ಭಾರತದಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಸಾಧಿಸುವ ಸಲುವಾಗಿ ಎಲ್ಲಾ ಪಾಲುದಾರರು ಕೇಂದ್ರೀಕೃತ ಪ್ರಯತ್ನ ಮಾಡಬೇಕು ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಬಜೆಟ್ ಪೂರ್ವಭಾವಿಯಾಗಿ ನವದೆಹಲಿಯ ನೀತಿ ಆಯೋಗದಲ್ಲಿ ಇಂದು ಪ್ರಧಾನ ಮಂತ್ರಿಯವರು, ಹಿರಿಯ ಅರ್ಥಶಾಸ್ತ್ರಜ್ಞರು, ಖಾಸಗಿ ಇಕ್ವಿಟಿ/ ವೆಂಚರ್ ಬಂಡವಾಳಗಾರರು, ಉತ್ಪಾದನೆ, ಪ್ರವಾಸೋದ್ಯಮ, ಉಡುಪು ಮತ್ತು ಎಫ್‌ಎಂಸಿಜಿಯ ಉದ್ಯಮಿಗಳು, ವಿಶ್ಲೇಷಣಾಕಾರರು, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಹಣಕಾಸು ಕ್ಷೇತ್ರಗಳ ವಿಷಯ ತಜ್ಞರೊಂದಿಗೆ ಸಂವಾದ ಸಭೆ ನಡೆಸಿದರು.
ಎರಡು ಗಂಟೆಯ ಮುಕ್ತ ಚರ್ಚೆಯು ಆಯಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರ ಅನುಭವಗಳನ್ನು ಮುಂಚೂಣಿಗೆ ತಂದಿರುವುದಕ್ಕೆ ಸಂತಸವಾಗಿದೆ ಎಂದು ಪ್ರಧಾನಿ ಹೇಳಿದರು.
ಇದು ನೀತಿ ನಿರೂಪಕರು ಮತ್ತು ವಿವಿಧ ಪಾಲುದಾರರ ನಡುವಿನ ಸಮನ್ವಯ ಹೆಚ್ಚಿಸುತ್ತದೆ. ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕಲ್ಪನೆಯು ಹಠಾತ್ತಾಗಿ ಆದ ಬೆಳವಣಿಗೆಯಲ್ಲ. ಇದು ದೇಶದ ಸಾಮರ್ಥ್ಯಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಆಧರಿಸಿದೆ ಎಂದು ಪ್ರಧಾನಿ ಹೇಳಿದರು.
ಭಾರತದ ಆರ್ಥಿಕತೆಯ ಬಲವಾದ ಹೀರಿಕೊಳ್ಳುವ ಸಾಮರ್ಥ್ಯವೇ ಅದರ ಮೂಲಭೂತ ಶಕ್ತಿ ಮತ್ತು ಮತ್ತೆ ಪುಟಿದೇಳುವ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಪ್ರವಾಸೋದ್ಯಮ, ನಗರಾಭಿವೃದ್ಧಿ, ಮೂಲಸೌಕರ್ಯ ಮತ್ತು ಕೃಷಿ ಆಧಾರಿತ ಕೈಗಾರಿಕೆಗಳಂತಹ ಕ್ಷೇತ್ರಗಳು ಆರ್ಥಿಕತೆಯ ಬೆಳವಣಿಗೆಗೆ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿವೆ ಎಂದು ಪ್ರಧಾನಿ ಹೇಳಿದರು.
ಇಂತಹ ವೇದಿಕೆಗಳಲ್ಲಿನ ಮುಕ್ತ ಚರ್ಚೆಗಳು ಮತ್ತು ಅಭಿಪ್ರಾಯ ವಿನಿಮಯಗಳು ಆರೋಗ್ಯಕರ ಚರ್ಚೆಗೆ ಮತ್ತು ಸಮಸ್ಯೆಗಳನ್ನು ಅರಿಯಲು ಕಾರಣವಾಗುತ್ತದೆ. ಇದು ಸಕಾರಾತ್ಮಕ ಮನಸ್ಥಿತಿಯನ್ನು ಬೆಳೆಸುತ್ತದೆ ಮತ್ತು ಸಮಾಜದಲ್ಲಿ ಸಾಧಿಸಬಹುದು ಎಂಬ ಮನೋಭಾವವನ್ನು ಬೆಳೆಸುತ್ತದೆ ಎಂದು ಪ್ರಧಾನಿ ಹೇಳಿದರು.
ಭಾರತವು ಅಪರಿಮಿತ ಸಾಧ್ಯತೆಗಳನ್ನು ಹೊಂದಿರುವ ನೆಲ ಎಂದ ಅವರು, ವಾಸ್ತವ ಮತ್ತು ಗ್ರಹಿಕೆಗಳ ನಡುವಿನ ಅಂತರವನ್ನು ತೊಡೆದು ಹಾಕಲು ಎಲ್ಲಾ ಪಾಲುದಾರರು ತಮ್ಮ ಕೈಲಾದಷ್ಟು ಕೊಡುಗೆ ನೀಡಬೇಕು ಎಂದು ವಿನಂತಿಸಿಕೊಂಡರು.
“ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಮತ್ತು ಒಂದು ದೇಶದಂತೆ ಯೋಚಿಸಬೇಕು” ಎಂದು ಅವರು ಹೇಳಿದರು,
ಅರ್ಥಶಾಸ್ತ್ರಜ್ಞರಾದ ಶ್ರೀ ಶಂಕರ್ ಆಚಾರ್ಯ, ಶ್ರೀ ಆರ್ ನಾಗರಾಜ್, ಶ್ರೀಮತಿ ಫರ್ಜಾನಾ ಅಫ್ರಿದಿ, ವೆಂಚರ್ ಕ್ಯಾಪಿಟಲಿಸ್ಟ್ ಶ್ರೀ ಪ್ರದೀಪ್ ಷಾ, ಕೈಗಾರಿಕೋದ್ಯಮಿಗಳಾದ ಶ್ರೀ ಅಪ್ಪರಾವ್ ಮಲ್ಲವರಪು, ಶ್ರೀ ದೀಪ್ ಕಲ್ರಾ, ಶ್ರೀ ಪತಂಜಲಿ ಗೋವಿಂದ್ ಕೇಸ್ವಾನಿ, ಶ್ರೀ ದೀಪಕ್ ಸೇಠ್, ಶ್ರೀ ಶ್ರೀಕುಮಾರ್ ಮಿಶ್ರಾ, ವಿಷಯ ತಜ್ಞರಾದ ಶ್ರೀ ಆಶಿಶ್ ಧವನ್ ಮತ್ತು ಶ್ರೀ ಶಿವ್ ಸರೀನ್ ಚರ್ಚೆಯಲ್ಲಿ ಭಾಗವಹಿಸಿದ 38 ಪ್ರತಿನಿಧಿಗಳಲ್ಲಿದ್ದರು.
ಗೃಹ ಸಚಿವ ಶ್ರೀ ಅಮಿತ್ ಶಾ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಎಂಎಸ್ಎಂಇ ಸಚಿವ ಶ್ರೀ ನಿತಿನ್ ಗಡ್ಕರಿ, ರೈಲ್ವೆ ಮತ್ತು ವಾಣಿಜ್ಯ ಸಚಿವ ಶ್ರೀ ಪಿಯೂಷ್ ಗೋಯಲ್ ಮತ್ತು ಕೃಷಿ ಮತ್ತು ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ, ಪಂಚಾಯತಿ ರಾಜ್ ಸಚಿವ ಶ್ರೀ ನರೇಂದ್ರ ತೋಮರ್, ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳು, ನೀತಿ ಆಯೋಗದ ಉಪಾಧ್ಯಕ್ಷ ಶ್ರೀ ರಾಜೀವ್ ಕುಮಾರ್ ಮತ್ತು ನೀತಿ ಆಯೋಗದ ಕಾರ್ಯನಿರ್ವಹಣಾಧಿಕಾರಿ ಶ್ರೀ ಅಮಿತಾಭ್ ಕಾಂತ್ ಸಭೆಯಲ್ಲಿ ಭಾಗವಹಿಸಿದ್ದರು.