ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೀಡಿಯೊ ಕಾನ್ಪರೆನ್ಸ್ ಮೂಲಕ ಗೋವಾದಲ್ಲಿಂದು ನಡೆದ ಜಿ-20 ಇಂಧನ ಸಚಿವರ ಸಮಾವೇಶ ಉದ್ದೇಶಿಸಿ ಮಾತನಾಡಿದರು.
ಭಾರತಕ್ಕೆ ಗಣ್ಯರನ್ನು ಸ್ವಾಗತಿಸಿದ ಪ್ರಧಾನ ಮಂತ್ರಿ, ಭವಿಷ್ಯ, ಸುಸ್ಥಿರತೆ, ಬೆಳವಣಿಗೆ ಮತ್ತು ಅಭಿವೃದ್ಧಿಯ ಬಗ್ಗೆ ಯಾವುದೇ ಚರ್ಚೆಯು ಇಂಧನ ವಲಯದ ಅಭಿವೃದ್ಧಿ ಉಲ್ಲೇಖಿಸದೆ ಅಪೂರ್ಣವಾಗುತ್ತದೆ. ಏಕೆಂದರೆ ಅದು ಎಲ್ಲಾ ಹಂತಗಳಲ್ಲಿ ವ್ಯಕ್ತಿಯಿಂದ ಹಿಡಿದು ರಾಷ್ಟ್ರದ ತನಕ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಪ್ರತಿಯೊಂದು ರಾಷ್ಟ್ರವು ವಿಭಿನ್ನವಾದ ವಾಸ್ತವತೆ ಮತ್ತು ಇಂಧನ ಪರಿವರ್ತನೆಯ ಮಾರ್ಗ ಹೊಂದಿದ್ದರೂ ಸಹ, ಪ್ರತಿಯೊಂದು ದೇಶದ ಗುರಿಗಳು ಒಂದೇ ಆಗಿರುತ್ತವೆ. ಹಸಿರು ಬೆಳವಣಿಗೆ ಮತ್ತು ಇಂಧನ ಸ್ಥಿತ್ಯಂತರದಲ್ಲಿ ಭಾರತದ ಪ್ರಯತ್ನಗಳನ್ನು ಪ್ರಸ್ತಾಪಿಸಿದ ಅವರು, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಮತ್ತು ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ. ಜತೆಗೆ ಅದು ಹವಾಮಾನ ಬದ್ಧತೆಯ ಕಡೆಗೆ ಬಲವಾಗಿ ಚಲಿಸುತ್ತಿದೆ. ಭಾರತವು ತನ್ನ ಉರವಲು ರಹಿತ ಸ್ಥಾಪಿತ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಗುರಿಯನ್ನು 9 ವರ್ಷಗಳ ಮೊದಲೇ ಸಾಧಿಸಿದೆ, ಇನ್ನೂ ಹೆಚ್ಚಿನ ಗುರಿ ಹೊಂದಿದೆ. 2030ರ ವೇಳೆಗೆ ರಾಷ್ಟ್ರವು 50 ಪ್ರತಿಶತ ಉರವಲುರಹಿತ ಸ್ಥಾಪಿತ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಸಾಧಿಸಲು ಯೋಜಿಸಿದೆ. “ಸೌರ ಮತ್ತು ಪವನ ಶಕ್ತಿ ಉತ್ಪಾದನೆಯ ಜಾಗತಿಕ ನಾಯಕರಲ್ಲಿ ಭಾರತವೂ ಒಂದಾಗಿದೆ”, ಪಾವಗಡ ಸೋಲಾರ್ ಪಾರ್ಕ್ ಮತ್ತು ಮೋದಗೇರಾ ಸೋಲಾರ್ ಪಾರ್ಕ್‌ಗೆ ಭೇಟಿ ನೀಡುವ ಮೂಲಕ ಕಾರ್ಯಕಾರಿ ಗುಂಪಿನ ಪ್ರತಿನಿಧಿಗಳು ಭಾರತದ ಬದ್ಧತೆಯ ಮಟ್ಟ ಮತ್ತು ಪ್ರಮಾಣವನ್ನು ವೀಕ್ಷಿಸುವ ಅವಕಾಶ ಪಡೆದುಕೊಂಡಿದ್ದಾರೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು.
ಕಳೆದ 9 ವರ್ಷಗಳಲ್ಲಿ ದೇಶವು ಮಾಡಿರುವ ಸಾಧನೆಗಳನ್ನು ಎತ್ತಿ ಹಿಡಿದ ಪ್ರಧಾನ ಮಂತ್ರಿ, ಭಾರತವು 190 ದಶಲಕ್ಷಕ್ಕಿಂತ ಹೆಚ್ಚಿನ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕಗಳನ್ನು ಕಲ್ಪಿಸಿದೆ. ಪ್ರತಿ ಹಳ್ಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಕೆಲವೇ ವರ್ಷಗಳಲ್ಲಿ ಜನಸಂಖ್ಯೆಯ ಶೇಕಡ 90ಕ್ಕಿಂತ ಹೆಚ್ಚಿನ ಜನರಿಗೆ ಪೈಪ್ ಮೂಲಕ ಅಡುಗೆ ಅನಿಲ ಒದಗಿಸುವ ಕೆಲಸ ಮಾಡಲಾಗುತ್ತಿದೆ. "ಎಲ್ಲರನ್ನು ಒಳಗೊಂಡ, ಚೇತರಿಸಿಕೊಳ್ಳುವ, ಸಮಾನ ಮತ್ತು ಸುಸ್ಥಿರ ಇಂಧನ ಉತ್ಪಾದನೆಗಾಗಿ ಕೆಲಸ ಮಾಡುವುದು ನಮ್ಮ ಪ್ರಯತ್ನವಾಗಿದೆ" ಎಂದು ಅವರು ಹೇಳಿದರು.
2015ರಲ್ಲಿ ಭಾರತವು ಎಲ್ಇಡಿ ದೀಪಗಳ ಬಳಕೆಗಾಗಿ ಯೋಜನೆ ಆರಂಭಿಸುವ ಮೂಲಕ ಒಂದು ಸಣ್ಣ ಆಂದೋಲನ ಪ್ರಾರಂಭಿಸಿತು, ಇದು ವಿಶ್ವದ ಅತಿದೊಡ್ಡ ಎಲ್ಇಡಿ ವಿತರಣಾ ಕಾರ್ಯಕ್ರಮವಾಗಿ ಹೊರಹೊಮ್ಮಿತು, ಇದು ನಮಗೆ ವರ್ಷಕ್ಕೆ 45 ಶತಕೋಟಿ ಯೂನಿಟ್ ಗಳಿಗಿಂತ ಹೆಚ್ಚಿನ ಇಂಧನ ಉಳಿಸುತ್ತಿದೆ. ವಿಶ್ವದ ಅತಿದೊಡ್ಡ ಕೃಷಿ ಪಂಪ್ ಸೋಲಾರೈಸೇಶನ್ ಉಪಕ್ರಮದ ಅಡಿ, 2030ರ ವೇಳೆಗೆ 10 ದಶಲಕ್ಷ ವಾರ್ಷಿಕ ಮಾರಾಟದ ಭಾರತದ ದೇಶೀಯ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮಾರುಕಟ್ಟೆ ಆರಂಭಿಸಲಾಗಿದೆ. 2025ರ ವೇಳೆಗೆ ಇದನ್ನು ಇಡೀ ದೇಶಕ್ಕೆ ಆವರಿಸುವ ಗುರಿ ಹೊಂದಲಾಗಿದ್ದು, 20 ಪ್ರತಿಶತ ಎಥೆನಾಲ್ ಮಿಶ್ರಿತ ಪೆಟ್ರೋಲ್ ಉತ್ಪಾದನೆಯನ್ನು ಈ ವರ್ಷ ಪ್ರಾರಂಭಿಸಲಾಗಿದೆ. ಹಸಿರು ಹೈಡ್ರೋಜನ್ ಮತ್ತು ಅದರ ಉತ್ಪನ್ನಗಳ ಉತ್ಪಾದನೆ, ಬಳಕೆ ಮತ್ತು ರಫ್ತಿಗಾಗಿ ಭಾರತವನ್ನು ಜಾಗತಿಕ ತಾಣವಾಗಿ ಪರಿವರ್ತಿಸಲು ಗುರಿ ಹಾಕಿಕೊಳ್ಳಲಾಗಿದೆ ಎಂದರು.
ಸುಸ್ಥಿರ, ನ್ಯಾಯಯುತ, ಕೈಗೆಟುಕುವ, ಎಲ್ಲರನ್ನೂ ಒಳಗೊಂಡ ಮತ್ತು ಶುದ್ಧ ಇಂಧನ ಪರಿವರ್ತನೆಯನ್ನು ಮುನ್ನಡೆಸಲು ಜಗತ್ತು ಜಿ-20 ಗುಂಪನ್ನು ಎದುರು ನೋಡುತ್ತಿದೆ. ಜಾಗತಿಕ ದಕ್ಷಿಣವನ್ನು ಜೊತೆಗೆ ಕೊಂಡೊಯ್ಯುವ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕಡಿಮೆ-ವೆಚ್ಚದ ಹಣಕಾಸು ಒದಗಿಸುವ ಮಹತ್ವಕ್ಕೆ ಒತ್ತು ನೀಡಬೇಕಿದೆ. ತಂತ್ರಜ್ಞಾನದ ಅಂತರ ನಿವಾರಿಸಲು, ಇಂಧನ ಸುರಕ್ಷತೆ ಉತ್ತೇಜಿಸಲು ಮತ್ತು ಪೂರೈಕೆ ಸರಪಳಿಗಳನ್ನು ವೈವಿಧ್ಯಗೊಳಿಸಲು ಕೆಲಸ ಮಾಡುವ ಮಾರ್ಗಗಳನ್ನು ಕಂಡುಕೊಳ್ಳಬೇಕು. 'ಭವಿಷ್ಯಕ್ಕಾಗಿ ಇಂಧನಗಳ' ಸಹಯೋಗ ಬಲಪಡಿಸಲು ಪ್ರಧಾನಿ ಸಲಹೆ ನೀಡಿದರು.
'ಹೈಡ್ರೋಜನ್ ಮೇಲಿನ ಉನ್ನತ ಮಟ್ಟದ ತತ್ವಗಳು' ಸರಿಯಾದ ದಿಕ್ಕಿನಲ್ಲಿ ಇರುವ ಒಂದು ದಿಟ್ಟ ಹೆಜ್ಜೆಯಾಗಿದೆ. ಅಂತಾರಾಷ್ಟ್ರೀಯ ಗ್ರಿಡ್ ಅಂತರ್-ಸಂಪರ್ಕಗಳು ಇಂಧನ ಭದ್ರತೆಯನ್ನು ಹೆಚ್ಚಿಸಬಹುದು. ಭಾರತವು ತನ್ನ ನೆರೆಹೊರೆಯವರೊಂದಿಗೆ ಈ ಪರಸ್ಪರ ಪ್ರಯೋಜನಕಾರಿ ಸಹಕಾರವನ್ನು ಉತ್ತೇಜಿಸುತ್ತಿದೆ. "ಅಂತರ-ಸಂಪರ್ಕಿತ ಹಸಿರು ಗ್ರಿಡ್‌ಗಳ ದೃಷ್ಟಿಯನ್ನು ಅರಿತುಕೊಳ್ಳುವುದರಿಂದ ಇಂಧನ ಉತ್ಪಾದನೆ ರೂಪಾಂತರಗೊಳ್ಳಬಹುದು. ಇದು ನಮ್ಮ ಹವಾಮಾನ ಗುರಿಗಳನ್ನು ಪೂರೈಸಲು, ಹಸಿರು ಹೂಡಿಕೆಯನ್ನು ಉತ್ತೇಜಿಸಲು ಮತ್ತು ಲಕ್ಷಾಂತರ ಹಸಿರು ಉದ್ಯೋಗಗಳನ್ನು ಸೃಷ್ಟಿಸಲು ನಮಗೆಲ್ಲರಿಗೂ ಅನುವು ಮಾಡಿಕೊಡುತ್ತದೆ” ಎಂದು ಪ್ರಧಾನ ಮಂತ್ರಿ ಹೇಳಿದರು. ಅಂತಾರಾಷ್ಟ್ರೀಯ ಸೌರ ಒಕ್ಕೂಟದ 'ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್' - ಗ್ರೀನ್ ಗ್ರಿಡ್ ಉಪಕ್ರಮಕ್ಕೆ ಸೇರುವಂತೆ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಅವರು ಆಹ್ವಾನ ನೀಡಿದರು.
ಸುತ್ತಮುತ್ತಲಿನ ಪರಿಸರದ ಮೇಲೆ ಕಾಳಜಿ ವಹಿಸುವುದು ನೈಸರ್ಗಿಕ ಅಥವಾ ಸಾಂಸ್ಕೃತಿಕವಾಗಿರಬಹುದು. ಆದರೆ ಇದು ಮಿಷನ್ ಲೈಫ್ - ಪರಿಸರಕ್ಕಾಗಿ ಜೀವನಶೈಲಿ ಬಲಪಡಿಸುವ ಭಾರತದ ಸಾಂಪ್ರದಾಯಿಕ ಬುದ್ಧಿವಂತಿಕೆಯಾಗಿದೆ. ಇದು ನಮ್ಮಲ್ಲಿ ಪ್ರತಿಯೊಬ್ಬರನ್ನು ಹವಾಮಾನ ಚಾಂಪಿಯನ್ ಮಾಡುವ ಆಂದೋಲನವಾಗಿದೆ. ನಮ್ಮ ಆಲೋಚನೆಗಳು ಮತ್ತು ಕಾರ್ಯಗಳು ಯಾವಾಗಲೂ ನಮ್ಮ ‘ಒಂದು ಭೂಮಿ’ ಸಂರಕ್ಷಿಸಲು, ನಮ್ಮ ‘ಒಂದು ಕುಟುಂಬ’ದ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ನಾವು ಹೇಗೆ ಪರಿವರ್ತನೆಯಾಗಿದ್ದರೂ ಹಸಿರು ‘ಒಂದು ಭವಿಷ್ಯ’ದತ್ತ ಸಾಗಲು ಸಹಾಯ ಮಾಡಬೇಕು ಎಂದು ಪ್ರಧಾನ ಮಂತ್ರಿ ಅವರು, ತಮ್ಮ ಭಾಷಣ ಮುಕ್ತಾಯಗೊಳಿಸಿದರು.