ನಾಲ್ಕನೇ ʻಯುಪಿ ಜಾಗತಿಕ ಹೂಡಿಕೆದಾರರ ಸಮಾವೇಶ-2023ʼರ ಉದ್ಘಾಟನಾ ಸಮಾರಂಭದಲ್ಲಿ ಉತ್ತರ ಪ್ರದೇಶದಾದ್ಯಂತ 10 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ 14000 ಯೋಜನೆಗಳಿಗೆ ಚಾಲನೆ ನೀಡಿದರು
"ಉತ್ತರ ಪ್ರದೇಶದ ಡಬಲ್ ಎಂಜಿನ್ ಸರ್ಕಾರವು ರಾಜ್ಯದ ಜನರ ಜೀವನವನ್ನು ಸುಗಮಗೊಳಿಸಲು ಹಗಲು ರಾತ್ರಿ ಶ್ರಮಿಸುತ್ತಿದೆ"
"ಕಳೆದ 7 ವರ್ಷಗಳಲ್ಲಿ, ಉತ್ತರ ಪ್ರದೇಶದಲ್ಲಿ ವ್ಯಾಪಾರ, ಅಭಿವೃದ್ಧಿ ಮತ್ತು ವಿಶ್ವಾಸದ ವಾತಾವರಣವನ್ನು ಸೃಷ್ಟಿಸಲಾಗಿದೆ"
"ಬದಲಾವಣೆಯ ನೈಜ ಉದ್ದೇಶವಿದ್ದರೆ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಡಬಲ್ ಎಂಜಿನ್ ಸರ್ಕಾರ ತೋರಿಸಿದೆ"
"ಜಾಗತಿಕವಾಗಿ, ಭಾರತದ ಬಗ್ಗೆ ಅಭೂತಪೂರ್ವ ಸಕಾರಾತ್ಮಕತೆ ಇದೆ"
"ನಾವು ಉತ್ತರ ಪ್ರದೇಶದಲ್ಲಿ ಜೀವನವನ್ನು ಸುಗಮಗೊಳಿಸಲು ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಸಮಾನ ಒತ್ತು ನೀಡಿದ್ದೇವೆ"
"ಸರ್ಕಾರದ ಯೋಜನೆಗಳ ಪ್ರಯೋಜನಗಳು ಎಲ್ಲರಿಗೂ ತಲುಪುವವರೆಗೆ ನಾವು ವಿಶ್ರಾಂತಿ ಪಡೆಯುವುದಿಲ್ಲ"
"ಉತ್ತರ ಪ್ರದೇಶವು ಅತಿ ಹೆಚ್ಚು ಎಕ್ಸ್‌ಪ್ರೆಸ್‌ ವೇʼಗಳು ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ರಾಜ್ಯವಾಗಿದೆ"
ಇಂದಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಇದು ಉತ್ತರ ಪ್ರದೇಶದ ಚಿತ್ರಣವನ್ನೇ ಬದಲಿಸಲಿದೆ ಎಂದರು ಮತ್ತು ಹೂಡಿಕೆದಾರರು ಮತ್ತು ಯುವಕರನ್ನು ಅಭಿನಂದಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲಕ್ನೋದಲ್ಲಿ ʻವಿಕಸಿತ ಭಾರತ ವಿಕಸಿತ ಉತ್ತರ ಪ್ರದೇಶʼ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. 2023ರ ಫೆಬ್ರವರಿಯಲ್ಲಿ ನಡೆದ ನಾಲ್ಕನೇ ʻಯುಪಿ ಜಾಗತಿಕ ಹೂಡಿಕೆದಾರರ ಶೃಂಗಸಭೆ-2023ʼರ ಉದ್ಘಾಟನಾ ಸಮಾರಂಭದಲ್ಲಿ ಅವರು ಉತ್ತರ ಪ್ರದೇಶದಾದ್ಯಂತ 10 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ 14000 ಯೋಜನೆಗಳಿಗೆ ಚಾಲನೆ ನೀಡಿದರು. ಈ ಯೋಜನೆಗಳು ಉತ್ಪಾದನೆ, ನವೀಕರಿಸಬಹುದಾದ ಇಂಧನ; ಮಾಹಿತಿ ತಂತ್ರಜ್ಞಾನ ಮತ್ತು ಐಟಿ ಆಧರಿತ ಸೇವೆಗಳು(ಐಟಿಇಎಸ್), ಆಹಾರ ಸಂಸ್ಕರಣೆ; ವಸತಿ ಮತ್ತು ರಿಯಲ್ ಎಸ್ಟೇಟ್; ಆತಿಥ್ಯ ಮತ್ತು ಮನರಂಜನೆ ಹಾಗೂ ಶಿಕ್ಷಣದಂತಹ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿವೆ.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದಿನ ಕಾರ್ಯಕ್ರಮವು ʻವಿಕಸಿತ ಉತ್ತರ ಪ್ರದೇಶʼದ ಅಭಿವೃದ್ಧಿಯ ಮೂಲಕ ʻವಿಕಸಿತ ಭಾರತʼದ ಸಂಕಲ್ಪದತ್ತ ಸಾಗಲು ಮಹತ್ವದ ಹೆಜ್ಜೆಯಾಗಿದೆ ಎಂದರು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉತ್ತರ ಪ್ರದೇಶದ 400ಕ್ಕೂ ಹೆಚ್ಚು ಕ್ಷೇತ್ರಗಳಿಂದ ಲಕ್ಷಾಂತರ ಜನರ ಉಪಸ್ಥಿತಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ ಅವರೆಲ್ಲರನ್ನೂ ಸ್ವಾಗತಿಸಿದರು ಮತ್ತು 7-8 ವರ್ಷಗಳ ಹಿಂದೆ ಊಹಿಸಲೂ ಸಾಧ್ಯವಾಗದಂತಹ ತಂತ್ರಜ್ಞಾನದ ನೆರವಿನಿಂದ ನಾಗರಿಕರು ಈಗ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಹಿಂದೆ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಅಪರಾಧಗಳ ಸಂಖ್ಯೆಯ ಬಗ್ಗೆ ಗಮನಸೆಳೆದ ಪ್ರಧಾನಮಂತ್ರಿಯವರು, ಹೂಡಿಕೆಗಳು ಮತ್ತು ಉದ್ಯೋಗಾವಕಾಶಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಸಕಾರಾತ್ಮಕ ವಾತಾವರಣವನ್ನು ಶ್ಲಾಘಿಸಿದರು. "ಇಂದು, ಉತ್ತರ ಪ್ರದೇಶವು ಲಕ್ಷಾಂತರ ಕೋಟಿ ರೂಪಾಯಿಗಳ ಹೂಡಿಕೆಗೆ ಸಾಕ್ಷಿಯಾಗಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ತಾವು ವಾರಣಾಸಿಯ ಸಂಸತ್ ಸದಸ್ಯರೂ ಆಗಿರುವುದರಿಂದ ರಾಜ್ಯದ ಪ್ರಗತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಇಂದಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಇದು ಉತ್ತರ ಪ್ರದೇಶದ ಚಿತ್ರಣವನ್ನೇ ಬದಲಿಸಲಿದೆ ಎಂದರು ಮತ್ತು ಹೂಡಿಕೆದಾರರು ಮತ್ತು ಯುವಕರನ್ನು ಅಭಿನಂದಿಸಿದರು.

 

ಉತ್ತರ ಪ್ರದೇಶದಲ್ಲಿ ಏಳು ವರ್ಷಗಳ ಡಬಲ್ ಇಂಜಿನ್ ಸರ್ಕಾರದ ಆಡಳಿತವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಈ ಅವಧಿಯಲ್ಲಿ 'ರೆಡ್‌ಟೇಪ್ ಸಂಸ್ಕೃತಿ'ಯ ಸ್ಥಾನವನ್ನು 'ರೆಡ್ ಕಾರ್ಪೆಟ್ ಸಂಸ್ಕೃತಿ'ಯು ತುಂಬಿದೆ ಎಂದರು. ಕಳೆದ 7 ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಅಪರಾಧಗಳು ಕಡಿಮೆಯಾಗಿವೆ ಮತ್ತು ವ್ಯಾಪಾರ ಸಂಸ್ಕೃತಿ ಉತ್ತಮ ಬೆಳವಣಿಗೆ ಕಂಡಿದೆ ಎಂದು ಅವರು ಹೇಳಿದರು. "ಕಳೆದ 7 ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ವ್ಯಾಪಾರ, ಅಭಿವೃದ್ಧಿ ಮತ್ತು ವಿಶ್ವಾಸದ ವಾತಾವರಣ ಸೃಷ್ಟಿಯಾಗಿದೆ," ಎಂದು ಪ್ರಧಾನಿ ಹೇಳಿದರು. ಬದಲಾವಣೆಯ ನೈಜ ಬಯಕೆ ಇದ್ದರೆ, ಅದನ್ನು ಯಾರಿಂದಲೂ ತಡೆಯಲಾಗದು ಎಂಬುದನ್ನು ಡಬಲ್ ಇಂಜಿನ್ ಸರ್ಕಾರವು ಸಾಬೀತುಪಡಿಸಿದೆ ಎಂದು ಅವರು ಹೇಳಿದರು. ಈ ಅವಧಿಯಲ್ಲಿ ರಾಜ್ಯದಿಂದ ರಫ್ತು ದ್ವಿಗುಣಗೊಂಡಿದೆ ಎಂದು ಅವರು ಗಮನ ಸೆಳೆದರು. ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣದಲ್ಲಿ ರಾಜ್ಯವು ದಾಪುಗಾಲು ಹಾಕುತ್ತಿರುವುದನ್ನು ಅವರು ಶ್ಲಾಘಿಸಿದರು. "ಇಂದು, ಉತ್ತರ ಪ್ರದೇಶವು ದೇಶದಲ್ಲಿ ಗರಿಷ್ಠ ಸಂಖ್ಯೆಯ ಎಕ್ಸ್‌ಪ್ರೆಸ್‌ ವೇಗಳು ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ರಾಜ್ಯವಾಗಿದೆ. ಇದು ದೇಶದ ಮೊದಲ ʻರಾಪಿಡ್‌ ರೈಲುʼ ಸಂಚಾರ ಮಾಡುತ್ತಿರುವ ರಾಜ್ಯವಾಗಿದೆ", ಎಂದು ರಾಜ್ಯದಲ್ಲಿ ಪೂರ್ವ ಮತ್ತು ಪಶ್ಚಿಮ ಪೆರಿಫೆರಲ್ ಎಕ್ಸ್‌ಪ್ರೆಸ್ ವೇಗಳ ದೊಡ್ಡ ಭಾಗವನ್ನು ತೋರಿಸುತ್ತಾ ಪ್ರಧಾನಿ ಹೇಳಿದರು. ರಾಜ್ಯದಲ್ಲಿ ನದಿ ಜಲಮಾರ್ಗಗಳ ಬಳಕೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ರಾಜ್ಯದಲ್ಲಿ ಸಂಪರ್ಕ ಮತ್ತು ಪ್ರಯಾಣದ ಸುಗಮತೆಯನ್ನು ಶ್ಲಾಘಿಸಿದರು.

ಇಂದಿನ ಅಭಿವೃದ್ಧಿ ಯೋಜನೆಗಳನ್ನು ಕೇವಲ ಹೂಡಿಕೆಯ ದೃಷ್ಟಿಯಿಂದ ಮೌಲ್ಯಮಾಪನ ಮಾಡಲಾಗುತ್ತಿಲ್ಲ. ಅವು ಉತ್ತಮ ಭವಿಷ್ಯಕ್ಕಾಗಿ ಸಮಗ್ರ ದೃಷ್ಟಿಕೋನವನ್ನು ಹಾಗೂ ಹೂಡಿಕೆದಾರರಿಗೆ ಭರವಸೆಯ ಆಶಾಕಿರಣವನ್ನು ಒದಗಿಸುತ್ತವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಅರಬ್‌ ಸಂಯುಕ್ತ ಸಂಸ್ಥಾನ(ಯುಎಇ) ಮತ್ತು ಕತಾರ್‌ಗೆ ತಾವು ಇತ್ತೀಚೆಗೆ ನೀಡಿದ ಭೇಟಿಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ವಿಶ್ವದಾದ್ಯಂತ ಭಾರತದ ಬಗ್ಗೆ ನೆಲೆಸಿರುವ ಅಭೂತಪೂರ್ವ ಸಕಾರಾತ್ಮಕತೆಯನ್ನು ಉಲ್ಲೇಖಿಸಿದರು ಮತ್ತು ಭಾರತದ ಬೆಳವಣಿಗೆಯ ಯಶೋಗಾಥೆಯಲ್ಲಿ ಪ್ರತಿಯೊಂದು ರಾಷ್ಟ್ರವೂ ಭರವಸೆ ಮತ್ತು ವಿಶ್ವಾಸವನ್ನು ಹೊಂದಿದೆ ಎಂದರು. "ಮೋದಿ ಕಿ ಗ್ಯಾರಂಟಿ' ಇಂದು ದೇಶಾದ್ಯಂತ ವ್ಯಾಪಕವಾಗಿ ಚರ್ಚಿಸಲ್ಪಡುತ್ತಿದೆ, ಜಗತ್ತು ಭಾರತವನ್ನು ಉತ್ತಮ ಆದಾಯದ ಖಾತರಿಯಾಗಿ ನೋಡುತ್ತಿದೆ," ಎಂದು ಪ್ರಧಾನಿ ಹೇಳಿದರು. ಹೂಡಿಕೆದಾರರ ನಂಬಿಕೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಚುನಾವಣೆಗಳು ಬಾಗಿಲು ತಟ್ಟುತ್ತಿರುವ ಸಂದರ್ಭದಲ್ಲಿ ಸರ್ಕಾರಗಳು ಹೂಡಿಕೆಯಿಂದ ದೂರ ಸರಿಯುವ ಪ್ರವೃತ್ತಿಯನ್ನು ಭಾರತ ಮುರಿದಿದೆ ಎಂದರು. "ವಿಶ್ವದಾದ್ಯಂತ ಹೂಡಿಕೆದಾರರು ಸರ್ಕಾರದ ನೀತಿಗಳು ಮತ್ತು ಸ್ಥಿರತೆಯನ್ನು ನಂಬುತ್ತಾರೆ," ಎಂದು ಪ್ರಧಾನಿ ಹೇಳಿದರು. ಉತ್ತರ ಪ್ರದೇಶದಲ್ಲಿ ಇದೇ ರೀತಿಯ ಪ್ರವೃತ್ತಿ ಹೊರಹೊಮ್ಮುತ್ತಿರುವುದನ್ನು ಉಲ್ಲೇಖಿಸಿದರು.

 

ʻವಿಕಸಿತ  ಭಾರತʼಕ್ಕಾಗಿ ಹೊಸ ಚಿಂತನೆ ಮತ್ತು ದಿಕ್ಕಿನ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ನಾಗರಿಕರನ್ನು ಕನಿಷ್ಠ ಅಸ್ತಿತ್ವ ಮತ್ತು ಪ್ರಾದೇಶಿಕ ಅಸಮತೋಲನದಲ್ಲಿಡುವ ಹಿಂದಿನ ಸರ್ಕಾರಗಳ ಕಾರ್ಯವಿಧಾನವು ರಾಷ್ಟ್ರದ ಅಭಿವೃದ್ಧಿಗೆ ಸೂಕ್ತವಲ್ಲ ಎಂದು ಅವರು ಹೇಳಿದರು. ಈ ವಿಧಾನದಿಂದಾಗಿ ಉತ್ತರ ಪ್ರದೇಶ ಸಹ ತೊಂದರೆ ಅನುಭವಿಸಿದೆ ಎಂದು ಅವರು ಹೇಳಿದರು. ಈಗ, ಡಬಲ್ ಇಂಜಿನ್ ಸರ್ಕಾರವು ಪ್ರತಿ ಕುಟುಂಬದ ಜೀವನವನ್ನು ಸುಲಭಗೊಳಿಸುವಲ್ಲಿ ತೊಡಗಿಸಿಕೊಂಡಿದೆ, ಏಕೆಂದರೆ ಜೀವನವನ್ನು ಸುಲಭಗೊಳಿಸುವುದರಿಂದ ವ್ಯವಹಾರವೂ ಸುಗಮಗೊಳ್ಳುತ್ತದೆ ಎಂದು ಅವರು ಗಮನಸೆಳೆದರು. ʻಪಿಎಂ ಆವಾಸ್ʼ ಯೋಜನೆ ಅಡಿಯಲ್ಲಿ 4 ಕೋಟಿ ಶಾಶ್ವತ ಮನೆಗಳನ್ನು ನಿರ್ಮಿಸಲಾಗಿದೆ. ನಗರವಾಸಿ ಮಧ್ಯಮ ವರ್ಗದ ಕುಟುಂಬಗಳಿಗೆ ಸ್ವಂತ ಮನೆ ಹೊಂದುವ ಕನಸನ್ನು ನನಸಾಗಿಸಲು 7 ಸಾವಿರ ಕೋಟಿ ರೂ. ವ್ಯಯಿಸಲಾಗಿದೆ. ಈ ಮೂಲಕ ಉತ್ತರ ಪ್ರದೇಶದ 1.5 ಲಕ್ಷ ಕುಟುಂಬಗಳು ಸೇರಿದಂತೆ 25 ಲಕ್ಷ ಫಲಾನುಭವಿ ಕುಟುಂಬಗಳು ಬಡ್ಡಿ ರಿಯಾಯಿತಿ ಪಡೆದಿವೆ ಎಂದು ಅವರು ಮಾಹಿತಿ ನೀಡಿದರು. 2014ರಲ್ಲಿ 2 ಲಕ್ಷ ರೂ. ಇದ್ದ ತೆರಿಗೆ ವಿನಾಯಿತಿ ಮಿತಿಯನ್ನು 7 ಲಕ್ಷ ರೂ.ಗೆ ಹೆಚ್ಚಿಸುವಂತಹ ಆದಾಯ ತೆರಿಗೆ ಸುಧಾರಣೆಗಳು ಈಗ ಮಧ್ಯಮ ವರ್ಗದವರಿಗೆ ಸಹಾಯ ಮಾಡಿವೆ ಎಂದರು.

ಸುಗಮ ಜೀವನ ಮತ್ತು ಸುಗಮ ವ್ಯಾಪಾರಕ್ಕೆ ಸರ್ಕಾರ ಸಮಾನ ಒತ್ತು ನೀಡುತ್ತಿರುವುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಡಬಲ್ ಇಂಜಿನ್ ಸರ್ಕಾರವು ಪ್ರತಿಯೊಬ್ಬ ಫಲಾನುಭವಿಗೂ ಪ್ರತಿಯೊಂದು ಪ್ರಯೋಜನ ಲಭ್ಯವಾಗುವಂತೆ ಮಾಡಲು ಶ್ರಮಿಸುತ್ತದೆ ಎಂದರು. ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಬಗ್ಗೆ ಪ್ರಸ್ತಾಪಿಸಿದ ಅವರು, ಸರ್ಕಾರದ ಪ್ರಯೋಜನಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಉತ್ತರ ಪ್ರದೇಶದ ಲಕ್ಷಾಂತರ ಜನರಿಗೆ ಪ್ರಯೋಜನವಾಗಿದೆ ಎಂದರು. "ಮೋದಿ ಅವರ ಗ್ಯಾರಂಟಿ ವಾಹನವು ಬಹುತೇಕ ಎಲ್ಲ ಗ್ರಾಮಗಳು ಮತ್ತು ನಗರಗಳನ್ನು ತಲುಪಿದೆ," ಎಂದು ಪ್ರಧಾನಿ ಹೇಳಿದರು. ಸರ್ಕಾರದ ಯೋಜನೆಗಳ ಅನುಷ್ಠಾನ ಪರಿಪೂರ್ಣತೆಯು ಸಾಮಾಜಿಕ ನ್ಯಾಯದ ನಿಜವಾದ ಸಾಕಾರರೂಪವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಇದು ನಿಜವಾದ ಜಾತ್ಯತೀತತೆ" ಎಂದು ಪ್ರಧಾನಿ ಮೋದಿ ಹೇಳಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಇದ್ದ ಭ್ರಷ್ಟಾಚಾರದ ಅಭ್ಯಾಸಗಳು ಮತ್ತು ಅಸಮಾನತೆ ವ್ಯಾಪಕತೆಯನ್ನು ಎತ್ತಿ ತೋರಿಸಿದರು, ಇದು ಫಲಾನುಭವಿಗಳಿಗೆ ಯೋಜನೆಗಳ ಪ್ರಯೋಜನ ಪಡೆಯುವ ಪ್ರಕ್ರಿಯೆಯನ್ನು ಕಷ್ಟಕರವಾಗಿಸಿತ್ತು ಎಂದರು. "ಶಾಶ್ವತ ಮನೆಗಳು, ವಿದ್ಯುತ್ ಸರಬರಾಜು, ಅನಿಲ ಸಂಪರ್ಕ ಅಥವಾ ಕೊಳಾಯಿ ನೀರು ಸೇರಿದಂತೆ ಪ್ರತಿಯೊಬ್ಬ ಫಲಾನುಭವಿಗೆ ಅರ್ಹವಾದದ್ದನ್ನು ಪಡೆಯುವವರೆಗೆ ಈ ಸರ್ಕಾರ ವಿರಮಿಸುವುದಿಲ್ಲ. ಇದು  ಮೋದಿಯವರ ಗ್ಯಾರಂಟಿ," ಎಂದು ಪ್ರಧಾನಿ ಮೋದಿ ಹೇಳಿದರು.

 

"ಈ ಹಿಂದೆ ಎಲ್ಲರಿಂದಲೂ ನಿರ್ಲಕ್ಷಿಸಲ್ಪಟ್ಟವರನ್ನು ಮೋದಿ ನೋಡಿಕೊಳ್ಳುತ್ತಿದ್ದಾರೆ" ಎಂದು ಪ್ರಧಾನಿ ಪುನರುಚ್ಚರಿಸಿದರು. ಸಮಾಜದ ಇಂತಹ ವರ್ಗಗಳ ಬಗ್ಗೆ ವಿವರಿಸಿದ ಪ್ರಧಾನಮಂತ್ರಿಯವರು, ʻಪಿಎಂ ಸ್ವನಿಧಿʼ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ 10,000 ಕೋಟಿ ರೂ. ಮೌಲ್ಯದ ನೆರವು ನೀಡಿದ ಉದಾಹರಣೆಗಳನ್ನು ನೀಡಿದರು. ಉತ್ತರ ಪ್ರದೇಶದಲ್ಲಿ, ಸುಮಾರು 22 ಲಕ್ಷ ಬೀದಿ ಬದಿ ವ್ಯಾಪಾರಿಗಳು ಪ್ರಯೋಜನಗಳನ್ನು ಪಡೆದರು. ಯೋಜನೆಯ ಫಲಾನುಭವಿಗಳು 23,000 ಮೌಲ್ಯದ ಹೆಚ್ಚುವರಿ ವಾರ್ಷಿಕ ಆದಾಯವನ್ನು ಅನುಭವಿಸಿದ್ದಾರೆ ಎಂದು ಅವರು ಉಲ್ಲೇಖಿಸಿದರು. ʻಪಿಎಂ ಸ್ವನಿಧಿʼಯ ಶೇಕಡಾ 75 ರಷ್ಟು ಫಲಾನುಭವಿಗಳು ಎಸ್ಸಿ, ಎಸ್ಟಿ, ಹಿಂದುಳಿದ ಅಥವಾ ಬುಡಕಟ್ಟು ಸಮುದಾಯಗಳಿಗೆ ಸೇರಿದವರು ಮತ್ತು ಅವರಲ್ಲಿ ಅರ್ಧದಷ್ಟು ಮಹಿಳೆಯರು ಎಂದು ಅವರು ಮಾಹಿತಿ ನೀಡಿದರು. "ಈ ಹಿಂದೆ ಅವರು ಬ್ಯಾಂಕುಗಳಿಗೆ ನೀಡಲು ಯಾವುದೇ ಗ್ಯಾರಂಟಿ ಹೊಂದಿರಲಿಲ್ಲ, ಇಂದು ಅವರು ಮೋದಿಯವರ ಗ್ಯಾರಂಟಿಯನ್ನು ಹೊಂದಿದ್ದಾರೆ," ಎಂದು ಅವರು ಹೇಳಿದರು. ಇದು ಜಯಪ್ರಕಾಶ್ ನಾರಾಯಣ್ ಮತ್ತು ರಾಮ್ ಮನೋಹರ್ ಲೋಹಿಯಾ ಅವರ ಕನಸಿನ ಸಾಮಾಜಿಕ ನ್ಯಾಯ ಎಂದು ಅವರು ಬಣ್ಣಿಸಿದರು.

ʻಲಕ್ಷಾಧಿಪತಿ ದೀದಿʼ ಯೋಜನೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಡಬಲ್ ಇಂಜಿನ್ ಸರ್ಕಾರದ ನೀತಿಗಳು ಮತ್ತು ನಿರ್ಧಾರಗಳು ಸಾಮಾಜಿಕ ನ್ಯಾಯ ಮತ್ತು ಆರ್ಥಿಕತೆ ಎರಡಕ್ಕೂ ಪ್ರಯೋಜನಕಾರಿಯಾಗಿದೆ ಎಂದರು. 10 ಕೋಟಿಗೂ ಹೆಚ್ಚು ಮಹಿಳೆಯರು ಸ್ವಸಹಾಯ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು 1 ಕೋಟಿ ಮಹಿಳೆಯರು ಇಲ್ಲಿಯವರೆಗೆ ʻಲಕ್ಷಾಧಿಪತಿʼಗಳಾಗಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ 3 ಕೋಟಿ ʻಲಕ್ಷಾಧಿಪತಿ ದೀದಿʼಯರ ಸೃಷ್ಟಿಗೆ ಸರ್ಕಾರದ ಸಂಕಲ್ಪವನ್ನು ಅವರು ಎತ್ತಿ ತೋರಿದರು.

 

ಉತ್ತರ ಪ್ರದೇಶದ ಸಣ್ಣ, ಸೂಕ್ಷ್ಮ ಮತ್ತು ಗುಡಿ ಕೈಗಾರಿಕೆಗಳ ಶಕ್ತಿಯ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ʻರಕ್ಷಣಾ ಕಾರಿಡಾರ್ʼನಂತಹ ಯೋಜನೆಗಳ ಪ್ರಯೋಜನಗಳ ಜೊತೆಗೆ ರಾಜ್ಯದ ʻಎಂಎಸ್‌ಎಂಇʼ ವಲಯಕ್ಕೆ ಒದಗಿಸಲಾದ ಬೆಂಬಲದ ಬಗ್ಗೆ ತಿಳಿಸಿದರು. ʻಒಂದು ಜಿಲ್ಲೆ-ಒಂದು ಉತ್ಪನ್ನʼ ಯೋಜನೆಯಡಿ ಪ್ರತಿ ಜಿಲ್ಲೆಯ ಸ್ಥಳೀಯ ಉತ್ಪನ್ನಗಳನ್ನು ಬಲಪಡಿಸಲಾಗುತ್ತಿದೆ ಎಂದು ಅವರು ಗಮನಸೆಳೆದರು. ಇದೇ ರೀತಿ. 13,000 ಕೋಟಿ ರೂ.ಗಳ ʻಪಿಎಂ ವಿಶ್ವಕರ್ಮʼ ಯೋಜನೆಯು ಉತ್ತರ ಪ್ರದೇಶದ ಲಕ್ಷಾಂತರ ವಿಶ್ವಕರ್ಮ ಕುಟುಂಬಗಳನ್ನು ಆಧುನಿಕ ಕೆಲಸದ ವಿಧಾನಗಳೊಂದಿಗೆ ಸಂಪರ್ಕಿಸುತ್ತದೆ ಎಂದರು.

ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ವೇಗವನ್ನು ಎತ್ತಿ ತೋರಿದ ಪ್ರಧಾನಮಂತ್ರಿಯವರು, ಭಾರತದ ಆಟಿಕೆ ಉತ್ಪಾದನಾ ವಲಯದ ಬಗ್ಗೆ ಪ್ರಸ್ತಾಪಿಸಿದರು. ಈ ಪ್ರದೇಶದ ಸಂಸದರಾಗಿ ವಾರಣಾಸಿಯಲ್ಲಿ ತಯಾರಿಸಿದ ಮರದ ಆಟಿಕೆಗಳನ್ನು ಉತ್ತೇಜಿಸುವ ಬಗ್ಗೆಯೂ ಅವರು ಮಾಹಿತಿ ನೀಡಿದರು. ಜನರು ತಲೆಮಾರುಗಳಿಂದ ಆಟಿಕೆಗಳನ್ನು ತಯಾರಿಸುವಲ್ಲಿ ಕೌಶಲ್ಯ ಹೊಂದಿದ್ದರೂ ಮತ್ತು ದೇಶವು ಶ್ರೀಮಂತ ಸಂಪ್ರದಾಯವನ್ನು ಹೊಂದಿದ್ದರೂ ಭಾರತದಲ್ಲಿ ಆಟಿಕೆಗಳನ್ನು ಆಮದು ಮಾಡಿಕೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆ ಶ್ರೀ ಮೋದಿ ವಿಷಾದ ವ್ಯಕ್ತಪಡಿಸಿದರು. ಭಾರತೀಯ ಆಟಿಕೆಗಳನ್ನು ಉತ್ತೇಜಿಸದ ಕಾರಣ ಮತ್ತು ಆಧುನಿಕ ಜಗತ್ತಿಗೆ ಹೊಂದಿಕೊಳ್ಳಲು ಕುಶಲಕರ್ಮಿಗಳಿಗೆ ಸಹಾಯ ನೀಡದ ಕಾರಣ ಭಾರತೀಯ ಆಟಿಕೆಗಳ ಮಾರುಕಟ್ಟೆಯನ್ನು ವಿದೇಶಗಳಲ್ಲಿ ತಯಾರಿಸಿದ ಆಟಿಕೆಗಳು ಹಿಂದಿಕ್ಕಿವೆ ಎಂದು ಅವರು ಗಮನಸೆಳೆದರು. ಇದನ್ನು ಬದಲಾಯಿಸುವ ತಮ್ಮ ಸಂಕಲ್ಪವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಆಟಿಕೆಗಳ ರಫ್ತಿನಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾದ ಈ ಉದ್ದೇಶವನ್ನು ಬೆಂಬಲಿಸುವಂತೆ ದೇಶಾದ್ಯಂತದ ಆಟಿಕೆ ತಯಾರಕರಿಗೆ ತಾವು ಮನವಿ ಮಾಡಿದ್ದನ್ನು ಸ್ಮರಿಸಿದರು.

 

"ಉತ್ತರ ಪ್ರದೇಶವು ಭಾರತದ ಅತಿದೊಡ್ಡ ಪ್ರವಾಸೋದ್ಯಮ ಕೇಂದ್ರವಾಗುವ ಸಾಮರ್ಥ್ಯವನ್ನು ಹೊಂದಿದೆ," ಎಂದು ಹೇಳಿದ ಪ್ರಧಾನಿ, ದೇಶದ ಪ್ರತಿಯೊಬ್ಬ ವ್ಯಕ್ತಿಯು ಇಂದು ವಾರಣಾಸಿ ಮತ್ತು ಅಯೋಧ್ಯೆಗೆ ಭೇಟಿ ನೀಡಲು ಬಯಸುತ್ತಾರೆ. ಇದು ಲಕ್ಷಾಂತರ ಸಂದರ್ಶಕರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂದರು. ಈ ಕಾರಣದಿಂದಾಗಿ, ಉತ್ತರ ಪ್ರದೇಶದಲ್ಲಿ ಸಣ್ಣ ಉದ್ಯಮಿಗಳು, ವಿಮಾನಯಾನ ಕಂಪನಿಗಳು ಮತ್ತು ಹೋಟೆಲ್-ರೆಸ್ಟೋರೆಂಟ್ ಮಾಲೀಕರಿಗೆ ಅಭೂತಪೂರ್ವ ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಪ್ರಧಾನಿ ಹೇಳಿದರು. ಉತ್ತರ ಪ್ರದೇಶದಲ್ಲಿ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಪರ್ಕಜಾಲದ ಸುಧಾರಣೆ ಬಗ್ಗೆ ಪ್ರಧಾನಿ ಮೋದಿ ಉಲ್ಲೇಖಿಸಿದರು. ವಾರಣಾಸಿ ಮೂಲಕ ಇತ್ತೀಚೆಗೆ ಪ್ರಾರಂಭಿಸಲಾದ ವಿಶ್ವದ ಅತಿ ಉದ್ದದ ಕ್ರೂಸ್ ಸೇವೆಯನ್ನು ಎತ್ತಿ ತೋರಿದರು. 2025ರಲ್ಲಿ ಕುಂಭಮೇಳವನ್ನು ಸಹ ಆಯೋಜಿಸಲಾಗುವುದು, ಇದು ರಾಜ್ಯದ ಆರ್ಥಿಕತೆಗೆ ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದರು. ಮುಂಬರುವ ದಿನಗಳಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯೋಗಗಳು ಇಲ್ಲಿ ಸೃಷ್ಟಿಯಾಗಲಿವೆ ಎಂದು ಅವರು ತಿಳಿಸಿದರು.

ವಿದ್ಯುತ್ ಚಾಲಿತ ವಾಹನಗಳು ಮತ್ತು ಹಸಿರು ಇಂಧನದ ಮೇಲೆ ಭಾರತ ಗಮನ ಹರಿಸುತ್ತಿರುವ ಬಗ್ಗೆ ಉಲ್ಲೇಖಿಸಿದ ಪ್ರಧಾನಿಯವರು, ಅಂತಹ ತಂತ್ರಜ್ಞಾನ ಮತ್ತು ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡಲು ಸರ್ಕಾರ ಒತ್ತು ನೀಡಿದೆ ಎಂದು ಒತ್ತಿ ಹೇಳಿದರು. ʻಪ್ರಧಾನಿ ಸೂರ್ಯಘರ್ʼ ಅಥವಾ ʻಉಚಿತ ವಿದ್ಯುತ್ ಯೋಜನೆʼಯನ್ನು ಉಲ್ಲೇಖಿಸಿದ ಶ್ರೀ ಮೋದಿ ಅವರು "ದೇಶದ ಪ್ರತಿ ಮನೆ ಮತ್ತು ಪ್ರತಿ ಕುಟುಂಬವು ಸೌರ ವಿದ್ಯುತ್ ಉತ್ಪಾದಿಸಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ," ಎಂದು ಹೇಳಿದರು. ಈ ಯೋಜನೆಯಲ್ಲಿ 300 ಯುನಿಟ್ ವಿದ್ಯುತ್ ಉಚಿತವಾಗಿ ಲಭ್ಯವಿರುತ್ತದೆ ಮತ್ತು ನಾಗರಿಕರು ಹೆಚ್ಚುವರಿ ವಿದ್ಯುತ್ ಅನ್ನು ಸರ್ಕಾರಕ್ಕೆ ಮಾರಾಟ ಮಾಡಲು ಸಾಧ್ಯವಾಗುತ್ತದೆ ಏಂದರು. ಪ್ರಸ್ತುತ 1 ಕೋಟಿ ಕುಟುಂಬಗಳಿಗೆ ಲಭ್ಯವಿರುವ ಈ ಯೋಜನೆಯಡಿ, ಪ್ರತಿ ಕುಟುಂಬದ ಬ್ಯಾಂಕ್ ಖಾತೆಗೆ 30,000 ರೂ.ಗಳಿಂದ ಸುಮಾರು 80,000 ರೂ.ಗಳನ್ನು ನೇರವಾಗಿ ಜಮಾ ಮಾಡಲಾಗುವುದು ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ಪ್ರತಿ ತಿಂಗಳು 100 ಯೂನಿಟ್ ವಿದ್ಯುತ್ ಉತ್ಪಾದಿಸುವವರಿಗೆ 30,000 ರೂ., 300 ಯೂನಿಟ್ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯುತ್ ಉತ್ಪಾದಿಸುವವರಿಗೆ ಸುಮಾರು 80,000 ರೂ. ನೀಡಲಾಗುವುದು ಎಂದು ಮಾಹಿತಿ ನೀಡಿದರು.

 

ಪ್ರಧಾನಿ ಮೋದಿ ಅವರು ವಿದ್ಯುತ್‌ ಚಾಲಿತ ವಾಹನ (ಇವಿ) ವಲಯದತ್ತ ಸರ್ಕಾರದ ಉತ್ತೇಜನದ ಬಗ್ಗೆ ಒತ್ತಿ ಹೇಳಿದರು. ಇವಿ ಉತ್ಪಾದನಾ ಪಾಲುದಾರರಿಗೆ ʻಉತ್ಪಾದನೆ ಆಧರಿತ ಪ್ರೋತ್ಸಾಹಧನʼ(ಪಿಎಲ್ಐ) ಯೋಜನೆ ಹಾಗೂ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ತೆರಿಗೆ ವಿನಾಯಿತಿಗಳ ಬಗ್ಗೆ ಉಲ್ಲೇಖಿಸಿದರು. "ಇದರ ಪರಿಣಾಮವಾಗಿ, ಕಳೆದ 10 ವರ್ಷಗಳಲ್ಲಿ ಸುಮಾರು 34.5 ಲಕ್ಷ ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿವೆ" ಎಂದು ಅವರು ಹೇಳಿದರು. "ನಾವು ಎಲೆಕ್ಟ್ರಿಕ್ ಬಸ್ಸುಗಳನ್ನು ವೇಗವಾಗಿ ಹೊರತರುತ್ತಿದ್ದೇವೆ. ಅದು ಸೌರ ವಿದ್ಯುತ್‌ ಆಗಿರಲಿ ಅಥವಾ ʻಇವಿʼ ಆಗಿರಲಿ, ಎರಡೂ ಕ್ಷೇತ್ರಗಳಿಗೆ ಉತ್ತರ ಪ್ರದೇಶದಲ್ಲಿ ಸಾಕಷ್ಟು ಸಾಧ್ಯತೆಗಳಿವೆ,ʼʼ ಎಂದರು.

ಚೌಧರಿ ಚರಣ್ ಸಿಂಗ್ ಅವರಿಗೆ ʻಭಾರತ ರತ್ನʼ ನೀಡುವ ಇತ್ತೀಚಿನ ನಿರ್ಧಾರವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, "ಉತ್ತರ ಪ್ರದೇಶದ ಮಣ್ಣಿನ ಮಗನಾದ ಚೌಧರಿ ಸಾಹೇಬ್ ಅವರನ್ನು ಗೌರವಿಸುವುದು ದೇಶದ ಕೋಟ್ಯಂತರ ದುಡಿಯುವ ರೈತರಿಗೆ ಸಲ್ಲಿಸುವ ಗೌರವವಾಗಿದೆ," ಎಂದು ಹೇಳಿದರು. ಸರ್ಕಾರದ ಗೌರವಗಳನ್ನು ಪ್ರದಾನ ಮಾಡುವ ವಿಷಯದಲ್ಲಿ ಈ ಹಿಂದೆ ತಾರತಮ್ಯದ ಅಭ್ಯಾಸಗಳ ಬಗ್ಗೆಯೂ ಅವರು ಮಾತನಾಡಿದರು. ಸಣ್ಣ ರೈತರಿಗೆ ಚೌಧರಿ ಚರಣ್ ಸಿಂಗ್ ಅವರು ನೀಡಿದ ಕೊಡುಗೆಯನ್ನು ಶ್ಲಾಘಿಸಿದ ಪ್ರಧಾನಿ, "ಚೌಧರಿ ಸಾಹೇಬ್ ಅವರ ಸ್ಫೂರ್ತಿಯೊಂದಿಗೆ ನಾವು ದೇಶದ ರೈತರನ್ನು ಸಬಲೀಕರಣಗೊಳಿಸುತ್ತಿದ್ದೇವೆ," ಎಂದು ಹೇಳಿದರು.

 

ಕೃಷಿಯಲ್ಲಿ ಹೊಸ ಮಾರ್ಗಗಳನ್ನು ಅನ್ವೇಷಿಸಲು ರೈತರಿಗೆ ಬೆಂಬಲ ನೀಡುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಿ, "ನಮ್ಮ ದೇಶದ ಕೃಷಿಯನ್ನು ಹೊಸ ಹಾದಿಯಲ್ಲಿ ಕೊಂಡೊಯ್ಯಲು ನಾವು ರೈತರಿಗೆ ಸಹಾಯ ಮಾಡುತ್ತಿದ್ದೇವೆ ಮತ್ತು ಪ್ರೋತ್ಸಾಹಿಸುತ್ತಿದ್ದೇವೆ," ಎಂದು ಹೇಳಿದರು. ಉತ್ತರ ಪ್ರದೇಶದಲ್ಲಿ ಗಂಗಾ ತೀರದಲ್ಲಿ ದೊಡ್ಡ ಪ್ರಮಾಣದ ನೈಸರ್ಗಿಕ ಕೃಷಿಯನ್ನು ಉಲ್ಲೇಖಿಸಿದ ಅವರು, ನೈಸರ್ಗಿಕ ಕೃಷಿ ಮತ್ತು ಸಿರಿಧಾನ್ಯಗಳತ್ತ ಗಮನ ಸೆಳೆದರು. ಇದು ರೈತರಿಗೆ ಪ್ರಯೋಜನಕಾರಿಯಾಗುವುದಲ್ಲದೆ ನಮ್ಮ ಪವಿತ್ರ ನದಿಗಳ ಶುದ್ಧತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ ಎಂದರು.

ಆಹಾರ ಸಂಸ್ಕರಣಾ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತಮ್ಮ ಪ್ರಯತ್ನಗಳಲ್ಲಿ "ಶೂನ್ಯ ಪರಿಣಾಮ, ಶೂನ್ಯ ದೋಷ" ಮಂತ್ರಕ್ಕೆ ಆದ್ಯತೆ ನೀಡುವಂತೆ ಒತ್ತಾಯಿಸಿದರು. ವಿಶ್ವದಾದ್ಯಂತ ಊಟದ ಮೇಜಿನ ಮೇಲೆ ಭಾರತೀಯ ಆಹಾರ ಉತ್ಪನ್ನಗಳನ್ನು ಹೊಂದುವ ಸಾಮಾನ್ಯ ಗುರಿಯತ್ತ ಕೆಲಸ ಮಾಡುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಸಿದ್ಧಾರ್ಥ್ ನಗರದ ʻಕಲಾ ನಮಕ್ ಅಕ್ಕಿʼ ಮತ್ತು ಚಂದೌಲಿಯ ʻಕಪ್ಪು ಅಕ್ಕಿʼಯಂತಹ ಉತ್ಪನ್ನಗಳ ಯಶೋಗಾಥೆಗಳನ್ನು ಎತ್ತಿ ತೋರಿದರು, ಅವು ಈಗ ಗಮನಾರ್ಹ ಪ್ರಮಾಣದಲ್ಲಿ ರಫ್ತಾಗುತ್ತಿವೆ ಎಂದರು.

ಸಿರಿಧಾನ್ಯಗಳು ʻಸೂಪರ್‌ಫುಡ್‌ʼಗಳಾಗಿ ಬೆಳೆಯುತ್ತಿರುವ ಪ್ರವೃತ್ತಿಯನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, ಈ ವಲಯದಲ್ಲಿ ಹೂಡಿಕೆಯ ಅಗತ್ಯವನ್ನು ಪ್ರತಿಪಾದಿಸಿದರು. "ಸಿರಿಧಾನ್ಯಗಳಂತಹ ಸೂಪರ್‌ಫುಡ್‌ಗಳಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯ," ಎಂದು ಅವರು ಹೇಳಿದರು. ರೈತ ಉತ್ಪಾದಕ ಸಂಸ್ಥೆಗಳು(ಎಫ್‌ಪಿಒ) ಮತ್ತು ಸಹಕಾರಿ ಸಂಘಗಳ ಮೂಲಕ ಸಣ್ಣ ಪ್ರಮಾಣದ ರೈತರನ್ನು ಸಬಲೀಕರಣಗೊಳಿಸುವ ಸರ್ಕಾರದ ಪ್ರಯತ್ನಗಳನ್ನು ಒತ್ತಿಹೇಳುತ್ತಾ, ರೈತರೊಂದಿಗೆ ಪಾಲುದಾರಿಕೆಯನ್ನು ಹೊಂದುವಂತೆ ಪ್ರಧಾನಮಂತ್ರಿಯವರು ಉದ್ಯಮಿಗಳನ್ನು ಪ್ರೋತ್ಸಾಹಿಸಿದರು. ಇದು ಪರಸ್ಪರ ಲಾಭದಾಯಕ ಪಾಲುದಾರಿಕೆಗೆ ಅವಕಾಶಗಳನ್ನು ಒದಗಿಸುತ್ತದೆ ಎಂದರು. "ರೈತರು ಮತ್ತು ಕೃಷಿಕರಿಗೆ ದೊರೆಯುವ ಪ್ರಯೋಜನವು ನಿಮ್ಮ ವ್ಯವಹಾರಕ್ಕೂ ಒಳ್ಳೆಯದು," ಎಂದು ಪಿಎಂ ಮೋದಿ ಹೂಡಿಕೆದಾರರಿಗೆ ತಿಳಿಸಿದರು.

 

ಭಾರತದ ಗ್ರಾಮೀಣ ಆರ್ಥಿಕತೆ ಮತ್ತು ಕೃಷಿ ಆಧಾರಿತ ಆರ್ಥಿಕತೆಯನ್ನು ಮುನ್ನಡೆಸುವಲ್ಲಿ ಉತ್ತರ ಪ್ರದೇಶದ ಪ್ರಮುಖ ಪಾತ್ರವನ್ನು ಪ್ರತಿಬಿಂಬಿಸಿದ ಪ್ರಧಾನಿ ಮೋದಿ, ಈ ಅವಕಾಶದ ಪ್ರಯೋಜನಗಳನ್ನು ಗರಿಷ್ಠಗೊಳಿಸುವಂತೆ ಮಧ್ಯಸ್ಥಗಾರರಿಗೆ ಕರೆ ನೀಡಿದರು. ಉತ್ತರ ಪ್ರದೇಶದ ಜನರ ಸಾಮರ್ಥ್ಯ ಮತ್ತು ರಾಜ್ಯ ಮತ್ತು ರಾಷ್ಟ್ರದ ಪ್ರಗತಿಗೆ ಅಡಿಪಾಯ ಹಾಕುವಲ್ಲಿ ಡಬಲ್ ಎಂಜಿನ್ ಸರ್ಕಾರದ ಪ್ರಯತ್ನಗಳ ಬಗ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಉತ್ತರ ಪ್ರದೇಶದ ರಾಜ್ಯಪಾಲೆ ಶ್ರೀಮತಿ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಹಾಗೂ ಉತ್ತರ ಪ್ರದೇಶ ಸರ್ಕಾರದ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಖ್ಯಾತ ಕೈಗಾರಿಕೋದ್ಯಮಿಗಳು, ಪ್ರಮುಖ ಜಾಗತಿಕ ಮತ್ತು ಭಾರತೀಯ ಕಂಪನಿಗಳ ಪ್ರತಿನಿಧಿಗಳು, ರಾಯಭಾರಿಗಳು ಮತ್ತು ಹೈಕಮಿಷನರ್‌ಗಳು ಹಾಗೂ ಇತರ ವಿಶೇಷ ಅತಿಥಿಗಳು ಸೇರಿದಂತೆ ಸುಮಾರು 5000 ಜನರು ಭಾಗವಹಿಸಿದ್ದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'You Are A Champion Among Leaders': Guyana's President Praises PM Modi

Media Coverage

'You Are A Champion Among Leaders': Guyana's President Praises PM Modi
NM on the go

Nm on the go

Always be the first to hear from the PM. Get the App Now!
...
PM Modi congratulates hockey team for winning Women's Asian Champions Trophy
November 21, 2024

The Prime Minister Shri Narendra Modi today congratulated the Indian Hockey team on winning the Women's Asian Champions Trophy.

Shri Modi said that their win will motivate upcoming athletes.

The Prime Minister posted on X:

"A phenomenal accomplishment!

Congratulations to our hockey team on winning the Women's Asian Champions Trophy. They played exceptionally well through the tournament. Their success will motivate many upcoming athletes."