ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗೋವಾದಲ್ಲಿ ನಡೆದ ವಿಕಸಿತ ಭಾರತ್, ವಿಕಸಿತ ಗೋವಾ 2047 ಕಾರ್ಯಕ್ರಮದಲ್ಲಿ 1330 ಕೋಟಿ ರೂ.ಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವಸ್ತುಪ್ರದರ್ಶನದ ಬಳಿಗೆ ತೆರಳಿ ಅದನ್ನು ಶ್ರೀ ಮೋದಿ ಅವರು ವೀಕ್ಷಿಸಿದರು. ಇಂದಿನ ಅಭಿವೃದ್ಧಿ ಯೋಜನೆಗಳಲ್ಲಿ ಶಿಕ್ಷಣ, ಕ್ರೀಡೆ, ನೀರು ಸಂಸ್ಕರಣೆ, ತ್ಯಾಜ್ಯ ನಿರ್ವಹಣೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಮೂಲಸೌಕರ್ಯಗಳಿಗೆ ಉತ್ತೇಜನ ನೀಡಲಾಗಿದೆ. ಪ್ರಧಾನಮಂತ್ರಿಯವರು ರೋಜ್ ಗಾರ್ ಮೇಳದಡಿ ವಿವಿಧ ಇಲಾಖೆಗಳಲ್ಲಿ 1930 ಹೊಸ ಸರ್ಕಾರಿ ನೇಮಕಾತಿ ಪಡೆದವರಿಗೆ ನೇಮಕಾತಿ ಆದೇಶಗಳನ್ನು ವಿತರಿಸಿದರು ಮತ್ತು ವಿವಿಧ ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ಹಸ್ತಾಂತರಿಸಿದರು.
ಗೋವಾದ ನೈಸರ್ಗಿಕ ಸೌಂದರ್ಯ ಮತ್ತು ಪ್ರಾಚೀನ ಕಡಲತೀರಗಳನ್ನು ಪ್ರಮುಖವಾಗಿ ಉಲ್ಲೇಖಿಸುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದ ಪ್ರಧಾನಿ, ಇದು ಭಾರತ ಮತ್ತು ವಿದೇಶಗಳ ಲಕ್ಷಾಂತರ ಮತ್ತು ಲಕ್ಷಾಂತರ ಪ್ರವಾಸಿಗರ ನೆಚ್ಚಿನ ರಜಾ ತಾಣವಾಗಿದೆ ಎಂದು ಹೇಳಿದರು. "ಏಕ್ ಭಾರತ್ ಶ್ರೇಷ್ಠ ಭಾರತವನ್ನು ಗೋವಾದಲ್ಲಿ ಯಾವುದೇ ಋತುವಿನಲ್ಲಿ ಅನುಭವಿಸಬಹುದು" ಎಂದು ಅವರು ನುಡಿದರು. ಗೋವಾದಲ್ಲಿ ಜನಿಸಿದ ಮಹಾನ್ ಸಂತರು, ಪ್ರಸಿದ್ಧ ಕಲಾವಿದರು ಮತ್ತು ವಿದ್ವಾಂಸರ ಬಗ್ಗೆಯೂ ಅವರು ಗಮನ ಸೆಳೆದರು ಮತ್ತು ಸಂತ ಸೊಹಿರೋಬನಾಥ ಅಂಬಿಯೆ, ನಾಟಕಕಾರ ಕೃಷ್ಣ ಭಟ್ ಬಾಂಡ್ಕರ್, ಗಾಯಕ ಕೇಸರ್ಬಾಯಿ ಕೆರ್ಕರ್, ಆಚಾರ್ಯ ಧರ್ಮಾನಂದ ಕೊಸಾಂಬಿ ಮತ್ತು ರಘುನಾಥ್ ಅನಂತ್ ಮಶೆಲ್ಕರ್ ಅವರನ್ನು ಸ್ಮರಿಸಿದರು. ಭಾರತ ರತ್ನ ಲತಾ ಮಂಗೇಶ್ಕರ್ ಅವರ ಪುಣ್ಯತಿಥಿಯಂದು ಪ್ರಧಾನಿ ಮೋದಿ ಅವರು ಲತಾ ಮಂಗೇಶ್ಕರ್ ಜೀ ಅವರಿಗೆ ಗೌರವ ಸಲ್ಲಿಸಿದರು ಮತ್ತು ಹತ್ತಿರದಲ್ಲಿರುವ ಮಂಗೇಶಿ ದೇವಾಲಯದೊಂದಿಗಿನ ಅವರ ನಿಕಟ ಸಂಬಂಧವನ್ನು ಪ್ರಸ್ತಾಪಿಸಿದರು. "ಸ್ವಾಮಿ ವಿವೇಕಾನಂದರು ಮಾರ್ಗೋವಾದ ದಾಮೋದರ್ ಸಾಲ್ ಅವರಿಂದ ಹೊಸ ಸ್ಫೂರ್ತಿಯನ್ನು ಪಡೆದರು" ಎಂದೂ ಅವರು ಹೇಳಿದರು. ಪ್ರಧಾನಿ ಮೋದಿ ಅವರು ಲೋಹಿಯಾ ಮೈದಾನ ಮತ್ತು ಕುನ್ಕೊಲಿಮ್ ನಲ್ಲಿರುವ ಹುತಾತ್ಮ ಮುಖ್ಯಸ್ಥರ ಸ್ಮಾರಕದ ಬಗ್ಗೆಯೂ ಮಾತನಾಡಿದರು.
ಈ ವರ್ಷ ನಡೆಯಲಿರುವ "ಗೊಯ್ಚೊ ಸೈಬ್" ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಅವರ ಪವಿತ್ರ ಅವಶೇಷಗಳ ಪ್ರದರ್ಶನದ ಬಗ್ಗೆ ಪ್ರಧಾನಿ ಮಾತನಾಡಿದರು. ಈ ಪ್ರದರ್ಶನವನ್ನು ಶಾಂತಿ ಮತ್ತು ಒಗ್ಗಟ್ಟಿನ ಸಂಕೇತವೆಂದು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಜಾರ್ಜಿಯಾದ ಸಂತ ರಾಣಿ ಕೆಟೆವನ್ ಅವರನ್ನೂ ಸ್ಮರಿಸಿದರು, ಅವರ ಪವಿತ್ರ ಅವಶೇಷಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವರು ಜಾರ್ಜಿಯಾಕ್ಕೆ ಕೊಂಡೊಯ್ದದನ್ನೂ ಪ್ರಸ್ತಾಪಿಸಿದರು. "ಕ್ರಿಶ್ಚಿಯನ್ ಮತ್ತು ಇತರ ಸಮುದಾಯಗಳ ಶಾಂತಿಯುತ ಸಹಬಾಳ್ವೆ 'ಏಕ್ ಭಾರತ್ ಶ್ರೇಷ್ಠ ಭಾರತ್' ಗೆ ಉದಾಹರಣೆಯಾಗಿದೆ" ಎಂದು ಅವರು ಬಣ್ಣಿಸಿದರು.
ಇಂದು ಉದ್ಘಾಟಿಸಲಾದ ಅಥವಾ ಶಂಕುಸ್ಥಾಪನೆ ನೆರವೇರಿಸಲಾದ 1300 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳ ಬಗ್ಗೆ ವಿವರಿಸಿದ ಪ್ರಧಾನ ಮಂತ್ರಿ ಮೋದಿ, ಶಿಕ್ಷಣ, ಆರೋಗ್ಯ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಯೋಜನೆಗಳು ಗೋವಾದ ಅಭಿವೃದ್ಧಿಗೆ ಹೊಸ ಉತ್ತೇಜನ ನೀಡುತ್ತವೆ ಎಂದು ಹೇಳಿದರು. "ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಶಾಶ್ವತ ಕ್ಯಾಂಪಸ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವಾಟರ್ಸ್ಪೋರ್ಟ್ಸ್ ಕ್ಯಾಂಪಸ್ ಹಾಗು ಸಮಗ್ರ ತ್ಯಾಜ್ಯ ನಿರ್ವಹಣಾ ಸೌಲಭ್ಯ, 1930 ನೇಮಕಾತಿ ಆದೇಶ ಪತ್ರಗಳು ರಾಜ್ಯದ ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತವೆ" ಎಂದೂ ಅವರು ಹೇಳಿದರು.
"ಗೋವಾ ವಿಸ್ತೀರ್ಣ ಮತ್ತು ಜನಸಂಖ್ಯೆಯಲ್ಲಿ ಚಿಕ್ಕದಾಗಿದ್ದರೂ, ಅದು ಸಾಮಾಜಿಕವಾಗಿ ವೈವಿಧ್ಯಮಯವಾಗಿದೆ ಮತ್ತು ವಿವಿಧ ಸಮಾಜಗಳು ಮತ್ತು ಧರ್ಮಗಳ ಜನರು ಹಲವಾರು ತಲೆಮಾರುಗಳಿಂದ ಶಾಂತಿಯಿಂದ ಸಹಬಾಳ್ವೆ ನಡೆಸುತ್ತಿದ್ದಾರೆ" ಎಂದು ಪ್ರಧಾನಿ ಶ್ಲಾಘಿಸಿದರು.. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, ರಾಜ್ಯದ ಸಾಮರಸ್ಯಕ್ಕೆ ಧಕ್ಕೆ ತರಲು ಪ್ರಯತ್ನಿಸುವವರಿಗೆ ಯಾವಾಗಲೂ ಸೂಕ್ತ ಉತ್ತರ ನೀಡುವ ಗೋವಾದ ಜನರ ಉತ್ಸಾಹವನ್ನು ಶ್ಲಾಘಿಸಿದರು.
ಸ್ವಯಂಪೂರ್ಣ ಗೋವಾವನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಮೋದಿ, ಗೋವಾ ಸರ್ಕಾರದ ಉತ್ತಮ ಆಡಳಿತ ಮಾದರಿಯನ್ನು ಶ್ಲಾಘಿಸಿದರು, ಇದು ಯೋಗಕ್ಷೇಮದ ಮಾನದಂಡದಲ್ಲಿ ಗೋವಾದ ಜನರ ಅಗ್ರಗಣ್ಯ ಸ್ಥಾನಕ್ಕೆ ಕಾರಣವಾಗಿದೆ. ಡಬಲ್ ಇಂಜಿನ್ ಸರ್ಕಾರದಿಂದಾಗಿ ಗೋವಾದ ಅಭಿವೃದ್ಧಿ ವೇಗವಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರದ ಹಲವು ಯೋಜನೆಗಳಲ್ಲಿ ಹರ್ ಘರ್ ನಲ್ ಸೆ ಜಲ, ವಿದ್ಯುತ್ ಸಂಪರ್ಕ, ಎಲ್ ಪಿಜಿ ವ್ಯಾಪ್ತಿ, ಕೆರೋಸಿನ್ ಮುಕ್ತ, ಬಯಲು ಮಲವಿಸರ್ಜನೆ ಮುಕ್ತ ಹಾಗು ಇತರ ಯೋಜನೆಗಳಲ್ಲಿ ಪರಿಪೂರ್ಣತೆ ವ್ಯಾಪ್ತಿಯನ್ನು ಸಾಧಿಸಿದ್ದನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. "ಪರಿಪೂರ್ಣ ಅನುಷ್ಠಾನವು ತಾರತಮ್ಯವನ್ನು ತೊಡೆದುಹಾಕಲು ಮತ್ತು ಎಲ್ಲಾ ಫಲಾನುಭವಿಗಳಿಗೆ ಪ್ರಯೋಜನಗಳನ್ನು ಸಂಪೂರ್ಣವಾಗಿ ವರ್ಗಾಯಿಸಲು ಕಾರಣವಾಗುತ್ತದೆ. ಅದಕ್ಕಾಗಿಯೇ ನಾನು ಹೇಳುತ್ತೇನೆ, "ಪರಿಪೂರ್ಣ ಅನುಷ್ಠಾನವು ನಿಜವಾದ ಜಾತ್ಯತೀತತೆ, ಪರಿಪೂರ್ಣ ಅನುಷ್ಠಾನ ನಿಜವಾದ ಸಾಮಾಜಿಕ ನ್ಯಾಯ ಮತ್ತು ಪರಿಪೂರ್ಣ ಅನುಷ್ಠಾನ ಗೋವಾ ಮತ್ತು ದೇಶಕ್ಕೆ ಮೋದಿಯವರ ಖಾತರಿಯಾಗಿದೆ", ಎಂದು ಪ್ರಧಾನಿ ಹೇಳಿದರು. ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯಲ್ಲಿ ಗೋವಾದಲ್ಲಿ 30 ಸಾವಿರಕ್ಕೂ ಹೆಚ್ಚು ಜನರು ವಿವಿಧ ಪ್ರಯೋಜನಗಳನ್ನು ಪಡೆದಿದ್ದಾರೆ ಎಂದೂ ಪ್ರಧಾನಿ ಉಲ್ಲೇಖಿಸಿದರು.
ಈ ವರ್ಷದ ಬಜೆಟ್ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಇದು ಯೋಜನೆಗಳ ಪರಿಪೂರ್ಣತೆಯ ಸರ್ಕಾರದ ಸಂಕಲ್ಪಕ್ಕೆ ಉತ್ತೇಜನ, ವೇಗವನ್ನು ನೀಡಿದೆ ಎಂದರು. ಈಗಾಗಲೇ 4 ಕೋಟಿ ಪಕ್ಕಾ ಮನೆಗಳ ಗುರಿಯನ್ನು ಸಾಧಿಸಿದ ನಂತರ ಸರ್ಕಾರ ಈಗ ಬಡವರಿಗೆ ಎರಡು ಕೋಟಿ ಮನೆಗಳನ್ನು ಖಾತರಿಪಡಿಸುತ್ತಿದೆ ಎಂದು ಘೋಷಿಸಿದರು. ಪಕ್ಕಾ ಮನೆಗಳನ್ನು ಪಡೆಯುವಲ್ಲಿ ಹಿಂದುಳಿದವರಲ್ಲಿ ಜಾಗೃತಿ ಮೂಡಿಸುವಂತೆ ಅವರು ಗೋವಾದ ಜನರನ್ನು ಒತ್ತಾಯಿಸಿದರು. ಈ ವರ್ಷದ ಬಜೆಟ್ ನಲ್ಲಿ ಪಿಎಂ ಆವಾಸ್ ಯೋಜನೆ ಮತ್ತು ಆಯುಷ್ಮಾನ್ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.
ಈ ವರ್ಷದ ಬಜೆಟ್ ನಲ್ಲಿಯ ಮತ್ಸ್ಯ ಸಂಪದ ಯೋಜನೆಯನ್ನು ಪ್ರಸ್ತಾಪಿಸಿದ ಪ್ರಧಾನಿ, ಇದು ಮೀನುಗಾರರ ಸಮುದಾಯಕ್ಕೆ ನೆರವು ಮತ್ತು ಸಂಪನ್ಮೂಲಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ, ಆ ಮೂಲಕ ಸಮುದ್ರಾಹಾರ ರಫ್ತು ಮತ್ತು ಮೀನುಗಾರರ ಆದಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಇಂತಹ ಪ್ರಯತ್ನಗಳು ಮೀನುಗಾರಿಕೆ ಕ್ಷೇತ್ರದಲ್ಲಿ ಲಕ್ಷಾಂತರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಅವರು ನುಡಿದರು.
ಮೀನು ಸಾಕಣೆದಾರರ ಕಲ್ಯಾಣಕ್ಕಾಗಿ ಸರ್ಕಾರ ಕೈಗೊಂಡಿರುವ ಪ್ರಯತ್ನಗಳತ್ತ ಬೆಟ್ಟು ಮಾಡಿದ ಪ್ರಧಾನ ಮಂತ್ರಿ ಮೋದಿ, ಅದಕ್ಕಾಗಿಯೇ ಮೀಸಲಾದ ಪ್ರತ್ಯೇಕ ಸಚಿವಾಲಯದ ರಚನೆ, ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ, ವಿಮಾ ಮೊತ್ತವನ್ನು 5 ಲಕ್ಷ ರೂ.ಗೆ ಹೆಚ್ಚಿಸುವುದು ಮತ್ತು ದೋಣಿಗಳ ಆಧುನೀಕರಣಕ್ಕೆ ಸಬ್ಸಿಡಿಯನ್ನು ಉಲ್ಲೇಖಿಸಿದರು.
"ಡಬಲ್ ಇಂಜಿನ್ ಸರ್ಕಾರವು ಬಡವರ ಕಲ್ಯಾಣಕ್ಕಾಗಿ ದೊಡ್ಡ ಯೋಜನೆಗಳನ್ನು ನಡೆಸುವುದರ ಜೊತೆಗೆ ಮೂಲಸೌಕರ್ಯದಲ್ಲಿ ದಾಖಲೆಯ ಹೂಡಿಕೆಗಳನ್ನು ಮಾಡುತ್ತಿದೆ" ಎಂದು ಪ್ರಧಾನಿ ಹೇಳಿದರು, ದೇಶದಲ್ಲಿ ರಸ್ತೆಗಳು, ರೈಲ್ವೆ ಮತ್ತು ವಿಮಾನ ನಿಲ್ದಾಣಗಳ ತ್ವರಿತ ಅಭಿವೃದ್ಧಿಯತ್ತ ಅವರು ಬೆಟ್ಟು ಮಾಡಿದರು. 10 ವರ್ಷಗಳ ಹಿಂದೆ 2 ಲಕ್ಷ ಕೋಟಿ ರೂ.ಗಿಂತ ಕಡಿಮೆ ಇದ್ದ ಮೂಲಸೌಕರ್ಯ ಅಭಿವೃದ್ಧಿಯ ಮೊತ್ತವನ್ನು ತುಲನೆ ಮಾಡಿದ ಅವರು ಈ ವರ್ಷದ ಬಜೆಟಿನಲ್ಲಿ 11 ಲಕ್ಷ ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಅವರು ಗಮನಸೆಳೆದರು. ಅಭಿವೃದ್ಧಿ ಯೋಜನೆಗಳು ನಡೆಯುತ್ತಿರುವಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಆದಾಯ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.
ಸಂಪರ್ಕವನ್ನು ಹೆಚ್ಚಿಸುವಲ್ಲಿ ಮತ್ತು ಗೋವಾವನ್ನು ಲಾಜಿಸ್ಟಿಕ್ಸ್ ಹಬ್ ಆಗಿ ಸ್ಥಾಪಿಸುವಲ್ಲಿ ಸರ್ಕಾರದ ಪ್ರಯತ್ನಗಳ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿ "ಗೋವಾದಲ್ಲಿ ಸಂಪರ್ಕವನ್ನು ಸುಧಾರಿಸಲು ಮತ್ತು ಅದನ್ನು ಲಾಜಿಸ್ಟಿಕ್ಸ್ ಹಬ್ ಆಗಿ ಪರಿವರ್ತಿಸಲು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಗೋವಾದಲ್ಲಿ ಮನೋಹರ್ ಪರಿಕ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಯು ನಿರಂತರ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಿಗೆ ಅನುಕೂಲ ಮಾಡಿಕೊಟ್ಟಿದೆ” ಎಂದರು. ಕಳೆದ ವರ್ಷ ಜನರಿಗೆ ಸಮರ್ಪಿಸಲಾದ ದೇಶದ ಎರಡನೇ ಅತಿ ಉದ್ದದ ಕೇಬಲ್ ಸೇತುವೆ - ನ್ಯೂ ಜುವಾರಿ ಸೇತುವೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಹೊಸ ರಸ್ತೆಗಳು, ಸೇತುವೆಗಳು, ರೈಲ್ವೆ ಮಾರ್ಗಗಳು ಮತ್ತು ಶಿಕ್ಷಣ ಸಂಸ್ಥೆಗಳು ಸೇರಿದಂತೆ ಗೋವಾದಲ್ಲಿ ಆಗುತ್ತಿರುವ ತ್ವರಿತ ಮೂಲಸೌಕರ್ಯ ಅಭಿವೃದ್ಧಿಯನ್ನು ಒತ್ತಿಹೇಳಿದ ಪ್ರಧಾನಿ, "ಈ ಬೆಳವಣಿಗೆಗಳು ಗೋವಾದ ಬೆಳವಣಿಗೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿವೆ" ಎಂದೂ ವಿಶ್ಲೇಷಿಸಿದರು..
ಪ್ರಧಾನಿ ಮೋದಿ ಅವರು ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರಲ್ಲದೆ,, ಭಾರತವನ್ನು ಸಮಗ್ರ ಪ್ರವಾಸಿ ತಾಣವಾಗಿರಿಸುವ ಸರ್ಕಾರದ ಪ್ರಯತ್ನಗಳನ್ನು ಒತ್ತಿ ಹೇಳಿದರು. "ನಮ್ಮ ದೇಶದಲ್ಲಿ ಎಲ್ಲಾ ರೀತಿಯ ಪ್ರವಾಸೋದ್ಯಮವು ಒಂದೇ ವೀಸಾದಲ್ಲಿ ಲಭ್ಯವಿದೆ. ಹಿಂದಿನ ಸರ್ಕಾರಗಳಿಗೆ ಪ್ರವಾಸಿ ತಾಣಗಳು, ಕರಾವಳಿ ಪ್ರದೇಶಗಳು ಮತ್ತು ದ್ವೀಪಗಳ ಅಭಿವೃದ್ಧಿಯ ದೂರದೃಷ್ಟಿ ಇರಲಿಲ್ಲ” ಎಂದವರು ನುಡಿದರು. ಗೋವಾದ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಗುರುತಿಸಿದ ಪ್ರಧಾನಮಂತ್ರಿಯವರು, ಸ್ಥಳೀಯ ನಿವಾಸಿಗಳಿಗೆ ಅನುಕೂಲವಾಗುವಂತೆ ಗೋವಾದ ಒಳನಾಡಿನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವತ್ತ ಸರ್ಕಾರ ಗಮನ ಹರಿಸಿದೆ ಎಂದು ಒತ್ತಿ ಹೇಳಿದರು. ಗೋವಾವನ್ನು ಇನ್ನಷ್ಟು ಆಕರ್ಷಕ ತಾಣವನ್ನಾಗಿ ಮಾಡಲು ಫುಡ್ ಕೋರ್ಟ್ ಗಳು, ರೆಸ್ಟೋರೆಂಟ್ ಗಳು ಮತ್ತು ನಿರೀಕ್ಷಣಾ ಕೊಠಡಿಗಳಂತಹ ಆಧುನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಗೋವಾದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಹೆಚ್ಚಿಸುವ ಉಪಕ್ರಮಗಳನ್ನು ಪ್ರಧಾನಿ ಪಟ್ಟಿ ಮಾಡಿದರು.
"ಗೋವಾವನ್ನು ಸಮ್ಮೇಳನ ಪ್ರವಾಸೋದ್ಯಮದ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದೆ" ಎಂದು ಪ್ರಧಾನಮಂತ್ರಿಯವರು ಇಂಡಿಯಾ ಎನರ್ಜಿ ವೀಕ್ 2024ಕ್ಕೆ ತಾವು ನೀಡಿದ್ದ ಭೇಟಿಯನ್ನು ಸ್ಮರಿಸಿದರು. ಕಳೆದ ವರ್ಷಗಳಲ್ಲಿ ಗೋವಾದಲ್ಲಿ ನಡೆದ ಅನೇಕ ಪ್ರಮುಖ ಜಿ 20 ಸಭೆಗಳು ಮತ್ತು ದೊಡ್ಡ ರಾಜತಾಂತ್ರಿಕ ಸಭೆಗಳನ್ನು ಅವರು ಉಲ್ಲೇಖಿಸಿದರು. ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ ಶಿಪ್, ವರ್ಲ್ಡ್ ಬೀಚ್ ವಾಲಿಬಾಲ್, ಫಿಫಾ ಅಂಡರ್ -17 ಮಹಿಳಾ ಫುಟ್ಬಾಲ್ ವಿಶ್ವಕಪ್ ಮತ್ತು ಗೋವಾದಲ್ಲಿ ಆಯೋಜಿಸಲಾದ 37 ನೇ ರಾಷ್ಟ್ರೀಯ ಕ್ರೀಡಾಕೂಟದಂತಹ ಪಂದ್ಯಾವಳಿಗಳ ಉದಾಹರಣೆಗಳನ್ನು ಅವರು ನೀಡಿದರು. ಮುಂಬರುವ ವರ್ಷಗಳಲ್ಲಿ ಗೋವಾ ಇಂತಹ ಕಾರ್ಯಕ್ರಮಗಳಿಗೆ ದೊಡ್ಡ ಕೇಂದ್ರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಗೋವಾದ ಫುಟ್ಬಾಲ್ ಕೊಡುಗೆಯನ್ನು ಅವರು ಶ್ಲಾಘಿಸಿದರು ಮತ್ತು ಕ್ರೀಡೆಗೆ ನೀಡಿದ ಅಮೂಲ್ಯ ಕೊಡುಗೆಗಾಗಿ ಬ್ರಹ್ಮಾನಂದ್ ಶಂಖವಾಲ್ಕರ್ ಅವರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದರು. ರಾಜ್ಯದಲ್ಲಿ ರಾಷ್ಟ್ರೀಯ ಕ್ರೀಡಾಕೂಟಕ್ಕಾಗಿ ಅಭಿವೃದ್ಧಿಪಡಿಸಲಾದ ಮೂಲಸೌಕರ್ಯಗಳು ಕ್ರೀಡಾಪಟುಗಳಿಗೆ ತಮ್ಮ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುತ್ತದೆ ಎಂದೂ ಪ್ರಧಾನಿ ಹೇಳಿದರು.
ಶಿಕ್ಷಣದ ಮೇಲೆ ಸರ್ಕಾರ ಗಮನ ಕೇಂದ್ರೀಕರಿಸಿರುವುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಗೋವಾದಲ್ಲಿ ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿ, ಅದನ್ನು ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ ಪರಿವರ್ತಿಸಿರುವುದನ್ನು ಉಲ್ಲೇಖಿಸಿದರು. ತಾಂತ್ರಿಕ ಪ್ರಗತಿಯನ್ನು ಉತ್ತೇಜಿಸಲು ಮತ್ತು ಯುವಜನರು ಮತ್ತು ಕೈಗಾರಿಕೆಗಳಿಗೆ ಅನುಕೂಲವಾಗುವಂತೆ ಸಂಶೋಧನೆ ಮತ್ತು ನಾವೀನ್ಯತೆಗಾಗಿ/ಅನ್ವೇಷಣೆಗಾಗಿ 1 ಲಕ್ಷ ಕೋಟಿ ರೂಪಾಯಿಗಳ ನಿಧಿಯ ಬಜೆಟ್ ಘೋಷಣೆಯ ಬಗ್ಗೆಯೂ ಅವರು ಮಾಹಿತಿ ನೀಡಿದರು.
ಕೊನೆಯಲ್ಲಿ, ಗೋವಾದ ತ್ವರಿತ ಅಭಿವೃದ್ಧಿಗೆ ಅಗತ್ಯವಾದ ಸಾಮೂಹಿಕ ಪ್ರಯತ್ನಗಳನ್ನು ಪ್ರಧಾನಿ ಒತ್ತಿ ಹೇಳಿದರು, ರಾಜ್ಯದ ಪ್ರಗತಿಗೆ ಪ್ರತಿಯೊಬ್ಬರೂ ಕೊಡುಗೆ ನೀಡುವಂತೆ ಆಗ್ರಹಿಸಿದರು.
ಗೋವಾ ರಾಜ್ಯಪಾಲ ಶ್ರೀ ಪಿ.ಎಸ್.ಶ್ರೀಧರನ್ ಪಿಳ್ಳೈ, ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್ ಮತ್ತು ಕೇಂದ್ರ ಪ್ರವಾಸೋದ್ಯಮ ಮತ್ತು ಬಂದರು, ಹಡಗು ಮತ್ತು ಜಲಮಾರ್ಗಗಳ ರಾಜ್ಯ ಸಚಿವ ಶ್ರೀ ಶ್ರೀಪಾದ್ ಯೆಸ್ಸೊ ನಾಯಕ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಪ್ರಧಾನಮಂತ್ರಿಯವರು ಗೋವಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಶಾಶ್ವತ ಕ್ಯಾಂಪಸ್ ಉದ್ಘಾಟಿಸಿದರು. ಹೊಸದಾಗಿ ನಿರ್ಮಿಸಲಾದ ಕ್ಯಾಂಪಸ್ ವಿದ್ಯಾರ್ಥಿಗಳು, ಬೋಧಕರು ಮತ್ತು ಸಿಬ್ಬಂದಿಯ ಅಗತ್ಯಗಳನ್ನು ಪೂರೈಸಲು ಟ್ಯುಟೋರಿಯಲ್ ಕಾಂಪ್ಲೆಕ್ಸ್, ಇಲಾಖಾ ಸಂಕೀರ್ಣ, ಸೆಮಿನಾರ್ ಸಂಕೀರ್ಣ, ಆಡಳಿತ ಸಂಕೀರ್ಣ, ಹಾಸ್ಟೆಲ್ ಗಳು, ಆರೋಗ್ಯ ಕೇಂದ್ರ, ಸಿಬ್ಬಂದಿ ವಸತಿಗೃಹಗಳು, ಸೌಲಭ್ಯ ಕೇಂದ್ರ, ಕ್ರೀಡಾ ಮೈದಾನ ಮತ್ತು ಇತರ ಸವಲತ್ತುಗಳ ವಿವಿಧ ಸೌಲಭ್ಯಗಳನ್ನು ಹೊಂದಿದೆ.
ಪ್ರಧಾನಮಂತ್ರಿಯವರು ರಾಷ್ಟ್ರೀಯ ಜಲಕ್ರೀಡಾ ಸಂಸ್ಥೆಯ ಹೊಸ ಕ್ಯಾಂಪಸ್ ಲೋಕಾರ್ಪಣೆ ಮಾಡಿದರು. ಸಾರ್ವಜನಿಕರು ಮತ್ತು ಸಶಸ್ತ್ರ ಪಡೆಗಳ ಅವಶ್ಯಕತೆಗಳನ್ನು ಪೂರೈಸುವ ಜಲಕ್ರೀಡೆ ಮತ್ತು ಜಲ ರಕ್ಷಣಾ ಪರಿಹಾರ ಚಟುವಟಿಕೆಗಳ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ 28 ಸೂಕ್ತವಾದ ಕೋರ್ಸ್ ಗಳನ್ನು ಸಂಸ್ಥೆ ಪರಿಚಯಿಸಲಿದೆ. ಪ್ರಧಾನಮಂತ್ರಿಯವರು ದಕ್ಷಿಣ ಗೋವಾದಲ್ಲಿ 100 ಟಿಪಿಡಿ ಸಮಗ್ರ ತ್ಯಾಜ್ಯ ನಿರ್ವಹಣಾ ಸೌಲಭ್ಯವನ್ನು ಉದ್ಘಾಟಿಸಿದರು. 60 ಟಿಪಿಡಿ ಹಸಿ ತ್ಯಾಜ್ಯ ಮತ್ತು 40 ಟಿಪಿಡಿ ಒಣ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ, ಜೊತೆಗೆ ಹೆಚ್ಚುವರಿ ವಿದ್ಯುತ್ ಉತ್ಪಾದಿಸುವ 500 ಕಿಲೋವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ಸಹ ಇದು ಒಳಗೊಂಡಿದೆ.
ಪಣಜಿ ಮತ್ತು ರೀಸ್ ಮಾಗೋಸ್ ಸಂಪರ್ಕಿಸುವ ಪ್ರಯಾಣಿಕರ ರೋಪ್ ವೇ ಮತ್ತು ಸಂಬಂಧಿತ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದರು. ದಕ್ಷಿಣ ಗೋವಾದಲ್ಲಿ 100 ಎಂಎಲ್ ಡಿ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಅವರು ಶಂಕುಸ್ಥಾಪನೆ ನೆರವೇರಿಸಿದರು. .
ಇದಲ್ಲದೆ, ಅವರು ರೋಜ್ಗಾರ್ ಮೇಳದ ಅಡಿಯಲ್ಲಿ ವಿವಿಧ ಇಲಾಖೆಗಳಲ್ಲಿ 1930 ಹೊಸ ಸರ್ಕಾರಿ ನೇಮಕಾತಿಗಳನ್ನು ಪಡೆದವರಿಗೆ ನೇಮಕಾತಿ ಆದೇಶಗಳನ್ನು ವಿತರಿಸಿದರು ಮತ್ತು ವಿವಿಧ ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ಹಸ್ತಾಂತರಿಸಿದರು.
गोवा क्षेत्र और आबादी के लिहाज़ से भले ही छोटा है, लेकिन सामाजिक विविधता के मामले में बहुत बड़ा है: PM @narendramodi pic.twitter.com/UIRImDiZ9h
— PMO India (@PMOIndia) February 6, 2024
जब सैचुरेशन होता है तो भेदभाव खत्म होता है।
— PMO India (@PMOIndia) February 6, 2024
जब सैचुरेशन होता है तो हर लाभार्थी तक पूरा लाभ पहुंचता है।
जब सैचुरेशन होता है तो लोगों को अपना हक पाने के लिए रिश्वत नहीं देनी होती: PM @narendramodi pic.twitter.com/Ssm5dY5ieU
हमने ही मछलीपालकों के लिए अलग मंत्रालय बनाया।
— PMO India (@PMOIndia) February 6, 2024
हमने ही मछलीपालकों को किसान क्रेडिट कार्ड की सुविधा दी: PM @narendramodi pic.twitter.com/b89C2EeWPZ
डबल इंजन सरकार गरीब कल्याण के लिए बड़ी योजनाएं चलाने के साथ ही इंफ्रास्ट्रक्चर पर रिकॉर्ड इन्वेस्टमेंट कर रही है: PM @narendramodi pic.twitter.com/UFZ25SuwGu
— PMO India (@PMOIndia) February 6, 2024
हमारी सरकार, गोवा में कनेक्टिविटी बेहतर करने के साथ ही इसे लॉजिस्टिक हब बनाने के लिए भी काम कर रही है: PM @narendramodi pic.twitter.com/kY4osVx5H5
— PMO India (@PMOIndia) February 6, 2024
भारत में हर प्रकार का टूरिज्म, एक ही देश में, एक ही वीज़ा पर उपलब्ध है: PM @narendramodi pic.twitter.com/VaGPfEaU6v
— PMO India (@PMOIndia) February 6, 2024
हमारा प्रयास है कि गोवा के अंदरूनी इलाकों में इको-टूरिज्म को बढ़ावा मिले: PM @narendramodi pic.twitter.com/zMw7gY0SX2
— PMO India (@PMOIndia) February 6, 2024