"ಬಜೆಟ್ ನಂತರದ ವೆಬಿನಾರ್‌ಗಳ ಮೂಲಕ ಬಜೆಟ್ ಅನುಷ್ಠಾನದಲ್ಲಿ ಸಾಮೂಹಿಕ ಮಾಲೀಕತ್ವ ಮತ್ತು ಸಮಾನ ಪಾಲುದಾರಿಕೆಗೆ ಸರಕಾರ ದಾರಿ ಮಾಡಿಕೊಡುತ್ತಿದೆ"
"ಭಾರತೀಯ ಆರ್ಥಿಕತೆಯ ಪ್ರತಿಯೊಂದು ಚರ್ಚೆಯಲ್ಲಿ ನಂಬಿಕೆ ಮತ್ತು ನಿರೀಕ್ಷೆಗಳು ಪ್ರಶ್ನಾರ್ಥಕ ಚಿಹ್ನೆಗಳನ್ನು ಬದಲಿಸಿವೆ"
ಭಾರತವನ್ನು ಜಾಗತಿಕ ಆರ್ಥಿಕತೆಯ ಉಜ್ವಲ ತಾಣ ಎಂದು ಕರೆಯಲಾಗುತ್ತಿದೆ.
"ಇಂದು ನೀವು ಧೈರ್ಯ, ಸ್ಪಷ್ಟತೆ ಮತ್ತು ವಿಶ್ವಾಸದಿಂದ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸರಕಾರವನ್ನು ಹೊಂದಿದ್ದೀರಿ, ನೀವೂ ಸಹ ಸರಕಾರದೊಂದಿಗೆ ಹೆಜ್ಜೆ ಹಾಕಬೇಕಾಗುತ್ತದೆ"
"ಭಾರತದ ಬ್ಯಾಂಕಿಂಗ್ ವ್ಯವಸ್ಥೆಯ ಸಾಮರ್ಥ್ಯದ ಪ್ರಯೋಜನಗಳು ಗರಿಷ್ಠ ಜನರನ್ನು ತಲುಪುವಂತಾಗುವುದು ಸದ್ಯದ ಅಗತ್ಯವಾಗಿದೆ "
"ಹಣಕಾಸು ಸೇರ್ಪಡೆಗೆ ಸಂಬಂಧಿಸಿದ ಸರಕಾರದ ನೀತಿಗಳು ಕೋಟ್ಯಂತರ ಜನರನ್ನು ಔಪಚಾರಿಕ ಹಣಕಾಸು ವ್ಯವಸ್ಥೆಯ ಭಾಗವನ್ನಾಗಿ ಮಾಡಿವೆ"
ʻವೋಕಲ್‌ ಫಾರ್‌ ಲೋಕಲ್‌ʼ ಮತ್ತು ʻಆತ್ಮನಿರ್ಭರʼ ಧ್ವನಿಯ ಆಶಯವು ಒಂದು ರಾಷ್ಟ್ರೀಯ ಜವಾಬ್ದಾರಿಯಾಗಿದೆ
“ವೋಕಲ್ ಫಾರ್ ಲೋಕಲ್ (ಸ್ಥಳೀಯತೆಗೆ ಒತ್ತು) ಎಂಬುದು ಭಾರತೀಯ ಗುಡಿ ಕೈಗಾರಿಕೆಯ ಉತ್ಪನ್ನಗಳನ್ನು ಖರೀದಿಸುವುದಕ್ಕಿಂತಲೂ ಮಿಗಿಲಾದದ್ದು. ಭಾರತದಲ್ಲಿಯೇ ಸಾಮರ್ಥ್ಯವನ್ನು ನಿರ್ಮಿಸುವ ಮೂಲಕ ನಾವು ದೇಶದ ಹಣವನ್ನು ಉಳಿಸಬಹುದಾದ ಕ್ಷೇತ್ರಗಳು ಯಾವುವು ಎಂಬುದನ್ನು ನಾವು ಗುರುತಿಸಬೇಕಾಗಿದೆ"
"ದೇಶದ ಖಾಸಗಿ ವಲಯವೂ ಸರಕಾರದಂತೆಯೇ ತಮ್ಮ ಹೂಡಿಕೆಯನ್ನು ಹೆಚ್ಚಿಸಬೇಕು, ಇದರಿಂದ ದೇಶವು ಗರಿಷ್ಠ ಲಾಭವನ್ನು ಪಡೆಯುತ್ತದೆ"
"ತೆರಿಗೆ ವ್ಯಾಪ್ತಿಯ ಹೆಚ್ಚಳವು ಜನರಿಗೆ ಸರಕಾರದ ಮೇಲೆ ನಂಬಿಕೆ ಇದೆ ಎಂಬುದಕ್ಕೆ ಪುರಾವೆಯಾಗಿದೆ, ಮತ್ತು ಅವರು ಪಾವತಿಸುತ್ತಿರುವ ತೆರಿಗೆಯನ್ನು ಸಾರ್ವಜನಿಕ ಒಳಿತಿಗಾಗಿ ಖರ್ಚು ಮಾಡಲಾಗುತ್ತಿದೆ ಎಂದು ಅವರು ನಂಬಿದ್ದಾರೆ"
"ಭಾರತ ಅಭಿವೃದ್ಧಿಪಡಿಸಿದ 'ಇಂಡಸ್ಟ್ರಿ 4.0' ವೇದಿಕೆಗಳು ಜಗತ್ತಿಗೆ ಮಾದರಿಯಾಗುತ್ತಿವೆ"
ʻರುಪೇʼ ಮತ್ತು ʻಯುಪಿಐʼ ಕೇವಲ ಕಡಿಮೆ ವೆಚ್ಚದ ಮತ್ತು ಹೆಚ್ಚು ಸುರಕ್ಷಿತ ತಂತ್ರಜ್ಞಾನಗಳಷ್ಟೇ ಅಲ್ಲ, ಅವು ಜಗತ್ತಿನಲ್ಲಿ ನಮ್ಮ ಹೆಗ್ಗುರುತಾಗಿವೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ 'ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸಲು ಹಣಕಾಸು ಸೇವೆಗಳ ದಕ್ಷತೆಯನ್ನು ಹೆಚ್ಚಿಸುವುದು' ಎಂಬ ವಿಷಯದ ಬಗ್ಗೆ ಮಾತನಾಡಿದರು. ʻಕೇಂದ್ರ ಬಜೆಟ್-2023ʼರಲ್ಲಿ ಘೋಷಿಸಲಾದ ಉಪಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಆಲೋಚನೆಗಳು ಮತ್ತು ಸಲಹೆಗಳನ್ನು ಪಡೆಯುವ ನಿಟ್ಟಿನಲ್ಲಿ ಸರಕಾರ ಆಯೋಜಿಸಿದ 12 ಬಜೆಟ್ ನಂತರದ ವೆಬಿನಾರ್‌ ಸರಣಿಯಲ್ಲಿ ಇದು ಹತ್ತನೆಯದು.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, “ಮಧ್ಯಸ್ಥಗಾರರ ಅಭಿಪ್ರಾಯಗಳು ಮತ್ತು ಸಲಹೆಗಳು ಅತ್ಯಂತ ನಿರ್ಣಾಯಕವಾಗಿರುವ ಈ ಬಜೆಟ್ ನಂತರದ ವೆಬಿನಾರ್‌ಗಳ ಮೂಲಕ ಬಜೆಟ್ ಅನುಷ್ಠಾನದಲ್ಲಿ ಸಾಮೂಹಿಕ ಮಾಲೀಕತ್ವ ಮತ್ತು ಸಮಾನ ಪಾಲುದಾರಿಕೆಗೆ ಸರಕಾರವು ದಾರಿ ಮಾಡಿಕೊಡುತ್ತಿದೆ,” ಎಂದರು.

ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಭಾರತದ ಹಣಕಾಸು ಮತ್ತು ವಿತ್ತೀಯ ನೀತಿಯ ಪರಿಣಾಮಗಳಿಗೆ ಇಡೀ ಜಗತ್ತು ಸಾಕ್ಷಿಯಾಗಿದೆ ಎಂದ ಪ್ರಧಾನಿಯವರು, ಕಳೆದ 9 ವರ್ಷಗಳಲ್ಲಿ ಭಾರತದ ಆರ್ಥಿಕತೆಯ ಮೂಲಾಂಶಗಳನ್ನು ಬಲಪಡಿಸುವಲ್ಲಿ ಸರಕಾರದ ಪ್ರಯತ್ನಗಳನ್ನು ಶ್ಲಾಘಿಸಿದರು. ಜಗತ್ತು ಭಾರತವನ್ನು ಅನುಮಾನದಿಂದ ನೋಡುತ್ತಿದ್ದ ಸಮಯವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, “ಭಾರತದ ಆರ್ಥಿಕತೆ, ಬಜೆಟ್ ಮತ್ತು ಗುರಿಗಳ ಕುರಿತ ಚರ್ಚೆಗಳು ಆಗಾಗ್ಗೆ ಪ್ರಶ್ನೆಯೊಂದಿಗೆ ಪ್ರಾರಂಭವಾಗುತ್ತವೆ ಮತ್ತು ಪ್ರಶ್ನೆಯಲ್ಲೇ ಕೊನೆಗೊಳ್ಳುತ್ತಿದ್ದವು,ʼʼ ಎಂದರು. ಹಣಕಾಸು ಶಿಸ್ತು, ಪಾರದರ್ಶಕತೆ ಮತ್ತು ಎಲ್ಲರನ್ನೂ ಒಳಗೊಂಡ ವಿಧಾನದಲ್ಲಿನ ಆಗಿರುವ ಬದಲಾವಣೆಗಳ ಕುರಿತು ಗಮನಸೆಳೆದ ಅವರು, ಇದರ ಪರಿಣಾಮವಾಗಿ ಚರ್ಚೆಯ ಪ್ರಾರಂಭ ಮತ್ತು ಕೊನೆಯಲ್ಲಿ ಇದ್ದ ಪ್ರಶ್ನಾರ್ಥಕ ಚಿಹ್ನೆಗಳ ಜಾಗವನ್ನು ಈಗ ನಂಬಿಕೆ ಮತ್ತು ನಿರೀಕ್ಷೆಗಳು ಅಲಂಕರಿಸಿವೆ ಎಂದರು. ಇತ್ತೀಚಿನ ಸಾಧನೆಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, "ಇಂದು ಭಾರತವನ್ನು ಜಾಗತಿಕ ಆರ್ಥಿಕತೆಯ ಉಜ್ವಲ ತಾಣ ಎಂದು ಕರೆಯಲಾಗುತ್ತಿದೆ," ಎಂದರು. ಭಾರತವು ʻಜಿ -20ʼ ಒಕ್ಕೂಟದ ಅಧ್ಯಕ್ಷತೆ ವಹಿಸಿದ್ದು, 2021-22ನೇ ಸಾಲಿನಲ್ಲಿ ದೇಶಕ್ಕೆ ಅತಿ ಹೆಚ್ಚು ವಿದೇಶಿ ನೇರ ಬಂಡವಾಳವನ್ನು (ಎಫ್‌ಡಿಐ) ಆಕರ್ಷಿಸಿದೆ ಎಂದು ಅವರು ಒತ್ತಿ ಹೇಳಿದರು. ಈ ಹೂಡಿಕೆಯ ಬಹುಪಾಲು ಉತ್ಪಾದನಾ ವಲಯದಲ್ಲಿ ನಡೆದಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಭಾರತವನ್ನು ಜಾಗತಿಕ ಪೂರೈಕೆ ಸರಪಳಿಯ ಪ್ರಮುಖ ಭಾಗವನ್ನಾಗಿ ಮಾಡುವ ʻಪಿಎಲ್ಐʼ ಯೋಜನೆಯ ಪ್ರಯೋಜನ ಪಡೆಯಲು ನಿರಂತರವಾಗಿ ಅರ್ಜಿಗಳು ಬರುತ್ತಿವೆ ಎಂದು ಅವರು ಒತ್ತಿ ಹೇಳಿದರು. ಪ್ರತಿಯೊಬ್ಬರೂ ಈ ಅವಕಾಶದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕು ಎಂದು ಪ್ರಧಾನಿ ಮನವಿ ಮಾಡಿದರು.

ಇಂದಿನ ಭಾರತವು ಹೊಸ ಸಾಮರ್ಥ್ಯಗಳೊಂದಿಗೆ ಸಾಗುತ್ತಿರುವುದರಿಂದ, ದೇಶದ ಆರ್ಥಿಕ ಕ್ಷೇತ್ರದಲ್ಲಿ ಇರುವವರ ಜವಾಬ್ದಾರಿ ಹೆಚ್ಚಾಗಿದೆ ಎಂದು ಪ್ರಧಾನಿ ಗಮನ ಸೆಳೆದರು. ಈ ಕ್ಷೇತ್ರದಲ್ಲಿರುವವರು ಇಂದು ವಿಶ್ವದ ದೃಢವಾದ ಹಣಕಾಸು ವ್ಯವಸ್ಥೆಯನ್ನು ಹೊಂದಿದ್ದಾರೆ ಮತ್ತು 8-10 ವರ್ಷಗಳ ಹಿಂದೆ ಕುಸಿತದ ಅಂಚಿನಲ್ಲಿದ್ದ ಬ್ಯಾಂಕಿಗ್‌ ವ್ಯವಸ್ಥೆಯ ಜಾಗದಲ್ಲಿ ಇಂದು ಲಾಭದಲ್ಲಿರುವ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಾಣುತ್ತಿದ್ದಾರೆ. ಅಲ್ಲದೆ, ಧೈರ್ಯ, ಸ್ಪಷ್ಟತೆ ಮತ್ತು ವಿಶ್ವಾಸದಿಂದ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸರಕಾರವಿದೆ ಎಂದು ಹೇಳಿದರು. "ಇಂದು, ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಸಾಮರ್ಥ್ಯದ ಪ್ರಯೋಜನಗಳು ಗರಿಷ್ಠ ಸಂಖ್ಯೆಯ ಜನರನ್ನು ತಲುಪುವಂತಾಗುವುದು ಇಂದಿನ ತುರ್ತು ಅಗತ್ಯವಾಗಿದೆ," ಎಂದು ಪ್ರಧಾನಿ ಹೇಳಿದರು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆ(ಎಂಎಸ್‌ಎಂಇ) ವಲಯಕ್ಕೆ ಸರಕಾರದ ಬೆಂಬಲದ ಬಗ್ಗೆ ಉದಾಹರಣೆಯನ್ನು ನೀಡಿದ ಪ್ರಧಾನಮಂತ್ರಿಯವರು, ಬ್ಯಾಂಕಿಂಗ್ ವ್ಯವಸ್ಥೆಯ ವ್ಯಾಪ್ತಿಯನ್ನು ಗರಿಷ್ಠ ಸಂಖ್ಯೆಯ ಕ್ಷೇತ್ರಗಳಿಗೆ ವಿಸ್ತರಿಸುವಂತೆ ಮನವಿ ಮಾಡಿದರು. ಸಾಂಕ್ರಾಮಿಕ ಸಮಯದಲ್ಲಿ 1 ಕೋಟಿ 20 ಲಕ್ಷ ʻಎಂಎಸ್ಎಂಇʼಗಳು ಸರಕಾರದಿಂದ ಭಾರಿ ಸಹಾಯವನ್ನು ಪಡೆದಿವೆ. ಈ ವರ್ಷದ ಬಜೆಟ್‌ನಲ್ಲಿ, ʻಎಂಎಸ್‌ಎಂಇʼ ವಲಯಕ್ಕೆ 2 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಅಡಮಾನ ರಹಿತ ಖಾತರಿ ಸಾಲವನ್ನು ಸಹ ನೀಡಲಾಗಿದೆ. ಈಗ ನಮ್ಮ ಬ್ಯಾಂಕುಗಳು ʻಎಂಎಸ್‌ಎಂಇʼಗಳನ್ನು ತಲುಪುವುದು ಮತ್ತು ಅವುಗಳಿಗೆ ಸಾಕಷ್ಟು ಹಣಕಾಸು ಒದಗಿಸುವುದು ಬಹಳ ಮುಖ್ಯ" ಎಂದು ಅವರು ಹೇಳಿದರು.

ಹಣಕಾಸು ಸೇರ್ಪಡೆಗೆ ಸಂಬಂಧಿಸಿದ ಸರಕಾರದ ನೀತಿಗಳು ಕೋಟ್ಯಂತರ ಜನರನ್ನು ಔಪಚಾರಿಕ ಹಣಕಾಸು ವ್ಯವಸ್ಥೆಯ ಭಾಗವನ್ನಾಗಿ ಮಾಡಿವೆ ಎಂದು ಪ್ರಧಾನಿ ಗಮನಸೆಳೆದರು. ಬ್ಯಾಂಕ್ ಗ್ಯಾರಂಟಿ ಇಲ್ಲದೆ 20 ಲಕ್ಷ ಕೋಟಿ ರೂ.ಗೂ ಹೆಚ್ಚು ʻಮುದ್ರಾʼ ಸಾಲವನ್ನು ನೀಡುವ ಮೂಲಕ ಸರಕಾರವು ಕೋಟ್ಯಂತರ ಯುವಕರ ಕನಸುಗಳನ್ನು ಈಡೇರಿಸಲು ಸಹಾಯ ಮಾಡಿದೆ. ಮೊದಲ ಬಾರಿಗೆ 40 ಲಕ್ಷಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ಅಂಗಡಿಯವರು ʻಪಿಎಂ ಸ್ವನಿಧಿʼ ಯೋಜನೆ ಮೂಲಕ ಬ್ಯಾಂಕುಗಳಿಂದ ಸಹಾಯ ಪಡೆದರು. ವೆಚ್ಚವನ್ನು ಕಡಿಮೆ ಮಾಡಲು ಮತ್ತು ಸಾಲದ ವೇಗವನ್ನು ಹೆಚ್ಚಿಸಲು ಎಲ್ಲ ಪ್ರಕ್ರಿಯೆಗಳನ್ನು ಮರು ವಿನ್ಯಾಸಗೊಳಿಸುವಂತೆ ಅವರು ಮಧ್ಯಸ್ಥಗಾರರಿಗೆ ಕರೆ ನೀಡಿದರು, ಇದರಿಂದ ಅದು ಸಣ್ಣ ಉದ್ಯಮಿಗಳನ್ನು ತ್ವರಿತವಾಗಿ ತಲುಪಲು ಸಹಾಯಕವಾಗುತ್ತದೆ ಎಂದರು.

'ವೋಕಲ್ ಫಾರ್ ಲೋಕಲ್' (ಸ್ಥಳೀಯಕ್ಕೆ ಆದ್ಯತೆ) ವಿಷಯದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, “ಇದು ಆಯ್ಕೆಯ ವಿಷಯವಲ್ಲ. ʻವೋಕಲ್‌ ಫಾರ್‌ ಲೋಕಲ್‌ʼ ಮತ್ತು ʻಅತ್ಮನಿರ್ಭರ್‌ʼ ಆಶಯವು ರಾಷ್ಟ್ರೀಯ ಜವಾಬ್ದಾರಿಯಾಗಿದೆ,ʼʼ ಎಂದು ಹೇಳಿದರು. ಶ್ರೀ ಮೋದಿ ಅವರು ದೇಶದಲ್ಲಿ ʻವೋಕಲ್ ಫಾರ್ ಲೋಕಲ್ʼ ಮತ್ತು ʻಆತ್ಮನಿರ್ಭರತೆʼಯ ಅಪಾರ ಉತ್ಸಾಹದ ಬಗ್ಗೆ ಉಲ್ಲೇಖಿಸಿದರು. ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ರಫ್ತುಗಳಲ್ಲಿ ದಾಖಲೆಯ ಬೆಳವಣಿಗೆಯ ಬಗ್ಗೆ ಮಾತನಾಡಿದರು. "ಸರಕುಗಳು ಅಥವಾ ಸೇವೆಗಳಲ್ಲಿ ನಮ್ಮ ರಫ್ತು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಇದು ಭಾರತದ ಪಾಲಿಗೆ ಹೆಚ್ಚುತ್ತಿರುವ ಸಾಧ್ಯತೆಗಳನ್ನು ಸೂಚಿಸುತ್ತದೆ,ʼʼ ಎಂದರು. ಸ್ಥಳೀಯ ಕುಶಲಕರ್ಮಿಗಳು ಮತ್ತು ಉದ್ಯಮಿಗಳನ್ನು ಜಿಲ್ಲಾ ಮಟ್ಟದವರೆಗೆ ಉತ್ತೇಜಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಸಂಸ್ಥೆಗಳು ಮತ್ತು ʻಚೇಂಬರ್ಸ್ ಆಫ್ ಇಂಡಸ್ಟ್ರಿ ಮತ್ತು ಕಾಮರ್ಸ್ʼನಂತಹ ಮಧ್ಯಸ್ಥಗಾರರಿಗೆ ಪ್ರಧಾನಮಂತ್ರಿಯವರು ಕರೆ ನೀಡಿದರು. 

ʻವೋಕಲ್ ಫಾರ್ ಲೋಕಲ್ʼ ಎಂಬುದು ಭಾರತೀಯ ಗುಡಿ ಕೈಗಾರಿಕೆಯಿಂದ ಉತ್ಪನ್ನಗಳನ್ನು ಖರೀದಿಸುವುದಕ್ಕಿಂತಲೂ ದೊಡ್ಡ ವಿಷಯವಾಗಿದೆ ಪ್ರಧಾನಿ ಮತ್ತೊಮ್ಮೆ ಸ್ಪಷ್ಟಪಡಿಸಿದರು. "ಭಾರತದಲ್ಲಿಯೇ ಸಾಮರ್ಥ್ಯವನ್ನು ನಿರ್ಮಿಸುವ ಮೂಲಕ ನಾವು ದೇಶದ ಹಣವನ್ನು ಉಳಿಸಬಹುದಾದ ಕ್ಷೇತ್ರಗಳು ಯಾವುವು ಎಂಬುದನ್ನು ನಾವು ಗುರುತಿಸಬಹುದಾಗಿದೆ" ಎಂದು ಅವರು ಕರೆ ನೀಡಿದರು ಮತ್ತು ಉನ್ನತ ಶಿಕ್ಷಣ ಮತ್ತು ಖಾದ್ಯ ತೈಲದ ಉದಾಹರಣೆಗಳನ್ನು ನೀಡಿದರು.

ಆಯವ್ಯಯದಲ್ಲಿ 10 ಲಕ್ಷ ಕೋಟಿ ರೂ.ವರೆಗೂ ಭಾರಿ ಪ್ರಮಾಣದಲ್ಲಿ ಬಂಡವಾಳ ವೆಚ್ಚ ಹಂಚಿಕೆ ಮತ್ತು ʻಪ್ರಧಾನ ಮಂತ್ರಿ ಗತಿಶಕ್ತಿ ಮಾಸ್ಟರ್ ಪ್ಲಾನ್‌ʼನಿಂದ ಮೂಡಿರುವ ಸುದೃಢತೆಯನ್ನು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. ವಿವಿಧ ಭೌಗೋಳಿಕ ಪ್ರದೇಶಗಳು ಮತ್ತು ಆರ್ಥಿಕ ಕ್ಷೇತ್ರಗಳ ಪ್ರಗತಿಗಾಗಿ ಕೆಲಸ ಮಾಡುತ್ತಿರುವ ಖಾಸಗಿ ವಲಯವನ್ನು ಬೆಂಬಲಿಸುವ ಅಗತ್ಯವನ್ನು ಒತ್ತಿ ಹೇಳಿದರು. "ಇಂದು, ನಾನು ದೇಶದ ಖಾಸಗಿ ವಲಯಕ್ಕೂ ಸರಕಾರದಂತೆ ತಮ್ಮ ಹೂಡಿಕೆಯನ್ನು ಹೆಚ್ಚಿಸಲು ಕರೆ ನೀಡುತ್ತೇನೆ, ಇದರಿಂದ ದೇಶವು ಗರಿಷ್ಠ ಲಾಭವನ್ನು ಪಡೆಯುತ್ತದೆ" ಎಂದು ಅವರು ಹೇಳಿದರು.

ತೆರಿಗೆ ಸಂಬಂಧಿತ ವಿಷಯಗಳ ಬಗ್ಗೆ ಮಾತನಾಡಿದ ಪ್ರಧಾನಿಯವರು, ಈ ಹಿಂದೆ ಇದ್ದ ಪರಿಸ್ಥಿತಿಗೆ ತದ್ವಿರುದ್ಧವೆಂಬಂತೆ ʻಜಿಎಸ್‌ಟಿʼ, ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆ ಕಡಿತದಿಂದಾಗಿ ಭಾರತದಲ್ಲಿ ತೆರಿಗೆ ಹೊರೆ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದರು. ಇದು ಉತ್ತಮ ತೆರಿಗೆ ಸಂಗ್ರಹಕ್ಕೆ ಕಾರಣವಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. 2013-14ರಲ್ಲಿ ಒಟ್ಟು ತೆರಿಗೆ ಆದಾಯ ಸುಮಾರು 11 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಇದು 2023-24ರಲ್ಲಿ 33 ಲಕ್ಷ ಕೋಟಿಗೆ ಏರಬಹುದು. 2013-14ರಿಂದ 2020-21 ರವರೆಗೆ ವೈಯಕ್ತಿಕ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ 3.5 ಕೋಟಿಯಿಂದ 6.5 ಕೋಟಿಗೆ ಏರಿದೆ. "ತೆರಿಗೆ ಪಾವತಿಸುವುದು ರಾಷ್ಟ್ರ ನಿರ್ಮಾಣಕ್ಕೆ ನೇರವಾಗಿ ಸಂಬಂಧಿಸಿದ ಕರ್ತವ್ಯವಾಗಿದೆ. ತೆರಿಗೆ ಮೂಲದಲ್ಲಿನ ಹೆಚ್ಚಳವು ಜನರಿಗೆ ಸರಕಾರದ ಮೇಲೆ ಇರುವ ವಿಶ್ವಾಸಕ್ಕೆ ಪುರಾವೆಯಾಗಿದೆ ಮತ್ತು ಪಾವತಿಸಿದ ತೆರಿಗೆಯನ್ನು ಸಾರ್ವಜನಿಕ ಒಳಿತಿಗಾಗಿ ಖರ್ಚು ಮಾಡಲಾಗುತ್ತಿದೆ ಎಂದು ಜನರು ನಂಬುತ್ತಾರೆ,ʼʼ ಎಂದು ಪ್ರಧಾನಿ ಹೇಳಿದರು.

ಭಾರತೀಯ ಪ್ರತಿಭೆಗಳು, ಆವಿಷ್ಕಾರಕರು ಮತ್ತು ಮೂಲಸೌಕರ್ಯಗಳು ಭಾರತೀಯ ಹಣಕಾಸು ವ್ಯವಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು ಎಂದು ಪ್ರಧಾನಿ ಹೇಳಿದರು. "ಭಾರತ ಅಭಿವೃದ್ಧಿಪಡಿಸಿದ 'ಇಂಡಸ್ಟ್ರಿ 4.0' ವೇದಿಕೆಗಳು ಜಗತ್ತಿಗೆ ಮಾದರಿಯಾಗುತ್ತಿವೆ" ಎಂದ ಪ್ರಧಾನಿಯವರು ʻಜಿಇಎಂʼ(GeM), ಡಿಜಿಟಲ್ ವಹಿವಾಟಿನ ಉದಾಹರಣೆಗಳನ್ನು ನೀಡಿದರು. ಸ್ವಾತಂತ್ರ್ಯದ 75ನೇ ವರ್ಷದಲ್ಲಿ, 75 ಸಾವಿರ ಕೋಟಿ ವಹಿವಾಟುಗಳನ್ನು ಡಿಜಿಟಲ್ ರೂಪದಲ್ಲಿ ಮಾಡಲಾಗಿದೆ, ಇದು ʻಯುಪಿಐʼ ವಿಸ್ತರಣೆ ಎಷ್ಟು ವ್ಯಾಪಕವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು. "ರುಪೇ ಮತ್ತು ʻಯುಪಿಐʼ ಕೇವಲ ಕಡಿಮೆ ವೆಚ್ಚದ ಮತ್ತು ಹೆಚ್ಚು ಸುರಕ್ಷಿತ ತಂತ್ರಜ್ಞಾನ ಮಾತ್ರವಲ್ಲ, ಅವು ಜಗತ್ತಿನಲ್ಲಿ ನಮ್ಮ ಹೆಗ್ಗುರುತು ಎಂದರು. “ನಾವೀನ್ಯತೆಗೆ ವಿಪುಲ ಅವಕಾಶವಿದೆ. ʻಯುಪಿಐʼ ಇಡೀ ಜಗತ್ತಿಗೆ ಆರ್ಥಿಕ ಒಳಗೊಳ್ಳುವಿಕೆ ಮತ್ತು ಸಬಲೀಕರಣದ ಸಾಧನವಾಗಬೇಕು, ಅದಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡಬೇಕು. ನಮ್ಮ ಹಣಕಾಸು ಸಂಸ್ಥೆಗಳು ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಲು ʻಫಿನ್‌ಟೆಕ್‌ʼ ಸಂಸ್ಥೆಗಳೊಂದಿಗೆ ಗರಿಷ್ಠ ಪಾಲುದಾರಿಕೆಯನ್ನು ಹೊಂದಿರಬೇಕು ಎಂದು ನಾನು ಸಲಹೆ ನೀಡಲು ಬಯಸುತ್ತೇನೆ,ʼʼ ಎಂದು ಪ್ರಧಾನಿ ಮೋದಿ ಹೇಳಿದರು.

ಕೆಲವೊಮ್ಮೆ, ಒಂದು ಸಣ್ಣ ಹೆಜ್ಜೆ ಕೂಡ ಉತ್ತೇಜನದಲ್ಲಿ ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂದು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಬಿಲ್ ಇಲ್ಲದೆ ಸರಕುಗಳನ್ನು ಖರೀದಿಸುವ ಉದಾಹರಣೆಯನ್ನು ನೀಡಿದರು. ಇದರಿಂದ ಯಾವುದೇ ಹಾನಿಯಿಲ್ಲ ಎಂಬ ಭಾವನೆ ಬೇಡ ಎಂದ ಪ್ರಧಾನಿ, ಪ್ರತಿಯಾಗಿ ರಾಷ್ಟ್ರಕ್ಕೆ ಪ್ರಯೋಜನವಾಗುವ ಬಿಲ್‌ ಪ್ರತಿಯನ್ನು ಪಡೆಯುವ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವನ್ನು ಒತ್ತಿ ಹೇಳಿದರು. "ನಾವು ಜನರನ್ನು ಹೆಚ್ಚು ಹೆಚ್ಚು ಜಾಗೃತಗೊಳಿಸಬೇಕಾಗಿದೆ" ಎಂದು ಅವರು ಕರೆ ನೀಡಿದರು.

ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಮಂತ್ರಿಯವರು, ಭಾರತದ ಆರ್ಥಿಕ ಅಭಿವೃದ್ಧಿಯ ಪ್ರಯೋಜನಗಳು ಪ್ರತಿ ವರ್ಗ ಮತ್ತು ವ್ಯಕ್ತಿಗೆ ತಲುಪಬೇಕು ಎಂದರು. ಇದೆ ಆಶಯದೊಂದಿಗೆ ಕೆಲಸ ಮಾಡುವಂತೆ ಎಲ್ಲ ಪಾಲುದಾರರನ್ನು ಒತ್ತಾಯಿಸಿದರು. ಉತ್ತಮ ತರಬೇತಿ ಪಡೆದ ವೃತ್ತಿಪರರ ದೊಡ್ಡ ಗುಂಪನ್ನು ರಚಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. "ನೀವೆಲ್ಲರೂ ಇಂತಹ ಭವಿಷ್ಯದ ವಿಚಾರಗಳನ್ನು ವಿವರವಾಗಿ ಚರ್ಚಿಸಬೇಕೆಂದು ನಾನು ಬಯಸುತ್ತೇನೆ" ಎಂದು ಅವರು ಮಾತು ಮುಗಿಸಿದರು. 

 

 

 

 

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Modi blends diplomacy with India’s cultural showcase

Media Coverage

Modi blends diplomacy with India’s cultural showcase
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 23 ನವೆಂಬರ್ 2024
November 23, 2024

PM Modi’s Transformative Leadership Shaping India's Rising Global Stature