ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಮಧ್ಯಾಹ್ನ ಆಫ್ಘಾನಿಸ್ತಾನದ ಮುಖ್ಯ ಕಾರ್ಯ ನಿರ್ವಾಹಕ ಡಾ. ಅಬ್ದುಲ್ಲಾ ಅಬ್ದುಲ್ಲಾ ಅವರನ್ನು ಭೇಟಿ ಮಾಡಿದರು.
ಪ್ರಧಾನಮಂತ್ರಿಯವರು ಎರಡು ದಿನಗಳ ಕಾರ್ಯ ಭೇಟಿಯಲ್ಲಿರುವ ಡಾ. ಅಬ್ದುಲ್ಲಾ ಅವರಿಗೆ ಆತ್ಮೀಯ ಸ್ವಾಗತ ನೀಡಿದರು.
ಇಬ್ಬರೂ ನಾಯಕರು ಭಾರತ ಮತ್ತು ಆಫ್ಘಾನಿಸ್ತಾನದ ನಡುವಿನ ಬಹುಮುಖಿ ವ್ಯೂಹಾತ್ಮಕ ಪಾಲುದಾರಿಕೆಯ ಬಲ ಮತ್ತು ಆಪ್ತತೆಯನ್ನು ಪುನರುಚ್ಚರಿಸಿದರು. ದೆಹಲಿಯಲ್ಲಿ ನಡೆದ ದ್ವಿಪಕ್ಷೀಯ ವ್ಯೂಹಾತ್ಮಕ ಪಾಲುದಾರಿಕೆ ಮಂಡಳಿಯ ಸಭೆಯಲ್ಲಿ ಇತ್ತೀಚೆಗೆ ಘೋಷಿಸಿದ್ದ ಹೊಸ ಅಭಿವೃದ್ಧಿ ಪಾಲುದಾರಿಕೆಯೂ ಸೇರಿದಂತೆ ವೇಗವರ್ಧಿತ ಸಹಕಾರವನ್ನು ಅವರು ಸ್ವಾಗತಿಸಿದರು. ಅವರು ದ್ವಿಪಕ್ಷೀಯ ಆರ್ಥಿಕ ಮತ್ತು ಅಭಿವೃದ್ಧಿ ಸಹಕಾರವನ್ನು ಹೆಚ್ಚಿಸುವ ಮತ್ತು ಈ ನಿಟ್ಟಿನಲ್ಲಿರುವ ವಿಫುಲ ಅವಕಾಶಗಳ ಬಗ್ಗೆ ಚರ್ಚಿಸಿದರು.
ಡಾ. ಅಬ್ದುಲ್ಲಾ ಅವರು ಆಫ್ಘಾನಿಸ್ತಾನದಲ್ಲಿ ಸಾಮರ್ಥ್ಯವರ್ಧನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಭಾರತದ ನಿರಂತರ ಬೆಂಬಲಕ್ಕೆ ಆಫ್ಘಾನಿಸ್ತಾನದ ಆಳವಾದ ಶ್ಲಾಘನೆಯನ್ನು ನಿವೇದಿಸಿದರು.
ಪ್ರಧಾನಮಂತ್ರಿಯವರು ಆಫ್ಘಾನಿಸ್ತಾನದ ಶಾಂತಿಯುತ, ಸಂಘಟಿತ, ಪ್ರಗತಿಪರ, ಸಮಗ್ರ ಮತ್ತು ಪ್ರಜಾಸತ್ತಾತ್ಮಕ ಆಫ್ಘಾನಿಸ್ತಾನ ನಿರ್ಮಾಣದ ಆಫ್ಘನ್ ಪ್ರಯತ್ನಕ್ಕೆ ಭಾರತದ ಸಂಪೂರ್ಣ ಬೆಂಬಲದ ಬದ್ಧತೆಯನ್ನು ಪುನರುಚ್ಚರಿಸಿದರು.
ಇಬ್ಬರೂ ನಾಯಕರು, ಆಫ್ಘಾನಿಸ್ತಾನದ ಭದ್ರತೆಯ ಪರಿಸರ ಮತ್ತು ವಿಸ್ತರಿತ ವಲಯ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡರು ಮತ್ತು ಈ ನಿಟ್ಟಿನಲ್ಲಿ, ಆಪ್ತ ಸಹಕಾರ ಮತ್ತು ಸಹಯೋಗಕ್ಕೆ ಸಮ್ಮತಿ ಸೂಚಿಸಿದರು.
ಸಭೆಯ ಅಂತ್ಯದಲ್ಲಿ ಪೊಲೀಸ್ ತರಬೇತಿ ಮತ್ತು ಅಭಿವೃದ್ಧಿ ಕುರಿತ ತಾಂತ್ರಿಕ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದವನ್ನು ಇಬ್ಬರೂ ನಾಯಕರ ಸಮಕ್ಷಮದಲ್ಲಿ ವಿನಿಮಯ ಮಾಡಿಕೊಳ್ಳಲಾಯಿತು. ಪ್ರಧಾನಮಂತ್ರಿಯವರು ತಮಗೆ ಡಾ.
ಅಬ್ದುಲ್ಲಾ ಅವರು ಕೊಡುಗೆಯಾಗಿ ನೀಡಿದ ಆಫ್ಘಾನಿಸ್ತಾನದ ಖ್ಯಾತ ಕುಶಲಕರ್ಮಿ ತಯಾರಿಸಿರುವ ಮೊಸಾಯಿಕ್ ಭಾವಚಿತ್ರದ ಬಗ್ಗೆ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದರು.