ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಸಂದೇಶದ ಮೂಲಕ ಗೋವಾದಲ್ಲಿ ನಡೆದ ಜಿ-20 ಪ್ರವಾಸೋದ್ಯಮ ಸಚಿವರ ಸಭೆ ಉದ್ದೇಶಿಸಿ ಭಾಷಣ ಮಾಡಿದರು.
ಇನ್‌ಕ್ರೆಡಿಬಲ್ ಇಂಡಿಯಾದ ಚೈತನ್ಯವನ್ನು ಪ್ರಸ್ತಾಪಿಸಿದ ಅವರು, ಸಮಾವೇಶದಲ್ಲಿ ನೆರೆದಿರುವ ಎಲ್ಲಾ ಪ್ರವಾಸೋದ್ಯಮ ಸಚಿವರು ಜಾಗತಿಕವಾಗಿ 2 ಟ್ರಿಲಿಯನ್ ಡಾಲರ್‌ಗಿಂತ ಹೆಚ್ಚಿನ ಮೌಲ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ನಿರ್ವಹಿಸುತ್ತಿದ್ದರೂ ಸಹ ಅವರು ಪ್ರವಾಸಿಗರಾಗುವ ಅಪರೂಪದ ಅವಕಾಶ ಪಡೆದಿದ್ದಾರೆ. ಜಿ-20 ಪ್ರವಾಸೋದ್ಯಮ ಸಚಿವರ ಸಮಾವೇಶವು ಭಾರತದ ನೆಚ್ಚಿನ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಗೋವಾದಲ್ಲಿ ನಡೆಯುತ್ತಿದೆ. ಇಲ್ಲಿರುವ ಗಣ್ಯರು ತಮ್ಮ ಗಂಭೀರ ಚರ್ಚೆಗಳ ನಡುವೆ ಸ್ವಲ್ಪ ವಿರಾಮ ಪಡೆದು, ಗೋವಾದ ನೈಸರ್ಗಿಕ ಸೌಂದರ್ಯ ಮತ್ತು ಆಧ್ಯಾತ್ಮಿಕ ತಾಣಗಳನ್ನು ಕಣ್ತುಂಬಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರವಾಸೋದ್ಯಮಕ್ಕೆ ಭಾರತದ ಕಾರ್ಯವಿಧಾನವು ‘ಅತಿಥಿ ದೇವೋ ಭವಃ’ ಅಂದರೆ ‘ಅತಿಥಿಯೇ ದೇವರು’ ಎಂಬ ಪ್ರಾಚೀನ ಸಂಸ್ಕೃತ ಶ್ಲೋಕವನ್ನು ಆಧರಿಸಿದೆ. ಪ್ರವಾಸೋದ್ಯಮ ಎಂದರೆ ಕೇವಲ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುವುದಲ್ಲ, ಅದೊಂದು ಮನಸ್ಸನ್ನು ತಲ್ಲೀನಗೊಳಿಸುವ ನೈಜ ಅನುಭವ. "ಸಂಗೀತವಾಗಲಿ, ಆಹಾರವಾಗಲಿ, ಕಲೆಯಾಗಲಿ ಅಥವಾ ಸಂಸ್ಕೃತಿಯಾಗಲಿ, ಭಾರತದ ವೈವಿಧ್ಯತೆಯು ನಿಜವಾಗಿಯೂ ಭವ್ಯವಾಗಿದೆ, ಶ್ರೀಮಂತವಾಗಿದೆ". ಹಿಮಾಲಯ ಶಿಖರ, ದಟ್ಟವಾದ ಕಾಡುಗಳು, ಒಣ ಮರುಭೂಮಿಗಳು, ಸುಂದರವಾದ ಕಡಲತೀರಗಳು, ಸಾಹಸ ಕ್ರೀಡೆಗಳು ಸೇರಿದಂತೆ ಭಾರತವು ತನ್ನ ಗರ್ಭದಲ್ಲಿ ಎಲ್ಲವನ್ನೂ, ಎಲ್ಲರನ್ನೂ ಹೊಂದಿದೆ. ಭಾರತವು ತನ್ನ ಜಿ-20 ಅಧ್ಯಕ್ಷತೆಯಲ್ಲಿ ದೇಶಾದ್ಯಂತ 100 ವಿವಿಧ ಸ್ಥಳಗಳಲ್ಲಿ ಸುಮಾರು 200 ಸಮಾವೇಶಗಳನ್ನು ಆಯೋಜಿಸುತ್ತಿದೆ. ಈ ಸಮಾವೇಶಗಳಿಗೆ ಈಗಾಗಲೇ ಭಾರತಕ್ಕೆ ಭೇಟಿ ನೀಡಿರುವ ನಿಮ್ಮ ಸ್ನೇಹಿತರನ್ನು ಕೇಳಿದರೆ, ಯಾವುದೇ ಎರಡು ಸುಖಾನುಭವಗಳು ಒಂದೇ ರೀತಿ ಇರುವುದಿಲ್ಲ ಎಂಬುದು ನನಗೆ ಖಾತ್ರಿಯಿದೆ" ಎಂದು ಪ್ರಧಾನಿ ಹೇಳಿದರು.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯ ರೂಪಿಸುವುದರೊಂದಿಗೆ ಅದರ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಲು ಸಹ ಭಾರತದ ಪ್ರಯತ್ನಗಳು ಕೇಂದ್ರೀಕೃತವಾಗಿವೆ. ಭಾರತವು ವಿಶ್ವದ ಪ್ರತಿಯೊಂದು ಪ್ರಮುಖ ಧರ್ಮದ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. ಆಧ್ಯಾತ್ಮಿಕ ಪ್ರವಾಸೋದ್ಯಮವು ಅಭಿವೃದ್ಧಿಯನ್ನು ಕೇಂದ್ರೀಕರಿಸುವ ಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾದ ಸನಾತನ ನಗರ ವಾರಾಣಸಿಯಲ್ಲಿ ಮೂಲಸೌಕರ್ಯಗಳ ನವೀಕರಣವು 10 ಪಟ್ಟು ಹೆಚ್ಚಳವಾಗಿದೆ. ಅಲ್ಲದೆ, ಭಾರತವು ಹೊಸ ಪ್ರವಾಸಿ ಆಕರ್ಷಣೆಯ ತಾಣಗಳನ್ನು ಸೃಷ್ಟಿಸುತ್ತಿದೆ. ವಿಶ್ವದಲ್ಲೇ ಅತಿ ಎತ್ತರದ ‘ಏಕತಾ ಪ್ರತಿಮೆ’ಯ ಉದಾಹರಣೆ ನೀಡಿದ ಪ್ರಧಾನಿ, ಇದು ಉದ್ಘಾಟನೆಯಾದ 1 ವರ್ಷದಲ್ಲಿ ಸುಮಾರು 2.7 ದಶಲಕ್ಷ ಪ್ರವಾಸಿಗರನ್ನು ಆಕರ್ಷಿಸಿದೆ. ಕಳೆದ 9 ವರ್ಷಗಳಲ್ಲಿ, ದೇಶದ ಪ್ರವಾಸೋದ್ಯಮದ ಸಂಪೂರ್ಣ ಪರಿಸರ ವ್ಯವಸ್ಥೆ ಅಭಿವೃದ್ಧಿಪಡಿಸಲು ನಾವು ವಿಶೇಷ ಒತ್ತು ನೀಡಿದ್ದೇವೆ. ಸಾರಿಗೆ ಮೂಲಸೌಕರ್ಯದಿಂದ ಆತಿಥ್ಯ ವಲಯದವರೆಗೆ ಮತ್ತು ಕೌಶಲ್ಯ ಅಭಿವೃದ್ಧಿಯವರೆಗೆ, ಜತೆಗೆ ನಮ್ಮ ವೀಸಾ ವ್ಯವಸ್ಥೆಯಲ್ಲೂ ಸಹ, ನಾವು ಪ್ರವಾಸೋದ್ಯಮ ಕ್ಷೇತ್ರವನ್ನು ನಮ್ಮ ಸುಧಾರಣೆಗಳ ಕೇಂದ್ರಬಿಂದುವಾಗಿ ಇರಿಸಿದ್ದೇವೆ. ಆತಿಥ್ಯ ಕ್ಷೇತ್ರವು ಉದ್ಯೋಗ ಸೃಷ್ಟಿ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಆರ್ಥಿಕ ಪ್ರಗತಿಯ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ಪ್ರವಾಸೋದ್ಯಮದಲ್ಲಿ ಹೆಚ್ಚಿನ ಮಹಿಳೆಯರು ಮತ್ತು ಯುವಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳ ತ್ವರಿತ ಸಾಧನೆಗಾಗಿ ಪ್ರವಾಸೋದ್ಯಮ ಕ್ಷೇತ್ರದ ಪ್ರಸ್ತುತತೆಯನ್ನು ಸಹ ಭಾರತವೂ ಗುರುತಿಸುತ್ತಿದೆ ಎಂದು ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದರು.
ಹಸಿರು ಪ್ರವಾಸೋದ್ಯಮ, ಡಿಜಿಟಲೀಕರಣ, ಕೌಶಲ್ಯ ಅಭಿವೃದ್ಧಿ, ಪ್ರವಾಸೋದ್ಯಮ ಎಂಎಸ್‌ಎಂಇಗಳು ಮತ್ತು ಗಮ್ಯಸ್ಥಾನ ನಿರ್ವಹಣೆಯ 5 ಅಂತರ್-ಸಂಪರ್ಕಿತ ಆದ್ಯತೆಯ ಕ್ಷೇತ್ರಗಳು ಭಾರತ ಮತ್ತು ಜಾಗತಿಕ ದಕ್ಷಿಣ ಭಾಗದ ಆದ್ಯತೆಗಳನ್ನು ಪ್ರತಿಬಿಂಬಿಸುತ್ತಿವೆ. ಆವಿಷ್ಕಾರ ಅಥವಾ ನಾವೀನ್ಯತೆ ಹೆಚ್ಚಿಸಲು ಕೃತಕ ಬುದ್ಧಿಮತ್ತೆ ಮತ್ತು ವರ್ಧಿತ ವಾಸ್ತವತೆಯಂತಹ ಉದಯೋನ್ಮುಖ ತಂತ್ರಜ್ಞಾನಗಳ ಹೆಚ್ಚಿನ ಬಳಕೆ ಮಾಡಲಾಗುತ್ತಿದೆ. ದೇಶದಲ್ಲಿ ಮಾತನಾಡುವ ವಿವಿಧ ಭಾಷೆಗಳ ನೈಜ-ಸಮಯದ ಅನುವಾದ ಸಕ್ರಿಯಗೊಳಿಸುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದತ್ತ ಭಾರತ ಕೆಲಸ ಮಾಡುತ್ತಿದೆ. ಸರ್ಕಾರಗಳು, ಉದ್ಯಮಿಗಳು, ಹೂಡಿಕೆದಾರರು ಮತ್ತು ಶೈಕ್ಷಣಿಕ ವಲಯದ ಸಹಯೋಗವು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಂತಹ ತಾಂತ್ರಿಕ ಅನುಷ್ಠಾನವನ್ನು ವೇಗಗೊಳಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಪ್ರವಾಸೋದ್ಯಮ ಕಂಪನಿಗಳಿಗೆ ವ್ಯಾಪಾರ ನಿಯಮಾವಳಿಗಳನ್ನು ಸರಾಗಗೊಳಿಸಲು ಮತ್ತು ಹಣಕಾಸಿನ ಪ್ರವೇಶವನ್ನು ಹೆಚ್ಚಿಸಲು ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಲು, ಅವರಿಗೆ ಸಹಾಯ ಮಾಡಲು ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಪ್ರಧಾನಿ ಸಲಹೆ ನೀಡಿದರು.
"ಭಯೋತ್ಪಾದನೆ ಜನರನ್ನ ವಿಭಜನೆ ಮಾಡುತ್ತದೆ, ಆದರೆ ಪ್ರವಾಸೋದ್ಯಮ ಒಟ್ಟುಗೂಡಿಸುತ್ತದೆ. ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ಮೂಲಕ ಸೌಹಾರ್ದಯುತ ಸಮಾಜ ನಿರ್ಮಾಣ ಮಾಡುವ ಸಾಮರ್ಥ್ಯ ಪ್ರವಾಸೋದ್ಯಮಕ್ಕಿದೆ. ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಘಟನೆ(UNWTO) ಸಹಭಾಗಿತ್ವದಲ್ಲಿ ಜಿ-20 ಪ್ರವಾಸೋದ್ಯಮ ಡ್ಯಾಶ್‌ಬೋರ್ಡ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮೋದಿ ಸಂತಸ ವ್ಯಕ್ತಪಡಿಸಿದರು, ಇದು ಅತ್ಯುತ್ತಮ ಅಭ್ಯಾಸಗಳು, ಕೇಸ್ ಸ್ಟಡೀಸ್ ಮತ್ತು ಸ್ಫೂರ್ತಿದಾಯಕ ಕಥೆಗಳನ್ನು ಒಟ್ಟುಗೂಡಿಸುವ ಮೊದಲ ರೀತಿಯ ವೇದಿಕೆಯಾಗಿದೆ. ಪ್ರವಾಸೋದ್ಯಮದ ಪರಿವರ್ತಕ ಶಕ್ತಿಯನ್ನು ಅರಿತುಕೊಳ್ಳಲು ಸಮಾಲೋಚನೆಗಳು ಮತ್ತು 'ಗೋವಾ ಮಾರ್ಗಸೂಚಿ' ಸಾಮೂಹಿಕ ಪ್ರಯತ್ನಗಳನ್ನು ಗುಣಿಸುತ್ತದೆ ಎಂದರು. "ಭಾರತದ ಜಿ-20 ಅಧ್ಯಕ್ಷೀಯ ಧ್ಯೇಯವಾಕ್ಯ 'ವಸುಧೈವ ಕುಟುಂಬಕಮ್' - 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಇದು ಸ್ವತಃ ಜಾಗತಿಕ ಪ್ರವಾಸೋದ್ಯಮಕ್ಕೆ ಧ್ಯೇಯವಾಕ್ಯವಾಗಬಹುದು" ಎಂದು ಅವರು ಹೇಳಿದರು.
ಗೋವಾದಲ್ಲಿ ನಡೆಯಲಿರುವ ಸಾವೋ ಜೋವೋ ಉತ್ಸವ ಪ್ರಸ್ತಾಪಿಸಿದ ಪ್ರಧಾನಿ, ಭಾರತವು ಹಬ್ಬಗಳ ನಾಡು ಎಂದರು. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಉಲ್ಲೇಖಿಸಿದ ಪ್ರಧಾನಿ, ಪ್ರಜಾಪ್ರಭುತ್ವದ ತಾಯಿ ನೆಲದಲ್ಲಿ ಪ್ರಜಾಪ್ರಭುತ್ವದ ಹಬ್ಬ ವೀಕ್ಷಿಸಲು ಗಣ್ಯರೆಲ್ಲರೂ ಭಾರತಕ್ಕೆ ಬರಬೇಕು ಎಂದು ಮನವಿ ಮಾಡಿದರು. ಸುಮಾರು 1 ಶತಕೋಟಿ ಮತದಾರರು 1 ತಿಂಗಳ ಕಾಲ ಸಕ್ರಿಯವಾಗಿ ಭಾಗವಹಿಸಲಿದ್ದು, ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ ತಮ್ಮ ಅಚಲ ನಂಬಿಕೆಯನ್ನು ಪುನರುಚ್ಚರಿಸುತ್ತಾರೆ. "1 ದಶಲಕ್ಷಕ್ಕಿಂತ ಹೆಚ್ಚಿನ ಮತಗಟ್ಟೆಗಳೊಂದಿಗೆ ನಡೆಯುವ ಚುನಾವಣೆಯ ಈ ಉತ್ಸವವನ್ನು ಅದರ ಎಲ್ಲಾ ವೈವಿಧ್ಯತೆಗಳಲ್ಲಿ ವೀಕ್ಷಿಸಲು ನಿಮಗೆ ಸ್ಥಳಗಳ ಕೊರತೆ ಇರುವುದಿಲ್ಲ". ಪ್ರಜಾಪ್ರಭುತ್ವ ಹಬ್ಬದ ಸಂದರ್ಭದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡುವ ಮೂಲಕ ಪ್ರಧಾನಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.