16 ಸಾಧಕರಿಗೆ ʻಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಪ್ರಧಾನ ಮಂತ್ರಿ ಪ್ರಶಸ್ತಿʼ ಪ್ರದಾನ
'ವಿಕಸಿತ್ ಭಾರತ್ʼ - ನಾಗರಿಕರನ್ನು ಸಬಲೀಕರಣ ಮತ್ತು ಕೊನೆಯ ಮೈಲಿಯನ್ನು ತಲುಪುವುದು' ಎಂಬ ಇ-ಪುಸ್ತಕಗಳ ಬಿಡುಗಡೆ
"ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ, ಸರಕಾರಿ ವ್ಯವಸ್ಥೆಯು ಸಾಮಾನ್ಯ ಜನರ ಆಕಾಂಕ್ಷೆಗಳನ್ನು ಬೆಂಬಲಿಸಬೇಕು"
"ಈ ಹಿಂದೆ ಸರಕಾರವೇ ಎಲ್ಲವನ್ನೂ ಮಾಡುತ್ತದೆ ಎಂದು ಯೋಚಿಸುವ ಕಾಲವಿತ್ತು, ಆದರೆ ಈಗ ಸರಕಾರವು ಎಲ್ಲರಿಗಾಗಿ ಕೆಲಸ ಮಾಡುತ್ತದೆ ಎಂದು ಯೋಚಿಸಲಾಗುತ್ತಿದೆ"
"ಸರಕಾರದ ಧ್ಯೇಯವಾಕ್ಯ 'ರಾಷ್ಟ್ರ ಪ್ರಥಮ ಪ್ರಜೆ ಮೊದಲು', ಇಂದಿನ ಸರಕಾರವು ಅವಕಾಶ ವಂಚಿತರಿಗೆ ಆದ್ಯತೆ ನೀಡುತ್ತಿದೆ"
"ಇಂದಿನ ಮಹತ್ವಾಕಾಂಕ್ಷೆಯ ನಾಗರಿಕರು ವ್ಯವಸ್ಥೆಗಳಲ್ಲಿ ಬದಲಾವಣೆ ನೋಡಲು ಹೆಚ್ಚು ಕಾಲ ಕಾಯಲು ಸಿದ್ಧರಿಲ್ಲ"
"ಭಾರತದ ಸಮಯ ಬಂದಿದೆ ಎಂದು ಜಗತ್ತು ಹೇಳುತ್ತಿದೆ, ಇಂತಹ ಸಂದರ್ಭದಲ್ಲಿ ದೇಶದ ಅಧಿಕಾರಶಾಹಿಯು ಸಮಯವನ್ನು ವ್ಯರ್ಥ ಮಾಡಲು ಅವಕಾಶವಿಲ್ಲ"
" ರಾಷ್ಟ್ರೀಯ ಹಿತಾಸಕ್ತಿಯೇ ನಿಮ್ಮ ಎಲ್ಲಾ ನಿರ್ಧಾರಗಳ ಆಧಾರ ಸ್ತಂಭವಾಗಿರಬೇಕು"
"ಒಂದು ರಾಜಕೀಯ ಪಕ್ಷವು ತೆರಿಗೆದಾರರ ಹಣವನ್ನು ತಮ್ಮ ಸ್ವಂತ ಸಂಸ್ಥೆಯ ಲಾಭಕ್ಕಾಗಿ ಅಥವಾ ರಾಷ್ಟ್ರಕ್ಕಾಗಿ ಬಳಸುತ್ತಿದೆಯೇ ಎಂದು ವಿಶ್ಲೇಷಿಸುವುದು ಅಧಿಕಾರಶಾಹಿಯ ಕರ್ತವ್ಯ
ಪ್ರಧಾನಮಂತ್ರಿಯವರು ʻಸಾರ್ವಜನಿಕ ಆಡಳಿತದಲ್ಲಿ ಉತ್ಕೃಷ್ಟತೆಗಾಗಿ ಪ್ರಧಾನ ಮಂತ್ರಿಗಳ ಪ್ರಶಸ್ತಿʼಗಳನ್ನು ಪ್ರದಾನ ಮಾಡಿದರು.
ಸಮಯದ ಅಭಾವದ ಹೊರತಾಗಿ ಈ ನಿಟ್ಟಿನಲ್ಲಿ ದೇಶವು ಹೊಂದಿರುವ ಅಗಾಧ ಸಾಮರ್ಥ್ಯ ಮತ್ತು ಶೌರ್ಯದ ಬಗ್ಗೆ ಗಮನಸೆಳೆದರು
ಇಂದಿನ ಪ್ರಶಸ್ತಿಗಳು ಕರ್ಮಯೋಗಿಗಳ ಕೊಡುಗೆ ಮತ್ತು ಸೇವಾ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಶ್ಲಾಘಿಸಿದರು.
ಹಿಂದಿನ ವರ್ಷಗಳಲ್ಲಿ ವ್ಯವಸ್ಥೆಯಲ್ಲಿದ್ದ ನಕಾರಾತ್ಮಕತೆಯು ಸಕಾರಾತ್ಮಕವಾಗಿ ಬದಲಾಗುತ್ತದೆ" ಎಂದು ಪ್ರಧಾನಿ ಹೇಳಿದರು.
ಈಗ ಆ ಹಣವನ್ನು ಬಡವರ ಕಲ್ಯಾಣಕ್ಕಾಗಿ ಬಳಸಲಾಗುತ್ತಿದೆ,ʼʼ ಎಂದು ಅವರು ಶ್ಲಾಘಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ 16ನೇ ʻನಾಗರಿಕ ಸೇವಾ ದಿನ’ದಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಾಗರಿಕ ಸೇವಕರನ್ನುದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ʻಸಾರ್ವಜನಿಕ ಆಡಳಿತದಲ್ಲಿ ಉತ್ಕೃಷ್ಟತೆಗಾಗಿ ಪ್ರಧಾನ ಮಂತ್ರಿಗಳ ಪ್ರಶಸ್ತಿʼಗಳನ್ನು ಪ್ರದಾನ ಮಾಡಿದರು.

 

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ʻನಾಗರಿಕ ಸೇವಾ ದಿನʼದ ಸಂದರ್ಭದಲ್ಲಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ದೇಶವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿರುವುದರಿಂದ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಗುರಿಗಳು ಹಾಗೂ ಉದ್ದೇಶಗಳನ್ನು ಸಾಧಿಸಲು ದಾಪುಗಾಲು ಇಡುತ್ತಿರುವುದರಿಂದ ಈ ವರ್ಷದ ʻನಾಗರಿಕ ಸೇವಾ ದಿನʼದ ಸಂದರ್ಭವು ಹೆಚ್ಚು ವಿಶೇಷವಾಗಿದೆ ಎಂದು ಪ್ರಧಾನಿ ಹೇಳಿದರು. 15-25 ವರ್ಷಗಳ ಹಿಂದೆ ಸೇವೆಗೆ ಸೇರಿದ ನಾಗರಿಕ ಸೇವಕರು ನೀಡಿದ ಕೊಡುಗೆಗಳನ್ನು ಅವರು ಒತ್ತಿ ಹೇಳಿದರು. ʻಅಮೃತ ಕಾಲʼದ ಮುಂದಿನ 25 ವರ್ಷಗಳಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವಲ್ಲಿ ಯುವ ಅಧಿಕಾರಿಗಳ ಪಾತ್ರವನ್ನು ಒತ್ತಿ ಹೇಳಿದರು. ಈ ʻಅಮೃತ ಕಾಲʼದಲ್ಲಿ ರಾಷ್ಟ್ರದ ಸೇವೆ ಮಾಡುವ ಅವಕಾಶ ಪಡೆದ ಯುವ ಅಧಿಕಾರಿಗಳು ಅತ್ಯಂತ ಅದೃಷ್ಟಶಾಲಿಗಳು ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು. "ರಾಷ್ಟ್ರದ ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರನ ಕನಸುಗಳನ್ನು ಈಡೇರಿಸುವ ಜವಾಬ್ದಾರಿಯು ಪ್ರತಿಯೊಬ್ಬರ ಹೆಗಲ ಮೇಲಿದೆ" ಎಂದು ಪ್ರಧಾನಮಂತ್ರಿಯವರು ಹೇಳಿದರು. ಸಮಯದ ಅಭಾವದ ಹೊರತಾಗಿ ಈ ನಿಟ್ಟಿನಲ್ಲಿ ದೇಶವು ಹೊಂದಿರುವ ಅಗಾಧ ಸಾಮರ್ಥ್ಯ ಮತ್ತು ಶೌರ್ಯದ ಬಗ್ಗೆ ಗಮನಸೆಳೆದರು.

 

ಕಳೆದ 9 ವರ್ಷಗಳಲ್ಲಿ ಮಾಡಿದ ಕೆಲಸಗಳಿಂದಾಗಿ ದೇಶವು ʻಟೇಕ್ ಆಫ್ʼಗೆ ಸಿದ್ಧವಾಗಿದೆ ಎಂದು ಪ್ರಧಾನಿ ಹೇಳಿದರು. ಒಂದೇ ಅಧಿಕಾರಿ ವರ್ಗ ಮತ್ತು ಸಿಬ್ಬಂದಿಯಿಂದ ವಿಭಿನ್ನ ಫಲಿತಾಂಶಗಳು ಬರುತ್ತಿರುವುದರ ಬಗ್ಗೆ ಅವರು ಉಲ್ಲೇಖಿಸಿದರು. ಜಾಗತಿಕ ವೇದಿಕೆಯಲ್ಲಿ ದೇಶದ ವರ್ಚಸ್ಸನ್ನು ಹೆಚ್ಚಿಸುವಲ್ಲಿ, 'ಸುಶಾಸನ'ದಲ್ಲಿ ಕಡುಬಡವರ ವಿಶ್ವಾಸವನ್ನು ಹೆಚ್ಚಿಸುವಲ್ಲಿ ಮತ್ತು ದೇಶದ ಅಭಿವೃದ್ಧಿಯ ಹೊಸ ವೇಗಕ್ಕಾಗಿ ʻಕರ್ಮಯೋಗಿʼಗಳ ಪಾತ್ರವನ್ನು ಅವರು ಉಲ್ಲೇಖಿಸಿದರು. ಭಾರತವು ವಿಶ್ವದ
5ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆಯುತ್ತಿದೆ, ಡಿಜಿಟಲ್ ವಹಿವಾಟಿನಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ, ಅಗ್ಗದ ಮೊಬೈಲ್ ಡೇಟಾ ದೇಶಗಳಲ್ಲಿ ಒಂದಾಗಿದೆ. ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ ಎಂದು ಅವರು ಹೇಳಿದರು. ಗ್ರಾಮೀಣ ಆರ್ಥಿಕತೆ, ರೈಲ್ವೆ, ಹೆದ್ದಾರಿಗಳು, ಬಂದರು ಸಾಮರ್ಥ್ಯ ಹೆಚ್ಚಳ ಮತ್ತು ವಿಮಾನ ನಿಲ್ದಾಣಗಳ ಸಂಖ್ಯೆಯಲ್ಲಿನ ಹೆಚ್ಚಳದ ಬಗ್ಗೆ ಅವರು ಪ್ರಸ್ತಾಪಿಸಿದರು. ಇಂದಿನ ಪ್ರಶಸ್ತಿಗಳು ಕರ್ಮಯೋಗಿಗಳ ಕೊಡುಗೆ ಮತ್ತು ಸೇವಾ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಶ್ಲಾಘಿಸಿದರು.

ಕಳೆದ ವರ್ಷ ಆಗಸ್ಟ್ 15ರಂದು ಕೆಂಪುಕೋಟೆಯ ಮೇಲೆ ಮಾಡಿದ ಭಾಷಣದಲ್ಲಿ 'ಪಂಚ್ ಪ್ರಾಣ'ದ ಬಗ್ಗೆ ಮಾಡಿದ ಪ್ರಸ್ತಾಪವನ್ನು ಪ್ರಧಾನಿ ಸ್ಮರಿಸಿದರು. ʻವಿಕಸಿತ ಭಾರತʼ ಅಥವಾ ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣ, ಗುಲಾಮಗಿರಿ ಮನಸ್ಥಿತಿಯಿಂದ ಹೊರಬರುವುದು, ಭಾರತದ ಪರಂಪರೆಯ ಬಗ್ಗೆ ಹೆಮ್ಮೆ ಪಡುವುದು, ದೇಶದ ಏಕತೆ ಮತ್ತು ವೈವಿಧ್ಯತೆಯನ್ನು ಬಲಪಡಿಸುವುದು ಮತ್ತು ಎಲ್ಲಕ್ಕಿಂತ ಮೊದಲು ಕರ್ತವ್ಯಗಳನ್ನು ನಿರ್ವಹಿಸುವುದು ಈ ʻಪಂಚ ಪ್ರಾಣʼದ ತತ್ವಗಳಾಗಿವೆ ಎಂದು ಪ್ರಧಾನಿ ಸ್ಮರಿಸಿದರು. ಈ ಐದು ಸಂಕಲ್ಪಗಳಿಂದ ಹೊರಹೊಮ್ಮುವ ಶಕ್ತಿಯು ರಾಷ್ಟ್ರವನ್ನು ವಿಶ್ವದಲ್ಲಿ ಅರ್ಹ ಸ್ಥಾನಕ್ಕೆ ಕೊಂಡೊಯ್ಯಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

 

ಈ ವರ್ಷದ ʻನಾಗರಿಕ ಸೇವಾ ದಿನʼದ ಧ್ಯೇಯವಾಕ್ಯವು ʻವಿಕಸಿತ ಭಾರತʼ ಪರಿಕಲ್ಪನೆಯನ್ನು ಆಧರಿಸಿದೆ ಎಂದ ಪ್ರಧಾನಮಂತ್ರಿಯವರು, ʻವಿಕಸಿತ ಭಾರತʼ ಪರಿಕಲ್ಪನೆಯು ಆಧುನಿಕ ಮೂಲಸೌಕರ್ಯಗಳಿಗೆ ಸೀಮಿತವಾಗಿಲ್ಲ ಎಂದರು. "ಭಾರತದ ಸರಕಾರಿ ವ್ಯವಸ್ಥೆಯು ಪ್ರತಿಯೊಬ್ಬ ಭಾರತೀಯನ ಆಕಾಂಕ್ಷೆಗಳನ್ನು ಬೆಂಬಲಿಸುತ್ತದೆ ಮತ್ತು ಪ್ರತಿಯೊಬ್ಬ ಸರಕಾರಿ ನೌಕರನು ಪ್ರತಿಯೊಬ್ಬ ನಾಗರಿಕನ ಕನಸುಗಳನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತಾನೆ. ಹಿಂದಿನ ವರ್ಷಗಳಲ್ಲಿ ವ್ಯವಸ್ಥೆಯಲ್ಲಿದ್ದ ನಕಾರಾತ್ಮಕತೆಯು ಸಕಾರಾತ್ಮಕವಾಗಿ ಬದಲಾಗುತ್ತದೆ" ಎಂದು ಪ್ರಧಾನಿ ಹೇಳಿದರು.

ಭಾರತದ ಸ್ವಾತಂತ್ರ್ಯಾನಂತರದ ದಶಕಗಳ ಅನುಭವದ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, “ಸರಕಾರದ ಯೋಜನೆಗಳ ಅನುಷ್ಠಾನದಲ್ಲಿ ಕೊನೆಯ ಮೈಲಿ ತಲುಪುವಿಕೆಯ ಮಹತ್ವವನ್ನು ಪ್ರತಿಪಾದಿಸಿದರು. ಹಿಂದಿನ ಸರಕಾರಗಳ ನೀತಿಗಳ ಫಲಿತಾಂಶಗಳ ಉದಾಹರಣೆಗಳನ್ನು ನೀಡಿದ ಅವರು, 4 ಕೋಟಿಗೂ ಹೆಚ್ಚು ನಕಲಿ ಅನಿಲ ಸಂಪರ್ಕಗಳು, 4 ಕೋಟಿಗೂ ಹೆಚ್ಚು ನಕಲಿ ಪಡಿತರ ಚೀಟಿಗಳಿದ್ದವು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 1 ಕೋಟಿ ಕಾಲ್ಪನಿಕ ಮಹಿಳೆಯರು ಮತ್ತು ಮಕ್ಕಳಿಗೆ ಬೆಂಬಲವನ್ನು ಒದಗಿಸಿತ್ತು. ಅಲ್ಪಸಂಖ್ಯಾತರ ಕಲ್ಯಾಣ ಸಚಿವಾಲಯವು ಸರಿಸುಮಾರು 30 ಲಕ್ಷ ಯುವಕರಿಗೆ ನಕಲಿ ವಿದ್ಯಾರ್ಥಿವೇತನವನ್ನು ನೀಡಿತ್ತು ಎಂದು ಉಲ್ಲೇಖಿಸಿದರು.  ಎಂದಿಗೂ ಅಸ್ತಿತ್ವದಲ್ಲಿಲ್ಲದ ಕಾರ್ಮಿಕರ ಪ್ರಯೋಜನಗಳನ್ನು ವರ್ಗಾಯಿಸಲು ʻಎಂನರೇಗಾʼ ಅಡಿಯಲ್ಲಿ ಲಕ್ಷಾಂತರ ನಕಲಿ ಖಾತೆಗಳನ್ನು ತೆರೆಯಲಾಗಿತ್ತು. ಈ ನಕಲಿ ಫಲಾನುಭವಿಗಳ ನೆಪದಲ್ಲಿ ದೇಶದಲ್ಲಿ ಭ್ರಷ್ಟ ಪರಿಸರ ವ್ಯವಸ್ಥೆ ಹೊರಹೊಮ್ಮಿತ್ತು ಎಂದು ಪ್ರಧಾನಿ ಒತ್ತಿ ಹೇಳಿದರು. ಸರಿಸುಮಾರು 3 ಲಕ್ಷ ಕೋಟಿ ರೂಪಾಯಿಗಳನ್ನು ಅನರ್ಹರ ಕೈಗಳಿಗೆ ಸಿಗದಂತೆ ಉಳಿಸಲಾಗಿದೆ. ವ್ಯವಸ್ಥೆಯಲ್ಲಿ ಆಗಿರುವ ಪರಿವರ್ತನೆಗೆ ನಾಗರಿಕ ಸೇವಕರು ಕಾರಣ. ಈಗ ಆ ಹಣವನ್ನು ಬಡವರ ಕಲ್ಯಾಣಕ್ಕಾಗಿ ಬಳಸಲಾಗುತ್ತಿದೆ,ʼʼ ಎಂದು ಅವರು ಶ್ಲಾಘಿಸಿದರು.

 

ಸಮಯ ಸೀಮಿತವಾಗಿರುವಾಗ, ದಿಕ್ಕು ಮತ್ತು ಕಾರ್ಯಶೈಲಿಯನ್ನು ನಿರ್ಧರಿಸುವುದು ಬಹಳ ನಿರ್ಣಾಯಕವಾಗುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಇಂದಿನ ಸವಾಲು ದಕ್ಷತೆಯ ಬಗ್ಗೆ ಅಲ್ಲ. ಬದಲಿಗೆ ನ್ಯೂನತೆಗಳನ್ನು ಕಂಡುಹಿಡಿಯುವುದು ಮತ್ತು ತೊಡೆದುಹಾಕುವುದು ಹೇಗೆ ಎಂಬ ಬಗ್ಗೆ ಮಾರ್ಗೋಪಾಯ ಹುಡುಕುವುದು ಮುಂದಿರುವ ಸವಾಲು. ಕೊರತೆಯ ಸೋಗಿನಲ್ಲಿ ಸಣ್ಣ ಅಂಶವನ್ನು ಸಹ ನಿಯಂತ್ರಿಸಲು ಪ್ರಯತ್ನವನ್ನೇ ಮಾಡದ ಸಮಯವನ್ನು ಅವರು ಸ್ಮರಿಸಿದರು. ಇಂದು, ಅದೇ ಕೊರತೆಯನ್ನು ದಕ್ಷತೆಯಾಗಿ ಪರಿವರ್ತಿಸಲಾಗುತ್ತಿದೆ ಮತ್ತು ವ್ಯವಸ್ಥೆಯಲ್ಲಿನ ಅಡೆತಡೆಗಳನ್ನು ತೊಡೆದುಹಾಕಲಾಗುತ್ತಿದೆ ಎಂದು ಅವರು ಮುಂದುವರೆಸಿದರು. "ಈ ಮೊದಲು, ಸರಕಾರವು ಎಲ್ಲವನ್ನೂ ಮಾಡುತ್ತದೆ ಎಂಬ ಆಲೋಚನೆ ಇತ್ತು, ಈಗ ಸರಕಾರವು ಎಲ್ಲರಿಗಾಗಿ ಕೆಲಸ ಮಾಡುತ್ತದೆ ಎಂಬ ಆಲೋಚನೆ ಇದೆ,ʼʼ ಎಂದರು. ಎಲ್ಲರಿಗೂ ಸೇವೆ ಸಲ್ಲಿಸಲು ಸಮಯ ಮತ್ತು ಸಂಪನ್ಮೂಲಗಳ ಸಮರ್ಥ ಬಳಕೆಯನ್ನು ಎತ್ತಿ ಹೇಳಿದರು. "'ರಾಷ್ಟ್ರ ಪ್ರಥಮ ಪ್ರಜೆ ಮೊದಲು ಎಂಬುದು ಇಂದಿನ ಸರಕಾರದ ಧ್ಯೇಯವಾಕ್ಯ. ʻಅವಕಾಶ ವಂಚಿತರಿಗೆ ಆದ್ಯತೆʼ ಇಂದಿನ ಸರಕಾರದ ಆದ್ಯತೆ,ʼʼ ಎಂದು ಪ್ರಧಾನಿ ಹೇಳಿದರು. ಸರಕಾರವು ಮಹತ್ವಾಕಾಂಕ್ಷೆಯ ಜಿಲ್ಲೆಗಳವರೆಗೆ ಮತ್ತು ಮಹತ್ವಾಕಾಂಕ್ಷೆಯ ಬ್ಲಾಕ್‌ಗಳ ಮಟ್ಟದವರೆಗೆ ತಲುಪುತ್ತಿದೆ ಎಂದು ತಿಳಿಸಿದರು. ಇಂದಿನ ಸರಕಾರವು ಗಡಿ ಗ್ರಾಮಗಳನ್ನು ಕೊನೆಯ ಹಳ್ಳಿಗಳ ಬದಲಾಗಿ  ಮೊದಲ ಗ್ರಾಮಗಳಾಗಿ ಪರಿಗಣಿಸುತ್ತಿದೆ ಎಂದು ಅವರು ಹೇಳಿದರು. 100 ಪ್ರತಿಶತ ಸಂತೃಪ್ತಿಗಾಗಿ, ನಮಗೆ ಇನ್ನೂ ಹೆಚ್ಚಿನ ಕಠಿಣ ಪರಿಶ್ರಮ ಮತ್ತು ನವೀನ ಪರಿಹಾರಗಳು ಬೇಕಾಗುತ್ತವೆ ಎಂದು ಅವರು ಹೇಳಿದರು. ಇಲಾಖೆಗಳು ʻಎನ್ಒಸಿʼಗಳನ್ನು ಕೇಳುವ ಮತ್ತು ವ್ಯವಸ್ಥೆಯಲ್ಲಿ ಎಲ್ಲೋ ಲಭ್ಯವಿರುವ ಮಾಹಿತಿ ಕೇಳುವ ಉದಾಹರಣೆಯನ್ನು ನೀಡಿದರು. ಜೀವನವನ್ನು ಸುಲಭಗೊಳಿಸಲು ಮತ್ತು ವ್ಯಾಪಾರವನ್ನು ಸುಲಭಗೊಳಿಸಲು ನಾವು ಇವುಗಳಿಗೆ ಪರಿಹಾರಗಳನ್ನು ಕಂಡುಹಿಡಿಯಬೇಕಾಗಿದೆ ಎಂದು ಅವರು ಹೇಳಿದರು.

 

ʻಪ್ರಧಾನ ಮಂತ್ರಿ ಗತಿಶಕ್ತಿ ಮಾಸ್ಟರ್ ಪ್ಲ್ಯಾನ್ʼನ ಉದಾಹರಣೆಯನ್ನು ನೀಡಿದ ಪ್ರಧಾನಮಂತ್ರಿಯವರು, ಯಾವುದೇ ಮೂಲಸೌಕರ್ಯ ಯೋಜನೆಗೆ ಸಂಬಂಧಿಸಿದ ಎಲ್ಲ ದತ್ತಾಂಶಗಳನ್ನು ಒಂದೇ ವೇದಿಕೆಯಲ್ಲಿ ಪಡೆಯಲು ಇದು ನೆರವಾಗಲಿದೆ ಎಂದು ವಿವರಿಸಿದರು. ಸಾಮಾಜಿಕ ವಲಯದಲ್ಲಿ ಉತ್ತಮ ಯೋಜನೆ ಮತ್ತು ಅನುಷ್ಠಾನಕ್ಕಾಗಿ ಅದನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ನಾಗರಿಕರ ಅಗತ್ಯಗಳನ್ನು ಗುರುತಿಸಲು, ಭವಿಷ್ಯದಲ್ಲಿ ಉದ್ಭವಿಸಬಹುದಾದ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸಲು ಮತ್ತು ಇಲಾಖೆಗಳು, ಜಿಲ್ಲೆಗಳು ಮತ್ತು ಬ್ಲಾಕ್‌ಗಳ ನಡುವೆ ಸಂವಹನವನ್ನು ಹೆಚ್ಚಿಸಲು ಇದು ಹೆಚ್ಚು ಅನುಕೂಲಕಾರಿಯಾಗಿದೆ. ಭವಿಷ್ಯದ ಕಾರ್ಯತಂತ್ರಗಳನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ʻಅಮೃತ ಕಾಲʼವು ಉತ್ತಮ ಅವಕಾಶಗಳ ಜೊತೆಗೆ ಅಪಾರ ಸವಾಲುಗಳನ್ನು ತಂದಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಇಂದಿನ ಮಹತ್ವಾಕಾಂಕ್ಷೆಯ ನಾಗರಿಕರು ವ್ಯವಸ್ಥೆಗಳಲ್ಲಿನ ಬದಲಾವಣೆಗಳನ್ನು ನೋಡಲು ಹೆಚ್ಚು ಕಾಲ ಕಾಯಲು ಸಿದ್ಧರಿಲ್ಲ. ಹಾಗಾಗಿ ಈ ನಿಟ್ಟಿನಲ್ಲಿ ನಮ್ಮ ಸಂಪೂರ್ಣ ಪ್ರಯತ್ನದ ಅಗತ್ಯವಿದೆ ಎಂದು ಪ್ರಧಾನಿ ವಿವರಿಸಿದರು. ಭಾರತದಿಂದ ವಿಶ್ವದ ನಿರೀಕ್ಷೆಗಳು ಗಣನೀಯವಾಗಿ ಏರಿಕೆಯಾಗಿವೆ. ಹೀಗಾಗಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಅವುಗಳನ್ನು ವೇಗವಾಗಿ ಕಾರ್ಯಗತಗೊಳಿಸುವುದು ಹೆಚ್ಚು ಮುಖ್ಯವಾಗಿದೆ. ಭಾರತದ ಸಮಯ ಬಂದಿದೆ ಎಂದು ಜಗತ್ತು ಹೇಳುತ್ತಿದೆ. ಇಂತಹ ಸಮಯದಲ್ಲಿ ದೇಶದ ಅಧಿಕಾರಶಾಹಿ ಸಮಯವನ್ನು ವ್ಯರ್ಥ ಮಾಡಲು ಅವಕಾಶವಿಲ್ಲ. "ದೇಶವು ನಿಮ್ಮ ಮೇಲೆ ನಂಬಿಕೆ ಇಟ್ಟಿದೆ, ಆ ನಂಬಿಕೆಯನ್ನು ಉಳಿಸಿಕೊಂಡು ಕೆಲಸ ಮಾಡಿ. ನಿಮ್ಮ ಎಲ್ಲಾ ನಿರ್ಧಾರಗಳ ಆಧಾರ ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಯೇ ಆಗಿರಬೇಕು," ಎಂದು ಅವರು ಕರೆ ನೀಡಿದರು.

 

ಪ್ರಜಾಪ್ರಭುತ್ವದಲ್ಲಿ ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ರಾಜಕೀಯ ಪಕ್ಷಗಳ ಪ್ರಾಮುಖ್ಯತೆ ಮತ್ತು ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ, ಅಧಿಕಾರದಲ್ಲಿರುವ ರಾಜಕೀಯ ಪಕ್ಷವು ತೆರಿಗೆದಾರರ ಹಣವನ್ನು ರಾಷ್ಟ್ರದ ಪ್ರಯೋಜನಕ್ಕಾಗಿ ಬಳಸುತ್ತಿದೆಯೇ ಎಂಬುದನ್ನು ಅಧಿಕಾರಶಾಹಿ ನಿರ್ಣಯಿಸಬೇಕೆಂದು ಒತ್ತಿ ಹೇಳಿದರು. "ಒಂದು ರಾಜಕೀಯ ಪಕ್ಷವು ತೆರಿಗೆದಾರರ ಹಣವನ್ನು ತಮ್ಮ ಸ್ವಂತ ಸಂಸ್ಥೆಯ ಲಾಭಕ್ಕಾಗಿ ಬಳಸುತ್ತಿದೆಯೇ ಅಥವಾ ರಾಷ್ಟ್ರದ ಲಾಭಕ್ಕಾಗಿ ಬಳಸುತ್ತಿದೆಯೇ ಎಂದು ವಿಶ್ಲೇಷಿಸುವುದು ಅಧಿಕಾರಶಾಹಿಯ ಕರ್ತವ್ಯವಾಗಿದೆ," ಎಂದರು. "ಯಾವುದೇ ಪಕ್ಷವು ತೆರಿಗೆದಾರರ ಹಣವನ್ನು ವೋಟ್ ಬ್ಯಾಂಕ್ ಸೃಷ್ಟಿಗಾಗಿ ಬಳಸುತ್ತಿದೆಯೋ ಅಥವಾ ನಾಗರಿಕರ ಜೀವನವನ್ನು ಸುಲಭಗೊಳಿಸಲು ಬಳಸುತ್ತಿದೆಯೋ; ಅದು ಸರಕಾರದ ನಿಧಿಯನ್ನು ಬಳಸಿ ಸ್ವತಃ ಪಕ್ಷದ ಜಾಹೀರಾತು ನೀಡುತ್ತಿದೆಯೊ ಅಥವಾ ಜನರಲ್ಲಿ ಅರಿವು ಮೂಡಿಸಲು ಆ ಹಣವನ್ನು ಬಳಸುತ್ತಿದೆಯೋ; ಅದು ತನ್ನದೇ ಪಕ್ಷದ ಕಾರ್ಯಕರ್ತರನ್ನು ವಿವಿಧ ಸಂಸ್ಥೆಗಳಲ್ಲಿ ನೇಮಕ ಮಾಡುತ್ತಿದೆಯೋ ಅಥವಾ ನೇಮಕಾತಿಗೆ ಪಾರದರ್ಶಕ ಪ್ರಕ್ರಿಯೆಯನ್ನು ಸೃಷ್ಟಿಸಿದೆಯೋ ಎಂಬುದನ್ನು ವಿಶ್ಲೇಷಿಸುವುದು ಅಧಿಕಾರಿಶಾಹಿಯ ಕರ್ತವ್ಯ,ʼʼ ಎಂದರು. ʻಅಧಿಕಾರಶಾಹಿಯು ಭಾರತದ ಉಕ್ಕಿನ ಚೌಕಟ್ಟಾಗಿದೆʼ ಎಂಬ ಸರ್ದಾರ್ ಪಟೇಲ್ ಅವರ ಮಾತುಗಳನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ನಿರೀಕ್ಷೆಗಳಿಗೆ ತಕ್ಕಂತೆ ಬದುಕುವ, ತೆರಿಗೆದಾರರ ಹಣ ಹಾಳಾಗದಂತೆ ತಡೆಯುವ ಮತ್ತು ಯುವಕರ ಕನಸುಗಳು ಕಮರದಂತೆ ತಡೆಯುವ ಸಮಯ ಇದಾಗಿದೆ ಎಂದರು.

ಸರಕಾರಿ ನೌಕರರಿಗೆ ಜೀವನ ಮಾಡಲು ಎರಡು ವಿಧಾನಗಳಿವೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಮೊದಲನೆಯದು, ಕೆಲಸಗಳನ್ನು ಮಾಡುವುದು ಮತ್ತು ಎರಡನೆಯದಾಗಿ ಕೆಲಸಗಳು ಆಗುವಂತೆ ನೋಡಿಕೊಳ್ಳುವುದು. ಮೊದಲನೆಯದು ಸಕ್ರಿಯ ಮನೋಭಾವ ಮತ್ತು ಎರಡನೆಯದು ನಿಷ್ಕ್ರಿಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ನಂಬಿಕೆ ಹೊಂದಿರುವ ಜನರು ಮೊದಲನೇ ಜೀವನ ವಿಧಾನದ ರೀತಿಯಲ್ಲಿ ನಾಯಕತ್ವ ವಹಿಸುತ್ತಾರೆ ಮತ್ತು ಅವರ ತಂಡಗಳಿಗೆ ಪ್ರೇರಕ ಶಕ್ತಿಯಾಗುತ್ತಾರೆ. "ಜನರ ಜೀವನದಲ್ಲಿ ಬದಲಾವಣೆಯನ್ನು ತರುವ ಈ ಉತ್ಕಟ ಬಯಕೆಯಿಂದ ನೀವು ಸ್ಮರಣೀಯ ಪರಂಪರೆಯನ್ನು ಉಳಿಸಲು ಸಾಧ್ಯವಾಗುತ್ತದೆ. ನಿಮಗಾಗಿ ನೀವು ಏನು ಮಾಡಿದ್ದೀರಿ ಎಂಬುದರ ಮೇಲೆ ನಿಮ್ಮನ್ನು ನಿರ್ಣಯಿಸಲಾಗುವುದಿಲ್ಲ, ಬದಲಿಗೆ, ಜನರ ಜೀವನದಲ್ಲಿ ನೀವು ಯಾವ ಬದಲಾವಣೆಗಳನ್ನು ತಂದಿದ್ದೀರಿ ಎಂಬುದರ ಮೇಲೆ ನಿಮ್ಮನ್ನು ಅಳೆಯಲಾಗುತ್ತದೆ", ಎಂದು ಪ್ರಧಾನಿ ʻಕರ್ಮಯೋಗಿʼಗಳಿಗೆ ತಿಳಿಸಿದರು. ಆದ್ದರಿಂದ, "ಉತ್ತಮ ಆಡಳಿತವು ಮುಖ್ಯವಾಗಿದೆ. ಜನ ಕೇಂದ್ರಿತ ಆಡಳಿತವು ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ" ಎಂದು ಅವರು ಒತ್ತಿ ಹೇಳಿದರು. ಉತ್ತಮ ಆಡಳಿತ ಮತ್ತು ಶಕ್ತಿಯುತ ಯುವ ಅಧಿಕಾರಿಗಳ ಪ್ರಯತ್ನದಿಂದಾಗಿ ಅನೇಕ ಅಭಿವೃದ್ಧಿ ಮಾನದಂಡಗಳ ವಿಚಾರದಲ್ಲಿ ಇತರ ಜಿಲ್ಲೆಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಉದಾಹರಣೆಗಳನ್ನು ಅವರು ನೀಡಿದರು. ಜನರ ಭಾಗವಹಿಸುವಿಕೆಯ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಜನರಲ್ಲಿ ಮಾಲೀಕತ್ವದ ಪ್ರಜ್ಞೆಯನ್ನು ಸೃಷ್ಟಿಸಬಹುದು. ಜನರಲ್ಲಿ ಮೂಡುವ ಈ ಮಾಲೀಕತ್ವ ಭಾವನೆಯು ಅಭೂತಪೂರ್ವ ಫಲಿತಾಂಶಗಳನ್ನು ಖಾತರಿಪಡಿಸುತ್ತದೆ ಎಂದು ಅವರು ವಿವರಿಸಿದರು. ʻಸ್ವಚ್ಛ ಭಾರತʼ, ʻಅಮೃತ್ ಸರೋವರ್ʼ ಮತ್ತು ʻಜಲ ಜೀವನ್ ಮಿಷನ್ʼನ ಉದಾಹರಣೆಗಳೊಂದಿಗೆ ಅವರು ಇದನ್ನು ವಿವರಿಸಿದರು.

 

ಸಿದ್ಧತೆ ಹಂತದಲ್ಲಿರುವ `ಜಿಲ್ಲಾ ದೃಷ್ಟಿಕೋನ@100ʼ(District Visions@100) ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಪಂಚಾಯತ್ ಮಟ್ಟದವರೆಗೆ ಇಂತಹ ದೃಷ್ಟಿಕೋನಗಳನ್ನು ಸಿದ್ಧಪಡಿಸಬೇಕು ಎಂದರು. ಪಂಚಾಯತ್, ಬ್ಲಾಕ್, ಜಿಲ್ಲೆ ಮತ್ತು ರಾಜ್ಯದಲ್ಲಿ ಯಾವ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಬೇಕು, ಹೂಡಿಕೆಯನ್ನು ಆಕರ್ಷಿಸಲು ಮಾಡಬೇಕಾದ ಬದಲಾವಣೆಗಳು ಮತ್ತು ರಫ್ತಿಗಾಗಿ ಉತ್ಪನ್ನಗಳನ್ನು ಗುರುತಿಸುವುದು, ಈ ಎಲ್ಲದಕ್ಕೂ ಸ್ಪಷ್ಟ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ಸಲಹೆ ನೀಡಿದರು. ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಲು ʻಎಂಎಸ್ಎಂಇʼ ಮತ್ತು ಸ್ವಸಹಾಯ ಗುಂಪುಗಳ ಸಂಪರ್ಕ ಜಾಲ ರೂಪಿಸಬೇಕೆಂದು ಅವರು ಒತ್ತಿ ಹೇಳಿದರು. "ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು, ಸ್ಥಳೀಯ ಉದ್ಯಮಶೀಲತೆ ಮತ್ತು ನವೋದ್ಯಮ ಸಂಸ್ಕೃತಿಯನ್ನು ಉತ್ತೇಜಿಸುವುದು ನಿಮ್ಮೆಲ್ಲರಿಗೂ ಬಹಳ ಮುಖ್ಯ" ಎಂದು ಹೇಳಿದರು.

ತಾವು ಈಗ 20 ವರ್ಷಗಳಿಗೂ ಹೆಚ್ಚು ಕಾಲ ಸರಕಾರದ ಮುಖ್ಯಸ್ಥರಾಗಿರುವುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ನಾಗರಿಕ ಸೇವಕರೊಂದಿಗೆ ಸುದೀರ್ಘ ಸಮಯ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಸಾಮರ್ಥ್ಯ ವರ್ಧನೆಗೆಯನ್ನು ಒತ್ತಿ ಹೇಳಿದ ಅವರು, 'ಮಿಷನ್ ಕರ್ಮಯೋಗಿ' ಅಭಿಯಾನವು ಎಲ್ಲಾ ನಾಗರಿಕ ಸೇವಕರಲ್ಲಿ ಒಂದು ದೊಡ್ಡ ಅಭಿಯಾನವಾಗಿ ಮಾರ್ಪಟ್ಟಿರುವ ಬಗ್ಗೆ  ಸಂತೋಷ ವ್ಯಕ್ತಪಡಿಸಿದರು. ʻಸಾಮರ್ಥ್ಯ ವರ್ಧನೆ ಆಯೋಗʼವು ಈ ಅಭಿಯಾನವನ್ನು ಪೂರ್ಣ ಶಕ್ತಿಯೊಂದಿಗೆ ಮುನ್ನಡೆಸುತ್ತಿದೆ ಎಂದು ಒತ್ತಿಹೇಳಿದ ಪ್ರಧಾನಿಯವರು, "ನಾಗರಿಕ ಸೇವಕರ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವುದು ʻಮಿಷನ್ ಕರ್ಮಯೋಗಿʼಯ ಉದ್ದೇಶವಾಗಿದೆ" ಎಂದರು. ಎಲ್ಲೆಡೆ ಗುಣಮಟ್ಟದ ತರಬೇತಿ ಸಾಮಗ್ರಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ರಚಿಸಲಾದ ʻಐಜಿಒಟಿʼ ವೇದಿಕೆಯ ಬಗ್ಗೆ ಒತ್ತಿ ಹೇಳಿದ ಪ್ರಧಾನಿ, ತರಬೇತಿ ಮತ್ತು ಕಲಿಕೆ ಕೇವಲ ಔಪಚಾರಿಕವಾಗಿ ಉಳಿಯಬಾರದು ಎಂದರು. "ಈಗ, ಎಲ್ಲಾ ನೇಮಕಾತಿದಾರರಿಗೆ 'ಕರ್ಮಯೋಗಿ ಪ್ರರಂಭ'ದ ಓರಿಯಂಟೇಶನ್ ಮಾಡ್ಯೂಲ್‌ನೊಂದಿಗೆ ʻಐಜಿಒಟಿʼ ವೇದಿಕೆಯಲ್ಲಿ ತರಬೇತಿ ನೀಡಲಾಗುತ್ತಿದೆ," ಎಂದು ಶ್ರೀ ಮೋದಿ ಹೇಳಿದರು.

 

ಶ್ರೇಣೀಕರಣದ ಶಿಷ್ಟಾಚಾರವನ್ನು ತೊಡೆದುಹಾಕಲು ಸರಕಾರ ಕೈಗೊಂಡಿರುವ ಉಪಕ್ರಮವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ತಾವು ನಿರಂತರವಾಗಿ ಕಾರ್ಯದರ್ಶಿಗಳು, ಸಹಾಯಕ ಕಾರ್ಯದರ್ಶಿಗಳು ಮತ್ತು ತರಬೇತಿ ಅಧಿಕಾರಿಗಳನ್ನು ಭೇಟಿ ಮಾಡುವುದಾಗಿ ತಿಳಿಸಿದರು. ಹೊಸ ವಿಚಾರಗಳಿಗಾಗಿ ಇಲಾಖೆಯಲ್ಲಿ ಎಲ್ಲರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಚಿಂತನ-ಮಂಥನ ಶಿಬಿರಗಳನ್ನು ನಡೆಸುತ್ತಿರುವ ಉದಾಹರಣೆಯನ್ನು ಅವರು ನೀಡಿದರು. ಮೊದಲ ವರ್ಷ ರಾಜ್ಯಗಳಲ್ಲಿ ವಾಸಿಸಿದ ನಂತರವೇ ಕೇಂದ್ರ ಸರಕಾರದಲ್ಲಿ ಕೆಲಸದ ಅನುಭವ ಪಡೆಯುವ ಅಧಿಕಾರಿಗಳ ಸಮಸ್ಯೆಯನ್ನು, ʻಸಹಾಯಕ ಕಾರ್ಯದರ್ಶಿ ಕಾರ್ಯಕ್ರಮದʼ ಮೂಲಕ ಪರಿಹರಿಸಲಾಯಿತು. ಅಂತರವನ್ನು ತುಂಬುವ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಲಾಯಿತು. ಈ ವ್ಯವಸ್ಥೆಯಲ್ಲಿ ಈಗ ಯುವ ಐಎಎಸ್ ಅಧಿಕಾರಿಗಳು ತಮ್ಮ ವೃತ್ತಿಜೀವನದ ಆರಂಭದಲ್ಲಿಯೇ ಕೇಂದ್ರ ಸರಕಾರದಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು.

25 ವರ್ಷಗಳ ʻಅಮೃತ ಪ್ರಯಾಣʼವನ್ನು ʻಕರ್ತವ್ಯದ ಸಮಯʼವೆಂದು ಪರಿಗಣಿಸಲಾಗಿದೆ (ಕರ್ತವ್ಯ ಕಾಲ) ಎಂದು ಪ್ರಧಾನಿ ಹೇಳಿದರು. "ಸ್ವಾತಂತ್ರ್ಯದ ಶತಮಾನವು ದೇಶದ ಸುವರ್ಣ ಶತಮಾನವಾಗಲಿದ್ದು, ನಾವು ನಮ್ಮ ಕರ್ತವ್ಯಗಳಿಗೆ ಮೊದಲ ಆದ್ಯತೆ ನೀಡಬೇಕು. ಕರ್ತವ್ಯವು ನಮಗೆ ಒಂದು ಆಯ್ಕೆಯಲ್ಲ, ಅದೊಂದು ಸಂಕಲ್ಪ", ಎಂದು ಪ್ರಧಾನಿ ಒತ್ತಿ ಹೇಳಿದರು. "ಇದು ಕ್ಷಿಪ್ರ ಬದಲಾವಣೆಯ ಸಮಯ. ನಿಮ್ಮ ಪಾತ್ರವನ್ನು ನಿಮ್ಮ ಹಕ್ಕುಗಳಿಂದ ನಿರ್ಧರಿಸಲಾಗುವುದಿಲ್ಲ, ಬದಲಿಗೆ ನಿಮ್ಮ ಕರ್ತವ್ಯಗಳು ಮತ್ತು ಅವುಗಳ ಕಾರ್ಯಕ್ಷಮತೆಯಿಂದ ನಿರ್ಧರಿಸಲಾಗುತ್ತದೆ. ನವ ಭಾರತದಲ್ಲಿ ದೇಶದ ನಾಗರಿಕರ ಶಕ್ತಿ ಹೆಚ್ಚಾಗಿದೆ, ಭಾರತದ ಶಕ್ತಿ ಹೆಚ್ಚಾಗಿದೆ. ಈ ಹೊಸ ಉದಯೋನ್ಮುಖ ಭಾರತದಲ್ಲಿ ಪ್ರಮುಖ ಪಾತ್ರ ವಹಿಸಲು ನಿಮಗೆ ಅವಕಾಶ ಸಿಕ್ಕಿದೆ" ಎಂದು ಪ್ರಧಾನಿ ಹೇಳಿದರು.

ತಮ್ಮ ಭಾಷಣವನ್ನು ಮುಗಿಸುವ ಮುನ್ನ ಪ್ರಧಾನಮಂತ್ರಿಯವರು, “ಸ್ವಾತಂತ್ರ್ಯದ 100 ವರ್ಷಗಳ ನಂತರ ರಾಷ್ಟ್ರದ ಸಾಧನೆಗಳನ್ನು ಮೌಲ್ಯಮಾಪನ ಮಾಡಿದಾಗ, ದೇಶದ ಇತಿಹಾಸದಲ್ಲಿ ತಮ್ಮ ಛಾಪು ಮೂಡಿಸಲು ಯುವ ನಾಗರಿಕ ಸೇವಕರಿಗೆ ಅವಕಾಶವಿದೆ,ʼʼ ಎಂದು ಹೇಳಿದರು. "ದೇಶಕ್ಕಾಗಿ ಹೊಸ ವ್ಯವಸ್ಥೆಗಳನ್ನು ಸೃಷ್ಟಿಸುವಲ್ಲಿ ಮತ್ತು ಅವುಗಳನ್ನು ಸುಧಾರಿಸುವಲ್ಲಿ ನಾನು ಪಾತ್ರ ವಹಿಸಿದ್ದೇನೆ ಎಂದು ನೀವು ಹೆಮ್ಮೆಯಿಂದ ಹೇಳಬಹುದು. ನೀವೆಲ್ಲರೂ ರಾಷ್ಟ್ರ ನಿರ್ಮಾಣದಲ್ಲಿ ನಿಮ್ಮ ಪಾತ್ರವನ್ನು ವಿಸ್ತರಣೆ ಮುಂದುವರಿಸುತ್ತೀರಿ ಎಂಬ ವಿಶ್ವಾಸ ನನಗಿದೆ,ʼʼ ಎಂದು ಹೇಳುವ ಮೂಲಕ ಶ್ರೀ ಮೋದಿ ಅವರು ತಮ್ಮ ಮಾತು ಮುಗಿಸಿದರು.

 

ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್, ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಕೆ. ಮಿಶ್ರಾ, ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಮತ್ತು ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಿಲಾಖೆಯ ಕಾರ್ಯದರ್ಶಿ ಶ್ರೀ ವಿ.ಶ್ರೀನಿವಾಸ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಹಿನ್ನೆಲೆ

ರಾಷ್ಟ್ರ ನಿರ್ಮಾಣಕ್ಕೆ ನಾಗರಿಕ ಸೇವಕರ ಕೊಡುಗೆಯನ್ನು ಪ್ರಧಾನಮಂತ್ರಿಯವರು ನಿರಂತರವಾಗಿ ಶ್ಲಾಘಿಸಿದ್ದಾರೆ ಮತ್ತು ಇನ್ನೂ ಹೆಚ್ಚು ಶ್ರಮಿಸಲು ಅವರನ್ನು ಹುರಿದುಂಬಿಸಿದ್ದಾರೆ. ಈ ಕಾರ್ಯಕ್ರಮವು ದೇಶಾದ್ಯಂತದ ನಾಗರಿಕ ಸೇವಕರನ್ನು ಪ್ರೇರೇಪಿಸಲು ಮತ್ತು ಉತ್ತೇಜಿಸಲು ಪ್ರಧಾನಿಗೆ ಸೂಕ್ತ ವೇದಿಕೆಯಾಗಿ ಕೆಲಸ ಮಾಡಿದೆ.  ಇದರಿಂದಾಗಿ ವಿಶೇಷವಾಗಿ ʻಅಮೃತ ಕಾಲʼದ ಈ ನಿರ್ಣಾಯಕ ಹಂತದಲ್ಲಿ ಅವರು ಅದೇ ಉತ್ಸಾಹದಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸಬಹುದು.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ʻಸಾರ್ವಜನಿಕ ಆಡಳಿತದಲ್ಲಿನ ಶ್ರೇಷ್ಠತೆಗಾಗಿ ಪ್ರಧಾನ ಮಂತ್ರಿಗಳ ಪ್ರಶಸ್ತಿʼಗಳನ್ನು ಪ್ರದಾನ ಮಾಡಿದರು. ಸಾಮಾನ್ಯ ನಾಗರಿಕರ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜಿಲ್ಲೆಗಳು ಮತ್ತು ಸಂಸ್ಥೆಗಳು ಮಾಡಿದ ಅಸಾಧಾರಣ ಮತ್ತು ನವೀನ ಕೆಲಸಗಳನ್ನು ಗುರುತಿಸುವ ಉದ್ದೇಶದಿಂದ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಗುರುತಿಸಲಾದ ನಾಲ್ಕು ಆದ್ಯತೆಯ ಯೋಜನೆಗಳಿಗೆ ಸಂಬಂಧಿಸಿದಂತೆ ಮಾಡಿದ ಅನುಕರಣೀಯ ಕೆಲಸಕ್ಕಾಗಿ ಪ್ರಶಸ್ತಿಗಳನ್ನು ನೀಡಲಾಗುವುದು, ಅವೆಂದರೆ: ʻಹರ್ ಘರ್ ಜಲ ಯೋಜನೆʼ ಮೂಲಕ ಸ್ವಚ್ಛ ಜಲ ಉತ್ತೇಜನ; ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ಮೂಲಕ ʻಸ್ವಸ್ಥ ಭಾರತʼವನ್ನು ಉತ್ತೇಜಿಸುವುದು; ʻಸಮಗ್ರ ಶಿಕ್ಷಾʼ ಮೂಲಕ ಸಮಾನ ಮತ್ತು ಎಲ್ಲರನ್ನೂ ಒಳಗೊಂಡ ತರಗತಿಯ ವಾತಾವರಣದೊಂದಿಗೆ ಗುಣಮಟ್ಟದ ಶಿಕ್ಷಣಕ್ಕೆ ಉತ್ತೇಜನ; ʻಮಹತ್ವಾಕಾಂಕ್ಷೆಯ ಜಿಲ್ಲೆ ಯೋಜನೆʼ ಮೂಲಕ ಸಮಗ್ರ ಅಭಿವೃದ್ಧಿ - ʻಸ್ಯಾಚುರೇಶನ್ʼ ವಿಧಾನದ ಆಧಾರದ ಮೇಲೆ ವಿಶೇಷ ಗಮನದೊಂದಿಗೆ ಒಟ್ಟಾರೆ ಪ್ರಗತಿ. ಮೇಲಿನ ನಾಲ್ಕು ಗುರುತಿಸಲಾದ ಕಾರ್ಯಕ್ರಮಗಳಿಗೆ ಎಂಟು ಪ್ರಶಸ್ತಿಗಳನ್ನು ನೀಡಲಾಗುವುದು ಮತ್ತು ಆವಿಷ್ಕಾರಗಳಿಗಾಗಿ ಏಳು ಪ್ರಶಸ್ತಿಗಳನ್ನು ನೀಡಲಾಗುವುದು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'You Are A Champion Among Leaders': Guyana's President Praises PM Modi

Media Coverage

'You Are A Champion Among Leaders': Guyana's President Praises PM Modi
NM on the go

Nm on the go

Always be the first to hear from the PM. Get the App Now!
...
PM Modi congratulates hockey team for winning Women's Asian Champions Trophy
November 21, 2024

The Prime Minister Shri Narendra Modi today congratulated the Indian Hockey team on winning the Women's Asian Champions Trophy.

Shri Modi said that their win will motivate upcoming athletes.

The Prime Minister posted on X:

"A phenomenal accomplishment!

Congratulations to our hockey team on winning the Women's Asian Champions Trophy. They played exceptionally well through the tournament. Their success will motivate many upcoming athletes."