ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಎರಡನೇ ರಾಷ್ಟ್ರೀಯ ಯುವ ಸಂಸತ್ತು ಉತ್ಸವದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಸೆಂಟ್ರಲ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಮೂವರು ರಾಷ್ಟ್ರಮಟ್ಟದ ಸ್ಪರ್ಧೆಯ ವಿಜೇತರ ಅಭಿಪ್ರಾಯಗಳನ್ನು ಆಲಿಸಿದರು. ಲೋಕಸಭಾಧ್ಯಕ್ಷರು, ಕೇಂದ್ರ ಶಿಕ್ಷಣ ಸಚಿವರು ಮತ್ತು ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸ್ವಾಮಿ ವಿವೇಕಾನಂದರನ್ನು ಅವರ ಜಯಂತಿಯಂದು ಸ್ಮರಿಸಿದ ಪ್ರಧಾನಮಂತ್ರಿಯವರು, ಎಷ್ಟೇ ವರ್ಷಗಳು ಉರುಳಿದ್ದರೂ, ಸ್ವಾಮಿ ವಿವೇಕಾನಂದರ ಪ್ರಭಾವ ಮತ್ತು ವರ್ಚಸ್ಸು ನಮ್ಮ ರಾಷ್ಟ್ರೀಯ ಜೀವನದಲ್ಲಿ ಹಾಸುಹೊಕ್ಕಾಗಿರುತ್ತದೆ ಎಂದರು. ರಾಷ್ಟ್ರೀಯತೆ ಮತ್ತು ರಾಷ್ಟ್ರ ನಿರ್ಮಾಣದ ಬಗ್ಗೆ ಅವರ ಅಭಿಪ್ರಾಯಗಳು ಮತ್ತು ಜನ ಸೇವೆ ಮಾಡುವ ಮತ್ತು ಜಗತ್ತಿನ ಸೇವೆ ಮಾಡುವ ಬಗ್ಗೆ ಅವರ ಬೋಧನೆ ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ ಎಂದರು. ಸ್ವಾಮೀಜಿಯವರು ವ್ಯಕ್ತಿ ಮತ್ತು ಸಂಸ್ಥೆಗಳ ವಿಕಾಸಕ್ಕೆ ನೀಡಿದ ಕೊಡುಗೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಸ್ವಾಮಿ ವಿವೇಕಾನಂದರ ಸಂಪರ್ಕಕ್ಕೆ ಬಂದ ವ್ಯಕ್ತಿಗಳು ಸಂಸ್ಥೆಗಳನ್ನು ಕಟ್ಟಿದರು ಮತ್ತು ಅದಕ್ಕೆ ಪ್ರತಿಯಾಗಿ ಸಂಸ್ಥೆಗಳು- ಹೊಸ ಸಾಂಸ್ಥಿಕ ನಿರ್ಮಾಣದಾರರನ್ನು ರೂಪಿಸಿತು ಎಂದರು. ವ್ಯಕ್ತಿಗತ ಉದ್ಯಮಶೀಲತೆ ಮತ್ತು ಶ್ರೇಷ್ಠ ಕಂಪನಿಗಳ ಸಂಪರ್ಕವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇದು ಭಾರತದ ದೊಡ್ಡ ಶಕ್ತಿ ಎಂದರು. ಇತ್ತೀಚಿನ ರಾಷ್ಟ್ರೀಯ ಶಿಕ್ಷಣ ನೀತಿ ಒದಗಿಸಲು ಉದ್ದೇಶಿಸಿರುವ ನಾವಿನ್ಯಪೂರ್ಣ ಕಲಿಕಾ ವಿಧಾನದ ನಮ್ಯತೆಯ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಯುವಜನರಿಗೆ ಕರೆ ನೀಡಿದರು. "ನಾವು ದೇಶದಲ್ಲಿ ಪರಿಸರ ವ್ಯವಸ್ಥೆಯನ್ನು ರೂಪಿಸಲು ಪ್ರಯತ್ನಿಸುತ್ತಿದ್ದೇವೆ, ಅದರ ಅನುಪಸ್ಥಿತಿಯಿಂದಾಗಿ ಯುವಕರು ವಿದೇಶಿ ತೀರಗಳತ್ತ ನೋಡುವಂತಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು.
ಆತ್ಮವಿಶ್ವಾಸವಿರುವ, ನಿರ್ಮಲ ಹೃದಯದ, ನಿರ್ಭೀತ ಮತ್ತು ಧೈರ್ಯಶಾಲಿ ಯುವಕರನ್ನು ರಾಷ್ಟ್ರದ ಬುನಾದಿ ಎಂದು ಗುರುತಿಸಿದವರು ಸ್ವಾಮಿ ವಿವೇಕಾನಂದರು ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಯುವಜನರಿಗಾಗಿ ಸ್ವಾಮಿ ವಿವೇಕಾನಂದರು ನೀಡಿದ ಮಂತ್ರಗಳನ್ನು ಪ್ರತಿಪಾದಿಸಿದರು. ದೈಹಿಕ ಸಾಮರ್ಥ್ಯ ಎಂದರೆ ‘ಕಬ್ಬಿಣದಂಥ ಸ್ನಾಯುಗಳು ಮತ್ತು ಉಕ್ಕಿನ ನರಮಂಡಲ’, ವ್ಯಕ್ತಿತ್ವ ವಿಕಸನಕ್ಕಾಗಿ, ‘ನಿಮ್ಮಲ್ಲಿ ನಂಬಿಕೆ ಇಡಿ’; ನಾಯಕತ್ವ ಮತ್ತು ತಂಡದ ಕೆಲಸಕ್ಕಾಗಿ ಸ್ವಾಮೀಜಿ ಅವರು ‘ಎಲ್ಲರನ್ನೂ ನಂಬಿರಿ’ ಎಂದು ಹೇಳಿದ್ದರು ಎಂದರು.
ನಿಸ್ವಾರ್ಥವಾಗಿ ಮತ್ತು ರಚನಾತ್ಮಕವಾಗಿ ರಾಜಕೀಯಕ್ಕೆ ಕೊಡುಗೆ ನೀಡುವಂತೆ ಯುವಜನರಿಗೆ ಕರೆ ನೀಡಿದ ಪ್ರಧಾನಮಂತ್ರಿಯವರು, ಇಂದು ಪ್ರಮಾಣಿಕ ಜನರು ಸೇವೆಯ ಅವಕಾಶ ಪಡೆಯುತ್ತಿದ್ದಾರೆ, ನಿರ್ಲಜ್ಜ ಚಟುವಟಿಕೆಯ ತಾಣವೇ ರಾಜಕೀಯ ಎಂಬ ಹಳೆಯ ಮನೋಭಾವ ಬದಲಾಯಿಸುತ್ತಿದ್ದಾರೆ ಎಂದರು. ಪ್ರಾಮಾಣಿಕತೆ ಮತ್ತು ಸಾಮರ್ಥ್ಯ ಪ್ರದರ್ಶನ ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು, ರಾಜಕೀಯ ವಂಶಪಾರಂಪರ್ಯದ ಬಗ್ಗೆ ದೀರ್ಘವಾಗಿ ಮಾತನಾಡಿದರು. ಭ್ರಷ್ಟಾಚಾರವು ಅವರ ಪರಂಪರೆಯಾಗಿದ್ದು, ಭ್ರಷ್ಟಾಚಾರ ಜನರ ಮೇಲೆ ಹೊರೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ವಂಶಪಾರಂಪರ್ಯ ವ್ಯವಸ್ಥೆಯನ್ನು ಬೇರು ಸಹಿತ ಕಿತ್ತೆಸೆಯುವಂತೆ ಅವರು ಯುವಕರಿಗೆ ಕರೆ ನೀಡಿದರು. ವಂಶಪಾರಂಪರ್ಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಅಸಮರ್ಥತೆ ಮತ್ತು ಸರ್ವಾಧಿಕಾರಿ ಧೋರಣೆಗೆ ಕಾರಣವಾಗುತ್ತದೆ, ಏಕೆಂದರೆ ಅಂತಹ ಜನರು ರಾಜಕೀಯದಲ್ಲಿ ಕುಟುಂಬ ಮತ್ತು ಕುಟುಂಬದ ರಾಜಕೀಯವನ್ನು ಉಳಿಸಿಕೊಳ್ಳುವತ್ತ ಕೆಲಸ ಮಾಡುತ್ತಾರೆ ಎಂದರು. “ಇಂದು, ಕುಟುಂಬದ ಹೆಸರಿನ ಬಲದಲ್ಲಿ ಚುನಾವಣೆಯಲ್ಲಿ ಗೆಲ್ಲುವ ದಿನಗಳು ಮುಗಿದಿವೆ, ವಂಶಪಾರಂಪರ್ಯ ರಾಜಕಾರಣದ ಈ ಅನಾರೋಗ್ಯ ದೂರವಾಗುತ್ತಿದೆ ... ಕುಟುಂಬ ರಾಜಕೀಯ ರಾಷ್ಟ್ರದ ಪ್ರಗತಿ ಮುನ್ನಡೆಸುವ ಬದಲು ತಮ್ಮ ಮತ್ತು ಕುಟುಂಬದ ಪ್ರಗತಿಯನ್ನು ಉತ್ತೇಜಿಸುತ್ತದೆ. ಇದು ಭಾರತದಲ್ಲಿನ ಸಾಮಾಜಿಕ ಭ್ರಷ್ಟಾಚಾರಕ್ಕೆ ಪ್ರಮುಖ ಕಾರಣವಾಗಿದೆ ”ಎಂದು ಪ್ರಧಾನಮಂತ್ರಿ ಹೇಳಿದರು.
ಭುಜ್ ಭೂಕಂಪದ ತರುವಾಯ ಮರುನಿರ್ಮಾಣದ ಉದಾಹರಣೆ ನೀಡಿದ ಪ್ರಧಾನಮಂತ್ರಿಯವರು, ವಿಪತ್ತಿನ ಸಂದರ್ಭದಲ್ಲಿ ತಮ್ಮದೆ ಹಾದಿಯಲ್ಲಿ ಪಾಠ ಕಲಿಯುವ ಸಮಾಜ, ತನ್ನ ಹಣೆಬರಹವನ್ನು ತಾನೇ ಬರೆಯುತ್ತದೆ ಎಂದು ಯುವಜನರಿಗೆ ತಿಳಿಸಿದರು. ಆದ್ದರಿಂದ, 130 ಕೋಟಿ ಭಾರತೀಯರೆಲ್ಲರೂ ಇಂದು ತಮ್ಮ ಹಣೆಬರಹವನ್ನು ತಾವೇ ಬರೆಯುತ್ತಿದ್ದಾರೆ. ಇಂದಿನ ಯುವಜನರ ಪ್ರತಿಯೊಂದು ಪ್ರಯತ್ನ, ನಾವೀನ್ಯತೆ, ಪ್ರಾಮಾಣಿಕ ಪ್ರತಿಜ್ಞೆ ನಮ್ಮ ಭವಿಷ್ಯಕ್ಕೆ ಬಲವಾದ ಅಡಿಪಾಯ ಹಾಕುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.