ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪುಣೆಯಲ್ಲಿ ನಡೆದ ʻಜಿ 20ʼ ಶಿಕ್ಷಣ ಸಚಿವರ ಸಭೆಯನ್ನುದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಭಾಷಣ ಮಾಡಿದರು.
ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಶಿಕ್ಷಣವು ನಮ್ಮ ನಾಗರಿಕತೆಯ ನಿರ್ಮಾಣಕ್ಕೆ ಅಡಿಪಾಯ ಮಾತ್ರವಲ್ಲ, ಅದು ಮಾನವೀಯತೆಯ ಭವಿಷ್ಯದ ವಾಸ್ತುಶಿಲ್ಪಿಯೂ ಹೌದು ಎಂದರು. ಶಿಕ್ಷಣ ಸಚಿವರನ್ನು ʻಶೆರ್ಪಾʼಗಳು ಎಂದು ಬಣ್ಣಿಸಿದ ಪ್ರಧಾನಿ, ಶಿಕ್ಷಣ ಸಚಿವರು ಮನುಕುಲವನ್ನು ಸರ್ವರಿಗೂ ಅಭಿವೃದ್ಧಿ, ಶಾಂತಿ ಮತ್ತು ಸಮೃದ್ಧಿಯ ನಿಟ್ಟಿನಲ್ಲಿ ಮುನ್ನಡೆಸುತ್ತಿದ್ದಾರೆ ಎಂದರು. ಭಾರತೀಯ ಧರ್ಮಗ್ರಂಥಗಳು ಸಂತೋಷವನ್ನು ತರುವಲ್ಲಿ ಶಿಕ್ಷಣದ ಪಾತ್ರವನ್ನು ವಿವರಿಸುತ್ತವೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. 'ನಿಜವಾದ ಜ್ಞಾನವು ನಮ್ರತೆಯನ್ನು ನೀಡುತ್ತದೆ, ನಮ್ರತೆಯಿಂದ ಯೋಗ್ಯತೆ ಬರುತ್ತದೆ, ಯೋಗ್ಯತೆಯಿಂದ ವ್ಯಕ್ತಿಗಳು ಸಂಪತ್ತನ್ನು ಪಡೆಯುತ್ತಾರೆ, ಸಂಪತ್ತು ಒಬ್ಬ ವ್ಯಕ್ತಿಯನ್ನು ಒಳ್ಳೆಯ ಕಾರ್ಯಗಳನ್ನು ಮಾಡಲು ಶಕ್ತಗೊಳಿಸುತ್ತದೆ ಮತ್ತು ಇದು ಸಂತೋಷವನ್ನು ತರುತ್ತದೆ' ಎಂಬ ಸಂಸ್ಕೃತ ಶ್ಲೋಕವನ್ನು ಪಠಿಸಿದ ಪ್ರಧಾನಿ, ಭಾರತವು ಸಮಗ್ರ ಮತ್ತು ಸರ್ವತೋಮುಖ ಪ್ರಯಾಣವನ್ನು ಪ್ರಾರಂಭಿಸಿದೆ ಎಂದು ಹೇಳಿದರು. ಪ್ರಾಥಮಿಕ ಸಾಕ್ಷರತೆಯು ಭಾರತದಲ್ಲಿ ಯುವಕರಿಗೆ ಬಲವಾದ ತಳಹದಿಯನ್ನು ರೂಪಿಸುತ್ತದೆ, ಜೊತೆಗೆ ಭಾರತವು ಅದನ್ನು ತಂತ್ರಜ್ಞಾನದೊಂದಿಗೆ ಸಂಯೋಜಿಸುತ್ತಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. 'ಗ್ರಹಿಕೆ ಮತ್ತು ಗಣಿತ ಜ್ಞಾನದ ಜೊತೆಗೆ ವಾಚನದಲ್ಲಿ ಪ್ರಾವೀಣ್ಯತೆಗಾಗಿ ರಾಷ್ಟ್ರೀಯ ಉಪಕ್ರಮ' ಅಥವಾ ಸರ್ಕಾರದ 'ನಿಪುನ್ ಭಾರತ್' ಉಪಕ್ರಮವನ್ನು ಅವರು ಇದಕ್ಕೆ ಉದಾಹರಣೆಯಾಗಿ ಒತ್ತಿ ಹೇಳಿದರು. ಇದೇ ವೇಳೆ, 'ಪ್ರಾಥಮಿಕ ಸಾಕ್ಷರತೆ ಮತ್ತು ಗಣಿತ ಜ್ಞಾನ'ವನ್ನು ʻಜಿ 20ʼ ಕೂಡ ಆದ್ಯತೆಯಾಗಿ ಗುರುತಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. 2030ರ ವೇಳೆಗೆ ಕಾಲಮಿತಿಯಲ್ಲಿ ಕೆಲಸ ಮಾಡಬೇಕೆಂದು ಅವರು ಒತ್ತಿ ಹೇಳಿದರು.
ಹೊಸ ಇ-ಕಲಿಕೆ ಅನ್ನು ನವೀನವಾಗಿ ಅಳವಡಿಸಿಕೊಳ್ಳುವ ಮತ್ತು ಬಳಸುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಉತ್ತಮ ಆಡಳಿತದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಇದರ ಉದ್ದೇಶವಾಗಿರಬೇಕು ಎಂದರು. ಈ ದಿಶೆಯಲ್ಲಿ ಸರ್ಕಾರ ಕೈಗೊಂಡ ಹಲವಾರು ಉಪಕ್ರಮಗಳನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು. 'ಯುವ ಮಹತ್ವಾಕಾಂಕ್ಷೆಯ ಮನಸ್ಸುಗಳಿಗಾಗಿ ಸಕ್ರಿಯ ಕಲಿಕೆಯ ಅಧ್ಯಯನ ಜಾಲಗಳು' ಅಥವಾ 'ಸ್ವಯಂ' ಎಂಬ ಆನ್‌ಲೈನ್ ವೇದಿಕೆಯ ಬಗ್ಗೆ ಉಲ್ಲೇಖಿಸಿದರು, ಇದು 9ನೇ ತರಗತಿಯಿಂದ ಸ್ನಾತಕೋತ್ತರ ಹಂತದವರೆಗೆ ಎಲ್ಲಾ ಕೋರ್ಸ್‌ಗಳನ್ನು ಆಯೋಜಿಸುತ್ತದೆ. ಜೊತೆಗೆ ಲಭ್ಯತೆ, ಸಮಾನತೆ ಮತ್ತು ಗುಣಮಟ್ಟದ ಮೇಲೆ ಗಮನ ಕೇಂದ್ರೀಕರಿಸಿ ವಿದ್ಯಾರ್ಥಿಗಳಿಗೆ ದೂರದಿಂದಲೇ ಕಲಿಯಲು ಅನುವು ಮಾಡಿಕೊಡುತ್ತದೆ. "34 ದಶಲಕ್ಷಕ್ಕೂ ಹೆಚ್ಚು ದಾಖಲಾತಿಗಳು ಮತ್ತು 9000ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಒಳಗೊಂಡಿರುವ ಇದು ಅತ್ಯಂತ ಪರಿಣಾಮಕಾರಿ ಕಲಿಕೆಯ ಸಾಧನವಾಗಿ ಮಾರ್ಪಟ್ಟಿದೆ," ಎಂದು ಪ್ರಧಾನಿ ಹೇಳಿದರು. ದೂರಶಿಕ್ಷಣದ ಮೂಲಕ ಶಾಲಾ ಶಿಕ್ಷಣವನ್ನು ತಲುಪಿಸುವ ಗುರಿಯನ್ನು ಹೊಂದಿರುವ 'ಜ್ಞಾನ ಹಂಚಿಕೆಗಾಗಿ ಡಿಜಿಟಲ್ ಮೂಲಸೌಕರ್ಯ' ಅಥವಾ 'ದೀಕ್ಷಾ ಪೋರ್ಟಲ್' ಅನ್ನು ಅವರು ಉಲ್ಲೇಖಿಸಿದರು. ಇದು 29 ಭಾರತೀಯ ಮತ್ತು 7 ವಿದೇಶಿ ಭಾಷೆಗಳಲ್ಲಿ ಕಲಿಕೆಯನ್ನು ಬೆಂಬಲಿಸುತ್ತದೆ ಮತ್ತು ಇದುವರೆಗೆ 137 ದಶಲಕ್ಷಕ್ಕೂ ಹೆಚ್ಚು ಕೋರ್ಸ್ ಸಂಪನ್ನತೆಗೆ ಸಾಕ್ಷಿಯಾಗಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ಈ ಅನುಭವಗಳು ಮತ್ತು ಸಂಪನ್ಮೂಲಗಳನ್ನು ವಿಶೇಷವಾಗಿ ಜಾಗತಿಕ ದಕ್ಷಿಣದ ದೇಶಗಳೊಂದಿಗೆ ಹಂಚಿಕೊಳ್ಳಲು ಭಾರತ ಹರ್ಷಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು.
ನಮ್ಮ ಯುವಕರನ್ನು ನಿರಂತರವಾಗಿ ಕೌಶಲ್ಯವಂತರಾಗಿಸಬೇಕು, ಮರುಕೌಶಲೀಕರಣಗೊಳಿಸಬೇಕು ಮತ್ತು ಉನ್ನತ ಕೌಶಲ್ಯವನ್ನು ಅವರಲ್ಲಿ ಬೆಳೆಸುವ ಮೂಲಕ ಭವಿಷ್ಯಕ್ಕೆ ಸನ್ನದ್ಧರಾಗಿಸುವ ಅಗತ್ಯವಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ವಿಕಸನಗೊಳ್ಳುತ್ತಿರುವ ಕೆಲಸದ ಪ್ರವೃತ್ತಿಗಳು ಮತ್ತು ಕಾರ್ಯವಿಧಾನಗಳ ಜೊತೆ ಯುವಕರ ಸಾಮರ್ಥ್ಯಗಳನ್ನು ಸರಿಹೊಂದಿಸುವ ಅಗತ್ಯದ ಬಗ್ಗೆ ಅವರು ಒತ್ತಿ ಹೇಳಿದರು. ಭಾರತದಲ್ಲಿ ನಾವು ʻಸ್ಕಿಲ್ ಮ್ಯಾಪಿಂಗ್ʼ ಅನ್ನು ಕೈಗೊಳ್ಳುತ್ತಿದ್ದೇವೆ, ಅಲ್ಲಿ ಶಿಕ್ಷಣ, ಕೌಶಲ್ಯ ಮತ್ತು ಕಾರ್ಮಿಕ ಸಚಿವಾಲಯಗಳು ಈ ಉಪಕ್ರಮದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ಮಾಹಿತಿ ನೀಡಿದರು. ʻಜಿ 20ʼ ರಾಷ್ಟ್ರಗಳು ಜಾಗತಿಕ ಮಟ್ಟದಲ್ಲಿ ಕೌಶಲ್ಯ ಮ್ಯಾಪಿಂಗ್ ಕೈಗೊಳ್ಳಬಹುದು ಮತ್ತು ಅಂತರಗಳನ್ನು ಗುರುತಿಸಬಹುದು ಎಂದು ಶ್ರೀ ಮೋದಿ ಸಲಹೆ ನೀಡಿದರು.
ಡಿಜಿಟಲ್ ತಂತ್ರಜ್ಞಾನವು ಸಮತೋಲನ ತರುವ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸರ್ವರ ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ ಎಂದು ಪ್ರಧಾನಿ ಹೇಳಿದರು. ಶಿಕ್ಷಣದ ಲಭ್ಯತೆಯನ್ನು ಹೆಚ್ಚಿಸುವಲ್ಲಿ ಮತ್ತು ಭವಿಷ್ಯದ ಅಗತ್ಯಗಳಿಗೆ ಹೊಂದಿಕೊಳ್ಳುವಲ್ಲಿ ಇದು ಒಂದು ಶಕ್ತಿಯಾಗಿದೆ ಎಂದು ಅವರು ತಿಳಿಸಿದರು. ಕಲಿಕೆ, ಕೌಶಲ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಬಲ್ಲ ನೀಡುವ ʻಕೃತಕ ಬುದ್ಧಿಮತ್ತೆʼಯ(ಎಐ) ಬಗ್ಗೆಯೂ ಅವರು ಮಾತನಾಡಿದರು. ತಂತ್ರಜ್ಞಾನವು ಒಡ್ಡುವ ಅವಕಾಶಗಳು ಮತ್ತು ಸವಾಲುಗಳ ನಡುವೆ ಸರಿಯಾದ ಸಮತೋಲನವನ್ನು ಸಾಧಿಸುವಲ್ಲಿ ʻಜಿ 20ʼ ಪಾತ್ರವನ್ನು ಅವರು ಒತ್ತಿ ಹೇಳಿದರು.
ಸಂಶೋಧನೆ ಮತ್ತು ನಾವೀನ್ಯತೆಗೆ ಸರಕಾರ ಒತ್ತು ನೀಡಿರುವ ಬಗ್ಗೆ ವಿವರಿಸಿದ ಪ್ರಧಾನಮಂತ್ರಿಯವರು, ಭಾರತವು ದೇಶಾದ್ಯಂತ ಹತ್ತು ಸಾವಿರ 'ಅಟಲ್ ಟಿಂಕರಿಂಗ್ ಲ್ಯಾಬ್'ಗಳನ್ನು ಸ್ಥಾಪಿಸಿದೆ, ಇದು ನಮ್ಮ ಶಾಲಾ ಮಕ್ಕಳಿಗೆ ಸಂಶೋಧನೆ ಮತ್ತು ನಾವೀನ್ಯತೆ ನರ್ಸರಿಗಳಾಗಿ ಕಾರ್ಯನಿರ್ವಹಿಸುತ್ತದೆ ಎಂದರು. ಈ ಪ್ರಯೋಗಾಲಯಗಳಲ್ಲಿ 7.5 ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು 1.2 ದಶಲಕ್ಷಕ್ಕೂ ಹೆಚ್ಚು ನವೀನ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಸಂಶೋಧನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವಲ್ಲಿ, ವಿಶೇಷವಾಗಿ ಜಾಗತಿಕ ದಕ್ಷಿಣದಲ್ಲಿ ʻಜಿ 20ʼ ದೇಶಗಳು ತಮ್ಮ ತಮ್ಮ ಸಾಮರ್ಥ್ಯಗಳಿಗೆ ತಕ್ಕಂತೆ ನಿರ್ಣಾಯಕ ಪಾತ್ರ ವಹಿಸಬಹುದು ಎಂದು ಪ್ರಧಾನಿ ಸಲಹೆ ನೀಡಿದರು. ಸಂಶೋಧನಾ ಸಹಯೋಗವನ್ನು ಹೆಚ್ಚಿಸಲು ಒಂದು ಮಾರ್ಗವನ್ನು ಕಂಡುಕೊಳ್ಳುವಂತೆ ಅವರು ಗಣ್ಯರನ್ನು ಒತ್ತಾಯಿಸಿದರು.
ನಮ್ಮ ಮಕ್ಕಳು ಮತ್ತು ಯುವಕರ ಭವಿಷ್ಯದ ನಿಟ್ಟಿನಲ್ಲಿ ʻಜಿ 20ʼ ಶಿಕ್ಷಣ ಸಚಿವರ ಸಭೆಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಹಸಿರು ವಿಧಾನಗಳತ್ತ ಪರಿವರ್ತನೆ, ಡಿಜಿಟಲ್ ರೂಪಾಂತರಗಳು ಮತ್ತು ಮಹಿಳಾ ಸಬಲೀಕರಣವನ್ನು ವೇಗವರ್ಧಕಗಳಾಗಿ ʻಜಿ 20’ ಗುರುತಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. "ಶಿಕ್ಷಣವು ಈ ಎಲ್ಲ ಪ್ರಯತ್ನಗಳ ಮೂಲವಾಗಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ಸಭೆಯ ಫಲಿತಾಂಶವು ಎಲ್ಲರನ್ನೂ ಒಳಗೊಂಡ, ಕ್ರಿಯಾ ಆಧಾರಿತ ಮತ್ತು ಭವಿಷ್ಯ ಸನ್ನದ್ಧ ಶಿಕ್ಷಣ ಕಾರ್ಯಸೂಚಿಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. "ಇದರಿಂದ ʻವಸುದೈವ ಕುಟುಂಬಕಂ - ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯʼ ಎಂಬ ನೈಜ ಆಶಯದಲ್ಲಿ ಇಡೀ ಜಗತ್ತಿಗೆ ಪ್ರಯೋಜನವಾಗುತ್ತದೆ ಎಂದು ಪ್ರಧಾನಿ ಹೇಳಿದರು.