ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 18ರಂದು ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆ 2019ರ ವೇಳೆ ಉಜ್ಬೇಕಿಸ್ತಾನದ ಘನತೆವೆತ್ತ ಶ್ರೀ ಶೌಕತ್ ಮಿರ್ಜಿಯೋಯೆವ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಇದಕ್ಕೂ ಮುನ್ನ ನಿನ್ನೆ ಜನವರಿ 17ರಂದು ಗಾಂಧಿನಗರಕ್ಕೆ ಆಗಮಿಸಿದ ಅಧ್ಯಕ್ಷ ಮಿರ್ಜಿಯೋಯೆವ್ ನೇತೃತ್ವದ ಉನ್ನತ ಅಧಿಕಾರದ ನಿಯೋಗವನ್ನು ಗುಜರಾತ್ ರಾಜ್ಯಪಾಲ ಶ್ರೀ ಓ.ಪಿ. ಕೋಹ್ಲಿ ಸ್ವಾಗತಿಸಿದರು.
ಅವರ ಭೇಟಿಯ ವೇಳೆ, ಪ್ರಧಾನಮಂತ್ರಿಯವರು ಅಧ್ಯಕ್ಷ ಮಿರ್ಜಿಯೋಯೆವ್ ಮತ್ತು ಅವರ ನಿಯೋಗಕ್ಕೆ ಗುಜರಾತ್ ಗೆ ಹಾರ್ದಿಕ ಸ್ವಾಗತ ಕೋರಿದರು. 2018ರ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 1ರವರೆಗೆ ಅಧ್ಯಕ್ಷ ಮಿರ್ಜಿಯೋಯೆವ್ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದ ವೇಳೆ ನಡೆದ ಕೊನೆಯ ಸಭೆಯನ್ನು ಸ್ಮರಿಸಿದ ಪ್ರಧಾನಿ, ಈ ಅಧಿಕೃತ ಭೇಟಿಯ ವೇಳೆ ಕೈಗೊಂಡ ವಿವಿಧ ನಿರ್ಧಾರಗಳ ಅನುಷ್ಠಾನ ಮತ್ತು ಪ್ರಗತಿಯ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು. ಗುಜರಾತ್ ಮತ್ತು ಉಜ್ಬೇಕಿಸ್ತಾನದ ಅಂದಿಜಾನ್ ವಲಯದ ನಡುವಿನ ಸಹಕಾರಕ್ಕಾಗಿ ಅಧಿಕೃತ ಭೇಟಿಯ ವೇಳೆ ಅಂಕಿತ ಹಾಕಲಾದ ತಿಳಿವಳಿಕೆ ಒಪ್ಪಂದ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಉಜ್ಬೇಕ್ ನಿಯೋಗದಲ್ಲಿ ಅಂದಿಜಾನ್ ವಲಯದ ಗೌರ್ನರ್ ಉಪಸ್ಥಿತಿಯನ್ನು ಉಲ್ಲೇಖಿಸಿ, ಅಧ್ಯಕ್ಷ ಮಿರ್ಜಿಯೋಯೆವ್ ಭೇಟಿಯ ಪರಿಣಾಮವಾಗಿ ಭಾರತ ಮತ್ತು ಉಜ್ಬೇಕಿಸ್ತಾನ ಮತ್ತು ಅಂದಿಜಾನ್ ಮತ್ತು ಗುಜರಾತ್ ನಡುವೆ ವಲಯದಿಂದ ವಲಯದ ನಡುವಿನ ಸಹಕಾರ ಮತ್ತಷ್ಟು ವರ್ಧಿಸಲಿದೆ ಎಂದರು.
ಪ್ರಧಾನಮಂತ್ರಿಯವರು ಆಫ್ಘಾನಿಸ್ತಾನದ ಅಭಿವೃದ್ಧಿಗೆ ಮತ್ತು ಶಾಂತಿಗೆ ಬೆಂಬಲ ನೀಡಲು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾದ ಉಜ್ಬೇಕಿಸ್ತಾನದ ಸಮರ್ಖಂಡ್ ನಲ್ಲಿ 2019ರ ಜನವರಿ 12-13ರಂದು ನಡೆದ ವಿದೇಶಾಂಗ ಸಚಿವರುಗಳ ಮಟ್ಟದ ಪ್ರಥಮ ಭಾರತ- ಮಧ್ಯ ಏಷ್ಯಾ ಸಂವಾದಕ್ಕೆ ನೀಡಿದ ಬೆಂಬಲಕ್ಕಾಗಿ ಅಧ್ಯಕ್ಷ ಮಿರ್ಜಿಯೋಯೆವ್ ಅವರಿಗೆ ಧನ್ಯವಾದ ಅರ್ಪಿಸಿದರು.
ಅಧ್ಯಕ್ಷ ಶೌಕತ್ ಮಿರ್ಜಿಯೋಯೆವ್ ಅವರು ವೈಬ್ರೆಂಟ್ ಗುಜರಾತ್ ಶೃಂಗದಲ್ಲಿ ಭಾಗವಹಿಸಲು ನೀಡಿದ ಆಹ್ವಾನಕ್ಕಾಗಿ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ಭಾರತದೊಂದಿಗೆ ಉಜ್ಬೇಕಿಸ್ತಾನ್ ನ ಭವಿಷ್ಯದ ಸಹಕಾರದಲ್ಲಿ ಐಟಿ, ಶಿಕ್ಷಣ, ಔಷಧ, ಆರೋಗ್ಯ ಆರೈಕೆ, ಕೃಷಿ-ವ್ಯವಹಾರ ಮತ್ತು ಪ್ರವಾಸೋದ್ಯಮ ಆದ್ಯತೆಯ ಕ್ಷೇತ್ರಗಳಾಗಿದ್ದು, ಭಾರತದಿಂದ ಬಂಡವಾಳವನ್ನು ಆಕರ್ಷಿಸಲು ಉಜ್ಬೇಕಿಸ್ತಾನ್ ಉನ್ನತ ಪ್ರಾಶಸ್ತ್ಯವನ್ನು ಹೊಂದಿದೆ ಎಂದು ಅವರು ತಿಳಿಸಿದರು.
ಮಧ್ಯ ಏಷ್ಯಾ ಪ್ರದೇಶದ ಮೇಲೆ ಭಾರತದ ಧನಾತ್ಮಕ ಪ್ರಭಾವ ಮತ್ತು ಅಫ್ಘಾನಿಸ್ತಾನದ ಶಾಂತಿಯಲ್ಲಿ ಪಾಲ್ಗೊಳ್ಳುವ ರಾಷ್ಟ್ರಗಳ ಜಂಟಿ ಅನ್ವೇಷಣೆಯಾದ ಪ್ರಥಮ ಭಾರತ-ಮಧ್ಯ ಏಷ್ಯಾ ಸಂವಾದದ ಯಶಸ್ವಿ ಫಲಶ್ರುತಿಗಾಗಿ ಪ್ರಧಾನಿಯವರಿಗೆ ಮಿರ್ಜಿಯೊಯೆವ್ ಅಭಿನಂದಿಸಿದರು.
ಇಬ್ಬರೂ ನಾಯಕರು, ಭಾರತದ ಇಂಧನ ಅಗತ್ಯಗಳಿಗೆ ದೀರ್ಘಕಾಲದವರೆಗೆ ಯುರೇನಿಯಂ ಅದಿರು ಸಾಂದ್ರತೆಯನ್ನು ಪೂರೈಸಲು ಭಾರತೀಯ ಅಣು ಇಂಧನ ಇಲಾಖೆ ಮತ್ತು ಉಜ್ಬೇಕಿಸ್ತಾನ್ ಗಣರಾಜ್ಯದ ನೋವೋಯಿ ಮಿನರಲ್ಸ್ ಅಂಡ್ ಮೆಟಲಾರ್ಜಿಕಲ್ ಕಂಪನಿಯ ನಡುವಿನ ಒಪ್ಪಂದಕ್ಕೆ ಸಾಕ್ಷಿಯಾದರು.
ಇಬ್ಬರೂ ನಾಯಕರು, ಉಜ್ಬೇಕಿಸ್ತಾನದಲ್ಲಿ ವಸತಿಗೆ ಹಣಕಾಸು ನೆರವು ಮತ್ತು ಸಾಮಾಜಿಕ ಮೂಲಸೌಕರ್ಯ ಯೋಜನೆಗಳಿಗಾಗಿ ಭಾರತ ಸರ್ಕಾರ ಬೆಂಬಲದೊಂದಿಗೆ ಭಾರತೀಯ ರಫ್ತು ಮತ್ತು ಆಮದು ಬ್ಯಾಂಕ್ ಮತ್ತು ಉಜ್ಬೇಕಿಸ್ತಾನ್ ಗಣರಾಜ್ಯ ಸರ್ಕಾರದ ನಡುವೆ 200 ದಶಲಕ್ಷ ಅಮೆರಿಕನ್ ಡಾಲರ್ ಲೈನ್ ಆಫ್ ಕ್ರೆಡಿಟ್ ನ್ನು ಸ್ವಾಗತಿಸಿದರು. ಈ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧ್ಯಕ್ಷ ಮಿರ್ಜಿಯೋಯೇವ್ ಅಧಿಕೃತ ಭೇಟಿಯ ವೇಳೆ ಉಜ್ಬೇಕಿಸ್ತಾನಕ್ಕೆ 200 ದಶಲಕ್ಷ ಅಮೆರಿಕನ್ ಡಾಲರ್ ಗಳ ಲೈನ್ ಆಫ್ ಕ್ರೆಡಿಟ್ ಘೋಷಿಸಿದ್ದರು.