ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ಪುಣೆಯಲ್ಲಿರುವ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ (ಐ.ಐ.ಎಸ್.ಇ.ಆರ್.) ವಿಜ್ಞಾನಿಗಳ ಜೊತೆ ಸಂವಾದ ನಡೆಸಿದರು.
ಐ.ಐ.ಎಸ್.ಇ.ಆರ್. ವಿಜ್ಞಾನಿಗಳು ಪ್ರಧಾನ ಮಂತ್ರಿ ಅವರಿಗೆ ಹೊಸ ವಸ್ತು ಶೋಧ ಮತ್ತು ಸ್ವಚ್ಛ ಇಂಧನ ಉಪಕರಣಗಳು ಹಾಗು ಕೃಷಿ ಜೈವಿಕ ತಂತ್ರಜ್ಞಾನದಿಂದ ಹಿಡಿದು ನೈಸರ್ಗಿಕ ಸಂಪನ್ಮೂಲ ಮ್ಯಾಪಿಂಗ್ ವರೆಗೆ ವಿವಿಧ ಶೀರ್ಷಿಕೆಗಳ ಬಗ್ಗೆ ಮಾಹಿತಿ ಪೂರ್ಣ ವರ್ಣನಾ ಪ್ರದರ್ಶಿಕೆಯನ್ನು ಒದಗಿಸಿದರು. ಈ ಪ್ರದರ್ಶಿಕೆಯು ಅಣು ಜೀವ ವಿಜ್ಞಾನ, ಸೂಕ್ಷ್ಮಾಣು ಜೀವಿ ಪ್ರತಿರೋಧ, ವಾತಾವರಣ ಅಧ್ಯಯನ ಮತ್ತು ಗಣಿತ ಹಣಕಾಸು ಸಂಶೋಧನೆಯ ಮಾಹಿತಿಯನ್ನೂ ಒಳಗೊಂಡಿತ್ತು.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಹಿತಿಪೂರ್ಣ ವರ್ಣನಾ ಪ್ರದರ್ಶಿಕೆಗಳಿಗಾಗಿ ವಿಜ್ಞಾನಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದ ವಿಶಿಷ್ಟ ಮತ್ತು ನಿರ್ದಿಷ್ಟ ಆವಶ್ಯಕತೆಗಳಿಗಾಗಿ ಕಡಿಮೆ ವೆಚ್ಚದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಂತೆ ಮತ್ತು ಭಾರತದ ತ್ವರಿತಗತಿಯ ಅಭಿವೃದ್ಧಿಗೆ ಸಹಾಯ ಮಾಡುವಂತೆ ಅವರು ವಿಜ್ಞಾನಿಗಳಿಗೆ ಮನವಿ ಮಾಡಿದರು.
ಇದಕ್ಕೆ ಮೊದಲು ಪ್ರಧಾನ ಮಂತ್ರಿ ಅವರು ಐ.ಐ.ಎಸ್.ಇ.ಆರ್. ನ ಪುಣೆ ಕ್ಯಾಂಪಸ್ಸಿಗೆ ಭೇಟಿ ನೀಡಿದರು ಮತ್ತು ವಿದ್ಯಾರ್ಥಿಗಳು ಹಾಗು ಸಂಶೋಧಕರ ಜೊತೆ ಸಂವಾದ ನಡೆಸಿದರು. ಐ.ಐ.ಎಸ್.ಇ.ಆರ್ . ನಲ್ಲಿ ಸಿ.ಡಾಕ್ ಅಳವಡಿಸಿರುವ ಅತ್ಯಾಧುನಿಕ ಸೂಪರ್ ಕಂಪ್ಯೂಟರ್ ಪರಂ ಬ್ರಹ್ಮ ಕ್ಕೆ ಪ್ರಧಾನ ಮಂತ್ರಿ ಅವರು ಭೇಟಿ ನೀಡಿದರು. ಈ ಕಂಪ್ಯೂಟರ್ 797 ಟೆರಾಪ್ಲೊಪ್ಸ್ ಗಳ ಕಂಪ್ಯೂಟಿಂಗ್ ಸಾಮರ್ಥ್ಯ ಹೊಂದಿದೆ.
ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಐ.ಐ.ಎಸ್.ಇ.ಆರ್.) ಗಳು ಭಾರತದಲ್ಲಿಯ ಪ್ರಮುಖ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಗುಂಪಿನ ಸಂಸ್ಥೆಗಳಾಗಿವೆ.
ಪ್ರಧಾನ ಮಂತ್ರಿ ಅವರು ಡಿ.ಜಿ.ಪಿ.ಗಳ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ಎರಡು ದಿನಗಳ ಪುಣೆ ಭೇಟಿಯಲ್ಲಿದ್ದಾರೆ.