ರಾಜ್ಯಸಭೆಯ ಸಭಾಪತಿ ಮತ್ತು ಲೋಕಸಭೆಯ ಅಧ್ಯಕ್ಷರ ಜಂಟಿ ಆಹ್ವಾನದ ಮೇರೆಗೆ ಭಾರತ ಪ್ರವಾಸದಲ್ಲಿರುವ ಮಾಲ್ಡೀವ್ಸ್‌ನ ಪೀಪಲ್ಸ್ ಮಜ್ಲಿಸ್ ನ ಸಭಾಧ್ಯಕ್ಷ ಶ್ರೀ ಮೊಹಮ್ಮದ್ ನಶೀದ್ ಅವರು ಇಂದು ನವದೆಹಲಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.
ಸಭಾಧ್ಯಕ್ಷ ನಶೀದ್ ಅವರನ್ನು ಸ್ವಾಗತಿಸಿದ ಪ್ರಧಾನಿಯವರು, ಎರಡು ಸಂಸತ್ತುಗಳ ನಡುವಿನ ಸಂಬಧವು ಭಾರತ-ಮಾಲ್ಡೀವ್ಸ್ ಸಂಬಂಧದ ಪ್ರಮುಖ ಅಂಶವಾಗಿದೆ ಎಂದರು. ಈ ಭೇಟಿಯು ಎರಡೂ ದೇಶಗಳ ನಡುವಿನ ಸ್ನೇಹವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವರ್ಷದ ಜೂನ್‌ನಲ್ಲಿ ತಾವು ಮಾಲೆಗೆ ನೀಡಿದ ಭೇಟಿಯ ಸಂದರ್ಭದಲ್ಲಿ ಪೀಪಲ್ಸ್ ಮಜ್ಲಿಸ್‌ನ್ನು ಉದ್ದೇಶಿಸಿ ಮಾತನಾಡಿದ್ದನ್ನು ಪ್ರಧಾನಿಯವರು ಸ್ಮರಿಸಿಕೊಂಡರು. ಮಾಲ್ಡೀವ್ಸ್‌ನಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ಸ್ಪೀಕರ್ ನಶೀದ್ ಅವರ ನಿರಂತರ ನಾಯಕತ್ವವನ್ನು ಪ್ರಧಾನಿ ಶ್ಲಾಘಿಸಿದರು. ಸ್ನೇಹಪರ ಮಾಲ್ಡೀವಿಯನ್ನರ ಆಕಾಂಕ್ಷೆಗಳು ಈಡೇರಲು ಸ್ಥಿರವಾದ, ಸಮೃದ್ಧವಾದ ಮತ್ತು ಶಾಂತಿಯುತ ಮಾಲ್ಡೀವ್ಸ್ ಗಾಗಿ ಮಾಲ್ಡೀವ್ಸ್ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುವ ಭಾರತದ ಬದ್ಧತೆಯನ್ನು ಪ್ರಧಾನಿ ಪುನರುಚ್ಚರಿಸಿದರು.
ಕಳೆದ ವರ್ಷ ಮಾಲ್ಡೀವ್ಸ್‌ನಲ್ಲಿ ಹೊಸ ಸರ್ಕಾರ ರಚನೆಯಾದಾಗಿನಿಂದ ಭಾರತ-ಮಾಲ್ಡೀವ್ಸ್ ಸಂಬಂಧಕ್ಕೆ ನಿರಂತರ ಬೆಂಬಲ ನೀಡಿದ್ದಕ್ಕಾಗಿ ಸ್ಪೀಕರ್ ನಶೀದ್ ಅವರು ಪ್ರಧಾನಮಂತ್ರಿಯವರಿಗೆ ಧನ್ಯವಾದ ತಿಳಿಸಿದರು. ಮಾಲ್ಡೀವಿಯನ್ ಜನರ ಕಲ್ಯಾಣಕ್ಕಾಗಿ ಮಾಲ್ಡೀವ್ಸ್‌ನಲ್ಲಿ ಕೈಗೊಂಡ ಅಭಿವೃದ್ಧಿ ಸಹಕಾರ ಉಪಕ್ರಮಗಳಿಗೆ ಅವರು ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಹೇಳಿದರು. ಮಾಲ್ಡೀವ್ಸ್ ಸರ್ಕಾರದ ‘ಇಂಡಿಯಾ ಫಸ್ಟ್’ ನೀತಿಗೆ ತಮ್ಮ ಅಚಲವಾದ ಬೆಂಬಲವನ್ನು ಅವರು ಪುನರುಚ್ಚರಿಸಿದರು ಮತ್ತು ಸಂಸದೀಯ ನಿಯೋಗದ ಭೇಟಿ ಉಭಯ ದೇಶಗಳ ಭ್ರಾತೃತ್ವ ಬಾಂಧವ್ಯ ಮತ್ತು ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡುತ್ತದೆ ಎಂದರು.