"ಬುದ್ಧನ ಸಂದೇಶ ಇಡೀ ಜಗತ್ತಿಗೆ, ಬುದ್ಧನ ಧಮ್ಮ ಮಾನವೀಯತೆಗಾಗಿ"
"ತನ್ನೊಳಗಿನಿಂದಲೇ ಪ್ರಾರಂಭಿಸಲು ಹೇಳಿದ ಬುದ್ಧನು ವಿಶ್ವವ್ಯಾಪಿಯಾಗಿದ್ದಾನೆ. ಬುದ್ಧನ ʻಬುದ್ಧತ್ವʼವು ಉತ್ಕೃಷ್ಟ ಜವಾಬ್ದಾರಿಯ ಪ್ರಜ್ಞೆಯಾಗಿದೆ"
"ಬುದ್ಧನು ಇಂದಿಗೂ ಭಾರತದ ಸಂವಿಧಾನದ ಸ್ಫೂರ್ತಿ, ಬುದ್ಧನ ʻಧಮ್ಮ ಚಕ್ರʼವು ಭಾರತದ ತ್ರಿವರ್ಣ ಧ್ವಜದ ಮೇಲೆ ರಾರಾಜಿಸುತ್ತಾ ನಮಗೆ ಪ್ರೇರಣೆ ನೀಡುತ್ತಿದೆ"
"ಭಗವಾನ್ ಬುದ್ಧನ 'ಅಪ್ಪಾ ದೀಪೋ ಭವ' ಸಂದೇಶವು ಭಾರತ ಸ್ವಾವಲಂಬಿಯಾಗಲು ಪ್ರೇರಣೆಯಾಗಿದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕುಶಿನಗರದ ಮಹಾಪರಿನಿರ್ವಾಣ ದೇವಾಲಯದಲ್ಲಿ `ಅಭಿಧಮ್ಮ ದಿನ’ದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಉತ್ತರ ಪ್ರದೇಶದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ, ಕೇಂದ್ರ ಸಚಿವರಾದ ಶ್ರೀ ಜಿ ಕಿಶನ್ ರೆಡ್ಡಿ, ಶ್ರೀ ಕಿರಣ್‌ ರಿಜಿಜು, ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ, ಶ್ರೀಲಂಕಾ ಸರಕಾರದ ಸಂಪುಟ ಸಚಿವ ಶ್ರೀ ನಮಲ್ ರಾಜಪಕ್ಸೆ, ಶ್ರೀಲಂಕಾದ ಬೌದ್ಧ ನಿಯೋಗ; ಮ್ಯಾನ್ಮಾರ್, ವಿಯೆಟ್ನಾಂ, ಕಾಂಬೋಡಿಯಾ, ಥೈಲ್ಯಾಂಡ್, ಲಾವೊ ಪಿಡಿಆರ್, ಭೂತಾನ್, ದಕ್ಷಿಣ ಕೊರಿಯಾ, ಶ್ರೀಲಂಕಾ, ಮಂಗೋಲಿಯಾ, ಜಪಾನ್, ಸಿಂಗಾಪುರ, ನೇಪಾಳದ ರಾಯಭಾರಿಗಳು ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ʻಅಶ್ವಿನ್ ಹುಣ್ಣಿಮೆʼಯ ಶುಭ ಸಂದರ್ಭ ಮತ್ತು ಭಗವಾನ್ ಬುದ್ಧನ ಪವಿತ್ರ ಸ್ಮಾರಕದ ಉಪಸ್ಥಿತಿಯ ಬಗ್ಗೆ ಪ್ರಸ್ತಾಪಿಸಿದರು. ಶ್ರೀಲಂಕಾದ ನಿಯೋಗವನ್ನು ಸ್ವಾಗತಿಸಿದ ಪ್ರಧಾನಿಯವರು, ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧವನ್ನು ಸ್ಮರಿಸಿದರು. ಚಕ್ರವರ್ತಿ ಅಶೋಕನ ಪುತ್ರ ಮಹೇಂದ್ರ ಮತ್ತು ಮಗಳು ಸಂಘಮಿತ್ರ ಬೌದ್ಧ ಧರ್ಮದ ಸಂದೇಶವನ್ನು ಶ್ರೀಲಂಕಾಗೆ ಕೊಂಡೊಯ್ದ ಬಗ್ಗೆ ಪ್ರಧಾನಿ ಮಾತನಾಡಿದರು.  ಇದೇ ದಿನದಂದು 'ಅರ್ಹತ್ ಮಹಿಂದಾ' ಹಿಂತಿರುಗಿ ಬಂದು, ಬುದ್ಧನ ಸಂದೇಶವನ್ನು ಶ್ರೀಲಂಕಾ ಅತ್ಯಂತ ಚೈತನ್ಯದಿಂದ ಸ್ವೀಕರಿಸಿದೆ ಎಂದು ತನ್ನ ತಂದೆಗೆ ತಿಳಿಸಿದನೆಂಬ ನಂಬಿಕೆಯೂ ಇದೆ ಎಂದು ಹೇಳಿದರು. ಈ ಸುದ್ದಿಯು ಬುದ್ಧನ ಸಂದೇಶ ಇಡೀ ಜಗತ್ತಿಗೆ, ಬುದ್ಧನ ಧರ್ಮ ಮಾನವೀಯತೆಗಾಗಿ ಎಂಬ ನಂಬಿಕೆಯನ್ನು ಹೆಚ್ಚಿಸಿತು ಎಂದು ಪ್ರಧಾನಿ ಹೇಳಿದರು.

ಭಗವಾನ್ ಬುದ್ಧನ ಸಂದೇಶವನ್ನು ಹರಡುವಲ್ಲಿ ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟದ ಪಾತ್ರವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟದ ಮಹಾ ನಿರ್ದೇಶಕರಾಗಿ (ಡಿಜಿ)  ಶ್ರೀ ಶಕ್ತಿ ಸಿನ್ಹಾ ಅವರ ಕೊಡುಗೆಯನ್ನು ಸ್ಮರಿಸಿದರು.  ಶ್ರೀ ಸಿನ್ಹಾ ಅವರು ಇತ್ತೀಚೆಗೆ ನಿಧನರಾದರು.

ಭಗವಾನ್ ಬುದ್ಧ ʻತುಶಿತಾʼ ಸ್ವರ್ಗದಿಂದ ಭೂಮಿಗೆ ಮರಳುವ ದಿನ ಇದಾಗಿದ್ದು, ಈ ಹಿನ್ನೆಲೆಯಲ್ಲಿ ಇಂದಿನ ದಿನವು ಮತ್ತೊಂದು ಶುಭ ಸಂದರ್ಭವಾಗಿದೆ  ಎಂದು ಪ್ರಧಾನಿ ಗಮನ ಸೆಳೆದರು. ಅದಕ್ಕಾಗಿಯೇ, ಇಂದು ʻಅಶ್ವಿನ್ ಹುಣ್ಣಿಮೆʼಯಂದು, ಸನ್ಯಾಸಿಗಳು ತಮ್ಮ ಮೂರು ತಿಂಗಳ 'ವರ್ಷಾವಾಸʼವನ್ನು ಪೂರ್ಣಗೊಳಿಸುತ್ತಾರೆ. 'ವರ್ಷಾವಾಸʼದ ನಂತರ ಸಂಘದ ಸನ್ಯಾಸಿಗಳಿಗೆ 'ಚಿವರ್ ದಾನ್' ನೀಡುವ ಸುಯೋಗ ಇಂದು ನನಗೂ ದೊರೆತಿದೆ ಎಂದು ಶ್ರೀ ಮೋದಿ ಸಂತಸ ವ್ಯಕ್ತಪಡಿಸಿದರು.

ಎಲ್ಲವನ್ನೂ ತನ್ನೊಳಗಿನಿಂದಲೇ  ಪ್ರಾರಂಭಿಸಬೇಕೆಂದು ಎಂದು ಹೇಳಿದ ಬುದ್ಧನು ವಿಶ್ವ್ಯಾಪಿಯಾಗಿದ್ದಾನೆ ಎಂದು ಪ್ರಧಾನಿ ಹೇಳಿದರು. ಬುದ್ಧನ ಬುದ್ಧತ್ವವು ಸರ್ವೋತ್ಕೃಷ್ಟ ಜವಾಬ್ದಾರಿಯ ಪ್ರಜ್ಞೆಯಾಗಿದೆ. ವಿಶ್ವವು ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡುವಾಗ, ಹವಾಮಾನ ಬದಲಾವಣೆಯ ಬಗ್ಗೆ ತನ್ನ ಕಳವಳವನ್ನು ವ್ಯಕ್ತಪಡಿಸುವಾಗ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಆದರೆ, ನಾವು ಬುದ್ಧನ ಸಂದೇಶವನ್ನು ಅಳವಡಿಸಿಕೊಂಡರೆ, 'ಯಾರು ಮಾಡುತ್ತಾರೆ' ಎಂಬುದರ ಬದಲು, 'ಏನು ಮಾಡಬೇಕು' ಎಂಬ ಮಾರ್ಗವು ನಮ್ಮ ಮುಂದೆ ತೆರೆದುಕೊಳ್ಳುತ್ತದೆ ಎಂದರು. ಬುದ್ಧ ಮಾನವೀಯತೆಯ ಆತ್ಮದಲ್ಲಿ ನೆಲೆಸಿದ್ದಾನೆ ಮತ್ತು ವಿವಿಧ ಸಂಸ್ಕೃತಿಗಳು ಹಾಗೂ ದೇಶಗಳನ್ನು ಸಂಪರ್ಕಿಸುತ್ತಿದ್ದಾನೆ. ಬುದ್ಧನ ಬೋಧನೆಯ ಈ ಅಂಶವನ್ನು ಭಾರತವು ತನ್ನ ಬೆಳವಣಿಗೆಯ ಪ್ರಯಾಣದ ಭಾಗವನ್ನಾಗಿ ಮಾಡಿಕೊಂಡಿದೆ ಎಂದರು. "ಮಹಾನ್ ವ್ಯಕ್ತಿಗಳ ಜ್ಞಾನ, ಮಹಾನ್ ಸಂದೇಶಗಳು ಅಥವಾ ಆಲೋಚನೆಗಳನ್ನು ನಿರ್ಬಂಧಿಸುವುದರಲ್ಲಿ ಭಾರತಕ್ಕೆ ಎಂದಿಗೂ ನಂಬಿಕೆಯಿಲ್ಲ. ನಮ್ಮದೆಂಬುದು ಏನೇ ಇದ್ದರೂ  ಅದನ್ನು ಇಡೀ ಮಾನವೀಯತೆಯೊಂದಿಗೆ ಹಂಚಿಕೊಳ್ಳಲಾಗಿದೆ. ಆದ್ದರಿಂದಲೇ ಅಹಿಂಸೆ ಮತ್ತು ಸಹಾನುಭೂತಿಯಂತಹ ಮಾನವೀಯ ಮೌಲ್ಯಗಳು ಭಾರತದ ಹೃದಯಭಾಗದಲ್ಲಿ ಇಷ್ಟು ಸ್ವಾಭಾವಿಕವಾಗಿ ನೆಲೆಗೊಂಡಿವೆ", ಎಂದು ಪ್ರಧಾನಿ ಹೇಳಿದರು.

ಬುದ್ಧ, ಇಂದಿಗೂ ಭಾರತದ ಸಂವಿಧಾನದ ಸ್ಫೂರ್ತಿಯಾಗಿದ್ದಾನೆ. ಬುದ್ಧನ ʻಧಮ್ಮ ಚಕ್ರʼವು ಭಾರತದ ತ್ರಿವರ್ಣ ಧ್ವಜದ ಮೇಲೆ ರಾರಾಜಿಸುತ್ತಾ ನಮಗೆ ಉತ್ತೇಜನ ನೀಡುತ್ತಿದೆ ಎಂದು ಪ್ರಧಾನಿ ಹೇಳಿದರು. ಇಂದಿಗೂ, ಯಾರಾದರೂ ಭಾರತದ ಸಂಸತ್‌ ಭವನಕ್ಕೆ ಭೇಟಿ ನೀಡಿದರೆ,  'ಧರ್ಮ ಚಕ್ರ ಪ್ರವರ್ತನಾಯ' ಎಂಬ ಈ ಮಂತ್ರವನ್ನು ಖಂಡಿತವಾಗಿಯೂ ಅವರ ಕಣ್ಣಿಗೆ ಬೀಳುತ್ತದೆ ಎಂದರು.

ಗುಜರಾತ್‌ನಲ್ಲಿ ಭಗವಾನ್ ಬುದ್ಧನ ಪ್ರಭಾವ ಮತ್ತು ನಿರ್ದಿಷ್ಟವಾಗಿ ಪ್ರಧಾನಮಂತ್ರಿಯವರ ಜನ್ಮಸ್ಥಳವಾದ ವಡ್‌ನಗರದ ಬಗ್ಗೆ ಮಾತನಾಡಿದ ಶ್ರೀ ಮೋದಿ, ದೇಶದ ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲೂ ಪೂರ್ವ ಭಾಗಗಳಿಗೆ ಸಮಾನವಾಗಿ ಬುದ್ಧನ ಪ್ರಭಾವವನ್ನು ಕಾಣಬಹುದು ಎಂದು ಹೇಳಿದರು.  " ಬುದ್ಧನು ಗಡಿ ಮತ್ತು ದಿಕ್ಕುಗಳಿಗೆ ಅತೀತವಾದವನೆಂದು ಗುಜರಾತಿನ ಗತ ಇತಿಹಾಸವು ತೋರಿಸುತ್ತದೆ. ಗುಜರಾತ್ ನೆಲದಲ್ಲಿ ಜನಿಸಿದ ಮಹಾತ್ಮಾ ಗಾಂಧಿ ಅವರು ಬುದ್ಧನ ಸತ್ಯ ಮತ್ತು ಅಹಿಂಸೆಯ ಸಂದೇಶದ ಆಧುನಿಕ ಧ್ವಜ ಧಾರಿಯಾಗಿದ್ದರು", ಎಂದು ಶ್ರಿ ಮೋದಿ ಹೇಳಿದರು.

ಭಗವಾನ್ ಬುದ್ಧನ "ಅಪ್ಪಾ ದೀಪೋ ಭವ" (ನಿಮಗೆ ನೀವೇ ದೀವಿಗೆಯಾಗಿರಿ)  ಸಂದೇಶವನ್ನು ಉಲ್ಲೇಖಿಸಿದ ಪ್ರಧಾನಿಯವರು, ಒಬ್ಬ ವ್ಯಕ್ತಿಯು ಸ್ವಯಂ-ಪ್ರಕಾಶಿತನಾದಾಗ, ಆತನು ಇಡೀ ಜಗತ್ತಿಗೆ ಬೆಳಕನ್ನು ನೀಡಬಲ್ಲನು ಎಂದರು. ಭಾರತವು ಸ್ವಾವಲಂಬಿಯಾಗಲು ಇದೇ ಪ್ರೇರಣೆ ಎಂದು ಅವರು ಹೇಳಿದರು. ವಿಶ್ವದ ಪ್ರತಿಯೊಂದು ದೇಶದ ಪ್ರಗತಿಯಲ್ಲಿ ಭಾಗಿಯಾಗಲು ನಮಗೆ ಶಕ್ತಿ ನೀಡುವ ಸ್ಫೂರ್ತಿಯೂ ಇದೇ ಆಗಿದೆ. ಭಗವಾನ್ ಬುದ್ಧನ ಬೋಧನೆಗಳನ್ನು ಭಾರತವು ʻಅಬ್‌ ಕಾ ಸಾಥ್, ಸಬ್ ಕಾ ವಿಕಾಸ್ʼ, ʻಸಬ್ ಕಾ ವಿಶ್ವಾಸ್ ಔರ್‌ ಸಬ್ ಕಾ ಪ್ರಯಾಸ್‌ʼ ಮಂತ್ರಗಳ ಮೂಲಕ ಮುಂದಿಡುತ್ತಿದೆ ಎಂದು ಪ್ರಧಾನಿ ಹೇಳಿದರು.

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet extends One-Time Special Package for DAP fertilisers to farmers

Media Coverage

Cabinet extends One-Time Special Package for DAP fertilisers to farmers
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 2 ಜನವರಿ 2025
January 02, 2025

Citizens Appreciate India's Strategic Transformation under PM Modi: Economic, Technological, and Social Milestones