"ಶತಮಾನಗಳ ತಾಳ್ಮೆ, ಅಪರಿಮಿತ ತ್ಯಾಗ, ಪರಿತ್ಯಾಗ ಮತ್ತು ತಪಸ್ಸಿನ ನಂತರ ನಮ್ಮ ಶ್ರೀರಾಮ ಇಲ್ಲಿದ್ದಾನೆ"
"22ನೇ ಜನವರಿ 2024 ಕ್ಯಾಲೆಂಡರ್ ನಲ್ಲಿ ಕೇವಲ ಒಂದು ದಿನಾಂಕವಲ್ಲ, ಇದು ಹೊಸ 'ಕಾಲ ಚಕ್ರ'ದ ಆರಂಭವಾಗಿದೆ"
“ನ್ಯಾಯದ ಘನತೆಯನ್ನು ಕಾಪಾಡಿದ್ದಕ್ಕಾಗಿ ನಾನು ಭಾರತೀಯ ನ್ಯಾಯಾಂಗಕ್ಕೆ ಧನ್ಯವಾದ ಹೇಳುತ್ತೇನೆ. ನ್ಯಾಯದ ಪ್ರತಿರೂಪವಾದ ಭಗವಾನ್ ರಾಮನ ದೇವಾಲಯವನ್ನು ನ್ಯಾಯಯುತವಾಗಿ ನಿರ್ಮಿಸಲಾಗಿದೆ”
"ನನ್ನ 11 ದಿನಗಳ ಉಪವಾಸ ಮತ್ತು ಆಚರಣೆಯಲ್ಲಿ, ನಾನು ಶ್ರೀರಾಮನು ನಡೆದಾಡಿದ ಸ್ಥಳಗಳನ್ನು ಸ್ಪರ್ಶಿಸಲು ಪ್ರಯತ್ನಿಸಿದೆ"
"ಸಮುದ್ರದಿಂದ ಸರಯೂ ನದಿಯವರೆಗೆ, ರಾಮನ ಹೆಸರಿನ ಅದೇ ಹಬ್ಬದ ಉತ್ಸಾಹವು ಎಲ್ಲೆಡೆ ಪಸರಿಸಿದೆ"
“ರಾಮಕಥೆಯು ಅನಂತವಾದುದು ಮತ್ತು ರಾಮಾಯಣಕ್ಕೂ ಅಂತ್ಯವೆಂಬುದಿಲ್ಲ. ರಾಮನ ಆದರ್ಶಗಳು, ಮೌಲ್ಯಗಳು ಮತ್ತು ಬೋಧನೆಗಳು ಎಲ್ಲೆಡೆಯೂ ಒಂದೇ ಆಗಿವೆ”
“ಇದು ರಾಮನ ರೂಪದಲ್ಲಿ ರಾಷ್ಟ್ರೀಯ ಪ್ರಜ್ಞೆಯ ಮಂದಿರವಾಗಿದೆ. ಭಗವಾನ್ ರಾಮನು ಭಾರತದ ನಂಬಿಕೆ, ಬುನಾದಿ, ಆಲೋಚನೆ, ಕಾನೂನು, ಪ್ರಜ್ಞೆ, ಚಿಂತನೆ, ಪ್ರತಿಷ್ಠೆ ಮತ್ತು ವೈಭವವಾಗಿದ್ದಾನೆ"
"ಮುಂದಿನ ಒಂದು ಸಾವಿರ ವರ್ಷಗಳವರೆಗೆ ನಾವು ಭಾರತದ ಅಡಿಪಾಯವನ್ನು ಹಾಕಬೇಕಾಗಿದೆ"
"ನಾವು ನಮ್ಮ ಪ್ರಜ್ಞೆಯನ್ನು ದೇವನಿಂದ ದೇಶಕ್ಕೆ, ರಾಮನಿಂದ ರಾಷ್ಟ್ರಕ್ಕೆ - ದೈವದಿಂದ ರಾಷ್ಟ್ರಕ್ಕೆ ವಿಸ್ತರಿಸಬೇಕು"
"ಈ ಭವ್ಯವಾದ ದೇವಾಲಯವು ವೈಭವೋಪೇತವಾದ ಭಾರತದ ಉದಯಕ್ಕೆ ಸಾಕ್ಷಿಯಾಗಲಿದೆ"
"ಇದು ಭಾರತದ ಸಮಯ ಮತ್ತು ನಾವು ಮುನ್ನಡೆಯುತ್ತಿದ್ದೇವೆ"
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಿದರು. ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ಕೊಡುಗೆ ನೀಡಿದ ಶ್ರಮಜೀವಿಗಳೊಂದಿಗೆ ಶ್ರೀ ಮೋದಿ ಸಂವಾದ ನಡೆಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಿದರು. ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ಕೊಡುಗೆ ನೀಡಿದ ಶ್ರಮಜೀವಿಗಳೊಂದಿಗೆ ಶ್ರೀ ಮೋದಿ ಸಂವಾದ ನಡೆಸಿದರು.

 

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಶತಮಾನಗಳ ನಂತರ ನಮ್ಮ ರಾಮ ಆಗಮಿಸಿದ್ದಾನೆ ಎಂದು ಉದ್ಗರಿಸಿದರು. "ಶತಮಾನಗಳ ತಾಳ್ಮೆ, ಅಪರಿಮಿತ ತ್ಯಾಗ, ಪರಿತ್ಯಾಗ ಮತ್ತು ತಪಸ್ಸಿನ ನಂತರ ನಮ್ಮ ಭಗವಾನ್ ರಾಮ ಬಂದಿದ್ದಾನೆ" ಎಂದ ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ನಾಗರಿಕರನ್ನು ಅಭಿನಂದಿಸಿದರು. 'ಗರ್ಭಗುಡಿಯೊಳಗಿನ ದೈವಿಕತೆಯ ಅನುಭವವನ್ನು ಪದಗಳಲ್ಲಿ ಹೇಳಲಾಗುವುದಿಲ್ಲ ಮತ್ತು ನನ್ನ ದೇಹವು ಚೈತನ್ಯದಿಂದ ಮಿಡಿಯುತ್ತಿದೆ ಮತ್ತು ಪ್ರಾಣ ಪ್ರತಿಷ್ಠಾಪನೆಯ ಕ್ಷಣಕ್ಕೆ ಮನಸ್ಸು ಮುಡಿಪಾಗಿದೆʼ ಎಂದು ಪ್ರಧಾನಿ ಹೇಳಿದರು. “ನಮ್ಮ ರಾಮ ಲಲ್ಲಾ ಇನ್ನು ಮುಂದೆ ಟೆಂಟ್ ನಲ್ಲಿ ವಾಸಿಸುವುದಿಲ್ಲ. ಈ ದೈವಿಕ ಮಂದಿರವು ಈಗ ಅವರ ಮನೆಯಾಗಲಿದೆ”ಎಂದರು. ಇಂದಿನ ಘಟನೆಗಳನ್ನು ದೇಶ ಮತ್ತು ಪ್ರಪಂಚದಾದ್ಯಂತದ ರಾಮಭಕ್ತರು ಅನುಭವಿಸಿದ್ದಾರೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು. "ಈ ಕ್ಷಣವು ಅಲೌಕಿಕವಾಗಿದೆ ಮತ್ತು ಪವಿತ್ರವಾಗಿದೆ. ವಾತಾವರಣ, ಪರಿಸರ ಮತ್ತು ಶಕ್ತಿಯು ನಮ್ಮ ಮೇಲೆ ಶ್ರೀರಾಮನ ಆಶೀರ್ವಾದ ಇರುವುದನ್ನು ಸೂಚಿಸುತ್ತದೆ" ಎಂದು ಶ್ರೀ ಮೋದಿ ಹೇಳಿದರು.

ಜನವರಿ 22ರ ಬೆಳಗಿನ ಸೂರ್ಯನು ತನ್ನೊಂದಿಗೆ ಹೊಸ ಕಾಂತಿಯನ್ನು ತಂದಿದ್ದಾನೆ ಎಂದು ಅವರು ಒತ್ತಿ ಹೇಳಿದರು. "22ನೇ ಜನವರಿ 2024 ಕ್ಯಾಲೆಂಡರ್ ನಲ್ಲಿ ಕೇವಲ ಒಂದು ದಿನಾಂಕವಲ್ಲ, ಇದು ಹೊಸ 'ಕಾಲ ಚಕ್ರ'ದ ಆರಂಭವಾಗಿದೆ" ಎಂದು ಅವರು ಹೇಳಿದರು. ರಾಮ ಜನ್ಮಭೂಮಿ ಮಂದಿರದ ಭೂಮಿ ಪೂಜೆ ನೆರವೇರಿದ ನಂತರ ಮತ್ತು ಅಭಿವೃದ್ಧಿ ಕಾರ್ಯಗಳ ಪ್ರಗತಿಯಿಂದ ನಾಗರಿಕರಲ್ಲಿ ಹೊಸ ಚೈತನ್ಯ ತುಂಬಿತು, ಇಡೀ ರಾಷ್ಟ್ರದಲ್ಲಿ ಸಂತೋಷ ಮತ್ತು ಹಬ್ಬದ ಹುರುಪು ನಿರಂತರವಾಗಿ ಹೆಚ್ಚುತ್ತಿದೆ ಎಂದು ಒತ್ತಿ ಹೇಳಿದರು. "ಇಂದು ನಾವು ಶತಮಾನಗಳ ತಾಳ್ಮೆಯ ಪರಂಪರೆಯನ್ನು ಪಡೆದಿದ್ದೇವೆ, ಇಂದು ನಾವು ಶ್ರೀರಾಮನ ಮಂದಿರವನ್ನು ಪಡೆದುಕೊಂಡಿದ್ದೇವೆ" ಎಂದು ಪ್ರಧಾನಮಂತ್ರಿ ಹೇಳಿದರು. ಗುಲಾಮಗಿರಿಯ ಮನಸ್ಥಿತಿಯ ಸಂಕೋಲೆಗಳನ್ನು ಮುರಿದು ಗತಕಾಲದ ಅನುಭವಗಳಿಂದ ಸ್ಫೂರ್ತಿ ಪಡೆಯುವ ರಾಷ್ಟ್ರವೇ ಇತಿಹಾಸವನ್ನು ಬರೆಯುತ್ತದೆ ಎಂದು ಅವರು ಒತ್ತಿ ಹೇಳಿದರು. ಇಂದಿನ ದಿನಾಂಕವನ್ನು ಇನ್ನು ಮುಂದೆ ಸಾವಿರ ವರ್ಷಗಳ ನಂತರವೂ ಚರ್ಚಿಸಲಾಗುವುದು ಮತ್ತು ಭಗವಾನ್ ರಾಮನ ಆಶೀರ್ವಾದದಿಂದ ನಾವು ಈ ಮಹತ್ವದ ಸಂದರ್ಭಕ್ಕೆ ಸಾಕ್ಷಿಯಾಗಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. "ದಿನಗಳು, ದಿಕ್ಕುಗಳು, ಆಕಾಶಗಳು ಮತ್ತು ಎಲ್ಲವೂ ಇಂದು ದೈವತ್ವದಿಂದ ತುಂಬಿವೆ" ಎಂದರು. ಇದು ಸಾಮಾನ್ಯ ಕಾಲದ ಅವಧಿಯಲ್ಲ, ಕಾಲದ ಮೇಲೆ ಅಚ್ಚೊತ್ತಿರುವ ಅಳಿಸಲಾಗದ ನೆನಪಿನ ಹಾದಿ ಎಂದು ಪ್ರಧಾನಿ ಹೇಳಿದರು.

 

ಶ್ರೀರಾಮನ ಪ್ರತಿಯೊಂದು ಕೆಲಸದಲ್ಲೂ ಶ್ರೀ ಹನುಮಾನನ ಉಪಸ್ಥಿತಿಯ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು ಶ್ರೀ ಹನುಮಾನ್ ಮತ್ತು ಹನುಮಾನ್ ಗರ್ಹಿಗಳಿಗೆ ನಮಿಸಿದರು. ಅವರು ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಜಾನಕಿ ಮಾತೆಗೆ ನಮಸ್ಕರಿಸಿದರು. ಇಂದಿನ ದಿನವನ್ನು ನೋಡಲು ವಿಳಂಬವಾಗಿದ್ದಕ್ಕಾಗಿ ಪ್ರಧಾನಮಂತ್ರಿ ಪ್ರಭು ಶ್ರೀರಾಮರಲ್ಲಿ ಕ್ಷಮೆಯಾಚಿಸಿದರು ಮತ್ತು ಇಂದು ಆ ನಿರ್ವಾತವು ತುಂಬಿರುವುದರಿಂದ ಖಂಡಿತವಾಗಿಯೂ ಶ್ರೀರಾಮನು ನಮ್ಮನ್ನು ಕ್ಷಮಿಸುತ್ತಾನೆ ಎಂದು ಹೇಳಿದರು.

ಸಂತ ತುಳಸಿದಾಸರ ‘ತ್ರೇತಾ ಯುಗʼದಲ್ಲಿ ಶ್ರೀರಾಮನ ಪುನರಾಗಮನವನ್ನು ಸ್ಮರಿಸಿಕೊಂಡ ಪ್ರಧಾನಿ, ಆ ಕಾಲದ ಅಯೋಧ್ಯೆ ಅನುಭವಿಸಿರಬಹುದಾದ ಸಂತೋಷವನ್ನು ಸ್ಮರಿಸಿದರು. “ನಂತರ ಶ್ರೀರಾಮನೊಂದಿಗಿನ ಅಗಲಿಕೆಯು 14 ವರ್ಷಗಳು ನಡೆಯಿತು ಮತ್ತು ಇನ್ನೂ ತಾಳಲಸಾಧ್ಯವಾಗಿತ್ತು. ಈ ಯುಗದಲ್ಲಿ ಅಯೋಧ್ಯೆ ಮತ್ತು ದೇಶವಾಸಿಗಳು ನೂರಾರು ವರ್ಷಗಳ ಅಗಲಿಕೆಯನ್ನು ಅನುಭವಿಸಿದರು”ಎಂದು ಅವರು ಹೇಳಿದರು. ಸಂವಿಧಾನದ ಮೂಲ ಪ್ರತಿಯಲ್ಲಿ ಶ್ರೀರಾಮನ ಉಪಸ್ಥಿತಿಯ ಹೊರತಾಗಿಯೂ, ಸ್ವಾತಂತ್ರ್ಯದ ನಂತರ ಸುದೀರ್ಘ ಕಾನೂನು ಹೋರಾಟವನ್ನು ನಡೆಸಲಾಯಿತು ಎಂದು ಅವರು ಹೇಳಿದರು. ನ್ಯಾಯದ ಘನತೆಯನ್ನು ಉಳಿಸಿದ್ದಕ್ಕಾಗಿ ಪ್ರಧಾನಮಂತ್ರಿಯವರು ಭಾರತದ ನ್ಯಾಯಾಂಗಕ್ಕೆ ಧನ್ಯವಾದಗಳನ್ನು ತಿಳಿಸಿದರು. ನ್ಯಾಯದ ಸಾಕಾರ ರೂಪವಾದ ಶ್ರೀರಾಮನ ಮಂದಿರವನ್ನು ನ್ಯಾಯಯುತ ವಿಧಾನಗಳ ಮೂಲಕ ನಿರ್ಮಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು.

 

ಸಣ್ಣ ಹಳ್ಳಿಗಳು ಸೇರಿದಂತೆ ಇಡೀ ರಾಷ್ಟ್ರದಲ್ಲಿ ಮೆರವಣಿಗೆಗಳು ನಡೆಯುತ್ತಿವೆ ಮತ್ತು ದೇವಾಲಯಗಳಲ್ಲಿ ಸ್ವಚ್ಛತಾ ಅಭಿಯಾನಗಳನ್ನು ನಡೆಸಲಾಗುತ್ತಿದೆ ಎಂದು ಪ್ರಧಾನಿ ಮಾಹಿತಿ ಹೇಳಿದರು. “ಇಡೀ ರಾಷ್ಟ್ರ ಇಂದು ದೀಪಾವಳಿಯನ್ನು ಆಚರಿಸುತ್ತಿದೆ. ಪ್ರತಿ ಮನೆಯಲ್ಲೂ ಸಂಜೆ ರಾಮ ಜ್ಯೋತಿಯನ್ನು ಬೆಳಗಿಸಲು ಜನರು ಸಿದ್ಧರಾಗಿದ್ದಾರೆ”ಎಂದು ಶ್ರೀ ಮೋದಿ ಹೇಳಿದರು. ರಾಮಸೇತುವಿನ ಆರಂಭದ ಬಿಂದುವಾದ ಅರಿಚಲ್ ಮುನೈಗೆ ನಿನ್ನೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡ ಪ್ರಧಾನಿ, ಇದು ಕಾಲಚಕ್ರವನ್ನು ಬದಲಾಯಿಸಿದ ಕ್ಷಣ ಎಂದು ಹೇಳಿದರು. ಇಂದಿನ ಕ್ಷಣವೂ ಕಾಲದ ವೃತ್ತವನ್ನು ಬದಲಿಸಿ ಮುನ್ನಡೆಯುವ ಕ್ಷಣವಾಗಿದೆ ಎಂಬ ನಂಬಿಕೆ ನನಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ತಮ್ಮ 11 ದಿನಗಳ ಅನುಷ್ಠಾನದ ಸಮಯದಲ್ಲಿ, ಶ್ರೀರಾಮನು ಕಾಲಿಟ್ಟ ಎಲ್ಲಾ ಸ್ಥಳಗಳ ಮುಂದೆ ನಮಸ್ಕರಿಸಲು ಪ್ರಯತ್ನಿಸಿದ್ದಾಗಿ ಶ್ರೀ ಮೋದಿ ತಿಳಿಸಿದರು. ನಾಸಿಕ್ನ ಪಂಚವಟಿ ಧಾಮ, ಕೇರಳದ ತ್ರಿಪ್ರಯಾರ್ ದೇವಾಲಯ, ಆಂಧ್ರಪ್ರದೇಶದ ಲೇಪಾಕ್ಷಿ, ಶ್ರೀರಂಗಂನ ಶ್ರೀ ರಂಗನಾಥಸ್ವಾಮಿ ದೇವಾಲಯ, ರಾಮೇಶ್ವರಂನ ಶ್ರೀ ರಾಮನಾಥಸ್ವಾಮಿ ದೇವಾಲಯ ಮತ್ತು ಧನುಷ್ಕೋಡಿಯನ್ನು ಪ್ರಸ್ತಾಪಿಸಿದ ಪ್ರಧಾನಿ, ಸಮುದ್ರದಿಂದ ಸರಯೂ ನದಿಯವರೆಗಿನ ಪ್ರಯಾಣಕ್ಕೆ ಕೃತಜ್ಞತೆ ಸಲ್ಲಿಸಿದರು. "ಸಮುದ್ರದಿಂದ ಸರಯೂ ನದಿಯವರೆಗೆ, ರಾಮನ ಹೆಸರಿನ ಹಬ್ಬದ ಉತ್ಸಾಹವು ಎಲ್ಲೆಡೆ ಪಸರಿಸಿದೆ" ಎಂದು ಅವರು ಹೇಳಿದರು. "ಭಗವಾನ್ ರಾಮನು ಭಾರತದ ಆತ್ಮದ ಪ್ರತಿಯೊಂದು ಕಣದೊಂದಿಗೂ ಸಂಪರ್ಕ ಹೊಂದಿದ್ದಾನೆ. ರಾಮನು ಭಾರತೀಯರ ಹೃದಯದಲ್ಲಿ ನೆಲೆಸಿದ್ದಾನೆ” ಎಂದು ಅವರು ಹೇಳಿದರು. ಭಾರತದಲ್ಲಿ ಎಲ್ಲಿಯಾದರೂ ಪ್ರತಿಯೊಬ್ಬರ ಅಂತಃಸಾಕ್ಷಿಯಲ್ಲೂ ಏಕತೆಯ ಭಾವನೆಯನ್ನು ಕಾಣಬಹುದು ಮತ್ತು ಸಾಮೂಹಿಕತೆಗೆ ಇದಕ್ಕಿಂತ ಪರಿಪೂರ್ಣವಾದ ಸೂತ್ರ ಮತ್ತೊಂದಿಲ್ಲ ಎಂದು ಪ್ರಧಾನಿ ಹೇಳಿದರು.

ಶ್ರೀರಾಮ ಕಥಾವನ್ನು ಹಲವು ಭಾಷೆಗಳಲ್ಲಿ ಕೇಳಿದ ತಮ್ಮ ಅನುಭವವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಶ್ರೀ ರಾಮನು ನೆನಪುಗಳು, ಸಂಪ್ರದಾಯಗಳ ಹಬ್ಬಗಳಲ್ಲಿ ಇದ್ದಾನೆ ಎಂದು ಹೇಳಿದರು. “ಪ್ರತಿ ಯುಗದಲ್ಲೂ ಜನರು ರಾಮನನ್ನು ಬದುಕಿದ್ದಾರೆ. ಅವರು ತಮ್ಮ ಶೈಲಿ ಮತ್ತು ಮಾತುಗಳಲ್ಲಿ ರಾಮನನ್ನು ವ್ಯಕ್ತಪಡಿಸಿದ್ದಾರೆ. ಈ ‘ರಾಮ್ ರಸ್’ಬದುಕಿನ ಹರಿವಿನಂತೆಯೇ ನಿರಂತರವಾಗಿ ಪ್ರವಹಿಸುತ್ತಿರುತ್ತದೆ. ರಾಮ ಕಥಾ ಅನಂತವಾದುದು ಮತ್ತು ರಾಮಾಯಣವೂ ಅನಂತವಾದುದು. ರಾಮನ ಆದರ್ಶಗಳು, ಮೌಲ್ಯಗಳು ಮತ್ತು ಬೋಧನೆಗಳು ಎಲ್ಲೆಡೆ ಒಂದೇ ಆಗಿರುತ್ತವೆ: ಎಂದು ಪ್ರಧಾನಿ ಹೇಳಿದರು.

ಇಂದಿನ ದಿನವನ್ನು ಸಾಧ್ಯವಾಗಿಸಲು ಕಾರಣರಾದವರ ತ್ಯಾಗಕ್ಕೆ ಪ್ರಧಾನಿಯವರು ಕೃತಜ್ಞತೆ ಸಲ್ಲಿಸಿದರು. ಸಂತರು, ಕರಸೇವಕರು ಮತ್ತು ರಾಮಭಕ್ತರಿಗೆ ಅವರು ನಮನ ಸಲ್ಲಿಸಿದರು.

 

“ಇವತ್ತಿನ ಸಂದರ್ಭವು ಕೇವಲ ಸಂಭ್ರಮಾಚರಣೆಯ ಕ್ಷಣವಲ್ಲ, ಇದು ಭಾರತೀಯ ಸಮಾಜದ ಪ್ರಬುದ್ಧತೆಯ ಸಾಕ್ಷಾತ್ಕಾರದ ಕ್ಷಣವಾಗಿದೆ. ನಮಗೆ, ಇದು ವಿಜಯದ ಸಂದರ್ಭ ಮಾತ್ರವಲ್ಲ, ನಮ್ರತೆಯ ಸಂದರ್ಭವೂ ಆಗಿದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು. ಇತಿಹಾಸದ ಗಂಟುಗಳ ಬಗ್ಗೆ ವಿವರಿಸಿದ ಪ್ರಧಾನಮಂತ್ರಿಯವರು, ಒಂದು ರಾಷ್ಟ್ರದ ಇತಿಹಾಸದೊಂದಿಗಿನ ಹೋರಾಟದ ಫಲಿತಾಂಶವು ಸಂತೋಷವನ್ನು ನೀಡುವುದು ವಿರಳವಾಗಿರುತ್ತದೆ ಎಂದು ತಿಳಿಸಿದರು. "ಆದರೂ, ನಮ್ಮ ದೇಶವು ಈ ಇತಿಹಾಸದ ಗಂಟನ್ನು ಬಿಚ್ಚಿರುವ ಗಂಭೀರತೆ ಮತ್ತು ಸೂಕ್ಷ್ಮತೆಯು ನಮ್ಮ ಭವಿಷ್ಯವು ನಮ್ಮ ಭೂತಕಾಲಕ್ಕಿಂತ ಹೆಚ್ಚು ಸುಂದರವಾಗಿರುತ್ತದೆ ಎಂಬುದನ್ನು ತೋರಿಸುತ್ತದೆ." ಎಂದು ಅವರು ಹೇಳಿದರು. ಕೆಟ್ಟದ್ದನ್ನು ನುಡಿಯುವವರ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಅಂತಹ ಜನರು ನಮ್ಮ ಸಾಮಾಜಿಕ ನೀತಿಯ ಧಾರ್ಮಿಕತೆಯನ್ನು ಅರಿತುಕೊಂಡಿಲ್ಲ ಎಂದು ಹೇಳಿದರು. “ರಾಮಲಲ್ಲಾನ ಈ ಮಂದಿರದ ನಿರ್ಮಾಣವು ಶಾಂತಿ, ತಾಳ್ಮೆ, ಸಾಮರಸ್ಯ ಮತ್ತು ಭಾರತೀಯ ಸಮಾಜದ ಸಮನ್ವಯದ ಸಂಕೇತವಾಗಿದೆ. ಈ ನಿರ್ಮಾಣವು ಯಾವುದೇ ಬೆಂಕಿಗೆ ಜನ್ಮ ನೀಡುತ್ತಿಲ್ಲ, ಆದರೆ ಶಕ್ತಿಗೆ ಜನ್ಮ ನೀಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ರಾಮಮಂದಿರವು ಸಮಾಜದ ಪ್ರತಿಯೊಂದು ವರ್ಗಕ್ಕೂ ಉಜ್ವಲ ಭವಿಷ್ಯದ ಹಾದಿಯಲ್ಲಿ ಮುನ್ನಡೆಯಲು ಸ್ಫೂರ್ತಿಯನ್ನು ತಂದಿದೆ”ಎಂದು ಅವರು ಹೇಳಿದರು. ರಾಮನು ಬೆಂಕಿಯಲ್ಲ, ಅವನು ಶಕ್ತಿ, ಅವನು ಸಂಘರ್ಷವಲ್ಲ, ಪರಿಹಾರ, ರಾಮನು ನಮಗೆ ಮಾತ್ರವಲ್ಲ, ಎಲ್ಲರಿಗೂ ಸೇರಿದವನು, ರಾಮನು ಕೇವಲ ಪ್ರಸ್ತುತವಲ್ಲ, ಆತ ಅನಂತನಾಗಿದ್ದಾನೆ.” ಎಂದು ಪ್ರಧಾನಿ ಹೇಳಿದರು.

 

ಇಡೀ ಜಗತ್ತು ಪ್ರಾಣ ಪ್ರತಿಷ್ಠಾಪನೆಯೊಂದಿಗೆ ಸಂಪರ್ಕ ಹೊಂದಿದೆ ಮತ್ತು ರಾಮನ ಸರ್ವವ್ಯಾಪಿತ್ವವನ್ನು ನೋಡಬಹುದು ಎಂದು ಪ್ರಧಾನಿ ಒತ್ತಿ ಹೇಳಿದರು. ಅನೇಕ ದೇಶಗಳಲ್ಲಿ ಇದೇ ರೀತಿಯ ಆಚರಣೆಗಳನ್ನು ಕಾಣಬಹುದಾಗಿದ್ದು, ಅಯೋಧ್ಯೆಯ ಉತ್ಸವವು ರಾಮಾಯಣದ ಜಾಗತಿಕ ಸಂಪ್ರದಾಯಗಳ ಆಚರಣೆಯಾಗಿ ಮಾರ್ಪಟ್ಟಿದೆ ಎಂದು ಹೇಳಿದರು. ‘ವಸುಧೈವ ಕುಟುಂಬಕಂʼಕಲ್ಪನೆಯೇ ರಾಮ ಲಲ್ಲಾನ ಪ್ರಖ್ಯಾತಿಯಾಗಿದೆ”ಎಂದು ಅವರು ಹೇಳಿದರು.

 

ಇದು ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಮಾತ್ರವಲ್ಲ, ಶ್ರೀರಾಮನ ರೂಪದಲ್ಲಿ ಪ್ರಕಟವಾದ ಭಾರತೀಯ ಸಂಸ್ಕೃತಿಯಲ್ಲಿನ ಅಚಲವಾದ ನಂಬಿಕೆಯ ಪ್ರತಿಷ್ಠಾಪನೆಯಾಗಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಇದು ಮಾನವೀಯ ಮೌಲ್ಯಗಳು ಮತ್ತು ಅತ್ಯುನ್ನತ ಆದರ್ಶಗಳ ಸಾಕಾರವಾಗಿದ್ದು, ಇದು ಇಡೀ ಪ್ರಪಂಚದ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು. ಸರ್ವರ ಕಲ್ಯಾಣದ ಸಂಕಲ್ಪಗಳು ಇಂದು ರಾಮಮಂದಿರದ ರೂಪವನ್ನು ಪಡೆದಿವೆ ಮತ್ತು ಇದು ಕೇವಲ ದೇವಾಲಯವಾಗಿರದೆ ಭಾರತದ ದೃಷ್ಟಿ, ತತ್ವ ಮತ್ತು ಮಾರ್ಗವಾಗಿದೆ ಎಂದು ಪ್ರಧಾನಿ ಹೇಳಿದರು. “ಇದು ರಾಮನ ರೂಪದಲ್ಲಿ ರಾಷ್ಟ್ರೀಯ ಪ್ರಜ್ಞೆಯ ದೇವಾಲಯವಾಗಿದೆ. ಭಗವಾನ್ ರಾಮನು ಭಾರತದ ನಂಬಿಕೆ, ಬುನಾದಿ, ಆಲೋಚನೆ, ಕಾನೂನು, ಪ್ರಜ್ಞೆ, ಚಿಂತನೆ, ಪ್ರತಿಷ್ಠೆ ಮತ್ತು ವೈಭವವಾಗಿದೆ. ರಾಮ ಎಂದರೆ ಹರಿವು, ರಾಮ ಎಂದರೆ ಪರಿಣಾಮ. ರಾಮ ಎಂದರೆ ನೀತಿ. ರಾಮ ಎಂದರೆ ಶಾಶ್ವತ. ರಾಮ ನಿರಂತರವಾದುದು. ರಾಮನು ವಿಭು. ರಾಮನು ಸರ್ವವ್ಯಾಪಿ, ಜಗತ್ತು, ಬ್ರಹ್ಮಾಂಡದ ಆತ್ಮ”ಎಂದು ಪ್ರಧಾನಮಂತ್ರಿ ಹೇಳಿದರು. ಶ್ರೀರಾಮನ ಪ್ರತಿಷ್ಠಾಪನೆಯ ಪ್ರಭಾವವನ್ನು ಸಾವಿರಾರು ವರ್ಷಗಳವರೆಗೆ ಅನುಭವಿಸಬಹುದು ಎಂದು ಅವರು ಹೇಳಿದರು. ಮಹರ್ಷಿ ವಾಲ್ಮೀಕಿಯನ್ನು ಉಲ್ಲೇಖಿಸಿದ ಪ್ರಧಾನಿ, ರಾಮನು ಹತ್ತು ಸಾವಿರ ವರ್ಷಗಳ ಕಾಲ ರಾಜ್ಯವನ್ನು ಆಳಿದನು, ಇದು ಸಾವಿರಾರು ವರ್ಷಗಳ ಕಾಲ ರಾಮರಾಜ್ಯ ಸ್ಥಾಪನೆಯನ್ನು ಸೂಚಿಸುತ್ತದೆ ಎಂದು ಹೇಳಿದರು. “ತ್ರೇತಾಯುಗದಲ್ಲಿ ರಾಮ ಬಂದಾಗ ಸಾವಿರಾರು ವರ್ಷಗಳ ಕಾಲ ರಾಮರಾಜ್ಯ ಸ್ಥಾಪನೆಯಾಯಿತು. ರಾಮನು ಸಾವಿರಾರು ವರ್ಷಗಳಿಂದ ಜಗತ್ತಿಗೆ ಮಾರ್ಗದರ್ಶನ ನೀಡುತ್ತಿದ್ದಾನೆ”ಎಂದು ಪ್ರಧಾನಿ ಮೋದಿ ಹೇಳಿದರು.

 

ಭವ್ಯವಾದ ರಾಮಮಂದಿರದ ಸಾಕ್ಷಾತ್ಕಾರದ ನಂತರ ಮುಂದಿನ ಹಾದಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರತಿಯೊಬ್ಬ ರಾಮಭಕ್ತರಿಗೆ ಪ್ರಧಾನಮಂತ್ರಿ ಹೇಳಿದರು. “ಇಂದು, ಕಾಲಚಕ್ರವು ಬದಲಾಗುತ್ತಿದೆ ಎಂದು ನಾನು ಮನಃಪೂರ್ವಕವಾಗಿ ಭಾವಿಸುತ್ತೇನೆ. ಈ ನಿರ್ಣಾಯಕ ಪಥದ ಶಿಲ್ಪಿಗಳಾಗಿ ನಮ್ಮ ಪೀಳಿಗೆಯನ್ನು ಆಯ್ಕೆ ಮಾಡಿರುವುದು ಸಂತೋಷ ತರುವ ಕಾಕತಾಳೀಯ ವಿಷಯವಾಗಿದೆ. ಪ್ರಧಾನಿ ಮೋದಿ ಅವರು ಪ್ರಸ್ತುತ ಯುಗದ ಮಹತ್ವವನ್ನು ಒತ್ತಿಹೇಳಿದರು. ಈ ಸಮಯವೇ ಸರಿಯಾದ ಸಮಯ ಎಂಬ ತಮ್ಮ ಸಾಲನ್ನು ಪುನರುಚ್ಚರಿಸಿದರು, “ಮುಂದಿನ ಒಂದು ಸಾವಿರ ವರ್ಷಗಳವರೆಗೆ ನಾವು ಭಾರತದ ಅಡಿಪಾಯವನ್ನು ಹಾಕಬೇಕಾಗಿದೆ. ದೇವಾಲಯದಿಂದ ಮುಂದೆ ಸಾಗುತ್ತಾ, ಈಗ ನಾವೆಲ್ಲರೂ ದೇಶವಾಸಿಗಳು ಈ ಕ್ಷಣದಿಂದಲೇ ಬಲಿಷ್ಠ, ಸಮರ್ಥ, ಭವ್ಯ ಮತ್ತು ದೈವಿಕ ಭಾರತವನ್ನು ನಿರ್ಮಿಸಲು ಪ್ರತಿಜ್ಞೆ ಮಾಡೋಣ”ಎಂದು ಪ್ರಧಾನಮಂತ್ರಿಯವರು ದೇಶವಾಸಿಗಳನ್ನು ಉತ್ತೇಜಿಸಿದರು. ಇದಕ್ಕಾಗಿ ರಾಷ್ಟ್ರದ ಆತ್ಮಸಾಕ್ಷಿಯಲ್ಲಿ ರಾಮನ ಆದರ್ಶ ಇರಬೇಕಾದುದು ಮುಖ್ಯ ಎಂದು ಅವರು ಹೇಳಿದರು.

ದೇವನಿಂದ ದೇಶಕ್ಕೆ, ರಾಮನಿಂದ ರಾಷ್ಟ್ರಕ್ಕೆ - ದೈವಿಕತೆಯಿಂದ ರಾಷ್ಟ್ರಕ್ಕೆ ತಮ್ಮ ಪ್ರಜ್ಞೆಯನ್ನು ವಿಸ್ತರಿಸುವಂತೆ ಪ್ರಧಾನಿ ದೇಶವಾಸಿಗಳನ್ನು ಕೇಳಿಕೊಂಡರು. ಶ್ರೀ ಹನುಮಂತನ ಸೇವೆ, ಭಕ್ತಿ ಮತ್ತು ಸಮರ್ಪಣೆಯಿಂದ ಕಲಿಯುವಂತೆ ಅವರು ವಿನಂತಿಸಿದರು. "ಪ್ರತಿಯೊಬ್ಬ ಭಾರತೀಯನ ಭಕ್ತಿ, ಸೇವೆ ಮತ್ತು ಸಮರ್ಪಣೆಯ ಈ ಭಾವನೆಗಳು ಸಮರ್ಥ, ಭವ್ಯವಾದ ಮತ್ತು ದೈವಿಕ ಭಾರತಕ್ಕೆ ಆಧಾರವಾಗುತ್ತವೆ" ಎಂದು ಅವರು ಹೇಳಿದರು. ‘ರಾಮನು ಬರುತ್ತಾನೆ’ಎಂಬ ಶಬರಿ ಮಾತೆಯ ನಂಬಿಕೆಯು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಭವ್ಯವಾದ ಮತ್ತು ದೈವಿಕ ಭಾರತದ ಆಧಾರವಾಗಿದೆ ಎಂದು ಹೇಳಿದರು. ನಿಷಾದರಾಜನ ಬಗ್ಗೆ ರಾಮನ ವಾತ್ಸಲ್ಯವು ಎಲ್ಲರೂ ಒಂದೇ ಎಂದು ತೋರಿಸುತ್ತದೆ ಮತ್ತು ಏಕತೆ ಮತ್ತು ಒಗ್ಗಟ್ಟಿನ ಈ ಭಾವನೆಯು ಸಮರ್ಥ, ಭವ್ಯವಾದ ಮತ್ತು ದೈವಿಕ ಭಾರತದ ಆಧಾರವಾಗಿರುತ್ತದೆ ಎಂದು ಪ್ರಧಾನಿ ಹೇಳಿದರು.

 

ಇಂದು ದೇಶದಲ್ಲಿ ಹತಾಶೆಗೆ ಅವಕಾಶವಿಲ್ಲ ಎಂದು ಪ್ರಧಾನಿ ತಿಳಿಸಿದರು. ಅಳಿಲಿನ ಕಥೆಯನ್ನು ಪ್ರಸ್ತಾಪಿಸಿದ ಪ್ರಧಾನಿ, ತಮ್ಮನ್ನು ತಾವು ಚಿಕ್ಕವರು ಮತ್ತು ಸಾಮಾನ್ಯರು ಎಂದು ಪರಿಗಣಿಸುವವರು ಅಳಿಲಿನ ಕೊಡುಗೆಯನ್ನು ನೆನಪಿಸಿಕೊಳ್ಳಬೇಕು ಮತ್ತು ಹಿಂಜರಿಕೆಯನ್ನು ತೊಡೆದುಹಾಕಬೇಕು ಎಂದು ಹೇಳಿದರು. ದೊಡ್ಡದಾಗಲೀ, ಸಣ್ಣದಾಗಲೀ ಪ್ರತಿಯೊಂದು ಪ್ರಯತ್ನಕ್ಕೂ ಅದರ ಶಕ್ತಿ ಮತ್ತು ಕೊಡುಗೆ ಇರುತ್ತದೆ ಎಂದು ಅವರು ಹೇಳಿದರು. “ಸಬ್ಕಾ ಪ್ರಯಾಸ್ ಮನೋಭಾವವು ಬಲವಾದ, ಸಮರ್ಥ, ಭವ್ಯವಾದ ಮತ್ತು ದೈವಿಕ ಭಾರತದ ಆಧಾರವಾಗುತ್ತದೆ ಮತ್ತು ಇದು ದೇವರಿಂದ ದೇಶದ ಪ್ರಜ್ಞೆ ಮತ್ತು ರಾಮನಿಂದ ರಾಷ್ಟ್ರದ ಪ್ರಜ್ಞೆಯ ವಿಸ್ತರಣೆಯಾಗಿದೆ”ಎಂದು ಪ್ರಧಾನಿ ಹೇಳಿದರು.

ಅಗಾಧ ಜ್ಞಾನ ಮತ್ತು ಶಕ್ತಿಯನ್ನು ಹೊಂದಿದ್ದ ಲಂಕಾಧಿಪತಿ ರಾವಣನೊಂದಿಗೆ ಹೋರಾಡುವಾಗ ತನ್ನ ಸನ್ನಿಹಿತವಾದ ಸೋಲಿನ ಬಗ್ಗೆ ತಿಳಿದಿದ್ದ ಜಟಾಯುವಿನ ನಿಷ್ಠೆಯ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಿ, ಅಂತಹ ಕರ್ತವ್ಯದ ಪರಾಕಾಷ್ಠೆಯು ಸಮರ್ಥ ಮತ್ತು ದೈವಿಕ ಭಾರತಕ್ಕೆ ಆಧಾರವಾಗಿದೆ ಎಂದು ಹೇಳಿದರು. ಜೀವನದ ಪ್ರತಿ ಕ್ಷಣವನ್ನು ರಾಷ್ಟ್ರ ನಿರ್ಮಾಣಕ್ಕೆ ಮೀಸಲಿಡುವುದಾಗಿ ಶ್ರೀ ಮೋದಿ ಪ್ರತಿಜ್ಞೆ ಮಾಡಿದರು. “ರಾಮನ ಕೆಲಸ, ರಾಷ್ಟ್ರದ ಕೆಲಸ, ಸಮಯದ ಪ್ರತಿಯೊಂದು ಕ್ಷಣ, ದೇಹದ ಪ್ರತಿಯೊಂದು ಕಣವೂ ರಾಮನ ಸಮರ್ಪಣೆಯನ್ನು ರಾಷ್ಟ್ರಕ್ಕೆ ಸಮರ್ಪಿಸುವ ಗುರಿಯೊಂದಿಗೆ ಬೆಸೆಯುತ್ತದೆ” ಎಂದು ಅವರು ಹೇಳಿದರು.

 

ಸ್ವಾರ್ಥದಿಂದಾಚೆಗೆ ಬದುಕುವ ತಮ್ಮ ಧ್ಯೇಯದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಭಗವಾನ್ ರಾಮನ ನಮ್ಮ ಆರಾಧನೆಯು 'ನಾನು' ಇಂದ 'ನಾವು' ವರೆಗೆ ಇಡೀ ಸೃಷ್ಟಿಗೆ ಇರಬೇಕು. ನಮ್ಮ ಪ್ರಯತ್ನಗಳು ವಿಕಸಿತ ಭಾರತ ನಿರ್ಮಾಣಕ್ಕೆ ಸಮರ್ಪಿತವಾಗಬೇಕು ಎಂದು ಹೇಳಿದರು.

ಇಂದಿನ ಅಮೃತ ಕಾಲ ಮತ್ತು ಯುವ ಜನರನ್ನು ಉಲ್ಲೇಖಿಸಿದ ಪ್ರಧಾನಿ, ರಾಷ್ಟ್ರದ ಬೆಳವಣಿಗೆಗೆ ಇವು ಪರಿಪೂರ್ಣ ಸಂಯೋಜನೆಯಾಗಿದೆ ಎಂದರು. ಯುವ ಪೀಳಿಗೆ ತಮ್ಮ ಬಲವಾದ ಪರಂಪರೆಯ ಬೆಂಬಲದೊಂದಿಗೆ ಆತ್ಮವಿಶ್ವಾಸದಿಂದ ಮುನ್ನಡೆಯುವಂತೆ ಅವರು ಕರೆ ನೀಡಿದರು. "ಭಾರತವು ಸಂಪ್ರದಾಯದ ಪರಿಶುದ್ಧತೆ ಮತ್ತು ಆಧುನಿಕತೆಯ ಅನಂತತೆ ಎರಡೂ ಮಾರ್ಗವನ್ನು ಅನುಸರಿಸುವ ಮೂಲಕ ಸಮೃದ್ಧಿಯ ಗುರಿಯನ್ನು ತಲುಪುತ್ತದೆ" ಎಂದು ಪ್ರಧಾನಮಂತ್ರಿ ಹೇಳಿದರು.

ಭವಿಷ್ಯವು ಯಶಸ್ಸು ಮತ್ತು ಸಾಧನೆಗಳಿಗೆ ಸಮರ್ಪಿತವಾಗಿದೆ ಮತ್ತು ಭವ್ಯವಾದ ರಾಮಮಂದಿರವು ಭಾರತದ ಪ್ರಗತಿ ಮತ್ತು ಉದಯಕ್ಕೆ ಸಾಕ್ಷಿಯಾಗಲಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಈ ಭವ್ಯವಾದ ರಾಮಮಂದಿರವು ವಿಕಸಿತ ಭಾರತದ ಉದಯಕ್ಕೆ ಸಾಕ್ಷಿಯಾಗಲಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಒಂದು ಗುರಿಯು ಸಮರ್ಥನೀಯವಾಗಿದ್ದರೆ ಮತ್ತು ಸಾಮೂಹಿಕ ಮತ್ತು ಸಂಘಟಿತ ಶಕ್ತಿಯಿಂದ ಹುಟ್ಟಿದರೆ ಅದನ್ನು ಸಾಧಿಸಬಹುದು ಎಂದು ಅವರು ಮಂದಿರದ ಉದಾಹರಣೆ ನೀಡಿದರು. “ಇದು ಭಾರತದ ಸಮಯ ಮತ್ತು ಭಾರತವು ಮುನ್ನಡೆಯಲಿದೆ. ಶತಮಾನಗಳು ಕಾದ ನಂತರ ನಾವು ಇಲ್ಲಿಗೆ ತಲುಪಿದ್ದೇವೆ. ನಾವೆಲ್ಲರೂ ಈ ಯುಗಕ್ಕಾಗಿ, ಈ ಅವಧಿಗಾಗಿ ಕಾಯುತ್ತಿದ್ದೆವು. ಈಗ ನಾವು ನಿಲ್ಲುವುದಿಲ್ಲ. ನಾವು ಅಭಿವೃದ್ಧಿಯ ಉತ್ತುಂಗಕ್ಕೇರುವುದನ್ನು ಮುಂದುವರಿಸುತ್ತೇವೆ”ಎಂದು ಹೇಳಿ ತಮ್ಮ ಮಾತು ಮುಗಿಸಿದ ಪ್ರಧಾನಮಂತ್ರಿಯವರು ರಾಮ ಲಲ್ಲಾ ಪಾದಗಳಿಗೆ ನಮಿಸಿದರು ಮತ್ತು ಶುಭ ಹಾರೈಸಿದರು.

 

ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಶ್ರೀ ಮೋಹನ್ ಭಾಗವತ್ ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಅಧ್ಯಕ್ಷ ಶ್ರೀ ನೃತ್ಯ ಗೋಪಾಲ್ ದಾಸ್ ಮತ್ತಿತರರು ಉಪಸ್ಥಿತರಿದ್ದರು.

ಹಿನ್ನೆಲೆ

ಐತಿಹಾಸಿಕ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ದೇಶದ ಎಲ್ಲಾ ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪಂಥಗಳ ಪ್ರತಿನಿಧಿಗಳು ಮತ್ತು ವಿವಿಧ ಬುಡಕಟ್ಟು ಸಮುದಾಯಗಳ ಪ್ರತಿನಿಧಿಗಳು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳ ಜನರು ಭಾಗವಹಿಸಿದ್ದರು.

ಭವ್ಯವಾದ ಶ್ರೀ ರಾಮ ಜನ್ಮಭೂಮಿ ಮಂದಿರವನ್ನು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದರ ಉದ್ದ (ಪೂರ್ವ-ಪಶ್ಚಿಮ) 380 ಅಡಿ; ಅಗಲ 250 ಅಡಿ ಮತ್ತು ಎತ್ತರ 161 ಅಡಿ ಮತ್ತು ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳಿವೆ. ದೇವಾಲಯದ ಕಂಬಗಳು ಮತ್ತು ಗೋಡೆಗಳು ಹಿಂದೂ ದೈವಗಳು, ದೇವರು ಮತ್ತು ದೇವತೆಗಳ ಸಂಕೀರ್ಣವಾದ ಕೆತ್ತನೆಯ ಚಿತ್ರಣಗಳನ್ನು ಹೊಂದಿವೆ. ನೆಲ ಅಂತಸ್ತಿನ ಮುಖ್ಯ ಗರ್ಭಗುಡಿಯಲ್ಲಿ, ಭಗವಾನ್ ಶ್ರೀರಾಮನ ಬಾಲ್ಯದ ರೂಪವನ್ನು (ಶ್ರೀ ರಾಮಲಲ್ಲಾನ ವಿಗ್ರಹ) ಇರಿಸಲಾಗಿದೆ.

 

ದೇವಾಲಯದ ಮುಖ್ಯ ದ್ವಾರವು ಪೂರ್ವದಲ್ಲಿದೆ, ಸಿಂಹದ್ವಾರದ ಮೂಲಕ 32 ಮೆಟ್ಟಿಲುಗಳನ್ನು ಹತ್ತಿ ಈ ದೇವಾಲಯವನ್ನು ತಲುಪಬಹುದು. ದೇವಾಲಯವು ಒಟ್ಟು ಐದು ಮಂಟಪಗಳನ್ನು ಹೊಂದಿದೆ - ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮಂಟಪ ಮತ್ತು ಕೀರ್ತನಾ ಮಂಟಪ. ದೇವಾಲಯದ ಬಳಿ ಒಂದು ಐತಿಹಾಸಿಕ ಬಾವಿ (ಸೀತಾಕೂಪ) ಇದೆ, ಇದು ಪ್ರಾಚೀನ ಕಾಲದ್ದು. ದೇವಾಲಯ ಸಂಕೀರ್ಣದ ನೈಋತ್ಯ ಭಾಗದಲ್ಲಿ, ಕುಬೇರ ತಿಲಾದಲ್ಲಿ, ಶಿವನ ಪುರಾತನ ದೇವಾಲಯವನ್ನು ಪುನಃಸ್ಥಾಪಿಸಲಾಗಿದೆ ಮತ್ತು ಜಟಾಯುವಿನ ವಿಗ್ರಹವನ್ನು ಸಹ ಸ್ಥಾಪಿಸಲಾಗಿದೆ.

ಮಂದಿರದ ಅಡಿಪಾಯವನ್ನು 14-ಮೀಟರ್ ದಪ್ಪದ ರೋಲರ್-ಕಾಂಪ್ಯಾಕ್ಟ್ ಕಾಂಕ್ರೀಟ್ (RCC) ಪದರದಿಂದ ನಿರ್ಮಿಸಲಾಗಿದೆ, ಇದು ಕೃತಕ ಬಂಡೆಯಂತಿರುತ್ತದೆ. ಮಂದಿರದಲ್ಲಿ ಎಲ್ಲಿಯೂ ಕಬ್ಬಿಣ ಬಳಸಿಲ್ಲ. ನೆಲದ ತೇವಾಂಶದಿಂದ ರಕ್ಷಣೆಗಾಗಿ, ಗ್ರಾನೈಟ್ ಬಳಸಿ 21 ಅಡಿ ಎತ್ತರದ ಸ್ತಂಭವನ್ನು ನಿರ್ಮಿಸಲಾಗಿದೆ. ಮಂದಿರ ಸಂಕೀರ್ಣವು ಒಳಚರಂಡಿ ಸಂಸ್ಕರಣಾ ಘಟಕ, ನೀರು ಸಂಸ್ಕರಣಾ ಘಟಕ, ಅಗ್ನಿ ಸುರಕ್ಷತೆಗಾಗಿ ನೀರು ಸರಬರಾಜು ಮತ್ತು ಸ್ವತಂತ್ರ ವಿದ್ಯುತ್ ಕೇಂದ್ರವನ್ನು ಹೊಂದಿದೆ. ದೇಶದ ಸಾಂಪ್ರದಾಯಿಕ ಮತ್ತು ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ಮಂದಿರವನ್ನು ನಿರ್ಮಿಸಲಾಗಿದೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
PM Modi congratulates hockey team for winning Women's Asian Champions Trophy
November 21, 2024

The Prime Minister Shri Narendra Modi today congratulated the Indian Hockey team on winning the Women's Asian Champions Trophy.

Shri Modi said that their win will motivate upcoming athletes.

The Prime Minister posted on X:

"A phenomenal accomplishment!

Congratulations to our hockey team on winning the Women's Asian Champions Trophy. They played exceptionally well through the tournament. Their success will motivate many upcoming athletes."