ʻಏಕ ಭಾರತ-ಶ್ರೇಷ್ಠ ಭಾರತʼ ಕಲ್ಪನೆಯನ್ನು ʻಎನ್‌ಸಿಸಿʼ‌ ಎತ್ತಿ ಹಿಡಿಯುತ್ತದೆ: ಪ್ರಧಾನಿ ಮೋದಿ
"ಕಾರ್ತವ್ಯ ಪಥದಲ್ಲಿ 75ನೇ ಗಣರಾಜ್ಯೋತ್ಸವದ ಮೆರವಣಿಗೆಯನ್ನು 'ನಾರಿ ಶಕ್ತಿ'ಗೆ ಸಮರ್ಪಿಸಲಾಯಿತು
"ಭಾರತದ 'ನಾರಿ ಶಕ್ತಿ' ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಸಾಮರ್ಥ್ಯವನ್ನು ಹೇಗೆ ಸಾಬೀತುಪಡಿಸುತ್ತಿದೆ ಎಂಬುದನ್ನು ಜಗತ್ತು ನೋಡುತ್ತಿದೆ"
"ಈ ಹಿಂದೆ ಹೆಣ್ಣುಮಕ್ಕಳಿಗೆ ಪ್ರವೇಶವನ್ನು ನಿರ್ಬಂಧಿಸಿದ್ದ ಅಥವಾ ಸೀಮಿತಗೊಳಿಸಿದ ಕ್ಷೇತ್ರಗಳಲ್ಲೂ ನಾವು ಅವರಿಗೆ ಅವಕಾಶಗಳನ್ನು ಮುಕ್ತಗೊಳಿಸಿದ್ದೇವೆ"
"ಅದು ನವೋದ್ಯಮಗಳಾಗಿರಲಿ ಅಥವಾ ಸ್ವಸಹಾಯ ಗುಂಪುಗಳಾಗಿರಲಿ, ಮಹಿಳೆಯರು ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ"
"ಗಂಡು ಮತ್ತು ಹೆಣ್ಣು ಮಕ್ಕಳ ಪ್ರತಿಭೆಗೆ ಸಮಾನ ಅವಕಾಶವನ್ನು ನೀಡಿದಾಗ, ದೇಶದ ಪ್ರತಿಭಾ ಭಂಡಾರ ಅಗಾಧವಾಗುತ್ತದೆ"
"ಕಳೆದ 10 ವರ್ಷಗಳಲ್ಲಿ, ಭಾರತದ ಡಿಜಿಟಲ್ ಆರ್ಥಿಕತೆಯು ನಮ್ಮ ಯುವಕರಿಗೆ ಹೊಸ ಶಕ್ತಿಯ ಮೂಲವಾಗಿ ಮಾರ್ಪಟ್ಟಿದೆ"
"ಅಭಿವೃದ್ಧಿ ಹೊಂದಿದ ಭಾರತವು ನಮ್ಮ ಯುವಕರ ಕನಸುಗಳನ್ನು ಈಡೇರಿಸುತ್ತದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯ ಕಾರ್ಯಪ್ಪ ಪೆರೇಡ್ ಮೈದಾನದಲ್ಲಿ ವಾರ್ಷಿಕ ʻಎನ್‌ಸಿಸಿ ಪಿಎಂ ರ‍್ಯಾಲಿʼಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಶ್ರೀ ಮೋದಿ ಅವರು ಸಾಕ್ಷಿಯಾದರು. ಅತ್ಯುತ್ತಮ ಕೆಡೆಟ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಎನ್‌ಸಿಸಿ ಬಾಲಕಿಯರ ಮೆಗಾ ಸೈಕ್ಲೋಥಾನ್ ಮತ್ತು ಝಾನ್ಸಿಯಿಂದ ದೆಹಲಿಗೆ ʻನಾರಿಶಕ್ತಿ ವಂದನೆ ಓಟʼಕ್ಕೂ (ಎನ್ಎಸ್‌ವಿಆರ್‌) ಅವರು ಹಸಿರು ನಿಶಾನೆ ತೋರಿದರು.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸ್ವತಃ ಮಾಜಿ ʻಎನ್‌ಸಿಸಿʼ ಕೆಡೆಟ್ ಆಗಿರುವ ತಮಗೆ, ʻಎನ್‌ಸಿಸಿʼ ಕೆಡೆಟ್‌ಗಳ ನಡುವೆ ಇದ್ದಾಗ ಸಹಜವಾಗಿ ಹಳೆಯ ನೆನಪುಗಳು ಮರುಕಳಿಸುತ್ತವೆ ಎಂದರು. ದೇಶದ ವಿವಿಧ ಭಾಗಗಳಿಂದ ಬಂದ ಕೆಡೆಟ್‌ಗಳ ಉಪಸ್ಥಿತಿಯನ್ನು ಉಲ್ಲೇಖಿಸಿ, "ಎನ್‌ಸಿಸಿ ಕೆಡೆಟ್‌ಗಳ ನಡುವೆ ಉಪಸ್ಥಿತರಿರುವುದು ʻಏಕ ಭಾರತ- ಶ್ರೇಷ್ಠ ಭಾರತʼದ ಕಲ್ಪನೆಯನ್ನು ಎತ್ತಿ ತೋರುತ್ತದೆ," ಎಂದು ಪ್ರಧಾನಿ ಹೇಳಿದರು. ʻಎನ್‌ಸಿಸಿʼಯ ವ್ಯಾಪ್ತಿಯು ನಿರಂತರವಾಗಿ ಬೆಳೆಯುತ್ತಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದ ಅವರು, ಇಂದಿನ ಸಂದರ್ಭವು ಹೊಸ ಆರಂಭವನ್ನು ಸೂಚಿಸುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ, ʻರೋಮಾಂಚಕ ಗ್ರಾಮʼಗಳ ಯೋಜನೆಯಡಿ ಸರ್ಕಾರವು ಅಭಿವೃದ್ಧಿಪಡಿಸುತ್ತಿರುವ ಗಡಿ ಪ್ರದೇಶಗಳ ಗ್ರಾಮಗಳ 400ಕ್ಕೂ ಹೆಚ್ಚು ಸರಪಂಚರು ಮತ್ತು ದೇಶಾದ್ಯಂತ ಸ್ವಸಹಾಯ ಗುಂಪುಗಳ 100ಕ್ಕೂ ಹೆಚ್ಚು ಮಹಿಳೆಯರ ಉಪಸ್ಥಿತಿಯ ಬಗ್ಗೆ ಅವರು ಗಮನ ಸೆಳೆದರು.

ಈ ರ‍್ಯಾಲಿಯು 'ಒಂದು ಜಗತ್ತು, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಮನೋಭಾವವನ್ನು ಬಲಪಡಿಸುತ್ತಿದೆ ಎಂದು ಪ್ರಧಾನಿ ಗಮನಸೆಳೆದರು. 2014ರಲ್ಲಿ ಈ ರ‍್ಯಾಲಿಯಲ್ಲಿ 10 ದೇಶಗಳ ಕೆಡೆಟ್‌ಗಳು ಇದ್ದರು, ಇಂದು ಈ ಸಂಖ್ಯೆ 24ಕ್ಕೆ ಏರಿದೆ ಎಂದು ಅವರು ಗಮನಸೆಳೆದರು.

ಐತಿಹಾಸಿಕ 75ನೇ ಗಣರಾಜ್ಯೋತ್ಸವವನ್ನು ʻನಾರಿಶಕ್ತಿʼಗೆ ಅರ್ಪಿಸಲಾಗಿದೆ ಎಂದು ಉಲ್ಲೇಖಿಸಿದ ಪ್ರಧಾನಿ ಮೋದಿ, ಜೀವನದ ಪ್ರತಿಯೊಂದು ಹಂತದಲ್ಲೂ ಭಾರತದ ಹೆಣ್ಣುಮಕ್ಕಳು ಇಟ್ಟ ದಾಪುಗಾಲುಗಳನ್ನು ದೇಶವು ಪ್ರದರ್ಶಿಸಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಶಸ್ತಿ ಪಡೆದ ಕೆಡೆಟ್‌ಗಳನ್ನು ಅವರು ಶ್ಲಾಘಿಸಿದರು. ವಡೋದರಾ ಮತ್ತು ಕಾಶಿಯ ಸೈಕಲ್ ಸವಾರರ ತಂಡಗಳ ಬಗ್ಗೆ ಪ್ರಸ್ತಾಪಿಸಿದ ಮೋದಿ ಅವರು ಆ ಎರಡೂ ಸ್ಥಳಗಳಿಂದ ತಾವು ಸಂಸದರಾಗಿರುವುದನ್ನು ಉಲ್ಲೇಖಿಸಿದರು.

 

ಸಮಾಜದಲ್ಲಿ ಮಹಿಳೆಯರ ಪಾತ್ರವು ಸಾಂಸ್ಕೃತಿಕ ವ್ಯವಸ್ಥೆಗಳು ಮತ್ತು ಸಂಸ್ಥೆಗಳಿಗೆ ಸೀಮಿತವಾಗಿದ್ದ ಸಮಯವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು ಭೂಮಿ, ಸಮುದ್ರ, ವಾಯು ಅಥವಾ ಬಾಹ್ಯಾಕಾಶ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತದ ಹೆಣ್ಣುಮಕ್ಕಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿರುವುದನ್ನು ಜಗತ್ತು ಇಂದು ನೋಡುತ್ತಿದೆ ಎಂದರು. ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸುವ ಮಹಿಳೆಯರ ದೃಢನಿಶ್ಚಯವನ್ನು ಅವರು ಒತ್ತಿ ಹೇಳಿದರು. ಇದು ರಾತ್ರೋರಾತ್ರಿ ಬಂದ ಯಶಸ್ಸಿನ ಫಲವಲ್ಲ, ಬದಲಿಗೆ ಕಳೆದ 10 ವರ್ಷಗಳ ಸಮರ್ಪಿತ ಪ್ರಯತ್ನಗಳ ಫಲಿತಾಂಶವಾಗಿದೆ ಎಂದು ಹೇಳಿದರು. "ಭಾರತೀಯ ಸಂಪ್ರದಾಯಗಳಲ್ಲಿ ನಾರಿಯನ್ನು ಸದಾ ʻಶಕ್ತಿʼ ಎಂದು ಪರಿಗಣಿಸಲಾಗಿದೆ," ಎಂದು ಪ್ರಧಾನಿ ಮೋದಿ ವಿವರಿಸಿದರು. ಬ್ರಿಟಿಷರನ್ನು ದಮನಿಸಿದ ರಾಣಿ ಲಕ್ಷ್ಮಿ ಬಾಯಿ, ರಾಣಿ ಚೆನ್ನಮ್ಮ ಮತ್ತು ರಾಣಿ ವೇಲು ನಾಚಿಯಾರ್ ಅವರಂತಹ ಧೈರ್ಯಶಾಲಿ ಮಹಿಳಾ ಯೋಧರನ್ನು ಉಲ್ಲೇಖಿಸಿದರು. ಕಳೆದ 10 ವರ್ಷಗಳಲ್ಲಿ, ದೇಶದಲ್ಲಿ ನಾರಿಶಕ್ತಿಯ  ಈ ಬಲವನ್ನು ಸರ್ಕಾರ ನಿರಂತರವಾಗಿ ವೃದ್ಧಿಗೊಳಿಸಿದೆ ಎಂದು ಪ್ರಧಾನಿ ಹೇಳಿದರು. ಒಂದು ಕಾಲದಲ್ಲಿ ನಿರ್ಬಂಧಿಸಲಾಗಿದ್ದ   ಅಥವಾ ಸೀಮಿತವಾಗಿದ್ದ ಕ್ಷೇತ್ರಗಳಿಗೆ ಮಹಿಳೆಯರು ಪ್ರವೇಶಿಸಲು ಇದ್ದ ಎಲ್ಲಾ ಅಡೆತಡೆಗಳನ್ನು ನಿವಾರಣೆ ಮಾಡಿದ್ದನ್ನು ಶ್ರೀ ಮೋದಿ ಅವರು ಉಲ್ಲೇಖಿಸಿದರು. ಮೂರು ರಕ್ಷಣಾ ಪಡೆಗಳ ಮುಂಚೂಣಿ ನೆಲೆಗಳನ್ನು ಮಹಿಳೆಯರಿಗೆ ಮುಕ್ತಗೊಳಿಸುವುದು, ರಕ್ಷಣಾ ಪಡೆಯಲ್ಲಿ ಮಹಿಳೆಯರ ಕಾಯಂ ನಿಯೋಜನೆ ಮತ್ತು ಕಮಾಂಡ್ ಹುದ್ದೆಗಳು  ಹಾಗೂ   ಸಮರ   ನೆಲೆಯ  ಸ್ಥಾನಗಳನ್ನು ಮಹಿಳೆಯರಿಗೆ ಮುಕ್ತಗೊಳಿಸಿದ ಉದಾಹರಣೆಗಳನ್ನು ನೀಡಿದರು. "ಅದು ʻಅಗ್ನಿವೀರ್ʼ ಆಗಿರಲಿ ಅಥವಾ ಯುದ್ಧ ವಿಮಾನ ಪೈಲಟ್ ಆಗಿರಲಿ, ಮಹಿಳೆಯರ ಭಾಗವಹಿಸುವಿಕೆ ಹೆಚ್ಚುತ್ತಿದೆ," ಎಂದು ಪ್ರಧಾನಿ ಹೇಳಿದರು. ʻಸೈನಿಕ ಶಾಲೆʼಗಳಲ್ಲಿ ಬಾಲಕಿಯರ ಪ್ರವೇಶಕ್ಕೆ ಅವಕಾಶಮಾಡಿಕೊಡುವ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಕಳೆದ 10 ವರ್ಷಗಳಲ್ಲಿ ಕೇಂದ್ರ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಸಂಖ್ಯೆ ದ್ವಿಗುಣಗೊಂಡಿದೆ, ಜೊತೆಗೆ, ರಾಜ್ಯ ಪೊಲೀಸ್ ಪಡೆಯಲ್ಲಿ ಹೆಚ್ಚಿನ ಮಹಿಳೆಯರನ್ನು ನೇಮಕ ಮಾಡಲು ರಾಜ್ಯಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು.

 

ಸಮಾಜದ ಮನಸ್ಥಿತಿಯ ಮೇಲೆ ಈ ಕ್ರಮಗಳ ಪರಿಣಾಮವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇತರ ಕ್ಷೇತ್ರಗಳಲ್ಲಿಯೂ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿದೆ ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಮತ್ತು ವಿಮೆ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಭಾಗಿಯಾಗಿರುವ ಬಗ್ಗೆ ಅವರು ಗಮನಸೆಳೆದರು. "ನವೋದ್ಯಮಗಳು ಅಥವಾ ಸ್ವಸಹಾಯ ಗುಂಪುಗಳಂತಹ ಕ್ಷೇತ್ರಗಳಲ್ಲಿಯೂ ಇದೇ ಕಥೆ ಇದೆ," ಎಂದು ಅವರು ಹೇಳಿದರು.

ಮಹಿಳೆಯರ ಪಾಲ್ಗೊಳ್ಳುವಿಕೆಯಿಂದಾಗಿ ಪ್ರತಿಭೆಗಳ ಸಂಖ್ಯೆಯನ್ನು ಹೆಚ್ಚಿಸುವುದು ʻವಿಕಸಿತ ಭಾರತʼದ ಸೃಷ್ಟಿಯನ್ನು ಸೂಚಿಸುತ್ತದೆ ಎಂದು ಅವರು ಬಣ್ಣಿಸಿದರು. "ಇಡೀ ಜಗತ್ತು ಭಾರತವನ್ನು "ವಿಶ್ವ ಮಿತ್ರ" ಎಂದು ನೋಡುತ್ತಿದೆ ಎಂದರು. "ಅನೇಕ ದೇಶಗಳು ಭಾರತದ ಯುವಕರ ಪ್ರತಿಭೆ ಮತ್ತು ಕೌಶಲ್ಯದಲ್ಲಿ ಅವಕಾಶವನ್ನು ನೋಡುತ್ತಿವೆ," ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಯುವಜನರ ಕುರಿತಾಗಿ ತಮ್ಮ ದೂರದೃಷ್ಟಿಯನ್ನು ವಿವರಿಸಿದರು. ಮುಂದಿನ 25 ವರ್ಷಗಳಲ್ಲಿ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಅವರ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು. ಮನದಾಳದಿಂದ ಮಾತನಾಡಿದ ಪ್ರಧಾನಿಯವರು, "ಈ ಪರಿವರ್ತನಾತ್ಮಕ ಯುಗವು, ಮುಂಬರುವ 25 ವರ್ಷಗಳ ಅವಧಿಯು, ʻಅಭಿವೃದ್ಧಿ ಹೊಂದಿದ ಭಾರತʼದ ಸೃಷ್ಟಿಗೆ ಸಾಕ್ಷಿಯಾಗುವುದರ ಜೊತೆಗೆ ಮುಖ್ಯವಾಗಿ ಯುವಕರಿಗೆ ಪ್ರಯೋಜನವನ್ನು ನೀಡುತ್ತದೆಯೇ ಹೊರತು ಮೋದಿಗೆ ಅಲ್ಲ" ಎಂದು ಘೋಷಿಸಿದರು. ಭಾರತದ ಅಭಿವೃದ್ಧಿಯ ಪಯಣದ ಪ್ರಾಥಮಿಕ ಫಲಾನುಭವಿಗಳು ಯುವಕರೇ ಎಂದು ಎತ್ತಿ ತೋರಿದ ಪ್ರಧಾನಿ ಮೋದಿ, "ಈ ಯುಗದ ಅತಿದೊಡ್ಡ ಫಲಾನುಭವಿಗಳು ನಿಮ್ಮಂತಹ ಯುವ ವ್ಯಕ್ತಿಗಳು," ಎಂದು ಹೇಳಿದರು. ನಿರಂತರ ಕಠಿಣ ಪರಿಶ್ರಮದ ಮಹತ್ವವನ್ನು ಒತ್ತಿ ಹೇಳಿದ ಅವರು, "ನೀವೆಲ್ಲರೂ ಉತ್ಕೃಷ್ಟತೆಗಾಗಿ ನಿರಂತರವಾಗಿ ಶ್ರಮಿಸುವುದು ಅತ್ಯಗತ್ಯವಾಗಿದೆ," ಎಂದು ಹೇಳಿದರು.

 

ಕಳೆದ ದಶಕದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಆಗಿರುವ ಪ್ರಗತಿಯ ಬಗ್ಗೆ ಉಲ್ಲೇಖಿಸಿದ ಪ್ರಧಾನಿ ಮೋದಿ, "ಕಳೆದ 10 ವರ್ಷಗಳಲ್ಲಿ, ಪ್ರತಿಯೊಂದು ಕ್ಷೇತ್ರದಲ್ಲೂ ಕೌಶಲ್ಯ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಉದ್ಯಮಶೀಲತೆ ನಿಟ್ಟಿನಲ್ಲಿ ಗಮನಾರ್ಹ ಪ್ರಯತ್ನಗಳನ್ನು ಮಾಡಲಾಗಿದೆ," ಎಂದು ಹೇಳಿದರು. ಭಾರತದ ಪ್ರಗತಿಯನ್ನು ಮುನ್ನಡೆಸುವಲ್ಲಿ ಗರಿಷ್ಠ ಪರಿಣಾಮಕ್ಕಾಗಿ ಯುವಕರು ತಮ್ಮ ಪ್ರತಿಭೆ ಮತ್ತು ಕೌಶಲ್ಯಗಳನ್ನು ಬಳಸಿಕೊಳ್ಳುವಂತೆ ಅವರು ಕರೆ ನೀಡಿದರು.

ದೇಶಾದ್ಯಂತ ಸಾವಿರಾರು ಶಾಲೆಗಳನ್ನು ಆಧುನೀಕರಿಸುವ ಗುರಿಯನ್ನು ಹೊಂದಿರುವ ʻಹೊಸ ರಾಷ್ಟ್ರೀಯ ಶಿಕ್ಷಣ ನೀತಿʼ ಮತ್ತು ʻಪಿಎಂ ಶ್ರೀʼ ಅಡಿಯಲ್ಲಿ ʻಸ್ಮಾರ್ಟ್ ಶಾಲೆ ಅಭಿಯಾನʼದಂತಹ ಉಪಕ್ರಮಗಳ ಮೂಲಕ ಯುವಕರನ್ನು ಸಬಲೀಕರಣಗೊಳಿಸುವ ಸರ್ಕಾರದ ಬದ್ಧತೆಯನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು. ಕಳೆದ ದಶಕದಲ್ಲಿ ವೃತ್ತಿಪರ ಶಿಕ್ಷಣಕ್ಕೆ ಸಂಬಂಧಿಸಿದ ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಲ್ಲಿ ಕಂಡುಬಂದ ಅಭೂತಪೂರ್ವ ಬೆಳವಣಿಗೆಯನ್ನು ಅವರು ಉಲ್ಲೇಖಿಸಿದರು.

ಭಾರತದ ಶೈಕ್ಷಣಿಕ ಕ್ಷೇತ್ರದಲ್ಲಿನ ಪ್ರಗತಿಯನ್ನು ಒತ್ತಿಹೇಳುತ್ತಾ, "ಕಳೆದ 10 ವರ್ಷಗಳಲ್ಲಿ, ಭಾರತೀಯ ವಿಶ್ವವಿದ್ಯಾಲಯಗಳ ಜಾಗತಿಕ ಶ್ರೇಯಾಂಕದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ," ಎಂದು ಪ್ರಧಾನಿ ಮೋದಿ ಹೇಳಿದರು. ಹಲವಾರು ರಾಜ್ಯಗಳಲ್ಲಿ ಹೊಸ ʻಐಐಟಿʼಗಳು ಮತ್ತು ʻಏಮ್ಸ್ʼಗಳ ಸ್ಥಾಪನೆಯ ಜೊತೆಗೆ ವೈದ್ಯಕೀಯ ಕಾಲೇಜುಗಳು ಮತ್ತು ಸೀಟುಗಳ ಸಂಖ್ಯೆಯಲ್ಲಿ ದಾಖಲೆಯ ಹೆಚ್ಚಳವನ್ನು ಅವರು ಉಲ್ಲೇಖಿಸಿದರು.

 

ಸಂಶೋಧನಾ ಪ್ರಯತ್ನಗಳನ್ನು ಹೆಚ್ಚಿಸಲು ಹೊಸ ಕಾನೂನುಗಳನ್ನು ಪರಿಚಯಿಸುವುದರ ಜೊತೆಗೆ, ಯುವ ಪ್ರತಿಭೆಗಳಿಗೆ ರಕ್ಷಣೆ, ಬಾಹ್ಯಾಕಾಶ ಮತ್ತು ಮ್ಯಾಪಿಂಗ್ ನಂತಹ ಕ್ಷೇತ್ರಗಳನ್ನು ಮುಕ್ತಗೊಳಿಸುವ ಸರ್ಕಾರದ ಸಮರ್ಪಣಾ ಭಾವದ ಬಗ್ಗೆ ಪ್ರಧಾನಿ ಮೋದಿ ಪುನರುಚ್ಚರಿಸಿದರು. "ಈ ಎಲ್ಲ ಉಪಕ್ರಮಗಳನ್ನು ನಿಮ್ಮ ಅನುಕೂಲಕ್ಕಾಗಿ, ಭಾರತದ ಯುವಕರಿಗಾಗಿ ಕೈಗೊಳ್ಳಲಾಗಿದೆ," ಎಂದು ಅವರು ಹೇಳಿದರು.

ಆರ್ಥಿಕ ಸಬಲೀಕರಣದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, "ಮೇಕ್ ಇನ್ ಇಂಡಿಯಾ" ಮತ್ತು "ಆತ್ಮನಿರ್ಭರ ಭಾರತ್" ಅಭಿಯಾನಗಳನ್ನು ಉಲ್ಲೇಖಿಸಿದರು.  ಭಾರತದ ಯುವಕರ ಆಕಾಂಕ್ಷೆಗಳೊಂದಿಗೆ ಅವುಗಳ ಹೊಂದಾಣಿಕೆಯನ್ನು ಒತ್ತಿ ಹೇಳಿದರು. "ಈ ಅಭಿಯಾನಗಳು ನಿಮ್ಮಂತಹ ಯುವ ವ್ಯಕ್ತಿಗಳಿಗಾಗಿ, ಹೊಸ ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ," ಎಂದು ಅವರು ಒತ್ತಿ ಹೇಳಿದರು.

ಭಾರತದ ಡಿಜಿಟಲ್ ಕ್ರಾಂತಿಯ ಉದಾಹರಣೆ ನೀಡಿದ ಪ್ರಧಾನಿ ಮೋದಿ, ಡಿಜಿಟಲ್ ಆರ್ಥಿಕತೆಯ ಅಗಾಧ ಬೆಳವಣಿಗೆ ಮತ್ತು ಯುವಕರ ಮೇಲೆ ಅದರ ಆಳವಾದ ಪರಿಣಾಮವನ್ನು ಎತ್ತಿ ತೋರಿದರು. "ಕಳೆದ 10 ವರ್ಷಗಳಲ್ಲಿ, ಭಾರತದ ಡಿಜಿಟಲ್ ಆರ್ಥಿಕತೆಯು ನಮ್ಮ ಯುವಕರಿಗೆ ಶಕ್ತಿಯ ಹೊಸ ಮೂಲವಾಗಿದೆ," ಎಂದು ಅವರು ಹೇಳಿದರು.

 

ಜಾಗತಿಕವಾಗಿ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿ ಭಾರತ ಹೊರಹೊಮ್ಮುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಯುವಜನರಲ್ಲಿನ ಉದ್ಯಮಶೀಲತಾ ಮನೋಭಾವವನ್ನು ಶ್ಲಾಘಿಸಿದರು, "ಇಂದು, ಭಾರತವು 1.25 ಲಕ್ಷಕ್ಕೂ ಹೆಚ್ಚು ನೋಂದಾಯಿತ ನವೋದ್ಯಮಗಳು ಮತ್ತು ನೂರಕ್ಕೂ ಹೆಚ್ಚು ʻಯುನಿಕಾರ್ನ್‌ʼಗಳಿಗೆ ನೆಲೆಯಾಗಿದೆ" ಎಂದು ಹೇಳಿದರು. ಭಾರತದಲ್ಲಿ ಮೊಬೈಲ್ ಉತ್ಪಾದನೆ ಮತ್ತು ಕೈಗೆಟುಕುವ ಡೇಟಾ ಹಾಗೂ ಪ್ರತಿ ಹಳ್ಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕದ ಬೆಳವಣಿಗೆಯ ಬಗ್ಗೆಯೂ ಪ್ರಧಾನಿ ಗಮನಸೆಳೆದರು.

ಇ-ಕಾಮರ್ಸ್, ಇ-ಶಾಪಿಂಗ್, ಹೋಮ್ ಡೆಲಿವರಿ, ಆನ್‌ಲೈನ್‌ ಶಿಕ್ಷಣ ಮತ್ತು ರಿಮೋಟ್ ಹೆಲ್ತ್‌ಕೇರ್‌ನಂತಹ ಹಲವು ಬೆಳವಣಿಗೆಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಡಿಜಿಟಲ್ ವಿಷಯವಸ್ತು (ಕಂಟೆಂಟ್‌) ಸೃಷ್ಟಿಯ ಹೆಚ್ಚಳ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳ ಸ್ಥಾಪನೆಯನ್ನು ಉಲ್ಲೇಖಿಸಿದರು.  ಡಿಜಿಟಲ್ ಇಂಡಿಯಾ ಪ್ರಸ್ತುತಪಡಿಸುವ ಅವಕಾಶಗಳನ್ನು ಬಳಸಿಕೊಳ್ಳುವಂತೆ ಯುವಕರನ್ನು ಒತ್ತಾಯಿಸಿದರು.

 

ಭವಿಷ್ಯದ ದೂರದೃಷ್ಟಿಯೊಂದಿಗೆ ನೀತಿ ನಿರೂಪಣೆ ಮತ್ತು ಸ್ಪಷ್ಟ ಆದ್ಯತೆಗಳನ್ನು ಪ್ರಧಾನಿ ಒತ್ತಿ ಹೇಳಿದರು. ಗಡಿ ಗ್ರಾಮವನ್ನು ಕೊನೆಯ ಗ್ರಾಮ ಎಂದು ಕರೆಯುವ ಮನಸ್ಥಿತಿಯಲ್ಲಿನ ಬದಲಾವಣೆಯ ಬಗ್ಗೆ ಅವರು ಮಾತನಾಡಿದರು. ಈಗ ಈ ಗ್ರಾಮಗಳು 'ಮೊದಲ ಗ್ರಾಮಗಳು' ಅಂದರೆ 'ರೋಮಾಂಚಕ ಗ್ರಾಮಗಳು'. ಮುಂಬರುವ ದಿನಗಳಲ್ಲಿ ಈ ಗ್ರಾಮಗಳು ದೊಡ್ಡ ಪ್ರವಾಸಿ ಕೇಂದ್ರಗಳಾಗಲಿವೆ ಎಂದರು.

ಯುವಕರನ್ನುದ್ದೇಶಿಸಿ ನೇರವಾಗಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಭವಿಷ್ಯವನ್ನು ರೂಪಿಸುವ ಅವರ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು, ರಾಷ್ಟ್ರ ನಿರ್ಮಾಣ ಪ್ರಯತ್ನಗಳಲ್ಲಿ ಸಕ್ರಿಯ ಭಾಗವಹಿಸುವಿಕೆಗೆ ಕರೆ ನೀಡಿದರು. "ಮೈ ಭಾರತ್ ಆರ್ಗನೈಸೇಶನ್"ನಲ್ಲಿ ನೋಂದಾಯಿಸಿಕೊಳ್ಳುವಂತೆ ಮತ್ತು ಸಮೃದ್ಧ ಭಾರತದ ಅಭಿವೃದ್ಧಿಗೆ ಸಲಹೆಗಳನ್ನು ನೀಡುವಂತೆ ಅವರು ಮನವಿ ಮಾಡಿದರು.

ಅಂತಿಮವಾಗಿ, ಪ್ರಧಾನಿ ಮೋದಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ಅವರ ಭವಿಷ್ಯದ ಯಶಸ್ಸಿಗಾಗಿ ಹಾರೈಸಿದರು. "ನೀವು ʻವಿಕಸಿತ ಭಾರತʼದ ವಾಸ್ತುಶಿಲ್ಪಿಗಳು," ಎಂದು ಬಣ್ಣಿಸುವ ಮೂಲಕ ಅವರು ಯುವಕರ ಮೇಲಿನ ತಮ್ಮ ನಂಬಿಕೆಯನ್ನು ಪುನರುಚ್ಚರಿಸಿದರು.

 

ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್, ಎನ್‌ಸಿಸಿ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಗುರ್‌ಬೀರ್ ಪಾಲ್ ಸಿಂಗ್, ಕೇಂದ್ರ ರಕ್ಷಣಾ ಖಾತೆ ಸಹಾಯಕ ಸಚಿವ ಶ್ರೀ ಅಜಯ್ ಭಟ್, ರಕ್ಷಣಾ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್, ಭೂಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ವಾಯುಪಡೆಯ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ವಿ ಆರ್ ಚೌಧರಿ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಹಾಗೂ ರಕ್ಷಣಾ ಕಾರ್ಯದರ್ಶಿ  ಗಿರಿಧರ್ ಅರಮನೆ ಮತ್ತಿತರರು ಉಪಸ್ಥಿತರಿದ್ದರು.

ಹಿನ್ನೆಲೆ

ಈ ಕಾರ್ಯಕ್ರಮದ ಭಾಗವಾಗಿ, ʻಅಮೃತ ತಲೆಮಾರಿನʼ ಕೊಡುಗೆ ಮತ್ತು ಸಬಲೀಕರಣವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ 'ಅಮೃತ ಕಾಲದ ಎನ್‌ಸಿಸಿ' ವಿಷಯಾಧಾರಿತವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು. ʻವಸುದೈವ ಕುಟುಂಬಕಂʼನ ನೈಜ ಭಾರತೀಯ ಆಶಯದೊಂದಿಗೆ, 24 ವಿದೇಶಗಳಿಂದ 2,200ಕ್ಕೂ ಹೆಚ್ಚು ʻಎನ್‌ಸಿಸಿ ಕೆಡೆಟ್‌ʼಗಳು ಮತ್ತು ಯುವ ಕೆಡೆಟ್‌ಗಳು ಈ ವರ್ಷದ ರ‍್ಯಾಲಿಯಲ್ಲಿ ಭಾಗವಾಗಿದ್ದರು.

ವಿಶೇಷ ಅತಿಥಿಗಳಾಗಿ, ರೋಮಾಂಚಕ ಗ್ರಾಮಗಳ 400ಕ್ಕೂ ಹೆಚ್ಚು ಸರಪಂಚರು ಮತ್ತು ದೇಶದ ವಿವಿಧ ಭಾಗಗಳಿಂದ ವಿವಿಧ ಸ್ವಸಹಾಯ ಗುಂಪುಗಳಿಗೆ ಸೇರಿದ 100ಕ್ಕೂ ಹೆಚ್ಚು ಮಹಿಳೆಯರು ʻಎನ್‌ಸಿಸಿ ಪಿಎಂ ರ‍್ಯಾಲಿʼಯಲ್ಲಿ ಭಾಗವಹಿಸಿದ್ದರು.

 

 

 

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'You Are A Champion Among Leaders': Guyana's President Praises PM Modi

Media Coverage

'You Are A Champion Among Leaders': Guyana's President Praises PM Modi
NM on the go

Nm on the go

Always be the first to hear from the PM. Get the App Now!
...
PM Modi congratulates hockey team for winning Women's Asian Champions Trophy
November 21, 2024

The Prime Minister Shri Narendra Modi today congratulated the Indian Hockey team on winning the Women's Asian Champions Trophy.

Shri Modi said that their win will motivate upcoming athletes.

The Prime Minister posted on X:

"A phenomenal accomplishment!

Congratulations to our hockey team on winning the Women's Asian Champions Trophy. They played exceptionally well through the tournament. Their success will motivate many upcoming athletes."