿಗೂ ಅಧಿಕ ಹಣ ವಿನಿಯೋಗಿಸಲಾಗಿದೆ ಎಂದರು. ಸದ್ಯ ಸುಪ್ರೀಂಕೋರ್ಟ್ ಕಟ್ಟಡದಲ್ಲಿನ ಸಮಸ್ಯೆಗಳ ಕುರಿತಂತೆ ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಸುಪ್ರೀಂಕೋರ್ಟ್ ಕಟ್ಟಡ ಸಂಕೀರ್ಣಕ್ಕಾಗಿ ಕಳೆದ ವಾರ 800 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಯಿತು ಎಂದು ಹೇಳಿದರು.

 

ಇಂದು ಚಾಲನೆ ನೀಡಿದ ಸುಪ್ರೀಂಕೋರ್ಟ್ ನ ಡಿಜಿಟಲ್ ಉಪಕ್ರಮಗಳ ಕುರಿತಂತೆ ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಡಿಜಿಟಲ್ ವಿಧಾನದಲ್ಲಿ ತೀರ್ಪುಗಳು ಲಭ್ಯವಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು ಮತ್ತು ಸ್ಥಳೀಯ ಭಾಷೆಗಳಲ್ಲಿ ತೀರ್ಪುಗಳನ್ನು ಒದಗಿಸುವ ಅನುವಾದ ಯೋಜನೆಯನ್ನು ಆರಂಭಿಸುವ ಸುಪ್ರೀಂಕೋರ್ಟ್ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ರೀತಿಯ ವ್ಯವಸ್ಥೆಗಳು ದೇಶದ ಇತರ ಭಾಗಗಳಲ್ಲೂ ಆಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

ಸುಲಭ ನ್ಯಾಯ ನಿಟ್ಟಿನಲ್ಲಿ ಅನುವಾಗುವಂತೆ ತಂತ್ರಜ್ಞಾನ ಬಳಕೆ ಮಾಡುತ್ತಿರುವುದು ಇಂದಿನ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, ಕೃತಕ ಬುದ್ಧಿಮತ್ತೆ ಸಹಾಯದಿಂದ ನೈಜ ಸಮಯದಲ್ಲಿ ಆಂಗ್ಲ ಭಾಷೆಗೆ ಅನುವಾದ ಮಾಡಲಾಗುತ್ತಿದೆ ಮತ್ತು ಇದನ್ನು ಭಾಷಿಣಿ ಆಪ್ ಮೂಲಕವೂ ಆಲಿಸಬಹುದಾಗಿದೆ ಎಂದರು. ಆರಂಭದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ಆದರೆ ಅದು ಕೂಡ ತಂತ್ರಜ್ಞಾನ ಬಳಕೆಯ ನಮ್ಮ ದೂರದೃಷ್ಟಿಯನ್ನು ವಿಸ್ತರಿಸುತ್ತದೆ ಎಂದರು. ನಮ್ಮ ನ್ಯಾಯಾಲಯಗಳಲ್ಲೂ ಕೂಡ ಸಾಮಾನ್ಯ ಜನರ ಜೀವನ ಸುಗಮವಾಗುವಂತೆ ಅಂತಹುದೇ ತಂತ್ರಜ್ಞಾನಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಜನರು ಉತ್ತಮ ರೀತಿಯಲ್ಲಿ ಅರ್ಥೈಸಿಕೊಳ್ಳುವಂತೆ ಸರಳ ಭಾಷೆಯಲ್ಲಿ ಕಾನೂನುಗಳ ಕರಡನ್ನು ರೂಪಿಸುವ ತಮ್ಮ ಸಲಹೆಯನ್ನು ನೆನಪು ಮಾಡಿಕೊಂಡರು ಮತ್ತು ಶ್ರೀ ನರೇಂದ್ರ ಮೋದಿ ಅವರು ಕೋರ್ಟ್ ತೀರ್ಪುಗಳು ಮತ್ತು ಆದೇಶಗಳ ಕರಡುಗಳನ್ನು ಸಿದ್ಧಪಡಿಸುವಾಗ ಇಂತಹುದೇ ವಿಧಾನ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಮ್ಮ ಕಾನೂನು ಚೌಕಟ್ಟಿನಲ್ಲಿ ಭಾರತೀಯ ಮೌಲ್ಯಗಳು ಮತ್ತು ಆಧುನಿಕತೆಯ ಸಾರವನ್ನು ಒತ್ತಿಹೇಳಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ಕಾನೂನುಗಳು ಭಾರತೀಯ ನೀತಿ ಮತ್ತು ಸಮಕಾಲೀನ ಆಚರಣೆಗಳನ್ನು ಪ್ರತಿಬಿಂಬಿಸುವ ಅಗತ್ಯವನ್ನು ಒತ್ತಿ ಹೇಳಿದರು. “ನಮ್ಮ ಕಾನೂನು ಕಾಯ್ದೆಗಳಲ್ಲಿ ಭಾರತೀಯ ಮೌಲ್ಯಗಳು ಮತ್ತು ಆಧುನಿಕತೆಯ ಸಮ್ಮಿಳಿತವು ಸಮಾನ ಅವಶ್ಯಕವಾಗಿದೆ’’ ಎಂದು ಅವರು ಹೇಳಿದರು. ”ಸದ್ಯದ ಪರಿಸ್ಥಿತಿ ಮತ್ತು ಉತ್ತಮ ಪದ್ಧತಿಗಳಿಗೆ ಹೊಂದಿಕೆಯಾಗಲು ಕಾನೂನುಗಳನ್ನು ಆಧುನೀಕರಿಸುವಲ್ಲಿ ಸರ್ಕಾರವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ" ಎಂದು ಪ್ರಧಾನಿ ನರೇಂದ್ರ  ಮೋದಿ ಹೇಳಿದರು.

 

ಪ್ರಧಾನಿ ಅವರು, ಹಳೆಯದಾದ ವಸಾಹತುಶಾಹಿ ಕ್ರಿಮಿನಲ್ ಕಾನೂನುಗಳನ್ನು ರದ್ದುಪಡಿಸುವಲ್ಲಿ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರತೀಯ ನ್ಯಾಯ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಅಧಿನಿಯಮದಂತಹ ಹೊಸ ಶಾಸನಗಳನ್ನು ಪರಿಚಯಿಸುವಲ್ಲಿ ಸರ್ಕಾರದ ಉಪಕ್ರಮಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಈ ಬದಲಾವಣೆಗಳ ಮೂಲಕ ನಮ್ಮ ಕಾನೂನು, ಪೊಲೀಸ್ ಮತ್ತು ತನಿಖಾ ವ್ಯವಸ್ಥೆಗಳು ಹೊಸ ಯುಗವನ್ನು ಪ್ರವೇಶಿಸಿವೆ ಎಂದು ಅವರು ಒತ್ತಿ ಹೇಳಿದರು. ಶತಮಾನಗಳಷ್ಟು ಹಳೆಯದಾದ ಕಾನೂನುಗಳಿಂದ ಹೊಸ ಶಾಸನಗಳಿಗೆ ಪರಿವರ್ತನೆಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ, “ಹಳೆಯ ಕಾನೂನುಗಳಿಂದ ಹೊಸದಕ್ಕೆ ಪರಿವರ್ತನೆಯು ತಡೆರಹಿತವಾಗಿರಬೇಕು, ಇದು ಕಡ್ಡಾಯ ಕೂಡ’’ ಎಂದು ಒತ್ತಿ ಹೇಳಿದರು. ಆ ನಿಟ್ಟಿನಲ್ಲಿ, ಪರಿವರ್ತನೆಗೆ ಅನುಕೂಲವಾಗುವಂತೆ ಸರ್ಕಾರಿ ಅಧಿಕಾರಿಗಳಿಗೆ ತರಬೇತಿ ಮತ್ತು ಸಾಮರ್ಥ್ಯ ವರ್ಧನೆಯ ಉಪಕ್ರಮಗಳನ್ನು ಆರಂಭಿಸುವ ಅಗತ್ಯತೆ ಪ್ರಸ್ತಾಪಿಸಿದರು. ಎಲ್ಲ ಪಾಲುದಾರರ ಸಾಮರ್ಥ್ಯ ವೃದ್ಧಿಯಲ್ಲಿ ತೊಡಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸುಪ್ರೀಂ ಕೋರ್ಟ್‌ಗೆ ಆಗ್ರಹಪಡಿಸಿದರು.

ವಿಕಸಿತ ಭಾರತದ ಮೂಲಾಧಾರವಾಗಿ ದೃಢವಾದ ನ್ಯಾಯ ವ್ಯವಸ್ಥೆಯ ನಿರ್ಣಾಯಕ ಪಾತ್ರವನ್ನು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದರು. ವಿಶ್ವಾಸಾರ್ಹ ಕಾನೂನು ಚೌಕಟ್ಟನ್ನು ರಚಿಸಲು ಸರ್ಕಾರದ ನಿರಂತರ ಪ್ರಯತ್ನಗಳನ್ನು ಎತ್ತಿ ಹಿಡಿದ ಅವರು, ಜನ ವಿಶ್ವಾಸ್ ಮಸೂದೆಯನ್ನು ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆ ಎಂದು ಉಲ್ಲೇಖಿಸಿ, ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವುದರ ಮೂಲಕ ನ್ಯಾಯಾಂಗದ ಅನಗತ್ಯ ಒತ್ತಡವನ್ನು ನಿವಾರಿಸಬಹುದಾಗಿದೆ ಎಂದರು.  ಮಧ್ಯಸ್ಥಿಕೆಯ ಮೂಲಕ ಪರ್ಯಾಯ ವಿವಾದ ಪರಿಹಾರಕ್ಕಾಗಿ ನಿಬಂಧನೆಗಳ ಪರಿಚಯದ್ದನ್ನು ಪ್ರಧಾನ ಮಂತ್ರಿ  ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದರು, ಇದು ವಿಶೇಷವಾಗಿ ಅಧೀನ ನ್ಯಾಯಾಂಗದ ಹೊರೆಯನ್ನು ಕಡಿಮೆ ಮಾಡಲು ಕೊಡುಗೆ ನೀಡಲಿದೆ.  

 

ಭಾರತ 2047ರ ವೇಳೆಗೆ ವಿಕಸಿತ ಭಾರತವಾಗಬೇಕೆಂಬ ದೂರದೃಷ್ಟಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಎಲ್ಲಾ ನಾಗರಿಕರ ಸಾಮೂಹಿಕ ಜವಾಬ್ದಾರಿಯನ್ನು ಪುನರುಚ್ಚರಿಸಿದ ಪ್ರಧಾನಿ ಮೋದಿ. ಮುಂದಿನ 25 ವರ್ಷಗಳಲ್ಲಿ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಸುಪ್ರೀಂಕೋರ್ಟ್ ಮಹತ್ವದ ಪಾತ್ರವನ್ನು ವಹಿಸಲಿದೆ ಎಂದರು ಮತ್ತು ಸಂಸ್ಥೆಯನ್ನು ಅಭಿನಂದಿಸುವ ಮೂಲಕ ಅವರು 75 ನೇ ವಾರ್ಷಿಕೋತ್ಸವ ಭಾಷಣವನ್ನು ಮುಕ್ತಾಯಗೊಳಿಸಿದರು. ಎಂ.ಫಾತಿಮಾ ಬೀವಿ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ನೀಡಿರುವುದನ್ನು ಪ್ರಸ್ತಾಪಿಸಿದ ಪ್ರಧಾನಿ, ಈ ಅವಕಾಶಕ್ಕಾಗಿ ಹೆಮ್ಮೆ ವ್ಯಕ್ತಪಡಿಸಿದರು. .

ಭಾರತದ ಮುಖ್ಯ ನ್ಯಾಯಮೂರ್ತಿ ಡಾ.ಡಿ.ವೈ. ಚಂದ್ರಚೂಡ್, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಶ್ರೀ ಅರ್ಜುನ್ ರಾಮ್ ಮೇಘವಾಲ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ, ಭಾರತದ ಅಟಾರ್ನಿ ಜನರಲ್ ಶ್ರೀ ಆರ್. ವೆಂಕಟರಮಣಿ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರು ಡಾ ಆದಿಶ್ ಸಿ ಅಗರ್ವಾಲ್ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಶ್ರೀ ಮನನ್ ಕುಮಾರ್ ಮಿಶ್ರಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಸುಪ್ರೀಂಕೋರ್ಟ್ ನ 75ನೇ ವರ್ಷಾಚಾರಣೆಗೆ ಚಾಲನೆ ನೀಡಿದ ಪ್ರಧಾನಮಂತ್ರಿ ಅವರು, ಡಿಜಿಟಲ್ ಸುಪ್ರೀಂ ಕೋರ್ಟ್ ವರದಿಗಳು (ಡಿಜಿ ಎಸ್‌ಸಿಆರ್), ಡಿಜಿಟಲ್ ಕೋರ್ಟ್ಸ್ 2.0 ಮತ್ತು ಸುಪ್ರೀಂ ಕೋರ್ಟ್‌ನ ಹೊಸ ವೆಬ್‌ಸೈಟ್ ಅನ್ನು ಒಳಗೊಂಡಿರುವ ನಾಗರಿಕ-ಕೇಂದ್ರಿತ ಮಾಹಿತಿ ಮತ್ತು ತಂತ್ರಜ್ಞಾನ ಉಪಕ್ರಮಗಳಿಗೆ ಚಾಲನೆ ನೀಡಿದರು.

 

ಡಿಜಿಟಲ್ ಸುಪ್ರೀಂ ಕೋರ್ಟ್ ವರದಿಗಳು (ಎಸ್ ಸಿಆರ್ ) ಸುಪ್ರೀಂ ಕೋರ್ಟ್ ತೀರ್ಪುಗಳನ್ನು ದೇಶದ ನಾಗರಿಕರಿಗೆ ಉಚಿತವಾಗಿ ಮತ್ತು ಎಲೆಕ್ಟ್ರಾನಿಕ್ ವಿಧಾನದಲ್ಲಿ ಲಭ್ಯವಾಗುವಂತೆ ಮಾಡುತ್ತದೆ. ಡಿಜಿಟಲ್ ಎಸ್‌ಸಿಆರ್‌ನ ಪ್ರಮುಖ ವೈಶಿಷ್ಟ್ಯಗಳೆಂದರೆ, 1950 ರಿಂದ ಸರ್ವೋಚ್ಚ ನ್ಯಾಯಾಲಯದ ಎಲ್ಲಾ 519 ಸಂಪುಟಗಳು 36,308 ಪ್ರಕರಣಗಳನ್ನು ಒಳಗೊಂಡಿದ್ದು, ಡಿಜಿಟಲ್ ಸ್ವರೂಪದಲ್ಲಿ, ಬುಕ್‌ಮಾರ್ಕ್ ಮಾಡಿದ, ಬಳಕೆದಾರ ಸ್ನೇಹಿ ಮತ್ತು ಮುಕ್ತವಾಗಿ ಲಭ್ಯವಿವೆ.

ಡಿಜಿಟಲ್ ಕೋರ್ಟ್ಸ್ 2.0 ಅಪ್ಲಿಕೇಶನ್ ಇ-ಕೋರ್ಟ್ಸ್ ಯೋಜನೆಯಡಿಯಲ್ಲಿ ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ ನ್ಯಾಯಾಲಯದ ದಾಖಲೆಗಳನ್ನು ಲಭ್ಯವಾಗುವಂತೆ ಮಾಡುವ ಇತ್ತೀಚಿನ ಉಪಕ್ರಮವಾಗಿದೆ. ನೈಜ-ಸಮಯದ ಆಧಾರದ ಮೇಲೆ ಭಾಷಣವನ್ನು ಪಠ್ಯಕ್ಕೆ  ಕೃತಕ ಬುದ್ಧಿಮತ್ತೆ (ಎಐ) ಬಳಕೆಯೊಂದಿಗೆ ಅನುವಾದಿಸುವುದು ಕೂಡ ಇದರಲ್ಲಿ ಸೇರಿಕೊಂಡಿದೆ.

ಸುಪ್ರೀಂ ಕೋರ್ಟ್‌ನ ನೂತನ ವೆಬ್‌ಸೈಟ್‌ಗೂ ಪ್ರಧಾನಿ ಚಾಲನೆ ನೀಡಿದರು. ಹೊಸ ವೆಬ್‌ಸೈಟ್ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ದ್ವಿಭಾಷಾ ಸ್ವರೂಪದಲ್ಲಿರುತ್ತದೆ ಮತ್ತು ಬಳಕೆದಾರ ಸ್ನೇಹಿ ಮುಖಾಮುಖಿಯಾಗುವಂತೆ ಮರುವಿನ್ಯಾಸಗೊಳಿಸಲಾಗಿದೆ.

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi