“ ಈ ಬಾರಿಯ ಬಜೆಟ್‌ ಶಿಕ್ಷಣ ವ್ಯವಸ್ಥೆಯನ್ನು ಹೆಚ್ಚು ಪ್ರಾಯೋಗಿಕ ಮತ್ತು ಕೈಗಾರಿಕೆ ಆಧಾರಿತವನ್ನಾಗಿ ಮಾಡುವ ಮೂಲಕ ಬುನಾದಿಯನ್ನು ಮತ್ತಷ್ಟು ಬಲವರ್ಧನೆಗೊಳಿಸಿದೆ’’
“ನೂತನ ಶಿಕ್ಷಣ ನೀತಿಯ ಭಾಗವಾಗಿ ಶಿಕ್ಷಣ ಮತ್ತು ಕೌಶಲ್ಯ ಎರಡಕ್ಕೂ ಸಮಾನ ಒತ್ತು ನೀಡಲಾಗಿದೆ’’
“ವರ್ಚುವಲ್ ಲ್ಯಾಬ್ಸ್ ಮತ್ತು ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯದಂತಹ ಭವಿಷ್ಯದ ಹಂತಗಳು ನಮ್ಮ ಶಿಕ್ಷಣ, ಕೌಶಲ್ಯ ಮತ್ತು ಜ್ಞಾನಾಧಾರಿತ ವಿಜ್ಞಾನದ ಸಮಗ್ರ ವಲಯವನ್ನು ಬದಲಾಯಿಸಲಿದೆ’’
“ಕೇಂದ್ರ ಸರ್ಕಾರವು ತನ್ನ ಯುವಕರಿಗೆ ತರಗತಿಯ ಹೊರಗೆ ಪ್ರಾಯೋಗಿಕ ಅನುಭವ ನೀಡಲು ಇಂಟರ್ನ್ ಶಿಪ್ ಮತ್ತು ಅಪ್ರೆಂಟಿಷಿಪ್ ಒದಗಿಸುವತ್ತ ಗಮನಹರಿಸುತ್ತಿದೆ’’
“ರಾಷ್ಟ್ರೀಯ ಅಪ್ರೆಂಟೆಷಿಪ್ ಉತ್ತೇಜನ ಯೋಜನೆಯಡಿ ಸುಮಾರು 50 ಲಕ್ಷ ಯುವಕರಿಗೆ ಸ್ಟೈಫಂಡ್ ಒದಗಿಸಲಾಗಿದೆ’’
“ಕೃತಕ ಬುದ್ದಿಮತ್ತೆ, ರೋಬೋಟಿಕ್ಸ್, ಐಒಟಿ ಮತ್ತು ದ್ರೋಣ್ ಗಳಂತಹ ಉದ್ಯಮ 4.0 ಅಡಿ ಕೌಶಲ್ಯ ಹೊಂದಿದ ಉದ್ಯೋಗಿಗಳನ್ನು ನೀಡಲು ಒತ್ತು ನೀಡಿದೆ’’

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ಯುವಶಕ್ತಿಯ ಸಬ್ಧಳಕೆ- ಕೌಶಲ್ಯ ಮತ್ತು ಶಿಕ್ಷಣ’ ಕುರಿತ ಬಜೆಟ್‌ ನಂತರದ ವೆಬಿನಾರ್ ಉದ್ದೇಶಿಸಿ ಇಂದು ಭಾಷಣ ಮಾಡಿದರು. ಕೇಂದ್ರ ಬಜೆಟ್ 2023ರಲ್ಲಿ ಘೋಷಿಸಲಾಗಿರುವ ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆಲೋಚನೆಗಳು ಮತ್ತು ಸಲಹೆಗಳನ್ನು ಪಡೆಯಲು ಸರ್ಕಾರ ಆಯೋಜಿಸಿರುವ ಬಜೆಟ್ ನಂತರದ 12 ವೆಬಿನಾರ್ ಸರಣಿಯಲ್ಲಿ ಇದು ಮೂರನೆಯದ್ದಾಗಿದೆ. 

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಭಾರತದ ಅಮೃತ ಕಾಲದಲ್ಲಿ ಕೌಶಲ್ಯ ಮತ್ತು ಶಿಕ್ಷಣ ಎರಡೂ ಪ್ರಮುಖ ಸಾಧನಗಳಾಗಿವೆ ಎಂದು ಬಲವಾಗಿ ಪ್ರತಿಪಾದಿಸಿದರು ಹಾಗೂ ಇಂದಿನ ಯುವಕರು ದೇಶದ ಅಮೃತಯಾತ್ರೆಯನ್ನು ಅಭಿವೃದ್ಧಿ ಹೊಂದಿದ ಭಾರತದ ದೂರದೃಷ್ಟಿಯ ಸಾಕಾರಕ್ಕೆ ಮುನ್ನಡೆಸುತ್ತಿದ್ದಾರೆ ಎಂದರು.

ಯುವಕರು ಮತ್ತು ಅವರ ಭವಿಷ್ಯಕ್ಕಾಗಿ ಅಮೃತಕಾಲದ ಮೊದಲ ಬಜೆಟ್ ನಲ್ಲಿ ವಿಶೇಷ ಒತ್ತು ನೀಡಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಈ ವರ್ಷದ ಬಜೆಟ್, ಶಿಕ್ಷಣವನ್ನು ಹೆಚ್ಚು ಪ್ರಾಯೋಗಿಕ ಮತ್ತು ಕೈಗಾರಿಕಾ ಆಧಾರಿತವನ್ನಾಗಿ ಮಾಡುವ ಮೂಲಕ ಬುನಾದಿಯನ್ನು ಮತ್ತಷ್ಟು ಬಲವರ್ಧನೆಗೊಳಿಸಿದೆ ಎಂದರು. ಹಲವು ವರ್ಷಗಳ ಕಾಲ ಶಿಕ್ಷಣ ವ್ಯವಸ್ಥೆಯಲ್ಲಿ ಸರಳೀಕರಣ ಇಲ್ಲದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಪ್ರಧಾನಮಂತ್ರಿ, ಬದಲಾವಣೆಯನ್ನು ತರಲು ತಮ್ಮ ಸರ್ಕಾರ ಪ್ರಯತ್ನಗಳನ್ನು ಕೈಗೊಂಡಿದೆ ಎಂದು ಉಲ್ಲೇಖಿಸಿದರು. ‘ಯುವಕರ ಮನೋಭಾಗ ಮತ್ತು ಭವಿಷ್ಯದ ಬೇಡಿಕೆಗಳಿಗೆ ಅನುಗುಣವಾಗಿ ಶಿಕ್ಷಣ ಮತ್ತು ಕೌಶಲ್ಯವನ್ನು ಪುನರ್ ಮನನ ಮಾಡಬೇಕಿದೆ” ಎಂದು ಪ್ರಧಾನಮಂತ್ರಿ ಹೇಳಿದರು. ನೂತನ ಶಿಕ್ಷಣ ನೀತಿಯ ಭಾಗವಾಗಿ ಶಿಕ್ಷಣ ಮತ್ತು ಕೌಶಲ್ಯ ಎರಡಕ್ಕೂ ಸಮಾನ ಆದ್ಯತೆಯನ್ನು ನೀಡಲಾಗಿದೆ ಎಂದ ಅವರು, ಈ ಕ್ರಮಕ್ಕೆ ಶಿಕ್ಷಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದರು. ಈ ಕ್ರಮದಿಂದಾಗಿ ಶಿಕ್ಷಣ ಮತ್ತು ಕೌಶಲ್ಯ ವಲಯದಲ್ಲಿ ಮತ್ತಷ್ಟು ಸುಧಾರಣೆಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಉತ್ತೇಜನ ದೊರೆತಿದೆ ಎಂದ ಪ್ರಧಾನಮಂತ್ರಿ, ಹಿಂದಿನ ಕಟ್ಟಳೆಗಳಿಂದ ನಮ್ಮ ವಿದ್ಯಾರ್ಥಿಗಳ ಹೊರೆಯನ್ನು ತಗ್ಗಿಸಲಾಗುತ್ತಿದೆ ಎಂದರು. 

ಕೋವಿಡ್ ಸಾಂಕ್ರಾಮಿಕದ ಅನುಭವಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಹೊಸ ತಂತ್ರಜ್ಞಾನ, ಹೊಸ ಬಗೆಯ ತರಗತಿಗಳನ್ನು ಸೃಷ್ಟಿಸಲು ಸಹಾಯಕವಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದರು. “ಸರ್ಕಾರ ಎಲ್ಲಿದ್ದರೂ ಜ್ಞಾನ ಲಭ್ಯತೆ”ಯನ್ನು ಖಾತ್ರಿಪಡಿಸುವ ಸಾಧನಗಳಿಗೆ ಒತ್ತು ನೀಡುತ್ತಿದೆ ಎಂದು ಉಲ್ಲೇಖಿಸಿದ ಅವರು, ಸ್ವಯಂ ಇ-ಕಲಿಕೆ ವೇದಿಕೆಯಿಂದ 3 ಕೋಟಿ ಸದಸ್ಯರು ಕಲಿಯುತ್ತಿರುವುದನ್ನು ಉದಾಹರಣೆಯಾಗಿ ನೀಡಿದರು. ವರ್ಚುವಲ್ ಪ್ರಯೋಗಾಲಯಗಳು ಮತ್ತು ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯಗಳ ಲಭ್ಯತೆ, ಜ್ಞಾನಕ್ಕೆ ಬಹುದೊಡ್ಡ ಮಾಧ್ಯಮವಾಗಿದೆ ಎಂದು ಅವರು ಉಲ್ಲೇಖಿಸಿದರು. ಡಿಟಿಎಚ್ ಚಾನಲ್ ಗಳ ಮೂಲಕ ಸ್ಥಳೀಯ ಭಾಷೆಗಳನ್ನು ಕಲಿಯುವ ಅವಕಾಶಗಳನ್ನು ಉಲ್ಲೇಖಿಸಿದ ಅವರು, ದೇಶದಲ್ಲಿ ಇಂತಹ ಹಲವು ಡಿಜಿಟಲ್ ಮತ್ತು ತಂತ್ರಜ್ಞಾನ ಆಧಾರಿತ ಉಪಕ್ರಮಗಳು ರಾಷ್ಟ್ರೀಯ ಡಿಜಿಟಲ್ ವಿಶ್ವವಿದ್ಯಾಲಯದಿಂದ ಮತ್ತಷ್ಟು ಬಲವರ್ಧನೆಗೊಳ್ಳಲಿವೆ ಎಂದರು. “ಇಂತಹ ಭವಿಷ್ಯದ ದೂರದೃಷ್ಟಿಯ ಕ್ರಮಗಳು ನಮ್ಮ ಶಿಕ್ಷಣ, ಕೌಶಲ್ಯ, ಜ್ಞಾನಾಧಾರಿತ ವಿಜ್ಞಾನ ಸೇರಿದಂತೆ ಸಮಗ್ರ ವಲಯದಲ್ಲಿ ಬದಲಾವಣೆಗಳನ್ನು ತರಲಿವೆ ಎಂದು ಪ್ರಧಾನಮಂತ್ರಿ ಹೇಳಿದರು. “ಇದೀಗ ನಮ್ಮ ಶಿಕ್ಷಕರ ಪಾತ್ರ ಕೇವಲ ತರಗತಿಗಳ ಕೋಣೆಗೆ ಸೀಮಿತವಾಗಿಲ್ಲ” ಎಂದು ಪ್ರಧಾನಮಂತ್ರಿ ಹೇಳಿದರು. ದೇಶಾದ್ಯಂತ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ವೈವಿಧ್ಯಮಯ ಬೋಧನಾ ಸಾಮಗ್ರಿ ಲಭ್ಯವಿದೆ. ಇವು ಶಿಕ್ಷಕರಿಗೆ ಹೊಸ ಬಗೆಯ ಅವಕಾಶಗಳ ಬಾಗಿಲನ್ನು ತೆರೆಯುತ್ತದೆ ಹಾಗೂ ನಗರ ಮತ್ತು ಗ್ರಾಮೀಣ ಶಾಲೆಗಳ ನಡುವಿನ ಅಂತರವನ್ನು ನಿವಾರಿಸುತ್ತದೆ ಎಂದು ಹೇಳಿದರು. 

‘ಉದ್ಯೋಗದ ವೇಳೆ ಕಲಿಕೆ’ ಕುರಿತು ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಅವರು, ಹಲವು ರಾಷ್ಟ್ರಗಳಲ್ಲಿ ವಿಶೇಷ ಒತ್ತು ನೀಡಿರುವುದನ್ನು ಉಲ್ಲೇಖಿಸಿ, ಕೇಂದ್ರ ಸರ್ಕಾರ ತನ್ನ ಯುವಕರಿಗೆ ‘ತರಗತಿಯ ಹೊರಗೆ’ ಕೌಶಲ್ಯ ಪ್ರದರ್ಶನಕ್ಕೆ ಒತ್ತು ನೀಡಿ, ಇಂಟರ್ನ್ ಶಿಪ್ ಹಾಗೂ ಅಪ್ರೆಂಟಿಶಿಪ್ ಗಳಿಗೆ ಆದ್ಯತೆ ನೀಡಿದೆ ಎಂದು ಹೇಳಿದರು. “ರಾಷ್ಟ್ರೀಯ ಇಂಟರ್ನ್ ಶಿಪ್ ಪೋರ್ಟಲ್ ನಲ್ಲಿ ಇಂದು 75 ಸಾವಿರ ಉದ್ಯೋಗದಾತರು ನೋಂದಾಯಿಸಿಕೊಂಡಿದ್ದಾರೆ ಅಲ್ಲಿ ಈವರೆಗೆ 25 ಲಕ್ಷ ಇಂಟರ್ನ್ ಶಿಪ್ ಅಗತ್ಯತೆಗಳ ಬೇಡಿಕೆ ಸಲ್ಲಿಸಲಾಗಿದೆ” ಎಂದು ಪ್ರಧಾನಮಂತ್ರಿ ಹೇಳಿದರು. ಈ ಪೋರ್ಟಲ್ ಅನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುವಂತೆ ಉದ್ಯಮ ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ಕರೆ ನೀಡಿದ ಅವರು, ಇದರಿಂದ ದೇಶದಲ್ಲಿ ಇಂಟರ್ನ್ ಶಿಪ್ ಸಂಸ್ಕೃತಿ ಮತ್ತಷ್ಟು ವಿಸ್ತರಣೆಯಾಗಲಿದೆ ಎಂದರು. 

ಅಪ್ರೆಂಟಿಶಿಪ್ ಗಳು ನಮ್ಮ ಯುವಕರಿಗೆ ಭವಿಷ್ಯಕ್ಕೆ ಸಿದ್ಧವಾಗಲು ಸಹಕರಿಸುತ್ತವೆ ಎಂದು ಬಲವಾದ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಅವರು, ಭಾರತದಲ್ಲಿ ಅಪ್ರೆಂಟಿಶಿಪ್ ಉತ್ತೇಜಿಸಲು ಸರ್ಕಾರ ಕೈಗೊಂಡಿರುವ ಪ್ರಯತ್ನಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಇದು ಸೂಕ್ತ ಕೌಶಲ್ಯ ಹೊಂದಿರುವ ದುಡಿಯುವ ಪಡೆಯನ್ನು ಗುರುತಿಸಲು ಕೈಗಾರಿಕೆಗಳಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು. ಈ ವರ್ಷದ ಬಜೆಟ್ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಅವರು, ರಾಷ್ಟ್ರೀಯ ಅಪ್ರೆಂಟಿಶಿಪ್ ಉತ್ತೇಜನ ಯೋಜನೆಯಡಿ ಸುಮಾರು 50 ಲಕ್ಷ ಯುವಕರಿಗೆ ಸ್ಟೈಫಂಡ್ ಲಭ್ಯವಾಗುವಂತೆ ಅವಕಾಶ ಕಲ್ಪಿಸಲಾಗಿದೆ ಎಂದರು. ಇದರಿಂದ ಅಪ್ರೆಂಟಿಶಿಪ್ ಗೆ ಪೂರಕ ವಾತಾವರಣ ಸೃಷ್ಟಿಯಾಗುವುದಲ್ಲದೆ, ಪಾವತಿಗೆ ಉದ್ಯಮಗಳಿಗೆ ಸಹಕಾರಿಯಾಗಲಿದೆ ಎಂದರು. 

ಕೌಶಲ್ಯ ಹೊಂದಿದ ದುಡಿಯುವ ಪಡೆಯ ಅಗತ್ಯತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ವಿಶ್ವ, ಭಾರತವನ್ನು ಉತ್ಪಾದನಾ ತಾಣವಾಗಿ ಎದುರು ನೋಡುತ್ತಿದೆ ಮತ್ತು ದೇಶದಲ್ಲಿ ಹೂಡಿಕೆ ಮಾಡಲು ಇಡೀ ಜಗತ್ತು ಅತ್ಯಂತ ಉತ್ಸುಕತೆ ತೋರುತ್ತಿದೆ ಎಂದು ಹೇಳಿದರು. ಈ ವರ್ಷದ ಬಜೆಟ್ ನಲ್ಲಿ ಕೌಶಲ್ಯಕ್ಕೆ ಒತ್ತು ನೀಡಿರುವುದನ್ನು ಒತ್ತಿ ಹೇಳಿದ ಅವರು, ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ 4.0 ಮೂಲಕ ಮುಂದಿನ ವರ್ಷಗಳಲ್ಲಿ ಲಕ್ಷಾಂತರ ಯುವಕರಿಗೆ ಕೌಶಲ್ಯ, ಮರುಕೌಶಲ್ಯ ಮತ್ತು ಕೌಶಲ್ಯವರ್ಧನೆ ಮಾಡಲಾಗುವುದು ಎಂದರು. ಆದಿವಾಸಿಗಳು, ವಿಶೇಷಚೇತನರು ಮತ್ತು ಮಹಿಳೆಯರಿಗೆ ಈ ಯೋಜನೆಯ ಮೂಲಕ ಅವರ ಅಗತ್ಯತೆಗಳಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್, ಐಒಟಿ ಮತ್ತು ದ್ರೋಣ್ ನಂತಹ ಕೈಗಾರಿಕೆ 4.0 ವಲಯಕ್ಕೆ ಅಗತ್ಯ ಕೌಶಲ್ಯ ಹೊಂದಿದ ದುಡಿಯುವ ಪಡೆಯನ್ನು ಸೃಷ್ಟಿಸಲು ಒತ್ತು ನೀಡಲಾಗಿದೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಆ ಮೂಲಕ ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ಮರುಕೌಶಲ್ಯಕ್ಕೆ ಹೆಚ್ಚಿನ ಶಕ್ತಿ ಮತ್ತು ಸಂಪನ್ಮೂಲವನ್ನು ವ್ಯಯಿಸದೆ, ಪ್ರತಿಭೆಗಳನ್ನು ಪಡೆಯಬಹುದಾಗಿದೆ ಎಂದರು. ಅಲ್ಲದೆ ಪ್ರಧಾನಮಂತ್ರಿ ಅವರು ಪಿಎಂ-ವಿಶ್ವಕರ್ಮ ಕೌಶಲ ಸಮ್ಮಾನ್ ಯೋಜನೆಯ ಉದಾಹರಣೆಯನ್ನು ನೀಡಿದರು ಹಾಗೂ ಅದರಡಿ ಕರಕುಶಲಕರ್ಮಿಗಳು, ಕಲಾವಿದರು ಸೇರಿದಂತೆ ಸಾಂಪ್ರದಾಯಿಕ ಕರಕುಶಲಕರ್ಮಿಗಳ ಕೌಶಲ್ಯವೃದ್ಧಿಗೆ ಒತ್ತು ನೀಡಲಾಗಿದೆ. ಅವರನ್ನು ಹೊಸ ಮಾರುಕಟ್ಟೆಗೆ ಸಜ್ಜುಗೊಳಿಸಲಾಗುತ್ತಿದೆ ಮತ್ತು ಅವರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕುವಂತೆ ಸಹಾಯ ಮಾಡಲಾಗುತ್ತಿದೆ ಎಂದರು. 

ಭಾರತದ ಶೈಕ್ಷಣಿಕ ವಲಯದಲ್ಲಿ ಕ್ಷಿಪ್ರ ಬದಲಾವಣೆಗಳನ್ನು ತರುವಲ್ಲಿ ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮದ ಪಾತ್ರ ಮತ್ತು ಪಾಲುದಾರಿಕೆ ಕುರಿತು ಪ್ರಧಾನಮಂತ್ರಿ ಪ್ರಮುಖವಾಗಿ ಪ್ರಸ್ತಾಪಿಸಿದರು. ಮಾರುಕಟ್ಟೆಯ ಅಗತ್ಯತೆಗಳಿಗೆ ತಕ್ಕಂತೆ ಸಂಶೋಧನೆಗಳನ್ನು ಕೈಗೊಳ್ಳಬೇಕು ಎಂದು ಬಲವಾಗಿ ಪ್ರತಿಪಾದಿಸಿದ ಅವರು, ಸಂಶೋಧನಾ ಉದ್ಯಮಕ್ಕೆ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದರು. ಈ ವರ್ಷದ ಬಜೆಟ್ ಅನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದಂತೆ ಮೂರು ಉತ್ಕೃಷ್ಟತಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಉಲ್ಲೇಖಿಸಿದರು ಹಾಗೂ ಇದರಿಂದ ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ಪಾಲುದಾರಿಕೆ ಬಲವರ್ಧನೆಗೊಳ್ಳಲಿದೆ ಎಂದರು. ಇದೀಗ ಐಸಿಎಂಆರ್ ಪ್ರಯೋಗಾಲಯಗಳು ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ವಲಯದ ಸಂಶೋಧನಾ ಮತ್ತು ಅಭಿವೃದ್ಧಿ ತಂಡಗಳಿಗೂ ಲಭ್ಯವಿದೆ ಎಂದು ಅವರು ಹೇಳಿದರು. ದೇಶದಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿಗೆ ಪೂರಕ ವ್ಯವಸ್ಥೆಯನ್ನು ಬಲಗೊಳಿಸಲು ಖಾಸಗಿ ವಲಯ ಪ್ರತಿಯೊಂದು ಹಂತದಲ್ಲೂ ಗರಿಷ್ಠ ಅನುಕೂಲಗಳನ್ನು ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು. 

ಸರ್ಕಾರದ ‘ಇಡೀ ಸರ್ಕಾರ’ ವಿಧಾನಕ್ಕೆ ಒತ್ತು ನೀಡಿದ ಪ್ರಧಾನಮಂತ್ರಿ ಅವರು, ಕೌಶಲ್ಯ ಮತ್ತು ಶಿಕ್ಷಣ ಸಂಬಂಧಿಸಿದ ಸಚಿವಾಲಯ ಮತ್ತು ಇಲಾಖೆಗೆ ಮಾತ್ರ ಸೀಮಿತವಾಗಿಲ್ಲ, ಅದರ ಸಾಧ್ಯತೆಗಳು ಪ್ರತಿಯೊಂದು ವಲಯದಲ್ಲೂ ಸಂಬಂಧಿಸಿದ್ದಾಗಿವೆ ಎಂದರು. ಶಿಕ್ಷಣ ಮತ್ತು ಕೌಶಲ್ಯ ವಲಯಕ್ಕೆ ಸಂಬಂಧಿಸಿದ ಪಾಲುದಾರರು ನಾನಾ ವಲಯಗಳಲ್ಲಿನ ಅವಕಾಶಗಳ ಕುರಿತು ಅಧ್ಯಯನ ಮಾಡಬೇಕು ಮತ್ತು ಅಗತ್ಯ ದುಡಿಯುವ ಪಡೆಯನ್ನು ಸೃಜಿಸಲು ನೆರವು ನೀಡಬೇಕು ಎಂದು ಕರೆ ನೀಡಿದರು. ಭಾರತದ ಅತ್ಯಂತ ವೇಗವಾಗಿ ವಿಸ್ತರಣೆಗೊಳ್ಳುತ್ತಿರುವ ನಾಗರಿಕ ವೈಮಾನಿಕ ವಲಯದ ಉದಾಹರಣೆಯನ್ನು ನೀಡಿದ ಅವರು, ಇದು ಪ್ರಯಾಣ ಮತ್ತು ಭಾರತದ ಪ್ರವಾಸೋದ್ಯಮದ ಅಭಿವೃದ್ಧಿಯನ್ನು ಬಿಂಬಿಸುತ್ತದೆ ಹಾಗೂ ಉದ್ಯೋಗ ಸೃಷ್ಟಿಯ ಬಹುದೊಡ್ಡ ಅವಕಾಶಗಳ ಬಾಗಿಲುಗಳನ್ನು ತೆರೆದಿದೆ ಎಂದರು. ‘ಸ್ಕಿಲ್ ಇಂಡಿಯಾ ಮಿಷನ್’ ಅಡಿಯಲ್ಲಿ ತರಬೇತಿ ಪಡೆದ ಯುವ ಜನತೆಯ ದತ್ತಾಂಶವನ್ನು ಸಿದ್ಧಪಡಿಸುವ ಆಶಯವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಮುಂಚೂಣಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಭಾರತದ ತರಬೇತಿ ಹೊಂದಿದ ದುಡಿಯುವ ಪಡೆ ಹಿಂದೆ ಉಳಿಯಬಾರದು ಎಂದ ಅವರು, ಆ ನಿಟ್ಟಿನಲ್ಲಿ ಉದ್ಯಮದ ತಜ್ಞರು ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು.  

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 22 ಡಿಸೆಂಬರ್ 2024
December 22, 2024

PM Modi in Kuwait: First Indian PM to Visit in Decades

Citizens Appreciation for PM Modi’s Holistic Transformation of India