ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೊರಿಯಾ ಗಣತಂತ್ರದ ಪ್ರಥಮ ಮಹಿಳೆ, ಗೌರವಾನ್ವಿತ ಶ್ರೀಮತಿ . ಕಿಂ ಜಂಗ್ ಸೂಕ್ ಅವರನ್ನು ಇಂದು ಭೇಟಿಯಾದರು.
ಕೊರಿಯಾ ಗಣತಂತ್ರದ ಪ್ರಥಮ ಮಹಿಳೆ, ಶ್ರೀಮತಿ ಕಿಂ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಭಾರತಕ್ಕೆ ಭೇಟಿ ನೀಡಿದ್ದಾರೆ. ಅವರು ಉತ್ತರಪ್ರದೇಶ ಸರ್ಕಾರ ಆಯೋಜಿಸಿರುವ ದೀಪೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನವೆಂಬರ್ 6, 2018 ರಂದು ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಣಿ ಸುರಿರತ್ನ (ಹಿಯೋ ಹ್ವಾಂಗ್ ಓಕ್) ಅವರ ನೂತನ ಸ್ಮಾರಕದ ಶಿಲಾನ್ಯಾಸ ಕಾರ್ಯಕ್ರಮದಲ್ಲಿಯೂ ಪಾಲ್ಗೊಳ್ಳಲಿದ್ದಾರೆ. ಅಯೋಧ್ಯೆ ಮತ್ತು ಕೊರಿಯಾಗಳು ಬಹಳ ಆಳವಾದ ಚಾರಿತ್ರಿಕ ಸಂಪರ್ಕಗಳನ್ನು ಹೊಂದಿವೆ. 48 ನೇ ಕ್ರಿಸ್ತಯುಗದಲ್ಲಿ ಅಯೋಧ್ಯೆಯ ಪೌರಾಣಿಕ ರಾಜಕುಮಾರಿ ಸುರಿರತ್ನ ಅವರು ಕೊರಿಯಾಗೆ ಪ್ರಯಾಣ ಬೆಳೆಸಿ ಅಲ್ಲಿನ ರಾಜ ಸುರೋ ಅವರನ್ನು ವಿವಾಹವಾದ ಕಥೆಗಳಿವೆ.
ಭೇಟಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಮತ್ತು ಪ್ರಥಮ ಮಹಿಳೆ ಶ್ರೀಮತಿ ಕಿಂ ಅವರು, ಭಾರತ ಮತ್ತು ಕೊರಿಯಾ ನಡುವಿನ ಆಳವಾದ ನಾಗರಿಕ ಮತ್ತು ಧಾರ್ಮಿಕ ಸಂಪರ್ಕಗಳ ಬಗ್ಗೆ ಚರ್ಚಿಸಿದರು ಮತ್ತು ಜನರ ವಿನಿಮಯವನ್ನು ಉತ್ತೇಜಿಸುವ ಬಗ್ಗೆ ಪರಸ್ಪರ ಅಭಿಪ್ರಾಯ ಹಂಚಿಕೊಂಡರು.
ಸಿಯೋಲ್ ಶಾಂತಿ ಪ್ರಶಸ್ತಿ ದೊರೆತಿರುವುದಕ್ಕೆ ಪ್ರಥಮ ಮಹಿಳೆ ಶ್ರೀಮತಿ ಕಿಂ ಅವರು ಪ್ರಧಾನಮಂತ್ರಿ ಅವರನ್ನು ಅಭಿನಂದಿಸಿದರು. ಪ್ರಧಾನಮಂತ್ರಿ ಅವರು ಈ ಗೌರವ ನಿಜವಾಗಿಯೂ ಭಾರತದ ಜನತೆಗೆ ಸಲ್ಲಬೇಕಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಅಧ್ಯಕ್ಷ ಶ್ರೀ ಮೂನ್ ಜೇ ಇನ್ ಅವರು 2018ರ ಜುಲೈ ತಿಂಗಳಲ್ಲಿ ಭಾರತಕ್ಕೆ ಯಶಸ್ವೀ ಭೇಟಿ ನೀಡಿದ್ದನ್ನು ಪ್ರಧಾನಮಂತ್ರಿ ಅವರು ಹಾರ್ದಿಕವಾಗಿ ಸ್ಮರಿಸಿಕೊಂಡರು. ಈ ಭೇಟಿ ಭಾರತ –ಕೊರಿಯಾ ಗಣತಂತ್ರದ ನಡುವೆ ವಿಶೇಷ ವ್ಯೂಹಾತ್ಮಕ ಸಹಭಾಗಿತ್ವಕ್ಕೆ ಹೊಸ ಬಲ ತುಂಬಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.