ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಹೊಸ ಸಂಸತ್ ಭವನದಲ್ಲಿ ರಾಜ್ಯಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು.
ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಸುಸಂದರ್ಭವು ಐತಿಹಾಸಿಕ ಮತ್ತು ಅವಿಸ್ಮರಣೀಯವಾಗಿದೆ ಎಂದು ಹೇಳಿದರು. ಲೋಕಸಭೆಯಲ್ಲಿ ತಾವು ಮಾಡಿದ ಭಾಷಣವನ್ನು ಸ್ಮರಿಸಿದ ಅವರು, ಈ ವಿಶೇಷ ಸಂದರ್ಭದಲ್ಲಿ ತಮಗೆ ರಾಜ್ಯಸಭೆಯನ್ನುದ್ದೇಶಿಸಿ ಮಾತನಾಡುವ ಅವಕಾಶ ನೀಡಿದ್ದಕ್ಕಾಗಿ ಸಭಾಧ್ಯಕ್ಷರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ರಾಜ್ಯಸಭೆಯನ್ನು ಸಂಸತ್ತಿನ ಮೇಲ್ಮನೆ ಎಂದು ಪರಿಗಣಿಸಲಾಗಿದೆ ಎಂದ ಪ್ರಧಾನಮಂತ್ರಿಯವರು, ಸದನವು ರಾಷ್ಟ್ರಕ್ಕೆ ನಿರ್ದೇಶನ ನೀಡುವಾಗ, ಅದು ರಾಜಕೀಯ ಸಂವಾದದ ಏರಿಳಿತಗಳನ್ನು ಮೀರಿ ಗಂಭೀರ ಬೌದ್ಧಿಕ ಚರ್ಚೆಗಳ ಕೇಂದ್ರವಾಗಬೇಕು ಎಂಬ ಸಂವಿಧಾನ ರಚನಾಕಾರರ ಉದ್ದೇಶಗಳನ್ನು ಒತ್ತಿ ಹೇಳಿದರು. "ಇದು ದೇಶದ ಸ್ವಾಭಾವಿಕ ನಿರೀಕ್ಷೆಯಾಗಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ರಾಷ್ಟ್ರಕ್ಕೆ ಇಂತಹ ಕೊಡುಗೆಗಳು ಈ ಪ್ರಕ್ರಿಯೆಯ ಮೌಲ್ಯವನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.
ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಸಂಸತ್ತು ಕೇವಲ ಶಾಸಕಾಂಗ ಸಂಸ್ಥೆಯಲ್ಲ, ಅದು ಸಮಾಲೋಚನಾ ಸಂಸ್ಥೆಯಾಗಿದೆ. ರಾಜ್ಯಸಭೆಯಲ್ಲಿ ಗುಣಮಟ್ಟದ ಚರ್ಚೆಗಳನ್ನು ಆಲಿಸಲು ಸದಾ ಸಂತೋಷವಾಗುತ್ತದೆ ಎಂದು ಶ್ರೀ ಮೋದಿಯವರು ಹೇಳಿದರು. ಹೊಸ ಸಂಸತ್ತು ಕೇವಲ ಹೊಸ ಕಟ್ಟಡವಲ್ಲ, ಅದು ಹೊಸ ಆರಂಭದ ಶುಭ ಸಂಕೇತವಾಗಿದೆ ಎಂದು ಹೇಳಿದ ಅವರು, ಅಮೃತಕಾಲದ ಉದಯದಲ್ಲಿ, ಈ ಹೊಸ ಕಟ್ಟಡವು 140 ಕೋಟಿ ಭಾರತೀಯರಲ್ಲಿ ಹೊಸ ಹುಮ್ಮಸ್ಸನ್ನು ತುಂಬುತ್ತದೆ ಎಂದು ಉಲ್ಲೇಖಿಸಿದರು.
ಜನರ ತಾಳ್ಮೆಯನ್ನು ಪರೀಕ್ಷಿಸದೆ ನಿಗದಿತ ಕಾಲಮಿತಿಯೊಳಗೆ ತಮ್ಮ ಗುರಿಗಳನ್ನು ಸಾಧಿಸುವ ಅಗತ್ಯವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಜನರ ಆಕಾಂಕ್ಷೆಗಳನ್ನು ಪೂರೈಸಲು ಹೊಸ ಚಿಂತನೆ ಮತ್ತು ಶೈಲಿಯೊಂದಿಗೆ ಸಾಗಬೇಕಾದ ಸಮಯ ಬಂದಿದೆ, ಅದಕ್ಕಾಗಿ ನಾವು ಕೆಲಸ ಮತ್ತು ಆಲೋಚನಾ ಪ್ರಕ್ರಿಯೆಯ ವ್ಯಾಪ್ತಿಯನ್ನು ವಿಸ್ತರಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಸಂಸದೀಯ ಪ್ರಾಮಾಣಿಕತೆಗೆ ಸಂಬಂಧಿಸಿದಂತೆ ಈ ಸದನವು ದೇಶಾದ್ಯಂತ ಶಾಸಕಾಂಗ ಸಂಸ್ಥೆಗಳಿಗೆ ಸ್ಫೂರ್ತಿಯ ಸೆಲೆಯಾಗಿದೆ ಎಂದು ಪ್ರಧಾನಿಯವರು ಹೇಳಿದರು.
ಕಳೆದ 9 ವರ್ಷಗಳಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ದಶಕಗಳಿಂದ ಬಾಕಿ ಉಳಿದಿರುವ ಹಾಗೂ ಸ್ಮರಣೀಯವೆಂದು ಪರಿಗಣಿಸಲಾದ ವಿಷಯಗಳ ಬಗ್ಗೆ ಗಮನಸೆಳೆದರು. "ಇಂತಹ ವಿಷಯಗಳ ಬಗ್ಗೆ ಮಾತನಾಡುವುದೂ ಕೂಡಾ ರಾಜಕೀಯ ದೃಷ್ಟಿಕೋನದಲ್ಲಿ ದೊಡ್ಡ ತಪ್ಪು ಎಂದು ಪರಿಗಣಿಸಲಾಗಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ರಾಜ್ಯಸಭೆಯಲ್ಲಿ ಸಾಕಷ್ಟು ಸಂಖ್ಯಾಬಲವಿಲ್ಲದಿದ್ದರೂ ಸರ್ಕಾರವು ಈ ದಿಕ್ಕಿನಲ್ಲಿ ಪ್ರಮುಖವಾಗಿ ದಾಪುಗಾಲು ಹಾಕಿದೆ ಎಂದು ಉಲ್ಲೇಖಿಸಿದರು.
ರಾಷ್ಟ್ರದ ಒಳಿತಿಗಾಗಿ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಪರಿಹರಿಸಲಾಗಿದೆ ಎಂದು ಅವರು ತೃಪ್ತಿ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಸದಸ್ಯರ ಪ್ರಬುದ್ಧತೆ ಮತ್ತು ಬುದ್ಧಿವಂತಿಕೆಯನ್ನು ಅವರು ಶ್ಲಾಘಿಸಿದರು. "ರಾಜ್ಯಸಭೆಯ ಘನತೆಯನ್ನು ಎತ್ತಿಹಿಡಿಯುವುದು ಸದನದ ಹಾಜರಾತಿಯ ಸಂಖ್ಯೆಯಿಂದಲ್ಲ, ಬದಲಾಗಿ ಆವರ ಕೌಶಲ್ಯ ಮತ್ತು ತಿಳುವಳಿಕೆಯಿಂದಾಗಿ" ಎಂದು ಅವರು ಹೇಳಿದರು. ಈ ಸಾಧನೆಗಾಗಿ ಪ್ರಧಾನಮಂತ್ರಿಯವರು ಸದನದ ಎಲ್ಲ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪವಾದಗಳ ಹೊರತಾಗಿಯೂ ರಾಷ್ಟ್ರೀಯ ಹಿತಾಸಕ್ತಿಯನ್ನು ಸರ್ವೋಚ್ಚವಾಗಿಡುವುದು ತಮ್ಮ ಪ್ರಯತ್ನವಾಗಿದೆ ಎಂದು ಪ್ರಧಾನಿ ಹೇಳಿದರು.
ರಾಜ್ಯಗಳ ಸ್ವತಂತ್ರ ಸದನವಾಗಿ ರಾಜ್ಯಸಭೆಯ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಒತ್ತು ನೀಡುವಾಗ, ದೇಶವು ಅನೇಕ ನಿರ್ಣಾಯಕ ವಿಷಯಗಳಲ್ಲಿ ಹೆಚ್ಚಿನ ಸಹಕಾರವನ್ನು ಪ್ರದರ್ಶಿಸಿದೆ ಎಂದ ಅವರು, ಕೊರೊನಾ ಸಾಂಕ್ರಾಮಿಕ ರೋಗವನ್ನು ಹತ್ತಿಕ್ಕಿದ ಉದಾಹರಣೆಯನ್ನು ಕೇಂದ್ರ-ರಾಜ್ಯ ಸರ್ಕಾರಗಳ ಸಹಕಾರದ ಉದಾಹರಣೆಯನ್ನು ಅವರು ಉಲ್ಲೇಖಿಸಿದರು.
ಸಂಕಷ್ಟದ ಸಮಯದಲ್ಲಿ ಮಾತ್ರವಲ್ಲದೆ, ಸಂಭ್ರಮ ಸಂತೋಷದ ಸಮಯದಲ್ಲೂ ಭಾರತವು ವಿಶ್ವದ ಮೇಲೆ ಪ್ರಭಾವ ಬೀರಿದೆ ಎಂದು ಪ್ರಧಾನಿಯವರು ಹೇಳಿದರು. 60ಕ್ಕೂ ಹೆಚ್ಚು ನಗರಗಳಲ್ಲಿ ನಡೆದ ಜಿ-20ರ ಕಾರ್ಯಕ್ರಮಗಳು ಮತ್ತು ದೆಹಲಿಯಲ್ಲಿ ನಡೆದ ಶೃಂಗಸಭೆಯಲ್ಲಿ ನಮ್ಮ ರಾಷ್ಟ್ರದ ವೈವಿಧ್ಯತೆಯನ್ನು ಪ್ರದರ್ಶಿಸಲಾಗಿದೆ ಎಂದು ಅವರು ಹೇಳಿದರು. ಇದು ಸಹಕಾರಿ ಒಕ್ಕೂಟ ವ್ಯವಸ್ಥೆಯ ಶಕ್ತಿ ಎಂದು ಅವರು ಹೇಳಿದರು. ಹೊಸ ಸಂಸತ್ ಭವನ ಕಟ್ಟಡದ ಯೋಜನೆಯಲ್ಲಿ ರಾಜ್ಯಗಳ ಕಲಾಕೃತಿಗಳು ಪ್ರಾಮುಖ್ಯತೆಯನ್ನು ಪಡೆದಿರುವುದರಿಂದ ಹೊಸ ಕಟ್ಟಡವು ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯನ್ನು ಪ್ರತಿನಿಧಿಸುತ್ತದೆ ಎಂದು ಅವರು ಉಲ್ಲೇಖಿಸಿದರು.
ದೈನಂದಿನ ಜೀವನದಲ್ಲಿ ಹೆಚ್ಚುತ್ತಿರುವ ತಂತ್ರಜ್ಞಾನದ ಪ್ರಭಾವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಪ್ರಸ್ತುತ ಪ್ರಭಾವವನ್ನು ಸಾಧಿಸಲು ತಂತ್ರಜ್ಞಾನವು 50 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡರೆ, ಅಂತಹ ಪ್ರಗತಿಯನ್ನು ಈಗ ಕೆಲವೇ ವಾರಗಳಲ್ಲಿ ಕಾಣಬಹುದು ಎಂದು ಅವರು ತಿಳಿಸಿದರು. ಬೆಳೆಯುತ್ತಿರುವ ತಾಂತ್ರಿಕ ಪ್ರಗತಿಗೆ ಹೊಂದಿಕೊಳ್ಳಲು ಕ್ರಿಯಾತ್ಮಕ ರೀತಿಯಲ್ಲಿ ತಮ್ಮನ್ನು ತಾವು ರೂಪಿಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಸಂವಿಧಾನ ಸದನದಲ್ಲಿ ನಾವು ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸಿದ್ದೇವೆ, 2047ರಲ್ಲಿ ಹೊಸ ಕಟ್ಟಡದಲ್ಲಿ ಸ್ವಾತಂತ್ರ್ಯದ ಶತಮಾನವನ್ನು ಆಚರಿಸಲಾಗುವುದು, ಅದು ಈ ವಿಕಸಿತ ಭಾರತದ ಆಚರಣೆಯಾಗಲಿದೆ ಎಂದು ಪ್ರಧಾನಿಯವರು ಹೇಳಿದರು. ಹಳೆಯ ಕಟ್ಟಡದಲ್ಲಿ, ನಾವು ವಿಶ್ವದ ಆರ್ಥಿಕತೆಯ ದೃಷ್ಟಿಯಿಂದ 5ನೇ ಸ್ಥಾನಕ್ಕೆ ತಲುಪಿದ್ದೇವೆ. "ಹೊಸ ಸಂಸತ್ತಿನಲ್ಲಿ, ನಾವು ವಿಶ್ವದ ಅಗ್ರ ಮೂರು ಆರ್ಥಿಕತೆಗಳ ಭಾಗವಾಗುತ್ತೇವೆ ಎಂದು ನನಗೆ ವಿಶ್ವಾಸವಿದೆ" ಎಂದು ಅವರು ಹೇಳಿದರು. "ನಾವು ಬಡವರ ಕಲ್ಯಾಣಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಹೊಸ ಸಂಸತ್ ಭವನದಲ್ಲಿ ಆ ಯೋಜನೆಗಳ ವ್ಯಾಪ್ತಿಯನ್ನು ಪೂರ್ಣಗೊಳಿಸುತ್ತೇವೆ" ಎಂದು ಅವರು ಹೇಳಿದರು.
ಸದನವು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವುದರಿಂದ ಹೊಸ ಸಂಸತ್ ಕಟ್ಟಡದ ಜೊತೆಗೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಪ್ರಧಾನಿಯವರು ಒತ್ತಿ ಹೇಳಿದರು. ಸದನದಲ್ಲಿ ಲಭ್ಯವಿರುವ ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಲು ಸದಸ್ಯರು ಪರಸ್ಪರ ಬೆಂಬಲಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಡಿಜಿಟಲ್ ಯುಗದಲ್ಲಿ, ನಾವು ತಂತ್ರಜ್ಞಾನವನ್ನು ನಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ಪ್ರಧಾನಿಯವರು ಹೇಳಿದರು. ಮೇಕ್ ಇನ್ ಇಂಡಿಯಾದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ರಾಷ್ಟ್ರವು ಈ ಉಪಕ್ರಮದ ಲಾಭವನ್ನು ಹೊಸ ಶಕ್ತಿ, ಉತ್ಸಾಹ ಹಾಗೂ ಹುಮ್ಮಸ್ಸಿನಿಂದ ಪಡೆದುಕೊಳ್ಳುತ್ತಿದೆ ಎಂದರು.
ಲೋಕಸಭೆಯಲ್ಲಿ ಮಂಡಿಸಲಾದ ನಾರಿಶಕ್ತಿ ವಂದನ ಅಧಿನಿಯಮವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ನಾವು ಸುಗಮ ಜೀವನದ ಬಗ್ಗೆ ಮಾತನಾಡುವಾಗ, ಆ ಸುಲಭದ ಮೊದಲ ಹಕ್ಕು ಮಹಿಳೆಯರಿಗೆ ದೊರೆಯಬೇಕು ಎಂದರು. ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲಾಗುತ್ತಿದೆ ಎಂದು ಅವರು ಹೇಳಿದರು. "ಮಹಿಳೆಯರ ಸಾಮರ್ಥ್ಯಕ್ಕೆ ಅವಕಾಶಗಳು ಸಿಗಬೇಕು. ಅವರ ಜೀವನದಲ್ಲಿ ''ಹಾಗಿದ್ದರೆ ಮತ್ತು ಹೀಗಾದರೆ'' ಎಂಬ ಸಮಯ ಮುಗಿದಿದೆ", ಎಂದು ಪ್ರಧಾನಮಂತ್ರಿಯವರು ತಿಳಿಸಿದರು.
ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮವು ಜನಪರ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ. ಜನ್ ಧನ್ ಮತ್ತು ಮುದ್ರಾ ಯೋಜನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಉಜ್ವಲ ಮತ್ತು ತ್ರಿವಳಿ ತಲಾಖ್ ನಿರ್ಮೂಲನೆ ಮತ್ತು ಮಹಿಳೆಯರ ಸುರಕ್ಷತೆಗಾಗಿ ಬಲವಾದ ಕಾನೂನುಗಳನ್ನು ಅವರು ಉಲ್ಲೇಖಿಸಿದರು. ಜಿ-20ರಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯು ದೊಡ್ಡ ಚರ್ಚೆಯ ವಿಷಯವಾಗಿದೆ ಎಂದು ಅವರು ಹೇಳಿದರು.
ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಬಗೆಗಿನ ವಿಷಯವು ದಶಕಗಳಿಂದ ಬಾಕಿ ಉಳಿದಿದೆ ಮತ್ತು ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಾನುಸಾರವಾಗಿ ಅದಕ್ಕೆ ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಿ ಉಲ್ಲೇಖಿಸಿದರು. ಈ ಮಸೂದೆಯನ್ನು ಮೊದಲು 1996ರಲ್ಲಿ ಪರಿಚಯಿಸಲಾಯಿತು. ಅಟಲ್ ಜಿ ಅವರ ಅಧಿಕಾರಾವಧಿಯಲ್ಲಿ ಹಲವಾರು ಚರ್ಚೆಗಳು ಮತ್ತು ಉಲ್ಲೇಖಗಳು ನಡೆದವು, ಆದರೆ ಸಂಖ್ಯಾಬಲದ ಕೊರತೆಯಿಂದಾಗಿ ಮಸೂದೆಯು ಜಾರಿಗೆ ಬರಲು ಸಾಧ್ಯವಾಗಲಿಲ್ಲ ಎಂದು ಹೇಳಿದ ಪ್ರಧಾನಿ, ಈ ಮಸೂದೆಯು ಅಂತಿಮವಾಗಿ ಕಾನೂನಾಗಿ ಬದಲಾಗಿ ಹೊಸ ಕಟ್ಟಡದ ಹೊಸ ಶಕ್ತಿಯೊಂದಿಗೆ ರಾಷ್ಟ್ರ ನಿರ್ಮಾಣದ ಕಡೆಗೆ 'ನಾರಿ ಶಕ್ತಿ' ಯನ್ನು ಪರಿಚಯಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ನಾರಿ ಶಕ್ತಿ ವಂದನ್ ಅಧಿನಿಯಮವನ್ನು ಇಂದು ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯಾಗಿ ಪರಿಚಯಿಸುವ ಸರ್ಕಾರದ ನಿರ್ಧಾರದ ಬಗ್ಗೆ ಅವರು ಮಾಹಿತಿ ನೀಡಿದರು, ಇದು ನಾಳೆ ಚರ್ಚೆಗೆ ಬರಲಿದೆ. ಮಸೂದೆಯನ್ನು ಸರ್ವಾನುಮತದಿಂದ ಬೆಂಬಲಿಸಿ, ಇದರಿಂದ ಅದರ ಶಕ್ತಿ ಮತ್ತು ವ್ಯಾಪ್ತಿಯು ಪೂರ್ಣವಾಗಿ ಹೆಚ್ಚುತ್ತದೆ ಎಂದು ರಾಜ್ಯಸಭೆಯ ಸದಸ್ಯರನ್ನು ಒತ್ತಾಯಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
Rajya Sabha discussions have always been enriched with contributions of several greats. This august House will infuse energy to fulfill aspirations of Indians. pic.twitter.com/MKC0uXuYCU
— PMO India (@PMOIndia) September 19, 2023
नए संसद भवन में जब हम आजादी की शताब्दी मनाएंगे, वो स्वर्ण शताब्दी विकसित भारत की होगी। pic.twitter.com/Be8IGB1N39
— PMO India (@PMOIndia) September 19, 2023