ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಜೆಟ್ ಅಧಿವೇಶನದ ಆರಂಭಕ್ಕೂ ಮುನ್ನ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, 60 ವರ್ಷಗಳ ನಂತರ ಸತತ ಮೂರನೇ ಅವಧಿಗೆ ಸರ್ಕಾರ ಬಂದಿರುವುದಕ್ಕೆ ಹೆಮ್ಮೆಯನ್ನು ವ್ಯಕ್ತಪಡಿಸಿದರು. ಮೂರನೇ ಅವಧಿಯ ಸರ್ಕಾರವು ಬಜೆಟ್ ಮಂಡಿಸುವುದನ್ನು ರಾಷ್ಟ್ರವು ಒಂದು ಅದ್ಭುತ ಘಟನೆಯಾಗಿ ನೋಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಬಜೆಟ್ ಅಮೃತ ಕಾಲದ ಮೈಲಿಗಲ್ಲು ಬಜೆಟ್ ಆಗಿದೆ ಮತ್ತು ತಾನು ನೀಡಿರುವ ಭರವಸೆಗಳನ್ನು ಕಾರ್ಯಗತಗೊಳಿಸಲು ಸರ್ಕಾರವು ಶ್ರಮಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಬಜೆಟ್ ಪ್ರಸ್ತುತ ಸರ್ಕಾರದ ಮುಂದಿನ ಐದು ವರ್ಷಗಳ ಹಾದಿಯನ್ನು ನಿಗದಿಪಡಿಸುತ್ತದೆ ಮತ್ತು 2047 ರ ವೇಳೆಗೆ ವಿಕಸಿತ ಭಾರತ ನಿರ್ಮಿಸುವ ಕನಸಿಗೆ ಭದ್ರ ಬುನಾದಿಯನ್ನು ಹಾಕುತ್ತದೆ ಎಂದು ಅವರು ಹೇಳಿದರು.
ಸತತವಾಗಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 8 ಪ್ರತಿಶತದಷ್ಟು ಬೆಳವಣಿಗೆಯೊಂದಿಗೆ ಪ್ರಮುಖ ಆರ್ಥಿಕತೆಗಳಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ ಎಂದು ಅವರು ಹೇಳಿದರು. ಸಕಾರಾತ್ಮಕ ದೃಷ್ಟಿಕೋನ, ಹೂಡಿಕೆ ಮತ್ತು ಕಾರ್ಯಕ್ಷಮತೆಯಿಂದಾಗಿ ಇಂದು ಅವಕಾಶಗಳು ಉತ್ತುಂಗದಲ್ಲಿವೆ ಎಂದು ಪ್ರಧಾನಮಂತ್ರಿ ಹೇಳಿದರು.
ರಾಜಕೀಯ ಪಕ್ಷಗಳ ನಡುವೆ ಈಗ ಎಲ್ಲಾ ಹೋರಾಟಗಳು ಮುಗಿದಿವೆ ಮತ್ತು ಲೋಕಸಭೆ ಚುನಾವಣೆಯಲ್ಲಿ ನಾಗರಿಕರು ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದ ಪ್ರಧಾನಮಂತ್ರಿ, ಮುಂದಿನ 5 ವರ್ಷಗಳ ಕಾಲ ಎಲ್ಲಾ ಸಂಸದರು ಒಗ್ಗೂಡಿ ದೇಶಕ್ಕಾಗಿ ಹೋರಾಡುವಂತೆ ಕರೆ ನೀಡಿದರು. ಮುಂದಿನ ನಾಲ್ಕೂವರೆ ವರ್ಷಗಳ ಕಾಲ ಸಂಸತ್ತಿನ ಘನ ವೇದಿಕೆಯನ್ನು ಬಳಸಿಕೊಳ್ಳುವ ಮೂಲಕ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಕ್ಷಗಳನ್ನು ಮೀರಬೇಕು ಮತ್ತು ರಾಷ್ಟ್ರಕ್ಕೆ ಬದ್ಧರಾಗಬೇಕೆಂದು ಅವರು ಒತ್ತಾಯಿಸಿದರು. "ಜನವರಿ 2029 ರಲ್ಲಿ ಚುನಾವಣಾ ರಣರಂಗಕ್ಕೆ ಹೋಗಿ. ಅಲ್ಲಿಯವರೆಗೆ, ದೇಶ, ಬಡವರು, ರೈತರು, ಮಹಿಳೆಯರು ಮತ್ತು ಯುವಜನರಿಗೆ ಮಾತ್ರ ಆದ್ಯತೆ ನೀಡಬೇಕು" ಎಂದು ಅವರು ಹೇಳಿದರು. 2047 ರಲ್ಲಿ ವಿಕಸಿತ ಭಾರತದ ಕನಸುಗಳು ಮತ್ತು ಸಂಕಲ್ಪಗಳನ್ನು ಸಾಕಾರಗೊಳಿಸಲು ಯಾವುದೇ ಅವಕಾಶವನ್ನು ಬಿಡುವುದಿಲ್ಲ ಎಂದು ಅವರು ಹೇಳಿದರು.
ಕೆಲವು ರಾಜಕೀಯ ಪಕ್ಷಗಳ ನಕಾರಾತ್ಮಕ ಧೋರಣೆಯಿಂದಾಗಿ ಅನೇಕ ಸಂಸದರು ತಮ್ಮ ಅಭಿಪ್ರಾಯಗಳನ್ನು ಮತ್ತು ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮುಂದಿಡಲು ಯಾವುದೇ ಅವಕಾಶವನ್ನು ಪಡೆಯುತ್ತಿಲ್ಲ ಎಂದು ಪ್ರಧಾನಿ ವಿಷಾದಿಸಿದರು. ಎಲ್ಲ ಸದಸ್ಯರಿಗೆ ಅದರಲ್ಲೂ ಪ್ರಥಮ ಬಾರಿ ಸಂಸದರಾದವರಿಗೆ ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ನೀಡಬೇಕು ಎಂದು ಎಲ್ಲ ಪಕ್ಷಗಳಿಗೆ ಮನವಿ ಮಾಡಿದರು. ಚುನಾಯಿತ ಸರ್ಕಾರವನ್ನು ಮತ್ತು ಸಂಸತ್ತಿನಲ್ಲಿ ಪ್ರಧಾನಮಂತ್ರಿ ಮಾಡಿದ ಭಾಷಣವನ್ನು ಹತ್ತಿಕ್ಕುವ ಪ್ರಯತ್ನಗಳ ಬಗ್ಗೆ ಶ್ರೀ ಮೋದಿ ಅವರು ಜನರಿಗೆ ನೆನಪಿಸಿದರು. ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಯಾವುದೇ ಅವಕಾಶವಿಲ್ಲ ಎಂದು ಪ್ರಧಾನಮಂತ್ರಿ ಮೋದಿ ಪ್ರತಿಪಾದಿಸಿದರು.
ದೇಶದ ಜನರು ದೇಶ ಸೇವೆ ಮಾಡಲು ಜನಾದೇಶ ನೀಡಿದ್ದಾರೆಯೇ ಹೊರತು ರಾಜಕೀಯ ಪಕ್ಷಗಳ ಅಜೆಂಡಾಕ್ಕಲ್ಲ ಎಂದು ಸಂಸದರಿಗೆ ಪ್ರಧಾನಮಂತ್ರಿ ನೆನಪಿಸಿದರು. ‘ಈ ಸದನ ರಾಜಕೀಯ ಪಕ್ಷಗಳಿಗೆ ಅಲ್ಲ, ಈ ಸದನ ದೇಶಕ್ಕಾಗಿ. ಇದು ಸಂಸದರ ಸೇವೆಗಾಗಿ ಅಲ್ಲ, 140 ಕೋಟಿ ಭಾರತದ ನಾಗರಿಕರ ಸೇವೆಗಾಗಿ’ಎಂದು ಅವರು ಒತ್ತಿ ಹೇಳಿದರು. ಎಲ್ಲಾ ಸಂಸದರು ಅರ್ಥಪೂರ್ಣ ಚರ್ಚೆಗೆ ಕೊಡುಗೆ ನೀಡುತ್ತಾರೆ ಎಂದು ವಿಶ್ವಾಸ ಅವರು ವ್ಯಕ್ತಪಡಿಸಿದರು. ದೇಶವನ್ನು ಮುಂದೆ ಕೊಂಡೊಯ್ಯಲು ಸಕಾರಾತ್ಮಕ ವಿಚಾರಗಳ ಅಗತ್ಯವಿದೆ ಎಂದು ಹೇಳಿದರು. ವಿರೋಧಿಗಳ ಆಲೋಚನೆಗಳು ಕೆಟ್ಟದ್ದಲ್ಲ, ಆದರೆ ನಕಾರಾತ್ಮಕ ಆಲೋಚನೆಗಳು ಅಭಿವೃದ್ಧಿಗೆ ಅಡ್ಡಿಯಾಗುತ್ತವೆ ಎಂದು ಅವರು ಹೇಳಿದರು. ಜನಸಾಮಾನ್ಯರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ñಪ್ರಜಾಪ್ರಭುತ್ವದ ಈ ಮಂದಿರ ಬಳಕೆಯಾಗಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.