ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ 'ಹುಲಿ ಯೋಜನೆಯ 50ನೇ ವರ್ಷಾಚರಣೆ' ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿಯವರು ʻಅಂತಾರಾಷ್ಟ್ರೀಯ ಬಿಗ್ ಕ್ಯಾಟ್ಸ್ ಮೈತ್ರಿಕೂಟಕ್ಕೆ(ಐಬಿಸಿಎ) ಚಾಲನೆ ನೀಡಿದರು. ʻಹುಲಿ ಸಂರಕ್ಷಣೆಗೆ ಅಮೃತ ಕಾಲದ ದೃಷ್ಟಿಕೋನʼ ಶೀರ್ಷಿಕೆಯ ಹುಲಿ ಮೀಸಲು ಪ್ರದೇಶಗಳ ನಿರ್ವಹಣಾ ಪರಿಣಾಮಕಾರಿತ್ವ ಮೌಲ್ಯಮಾಪನದ 5ನೇ ಸುತ್ತಿನ ಸಾರಾಂಶ ವರದಿಯನ್ನು ಅವರು ಬಿಡುಗಡೆ ಮಾಡಿದರು. ದೇಶದಲ್ಲಿ ಹುಲಿಗಳ ಸಂಖ್ಯೆಯನ್ನು ಘೋಷಿಸಿದರು. ಜೊತೆಗೆ ʻಅಖಿಲ ಭಾರತ ಹುಲಿ ಅಂದಾಜುʼ(5 ನೇ ಸುತ್ತು) ಸಾರಾಂಶ ವರದಿಯನ್ನು ಬಿಡುಗಡೆ ಮಾಡಿದರು. ಹುಲಿ ಯೋಜನೆ 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಸ್ಮರಣಾರ್ಥ ನಾಣ್ಯವನ್ನೂ ಅವರು ಬಿಡುಗಡೆ ಮಾಡಿದರು.
ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, “ಭಾರತದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹೆಮ್ಮೆಯ ಕ್ಷಣದ ಬಗ್ಗೆ ಪ್ರಸ್ತಾಪಿಸಿದರು. ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಹುಲಿಗಳಿಗೆ ಗೌರವ ಸಲ್ಲಿಸಿದರು. ʻಹುಲಿ ಯೋಜನೆʼಯು ಇಂದು 50 ವರ್ಷಗಳನ್ನು ಪೂರೈಸಿದ ಮೈಲುಗಲ್ಲಿಗೆ ಪ್ರತಿಯೊಬ್ಬರೂ ಸಾಕ್ಷಿಯಾಗಿದ್ದಾರೆ. ಅದರ ಯಶಸ್ಸು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದರು. ಭಾರತವು ಹುಲಿಗಳ ಸಂಖ್ಯೆಯನ್ನು ಕ್ಷೀಣಿಸದಂತೆ ರಕ್ಷಿಸಿರುವುದು ಮಾತ್ರವಲ್ಲದೆ, ಹುಲಿಗಳು ಪ್ರವರ್ಧಮಾನಕ್ಕೆ ಬರುವ ಪರಿಸರ ವ್ಯವಸ್ಥೆಯನ್ನು ಒದಗಿಸಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ 75ನೇ ವರ್ಷದಲ್ಲಿ ವಿಶ್ವದ ಶೇ.75ರಷ್ಟು ಹುಲಿಗಳು ಭಾರತದಲ್ಲಿವೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಭಾರತದ ಹುಲಿ ಮೀಸಲು ಪ್ರದೇಶಗಳು 75,000 ಚದರ ಕಿಲೋಮೀಟರ್ ಭೂಮಿಯನ್ನು ಆವರಿಸಿರುವುದು ಕಾಕತಾಳೀಯವಾಗಿದೆ ಎಂದ ಅವರು, ಕಳೆದ ಹತ್ತರಿಂದ ಹನ್ನೆರಡು ವರ್ಷಗಳಲ್ಲಿ ದೇಶದಲ್ಲಿ ಹುಲಿಗಳ ಸಂಖ್ಯೆ ಶೇಕಡಾ 75 ರಷ್ಟು ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.
ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ವಿಶ್ವದಾದ್ಯಂತದ ವನ್ಯಜೀವಿ ಉತ್ಸಾಹಿಗಳ ಮನಸ್ಸಿನಲ್ಲಿರುವ ಪ್ರಶ್ನೆಯನ್ನು ಪ್ರಧಾನಿ ಪುನರುಚ್ಚರಿಸಿದರು. ಭಾರತದ ಸಂಪ್ರದಾಯಗಳು, ಇಲ್ಲಿನ ಸಂಸ್ಕೃತಿ, ಜೀವವೈವಿಧ್ಯತೆ ಮತ್ತು ಪರಿಸರದ ಬಗ್ಗೆ ಜನರಲ್ಲಿರುವ ಸ್ವಾಭಾವಿಕ ಕಾಳಜಿಯಲ್ಲಿ ಇದಕ್ಕೆ ಉತ್ತರ ಅಡಗಿದೆ ಎಂದು ಹೇಳಿದರು. "ಭಾರತವು ಪರಿಸರ ವಿಜ್ಞಾನ ಮತ್ತು ಆರ್ಥಿಕತೆಯ ನಡುವಿನ ಸಂಘರ್ಷವನ್ನು ನಂಬುವುದಿಲ್ಲ, ಬದಲಿಗೆ ಇವೆರಡರ ಸಹಬಾಳ್ವೆಗೆ ಸಮಾನ ಪ್ರಾಮುಖ್ಯತೆಯನ್ನು ನೀಡುತ್ತದೆ" ಎಂದು ಪ್ರಧಾನಿ ಹೇಳಿದರು. ಭಾರತದ ಇತಿಹಾಸದಲ್ಲಿ ಹುಲಿಗಳ ಮಹತ್ವವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಮಧ್ಯಪ್ರದೇಶದ ಹತ್ತು ಸಾವಿರ ವರ್ಷಗಳಷ್ಟು ಹಳೆಯದಾದ ʻರಾಕ್ ಆರ್ಟ್ʼನಲ್ಲಿ ಹುಲಿಗಳ ರೇಖಾಚಿತ್ರದ ಪ್ರಾತಿನಿಧ್ಯಗಳು ಕಂಡುಬಂದಿವೆ ಎಂದರು. ಮಧ್ಯ ಭಾರತದ ಭರಿಯಾ ಸಮುದಾಯ ಮತ್ತು ಮಹಾರಾಷ್ಟ್ರದ ವರ್ಲಿ ಸಮುದಾಯವು ಹುಲಿಯನ್ನು ಪೂಜಿಸಿದರೆ, ಭಾರತದ ಅನೇಕ ಸಮುದಾಯಗಳು ಹುಲಿಯನ್ನು ಸ್ನೇಹಿತ ಮತ್ತು ಸಹೋದರ ಎಂದು ಪರಿಗಣಿಸುತ್ತವೆ ಎಂದು ಅವರು ಹೇಳಿದರು. ಹುಲಿಯು ದುರ್ಗಾ ಮಾತೆ ಮತ್ತು ಅಯ್ಯಪ್ಪನ ವಾಹನಗಳು ಎಂದು ಅವರು ಹೇಳಿದರು.
ವನ್ಯಜೀವಿ ಸಂರಕ್ಷಣೆಯಲ್ಲಿ ಭಾರತದ ವಿಶಿಷ್ಟ ಸಾಧನೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, "ಪ್ರಕೃತಿ ಸಂರಕ್ಷಣೆಯು ಸಂಸ್ಕೃತಿಯ ಒಂದು ಭಾಗವಾಗಿರುವ ದೇಶ ಭಾರತ," ಎಂದರು. ಭಾರತವು ವಿಶ್ವದ ಭೂಪ್ರದೇಶದ ಕೇವಲ 2.4 ಪ್ರತಿಶತವನ್ನು ಹೊಂದಿದ್ದರೂ ಇದು ಜಾಗತಿಕ ಜೀವವೈವಿಧ್ಯತೆಗೆ 8 ಪ್ರತಿಶತದಷ್ಟು ಕೊಡುಗೆ ನೀಡುತ್ತದೆ ಎಂದು ಅವರು ಉಲ್ಲೇಖಿಸಿದರು. ಭಾರತವು ವಿಶ್ವದಲ್ಲೇ ಅತಿದೊಡ್ಡ ಹುಲಿ ವ್ಯಾಪ್ತಿ ಹೊಂದಿರುವ ದೇಶವಾಗಿದೆ. ಸುಮಾರು ಮೂವತ್ತು ಸಾವಿರ ಆನೆಗಳನ್ನು ಹೊಂದಿರುವ ಭಾರತವು ವಿಶ್ವದ ಅತಿದೊಡ್ಡ ಏಷ್ಯಾಟಿಕ್ ಆನೆಗಳಿಗೆ ನೆಲೆಯಾಗಿದೆ. ಭಾರತದಲ್ಲಿ ಸುಮಾರು ಮೂರು ಸಾವಿರ ಒಂಟಿ ಕೊಂಬಿನ ಖಡ್ಗಮೃಗಗಳಿದ್ದು, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇವುಗಳನ್ನು ಹೊಂದಿರುವ ಅತಿದೊಡ್ಡ ದೇಶವಾಗಿದೆ ಎಂದು ಅವರು ಮಾಹಿತಿ ನೀಡಿದರು. ಏಷ್ಯಾಟಿಕ್ ಸಿಂಹಗಳನ್ನು ಹೊಂದಿರುವ ವಿಶ್ವದ ಏಕೈಕ ದೇಶ ಭಾರತವಾಗಿದೆ ಮತ್ತು ಅವುಗಳ ಸಂಖ್ಯೆಯು 2015ರಲ್ಲಿ ಸುಮಾರು 525 ಇದ್ದದ್ದು 2020ರಲ್ಲಿ ಸುಮಾರು 675ಕ್ಕೆ ಏರಿದೆ ಎಂದು ಅವರು ತಿಳಿಸಿದರು. ಭಾರತದ ಚಿರತೆಗಳ ಸಂಖ್ಯೆಯ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಇದು 4 ವರ್ಷಗಳಲ್ಲಿ ಶೇಕಡಾ 60ಕ್ಕಿಂತ ಹೆಚ್ಚಾಗಿದೆ ಎಂದು ಹೇಳಿದರು. ಗಂಗೆಯಂತಹ ನದಿಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಒಂದು ಕಾಲದಲ್ಲಿ ಅಪಾಯದಲ್ಲಿದೆ ಎಂದು ಪರಿಗಣಿಸಲಾಗಿದ್ದ ಕೆಲವು ಜಲಚರ ಪ್ರಭೇದಗಳ ಸಂಖ್ಯೆಯಲ್ಲಿ ಈಗ ಸುಧಾರಣೆ ಕಂಡುಬಂದಿದೆ ಎಂದರು. ಈ ಸಾಧನೆಗಳಿಗೆ ಜನರ ಭಾಗವಹಿಸುವಿಕೆ ಮತ್ತು ಸಂರಕ್ಷಣೆಯ ಸಂಸ್ಕೃತಿಯನ್ನು ಅವರು ಶ್ಲಾಘಿಸಿದರು.
"ವನ್ಯಜೀವಿಗಳು ಅಭಿವೃದ್ಧಿ ಹೊಂದಲು ಪರಿಸರ ವ್ಯವಸ್ಥೆಗಳು ಅಭಿವೃದ್ಧಿ ಹೊಂದುವುದು ಬಹಳ ಮುಖ್ಯ," ಎಂದು ಹೇಳಿದ ಪ್ರಧಾನಿಯವರು, ಭಾರತದಲ್ಲಿ ಈ ನಿಟ್ಟಿನಲ್ಲಿ ಮಾಡಲಾದ ಕಾರ್ಯಗಳನ್ನು ಉಲ್ಲೇಖಿಸಿದರು. ದೇಶ ʻರಾಮ್ಸರ್ ತಾಣʼಗಳ ಪಟ್ಟಿಗೆ 11 ಜೌಗು ಪ್ರದೇಶಗಳು ಸೇರ್ಪಡೆಗೊಂಡಿದ್ದು, ರಾಮ್ಸರ್ ತಾಣಗಳ ಸಂಖ್ಯೆಯು 75ಕ್ಕೆ ತಲುಪಿದೆ ಎಂದು ಅವರು ಉಲ್ಲೇಖಿಸಿದರು. 2019ಕ್ಕೆ ಹೋಲಿಸಿದರೆ 2021ರ ವೇಳೆಗೆ ಭಾರತದ ಅರಣ್ಯ ಮತ್ತು ಹಸಿರು ಹೊದಿಕೆಗೆ 2200 ಚದರ ಕಿಲೋಮೀಟರ್ ಸೇರ್ಪಡೆಗೊಂಡಿದೆ ಎಂದು ಅವರು ಗಮನ ಸೆಳೆದರು. ಕಳೆದ ದಶಕದಲ್ಲಿ ಸಮುದಾಯ ಮೀಸಲು ಅರಣ್ಯ ಪ್ರದೇಶಗಳ ಸಂಖ್ಯೆಯು 43ರಿಂದ 100ಕ್ಕೆ ಏರಿದೆ. ಪರಿಸರ ಸೂಕ್ಷ್ಮ ವಲಯಗಳೆಂದು ಘೋಷಿಸಲಾದ ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳ ಸಂಖ್ಯೆ 9 ರಿಂದ 468 ಕ್ಕೆ ಏರಿದೆ, ಅದೂ ಒಂದು ದಶಕದಲ್ಲಿ ಈ ಸಾಧನೆಯಾಗಿದೆ ಎಂದರು.
ಗುಜರಾತ್ ಮುಖ್ಯಮಂತ್ರಿಯಾಗಿ ವನ್ಯಜೀವಿ ಸಂರಕ್ಷಣೆಯಲ್ಲಿ ತಮ್ಮ ಅನುಭವವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಸಿಂಹಗಳ ಸಂಖ್ಯೆ ಹೆಚ್ಚಳಕ್ಕೆ ಕೆಲಸ ಮಾಡಿದ್ದನ್ನು ಉಲ್ಲೇಖಿಸಿದರು. ಒಂದು ಭೌಗೋಳಿಕ ಪ್ರದೇಶಕ್ಕೆ ಸೀಮಿತಗೊಳಿಸುವುದರಿಂದ ಕಾಡು ಪ್ರಾಣಿಯನ್ನು ಉಳಿಸಲು ಸಾಧ್ಯವಿಲ್ಲ ಎಂಬ ವಿಷಯವನ್ನು ಒತ್ತಿ ಹೇಳಿದರು. ಸ್ಥಳೀಯ ಜನರು ಮತ್ತು ಪ್ರಾಣಿಗಳ ನಡುವೆ ಭಾವನಾತ್ಮಕ ಮತ್ತು ಆರ್ಥಿಕತೆಯ ಸಂಬಂಧವನ್ನು ಸೃಷ್ಟಿಸುವ ಅಗತ್ಯವನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು. ಗುಜರಾತ್‌ನಲ್ಲಿ ʻವನ್ಯಜೀವಿ ಮಿತ್ರʼ ಯೋಜನೆ ಆರಂಭಿಸಿದ್ದನ್ನು ಪ್ರಸ್ತಾಪಿಸಿದ ಪ್ರಧಾನಿ, ಅಲ್ಲಿ ಬೇಟೆಯಂತಹ ಚಟುವಟಿಕೆಗಳ ಮೇಲೆ ನಿಗಾ ಇಡಲು ನಗದು ಬಹುಮಾನದ ಪ್ರೋತ್ಸಾಹಧನವನ್ನು ನೀಡಲಾಯಿತು. ʻಗಿರ್ʼ ಪ್ರದೇಶದ ಸಿಂಹಗಳಿಗಾಗಿ ಪುನರ್ವಸತಿ ಕೇಂದ್ರವನ್ನು ತೆರೆಯುವುದು ಮತ್ತು ʻಗಿರ್ʼ ಪ್ರದೇಶ ವ್ಯಾಪ್ತಿಯ ಅರಣ್ಯ ಇಲಾಖೆಯಲ್ಲಿ ಮಹಿಳಾ `ಬೀಟ್‌ಗಾರ್ಡ್ʼಗಳು ಮತ್ತು ಫಾರೆಸ್ಟರ್‌ಗಳನ್ನು ನೇಮಕ ಮಾಡಿದ್ದನ್ನು ಅವರು ಉಲ್ಲೇಖಿಸಿದರು. ʻಗಿರ್ʼನಲ್ಲಿ ಈಗ ಸ್ಥಾಪಿಸಲಾಗಿರುವ ಪ್ರವಾಸೋದ್ಯಮ ಮತ್ತು ಪರಿಸರ ಪ್ರವಾಸೋದ್ಯಮದ ಬೃಹತ್ ಪರಿಸರ ವ್ಯವಸ್ಥೆಯ ಬಗ್ಗೆ ಅವರು ಎತ್ತಿ ಹೇಳಿದರು.
ʻಹುಲಿ ಯೋಜನೆʼಯ ಯಶಸ್ಸು ಹಲವು ಆಯಾಮಗಳನ್ನು ಹೊಂದಿದೆ. ಇದು ಪ್ರವಾಸಿ ಚಟುವಟಿಕೆಗಳ ಹೆಚ್ಚಳ, ಜಾಗೃತಿ ಕಾರ್ಯಕ್ರಮಗಳು ಮತ್ತು ಹುಲಿ ಮೀಸಲು ಪ್ರದೇಶಗಳಲ್ಲಿ ಮಾನವ-ಪ್ರಾಣಿ ಸಂಘರ್ಷವನ್ನು ಕಡಿಮೆ ಮಾಡಲು ಕಾರಣವಾಗಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು. "ದೊಡ್ಡ ಬೆಕ್ಕುಗಳ ಉಪಸ್ಥಿತಿಯು ಎಲ್ಲೆಡೆ ಸ್ಥಳೀಯ ಜನರ ಜೀವನ ಮತ್ತು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ" ಎಂದು ಶ್ರೀ ಮೋದಿ ಅವರು ಹೇಳಿದರು.
ದಶಕಗಳ ಹಿಂದೆ ಭಾರತದಲ್ಲಿ ಚೀತಾ ಅಳಿವಿನಂಚಿನಲ್ಲಿತ್ತು ಎಂಬುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾದ ಚೀತಾಗಳ ಬಗ್ಗೆ ಉಲ್ಲೇಖಿಸಿದರು. ಇದು ದೊಡ್ಡ ಬೆಕ್ಕಿನ ಮೊದಲ ಯಶಸ್ವಿ ಭೂಖಂಡಾಂತರ ಸ್ಥಳಾಂತರ ಎಂದು ಹೇಳಿದರು. ಕೆಲವು ದಿನಗಳ ಹಿಂದೆ ʻಕುನೋ ರಾಷ್ಟ್ರೀಯ ಉದ್ಯಾನʼದಲ್ಲಿ 4 ಸುಂದರ ಚೀತಾ ಮರಿಗಳು ಜನಿಸಿವೆ ಎಂದು ಅವರು ಸ್ಮರಿಸಿದರು. ಸುಮಾರು 75 ವರ್ಷಗಳ ಹಿಂದೆ ಅಳಿದುಹೋದ ನಂತರ ಚೀತಾ ಭಾರತದ ಭೂಮಿಯಲ್ಲಿ ಜನಿಸಿರುವುದಾಗಿ ತಿಳಿಸಿದರು. ಜೀವವೈವಿಧ್ಯತೆಯ ರಕ್ಷಣೆ ಮತ್ತು ಸಮೃದ್ಧಿಗಾಗಿ ಅಂತರರಾಷ್ಟ್ರೀಯ ಸಹಕಾರದ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದರು.
"ವನ್ಯಜೀವಿ ಸಂರಕ್ಷಣೆ ಒಂದು ದೇಶದ ಸಮಸ್ಯೆಯಲ್ಲ, ಅದು ಸಾರ್ವತ್ರಿಕ ವಿಷಯವಾಗಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ಅಂತಾರಾಷ್ಟ್ರೀಯ ಮೈತ್ರಿಯ ಅಗತ್ಯವನ್ನು ಒತ್ತಿ ಹೇಳಿದರು. 2019ರಲ್ಲಿ, ʻವಿಶ್ವ ಹುಲಿ ದಿನʼದಂದು ಏಷ್ಯಾದಲ್ಲಿ ಕಳ್ಳಬೇಟೆ ಮತ್ತು ಅಕ್ರಮ ವನ್ಯಜೀವಿ ವ್ಯಾಪಾರದ ವಿರುದ್ಧ ಮೈತ್ರಿಗೆ ಪ್ರಧಾನಿ ಕರೆ ನೀಡಿದ್ದ ಪ್ರಧಾನಿಯವರು, ʻಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಮೈತ್ರಿಕೂಟʼವು ಈ ಆಶಯದ ವಿಸ್ತರಣೆಯಾಗಿದೆ ಎಂದು ಹೇಳಿದರು. ಇದರ ಪ್ರಯೋಜನಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಭಾರತ ಸೇರಿದಂತೆ ವಿವಿಧ ದೇಶಗಳ ಅನುಭವಗಳಿಂದ ಹೊರಹೊಮ್ಮಿದ ಸಂರಕ್ಷಣೆ ಮತ್ತು ಸುರಕ್ಷತಾ ಕಾರ್ಯಸೂಚಿಯನ್ನು ಸುಲಭವಾಗಿ ಕಾರ್ಯಗತಗೊಳಿಸಬಹುದು. ದೊಡ್ಡ ಬೆಕ್ಕಿಗೆ ಸಂಬಂಧಿಸಿದ ಸಂಪೂರ್ಣ ಪರಿಸರ ವ್ಯವಸ್ಥೆಗೆ ಆರ್ಥಿಕ ಮತ್ತು ತಾಂತ್ರಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸುವುದು ಇದರಿಂದ ಸುಲಭವಾಗಲಿದೆ ಎಂದು ಹೇಳಿದರು. "ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಪೂಮಾ, ಜಾಗ್ವಾರ್ ಮತ್ತು ಚೀತಾ ಸೇರಿದಂತೆ ವಿಶ್ವದ 7 ಪ್ರಮುಖ ದೊಡ್ಡ ಬೆಕ್ಕುಗಳ ಸಂರಕ್ಷಣೆಯ ಮೇಲೆ ʻಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಮೈತ್ರಿಕೂಟʼ ಗಮನ ಹರಿಸಲಿದೆ," ಎಂದು ಪ್ರಧಾನಿ ಹೇಳಿದರು. ಈ ದೊಡ್ಡ ಬೆಕ್ಕುಗಳಿಗೆ ನೆಲೆಯಾಗಿರುವ ದೇಶಗಳು ಈ ಮೈತ್ರಿಕೂಟದ ಭಾಗವಾಗಲಿವೆ ಎಂದು ವಿವರಿಸಿದರು. ಸದಸ್ಯ ರಾಷ್ಟ್ರಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ತಮ್ಮ ಮಿತ್ರ ದೇಶಕ್ಕೆ ತ್ವರಿತವಾಗಿ ಸಹಾಯ ಮಾಡಲು ಹಾಗೂ ಸಂಶೋಧನೆ, ತರಬೇತಿ ಮತ್ತು ಸಾಮರ್ಥ್ಯವರ್ಧನೆಗೆ ಒತ್ತು ನೀಡಲು ಸಾಧ್ಯವಾಗುತ್ತದೆ ಎಂದು ಅವರು ವಿವರಿಸಿದರು. "ನಾವು ಒಟ್ಟಾಗಿ ಈ ಪ್ರಭೇದಗಳನ್ನು ಅಳಿವಿನಿಂದ ರಕ್ಷಿಸುತ್ತೇವೆ, ಸುರಕ್ಷಿತ ಮತ್ತು ಆರೋಗ್ಯಕರ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತೇವೆ" ಎಂದು ಶ್ರೀ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಭಾರತದ ʻಜಿ-20ʼ ಅಧ್ಯಕ್ಷತೆಗೆ ನೀಡಲಾಗಿರುವ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಧ್ಯೇಯವಾಕ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ನಮ್ಮ ಪರಿಸರವು ಸುರಕ್ಷಿತವಾಗಿದ್ದರೆ ಮತ್ತು ನಮ್ಮ ಜೀವವೈವಿಧ್ಯತೆಯು ವಿಸ್ತರಿಸುತ್ತಲೇ ಇದ್ದರೆ ಮಾತ್ರ ಮನುಕುಲಕ್ಕೆ ಉತ್ತಮ ಭವಿಷ್ಯ ಸಾಧ್ಯ ಎಂಬ ಸಂದೇಶವನ್ನು ಇದು ಸಾರುತ್ತದೆ ಎಂದರು. "ಈ ಜವಾಬ್ದಾರಿ ನಮ್ಮೆಲ್ಲರಿಗೂ ಸೇರಿದ್ದಾಗಿದೆ, ಇದು ಇಡೀ ಜಗತ್ತಿನ ಜವಾಬ್ದಾರಿಯಾಗಿದೆ," ಎಂದು ಅವರು ಪುನರುಚ್ಚರಿಸಿದರು. ʻಹವಾಮಾನ ಶೃಂಗಸಭೆʼ(ಸಿಒಪಿ26) ಅನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಭಾರತವು ದೊಡ್ಡ ಮತ್ತು ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿದೆ ಎಂದರು. ಪರಿಸರ ಸಂರಕ್ಷಣೆಯ ಪ್ರತಿಯೊಂದು ಗುರಿಯನ್ನು ಸಾಧಿಸಲು ಪರಸ್ಪರ ಸಹಕಾರವು ಸಹಾಯಕವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವಿದೇಶಿ ಅತಿಥಿಗಳು ಮತ್ತು ಗಣ್ಯರನ್ನುದ್ದೇಶಿಸಿ ತಮ್ಮ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತದ ಬುಡಕಟ್ಟು ಸಮುದಾಯಗಳ ಜೀವನ ಮತ್ತು ಸಂಪ್ರದಾಯಗಳಿಂದ ಕಲಿಯುವಂತೆ ಅವರನ್ನು ಒತ್ತಾಯಿಸಿದರು. ಸಹ್ಯಾದ್ರಿ ಮತ್ತು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಶತಮಾನಗಳಿಂದ ಹುಲಿ ಸೇರಿದಂತೆ ಪ್ರತಿಯೊಂದು ಜೀವವೈವಿಧ್ಯತೆಯನ್ನು ಶ್ರೀಮಂತಗೊಳಿಸುವಲ್ಲಿ ಈ ಸಮುದಾಯದ ಜನರು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು. ಬುಡಕಟ್ಟು ಸಮಾಜವು ಪ್ರಕೃತಿಯಿಂದ ಕೊಡು-ಕೊಳ್ಳುವಿಕೆಯ ಸಮತೋಲನ ಹೊಂದಿರುತ್ತದೆ. ಇದೇ ಸಂಪ್ರದಾಯವನ್ನು ನಾವು ಅಳವಡಿಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು. ಭಾಷಣದ ಕೊನೆಯಲ್ಲಿ ಪ್ರಧಾನಮಂತ್ರಿಯವರು ʻಆಸ್ಕರ್ ಪ್ರಶಸ್ತಿʼ ವಿಜೇತ ಸಾಕ್ಷ್ಯಚಿತ್ರ 'ದಿ ಎಲಿಫೆಂಟ್ ವಿಸ್ಪರ್ಸ್ʼ ಅನ್ನು ಉಲ್ಲೇಖಿಸಿದರು. ಇದು ಪ್ರಕೃತಿ ಮತ್ತು ಜೀವಿಗಳ ನಡುವಿನ ಅದ್ಭುತ ಸಂಬಂಧದ ನಮ್ಮ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ ಎಂದರು. "ಬುಡಕಟ್ಟು ಸಮಾಜದ ಜೀವನಶೈಲಿಯು ʻಮಿಷನ್ ಲೈಫ್ʼ (ಪರಿಸರಕ್ಕಾಗಿ ಜೀವನಶೈಲಿ – Mission LiFE) ಆಶಯವನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಸಹಾಯ ಮಾಡುತ್ತದೆ", ಎಂದು ಹೇಳುವ ಮೂಲಕ ಪ್ರಧಾನಿಯವರು ಮಾತು ಮುಗಿಸಿದರು.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದರ್ ಯಾದವ್ ಮತ್ತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಹಾಯಕ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಪ್ರಧಾನಮಂತ್ರಿಯವರು ʻಅಂತಾರಾಷ್ಟ್ರೀಯ ಬಿಗ್ ಕ್ಯಾಟ್ಸ್ ಮೈತ್ರಿಕೂಟಕ್ಕೆ (ಐಬಿಸಿಎ) ಚಾಲನೆ ನೀಡಿದರು. ಜುಲೈ 2019ರಲ್ಲಿ, ಪ್ರಧಾನಿಯವರು ಏಷ್ಯಾದಲ್ಲಿ ಕಳ್ಳಬೇಟೆ ಮತ್ತು ಅಕ್ರಮ ವನ್ಯಜೀವಿ ವ್ಯಾಪಾರವನ್ನು ಕಟ್ಟುನಿಟ್ಟಾಗಿ ನಿಗ್ರಹಿಸಲು ಜಾಗತಿಕ ನಾಯಕರ ಮೈತ್ರಿಕೂಟ ರಚನೆಗೆ ಕರೆ ನೀಡಿದ್ದರು. ಪ್ರಧಾನಮಂತ್ರಿಯವರ ಕರೆಯ ವಿಸ್ತರಣೆಯ ಭಾಗವಾಗಿ, ʻಅಂತರರಾಷ್ಟ್ರೀಯ ಬಿಗ್ ಕ್ಯಾಟ್ಸ್ ಮೈತ್ರಿಕೂಟʼ ಪ್ರಾರಂಭಿಸಲಾಗುತ್ತಿದೆ. ಈ ಮೈತ್ರಿ ಕೂಟವು ವಿಶ್ವದ ಏಳು ಪ್ರಮುಖ ದೊಡ್ಡ ಬೆಕ್ಕುಗಳಾದ ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಪೂಮಾ, ಜಾಗ್ವಾರ್ ಮತ್ತು ಚೀತಾಗಳನ್ನು ಹೊಂದಿರುವ ಸದಸ್ಯ ದೇಶಗಳಲ್ಲಿ ಇವುಗಳ ರಕ್ಷಣೆ ಮತ್ತು ಭದ್ರತೆ ಮೇಲೆ ಗಮನ ಕೇಂದ್ರೀಕರಿಸುತ್ತದೆ.
The success of Project Tiger is a matter of pride not only for India but for the whole world. pic.twitter.com/ucde8TPMZq
— PMO India (@PMOIndia) April 9, 2023
We do not believe in conflict between ecology and economy, but give importance to co-existence between the two. pic.twitter.com/hRv0xzsdK3
— PMO India (@PMOIndia) April 9, 2023
India is a country where protecting nature is part of culture. pic.twitter.com/0y3lLJMHeb
— PMO India (@PMOIndia) April 9, 2023
For wildlife to thrive, it is important for ecosystems to thrive.
— PMO India (@PMOIndia) April 9, 2023
This has been happening in India. pic.twitter.com/hSFkvGYlbj
Big Cats की मौजूदगी ने हर जगह स्थानीय लोगों के जीवन और वहां की ecology पर सकारात्मक असर डाला है। pic.twitter.com/L5E61uyQA3
— PMO India (@PMOIndia) April 9, 2023
Cheetahs had become extinct in India decades ago.
— PMO India (@PMOIndia) April 9, 2023
We brought this magnificent big cat to India from Namibia and South Africa.
This is the first successful trans-continental translocation of the big cat. pic.twitter.com/WLwHZXU8Gl
Protection of wildlife is a universal issue.
— PMO India (@PMOIndia) April 9, 2023
International Big Cat Alliance is our endeavour for protection and conservation of the big cats. pic.twitter.com/dLS3TRQGd4