ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಂತಾರಾಷ್ಟ್ರೀಯ ಸಹಕಾರಿ ದಿನಾಚರಣೆಯ ಸಂದರ್ಭದಲ್ಲಿ ನವದೆಹಲಿಯ ಪ್ರಗತಿ ಮೈದಾನದಲ್ಲಿ 17ನೇ ಭಾರತೀಯ ಸಹಕಾರಿ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾತನಾಡಿದರು. 17 ನೇ ಭಾರತೀಯ ಸಹಕಾರಿ ಕಾಂಗ್ರೆಸ್ನ ಮುಖ್ಯ ವಿಷಯ ‘ಅಮೃತ ಕಾಲ: ಶಕ್ತಿಶಾಲಿ ಭಾರತಕ್ಕಾಗಿ ಸಹಕಾರದ ಮೂಲಕ ಸಮೃದ್ಧಿʼ. ಪ್ರಧಾನಿಯವರು ಸಹಕಾರಿ ಮಾರ್ಕೆಟಿಂಗ್ ಮತ್ತು ಸಹಕಾರ ವಿಸ್ತರಣೆ ಮತ್ತು ಸಲಹಾ ಸೇವೆಗಳ ಪೋರ್ಟಲ್ಗಾಗಿ ಇ-ಕಾಮರ್ಸ್ ವೆಬ್ಸೈಟ್ನ ಇ-ಪೋರ್ಟಲ್ಗಳಿಗೂ ಚಾಲನೆ ನೀಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಎಲ್ಲರಿಗೂ ಸಹಕಾರಿ ದಿನದ ಅಭಿನಂದನೆ ಸಲ್ಲಿಸಿದರು ಮತ್ತು ದೇಶವು ‘ವಿಕಸಿತ ಮತ್ತು ಆತ್ಮನಿರ್ಭರ ಭಾರತ’ಗುರಿಯತ್ತ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಪ್ರತಿಯೊಬ್ಬರ ಪ್ರಯತ್ನದ ಸಂದೇಶವನ್ನು ತಿಳಿಸುವ ಸಹಕಾರಿ ಮನೋಭಾವದ ಗುರಿಗಳನ್ನು ಸಾಧಿಸುವಲ್ಲಿ 'ಸಬ್ಕಾ ಪ್ರಯಾಸ್' (ಎಲ್ಲರ ಪ್ರಯತ್ನ) ಅಗತ್ಯವನ್ನು ಅವರು ಪುನರುಚ್ಚರಿಸಿದರು. ಭಾರತವನ್ನು ವಿಶ್ವದ ಅಗ್ರಗಣ್ಯ ಹಾಲು ಉತ್ಪಾದಕ ದೇಶವನ್ನಾಗಿ ಮಾಡುವಲ್ಲಿ ಡೈರಿ ಸಹಕಾರಿ ಸಂಸ್ಥೆಗಳ ಕೊಡುಗೆಗಳನ್ನು ಮತ್ತು ಭಾರತವನ್ನು ವಿಶ್ವದ ಅಗ್ರ ಸಕ್ಕರೆ ಉತ್ಪಾದಿಸುವ ರಾಷ್ಟ್ರಗಳಲ್ಲಿ ಒಂದನ್ನಾಗಿ ಮಾಡುವಲ್ಲಿ ಸಹಕಾರಿಗಳ ಪಾತ್ರವನ್ನು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. ದೇಶದ ಅನೇಕ ಭಾಗಗಳಲ್ಲಿ ಸಣ್ಣ ರೈತರಿಗೆ ಸಹಕಾರಿ ಸಂಘಗಳು ದೊಡ್ಡ ಬೆಂಬಲ ವ್ಯವಸ್ಥೆಯಾಗಿ ಮಾರ್ಪಟ್ಟಿವೆ ಎಂದು ಅವರು ಒತ್ತಿ ಹೇಳಿದರು. ಹೈನುಗಾರಿಕೆ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಸರಿಸುಮಾರು 60 ಪ್ರತಿಶತವಾಗಿದೆ, ಆದ್ದರಿಂದ, ವಿಕಸಿತ ಭಾರತದ ಗುರಿಗಳನ್ನು ಸಾಧಿಸಲು ಸಹಕಾರಿ ಕ್ಷೇತ್ರವನ್ನು ಬಲಪಡಿಸಲು ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ಹೇಳಿದರು. ಇದೇ ಮೊದಲ ಬಾರಿಗೆ ಪ್ರತ್ಯೇಕ ಸಚಿವಾಲಯವನ್ನು ರಚಿಸಿ ಸಹಕಾರಿ ಸಂಸ್ಥೆಗಳಿಗೆ ಬಜೆಟ್ ಮೀಸಲಿಟ್ಟಿದ್ದು, ಇದರ ಫಲವಾಗಿ ಕಾರ್ಪೊರೇಟ್ ವಲಯದಂತೆಯೇ ಸಹಕಾರಿ ಸಂಸ್ಥೆಗಳಿಗೂ ವೇದಿಕೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು. ಸಹಕಾರ ಸಂಘಗಳನ್ನು ಬಲಪಡಿಸುವ ಕ್ರಮಗಳ ಬಗ್ಗೆಯೂ ಪ್ರಧಾನಿ ಮಾತನಾಡಿದರು ಮತ್ತು ತೆರಿಗೆ ದರಗಳ ಕಡಿತವನ್ನು ಪ್ರಸ್ತಾಪಿಸಿದರು. ಸಹಕಾರಿ ಬ್ಯಾಂಕ್ಗಳನ್ನು ಬಲಪಡಿಸುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಅವರು ಹೊಸ ಶಾಖೆಗಳನ್ನು ತೆರೆಯುವ ಮತ್ತು ಮನೆ ಬಾಗಿಲಿಗೆ ಬ್ಯಾಂಕಿಂಗ್ಸೌಲಭ್ಯಗಳನ್ನು ಒದಗಿಸುವಲ್ಲಿ ಇರುವ ಸುಲಭತೆಯ ಉದಾಹರಣೆ ನೀಡಿದರು.
ಈ ಕಾರ್ಯಕ್ರಮದೊಂದಿಗೆ ಹೆಚ್ಚಿನ ಸಂಖ್ಯೆಯ ರೈತರು ಸಂಬಂಧ ಹೊಂದಿರುವುದನ್ನು ಉಲ್ಲೇಖಿಸಿದ ಪ್ರಧಾನಿ, ಕಳೆದ 9 ವರ್ಷಗಳಲ್ಲಿ ರೈತರ ಕಲ್ಯಾಣಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆ ಪ್ರಸ್ತಾಪಿಸಿದರು. ಹಿಂದೆ ಇದ್ದ ಅಲ್ಪ ಸ್ವಲ್ಪ ನೆರವು ಮಧ್ಯವರ್ತಿಗಳಿಂದ ಮತ್ತಷ್ಟು ಕಡಿಮೆಯಾಗುತ್ತಿದ್ದರ ಬದಲಾಗಿ, ಈಗ ಕೋಟ್ಯಂತರ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ನೇರವಾಗಿ ಅವರ ಖಾತೆಗೆ ಸೇರುತ್ತಿದೆ ಎಂದರು. ಕಳೆದ 4 ವರ್ಷಗಳಲ್ಲಿ ಈ ಯೋಜನೆಯಡಿ ಪಾರದರ್ಶಕವಾಗಿ 2.5 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದರು. 2014ರ ಹಿಂದಿನ 5 ವರ್ಷಗಳ ಒಟ್ಟು ಕೃಷಿ ಬಜೆಟ್ 90 ಸಾವಿರ ರೂಪಾಯಿಗಿಂತ ಕಡಿಮೆ ಇತ್ತು ಎಂಬುದನ್ನು ಪರಿಗಣಿಸಿದರೆ 2.5 ಲಕ್ಷ ಕೋಟಿ ದೊಡ್ಡ ಮೊತ್ತ ಎಂದು ಅವರು ಹೇಳಿದರು. ಅಂದರೆ ಆ ಐದು ವರ್ಷಗಳ ಒಟ್ಟು ಕೃಷಿ ಬಜೆಟ್ನ ಮೂರು ಪಟ್ಟು ಹೆಚ್ಚು ಮೊತ್ತ ಕೇವಲ ಒಂದು ಯೋಜನೆಗೆ ಖರ್ಚು ಮಾಡಲಾಗಿದೆ ಎಂದರು.
ಜಾಗತಿಕವಾಗಿ ಹೆಚ್ಚುತ್ತಿರುವ ರಸಗೊಬ್ಬರ ಬೆಲೆಗಳಿಂದ ರೈತರಿಗೆ ಹೊರೆಯಾಗದಂತೆ ನೋಡಿಕೊಳ್ಳುವ ಮಾರ್ಗಗಳ ಬಗ್ಗೆಯೂ ಪ್ರಧಾನಿ ವಿವರಿಸಿದರು. ಒಬ್ಬ ರೈತ ಇಂದು ಯೂರಿಯಾ ಚೀಲಕ್ಕೆ ಸುಮಾರು 270 ರೂ. ಪಾವತಿಸುತ್ತಾನೆ, ಆದರೆ ಅದೇ ಚೀಲ ಬಾಂಗ್ಲಾದೇಶದಲ್ಲಿ 720 ರೂ., ಪಾಕಿಸ್ತಾನದಲ್ಲಿ 800 ರೂ., ಚೀನಾದಲ್ಲಿ 2100 ರೂ. ಮತ್ತು ಅಮೇರಿಕಾದಲ್ಲಿ 3000 ರೂ. ಇದೆ. "ಇದು ಗ್ಯಾರಂಟಿ ಅಂದರೆ ಹೇಗಿರುತ್ತದೆ ಮತ್ತು ರೈತರ ಜೀವನವನ್ನು ಬದಲಾಯಿಸಲು ಎಂತಹ ಬೃಹತ್ ಪ್ರಯತ್ನಗಳ ಅಗತ್ಯವಿದೆ ಎಂಬುದನ್ನು ತೋರಿಸುತ್ತದೆ" ಎಂದು ಅವರು ಹೇಳಿದರು. ಕಳೆದ 9 ವರ್ಷಗಳಲ್ಲಿ ಕೇವಲ ರಸಗೊಬ್ಬರ ಸಬ್ಸಿಡಿಗೆ 10 ಲಕ್ಷ ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.
ರೈತರಿಗೆ ಅವರ ಉತ್ಪನ್ನಗಳಿಗೆ ಸೂಕ್ತ ಬೆಲೆಯನ್ನು ಒದಗಿಸುವ ಸರ್ಕಾರದ ಗಂಭೀರತೆಯನ್ನು ಒತ್ತಿ ಹೇಳಿದ ಪ್ರಧಾನಿ, ಸರ್ಕಾರವು ಹೆಚ್ಚಿನ ಎಂಎಸ್ಪಿಯಲ್ಲಿ ರೈತರ ಉತ್ಪನ್ನಗಳನ್ನು ಖರೀದಿಸಿದೆ ಮತ್ತು ಕಳೆದ 9 ವರ್ಷಗಳಲ್ಲಿ 15 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ರೈತರಿಗೆ ಹಸ್ತಾಂತರಿಸಿದೆ ಎಂದು ತಿಳಿಸಿದರು. "ಸರಾಸರಿಯಾಗಿ, ಸರ್ಕಾರವು ಕೃಷಿ ಮತ್ತು ರೈತರಿಗಾಗಿ ವಾರ್ಷಿಕವಾಗಿ 6.5 ಲಕ್ಷ ಕೋಟಿಗಿಂತ ಹೆಚ್ಚು ಹಣ ಖರ್ಚು ಮಾಡುತ್ತಿದೆ" ಎಂದರು. "ದೇಶದ ಪ್ರತಿಯೊಬ್ಬ ರೈತರು ಪ್ರತಿ ವರ್ಷವೂ ಒಂದಲ್ಲ ಒಂದು ರೀತಿಯಲ್ಲಿ ಸುಮಾರು 50 ಸಾವಿರ ರೂಪಾಯಿಗಳನ್ನು ಪಡೆಯುವಂತೆ ಸರ್ಕಾರ ನೋಡಿಕೊಳ್ಳುತ್ತಿದೆ" ಎಂದು ಅವರು ಹೇಳಿದರು.
ಸರ್ಕಾರದ ರೈತ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾತು ಮುಂದುವರಿಸಿದ ಶ್ರೀ ಮೋದಿಯವರು ಇತ್ತೀಚಿನ 3 ಲಕ್ಷದ 70 ಸಾವಿರ ಕೋಟಿ ರೂಪಾಯಿಗಳ ಪ್ಯಾಕೇಜ್ ಮತ್ತು ಕಬ್ಬು ರೈತರಿಗೆ ಕ್ವಿಂಟಲ್ಗೆ 315 ರೂಪಾಯಿಗಳ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯ ಬಗ್ಗೆ ಪ್ರಸ್ತಾಪಿಸಿದರು. ಇದರಿಂದ 5 ಲಕ್ಷ ಕಬ್ಬು ರೈತರು ಮತ್ತು ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಜನರಿಗೆ ನೇರ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.
ಅಮೃತ ಕಾಲದ ಸಂದರ್ಭದಲ್ಲಿ ಹಳ್ಳಿಗಳು ಮತ್ತು ರೈತರ ಬೆಳವಣಿಗೆಯಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ದೊಡ್ಡದಾಗಿದೆ ಎಂದು ಪ್ರಧಾನಿ ಹೇಳಿದರು. "ಸರ್ಕಾರ್ ಮತ್ತು ಸಹಕಾರ್ (ಸರ್ಕಾರ ಮತ್ತು ಸಹಕಾರಿ) ಒಟ್ಟಾಗಿ ವಿಕಸಿತ ಭಾರತದ ಕನಸಿಗೆ ದುಪ್ಪಟ್ಟು ಶಕ್ತಿಯನ್ನು ನೀಡುತ್ತವೆ" ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಡಿಜಿಟಲ್ ಇಂಡಿಯಾ ಅಭಿಯಾನದ ಮೂಲಕ ಸರ್ಕಾರವು ಪಾರದರ್ಶಕತೆಯನ್ನು ಹೆಚ್ಚಿಸಿದೆ ಮತ್ತು ಫಲಾನುಭವಿಗಳಿಗೆ ಪ್ರಯೋಜನಗಳನ್ನು ಖಾತ್ರಿಪಡಿಸಿದೆ ಎಂದು ಅವರು ವಿವರಿಸಿದರು. “ಇಂದು, ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತವನ್ನು ಮೇಲ್ಮಟ್ಟದಲ್ಲಿ ತೊಡೆದುಹಾಕಲಾಗಿರುವುದನ್ನು ಕಡುಬಡವರು ನೋಡುತ್ತಿದ್ದಾರೆ. ಸಹಕಾರವನ್ನು ಕೇಂದ್ರೀಕರಿಸಿ, ನಮ್ಮ ರೈತರು ಮತ್ತು ಪಶುಪಾಲಕರು ದೈನಂದಿನ ಜೀವನದಲ್ಲಿ ಇದನ್ನು ಕಾಣುವುದು ಮುಖ್ಯವಾಗಿದೆ. ಸಹಕಾರಿ ಕ್ಷೇತ್ರವು ಪಾರದರ್ಶಕತೆ ಮತ್ತು ಭ್ರಷ್ಟಾಚಾರ ರಹಿತ ಆಡಳಿತದ ಮಾದರಿಯಾಗುವುದು ಅನಿವಾರ್ಯವಾಗಿದೆ. ಇದಕ್ಕಾಗಿ ಸಹಕಾರಿ ಕ್ಷೇತ್ರದಲ್ಲಿ ಡಿಜಿಟಲ್ ವ್ಯವಸ್ಥೆಗಳನ್ನು ಉತ್ತೇಜಿಸಬೇಕು.” ಎಂದು ಪ್ರಧಾನಮಂತ್ರಿ ಹೇಳಿದರು.
"ಭಾರತವು ತನ್ನ ಡಿಜಿಟಲ್ ವಹಿವಾಟುಗಳಿಗೆ ವಿಶ್ವದಲ್ಲೇ ಹೆಸರುವಾಸಿಯಾಗಿದೆ, ಡಿಜಿಟಲ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಸಹಕಾರಿ ಸಂಘಗಳು ಮತ್ತು ಬ್ಯಾಂಕುಗಳು ಯಾವಾಗಲೂ ಮುಂದಿರಬೇಕು ಎಂದು ಪ್ರಧಾನಿ ಕರೆ ನೀಡಿದರು. ಇದು ಮಾರುಕಟ್ಟೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ ಉತ್ತಮ ಸ್ಪರ್ಧೆಯನ್ನು ಹುಟ್ಟುಹಾಕುತ್ತದೆ ಎಂದು ಅವರು ಹೇಳಿದರು.
ಪ್ರಾಥಮಿಕ ಹಂತದ ಮುಖ್ಯ ಸಹಕಾರ ಸಂಘಗಳು ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ಪಿಎಸಿಎಸ್)ಪಾರದರ್ಶಕತೆಗೆ ಮಾದರಿಯಾಗಲಿವೆ ಎಂದು ಒತ್ತಿ ಹೇಳಿದ ಪ್ರಧಾನಿ, ಈಗಾಗಲೇ 60,000 ಕ್ಕೂ ಹೆಚ್ಚು ಪಿಎಸಿಎಸ್ ಗಳ ಗಣಕೀಕರಣ ನಡೆದಿದೆ ಎಂದು ತಿಳಿಸಿದರು. ಸಹಕಾರಿ ಸಂಸ್ಥೆಗಳು ತಮಗೆ ಲಭ್ಯವಿರುವ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಒತ್ತಿ ಹೇಳಿದ ಅವರು, ಸಹಕಾರ ಸಂಘಗಳು ಕೋರ್ ಬ್ಯಾಂಕಿಂಗ್ ಮತ್ತು ಡಿಜಿಟಲ್ ವಹಿವಾಟಿನ ಸ್ವೀಕಾರದಿಂದ ರಾಷ್ಟ್ರಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದು ತಿಳಿಸಿದರು.
ನಿರಂತರವಾಗಿ ಹೆಚ್ಚುತ್ತಿರುವ ದಾಖಲೆಯ ರಫ್ತುಗಳನ್ನು ಉಲ್ಲೇಖಿಸಿದ ಪ್ರಧಾನಿ, ಈ ನಿಟ್ಟಿನಲ್ಲಿ ಸಹಕಾರಿ ಸಂಸ್ಥೆಗಳೂ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು. ಉತ್ಪಾದನೆಗೆ ಸಂಬಂಧಿಸಿದ ಸಹಕಾರಿ ಸಂಸ್ಥೆಗಳಿಗೆ ವಿಶೇಷ ಉತ್ತೇಜನ ನೀಡುತ್ತಿರುವುದ ಉದ್ದೇಶ ಇದೇ ಆಗಿದೆ. ಅವರ ತೆರಿಗೆ ಹೊರೆ ಕಡಿಮೆಯಾಗಿದೆ ಎಂದರು. ಉತ್ತಮ ರಫ್ತು ಕಾರ್ಯಕ್ಷಮತೆಗಾಗಿ ಅವರು ವಿಶೇಷವಾಗಿ ಡೈರಿ ವಲಯವನ್ನು ಪ್ರಸ್ತಾಪಿಸಿದರು ಮತ್ತು ನಮ್ಮ ಹಳ್ಳಿಗಳ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಸಂಕಲ್ಪದೊಂದಿಗೆ ಮುಂದುವರಿಯಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಈ ಸಂಕಲ್ಪದ ಉದಾಹರಣೆಯಾಗಿ ಶ್ರೀಅನ್ನಕ್ಕೆ (ಸಿರಿಧಾನ್ಯ) ಹೊಸ ಉತ್ತೇಜನವನ್ನು ಅವರು ಉಲ್ಲೇಖಿಸಿದರು. ಅಮೇರಿಕಾದ ಶ್ವೇತಭವನದಲ್ಲಿ ಇತ್ತೀಚೆಗೆ ನಡೆದ ಭೋಜನಕೂಟದಲ್ಲಿ ಶ್ರೀ ಅನ್ನ ಪ್ರಮುಖವಾಗಿತ್ತು ಎಂದು ಅವರು ಹೇಳಿದರು. ಭಾರತೀಯ ಶ್ರೀಅನ್ನವನ್ನು ಜಾಗತಿಕ ಮಾರುಕಟ್ಟೆಗೆ ಕೊಂಡೊಯ್ಯುವಂತೆ ಸಹಕಾರಿಗಳಿಗೆ ಸಲಹೆ ನೀಡಿದರು.
ಕಬ್ಬಿನ ರೈತರ ಸವಾಲುಗಳನ್ನು ಎದುರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ, ವಿಶೇಷವಾಗಿ ಲಾಭದಾಯಕ ಬೆಲೆಗಳು ಮತ್ತು ಸಕಾಲಿಕ ಹಣ ಪಾವತಿಯನ್ನು ಪಡೆಯದಿರುವ ಬಗ್ಗೆ ಪ್ರಧಾನಿ ವಿವರಿಸಿದರು. ರೈತರ ಬಾಕಿ ಪಾವತಿಗೆ ಸಕ್ಕರೆ ಕಾರ್ಖಾನೆಗಳಿಗೆ 20 ಸಾವಿರ ಕೋಟಿ ರೂ.ಗಳ ಪ್ಯಾಕೇಜ್ ನೀಡಲಾಗಿದೆ. ಪೆಟ್ರೋಲ್ಗೆ ಎಥೆನಾಲ್ ಮಿಶ್ರಣಕ್ಕೆ ಆದ್ಯತೆ ನೀಡಲಾಗಿದ್ದು, ಕಳೆದ 9 ವರ್ಷಗಳಲ್ಲಿ 70,000 ಕೋಟಿ ರೂಪಾಯಿ ಮೌಲ್ಯದ ಎಥೆನಾಲ್ ಅನ್ನು ಸಕ್ಕರೆ ಕಾರ್ಖಾನೆಗಳಿಂದ ಖರೀದಿಸಲಾಗಿದೆ ಎಂದು ಅವರು ಹೇಳಿದರು. ಅಲ್ಲದೆ, ಕಬ್ಬಿನ ಬೆಲೆ ಮೇಲಿನ ತೆರಿಗೆಯನ್ನೂ ತೆಗೆದುಹಾಕಲಾಗಿದೆ ಎಂದು ಅವರು ಮಾಹಿತಿ ನೀಡಿದರು. ತೆರಿಗೆ ಸಂಬಂಧಿತ ಸುಧಾರಣೆಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಈ ಬಜೆಟ್ನಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಹಳೆಯ ಬಾಕಿಗಳನ್ನು ಇತ್ಯರ್ಥಪಡಿಸಲು 10,000 ಕೋಟಿ ರೂಪಾಯಿಗಳ ನೆರವಿನ ಬಗ್ಗೆ ತಿಳಿಸಿದರು. ಈ ಎಲ್ಲಾ ಪ್ರಯತ್ನಗಳು ಸಹಕಾರಿ ಕ್ಷೇತ್ರದಲ್ಲಿ ಶಾಶ್ವತ ಬದಲಾವಣೆಗಳನ್ನು ತರುತ್ತಿವೆ ಮತ್ತು ಅದನ್ನು ಬಲಪಡಿಸುತ್ತಿವೆ ಎಂದು ಪ್ರಧಾನಿ ಹೇಳಿದರು.
ಆಹಾರ ಭದ್ರತೆಯು ಗೋಧಿ ಮತ್ತು ಅಕ್ಕಿಗೆ ಸೀಮಿತವಾಗಿಲ್ಲ ಎಂದು ತಿಳಿಸಿದ ಪ್ರಧಾನಿ, ಖಾದ್ಯ ತೈಲ, ಬೇಳೆಕಾಳುಗಳು, ಮೀನಿನ ಆಹಾರ ಮತ್ತು ಸಂಸ್ಕರಿಸಿದ ಆಹಾರ ಇತ್ಯಾದಿಗಳ ಆಮದಿನ ಮೇಲೆ ಭಾರತವು ಸರಿಸುಮಾರು 2 ರಿಂದ 2.5 ಲಕ್ಷ ಕೋಟಿ ರೂ. ವ್ಯಯಿಸುತ್ತಿದೆ ಎಂಬ ಅಂಶದ ಬಗ್ಗೆ ಗಮನ ಸೆಳೆದರು. ಸಹಕಾರಿ ಸಂಸ್ಥೆಗಳು ಈ ದಿಕ್ಕಿನಲ್ಲಿ ಕೆಲಸ ಮಾಡಲು ಮತ್ತು ಖಾದ್ಯ ತೈಲ ಉತ್ಪಾದನೆಯಲ್ಲಿ ದೇಶವನ್ನು ಆತ್ಮನಿರ್ಭರ ಮಾಡಲು ಅವರು ರೈತರಿಗೆ ಒತ್ತಾಯಿಸಿದರು. ಸರ್ಕಾರವು ಮಿಷನ್ ಮೋಡ್ನಲ್ಲಿ ಕೆಲಸ ಮಾಡಿದೆ ಎಂದ ಅವರು ಮಿಷನ್ ಪಾಮ್ ಆಯಿಲ್ನ ಉದಾಹರಣೆ ಮತ್ತು ಎಣ್ಣೆ ಬೀಜಗಳ ಉತ್ಪಾದನೆಯನ್ನು ಹೆಚ್ಚಿಸುವ ಉಪಕ್ರಮಗಳನ್ನು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. ಸಹಕಾರಿ ಸಂಘಗಳು ಸರಕಾರದೊಂದಿಗೆ ಕೈಜೋಡಿಸಿ ಈ ನಿಟ್ಟಿನಲ್ಲಿ ಕೆಲಸ ಮಾಡಿದಾಗ ಖಾದ್ಯ ತೈಲ ಉತ್ಪಾದನೆಯಲ್ಲಿ ರಾಷ್ಟ್ರ ಸ್ವಾವಲಂಬಿಯಾಗಲು ಸಾಧ್ಯ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ರೈತರಿಗೆ ತೋಟಗಾರಿಕೆ ತಂತ್ರಜ್ಞಾನ ಮತ್ತು ಸಲಕರಣೆಗಳ ಖರೀದಿಗೆ ಸಂಬಂಧಿಸಿದಂತೆ ಸಹಕಾರ ಸಂಘಗಳು ಎಲ್ಲಾ ರೀತಿಯ ಸೇವೆಗಳು ಮತ್ತು ಮಾಹಿತಿಯನ್ನು ಒದಗಿಸಬಹುದು ಎಂದು ಶ್ರೀ ಮೋದಿ ಸಲಹೆ ನೀಡಿದರು.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಸಾಧನೆಗಳನ್ನು ಪ್ರಧಾನಿ ಪ್ರಸ್ತಾಪಿಸಿದರು ಮತ್ತು ಇದು ಜಲಮೂಲಗಳ ಬಳಿ ವಾಸಿಸುವ ಗ್ರಾಮಸ್ಥರು ಮತ್ತು ರೈತರಿಗೆ ಹೆಚ್ಚುವರಿ ಆದಾಯದ ಸಾಧನವಾಗಿದೆ ಎಂದು ಹೇಳಿದರು. ಮೀನುಗಾರಿಕೆ ಕ್ಷೇತ್ರದಲ್ಲಿ 25 ಸಾವಿರಕ್ಕೂ ಹೆಚ್ಚು ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಮೀನು ಸಂಸ್ಕರಣೆ, ಮೀನು ಒಣಗಿಸುವುದು, ಮೀನು ಕ್ಯೂರಿಂಗ್, ಮೀನು ಸಂಗ್ರಹಣೆ, ಮೀನು ಕ್ಯಾನಿಂಗ್, ಮೀನು ಸಾಗಣೆ ಮುಂತಾದ ಕೈಗಾರಿಕೆಗಳನ್ನು ಬಲಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಕಳೆದ 9 ವರ್ಷಗಳಲ್ಲಿ ಒಳನಾಡು ಮೀನುಗಾರಿಕೆ ಕೂಡ ದ್ವಿಗುಣಗೊಂಡಿದೆ ಎಂದು ಅವರು ಹೇಳಿದರು ಮತ್ತು ಈ ಅಭಿಯಾನಕ್ಕೆ ಸಹಕಾರಿ ಕ್ಷೇತ್ರವು ಕೊಡುಗೆ ನೀಡುವ ಅಗತ್ಯ ಇದೆ ಎಂದು ಒತ್ತಿ ಹೇಳಿದರು. ಮೀನು ಸಾಕಣೆಯಂತಹ ಅನೇಕ ಹೊಸ ಕ್ಷೇತ್ರಗಳಲ್ಲಿ ಪಿಎಸಿಗಳ ಪಾತ್ರವು ವಿಸ್ತರಿಸುತ್ತಿದೆ ಮತ್ತು ದೇಶಾದ್ಯಂತ 2 ಲಕ್ಷ ಹೊಸ ವಿವಿಧೋದ್ದೇಶ ಸಂಘಗಳನ್ನು ರಚಿಸುವ ನಿಟ್ಟಿನಲ್ಲಿ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಇದರೊಂದಿಗೆ ಸಹಕಾರಿ ಸಂಸ್ಥೆಗಳ ಶಕ್ತಿಯು ಈ ವ್ಯವಸ್ಥೆಯಿಂದ ಹೊರಗುಳಿದಿರುವ ಹಳ್ಳಿಗಳು ಮತ್ತು ಪಂಚಾಯತ್ಗಳಿಗೂ ತಲುಪಲಿದೆ ಎಂದು ಪ್ರಧಾನಿ ಹೇಳಿದರು.
ಕಳೆದ ಕೆಲವು ವರ್ಷಗಳಲ್ಲಿ ಎಫ್ಪಿಒಗಳ ಮೇಲೆ ನೀಡಿರುವ ಗಮನದ ಬಗ್ಗೆ ಉಲ್ಲೇಖಿಸಿದ ಪ್ರಧಾನಿ, 10 ಸಾವಿರ ಹೊಸ ಎಫ್ಪಿಒಗಳನ್ನು ರಚಿಸುವ ಕೆಲಸ ನಡೆಯುತ್ತಿದೆ ಮತ್ತು ಈಗಾಗಲೇ 5 ಸಾವಿರ ಎಫ್ಪಿಒಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. “ಈ ಎಫ್ಪಿಒಗಳು ಸಣ್ಣ ರೈತರಿಗೆ ಹೆಚ್ಚಿನ ಶಕ್ತಿಯನ್ನು ನೀಡಲಿವೆ. ಇವು ಸಣ್ಣ ರೈತರನ್ನು ಮಾರುಕಟ್ಟೆಯಲ್ಲಿ ದೊಡ್ಡ ಶಕ್ತಿಯನ್ನಾಗಿ ಮಾಡುವ ಸಾಧನಗಳಾಗಿವೆ. ಬೀಜದಿಂದ ಮಾರುಕಟ್ಟೆಯವರೆಗೆ, ಸಣ್ಣ ರೈತ ಪ್ರತಿಯೊಂದು ವ್ಯವಸ್ಥೆಯನ್ನು ಹೇಗೆ ತನ್ನ ಪರವಾಗಿ ನಿಲ್ಲುವಂತೆ ಮಾಡಬಹುದು, ಮಾರುಕಟ್ಟೆಯ ಶಕ್ತಿಗೆ ಹೇಗೆ ಸವಾಲು ಹಾಕಬಹುದು, ಎಂಬುದನ್ನು ಕುರಿತ ಅಭಿಯಾನ ಇದಾಗಿದೆ ಎಂದು ಪ್ರಧಾನಿ ಹೇಳಿದರು. ಈ ಕ್ಷೇತ್ರದಲ್ಲಿ ಅನಿಯಮಿತ ಸಾಧ್ಯತೆಗಳನ್ನು ತೆರೆಯುವ ಮೂಲಕ ಪಿಎಸಿಗಳ ಮೂಲಕ ಎಫ್ಪಿಒಗಳನ್ನು ರಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ತಳಿಸಿದರು.
ಜೇನು ಉತ್ಪಾದನೆ, ಸಾವಯವ ಆಹಾರಗಳು, ಸೌರ ಫಲಕಗಳು ಮತ್ತು ಮಣ್ಣು ಪರೀಕ್ಷೆಯಂತಹ ರೈತರ ಆದಾಯವನ್ನು ಹೆಚ್ಚಿಸುವ ಇತರ ಕ್ರಮಗಳ ಬಗ್ಗೆಯೂ ಪ್ರಧಾನ ಮಂತ್ರಿಯವರು ಪ್ರಸ್ತಾಪಿಸಿದರು ಮತ್ತು ಇವುಗಳಿಗೆ ಸಹಕಾರಿ ವಲಯದಿಂದ ಬೆಂಬಲದ ಅಗತ್ಯವನ್ನು ಒತ್ತಿ ಹೇಳಿದರು. ರಾಸಾಯನಿಕ ಮುಕ್ತ ಬೇಸಾಯವನ್ನು ಪ್ರೋತ್ಸಾಹಿಸುವ ಮತ್ತು ಪರ್ಯಾಯ ರಸಗೊಬ್ಬರಗಳ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಇತ್ತೀಚಿನ ಪಿಎಂ-ಪ್ರಣಾಮ್ ಯೋಜನೆಯನ್ನು ಅವರು ಪ್ರಸ್ತಾಪಿಸಿದರು. ಇದಕ್ಕೆ ಸಹಕಾರಿ ಸಂಘಗಳ ಬೆಂಬಲವೂ ಬೇಕು ಎಂದು ಒತ್ತಿ ಹೇಳಿದರು. ಕೃಷಿಯಲ್ಲಿ ರಾಸಾಯನಿಕಗಳನ್ನು ಬಳಸದಂತೆ ಪ್ರತಿ ಜಿಲ್ಲೆಯಲ್ಲಿ 5 ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವಂತೆ ಸಹಕಾರಿ ಸಂಘಗಳಿಗೆ ತಿಳಿಸಿದರು.
'ತ್ಯಾಜ್ಯವನ್ನು ಸಂಪತ್ತಾಗಿ' ಪರಿವರ್ತಿಸಲು ದೇಶಾದ್ಯಂತ ಕೆಲಸ ಮಾಡುತ್ತಿರುವ ಗೋಬರ್ಧನ್ ಯೋಜನೆಯ ಬಗ್ಗೆ ಪ್ರಧಾನಮಂತ್ರಿ ಪ್ರಸ್ತಾಪಿಸಿದರು. ಹಸುವಿನ ಸಗಣಿ ಮತ್ತು ತ್ಯಾಜ್ಯವನ್ನು ವಿದ್ಯುತ್ ಮತ್ತು ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುವ ಘಟಕಗಳ ಬೃಹತ್ ಜಾಲವನ್ನು ಸರ್ಕಾರವು ಸಿದ್ಧಪಡಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು. ದೇಶದಲ್ಲಿ ಇದುವರೆಗೆ 50ಕ್ಕೂ ಹೆಚ್ಚು ಬಯೋಗ್ಯಾಸ್ ಸ್ಥಾವರಗಳನ್ನು ಹಲವು ಕಂಪನಿಗಳು ನಿರ್ಮಿಸಿವೆ ಎಂದು ಮಾಹಿತಿ ನೀಡಿದ ಪ್ರಧಾನಿ, ಸಹಕಾರ ಸಂಘಗಳು ಮುಂದೆ ಬಂದು ಗೋಬರ್ಧನ್ ಘಟಕಗಳಿಗೆ ಬೆಂಬಲ ನೀಡುವಂತೆ ಒತ್ತಾಯಿಸಿದರು. ಇದರಿಂದ ದನಗಾಹಿಗಳಿಗೆ ಮಾತ್ರವಲ್ಲದೆ ಬೀದಿ ದನಗಳಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ಹೈನುಗಾರಿಕೆ ಮತ್ತು ಪಶುಸಂಗೋಪನಾ ಕ್ಷೇತ್ರದಲ್ಲಿ ಕೈಗೊಂಡಿರುವ ಸಮಗ್ರ ಕಾರ್ಯಗಳ ಬಗ್ಗೆಯೂ ಪ್ರಧಾನಿ ಗಮನ ಸೆಳೆದರು. ಹೆಚ್ಚಿನ ಸಂಖ್ಯೆಯ ಜಾನುವಾರು ಸಾಕಣೆದಾರರು ಸಹಕಾರಿ ಆಂದೋಲನದೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಅವರು ತಿಳಿಸಿದರು. ಕಾಲು ಬಾಯಿ ರೋಗದ ಉದಾಹರಣೆಯನ್ನು ನೀಡುತ್ತಾ, ಇದು ಬಹಳ ಹಿಂದಿನಿಂದಲೂ ಪ್ರಾಣಿಗಳಿಗೆ ದೊಡ್ಡ ಸಂಕಟವನ್ನು ಉಂಟುಮಾಡುತ್ತಿದೆ ಮತ್ತು ಜಾನುವಾರು ಸಾಕಣೆದಾರರಿಗೆ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳ ದೊಡ್ಡ ನಷ್ಟವನ್ನು ಉಂಟುಮಾಡುತ್ತಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಕೇಂದ್ರ ಸರ್ಕಾರವು ದೇಶದಾದ್ಯಂತ ಮೊದಲ ಬಾರಿಗೆ ಉಚಿತ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದ್ದು, 24 ಕೋಟಿ ಪ್ರಾಣಿಗಳಿಗೆ ಲಸಿಕೆ ಹಾಕಲಾಗಿದೆ ಎಂದು ಅವರು ಹೇಳಿದರು. ಕಾಲು ಬಾಯಿ ರೋಗವನ್ನು ಇನ್ನೂ ಬೇರುಸಮೇತ ನಿರ್ಮೂಲನೆ ಮಾಡಬೇಕಿದೆ, ಇದಕ್ಕಾಗಿ ಲಸಿಕಾ ಅಭಿಯಾನವಾಗಲಿ, ಪ್ರಾಣಿ ಪತ್ತೆ ಹಚ್ಚುವ ಕಾರ್ಯವಾಗಲಿ ಸಹಕಾರಿ ಸಂಘಗಳು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು. ಹೈನುಗಾರಿಕೆ ಕ್ಷೇತ್ರದಲ್ಲಿ ಜಾನುವಾರು ಸಾಕಣೆದಾರರು ಮಾತ್ರ ಪಾಲುದಾರರಲ್ಲ, ಆನಮ್ಮ ಪ್ರಾಣಿಗಳು ಸಹ ಸಮಾನ ಪಾಲುದಾರರು ಎಂದು ಶ್ರೀ ಮೋದಿ ಒತ್ತಿ ಹೇಳಿದರು.
ಸರ್ಕಾರ ಆರಂಭಿಸಿರುವ ವಿವಿಧ ಧ್ಯೇಯೋದ್ದೇಶಗಳನ್ನು ಪೂರೈಸಲು ಸಹಕಾರಿ ಸಂಸ್ಥೆಗಳು ಕೊಡುಗೆ ನೀಡುವಂತೆ ಪ್ರಧಾನಮಂತ್ರಿ ಕರೆ ನೀಡಿದರು. ಅಮೃತ ಸರೋವರ, ಜಲ ಸಂರಕ್ಷಣೆ, ಪ್ರತಿ ಹನಿ ಹೆಚ್ಚು ಬೆಳೆ, ಸೂಕ್ಷ್ಮ ನೀರಾವರಿ ಇತ್ಯಾದಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ದಾಸ್ತಾನು ವಿಷಯದ ಬಗ್ಗೆಯೂ ಪ್ರಧಾನಿ ಮಾತನಾಡಿದರು. ಶೇಖರಣಾ ಸೌಲಭ್ಯಗಳ ಕೊರತೆಯು ಬಹಳ ಹಿಂದಿನಿಂದಲೂ ಆಹಾರ ಭದ್ರತೆಗೆ ದೊಡ್ಡ ಸವಾಲಾಗಿದೆ ಎಂದು ಅವರು ಹೇಳಿದರು. ನಾವು ಉತ್ಪಾದಿಸುವ ಧಾನ್ಯದಲ್ಲಿ ಶೇ 50ಕ್ಕಿಂತ ಕಡಿಮೆ ಪ್ರಮಾಣದಷ್ಟನ್ನು ಮಾತ್ರ ಸಂಗ್ರಹಿಸಲು ಸಾಧ್ಯವಾಗುತ್ತಿದೆ ಎಂದರು. ಕೇಂದ್ರ ಸರ್ಕಾರವು ವಿಶ್ವದ ಅತಿದೊಡ್ಡ ದಾಸ್ತಾನು ಯೋಜನೆಯನ್ನು ಹೊರತಂದಿದೆ ಮತ್ತು ಕಳೆದ ಹಲವು ದಶಕಗಳಲ್ಲಿದ್ದ ಒಟ್ಟು 1400 ಲಕ್ಷ ಟನ್ಗಳಿಗೆ ಹೋಲಿಸಿದರೆ ಮುಂದಿನ ಐದು ವರ್ಷಗಳಲ್ಲಿ 700 ಲಕ್ಷ ಟನ್ ಸಂಗ್ರಹಣಾ ಸಾಮರ್ಥ್ಯವನ್ನು ರಚಿಸಲು ಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಕೃಷಿ ಮೂಲಸೌಕರ್ಯಕ್ಕಾಗಿ ಒಂದು ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ರಚಿಸಲಾಗಿದೆ ಮತ್ತು ಕಳೆದ 3 ವರ್ಷಗಳಲ್ಲಿ 40 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹೂಡಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಈ ಹೂಡಿಕೆಯ ಹೆಚ್ಚಿನ ಭಾಗವು ಪಿಎಸಿಗಳಿಂದ ಬಂದಿದೆ ಮತ್ತು ಫಾರ್ಮ್ಗೇಟ್ ಮೂಲಸೌಕರ್ಯಗಳ ಸೃಷ್ಟಿಯಲ್ಲಿ ಸಹಕಾರಿಗಳಿಂದ ಹೆಚ್ಚಿನ ಪ್ರಯತ್ನಗಳ ಅಗತ್ಯವಿದೆ ಎಂದು ಅವರು ಹೇಳಿದರು.
ನವ ಭಾರತದಲ್ಲಿ ಸಹಕಾರಿ ಸಂಸ್ಥೆಗಳು ದೇಶದ ಆರ್ಥಿಕ ಮೂಲದ ಪ್ರಬಲ ಮಾಧ್ಯಮವಾಗಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಸಹಕಾರಿ ಮಾದರಿಯನ್ನು ಅನುಸರಿಸುವ ಮೂಲಕ ಸ್ವಾವಲಂಬಿ ಹಳ್ಳಿಗಳನ್ನು ನಿರ್ಮಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಸಹಕಾರ ಸಂಘಗಳಲ್ಲಿ ಸಹಕಾರವನ್ನು ಉತ್ತಮಪಡಿಸಲು ಸಲಹೆ ನೀಡಿದ ಅವರು, ಸಹಕಾರಿ ಸಂಸ್ಥೆಗಳು ರಾಜಕೀಯದ ಬದಲು ಸಾಮಾಜಿಕ ನೀತಿ ಮತ್ತು ರಾಷ್ಟ್ರೀಯ ನೀತಿಯ ವಾಹಕಗಳಾಗಬೇಕು ಎಂದು ಹೇಳಿದ ಪ್ರಧಾನಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ, ಕೇಂದ್ರ ಸಹಕಾರ ರಾಜ್ಯ ಸಚಿವ ಶ್ರೀ ಬಿ ಎಲ್ ವರ್ಮಾ, ಏಷ್ಯಾ ಪೆಸಿಫಿಕ್ ಇಂಟರ್ನ್ಯಾಷನಲ್ ಕೋಆಪರೇಟಿವ್ ಅಲೈಯನ್ಸ್ ಅಧ್ಯಕ್ಷ ಡಾ ಚಂದ್ರಪಾಲ್ ಸಿಂಗ್ ಯಾದವ್ ಮತ್ತು ಭಾರತ ರಾಷ್ಟ್ರೀಯ ಸಹಕಾರ ಒಕ್ಕೂಟದ ಅಧ್ಯಕ್ಷ ಶ್ರೀ ದಿಲೀಪ್ ಸಂಘಾನಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಪ್ರಧಾನ ಮಂತ್ರಿಯವರ‘ಸಹಕಾರ ಸೇ ಸಮೃದ್ಧಿʼ ದೃಷ್ಟಿಕೋನದಲ್ಲಿ ದೃಢವಾದ ನಂಬಿಕೆ ಇಟ್ಟಿರುವ ಸರ್ಕಾರವು ದೇಶದಲ್ಲಿ ಸಹಕಾರ ಚಳುವಳಿಯನ್ನು ಉತ್ತೇಜಿಸಲು ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಪ್ರಯತ್ನಕ್ಕೆ ಶಕ್ತಿ ತುಂಬಲು ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಸರ್ಕಾರ ರಚಿಸಿದೆ. ಕಾರ್ಯಕ್ರಮದಲ್ಲಿ ಪ್ರಧಾನಿಯವರು ಭಾಗವಹಿಸಿರುವುದು ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ.
17 ನೇ ಭಾರತೀಯ ಸಹಕಾರಿ ಕಾಂಗ್ರೆಸ್ ಅನ್ನು 1-2 ಜುಲೈ 2023 ರಂದು ಆಯೋಜಿಸಲಾಗಿದೆ, ಇದು ಸಹಕಾರ ಚಳವಳಿಯಲ್ಲಿನ ವಿವಿಧ ಪ್ರವೃತ್ತಿಗಳನ್ನು ಚರ್ಚಿಸಲು, ಅಳವಡಿಸಿಕೊಳ್ಳುತ್ತಿರುವ ಉತ್ತಮ ಅಭ್ಯಾಸಗಳನ್ನು ಪ್ರದರ್ಶಿಸಲು, ಮುಂದಿನ ಸವಾಲುಗಳನ್ನು ಎದುರಿಸಲು ಮತ್ತು ಭಾರತದ ಸಹಕಾರಿ ಚಳುವಳಿಯ ಬೆಳವಣಿಗೆಗೆ ಭವಿಷ್ಯದ ನೀತಿ ನಿರ್ದೇಶನವನ್ನು ರೂಪಿಸಲು ಉದ್ದೇಶಿಸಿದೆ. ‘ಅಮೃತ್ ಕಾಲ: ಶಕ್ತಿಶಾಲಿ ಭಾರತಕ್ಕಾಗಿ ಸಹಕಾರದ ಮೂಲಕ ಸಮೃದ್ಧಿ’ಎಂಬ ಮುಖ್ಯ ವಿಷಯದ ಕುರಿತು ಏಳು ತಾಂತ್ರಿಕ ಅಧಿವೇಶನಗಳು ನಡೆಯಲಿವೆ. ಪ್ರಾಥಮಿಕ ಹಂತದಿಂದ ರಾಷ್ಟ್ರ ಮಟ್ಟದವರೆಗಿನ ಸಹಕಾರಿ ಸಂಸ್ಥೆಗಳು, ಅಂತಾರಾಷ್ಟ್ರೀಯ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು, ಅಂತಾರಾಷ್ಟ್ರೀಯ ಸಹಕಾರ ಒಕ್ಕೂಟದ ಪ್ರತಿನಿಧಿಗಳು, ಸಚಿವಾಲಯಗಳು, ವಿಶ್ವವಿದ್ಯಾನಿಲಯಗಳು ಮತ್ತು ಪ್ರಖ್ಯಾತ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ 3600 ಕ್ಕೂ ಹೆಚ್ಚು ಪಾಲುದಾರರ ಭಾಗವಹಿಸುವಿಕೆಗೆ ಇದು ಸಾಕ್ಷಿಯಾಗಲಿದೆ.
मैंने लाल किले से कहा है, हमारे हर लक्ष्य की प्राप्ति के लिए सबका प्रयास आवश्यक है।
— PMO India (@PMOIndia) July 1, 2023
सहकार की स्पिरिट भी तो यही है: PM @narendramodi pic.twitter.com/GYWnPSzf4B
जब विकसित भारत के लिए बड़े लक्ष्यों की बात आई, तो हमने सहकारिता को एक बड़ी ताकत देने का फैसला किया। pic.twitter.com/GujRgc53iI
— PMO India (@PMOIndia) July 1, 2023
करोड़ों छोटे किसानों को पीएम किसान सम्मान निधि मिल रही है।
— PMO India (@PMOIndia) July 1, 2023
कोई बिचौलिया नहीं, कोई फर्ज़ी लाभार्थी नहीं। pic.twitter.com/8Ptp8MOQ4i
किसान हितैषी अप्रोच को जारी रखते हुए, कुछ दिन पहले एक और बड़ा निर्णय लिया गया है। pic.twitter.com/Qyv119vAVf
— PMO India (@PMOIndia) July 1, 2023
अमृतकाल में देश के गांव, देश के किसान के सामर्थ्य को बढ़ाने के लिए अब देश के कॉपरेटिव सेक्टर की भूमिका बहुत बड़ी होने वाली है। pic.twitter.com/Pm1WTnlWQX
— PMO India (@PMOIndia) July 1, 2023
केंद्र सरकार ने मिशन पाम ऑयल शुरु किया है।
— PMO India (@PMOIndia) July 1, 2023
इसके तहत तिलहन की फसलों को बढ़ावा दिया जा रहा है। pic.twitter.com/18TDetCKuJ
बीते वर्षों में हमने किसान उत्पादक संघों यानि FPOs के निर्माण पर भी विशेष बल दिया है। pic.twitter.com/iYgpZx7n58
— PMO India (@PMOIndia) July 1, 2023
आज कैमिकल मुक्त खेती, नैचुरल फार्मिंग, सरकार की प्राथमिकता है। pic.twitter.com/fwl3aSu5Bk
— PMO India (@PMOIndia) July 1, 2023
Per Drop More Crop
— PMO India (@PMOIndia) July 1, 2023
ज्यादा पानी, ज्यादा फसल की गारंटी नहीं है।
Micro-irrigation का कैसे गांव-गांव तक विस्तार हो, इसके लिए सहकारी समितियों को अपनी भूमिका का भी विस्तार करना होगा। pic.twitter.com/5lG4XuwN49