ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವ ಪರಿಸರ ದಿನದ ಅಂಗವಾಗಿ ಇಂದು ವಿಡಿಯೋ ಸಂದೇಶದ ಮೂಲಕ ಮಾತನಾಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ವಿಶ್ವ ಪರಿಸರ ದಿನದಂದು ವಿಶ್ವದ ಪ್ರತಿಯೊಂದು ದೇಶಕ್ಕೂ ತಮ್ಮ ಶುಭಾಶಯಗಳನ್ನು ತಿಳಿಸಿದರು. ಈ ವರ್ಷದ ಪರಿಸರ ದಿನದ ಘೋಷ ವಾಕ್ಯ ಏಕ-ಬಳಕೆಯ ಪ್ಲಾಸ್ಟಿಕ್ ತೊಡೆದುಹಾಕಲು ಅಭಿಯಾನದ ಕುರಿತು ಒತ್ತಿ ಹೇಳಿದ ಅವರು, ಭಾರತವು ಕಳೆದ 4-5 ವರ್ಷಗಳಿಂದ ಈ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಭಾರತವು 2018ರಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ನಿರ್ಮೂಲನೆ ಮಾಡಲು ಎರಡು ಹಂತಗಳಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿತು ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. "ಒಂದೆಡೆ, ನಾವು ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಿದ್ದೇವೆ, ಮತ್ತೊಂದೆಡೆ, ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣೆಯನ್ನು ಕಡ್ಡಾಯಗೊಳಿಸಲಾಗಿದೆ" ಎಂದು ಅವರು ಹೇಳಿದರು. ಆ ಕಾರಣದಿಂದಾಗಿ, ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ವಾರ್ಷಿಕ ಪ್ಲಾಸ್ಟಿಕ್ ತ್ಯಾಜ್ಯದ ಶೇಕಡ 75 ರಷ್ಟಿರುವ ಸುಮಾರು 30 ಲಕ್ಷ ಟನ್ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಅನ್ನು ಭಾರತದಲ್ಲಿ ಕಡ್ಡಾಯವಾಗಿ ಮರುಬಳಕೆ ಮಾಡಲಾಗುತ್ತಿದೆ ಮತ್ತು ಸುಮಾರು 10 ಸಾವಿರ ಉತ್ಪಾದಕರು, ಆಮದುದಾರರು ಮತ್ತು ಬ್ರ್ಯಾಂಡ್‌ಗಳು ಬಂದಿವೆ ಇದರ ವ್ಯಾಪ್ತಿಗೆ ಬಂದಿವೆ ಎಂದು ಪ್ರಧಾನಿ ಹೇಳಿದರು.
21ನೇ ಶತಮಾನದ ಭಾರತವು ಹವಾಮಾನ ಬದಲಾವಣೆ ಮತ್ತು ಪರಿಸರ ಸಂರಕ್ಷಣೆಗಾಗಿ ಅತ್ಯಂತ ಸ್ಪಷ್ಟವಾದ ನೀಲನಕ್ಷೆಯೊಂದಿಗೆ ಮುನ್ನಡೆಯುತ್ತಿದೆ ಎಂದು ಪ್ರಧಾನಮಂತ್ರಿ ಪ್ರಮುಖವಾಗಿ ಪ್ರಸ್ತಾಪಿಸಿದರು. ಭಾರತವು ಪ್ರಸ್ತುತ ಅಗತ್ಯತೆಗಳು ಮತ್ತು ಭವಿಷ್ಯದ ದೃಷ್ಟಿಯ ಸಮತೋಲನವನ್ನು ಸೃಷ್ಟಿಸಿದೆ ಎಂದು ಒತ್ತಿ ಹೇಳಿದ ಅವರು ಭವಿಷ್ಯದ ಇಂಧನ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಭಾರಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಬಡವರಲ್ಲಿ ಬಡವರಿಗೆ ಅಗತ್ಯ ಸಹಾಯವನ್ನು ಒದಗಿಸಲಾಗಿದೆ ಎಂದು ಪ್ರಧಾನಿ ಹೇಳಿದರು. “ಕಳೆದ 9 ವರ್ಷಗಳಲ್ಲಿ ಹಸಿರು ಮತ್ತು ಶುದ್ಧ ಇಂಧನಕ್ಕೆ ಹಿಂದೆಂದೂ ನೀಡದಷ್ಟು ಒತ್ತು ನೀಡಲಾಗಿದೆ’’ ಎಂದು ಹೇಳಿದ ಪ್ರಧಾನಮಂತ್ರಿ, ಹೇಗೆ ಸೌರಶಕ್ತಿ ಮತ್ತು ಎಲ್ ಇಡಿ ಬಲ್ಬ್ ಗಳು ಜನರ ಹಣವನ್ನು ಉಳಿತಾಯ ಮಾಡುವ ಜತೆಗೆ ಪರಿಸರವನ್ನು ಸಂರಕ್ಷಿಸುತ್ತಿದೆ ಎಂಬ ಉದಾಹರಣೆಗಳನ್ನು ನೀಡಿದರು. ಜಾಗತಿಕ ಸಾಂಕ್ರಾಮಿಕದ ವೇಳೆ ಭಾರತದ ನಾಯಕತ್ವದ ಕುರಿತು ಬೆಳಕು ಚೆಲ್ಲಿದ ಪ್ರಧಾನಮಂತ್ರಿ, ಭಾರತ ಮಿಷನ್ ಹೈಡ್ರೋಜನ್ ಆರಂಭಿಸಿದೆ ಮತ್ತು ರಾಸಾಯನಿಕ ರಸಗೊಬ್ಬರಗಳಿಂದ ಮಣ್ಣು ಮತ್ತು ನೀರನ್ನು ರಕ್ಷಿಸಲು ನೈಸರ್ಗಿಕ ಕೃಷ್ಟಿ ನಿಟ್ಟಿನಲ್ಲಿ ಹಲವು ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
“ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ಜೌಗು ಪ್ರದೇಶಗಳು ಮತ್ತು ರಾಮ್ಸರ್ ಸ್ಥಳಗಳ ಸಂಖ್ಯೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬಹುತೇಕ ಮೂರು ಪಟ್ಟು ಹೆಚ್ಚಾಗಿವೆ’’ ಎಂದು ಪ್ರಧಾನಿ ಹೇಳಿದರು. ಹಸಿರು ಭೂಮಿಯ ಮತ್ತು ಹಸಿರು ಆರ್ಥಿಕತೆ ಕುರಿತಂತೆ ಇಂದು ಎರಡು ಹೊಸ ಯೋಜನೆಗಳನ್ನು ಆರಂಭಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ರಾಮ್ಸರ್ ಸ್ಥಳಗಳನ್ನು ಸಾರ್ವಜನಿಕ ಸಹಭಾಗಿತ್ವದೊಂದಿಗೆ ಸಂರಕ್ಷಿಸುವುದನ್ನು ಖಾತ್ರಿಪಡಿಸಲು “ಅಮೃತ್ ಧಾರೋಹರ ಯೋಜನೆ’’ ಆರಂಭಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಭವಿಷ್ಯದಲ್ಲಿ ಈ ರಾಮ್ಸರ್ ಸ್ಥಳಗಳು ಜೈವಿಕ-ಪ್ರವಾಸೋದ್ಯಮದ ಕೇಂದ್ರಗಳಾಗಿವೆ ಎಂದು ವಿವರಿಸಿದರು ಅವರು ಅವು ಸಾವಿರಾರು ಜನರಿಗೆ ಹಸಿರು ಉದ್ಯೋಗಗಳನ್ನು ಒದಗಿಸುವ ಮೂಲವಾಗಲಿದೆ ಎಂದರು. ಎರಡನೇ ಯೋಜನೆ “ಮಿಷ್ಟಿ ಯೋಜನಾ’ ದೇಶದಲ್ಲಿ ಮ್ಯಾಂಗ್ರೋ ಪರಿಸರ ವ್ಯವಸ್ಥೆಯನ್ನು ರಕ್ಷಿಸಿ ಪುನರುಜ್ಜೀವನಗೊಳಿಸಲು ನೆರವಾಗುತ್ತದೆ ಎಂದು ಹೇಳಿದರು. ಇದರೊಂದಿಗೆ, ದೇಶದ 9 ರಾಜ್ಯಗಳಲ್ಲಿ ಮ್ಯಾಂಗ್ರೋವ್ ಹೊದಿಕೆಯನ್ನು ಪುನಃಸ್ಥಾಪಿಸಲಾಗುವುದು ಮತ್ತು ಕರಾವಳಿ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಸಮುದ್ರ ಮಟ್ಟ ಮತ್ತು ಚಂಡಮಾರುತದಂತಹ ವಿಪತ್ತುಗಳಿಂದ ಜೀವ ಮತ್ತು ಜೀವನೋಪಾಯಕ್ಕೆ ಎದುರಾಗುವ ಅಪಾಯಗಳನ್ನು ತಗ್ಗಿಸಲು ನೆರವಾಗುತ್ತದೆ ಎಂದು ಪ್ರಧಾನಿ ವಿವರಿಸಿದರು.
ಜಾಗತಿಕ ಹವಾಮಾನದ ರಕ್ಷಣೆಗಾಗಿ ವಿಶ್ವದ ಪ್ರತಿಯೊಂದು ದೇಶವು ಪಟ್ಟಭದ್ರ ಹಿತಾಸಕ್ತಿಗಳನ್ನು ಬಿದಿಗಿಟ್ಟು ಆಲೋಚಿಸಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು. ತನ್ನ ದೇಶವನ್ನು ಅಭಿವೃದ್ಧಿಪಡಿಸಿ ನಂತರ ಇತರೆ ದೇಶಗಳ ಪರಿಸರದ ಬಗ್ಗೆ ಚಿಂತಿಸುವ ಅಭಿವೃದ್ಧಿಯ ಮಾದರಿಯು ಪ್ರಪಂಚದ ದೊಡ್ಡ ಮತ್ತು ಆಧುನಿಕ ದೇಶಗಳಲ್ಲಿ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ ಎಂದು ಉಲ್ಲೇಖಿಸಿದ ಪ್ರಧಾನಿ ಅವರು ಅಂತಹ ದೇಶಗಳು ಅಭಿವೃದ್ಧಿಯ ಗುರಿಗಳನ್ನು ಸಾಧಿಸಿದ್ದರೂ ಸಹ ಅದಕ್ಕೆ ಬೆಲೆ ನೀಡಿದ್ದು ಇಡೀ ಜಗತ್ತಿನ ಪರಿಸರ ಎಂದು ಹೇಳಿದರು.ಇಂದಿಗೂ ಸಹ ವಿಶ್ವದ ಅಭಿವೃದ್ಧಿಶೀಲ ಮತ್ತು ಹಿಂದುಳಿದ ರಾಷ್ಟ್ರಗಳು ಕೆಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ದೋಷಪೂರಿತ ನೀತಿಗಳಿಂದ ಬಳಲುತ್ತಿವೆ ಎಂದು ಪ್ರಧಾನಿ ಹೇಳಿದರು. "ದಶಕಗಳ ಕಾಲ, ಕೆಲವು ಅಭಿವೃದ್ಧಿ ಹೊಂದಿದ ದೇಶಗಳ ಈ ಧೋರಣೆಯನ್ನು ತಡೆಯಲು ಯಾವುದೇ ದೇಶವಿರಲಿಲ್ಲ" ಅಂತಹ ಪ್ರತಿಯೊಂದು ದೇಶದ ಮುಂದೆ ಭಾರತವು ಹವಾಮಾನ ನ್ಯಾಯದ ಸಮಸ್ಯೆಯನ್ನು ಮುಂದಿಟ್ಟಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
"ಸಾವಿರಾರು ವರ್ಷಗಳಷ್ಟು ಹಳೆಯದಾದ ಭಾರತದ ಸಂಸ್ಕೃತಿಯಲ್ಲಿ, ಪ್ರಕೃತಿ ಮತ್ತು ಪ್ರಗತಿಯೂ ಇದೆ" ಎಂದ ಪ್ರಧಾನಿ ಅವರು ಇದು ಪರಿಸರ ವಿಜ್ಞಾನ ಮತ್ತು ಆರ್ಥಿಕತೆಯತ್ತ ಭಾರತದ ಗಮನ ಹರಿಸಲು ಸ್ಫೂರ್ತಿಯನ್ನು ನೀಡುತ್ತಿ ಎಂದು ಹೇಳಿದರು. ಭಾರತವು ತನ್ನ ಮೂಲಸೌಕರ್ಯದಲ್ಲಿ ಅಭೂತಪೂರ್ವ ಹೂಡಿಕೆ ಮಾಡುತ್ತಿರುವುದರಿಂದ ಅದು ಪರಿಸರದ ಮೇಲೆ ಸಮಾನ ಗಮನಹರಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಆರ್ಥಿಕತೆ ಮತ್ತು ಪರಿಸರ ವಿಜ್ಞಾನಕ್ಕೆ ಉತ್ತೇಜನ ನೀಡುತ್ತಿರುವ ಹೋಲಿಕೆ ಉದಾಹರಣೆ ನೀಡಿದ ಪ್ರಧಾನಿ, ಒಂದು ಕಡೆ 4ಜಿ ಮತ್ತು 5ಜಿ ಸಂಪರ್ಕದ ವಿಸ್ತರಣೆ, ಇನ್ನೊಂದೆಡೆ ದೇಶದ ಅರಣ್ಯ ಪ್ರದೇಶದ ವ್ಯಾಪ್ತಿ ಹೆಚ್ಚಳವನ್ನು ಉಲ್ಲೇಖಿಸಿದರು. ಭಾರತ ಬಡವರಿಗಾಗಿ 4 ಕೋಟಿ ಮನೆಗಳನ್ನು ನಿರ್ಮಿಸಿದೆ ಮತ್ತು ಭಾರತದಲ್ಲಿ ವ್ಯನ್ಯಜೀವಿ ಮೃಗಾಲಯಗಳು ಮತ್ತು ವನ್ಯಜೀವಿಗಳ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ ಎಂದು ಅವರು ಹೇಳಿದರು. ಜಲಜೀವನ್ ಮಿಷನ್ ಕುರಿತು ಮಾತನಾಡಿದ ಶ್ರೀ ನರೇಂದ್ರ ಮೋದಿ ಅವರು, ನೀರಿನ ಭದ್ರತೆಗಾಗಿ 50,000 ಅಮೃತ ಸರೋವರಗಳನ್ನು ನಿರ್ಮಿಸಲಾಗಿದೆ, ಭಾರತ ವಿಶ್ವದಲ್ಲಿ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ನವೀಕರಿಸಬಹುದಾದ ಇಂಧನ ವಲಯದಲ್ಲಿ ಐದನೇ ಅತಿದೊಡ್ಡ ರಾಷ್ಟ್ರವಾಗಿ ಸೇರ್ಪಡೆಯಾಗಿದೆ ಮತ್ತು ಕೃಷಿ ರಫ್ತನ್ನು ಹೆಚ್ಚಿಸಲಾಗಿದೆ ಮತ್ತು ಪೆಟ್ರೋಲ್ ನಲ್ಲಿ ಶೇ.20ರಷ್ಟು ಎಥೆನಾಲ್ ಅನ್ನು ಮಿಶ್ರಣ ಮಾಡಲು ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ-ಸಿಡಿಆರ್ ಐ ಮತ್ತು ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ (ಪ್ರಮುಖ ವನ್ಯಜೀವಿಗಳ ರಕ್ಷಣೆಗೆ) ಮೈತ್ರಿ ಸಂಸ್ಥೆಗಳನ್ನು ಭಾರತ ಆರಂಭಿಸಿದೆ ಎಂದು ಅವರು ತಿಳಿಸಿದರು.
ಮಿಷನ್ ಲೈಫ್- ಅಂದರೆ ಪರಿಸರಕ್ಕಾಗಿ ಜೀವನಶೈಲಿ ಸಾರ್ವಜನಿಕ ಆಂದೋಲನವಾಗುತ್ತಿರುವ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ, ಹವಾಮಾನ ವೈಪರೀತ್ಯವನ್ನು ಎದುರಿಸಲು ಜೀವನಶೈಲಿಯ ಬದಲಾವಣೆಗಳ ಬಗ್ಗೆ ಮಿಷನ್ ಹೊಸ ಪ್ರಜ್ಞೆಯನ್ನು ಹರಡುತ್ತಿದೆ ಎಂದು ಪ್ರಮುಖವಾಗಿ ಪ್ರಸ್ತಾಸಿದರು. ಕಳೆದ ವರ್ಷ ಗುಜರಾತ್‌ನ ಕೆವಾಡಿಯಾ-ಏಕ್ತಾ ನಗರದಲ್ಲಿ ಮಿಷನ್ ಆರಂಭಿಸಿದಾಗ ಜನರಲ್ಲಿ ಕುತೂಹಲವಿತ್ತು, ಆದರೆ ಒಂದು ತಿಂಗಳ ಹಿಂದೆ, ಮಿಷನ್ ಲೈಫ್ ಬಗ್ಗೆ ಅಭಿಯಾನ ಆರಂಭಿಸಿದಾಗ ಅಲ್ಲಿ 30 ದಿನಗಳಲ್ಲಿ 2 ಕೋಟಿ ಜನರು ಅದರ ಭಾಗವಾಗಿದ್ದಾರೆ ಎಂದು ಅವರು ಉಲ್ಲೇಖಿಸಿದರು.
‘ಗಿವಿಂಗ್ ಲೈಫ್ ಟು ಮೈ ಸಿಟಿ’ ಎಂಬ ಸ್ಪೂರ್ತಿಯೊಂದಿಗೆ rallies ಗಳು ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಿರುವ ಬಗ್ಗೆಯೂ ಅವರು ಮಾಹಿತಿ ನೀಡಿದರು. "ಲಕ್ಷಾಂತರ ಸಹೋದ್ಯೋಗಿಗಳು ತಮ್ಮ ದೈನಂದಿನ ಜೀವನದಲ್ಲಿ ಕಡಿತಗೊಳಿಸಿ, ಮರುಬಳಕೆ ಮಾಡಿ, ಸಂಸ್ಕರಣೆ ಮಾಡುವ ಮಂತ್ರವನ್ನು ಅಳವಡಿಸಿಕೊಂಡಿದ್ದಾರೆ" ಎಂದ ಪ್ರಧಾನಿ ಅವರು ಮಿಷನ್ ಲೈಫ್‌ನ ಮೂಲ ತತ್ವವು ಜಗತ್ತನ್ನು ಬದಲಾಯಿಸಲು ಜನರು ಮೊದಲು ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಬೇಕು ಎಂಬುದಾಗಿದೆ ಎಂದರು. " ಇಡೀ ಮನುಕುಲದ ಉಜ್ವಲ ಭವಿಷ್ಯಕ್ಕಾಗಿ, ನಮ್ಮ ಭವಿಷ್ಯದ ಪೀಳಿಗೆಗೆ ಮಿಷನ್ ಲೈಫ್ ಸಮಾನ ಪ್ರಾಮುಖ್ಯತೆ ಹೊಂದಿದೆ " ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
“ಹವಾಮಾನ ವೈಪರಿತ್ಯದ ಬಗೆಗಿನ ಈ ಪ್ರಜ್ಞೆ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ವಿಶ್ವದಾದ್ಯಂತ ಈ ಉಪಕ್ರಮಕ್ಕೆ ಜಾಗತಿಕ ಬೆಂಬಲ ವ್ಯಕ್ತವಾಗುತ್ತಿದೆ’’ ಎಂದು ಪ್ರಧಾನಮಂತ್ರಿ ಹೇಳಿದರು. ಕಳೆದ ವರ್ಷದ ವಿಶ್ವಪರಿಸರ ದಿನದಂದು ತಾವು ವೈಯಕ್ತಿಕವಾಗಿ ಹಾಗೂ ಸಮುದಾಯಗಳಲ್ಲಿನ ಪರಿಸರ-ಸ್ನೇಹಿ ಕುರಿತ ನಡವಳಿಕೆ ಬದಲಾವಣೆಯ ನಾವೀನ್ಯ ಪರಿಹಾರಗಳನ್ನು ಹಂಚಿಕೊಳ್ಳುವಂತೆ ವಿಶ್ವ ಸಮುದಾಯವನ್ನು ಕೋರಿದ್ದನ್ನು ಪ್ರಧಾನಿ ಸ್ಮರಿಸಿದರು. ಸುಮಾರು 70 ದೇಶಗಳ ವಿದ್ಯಾರ್ಥಿಗಳು, ಸಂಶೋಧಕರು, ವಿವಿಧ ಕ್ಷೇತ್ರಗಳ ತಜ್ಞರು, ವೃತ್ತಿಪರರು, ಸರ್ಕಾರೇತರ ಸಂಸ್ಥೆಗಳು ಮತ್ತು ಜನಸಾಮಾನ್ಯರು ಸೇರಿದಂತೆ ಸಾವಿರಾರು ಸಹೋದ್ಯೋಗಿಗಳು ತಮ್ಮ ಅಭಿಪ್ರಾಯಗಳು ಮತ್ತು ಪರಿಹಾರಗಳನ್ನು ದೊಡ್ಡ ಪ್ರಮಾಣದಲ್ಲಿ ಹಂಚಿಕೊಂಡಿದ್ದಾರೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ತಮ್ಮ ನವೀನ ಚಿಂತನೆಗಳಿಂದಾಗಿ ಪ್ರಶಸ್ತಿ ಪಡೆದವರನ್ನು ಅವರು ಅಭಿನಂದಿಸಿದರು.
ಭಾಷಣವನ್ನು ಮುಕ್ತಾಯಗೊಳಿಸುತ್ತಾ ಪ್ರಧಾನಿ ಅವರು, ಮಿಷನ್ ಲೈಫ್ ನಿಟ್ಟಿನಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯು ಮುಂದಿನ ದಿನಗಳಲ್ಲಿ ಪರಿಸರಕ್ಕೆ ಬಲಿಷ್ಠ ಕವಚವಾಗಲಿದೆ ಎಂದು ಹೇಳಿದರು. ಲೈಫ್‌ಗಾಗಿ ಥಾಟ್ ಲೀಡರ್‌ಶಿಪ್ (ಚಿಂತನಾ ನಾಯಕತ್ವ) ಸಂಗ್ರಹವನ್ನೂ ಸಹ ಇಂದು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು. ಇಂತಹ ಪ್ರಯತ್ನಗಳು ಹಸಿರು ಪ್ರಗತಿಯ ಸಂಕಲ್ಪವನ್ನು ಮತ್ತಷ್ಟು ಬಲವರ್ಧನೆಗೊಳಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.