​​​​​​​"ಭಾರತವು ಚಲಿಸುತ್ತಿದೆ ಮತ್ತು ವೇಗವಾಗಿ ಚಲಿಸುತ್ತಿದೆ"
"ಬೆಳೆಯುತ್ತಿರುವ ಆರ್ಥಿಕತೆಯ ಅಂಕಿ-ಸಂಖ್ಯೆಗಳು ಮತ್ತು ಹೆಚ್ಚುತ್ತಿರುವ ಆದಾಯವು ಸಾರಿಗೆ ಕ್ಷೇತ್ರದಲ್ಲಿ ಹೊಸ ವಿಶ್ವಾಸವನ್ನು ತುಂಬುತ್ತವೆ"
"ನಮ್ಮ ಸರ್ಕಾರದ ವೇಗ ಮತ್ತು ಪ್ರಮಾಣವು ಭಾರತದಲ್ಲಿ ಸಂಚಾರದ ವ್ಯಾಖ್ಯಾನವನ್ನು ಬದಲಾಯಿಸಿದೆ"
"ಭಾರತವು ಈಗ ಜಾಗತಿಕ ಆರ್ಥಿಕ ಶಕ್ತಿ ಕೇಂದ್ರವಾಗುವ ಹೊಸ್ತಿಲಲ್ಲಿದೆ, ವಾಹನ ಮತ್ತು ವಾಹನ ಬಿಡಿಭಾಗಗಳ ಉದ್ಯಮವು ಮಹತ್ವದ ಪಾತ್ರ ವಹಿಸುತ್ತಿದೆ"
"ಟ್ರಕ್ ಚಾಲಕರು ಮತ್ತು ಅವರ ಕುಟುಂಬಗಳ ಕಾಳಜಿಯನ್ನು ಸರ್ಕಾರ ಅರ್ಥಮಾಡಿಕೊಂಡಿದೆ"
“ಹೊಸ ಯೋಜನೆಯ ಮೊದಲ ಹಂತದಲ್ಲಿ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಹಾರ, ಶುದ್ಧ ಕುಡಿಯುವ ನೀರು, ಶೌಚಾಲಯಗಳು, ಪಾರ್ಕಿಂಗ್ ಮತ್ತು ಚಾಲಕರಿಗೆ ವಿಶ್ರಾಂತಿ ಸೌಲಭ್ಯಗಳೊಂದಿಗೆ 1000 ಆಧುನಿಕ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ”

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ʻಭಾರತ್ ಮಂಟಪʼದಲ್ಲಿ ನಡೆದ ಭಾರತದ ಅತಿದೊಡ್ಡ ಮತ್ತು ಮೊಟ್ಟಮೊದಲ ಸಂಚಾರ ಕ್ಷೇತ್ರದ ಪ್ರದರ್ಶನ - ʻಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ-2024ʼ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಪ್ರದರ್ಶನ ಮೇಳದಲ್ಲಿ ಹೆಜ್ಜೆ ಹಾಕಿ ಅವರು ವೀಕ್ಷಣೆಯನ್ನೂ ಕೈಗೊಂಡರು. ಸಂಚಾರ ಮತ್ತು ವಾಹನ ಮೌಲ್ಯ ಸರಪಳಿಗಳಲ್ಲಿ ಭಾರತದ ಸಾಮರ್ಥ್ಯಗಳನ್ನು ʻಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋ-2024ʼ ಪ್ರದರ್ಶಿಸುತ್ತದೆ. ಜೊತೆಗೆ ಪ್ರದರ್ಶನಗಳು, ಸಮ್ಮೇಳನಗಳು, ಖರೀದಿದಾರ-ಮಾರಾಟಗಾರರ ಸಭೆಗಳು, ರಾಜ್ಯ ಅಧಿವೇಶನಗಳು, ರಸ್ತೆ ಸುರಕ್ಷತಾ ಪೆವಿಲಿಯನ್ ಹಾಗೂ ʻಗೋ-ಕಾರ್ಟಿಂಗ್ʼನಂತಹ ಸಾರ್ವಜನಿಕ ಕೇಂದ್ರಿತ ಆಕರ್ಷಣೆಗಳನ್ನು ಇದು ಒಳಗೊಂಡಿದೆ.

 

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಭವ್ಯ ಕಾರ್ಯಕ್ರಮ ಆಯೋಜನೆಗಾಗಿ ಭಾರತದ ವಾಹನ ಉದ್ಯಮವನ್ನು ಅಭಿನಂದಿಸಿದರು ಮತ್ತು ಮೇಳದಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದ ಪ್ರದರ್ಶಕರ ಪ್ರಯತ್ನಗಳನ್ನು ಶ್ಲಾಘಿಸಿದರು. ದೇಶದಲ್ಲಿ ಇಂತಹ ಭವ್ಯ ಮತ್ತು ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿರುವುದು ತಮಗೆ ಸಂತೋಷ ಮತ್ತು ಆತ್ಮವಿಶ್ವಾಸವನ್ನು ತುಂಬುತ್ತದೆ ಎಂದು ಪ್ರಧಾನಿ ಹೇಳಿದರು. ʻಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋ-2024ʼಕ್ಕೆ ಸಾಕ್ಷಿಯಾಗುವಂತೆ ದೆಹಲಿಯ ಜನರಿಗೆ ಶಿಫಾರಸು ಮಾಡಿದ ಪ್ರಧಾನಿ, ಇದು ಇಡೀ ಸಂಚಾರ ಮತ್ತು ಪೂರೈಕೆ ಸರಪಳಿ ಸಮುದಾಯವನ್ನು ಒಂದೇ ವೇದಿಕೆಗೆ ತರುತ್ತದೆ ಎಂದರು.

ಶ್ರೀ ಮೋದಿ ಅವರು ಪ್ರಧಾನಿಯಾಗಿ ತಮ್ಮ ಮೊದಲ ಅಧಿಕಾರವಧಿಯ ಸಂದರ್ಭದಲ್ಲಿ ಏರ್ಪಡಿಸಲಾದ ಸಂಚಾರಕ್ಕೆ ಸಂಬಂಧಿಸಿದ ಸಮ್ಮೇಳನವನ್ನು ಸ್ಮರಿಸಿದರು. ಆ ಸಂದರ್ಭದಲ್ಲಿ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ವಾಹನಗಳ ಬಗ್ಗೆ ತಾವು ಗಮನ ಹರಿಸಿದ್ದನ್ನು ನೆನಪಿಸಿಕೊಂಡರು. ತಮ್ಮ ಎರಡನೇ ಅಧಿಕಾರಾವಧಿಯಲ್ಲಿ ಗಮನಾರ್ಹ ಪ್ರಗತಿಯನ್ನು ಕಾಣಲು ಸಾಧ್ಯವಾಗಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಪ್ರಧಾನಿ, ಮೂರನೇ ಅವಧಿಯಲ್ಲಿ ಸಂಚಾರ ಕ್ಷೇತ್ರವು ಹೊಸ ಎತ್ತರವನ್ನು ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2047ರ ವೇಳೆಗೆ ʻವಿಕಸಿತ ಭಾರತʼದ ಗುರಿ ಸಾಧಿಸುವ ಸಂಕಲ್ಪವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಸಂಚಾರ ಕ್ಷೇತ್ರದ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು. 'ಇದೇ ಸಮಯ, ಸರಿಯಾದ ಸಮಯʼ ಎಂದು ಕೆಂಪು ಕೋಟೆಯ ಕೊತ್ತಲದಿಂದ ತಾವು ನೀಡಿದ ಕರೆಯನ್ನು ಅವರು ಪುನರುಚ್ಚರಿಸಿದರು. "ಭಾರತವು ಚಲಿಸುತ್ತಿದೆ ಮತ್ತು ವೇಗವಾಗಿ ಸಾಗುತ್ತಿದೆ" ಎಂದು ಹೇಳಿದ ಪ್ರಧಾನಿ, ಪ್ರಸ್ತುತ ಯುಗವು ಸಂಚಾರ ಅಥವಾ ಚಲನಶೀಲತೆ ಕ್ಷೇತ್ರಕ್ಕೆ ಸುವರ್ಣ ಯುಗದ ಆರಂಭವಾಗಿದೆ ಎಂದು ಒತ್ತಿ ಹೇಳಿದರು. ಭಾರತದ ಆರ್ಥಿಕತೆಯು ವೇಗವಾಗಿ ವಿಸ್ತರಿಸುತ್ತಿದೆ ಮತ್ತು ಪ್ರಸ್ತುತ ಸರ್ಕಾರದ ಮೂರನೇ ಅವಧಿಯಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಸಜ್ಜಾಗಿದೆ ಎಂದು ಅವರು ಹೇಳಿದರು. ಕಳೆದ 10 ವರ್ಷಗಳಲ್ಲಿ ಸರ್ಕಾರದ ಪ್ರಯತ್ನಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಿ, ಸರಿಸುಮಾರು 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ ಎಂದು ಮಾಹಿತಿ ನೀಡಿದರು. ಯಾವುದೇ ವ್ಯಕ್ತಿಯು ಬಡತನದಿಂದ ಹೊರಬಂದಾಗ ಸೈಕಲ್, ಸ್ಕೂಟರ್ ಅಥವಾ ಕಾರು ಹೀಗೆ ಯಾವುದೇ ವಾಹನವು ಅವರ ಮೊದಲ ಅಗತ್ಯವಾಗುತ್ತದೆ ಎಂದು ಪ್ರಧಾನಿ ಹೇಳಿದರು. ನವ-ಮಧ್ಯಮ ವರ್ಗದ ಹೊರಹೊಮ್ಮುವಿಕೆಯ ಬಗ್ಗೆ ಹೇಳಿದ ಪ್ರಧಾನಿ ಮೋದಿ, ಅಂತಹ ಆರ್ಥಿಕ ಸ್ತರಗಳಲ್ಲಿ ಕಂಡುಬರುವ ಆಕಾಂಕ್ಷೆಗಳನ್ನು ಪೂರೈಸುವ ಅಗತ್ಯವನ್ನು ಒತ್ತಿಹೇಳಿದರು. ವಿಸ್ತರಿಸುತ್ತಿರುವ ಕ್ಷೇತ್ರಗಳು ಮತ್ತು ದೇಶದ ಮಧ್ಯಮ ವರ್ಗದ ಹೆಚ್ಚುತ್ತಿರುವ ಆದಾಯವು ಭಾರತದ ಸಂಚಾರ ಕ್ಷೇತ್ರಕ್ಕೆ ಬಲ ನೀಡುತ್ತದೆ ಎಂದು ಪ್ರಧಾನಿ ಹೇಳಿದರು. "ಬೆಳೆಯುತ್ತಿರುವ ಆರ್ಥಿಕತೆಯ ಅಂಕಿ-ಸಂಖ್ಯೆಗಳು ಮತ್ತು ಹೆಚ್ಚುತ್ತಿರುವ ಆದಾಯವು ಸಂಚಾರ ಕ್ಷೇತ್ರದಲ್ಲಿ ಹೊಸ ವಿಶ್ವಾಸವನ್ನು ತುಂಬುತ್ತವೆ," ಎಂದು ಶ್ರೀ ಮೋದಿ ಹೇಳಿದರು. ಭಾರತದಲ್ಲಿ ಮಾರಾಟವಾದ ಕಾರುಗಳ ಸಂಖ್ಯೆ 2014ರ ಹಿಂದಿನ 10 ವರ್ಷಗಳಲ್ಲಿ  12 ಕೋಟಿ ಇದ್ದದ್ದು 2014ರ ನಂತರ 21 ಕೋಟಿಗೆ ಏರಿದೆ. ಇದೇ ವೇಳೆ, ಭಾರತದಲ್ಲಿ ಮಾರಾಟವಾದ ಎಲೆಕ್ಟ್ರಿಕ್ ಕಾರುಗಳ ಸಂಖ್ಯೆ 10 ವರ್ಷಗಳ ಹಿಂದೆ ವರ್ಷಕ್ಕೆ 2 ಸಾವಿರ ಇದ್ದದ್ದು ಈಗ ವರ್ಷಕ್ಕೆ 12 ಲಕ್ಷಕ್ಕೆ ಏರಿದೆ. ಕಳೆದ 10 ವರ್ಷಗಳಲ್ಲಿ ಪ್ರಯಾಣಿಕರ ವಾಹನಗಳ ಸಂಖ್ಯೆಯಲ್ಲಿ ಶೇ.60ರಷ್ಟು ಹೆಚ್ಚಳವಾದರೆ, ದ್ವಿಚಕ್ರ ವಾಹನಗಳ ಸಂಖ್ಯೆಯಲ್ಲಿ ಶೇ.70ರಷ್ಟು ಹೆಚ್ಚಳವಾಗಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಜನವರಿಯಲ್ಲಿ ಕಾರು ಮಾರಾಟವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. "ಸಂಚಾರ ಕ್ಷೇತ್ರವು ದೇಶದಲ್ಲಿ ಅಭೂತಪೂರ್ವ ವಾತಾವರಣಕ್ಕೆ ಸಾಕ್ಷಿಯಾಗಿದೆ ಮತ್ತು ನೀವು ಅದನ್ನು ಬಳಸಿಕೊಳ್ಳಬೇಕು," ಎಂದು ಈ ಸಂದರ್ಭದಲ್ಲಿ ಹಾಜರಿದ್ದ ಉದ್ಯಮದ ಮುಖಂಡರನ್ನು ಪ್ರಧಾನಿ ಮೋದಿ ಒತ್ತಾಯಿಸಿದರು.

 

ಇಂದಿನ ಭಾರತವು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ನೀತಿಗಳನ್ನು ರೂಪಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ನಿನ್ನೆ ಮಂಡಿಸಲಾದ ಕೇಂದ್ರ ಬಜೆಟ್ ಅನ್ನು ಉಲ್ಲೇಖಿಸಿದ ಪ್ರಧಾನಿ,  2014ರಲ್ಲಿ ಭಾರತದ ಬಂಡವಾಳ ವೆಚ್ಚವು 2 ಲಕ್ಷ ಕೋಟಿ ರೂ.ಗಿಂತ ಕಡಿಮೆ ಇತ್ತು, ಆದರೆ ಇಂದು ಅದು 11 ಲಕ್ಷ ಕೋಟಿ ರೂ. ದಾಟಿದೆ ಎಂದು ಮಾಹಿತಿ ನೀಡಿದರು. ಇದು ಭಾರತದ ಸಂಚಾರ ಕ್ಷೇತ್ರಕ್ಕೆ ಅನೇಕ ಅವಕಾಶಗಳನ್ನು ತೆರೆದಿದೆ ಎಂದು ಅವರು ಹೇಳಿದರು. ಈ ಅಭೂತಪೂರ್ವ ವೆಚ್ಚವು ರೈಲು, ರಸ್ತೆ, ವಿಮಾನ ನಿಲ್ದಾಣ, ಜಲಮಾರ್ಗ ಸಾರಿಗೆ ಮತ್ತು ಇತರ ಎಲ್ಲಾ ರೀತಿಯ ಸಾರಿಗೆಯನ್ನು ಪರಿವರ್ತಿಸುತ್ತಿದೆ. ʻಅಟಲ್ ಸುರಂಗʼದಿಂದ ʻಅಟಲ್ ಸೇತುʼವರೆಗಿನ ಎಂಜಿನಿಯರಿಂಗ್ ಅದ್ಭುತಗಳನ್ನು ದಾಖಲೆಯ ಕಾಲಮಿತಿಯೊಳಗೆ ಪೂರ್ಣಗೊಳಿಸಿದ ಬಗ್ಗೆಯೂ ಅವರು ಮಾತನಾಡಿದರು. ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ 75 ಹೊಸ ವಿಮಾನ ನಿಲ್ದಾಣಗಳು ನಿರ್ಮಾಣಗೊಂಡಿವೆ. ಸುಮಾರು 4 ಲಕ್ಷ ಕಿಲೋಮೀಟರ್ ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲಾಗಿದೆ, 90,000 ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ, 3500 ಕಿ.ಮೀ ಹೈಸ್ಪೀಡ್ ಕಾರಿಡಾರ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ, 15 ಹೊಸ ನಗರಗಳಿಗೆ ಮೆಟ್ರೋ ಬಂದಿದೆ, 25,000 ರೈಲು ಮಾರ್ಗಗಳನ್ನು ನಿರ್ಮಿಸಲಾಗಿದೆ. 40,000 ರೈಲು ಬೋಗಿಗಳನ್ನು ಆಧುನಿಕ ʻವಂದೇ ಭಾರತ್ʼ ಮಾದರಿಯ ಬೋಗಿಗಳಾಗಿ ಪರಿವರ್ತಿಸುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿದೆ. ಈ ಬೋಗಿಗಳನ್ನು ಸಾಮಾನ್ಯ ರೈಲುಗಳಲ್ಲಿ ಅಳವಡಿಸಿದಾಗ ಭಾರತೀಯ ರೈಲ್ವೆಯಲ್ಲಿ ಹೊಸ ಪರಿವರ್ತನೆ ಕಾಣಬಹುದು ಎಂದು ಶ್ರೀ ಮೋದಿ ಮಾಹಿತಿ ನೀಡಿದರು.

"ನಮ್ಮ ಸರ್ಕಾರದ ವೇಗ ಮತ್ತು ಪ್ರಮಾಣವು ಭಾರತದಲ್ಲಿ ಸಂಚಾರ ಕ್ಷೇತ್ರದ ವ್ಯಾಖ್ಯಾನವನ್ನೇ ಬದಲಾಯಿಸಿದೆ," ಎಂದು ಪ್ರಧಾನಿ ಹೇಳಿದರು. ಕೆಲಸಗಳನ್ನು ವ್ಯವಸ್ಥಿತವಾಗಿ ಮತ್ತು ಸಮಯೋಚಿತವಾಗಿ ಪೂರ್ಣಗೊಳಿಸುವ ಬಗ್ಗೆ ಮಾತನಾಡಿದ ಅವರು  ಸರಕು-ಸಾಗಣೆ ಅಡೆತಡೆಗಳನ್ನು ತೊಡೆದು ಹಾಕುವ ಕ್ರಮಗಳನ್ನು ಎತ್ತಿ ತೋರಿದರು. ʻಪಿಎಂ ರಾಷ್ಟ್ರೀಯ ಗತಿ ಶಕ್ತಿ ಮಾಸ್ಟರ್ ಪ್ಲ್ಯಾನ್ʼ ದೇಶದಲ್ಲಿ ಸಮಗ್ರ ಸಾರಿಗೆಯನ್ನು ಉತ್ತೇಜಿಸುತ್ತಿದೆ. ವಿಮಾನ ಮತ್ತು ಹಡಗು ಗುತ್ತಿಗೆಗಾಗಿ ʻಗಿಫ್ಟ್ ಸಿಟಿʼ ನಿಯಂತ್ರಕ ನೀತಿಯನ್ನು ರೂಪಿಸಲಾಗಿದೆ. ʻರಾಷ್ಟ್ರೀಯ ಸರಕು-ಸಾಗಣೆ ನೀತಿʼಯು ಸರಕು-ಸಾಗಣೆ ಸಮಸ್ಯೆಗಳನ್ನು ಪರಿಹರಿಸುತ್ತಿದೆ ಎಂದು ಅವರು ಹೇಳಿದರು. ವಿಶೇಷ ಸರಕು-ಸಾಗಣೆ ಕಾರಿಡಾರ್ ಗಳು ವೆಚ್ಚವನ್ನು ಕಡಿಮೆ ಮಾಡುತ್ತಿವೆ. ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾದ ಮೂರು ರೈಲ್ವೆ ಆರ್ಥಿಕ ಕಾರಿಡಾರ್ ಗಳು ದೇಶದಲ್ಲಿ ಸಾರಿಗೆಯನ್ನು ಸುಗಮಗೊಳಿಸುತ್ತವೆ ಎಂದರು.

ವ್ಯಾಪಾರವನ್ನು ವೇಗಗೊಳಿಸುವಲ್ಲಿ ಮತ್ತು ರಾಜ್ಯ ಗಡಿಗಳಲ್ಲಿ ಚೆಕ್ ಪೋಸ್ಟ್ ಗಳನ್ನು ರದ್ದುಗೊಳಿಸುವಲ್ಲಿ ʻಸರಕು ಮತ್ತು ಸೇವಾ ತೆರಿಗೆʼಯ(ಜಿಎಸ್ಟಿ) ಕ್ರಾಂತಿಕಾರಿ ಪರಿಣಾಮವನ್ನು ಪ್ರಧಾನಿ ಎತ್ತಿ ತೋರಿದರು. ಇದಲ್ಲದೆ, ಉದ್ಯಮದಲ್ಲಿ ಇಂಧನ ಮತ್ತು ಸಮಯ ಎರಡನ್ನೂ ಉಳಿಸುವಲ್ಲಿ ʻಫಾಸ್ಟ್-ಟ್ಯಾಗ್ʼ ತಂತ್ರಜ್ಞಾನದ ಪಾತ್ರವನ್ನು ಪ್ರಧಾನಿ ಮೋದಿ  ಹೇಳಿದರು. "ಫಾಸ್ಟ್-ಟ್ಯಾಗ್ ತಂತ್ರಜ್ಞಾನವು ಉದ್ಯಮದಲ್ಲಿ ಇಂಧನ ಮತ್ತು ಸಮಯದ ಉಳಿತಾಯವನ್ನು ಹೆಚ್ಚಿಸಿದೆ," ಎಂದು ಹೇಳಿದರು. ಇತ್ತೀಚಿನ ಅಧ್ಯಯನವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ʻಫಾಸ್ಟ್-ಟ್ಯಾಗ್ʼ ತಂತ್ರಜ್ಞಾನವು ಆರ್ಥಿಕತೆಗೆ ವಾರ್ಷಿಕ 40,000 ಕೋಟಿ ರೂ.ಗಳ ಲಾಭವನ್ನು ನೀಡುತ್ತಿದೆ ಎಂದು ಮಾಹಿತಿ ನೀಡಿದರು.

 

"ಭಾರತವು ಈಗ ಜಾಗತಿಕ ಆರ್ಥಿಕ ಶಕ್ತಿಕೇಂದ್ರವಾಗುವ ಹೊಸ್ತಿಲಲ್ಲಿದೆ, ವಾಹನ ಮತ್ತು ವಾಹನ ಬಿಡಿಭಾಗಗಳ ಉದ್ಯಮವು ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ," ಎಂದು ಪ್ರಧಾನಿ ಮೋದಿ ಹೇಳಿದರು. ಜಾಗತಿಕ ವಾಹನ ಮಾರುಕಟ್ಟೆಯಲ್ಲಿ ಭಾರತದ ಸ್ಥಾನಮಾನದ ಬಗ್ಗೆ ಒತ್ತಿ ಹೇಳಿದ ಪ್ರಧಾನಿ ಮೋದಿ, "ಇಂದು, ಭಾರತವು ಪ್ರಯಾಣಿಕರ ವಾಹನಗಳಿಗೆ ವಿಶ್ವದ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿದೆ ಮತ್ತು ಜಾಗತಿಕವಾಗಿ ವಾಣಿಜ್ಯ ವಾಹನಗಳನ್ನು ತಯಾರಿಸುವ ಮೊದಲ ಮೂರು ದೇಶಗಳಲ್ಲಿ ಒಂದಾಗಿದೆ," ಎಂದರು. ಇದಲ್ಲದೆ, ಉತ್ಪಾದನೆ ಆಧರಿತ ಪ್ರೋತ್ಸಾಹಧನʼ(ಪಿಎಲ್ಐ) ಯೋಜನೆಯಂತಹ ಉಪಕ್ರಮಗಳ ಮೂಲಕ ವಿವಿಧ ಕ್ಷೇತ್ರಗಳನ್ನು ಬೆಂಬಲಿಸುವ ಸರ್ಕಾರದ ಬದ್ಧತೆಯನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು. "ಉದ್ಯಮಕ್ಕಾಗಿ, ಸರ್ಕಾರವು 25,000 ಕೋಟಿ ರೂ.ಗಿಂತಲೂ ಅಧಿಕ ʻಉತ್ಪಾದನೆ ಆಧರಿತ ಪ್ರೋತ್ಸಾಹಧನʼ ಯೋಜನೆಯನ್ನು ಪರಿಚಯಿಸಿದೆ," ಎಂದು ಅವರು ಹೇಳಿದರು.

ʻರಾಷ್ಟ್ರೀಯ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್ʼ ಉಪಕ್ರಮವು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಒತ್ತು ನೀಡುತ್ತಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಸೃಷ್ಟಿಸಲು ಸರ್ಕಾರ 10 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ. ʻಫೇಮ್ʼ ಯೋಜನೆಯು ರಾಜಧಾನಿ ಮತ್ತು ಇತರ ಅನೇಕ ನಗರಗಳಲ್ಲಿ ಎಲೆಕ್ಟ್ರಿಕ್ ಬಸ್ ಗಳಿಗೆ ದಾರಿ ಮಾಡಿದೆ  ಎಂದು ಪ್ರಧಾನಿ ಹೇಳಿದರು.

ಸಂಶೋಧನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಈ ವರ್ಷದ ಬಜೆಟ್ ನಲ್ಲಿ 1 ಲಕ್ಷ ಕೋಟಿ ರೂ.ಗಳ ನಿಧಿ ಹಂಚಿಕೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದರು. ನವೋದ್ಯಮಗಳಿಗೆ ನೀಡಲಾಗುವ ತೆರಿಗೆ ವಿನಾಯಿತಿಗಳನ್ನು ಮತ್ತಷ್ಟು ವಿಸ್ತರಿಸುವ ನಿರ್ಧಾರವನ್ನು ಉಲ್ಲೇಖಿಸಿದರು. "ಈ ನಿರ್ಧಾರಗಳು ಸಂಚಾರ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು. ʻಎಲೆಕ್ಟ್ರಿಕ್‌ ವಾಹನʼ ಉದ್ಯಮದಲ್ಲಿ ವೆಚ್ಚ ಮತ್ತು ಬ್ಯಾಟರಿಯ ಅತ್ಯಂತ ಮಹತ್ವದ ಸವಾಲುಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಈ ನಿಟ್ಟಿನಲ್ಲಿ ಸಂಶೋಧನೆಗಾಗಿ ಬಜೆಟ್‌ನಲ್ಲಿ ನೀಡಲಾದ ಹಣವನ್ನು ಬಳಸುವಂತೆ ಶಿಫಾರಸ್ಸು ಮಾಡಿದರು.

 

ಬ್ಯಾಟರಿ ತಯಾರಿಕೆಗೆ ಭಾರತದಲ್ಲೇ ಲಭ್ಯವಾಗುವ ಹೇರಳವಾದ ಕಚ್ಚಾ ವಸ್ತುಗಳನ್ನು ಬಳಸಿಕೊಳ್ಳುವ ಸಂಶೋಧನಾ ಮಾರ್ಗಗಳನ್ನು ಅನ್ವೇಷಿಸುವಂತಹ ಹಾಗೂ ಹಸಿರು ಹೈಡ್ರೋಜನ್ ಮತ್ತು ಎಥೆನಾಲ್ ನಂತಹ ಕ್ಷೇತ್ರಗಳಲ್ಲಿ ಸಂಶೋಧನೆ ಹೆಚ್ಚಿಸುವಂತೆ ಪ್ರಧಾನಿ ಮೋದಿ ಅವರು ಉದ್ಯಮಕ್ಕೆ ಕರೆ ನೀಡಿದರು. "ಭಾರತದಲ್ಲಿ ಲಭ್ಯವಿರುವ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಬ್ಯಾಟರಿಗಳನ್ನು ತಯಾರಿಸಲು ಏಕೆ ಸಂಶೋಧನೆ ನಡೆಸಬಾರದು ? ವಾಹನ ವಲಯವು ಹಸಿರು ಹೈಡ್ರೋಜನ್ ಮತ್ತು ಎಥೆನಾಲ್ ನಲ್ಲಿ ಸಂಶೋಧನೆಯನ್ನು ನಡೆಸಬೇಕು,ʼʼಎಂದರು.

ಹಡಗು ಉದ್ಯಮದಲ್ಲಿ ಹೈಬ್ರಿಡ್ ಹಡಗುಗಳನ್ನು ಅಭಿವೃದ್ಧಿಪಡಿಸಲು ದೇಶೀಯ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದರು. "ಭಾರತದ ಹಡಗು ಸಚಿವಾಲಯವು ದೇಶೀಯ ತಂತ್ರಜ್ಞಾನವನ್ನು ಬಳಸಿಕೊಂಡು ಹೈಬ್ರಿಡ್ ಹಡಗುಗಳನ್ನು ತಯಾರಿಸುವತ್ತ ಹೆಜ್ಜೆ ಇರಿಸಿದೆ," ಎಂದು ಅವರು ಹೇಳಿದರು. ನವೋದ್ಯಮಗಳಿಂದಾಗಿ ಭಾರತದಲ್ಲಿ ʻಡ್ರೋನ್ʼ ವಲಯವು ರೆಕ್ಕೆ ಬಿಚ್ಚಿದೆ ಎಂದು ಶ್ರೀ ಮೋದಿ ಬಣ್ಣಿಸಿದರು. ʻಡ್ರೋನ್ʼಗಳಿಗೆ ಸಂಬಂಧಿಸಿದ ಸಂಶೋಧನೆಗೆ ಹಣವನ್ನು ಬಳಸಲು ಶಿಫಾರಸು ಮಾಡಿದರು. ಜಲಮಾರ್ಗಗಳ ಮೂಲಕ ಕಡಿಮೆ ವೆಚ್ಚದ ಸಾರಿಗೆ ಸಾಧನಗಳ ಹೊರಹೊಮ್ಮುವಿಕೆಯ ಬಗ್ಗೆ ಅವರು ಉಲ್ಲೇಖಿಸಿದರು. ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ಹೈಬ್ರಿಡ್ ಹಡಗುಗಳನ್ನು ತಯಾರಿಸುವತ್ತ ಹಡಗು ಸಚಿವಾಲಯದ ಉತ್ತೇಜನದ ಬಗ್ಗೆ ಮಾಹಿತಿ ನೀಡಿದರು.

ಸಂಚಾರ ಉದ್ಯಮದಲ್ಲಿ ಚಾಲಕರ ಮಾನವೀಯ ಅಂಶದ ಬಗ್ಗೆಯೂ ಪ್ರಧಾನಿ ಮೋದಿ ಗಮನ ಸೆಳೆದರು. ಟ್ರಕ್ ಚಾಲಕರು ಎದುರಿಸುತ್ತಿರುವ ಕಷ್ಟಗಳನ್ನು ಎತ್ತಿ ತೋರಿದರು. "ಟ್ರಕ್ ಚಾಲಕರು ಮತ್ತು ಅವರ ಕುಟುಂಬಗಳ ಕಾಳಜಿಯನ್ನು ಸರ್ಕಾರ ಅರ್ಥಮಾಡಿಕೊಂಡಿದೆ," ಎಂದ ಪ್ರಧಾನಿಯವರು, ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಾಲಕರಿಗೆ ಆಹಾರ, ಶುದ್ಧ ಕುಡಿಯುವ ನೀರು, ಶೌಚಾಲಯಗಳು, ಪಾರ್ಕಿಂಗ್ ಮತ್ತು ವಿಶ್ರಾಂತಿ ಸೌಲಭ್ಯಗಳೊಂದಿಗೆ ಆಧುನಿಕ ಕಟ್ಟಡಗಳನ್ನು ಅಭಿವೃದ್ಧಿಪಡಿಸುವ ಕಾರ್ಯಗಳ ಬಗ್ಗೆ ಹೊಸ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಈ ಯೋಜನೆಯ ಮೊದಲ ಹಂತದಲ್ಲಿ ದೇಶಾದ್ಯಂತ ಇಂತಹ 1,000 ಕಟ್ಟಡಗಳನ್ನು ನಿರ್ಮಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಅವರು ಹೇಳಿದರು. ಇದು ಟ್ರಕ್ ಮತ್ತು ಟ್ಯಾಕ್ಸಿ ಚಾಲಕರ ಜೀವನವನ್ನು ಸುಲಭಗೊಳಿಸುತ್ತದೆ ಮತ್ತು ಪ್ರಯಾಣವನ್ನು ಸುಗಮಗೊಳಿಸುತ್ತದೆ. ಆ ಮೂಲಕ ಅವರ ಆರೋಗ್ಯವನ್ನು ಸುಧಾರಿಸುತ್ತದೆ ಜೊತೆಗೆ, ಅಪಘಾತಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ತಿಳಿಸಿದರು.

 

ಮುಂದಿನ 25 ವರ್ಷಗಳಲ್ಲಿ ಸಂಚಾರ ಕ್ಷೇತ್ರದಲ್ಲಿನ ಅಪಾರ ಸಾಧ್ಯತೆಗಳನ್ನು ಉಲ್ಲೇಕಿಸಿದ ಶ್ರೀ ಮೋದಿ ಅವರು, ಈ ಸಾಧ್ಯತೆಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಉದ್ಯಮವು ವೇಗವಾಗಿ ರೂಪಾಂತರಗೊಳ್ಳಬೇಕೆಂದು ಒತ್ತಾಯಿಸಿದರು. ಸಂಚಾರ ವಲಯದ ಅಗತ್ಯಗಳಾಗಿರುವ ತಾಂತ್ರಿಕ ಸಿಬ್ಬಂದಿ ಮತ್ತು ತರಬೇತಿ ಪಡೆದ ವೃತ್ತಿಪರ ಚಾಲಕರ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇಂದು ದೇಶದಲ್ಲಿ 15 ಸಾವಿರಕ್ಕೂ ಹೆಚ್ಚು ʻಐಟಿಐʼಗಳು ಈ ಉದ್ಯಮಕ್ಕೆ ಮಾನವಶಕ್ತಿಯನ್ನು ಒದಗಿಸುತ್ತಿವೆ ಎಂದರು. ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ  ಕೋರ್ಸ್ ಗಳನ್ನು ಹೆಚ್ಚು ಪ್ರಸ್ತುತವಾಗಿಸಲು ʻಐಟಿಐʼಗಳೊಂದಿಗೆ ಸಹಕರಿಸುವಂತೆ ಅವರು ಉದ್ಯಮದ ಮುಖಂಡರನ್ನು ಒತ್ತಾಯಿಸಿದರು. ಹಳೆಯ ವಾಹನಗಳನ್ನು ಗುಜರಿಗೆ ಹಾಕಿದಲ್ಲಿ, ಹೊಸ ವಾಹನಗಳಿಗೆ ರಸ್ತೆ ತೆರಿಗೆಯಲ್ಲಿ ವಿನಾಯಿತಿ ನೀಡುವ ಸರ್ಕಾರದ ʻಸ್ಕ್ರ್ಯಾಪೇಜ್ ನೀತಿʼಯ ಬಗ್ಗೆಯೂ ಅವರು ಮಾತನಾಡಿದರು.

ʻಗಡಿಗಳನ್ನು ದಾಟಿʼ ಎಂಬ ಪ್ರದರ್ಶನ ಮೇಳದ ಧ್ಯೇಯವಾಕ್ಯವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇದು ಭಾರತದ ಉತ್ಸಾಹವನ್ನು ಪ್ರದರ್ಶಿಸುತ್ತದೆ ಎಂದರು. "ಇಂದು ನಾವು ಹಳೆಯ ಅಡೆತಡೆಗಳನ್ನು ಮೀರಲು ಮತ್ತು ಇಡೀ ಜಗತ್ತನ್ನು ಒಟ್ಟುಗೂಡಿಸಲು ಬಯಸುತ್ತೇವೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತದ ಪಾತ್ರವನ್ನು ವಿಸ್ತರಿಸಲು ನಾವು ಬಯಸುತ್ತೇವೆ. ಭಾರತೀಯ ವಾಹನ ಉದ್ಯಮದ ಮುಂದೆ ಸಾಧ್ಯತೆಗಳ ಸಾಗರವೇ ಇದೆ," ಎಂದರು. ʻಅಮೃತ ಕಾಲʼದ ದೃಷ್ಟಿಕೋನದೊಂದಿಗೆ ಮುಂದುವರಿಯುವಂತೆ ಮತ್ತು ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡುವಂತೆ ಪ್ರಧಾನಿ ಒತ್ತಾಯಿಸಿದರು. ರೈತರ ಸಹಕಾರದೊಂದಿಗೆ ರಬ್ಬರ್ ಆಮದು ಅವಲಂಬನೆಯನ್ನು ಕಡಿಮೆ ಮಾಡುವಂತೆ ಟೈರ್ ಉದ್ಯಮಕ್ಕೆ ಪ್ರಧಾನಿ ಕರೆ ನೀಡಿದರು. ಭಾರತದ ರೈತರ ಮೇಲಿನ ವಿಶ್ವಾಸವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸಮಗ್ರ ಕಾರ್ಯವಿಧಾನವನ್ನು ಪ್ರತಿಪಾದಿಸಿದರು. ಚೌಕಟ್ಟಿನಿಂದ ಆಚೆಗೆ ಯೋಚಿಸುವಂತೆ ಮತ್ತು ಸಹಯೋಗದೊಂದಿಗೆ ಯೋಚಿಸುವಂತೆ ಅವರು ಸಭಿಕರಿಗೆ ಕರೆ ನೀಡಿದರು. ಭಾರತದಲ್ಲಿ ಎಲ್ಲಾ ಪ್ರಮುಖ ಡಿಸೈನಿಂಗ್ ಉದ್ಯಮ ದಿಗ್ಗಜರ ಉಪಸ್ಥಿತಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ದೇಶೀಯ ವಿನ್ಯಾಸ ಸಾಮರ್ಥ್ಯಗಳನ್ನು ಉತ್ತೇಜಿಸುವಂತೆ ಉದ್ಯಮಕ್ಕೆ ಕರೆ ನೀಡಿದರು. ಯೋಗವನ್ನು ಜಗತ್ತು ಸ್ವೀಕರಿಸಿದ ಪರಿಯನ್ನು ಉದಾಹರಿಸಿದ ಪ್ರಧಾನಮಂತ್ರಿಯವರು, 'ನೀವು ನಿಮ್ಮ ಮೇಲೆ ನಂಬಿಕೆ ಇಟ್ಟಾಗ, ಜಗತ್ತು ನಿಮ್ಮನ್ನು ನಂಬುತ್ತದೆ. ನಿಮ್ಮ ದೃಷ್ಟಿ ಎಲ್ಲೆಲ್ಲಿ ಬೀಳುತ್ತದೆಯೋ, ಅಲ್ಲೆಲ್ಲಾ ನೀವು ನಿಮ್ಮಿಂದ ತಯಾರಾದ ವಾಹನಗಳನ್ನು ನೋಡಬೇಕುʼ ಎಂದು ಹೇಳುವ ಮೂಲಕ ಪ್ರಧಾನಿ ಮಾತು ಮುಗಿಸಿದರು. 

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್; ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ; ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ಶ್ರೀ ನಾರಾಯಣ್ ರಾಣೆ; ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಹಾಗೂ ಕೇಂದ್ರ ಭಾರಿ ಕೈಗಾರಿಕೆಗಳ ಸಚಿವ ಶ್ರೀ ಮಹೇಂದ್ರ ನಾಥ್ ಪಾಂಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

50ಕ್ಕೂ ದೇಶಗಳ 800ಕ್ಕೂ ಹೆಚ್ಚು ಪ್ರದರ್ಶಕರನ್ನು ಹೊಂದಿರುವ ಪ್ರದರ್ಶನ ಮೇಳವು ಅತ್ಯಾಧುನಿಕ ತಂತ್ರಜ್ಞಾನಗಳು, ಸುಸ್ಥಿರ ಪರಿಹಾರಗಳು ಮತ್ತು ಸಂಚಾರ ಕ್ಷೇತ್ರದಲ್ಲಿನ ಪ್ರಗತಿಯನ್ನು ಎತ್ತಿ ತೋರುತ್ತದೆ. ಪ್ರದರ್ಶನ ಮೇಳದಲ್ಲಿ 28ಕ್ಕೂ ಹೆಚ್ಚು ವಾಹನ ತಯಾರಕರು, 600ಕ್ಕೂ ಹೆಚ್ಚು ವಾಹನ ಬಿಡಿಭಾಗಗಳ ತಯಾರಕರು ಭಾಗವಹಿಸಿದ್ದಾರೆ. 13ಕ್ಕೂ ಹೆಚ್ಚು ಜಾಗತಿಕ ಮಾರುಕಟ್ಟೆಗಳಿಂದ 1000ಕ್ಕೂ ಹೆಚ್ಚು ಬ್ರಾಂಡ ಗಳು ತಮ್ಮ ಉತ್ಪನ್ನಗಳು, ತಂತ್ರಜ್ಞಾನಗಳು ಮತ್ತು ಸೇವೆಗಳನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಿವೆ.

 

ಪ್ರದರ್ಶನ ಮತ್ತು ಸಮ್ಮೇಳನಗಳ ಜೊತೆಗೆ, ಈ ಕಾರ್ಯಕ್ರಮವು ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಸಹಯೋಗವನ್ನು ಸಕ್ರಿಯಗೊಳಿಸಲು; ಪ್ರಾದೇಶಿಕ ಕೊಡುಗೆಗಳು ಮತ್ತು ಉಪಕ್ರಮಗಳನ್ನು ಪ್ರದರ್ಶಿಸಲು ರಾಜ್ಯಗಳ ಮಟ್ಟದ ಅಧಿವೇಶನಗಳನ್ನೂ ಒಳಗೊಂಡಿದೆ. ಆ ಮೂಲಕ ಚಲನಶೀಲತೆ ಪರಿಹಾರಗಳಿಗೆ ಸಮಗ್ರ ಕಾರ್ಯವಿಧಾನವನ್ನು ಇದು ಉತ್ತೇಜಿಸುತ್ತದೆ.

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s organic food products export reaches $448 Mn, set to surpass last year’s figures

Media Coverage

India’s organic food products export reaches $448 Mn, set to surpass last year’s figures
NM on the go

Nm on the go

Always be the first to hear from the PM. Get the App Now!
...
Prime Minister lauds the passing of amendments proposed to Oilfields (Regulation and Development) Act 1948
December 03, 2024

The Prime Minister Shri Narendra Modi lauded the passing of amendments proposed to Oilfields (Regulation and Development) Act 1948 in Rajya Sabha today. He remarked that it was an important legislation which will boost energy security and also contribute to a prosperous India.

Responding to a post on X by Union Minister Shri Hardeep Singh Puri, Shri Modi wrote:

“This is an important legislation which will boost energy security and also contribute to a prosperous India.”