ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು "ಮಹಿಳೆಯರ ಆರ್ಥಿಕ ಸಬಲೀಕರಣ" ವಿಷಯ ಕುರಿತು ಬಜೆಟ್ ನಂತರದ ವೆಬಿನಾರ್ ಅನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರ ಬಜೆಟ್ 2023 ರಲ್ಲಿ ಘೋಷಿಸಲಾದ ಉಪಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆಲೋಚನೆಗಳು ಮತ್ತು ಸಲಹೆಗಳನ್ನು ಪಡೆಯಲು ಸರ್ಕಾರವು ಆಯೋಜಿಸಿರುವ 12 ಬಜೆಟ್ ನಂತರದ ವೆಬಿನಾರ್‌ಗಳ ಸರಣಿಯಲ್ಲಿ ಇದು 11 ನೆಯದು.
2047 ರ ವೇಳೆಗೆ ವಿಕಾಸ ಭಾರತದ ಗುರಿಯನ್ನು ಸಾಧಿಸಲು ಈ ವರ್ಷದ ಬಜೆಟ್ ಒಂದು ಶುಭಾರಂಭವಾಗಿದೆ ಎಂದು ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದರು. ಭವಿಷ್ಯದ ಅಮೃತ ಕಾಲದ ದೃಷ್ಟಿಕೋನದಿಂದ ಬಜೆಟ್ ಅನ್ನು ನೋಡಲಾಗಿದೆ ಮತ್ತು ಪರಿಶೀಲಿಸಲಾಗಿದೆ. ಈ ಗುರಿಗಳೊಂದಿಗೆ ದೇಶದ ನಾಗರಿಕರು ಕೂಡ ಮುಂದಿನ 25 ವರ್ಷಗಳತ್ತ ಗಮನಹರಿಸುತ್ತಿರುವುದು ದೇಶಕ್ಕೆ ಒಳ್ಳೆಯ ಸಂಕೇತವಾಗಿದೆ ಎಂದು ಅವರು ಹೇಳಿದರು.
ಕಳೆದ 9 ವರ್ಷಗಳಲ್ಲಿ ದೇಶವು ಮಹಿಳಾ ನೇತೃತ್ವದ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಸಾಗಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು. ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ-20 ಸಭೆಯಲ್ಲಿ ಭಾರತವು ಈ ಪ್ರಯತ್ನಗಳನ್ನು ಜಾಗತಿಕ ಹಂತಕ್ಕೆ ಕೊಂಡೊಯ್ದಿದೆ. ಮಹಿಳಾ ನೇತೃತ್ವದ ಅಭಿವೃದ್ಧಿಯ ಈ ಪ್ರಯತ್ನಗಳಿಗೆ ಈ ವರ್ಷದ ಬಜೆಟ್ ಹೊಸ ವೇಗವನ್ನು ನೀಡುತ್ತದೆ ಎಂದು ಅವರು ಹೇಳಿದರು.
ನಾರಿ ಶಕ್ತಿಯ ದೃಢಸಂಕಲ್ಪ, ಇಚ್ಛಾಶಕ್ತಿ, ಕಲ್ಪನಾ ಶಕ್ತಿ, ಗುರಿಗಳಿಗಾಗಿ ಕೆಲಸ ಮಾಡುವ ಸಾಮರ್ಥ್ಯ ಮತ್ತು ತೀವ್ರ ಕಠಿಣ ಪರಿಶ್ರಮವನ್ನು ಪ್ರಧಾನಮಂತ್ರಿಯವರು ‘ಮಾತೃ ಶಕ್ತಿ’ಯ ಪ್ರತಿಬಿಂಬ ಎಂದು ಬಣ್ಣಿಸಿದರು. ಈ ಶತಮಾನದಲ್ಲಿ ಭಾರತದ ವೇಗ ಮತ್ತು ಪ್ರಮಾಣವನ್ನು ಹೆಚ್ಚಿಸುವಲ್ಲಿ ಈ ಗುಣಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.
ಇಂದು, ಮಹಿಳಾ ಸಬಲೀಕರಣದ ಪ್ರಯತ್ನಗಳ ಫಲಿತಾಂಶಗಳು ಗೋಚರಿಸುತ್ತಿವೆ ಮತ್ತು ನಾವು ದೇಶದ ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ನೋಡುತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು. ಪುರುಷರಿಗೆ ಹೋಲಿಸಿದರೆ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ 9-10 ವರ್ಷಗಳಲ್ಲಿ ಪ್ರೌಢಶಾಲೆ ಮತ್ತು ನಂತರ ವಿದ್ಯಭ್ಯಾಸ ಮುಂದುವರಿಸಿರುವ ಹೆಣ್ಣು ಮಕ್ಕಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತದಲ್ಲಿ ಬಾಲಕಿಯರ ದಾಖಲಾತಿ ಇಂದು ಶೇಕಡಾ 43 ರಷ್ಟಿದೆ, ಇದು ಅಮೆರಿಕ, ಯುಕೆ ಮತ್ತು ಜರ್ಮನಿಯಂತಹ ದೇಶಗಳಿಗಿಂತಲೂ ಹೆಚ್ಚು. ವೈದ್ಯಕೀಯ, ಕ್ರೀಡೆ, ವ್ಯಾಪಾರ ಅಥವಾ ರಾಜಕೀಯದಂತಹ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿರುವುದು ಮಾತ್ರವಲ್ಲ, ಅವರು ಮುಂಚೂಣಿಯಲ್ಲಿ ನಿಂತು ಮುನ್ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
70 ರಷ್ಟು ಮುದ್ರಾ ಸಾಲದ ಫಲಾನುಭವಿಗಳು ಮಹಿಳೆಯರಾಗಿದ್ದಾರೆ ಎಂಬ ಅಂಶವನ್ನು ಪ್ರಧಾನಿ ಪ್ರಸ್ತಾಪಿಸಿದರು. ಅದೇ ರೀತಿ, ಸ್ವನಿಧಿ ಅಡಿಯಲ್ಲಿ ಮೇಲಾಧಾರ ಮುಕ್ತ ಸಾಲಗಳನ್ನು ಉತ್ತೇಜಿಸುವ ಯೋಜನೆಗಳು ಮತ್ತು ಪಶುಸಂಗೋಪನೆ, ಮೀನುಗಾರಿಕೆ, ಗ್ರಾಮೋದ್ಯೋಗಗಳು, ಎಫ್ ಪಿ ಒ ಗಳು ಮತ್ತು ಕ್ರೀಡೆಗಳಲ್ಲಿನ ಪ್ರೋತ್ಸಾಹ ಯೋಜನೆಗಳಿಂದ ಮಹಿಳೆಯರು ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ದೇಶದ ಅರ್ಧದಷ್ಟು ಜನಸಂಖ್ಯೆಯ ಸಹಾಯದಿಂದ ನಾವು ಹೇಗೆ ದೇಶವನ್ನು ಮುನ್ನಡೆಸಬಹುದು ಮತ್ತು ಮಹಿಳಾ ಶಕ್ತಿಯ ಸಾಮರ್ಥ್ಯವನ್ನು ನಾವು ಹೇಗೆ ಹೆಚ್ಚಿಸಬಹುದು ಎಂಬುದರ ಪ್ರತಿಬಿಂಬವು ಈ ಬಜೆಟ್‌ನಲ್ಲಿ ಗೋಚರಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಪ್ರಸ್ತಾಪಿಸಿದ ಅವರು, ಅಲ್ಲಿ ಮಹಿಳೆಯರಿಗೆ ಶೇಕಡಾ 7.5 ಬಡ್ಡಿ ಸಿಗುತ್ತದೆ ಎಂದರು. ಪ್ರಧಾನಮಂತ್ರಿ ಆವಾಸ್ ಯೋಜನೆಗೆ 80 ಸಾವಿರ ಕೋಟಿ ರೂಪಾಯಿಗಳನ್ನು ನೀಡಿರುವುದು ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ, ಏಕೆಂದರೆ 3 ಕೋಟಿ ಮನೆಗಳಲ್ಲಿ ಹೆಚ್ಚಿನವು ಮಹಿಳೆಯರ ಹೆಸರಿನಲ್ಲಿವೆ ಎಂದು ಶ್ರೀ ಮೋದಿ ಹೇಳಿದರು. ಸಾಂಪ್ರದಾಯಿಕವಾಗಿ, ಮಹಿಳೆಯರು ತಮ್ಮ ಹೆಸರಿನಲ್ಲಿ ಯಾವುದೇ ಆಸ್ತಿಯನ್ನು ಹೊಂದಿರದ ಸನ್ನಿವೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಸಬಲೀಕರಣವನ್ನು ಹೆಚ್ಚಿಸುತ್ತದೆ ಎಂಬ ಅಂಶವನ್ನು ಅವರು ಒತ್ತಿ ಹೇಳಿದರು. ಪ್ರಧಾನಮಂತ್ರಿ ಆವಾಸ್ ಕುಟುಂಬದ ಆರ್ಥಿಕ ನಿರ್ಧಾರಗಳಲ್ಲಿ ಮಹಿಳೆಯರಿಗೆ ಹೊಸ ಧ್ವನಿಯನ್ನು ನೀಡಿದೆ ಎಂದು ಅವರು ಹೇಳಿದರು.
ಸ್ವಸಹಾಯ ಗುಂಪುಗಳಲ್ಲಿ ಹೊಸ ಯುನಿಕಾರ್ನ್‌ಗಳನ್ನು ರಚಿಸಲು ಸ್ವಸಹಾಯ ಗುಂಪುಗಳಿಗೆ ಬೆಂಬಲ ನೀಡುವ ಘೋಷಣೆಯ ಬಗ್ಗೆ ಪ್ರಧಾನಮಂತ್ರಿ ಮಾತನಾಡಿದರು. ಬದಲಾಗುತ್ತಿರುವ ಸನ್ನಿವೇಶಗಳೊಂದಿಗೆ ಮಹಿಳಾ ಸಬಲೀಕರಣಕ್ಕಾಗಿ ದೇಶದ ದೃಷ್ಟಿಕೋನವನ್ನು ಬಲಪಡಿಸುತ್ತಿರುವ ಬಗ್ಗೆ ಪ್ರಧಾನಮಂತ್ರಿ ವಿವರಿಸಿದರು. ಇಂದು 5 ರಲ್ಲಿ 1 ಕೃಷಿಯೇತರ ವ್ಯವಹಾರವನ್ನು ಮಹಿಳೆಯರು ನಡೆಸುತ್ತಿದ್ದಾರೆ. ಕಳೆದ 9 ವರ್ಷಗಳಲ್ಲಿ 7 ಕೋಟಿಗೂ ಹೆಚ್ಚು ಮಹಿಳೆಯರು ಸ್ವಸಹಾಯ ಗುಂಪುಗಳಿಗೆ ಸೇರಿದ್ದಾರೆ. ಈ ಸ್ವಸಹಾಯ ಗುಂಪುಗಳು 6.25 ಲಕ್ಷ ಕೋಟಿ ರೂ.ಮೌಲ್ಯದ ಸಾಲವನ್ನು ತೆಗೆದುಕೊಂಡಿರುವುದರಿಂದ ಅವರ ಮೌಲ್ಯ ಸೃಷ್ಟಿಯನ್ನು ಅವರ ಬಂಡವಾಳದ ಅವಶ್ಯಕತೆಯಿಂದ ಅರ್ಥಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.
ಈ ಮಹಿಳೆಯರು ಕೇವಲ ಸಣ್ಣ ಉದ್ಯಮಿಗಳಾಗಿ ಮಾತ್ರವಲ್ಲದೆ ಸಮರ್ಥ ಸಂಪನ್ಮೂಲ ವ್ಯಕ್ತಿಗಳಾಗಿಯೂ ಕೊಡುಗೆ ನೀಡುತ್ತಿದ್ದಾರೆ ಎಂದು ಪ್ರಧಾನಿ ತಿಳಿಸಿದರು. ಗ್ರಾಮಗಳಲ್ಲಿ ಅಭಿವೃದ್ಧಿಯ ಹೊಸ ಆಯಾಮಗಳನ್ನು ಹೆಚ್ಚಿಸುವ ಬ್ಯಾಂಕ್ ಸಖಿ, ಕೃಷಿ ಸಖಿ ಮತ್ತು ಪಶು ಸಖಿ ಕಾರ್ಯಕ್ರಮಗಳ ಬಗ್ಗೆ ಅವರು ಪ್ರಸ್ತಾಪಿಸಿದರು.
ಪ್ರಧಾನಮಂತ್ರಿಯವರು ಸಹಕಾರಿ ಕ್ಷೇತ್ರದಲ್ಲಿನ ಪರಿವರ್ತನೆ ಮತ್ತು ಈ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರವನ್ನು ಕುರಿತು ಮಾತನಾಡಿದರು. ಮುಂಬರುವ ವರ್ಷಗಳಲ್ಲಿ 2 ಲಕ್ಷಕ್ಕೂ ಹೆಚ್ಚು ವಿವಿಧೋದ್ದೇಶ ಸಹಕಾರ ಸಂಘಗಳು, ಡೈರಿ ಸಹಕಾರ ಸಂಘಗಳು ಮತ್ತು ಮೀನುಗಾರಿಕಾ ಸಹಕಾರ ಸಂಘಗಳು ರಚನೆಯಾಗಲಿವೆ. 1 ಕೋಟಿ ರೈತರಿಗೆ ಸಹಜ ಕೃಷಿಯೊಂದಿಗೆ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ. ಮಹಿಳಾ ರೈತರು ಮತ್ತು ಉತ್ಪಾದಕ ಗುಂಪುಗಳು ಇದರಲ್ಲಿ ದೊಡ್ಡ ಪಾತ್ರವನ್ನು ವಹಿಸಬಹುದು ಎಂದು ಪ್ರಧಾನಿ ಹೇಳಿದರು.
ಶ್ರೀ ಅನ್ನ ಉತ್ತೇಜನದಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಪಾತ್ರವನ್ನು ಶ್ರೀ ಮೋದಿ ಅವರು ವಿವರಿಸಿದರು. ಶ್ರೀ ಅನ್ನದಲ್ಲಿ ಸಾಂಪ್ರದಾಯಿಕ ಅನುಭವ ಹೊಂದಿರುವ 1 ಕೋಟಿಗೂ ಹೆಚ್ಚು ಬುಡಕಟ್ಟು ಮಹಿಳೆಯರು ಈ ಸ್ವಸಹಾಯ ಗುಂಪುಗಳ ಭಾಗವಾಗಿದ್ದಾರೆ ಎಂದು ಅವರು ಹೇಳಿದರು. ನಾವು ಶ್ರೀ ಅನ್ನದ ಮಾರುಕಟ್ಟೆಗೆ ಸಂಬಂಧಿಸಿದ ಅವಕಾಶಗಳನ್ನು ಅದರಿಂದ ತಯಾರಿಸಿದ ಸಂಸ್ಕರಿಸಿದ ಆಹಾರಗಳಿಗೆ ಬಳಸಿಕೊಳ್ಳಬೇಕು. ಹಲವೆಡೆ ಸರ್ಕಾರಿ ಸಂಸ್ಥೆಗಳು ಕಿರು ಅರಣ್ಯ ಉತ್ಪನ್ನಗಳನ್ನು ಸಂಸ್ಕರಿಸಿ ಮಾರುಕಟ್ಟೆಗೆ ತರಲು ಸಹಾಯ ಮಾಡುತ್ತಿವೆ. ಇಂದು, ದೂರದ ಪ್ರದೇಶಗಳಲ್ಲಿ ಅನೇಕ ಸ್ವ-ಸಹಾಯ ಗುಂಪುಗಳನ್ನು ರಚಿಸಲಾಗಿದೆ, ನಾವು ಅದನ್ನು ವಿಶಾಲ ಹಂತಕ್ಕೆ ಕೊಂಡೊಯ್ಯಬೇಕು ಎಂದು ಪ್ರಧಾನಿ ಹೇಳಿದರು.
ಕೌಶಲ್ಯ ಅಭಿವೃದ್ಧಿಯ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ಬಜೆಟ್‌ನಲ್ಲಿ ಪ್ರಕಟಿಸಿರುವ ವಿಶ್ವಕರ್ಮ ಯೋಜನೆಯು ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಮಹಿಳಾ ಸಬಲೀಕರಣಕ್ಕಾಗಿ ಇದರ ಅವಕಾಶಗಳನ್ನು ಬಳಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಅದೇ ರೀತಿ, ಜಿಇಎಂ ಮತ್ತು ಇ-ಕಾಮರ್ಸ್ ಮಹಿಳೆಯರ ವ್ಯಾಪಾರ ಅವಕಾಶಗಳನ್ನು ವಿಸ್ತರಿಸುವ ಮಾರ್ಗಗಳಾಗುತ್ತಿವೆ, ಸ್ವಸಹಾಯ ಗುಂಪುಗಳಿಗೆ ನೀಡುತ್ತಿರುವ ತರಬೇತಿಯಲ್ಲಿ ಹೊಸ ತಂತ್ರಜ್ಞಾನಗಳಿಗೆ ಆದ್ಯತೆ ನೀಡುವ ಅವಶ್ಯಕತೆಯಿದೆ ಎಂದು ಅವರು ತಿಳಿಸಿದರು.
ದೇಶವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್’ಎಂಬ ಮನೋಭಾವದಿಂದ ಸಾಗುತ್ತಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು. ದೇಶದ ಹೆಣ್ಣುಮಕ್ಕಳು ರಾಷ್ಟ್ರೀಯ ಭದ್ರತಾ ಪಡೆಗಳಲ್ಲಿ ಮತ್ತು ರಫೇಲ್ ವಿಮಾನಗಳನ್ನು ಹಾರಿಸುತ್ತಿರುವುದನ್ನು ಕಾಣಬಹುದು ಮತ್ತು ಅವರು ಉದ್ಯಮಿಗಳಾದಾಗ, ನಿರ್ಧಾರಗಳನ್ನು ಮತ್ತು ಸವಾಲುಗಳನ್ನು ತೆಗೆದುಕೊಂಡಾಗ ಅವರ ಬಗ್ಗೆ ಯೋಚನಾಕ್ರಮವೇ ಬದಲಾಗುತ್ತದೆ ಎಂದು ಅವರು ಹೇಳಿದರು. ನಾಗಾಲ್ಯಾಂಡ್‌ನಲ್ಲಿ ಇತ್ತೀಚೆಗೆ ಇಬ್ಬರು ಮಹಿಳಾ ಶಾಸಕರು ಮೊದಲ ಬಾರಿಗೆ ಆಯ್ಕೆಯಾಗಿರುವ, ಅವರಲ್ಲಿ ಒಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು, ಮಹಿಳೆಯರ ಗೌರವ ಮತ್ತು ಸಮಾನತೆಯ ಪ್ರಜ್ಞೆಯ ಮಟ್ಟವನ್ನು ಹೆಚ್ಚಿಸುವ ಮೂಲಕ ಮಾತ್ರ ಭಾರತವು ಪ್ರಗತಿ ಕಾಣಬಹುದು. ಎಲ್ಲ ಮಹಿಳೆಯರು-ಸಹೋದರಿಯರು-ಹೆಣ್ಣುಮಕ್ಕಳ ದಾರಿಯಲ್ಲಿ ಎದುರಾಗುವ ಪ್ರತಿಯೊಂದು ಅಡೆತಡೆಗಳನ್ನು ನಿವಾರಿಸುವ ಸಂಕಲ್ಪದೊಂದಿಗೆ ಮುನ್ನಡೆಯಲು ನಾನು ನಿಮ್ಮೆಲ್ಲರಿಗೂ ಕರೆ ನೀಡುತ್ತೇನೆ ಎಂದರು.
ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಬರೆದ ಲೇಖನವನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. “ಪ್ರಗತಿಯನ್ನು ತ್ವರಿತಗೊಳಿಸುವುದು ನಮಗೆ, ನಮ್ಮಲ್ಲಿ ಪ್ರತಿಯೊಬ್ಬರಿಗೂ ಸೇರಿದ್ದು, ಹೀಗಾಗಿ, ಇಂದು, ನಿಮ್ಮ ಕುಟುಂಬದಲ್ಲಿ, ನೆರೆಹೊರೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ - ಹೆಣ್ಣುಮಕ್ಕಳ ಮುಖದಲ್ಲಿ ನಗು ತರಿಸುವ ಯಾವುದೇ ಬದಲಾವಣೆಗೆ, ಜೀವನದಲ್ಲಿ ಮುಂದೆ ಸಾಗುವ ಸಾಧ್ಯತೆಗಳನ್ನು ಸುಧಾರಿಸುವ ಯಾವುದೇ ಬದಲಾವಣೆಗೆ ನೀವು ಬದ್ಧರಾಗುವಂತೆ ಒತ್ತಾಯಿಸುತ್ತೇನೆ. ನಾನು ಮೊದಲೇ ಹೇಳಿದಂತೆ, ಇದೊಂದು ನೇರವಾಗಿ ಹೃದಯದಿಂದ ಬಂದ ವಿನಂತಿ.” ಎಂಬ ರಾಷ್ಟ್ರಪತಿಯವರ ಮಾತುಗಳನ್ನು ಉಲ್ಲೇಖಿಸುವ ಮೂಲಕ ಪ್ರಧಾನಿಯವರು ತಮ್ಮ ಮಾತು ಮುಗಿಸಿದರು.
बीते 9 वर्षों में देश Women Led Development के विज़न को लेकर आगे बढ़ा है। pic.twitter.com/aOCAv0D6UT
— PMO India (@PMOIndia) March 10, 2023
जब हम Women Led Development कहते हैं तब उसका आधार यही शक्तियां हैं... pic.twitter.com/DK9xLGvdJv
— PMO India (@PMOIndia) March 10, 2023
आज भारत में ऐसे अनेक क्षेत्र हैं जिनमें महिलाशक्ति का सामर्थ्य नजर आता है। pic.twitter.com/qVR8DFtwwI
— PMO India (@PMOIndia) March 10, 2023
महिलाओं का सम्मान बढ़ाकर, समानता का भाव बढ़ाकर ही भारत तेजी से आगे बढ़ सकता है। pic.twitter.com/Mze817qMOO
— PMO India (@PMOIndia) March 10, 2023
8 मार्च को, महिला दिवस, राष्ट्रपति द्रोपदी मुर्मू जी ने महिला सशक्तिकरण एक बहुत ही भावुक आर्टिकल लिखा है।
— PMO India (@PMOIndia) March 10, 2023
इस लेख का अंत राष्ट्रपति मुर्मू जी ने जिस भावना से किया है वो सभी को समझनी चाहिए। https://t.co/BJDbnzcJak pic.twitter.com/BlsEoRwxzI