ಘನತೆವೆತ್ತ ಪ್ರಧಾನ ಮಂತ್ರಿ ಡೊನಾಲ್ಡ್ ಟಸ್ಕ್ ಅವರೇ, ಎರಡೂ ದೇಶಗಳ ಪ್ರತಿನಿಧಿಗಳೇ, ಮಾಧ್ಯಮ ಮಿತ್ರರೇ,

ನಮಸ್ಕಾರ,

ಸುಂದರವಾದ ವಾರ್ಸಾ ನಗರದಲ್ಲಿ ಆತ್ಮೀಯ ಸ್ವಾಗತ, ಉತ್ತಮ ಆತಿಥ್ಯ ಮತ್ತು ಸ್ನೇಹಪರ ಮಾತುಗಳಿಗಾಗಿ ಪ್ರಧಾನ ಮಂತ್ರಿ ಟಸ್ಕ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನೀವು ಬಹುಕಾಲದಿಂದ ಭಾರತದ ಉತ್ತಮ ಸ್ನೇಹಿತರು. ಭಾರತ ಮತ್ತು ಪೋಲೆಂಡ್ ನಡುವಿನ ಸ್ನೇಹವನ್ನು ಬಲಪಡಿಸುವಲ್ಲಿ ನೀವು ದೊಡ್ಡ ಕೊಡುಗೆ ನೀಡಿದ್ದೀರಿ.

ಸ್ನೇಹಿತರೇ,

ಭಾರತ ಮತ್ತು ಪೋಲೆಂಡ್ ನಡುವಿನ ಸಂಬಂಧಗಳಲ್ಲಿ ಇಂದಿನ ದಿನವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಇಂದು ನಲವತ್ತೈದು ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್ ಗೆ ಭೇಟಿ ನೀಡಿದ್ದಾರೆ. ನನ್ನ ಮೂರನೇ ಅವಧಿಯ ಆರಂಭದಲ್ಲಿ ನನಗೆ ಈ ಸೌಭಾಗ್ಯ ಸಿಕ್ಕಿದೆ. ಈ ಸಂದರ್ಭದಲ್ಲಿ ಪೋಲೆಂಡ್ ಸರ್ಕಾರಕ್ಕೆ ಮತ್ತು ಇಲ್ಲಿನ ಜನತೆಗೆ ನನ್ನ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಉಕ್ರೇನ್ ಸಂಘರ್ಷದ ಸಮಯದಲ್ಲಿ ಸಿಕ್ಕಿಬಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವಲ್ಲಿ ನೀವು ತೋರಿದ ಉದಾರತೆಯನ್ನು ನಾವು ಭಾರತೀಯರು ಎಂದಿಗೂ ಮರೆಯಲು ಸಾಧ್ಯವಿಲ್ಲ.

 

ಸ್ನೇಹಿತರೇ,

ಈ ವರ್ಷ ನಾವು ನಮ್ಮ ರಾಜತಾಂತ್ರಿಕ ಸಂಬಂಧಗಳ 70 ನೇ ವರ್ಷವನ್ನು ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ, ನಮ್ಮ ಸಂಬಂಧಗಳನ್ನು ಕಾರ್ಯತಂತ್ರದ ಪಾಲುದಾರಿಕೆಯಾಗಿ ಪರಿವರ್ತಿಸಲು ನಾವು ನಿರ್ಧರಿಸಿದ್ದೇವೆ. ಭಾರತ ಮತ್ತು ಪೋಲೆಂಡ್ ನಡುವಿನ ಸಂಬಂಧಗಳು ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಳ್ವಿಕೆಯಂತಹ ಹಂಚಿಕೆಯ ಮೌಲ್ಯಗಳನ್ನು ಆಧರಿಸಿವೆ. ಇಂದು ನಾವು ನಮ್ಮ ಸಂಬಂಧಗಳಿಗೆ ಹೊಸ ದಿಕ್ಕನ್ನು ನೀಡಲು ಹಲವಾರು ಉಪಕ್ರಮಗಳನ್ನು ಗುರುತಿಸಿದ್ದೇವೆ. ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ, ನಮ್ಮ ಸಂಸತ್ತಿನ ನಡುವಿನ ವಿನಿಮಯವನ್ನು ಪ್ರೋತ್ಸಾಹಿಸಬೇಕು. ಆರ್ಥಿಕ ಸಹಕಾರವನ್ನು ವಿಸ್ತರಿಸಲು ಖಾಸಗಿ ವಲಯವನ್ನು ತೊಡಗಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಲಾಗುವುದು. ಪೋಲೆಂಡ್ ಆಹಾರ ಸಂಸ್ಕರಣೆಯಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತದಲ್ಲಿ ನಿರ್ಮಿಸಲಾಗುತ್ತಿರುವ ಮೆಗಾ ಫುಡ್ ಪಾರ್ಕ್‌ ಗಳಿಗೆ ಪೋಲಿಷ್ ಕಂಪನಿಗಳು ಸೇರಬೇಕೆಂದು ನಾವು ಬಯಸುತ್ತೇವೆ. ಭಾರತದಲ್ಲಿ ತ್ವರಿತ ನಗರೀಕರಣವು ನೀರಿನ ಸಂಸ್ಕರಣೆ, ಘನತ್ಯಾಜ್ಯ ನಿರ್ವಹಣೆ, ನಗರ ಮೂಲಸೌಕರ್ಯಗಳಂತಹ ಕ್ಷೇತ್ರಗಳಲ್ಲಿ ನಮ್ಮ ಸಹಕಾರಕ್ಕಾಗಿ ಹೊಸ ಅವಕಾಶಗಳನ್ನು ತೆರೆಯುತ್ತಿದೆ.

ಶುದ್ಧ ಕಲ್ಲಿದ್ದಲು ತಂತ್ರಜ್ಞಾನ, ಹಸಿರು ಹೈಡ್ರೋಜನ್, ನವೀಕರಿಸಬಹುದಾದ ಇಂಧನ, ಕೃತಕ ಬುದ್ಧಿಮತ್ತೆ ನಮ್ಮ ಸಾಮಾನ್ಯ ಆದ್ಯತೆಗಳಾಗಿವೆ.

ಮೇಕ್ ಇನ್ ಇಂಡಿಯಾ ಮತ್ತು ಮೇಕ್ ಫಾರ್ ದಿ ವರ್ಲ್ಡ್ ಸೇರಲು ಪೋಲಿಷ್ ಕಂಪನಿಗಳನ್ನು ನಾವು ಆಹ್ವಾನಿಸುತ್ತೇವೆ. ಭಾರತವು ಫಿನ್ ಟೆಕ್, ಫಾರ್ಮಾ, ಬಾಹ್ಯಾಕಾಶ ಮುಂತಾದ ಕ್ಷೇತ್ರಗಳಲ್ಲಿ ಹಲವಾರು ಸಾಧನೆಗಳನ್ನು ಮಾಡಿದೆ. ಈ ಕ್ಷೇತ್ರಗಳಲ್ಲಿ ನಮ್ಮ ಅನುಭವವನ್ನು ಪೋಲೆಂಡ್‌ ನೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ರಕ್ಷಣಾ ಕ್ಷೇತ್ರದಲ್ಲಿ ನಿಕಟ ಸಹಕಾರವು ನಮ್ಮ ಗಾಢವಾದ ಪರಸ್ಪರ ನಂಬಿಕೆಯ ಸಂಕೇತವಾಗಿದೆ.

ಈ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಮತ್ತಷ್ಟು ಬಲಗೊಳ್ಳಲಿದೆ. ನಾವೀನ್ಯತೆ ಮತ್ತು ಪ್ರತಿಭೆ ಎರಡೂ ದೇಶಗಳ ಯುವ ಶಕ್ತಿಯ ಲಕ್ಷಣಗಳಾಗಿವೆ. ನುರಿತ ಉದ್ಯೋಗಿಗಳ ಕಲ್ಯಾಣ ಮತ್ತು ಚಲನಶೀಲತೆಯನ್ನು ಉತ್ತೇಜಿಸಲು ಉಭಯ ದೇಶಗಳ ನಡುವೆ ಸಾಮಾಜಿಕ ಭದ್ರತಾ ಒಪ್ಪಂದವನ್ನು ಒಪ್ಪಿಕೊಳ್ಳಲಾಗಿದೆ.

 

ಸ್ನೇಹಿತರೇ,

ಭಾರತ ಮತ್ತು ಪೋಲೆಂಡ್ ಕೂಡ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಿಕಟ ಸಮನ್ವಯದಿಂದ ಮುನ್ನಡೆಯುತ್ತಿವೆ. ಜಾಗತಿಕ ಸವಾಲುಗಳನ್ನು ಎದುರಿಸಲು, ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಸುಧಾರಣೆಯು ಇಂದಿನ ಅಗತ್ಯವಾಗಿದೆ ಎಂದು ನಾವಿಬ್ಬರೂ ಒಪ್ಪಿಕೊಳ್ಳುತ್ತೇವೆ. ಭಯೋತ್ಪಾದನೆ ನಮಗೆ ದೊಡ್ಡ ಸವಾಲಾಗಿದೆ.

ಮಾನವೀಯತೆಯಲ್ಲಿ ನಂಬಿಕೆ ಇಟ್ಟಿರುವ ಭಾರತ ಮತ್ತು ಪೋಲೆಂಡ್‌ ನಂತಹ ದೇಶಗಳ ನಡುವೆ ಇಂತಹ ಹೆಚ್ಚಿನ ಸಹಕಾರದ ಅಗತ್ಯವಿದೆ. ಅಂತೆಯೇ, ಹವಾಮಾನ ಬದಲಾವಣೆಯು ನಮಗೆ ಹಂಚಿಕೆಯ ಆದ್ಯತೆಯ ವಿಷಯವಾಗಿದೆ. ಹಸಿರು ಭವಿಷ್ಯಕ್ಕಾಗಿ ಕೆಲಸ ಮಾಡಲು ನಾವು ನಮ್ಮ ಶಕ್ತಿಯನ್ನು ಒಟ್ಟುಗೂಡಿಸುತ್ತೇವೆ. ಜನವರಿ 2025 ರಲ್ಲಿ ಪೋಲೆಂಡ್ ಯುರೋಪಿಯನ್ ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ. ನಿಮ್ಮ ಬೆಂಬಲವು ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಸಂಬಂಧವನ್ನು ಬಲಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ.

ಸ್ನೇಹಿತರೇ,

ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷಗಳು ನಮಗೆಲ್ಲರಿಗೂ ತೀವ್ರ ಕಳವಳಕಾರಿ ವಿಷಯವಾಗಿದೆ. ಯುದ್ಧಭೂಮಿಯಲ್ಲಿ ಯಾವ ಸಮಸ್ಯೆಯೂ ಬಗೆಹರಿಯುವುದಿಲ್ಲ ಎಂಬುದು ಭಾರತದ ದೃಢವಾದ ನಂಬಿಕೆಯಾಗಿದೆ. ಯಾವುದೇ ಬಿಕ್ಕಟ್ಟಿನಲ್ಲಿ, ಅಮಾಯಕರ ಪ್ರಾಣಹಾನಿ ಇಡೀ ಮಾನವಕುಲಕ್ಕೆ ದೊಡ್ಡ ಸವಾಲಾಗಿದೆ. ಶಾಂತಿ ಮತ್ತು ಸ್ಥಿರತೆಯ ಮರುಸ್ಥಾಪನೆಗಾಗಿ ನಾವು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆ. ಇದಕ್ಕಾಗಿ ಭಾರತವು ತನ್ನ ಮಿತ್ರರಾಷ್ಟ್ರಗಳೊಂದಿಗೆ ಎಲ್ಲ ರೀತಿಯ ಬೆಂಬಲವನ್ನು ನೀಡಲು ಸಿದ್ಧವಾಗಿದೆ.

ಸ್ನೇಹಿತರೇ,

ಪೋಲೆಂಡ್ ದೇಶವು ಇಂಡಾಲಜಿ ಮತ್ತು ಸಂಸ್ಕೃತದ ಅತ್ಯಂತ ಹಳೆಯ ಮತ್ತು ಶ್ರೀಮಂತ ಸಂಪ್ರದಾಯವನ್ನು ಹೊಂದಿದೆ. ಭಾರತೀಯ ನಾಗರಿಕತೆ ಮತ್ತು ಭಾಷೆಗಳಲ್ಲಿ ನಮ್ಮ ಆಳವಾದ ಆಸಕ್ತಿಯಿಂದ ನಮ್ಮ ಸಂಬಂಧಗಳಿಗೆ ಬಲವಾದ ಅಡಿಪಾಯವನ್ನು ಹಾಕಲಾಗಿದೆ. ನಮ್ಮ ಜನರ ನಡುವಿನ ಗಾಢ ಬಾಂಧವ್ಯದ ನೇರ ಮತ್ತು ಜೀವಂತ ಉದಾಹರಣೆಯನ್ನು ನಿನ್ನೆ ನಾನು ನೋಡಿದೆ. ಭಾರತದ "ದೋಬ್ರೆ ಮಹಾರಾಜ" ಮತ್ತು ಕೊಲ್ಲಾಪುರದ ಮಹಾರಾಜರ ನೆನಪಿಗಾಗಿ ನಿರ್ಮಿಸಲಾದ ಸ್ಮಾರಕಗಳಿಗೆ ಗೌರವ ಸಲ್ಲಿಸುವ ಸೌಭಾಗ್ಯ ನನಗೆ ದೊರೆಯಿತು. ಇಂದಿಗೂ ಪೋಲೆಂಡ್‌ ನ ಜನರು ಅವರ ಪರೋಪಕಾರ ಮತ್ತು ಔದಾರ್ಯವನ್ನು ಗೌರವಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಅವರ ಸ್ಮರಣೆಯನ್ನು ಅಮರಗೊಳಿಸಲು, ನಾವು ಭಾರತ ಮತ್ತು ಪೋಲೆಂಡ್ ನಡುವೆ ಜಾಮ್ ಸಾಹೇಬ್ ನವನಗರ ಯುವ ವಿನಿಮಯ ಕಾರ್ಯಕ್ರಮವನ್ನು ಪ್ರಾರಂಭಿಸಲಿದ್ದೇವೆ. ಪ್ರತಿ ವರ್ಷ ಪೋಲೆಂಡ್‌ ನಿಂದ 20 ಯುವಕರನ್ನು ಭಾರತ ಪ್ರವಾಸಕ್ಕೆ ಕರೆದೊಯ್ಯಲಾಗುತ್ತದೆ.

ಸ್ನೇಹಿತರೇ,

ನಾನು ಮತ್ತೊಮ್ಮೆ ಪ್ರಧಾನ ಮಂತ್ರಿ ಟಸ್ಕ್ ಮತ್ತು ಅವರ ಸ್ನೇಹಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಮತ್ತು, ನಮ್ಮ ಸಂಬಂಧಗಳನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇನೆ.

ತುಂಬಾ ಧನ್ಯವಾದಗಳು.

 

 

 

 

 

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ನವೆಂಬರ್ 2024
November 21, 2024

PM Modi's International Accolades: A Reflection of India's Growing Influence on the World Stage