ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಕೇಂದ್ರ ಸಚಿವರು, ಸಂಸದರು, ಶಾಸಕರು ಮತ್ತು ಸ್ಥಳೀಯ ಮಟ್ಟದ ಪ್ರತಿನಿಧಿಗಳ ಜೊತೆಗೆ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಸಾವಿರಾರು ಫಲಾನುಭವಿಗಳು ಭಾಗವಹಿಸಿದರು.
ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯು ಇತ್ತೀಚೆಗೆ 50 ದಿನಗಳನ್ನು ಪೂರೈಸಿದೆ ಮತ್ತು ಸುಮಾರು 11 ಕೋಟಿ ಜನರೊಂದಿಗೆ ಸಂಪರ್ಕ ಸಾಧಿಸಿದೆ ಎಂದು ಮಾಹಿತಿ ನೀಡಿದರು. "ವಿಕಸಿತ ಭಾರತ ಸಂಕಲ್ಪ ಯಾತ್ರೆʼಯು ಕೇವಲ ಸರ್ಕಾರದ ಪ್ರಯಾಣ ಮಾತ್ರವಲ್ಲ, ದೇಶದ ಪ್ರಯಾಣವೂ ಆಗಿದೆ," ಎಂದು ಅವರು ಹೇಳಿದರು. "ಮೋದಿ ಅವರ ಗ್ಯಾರಂಟಿಯ ಗಾಡಿಯು ದೇಶದ ಮೂಲೆ ಮೂಲೆಯನ್ನು ತಲುಪುತ್ತಿದೆ. ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಕಾಯುತ್ತಾ ತಮ್ಮ ಜೀವನವನ್ನು ಸವೆಸಿದ ಬಡ ಜನರು ಇಂದು ಅರ್ಥಪೂರ್ಣ ಬದಲಾವಣೆಯನ್ನು ನೋಡುತ್ತಿದ್ದಾರೆ. ಸರ್ಕಾರವು ಫಲಾನುಭವಿಗಳ ಮನೆ ಬಾಗಿಲಿಗೇ ತಲುಪಿ, ಪ್ರಯೋಜನಗಳನ್ನು ಒದಗಿಸುತ್ತಿದೆ. ಮೋದಿ ಅವರ ಗ್ಯಾರಂಟಿಯ ಗಾಡಿ ಜೊತೆಗೇ, ಸರ್ಕಾರಿ ಕಚೇರಿಗಳು ಮತ್ತು ಜನಪ್ರತಿನಿಧಿಗಳು ಜನರನ್ನು ತಲುಪುತ್ತಿದ್ದಾರೆ," ಎಂದು ಪ್ರಧಾನಿ ಹೇಳಿದರು.
'ಮೋದಿ ಅವರ ಗ್ಯಾರಂಟಿ' ಬಗ್ಗೆ ಜಾಗತಿಕ ಚರ್ಚೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಖಾತರಿಯ ರೂಪುರೇಷೆ ಮತ್ತು ಸಮರೋಪಾದಿಯಲ್ಲಿ ಫಲಾನುಭವಿಗಳನ್ನು ತಲುಪುವ ತಾರ್ಕಿಕತೆಯ ಬಗ್ಗೆ ಮಾತನಾಡಿದರು. ಇದೇ ವೇಳೆ, ʻವಿಕಸಿತ ಭಾರತ ಸಂಕಲ್ಪʼ ಮತ್ತು ಯೋಜನೆಯ ಶೇ.100ರಷ್ಟು ಪರಿಪೂರ್ಣತೆಯ ನಡುವಿನ ಸಂಬಂಧವನ್ನು ಒತ್ತಿ ಹೇಳಿದರು. ಬಡವರು, ಯುವಕರು, ಮಹಿಳೆಯರು ಮತ್ತು ರೈತರು ಹಲವು ತಲೆಮಾರುಗಳಿಂದ ನಡೆಸುತ್ತಿರುವ ಹೋರಾಟವನ್ನು ಪ್ರಧಾನಿ ಮೋದಿ ವಿಶೇಷವಾಗಿ ಉಲ್ಲೇಖಿಸಿದರು. "ಹಿಂದಿನ ತಲೆಮಾರು ಬದುಕಿದ ಜೀವನವನ್ನೇ ಇಂದಿನ ಮತ್ತು ಭವಿಷ್ಯದ ಪೀಳಿಗೆಯು ಬದುಕಬೇಕಾಗಿಲ್ಲ ಎಂದು ನಮ್ಮ ಸರ್ಕಾರ ಬಯಸುತ್ತದೆ. ಸಣ್ಣ ದೈನಂದಿನ ಅಗತ್ಯಗಳಿಗಾಗಿ ಹೋರಾಟ ಮಾಡುವ ಸ್ಥಿತಿಯಿಂದ ದೇಶದ ದೊಡ್ಡ ಮಟ್ಟದ ಜನರನ್ನು ಹೊರತರಲು ನಾವು ಬಯಸುತ್ತೇವೆ. ಆದ್ದರಿಂದ, ನಾವು ಬಡವರು, ರೈತರು, ಮಹಿಳೆಯರು ಮತ್ತು ಯುವಕರ ಭವಿಷ್ಯದ ಬಗ್ಗೆ ಗಮನ ಹರಿಸುತ್ತಿದ್ದೇವೆ. ನಮ್ಮ ಪಾಲಿಗೆ ಇವು ದೇಶದ ನಾಲ್ಕು ದೊಡ್ಡ ವರ್ಗಗಳು. ಬಡವರು, ರೈತರು, ಮಹಿಳೆಯರು ಮತ್ತು ಯುವಕರು ಸಶಕ್ತರಾದಾಗ, ದೇಶವೂ ಶಕ್ತಿಶಾಲಿಯಾಗುತ್ತದೆ,ʼʼ ಎಂದರು.
ಸರ್ಕಾರದ ಯೋಜನೆಗಳ ಪ್ರಯೋಜನಗಳಿಂದ ಯಾವುದೇ ಅರ್ಹ ಫಲಾನುಭವಿ ವಂಚಿತರಾಗದಂತೆ ನೋಡುವುದು ʻವಿಕಾಸ ಭಾರತ ಸಂಕಲ್ಪ ಯಾತ್ರೆʼಯ ಮುಖ್ಯ ಗುರಿಯಾಗಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು. ಯಾತ್ರೆ ಪ್ರಾರಂಭವಾದಾಗಿನಿಂದ, ʻಸುರಕ್ಷಾ ಬಿಮಾ ಯೋಜನೆʼ, ʻಜೀವನ್ ಜ್ಯೋತಿ ಯೋಜನೆʼ, ʻಪಿಎಂ ಸ್ವನಿಧಿʼಗಾಗಿ ಲಕ್ಷಾಂತರ ಅರ್ಜಿಗಳು ಬಂದಿವೆ. ಜೊತೆಗೆ ʻಉಜ್ವಲʼ ಸಂಪರ್ಕಕ್ಕಾಗಿ 12 ಲಕ್ಷ ಹೊಸ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ʻವಿಕಾಸ ಭಾರತ ಸಂಕಲ್ಪ ಯಾತ್ರೆʼಯ ಪರಿಣಾಮದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಈವರೆಗೆ 1 ಕೋಟಿ ಕ್ಷಯರೋಗ ತಪಾಸಣೆ ಮತ್ತು 22 ಲಕ್ಷ ಕುಡಗೋಲು ಕೋಶ ತಪಾಸಣೆ ಸೇರಿದಂತೆ 2 ಕೋಟಿಗೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು. ಇಂದು ಬಡವರು, ದಲಿತರು, ಅವಕಾಶ ವಂಚಿತರು ಮತ್ತು ಬುಡಕಟ್ಟು ಜನಾಂಗದವರ ಮನೆ ಬಾಗಿಲಿಗೇ ವೈದ್ಯರು ತಲುಪುತ್ತಿದ್ದಾರೆ. ಇದನ್ನು ಹಿಂದಿನ ಸರ್ಕಾರಗಳು ಸವಾಲಾಗಿ ಪರಿಗಣಿಸಿದ್ದವು ಎಂದು ಪ್ರಧಾನಿ ಹೇಳಿದರು.
5 ಲಕ್ಷ ರೂ.ಗಳ ಆರೋಗ್ಯ ವಿಮೆ, ಬಡವರಿಗೆ ಉಚಿತ ಡಯಾಲಿಸಿಸ್ ಮತ್ತು ʻಜನೌಷಧ ಕೇಂದ್ರʼಗಳಲ್ಲಿ ಕೈಗೆಟುಕುವ ದರದಲ್ಲಿ ಬೆಲೆಯ ಔಷಧಗಳನ್ನು ಒದಗಿಸುವ ʻಆಯುಷ್ಮಾನ್ ಯೋಜನೆʼಯ ಬಗ್ಗೆ ಅವರು ಒತ್ತಿ ಹೇಳಿದರು. "ದೇಶಾದ್ಯಂತ ನಿರ್ಮಿಸಲಾದ ʻಆಯುಷ್ಮಾನ್ ಆರೋಗ್ಯ ಮಂದಿರಗಳುʼಗಳು ಹಳ್ಳಿಗಳು ಮತ್ತು ಬಡವರಿಗೆ ಪ್ರಮುಖ ಆರೋಗ್ಯ ಕೇಂದ್ರಗಳಾಗಿ ಮಾರ್ಪಟ್ಟಿವೆ," ಎಂದು ಅವರು ಹೇಳಿದರು.
ದೇಶದಲ್ಲಿ ಮಹಿಳಾ ಸಬಲೀಕರಣದ ಮೇಲೆ ಸರ್ಕಾರ ಬೀರಿದ ಪ್ರಭಾವವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು. ʻಮುದ್ರಾ ಯೋಜನೆʼಯ ಮೂಲಕ ಸುಲಭ ಸಾಲಗಳ ಲಭ್ಯತೆ ಜೊತೆಗೆ ʻಬ್ಯಾಂಕ್ ಮಿತ್ರ', ʻಪಶು ಸಖಿʼ ಮತ್ತು ʻಆಶಾ ಕಾರ್ಯಕರ್ತೆʼಯರಾಗಿ ಮಹಿಳೆಯರು ನಿರ್ವಹಿಸುತ್ತಿರುವ ಪಾತ್ರಗಳ ಬಗ್ಗೆ ಪ್ರಧಾನಿ ಉಲ್ಲೇಖಿಸಿದರು. ಕಳೆದ 10 ವರ್ಷಗಳಲ್ಲಿ 10 ಕೋಟಿ ಮಹಿಳೆಯರು ಮಹಿಳಾ ಸ್ವಸಹಾಯ ಗುಂಪುಗಳನ್ನು ಸೇರಿದ್ದಾರೆ, ಅಲ್ಲಿ ಅವರಿಗೆ 7.5 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಹಣಕಾಸು ನೆರವನ್ನು ಒದಗಿಸಲಾಗಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ಈ ಕಾರಣದಿಂದಾಗಿ, ಹಲವು ವರ್ಷಗಳಿಂದ ಅನೇಕ ಸಹೋದರಿಯರು ʻಲಕ್ಷಾಧಿಪತಿ ದೀದಿʼಯಾಗಿದ್ದಾರೆ ಎಂದು ಪ್ರಧಾನಿ ಹೇಳಿದರು. ಇದರ ಯಶಸ್ಸನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ʻಲಕ್ಷಾಧಿಪತಿ ದೀದಿʼಯರ ಸಂಖ್ಯೆಯನ್ನು 2 ಕೋಟಿಗೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ʻನಮೋ ಡ್ರೋನ್ ದೀದಿ ಯೋಜನೆʼಯನ್ನು ಆರಂಭಿಸಿದೆ. ʻವಿಕಸಿತ ಭಾರತ ಸಂಕಲ್ಪ ಯಾತ್ರೆʼ ಅವಧಿಯಲ್ಲಿ ಸುಮಾರು 1 ಲಕ್ಷ ಡ್ರೋನ್‌ಗಳನ್ನು ಪ್ರದರ್ಶಿಸಲಾಗಿದೆ ಎಂದು ಮಾಹಿತಿ ನೀಡಿದರು. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಸಮರೋಪಾದಿಯಲ್ಲಿ ಹೊಸ ತಂತ್ರಜ್ಞಾನಗಳೊಂದಿಗೆ ಸಾರ್ವಜನಿಕರನ್ನು ಸಂಪರ್ಕಿಸಲಾಗುತ್ತಿದೆ ಎಂದು ಅವರು ಹೇಳಿದರು. ಪ್ರಸ್ತುತ, ಕೃಷಿ ಕ್ಷೇತ್ರದಲ್ಲಿ ಮಾತ್ರ ಡ್ರೋನ್‌ಗಳ ಬಳಕೆಗೆ ತರಬೇತಿ ನೀಡಲಾಗುತ್ತಿದೆ. ಆದರೆ ಮುಂಬರುವ ದಿನಗಳಲ್ಲಿ, ಅದರ ವ್ಯಾಪ್ತಿ ಇತರ ಕ್ಷೇತ್ರಗಳಿಗೂ ವಿಸ್ತರಿಸಲಿದೆ " ಎಂದು ಪ್ರಧಾನಿ ಮೋದಿ ಹೇಳಿದರು.
ಹಿಂದಿನ ಸರ್ಕಾರಗಳಲ್ಲಿ, ದೇಶದಲ್ಲಿ ಕೃಷಿ ನೀತಿಗೆ ಸಂಬಂಧಿಸಿದಂತೆ ನಡೆದ ಚರ್ಚೆಗಳ ವ್ಯಾಪ್ತಿಯು ಉತ್ಪಾದನೆ ಮತ್ತು ಮಾರಾಟಕ್ಕೆ ಮಾತ್ರ ಸೀಮಿತವಾಗಿತ್ತು. ರೈತರು ಪ್ರತಿದಿನ ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗಿತ್ತು ಎಂದು ಪ್ರಧಾನಿ ವಿಷಾದ ವ್ಯಕ್ತಪಡಿಸಿದರು. ʻಪಿಎಂ ಕಿಸಾನ್ ಸಮ್ಮಾನ್ ನಿಧಿʼಯ ಮೂಲಕ ಪ್ರತಿ ರೈತರಿಗೆ ಕನಿಷ್ಠ 30,000 ರೂ.ಗಳ ವರ್ಗಾವಣೆ, ʻಪ್ರಾಥಮಿಕ ಕೃಷಿ ಸಾಲ ಸಹಕಾರ ಸಂಘಗಳುʼ ʻಕೃಷಿ ಉತ್ಪನ್ನ ಸಂಘʼ ಮುಂತಾದವುಗಳ ಮೂಲಕ ಕೃಷಿಯಲ್ಲಿ ಸಹಕಾರವನ್ನು ಉತ್ತೇಜಿಸುವುದು, ಶೇಖರಣಾ ಸೌಲಭ್ಯಗಳ ಹೆಚ್ಚಳ ಮತ್ತು ಆಹಾರ ಸಂಸ್ಕರಣಾ ಉದ್ಯಮಕ್ಕೆ ಉತ್ತೇಜನವನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು. "ರೈತರ ಪ್ರತಿಯೊಂದು ತೊಂದರೆಯನ್ನು ನಿವಾರಿಸಲು ನಮ್ಮ ಸರ್ಕಾರ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಿದೆ," ಎಂದು ಹೇಳಿದರು. ತೊಗರಿ ಅಥವಾ ತೊಗರಿ ಬೇಳೆ ಬೆಳೆಯುವ ರೈತರು ಈಗ ತಮ್ಮ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲೇ ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡಬಹುದು. ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಯ ಜೊತೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ಪ್ರಧಾನಿ ಮಾಹಿತಿ ನೀಡಿದರು. ಈ ಯೋಜನೆಯ ವ್ಯಾಪ್ತಿಯನ್ನು ಇತರ ಬೇಳೆಕಾಳುಗಳಿಗೂ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು. "ಬೇಳೆಕಾಳುಗಳನ್ನು ಖರೀದಿಸಲು ನಾವು ವಿದೇಶಕ್ಕೆ ಕಳುಹಿಸುವ ಹಣವು ದೇಶದ ರೈತರಿಗೆ ಲಭ್ಯವಾಗಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ," ಎಂದು ಅವರು ಹೇಳಿದರು.
ಭಾಷಣವನ್ನು ಮುಗಿಸುವ ಮುನ್ನ ಪ್ರಧಾನಮಂತ್ರಿಯವರು, ತಮ್ಮ ಕೆಲಸದಲ್ಲಿ ಸಂಪೂರ್ಣ ಸಮರ್ಪಣೆಯಿಂದ ತೊಡಗಿರುವ ಸ್ಥಳೀಯ ಆಡಳಿತ ಸೇರಿದಂತೆ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼ ಪ್ರದರ್ಶನವನ್ನು ನಡೆಸುತ್ತಿರುವ ತಂಡದ ಪ್ರಯತ್ನಗಳನ್ನು ಶ್ಲಾಘಿಸಿದರು.
"ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ನಾವು ನಮ್ಮ ಕರ್ತವ್ಯಗಳನ್ನು ಇದೇ ಉತ್ಸಾಹದಲ್ಲಿ ನಿರ್ವಹಿಸಬೇಕು" ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಅವರು ಮಾತು ಮುಗಿಸಿದರು.
ಹಿನ್ನೆಲೆ
2023ರ ನವೆಂಬರ್ 15ರಂದು ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಗೆ ಚಾಲನೆ ದೊರೆತಿದ್ದು, ಅಂದಿನಿಂದ ಪ್ರಧಾನಮಂತ್ರಿಯವರು ದೇಶಾದ್ಯಂತ ಈ ಯಾತ್ರೆಯ ಫಲಾನುಭವಿಗಳೊಂದಿಗೆ ನಿಯಮಿತವಾಗಿ ಸಂವಾದ ನಡೆಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಾಲ್ಕು ಬಾರಿ (ನವೆಂಬರ್ 30, ಡಿಸೆಂಬರ್ 9, ಡಿಸೆಂಬರ್ 16 ಮತ್ತು ಡಿಸೆಂಬರ್ 27) ಈ ಸಂವಾದಗಳು ನಡೆದಿವೆ. ಅಲ್ಲದೆ, ಕಳೆದ ತಿಂಗಳು ವಾರಣಾಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿಯವರು ಸತತ ಎರಡು ದಿನಗಳ ಕಾಲ (ಡಿಸೆಂಬರ್ 17-18) ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಫಲಾನುಭವಿಗಳೊಂದಿಗೆ ಭೌತಿಕವಾಗಿ ಸಂವಾದ ನಡೆಸಿದರು.
ಸರ್ಕಾರದ ಪ್ರಮುಖ ಯೋಜನೆಗಳು ಶೇ. 100ರಷ್ಟು ಫಲಾನುಭವಿಗಳನ್ನು ತಲುಪುವಂತಾಗಲು ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ. ಆ ಮೂಲಕ ಈ ಯೋಜನೆಗಳ ಪ್ರಯೋಜನಗಳು ಕಾಲಮಿತಿಯೊಳಗೆ ಎಲ್ಲಾ ಉದ್ದೇಶಿತ ಫಲಾನುಭವಿಗಳನ್ನು ತಲುಪುವಂತೆ ಖಾತರಿಪಡಿಸಲಾಗುತ್ತಿದೆ.
2024ರ ಜನವರಿ 5 ರಂದು, ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯಲ್ಲಿ ಭಾಗವಹಿಸುವವರ ಸಂಖ್ಯೆ 10 ಕೋಟಿ ದಾಟುವ ಮೂಲಕ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯು ಒಂದು ಪ್ರಮುಖ ಮೈಲುಗಲ್ಲನ್ನು ಸಾಧಿಸಿದೆ. ಯಾತ್ರೆ ಪ್ರಾರಂಭವಾದ ಕೇವಲ 50 ದಿನಗಳಲ್ಲಿ ಇಷ್ಟು ಅಗಾಧ ಸಂಖ್ಯೆಯ ಜನರನ್ನು ತಲುಪಿದ ಈ ಯಾತ್ರೆಯು, ʻವಿಕಸಿತ ಭಾರತʼದ ಸ,ಆಮ ದೃಷ್ಟಿಕೋನದ ಕಡೆಗೆ ದೇಶದ ಜನರನ್ನು ಒಗ್ಗೂಡಿಸುವ ಅದರ ಸಾಮರ್ಥ್ಯವನ್ನು ಸೂಚಿಸುತ್ತದೆ.
समाज में अंतिम पायदान पर खड़े व्यक्ति तक सरकार खुद पहुंच रही है, उसे अपनी योजनाओं से जोड़ रही है: PM @narendramodi pic.twitter.com/NWc2Pgskbv
— PMO India (@PMOIndia) January 8, 2024
विकसित भारत संकल्प यात्रा को लेकर गांव हो या शहर, हर जगह उत्साह देखा जा रहा है। pic.twitter.com/WsXE8RoyMT
— PMO India (@PMOIndia) January 8, 2024
विकसित भारत संकल्प यात्रा का सबसे बड़ा मकसद है- कोई भी हकदार, सरकारी योजना के लाभ से छूटे नहीं: PM @narendramodi pic.twitter.com/0CIc3sSjfI
— PMO India (@PMOIndia) January 8, 2024