ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನವದೆಹಲಿಯಲ್ಲಿ ಸಿಎಸ್ಐಆರ್ ಸೊಸೈಟಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಿಎಸ್ಐಆರ್ ಮಾಡಿರುವ ಕೆಲಸಗಳ ಬಗ್ಗೆ ಪ್ರಧಾನಿ ಅವರಿಗೆ ಸ್ಥೂಲವಾಗಿ ವಿವರಿಸಲಾಯಿತು. ಅವರು ಸಂಸ್ಥೆ ಕೈಗೊಂಡಿರುವ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಭವಿಷ್ಯದ ದಿಕ್ಸೂಚಿಯನ್ನು ಹೊಂದುವಂತೆ ಸಲಹೆ ನೀಡಿದರು.
ಪ್ರಧಾನಮಂತ್ರಿ ಅವರು, ವಿಜ್ಞಾನವನ್ನು ದೇಶದ ಪ್ರತಿಯೊಂದು ಮೂಲೆ ಮೂಲೆಗೂ ಹಾಗೂ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ತಲುಪಿಸಲು ವಾಸ್ತವ ಪ್ರಯೋಗಾಲಯಗಳು(ವರ್ಚುಯಲ್ ಲ್ಯಾಬ್)ಗಳನ್ನು ಅಭಿವೃದ್ಧಿಪಡಿಸುವ ಅಗತ್ಯತೆಯನ್ನು ಪ್ರತಿಪಾದಿಸಿದರು. ಅವರು ವಿಜ್ಞಾನದ ಕಡೆಗೆ ಯುವ ವಿದ್ಯಾರ್ಥಿಗಳನ್ನು ಆಕರ್ಷಿಸುವ ಅಗತ್ಯತೆ ಮತ್ತು ಮುಂದಿನ ತಲೆಮಾರಿನಲ್ಲಿ ವೈಜ್ಞಾನಿಕ ಕೌಶಲ್ಯ ಬಲವರ್ಧನೆಯ ಅಗತ್ಯತೆಯ ಬಗ್ಗೆ ಮಾತನಾಡಿದರು. ಅಲ್ಲದೆ ಅವರು, ಜಗತ್ತಿನ ನಾನಾ ಭಾಗಗಳಲ್ಲಿ ದುಡಿಯುತ್ತಿರುವ ಭಾರತೀಯರನ್ನು ಬಳಸಿಕೊಂಡು ಸಂಶೋಧನಾ ಮತ್ತು ಅಭಿವೃದ್ಧಿ ಯೋಜನೆಗಳ ಸಹಭಾಗಿತ್ವವನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.
ಭಾರತದ ಆಶೋತ್ತರಗಳ ಈಡೇರಿಕೆಯ ಅಗತ್ಯತೆಗಳ ನಿಟ್ಟಿನಲ್ಲಿ ಕೆಲಸ ಮಾಡುವಂತೆ ವಿಜ್ಞಾನಿಗಳಿಗೆ ಕರೆ ನೀಡಿದ ಅವರು, ಸಿಎಸ್ಐಆರ್ ಭಾರತ ಎದುರಿಸುತ್ತಿರುವ ವಾಸ್ತಾವಿಕ, ಸಾಮಾಜಿಕ ಸಮಸ್ಯೆಗಳಾದ ಅಪೌಷ್ಠಿಕಾಂಶ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಜಲಸಂರಕ್ಷಣೆ ಮತ್ತಿತರ ವಿಷಯಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಮುಂದಾಗುವ ಅಗತ್ಯವಿದೆ ಎಂದು ಕರೆ ನೀಡಿದರು.
ಪ್ರಧಾನಮಂತ್ರಿ ಅವರು, 5ಜಿ, ಕೃತಕ ಬುದ್ಧಿಮತ್ತೆ(ಎಐ) ಮತ್ತು ನವೀಕರಿಸಬಹುದಾದ ಇಂಧನ ಸಂಗ್ರಹ ಮಾಡುವ, ದೀರ್ಘಕಾಲ ಬಾಳಿಕೆ ಬರುವ ಮತ್ತು ಕೈಗೆಟಕುವ ದರದ ಬ್ಯಾಟರಿಗಳು ಮತ್ತಿತರ ಬೆಳೆಯುತ್ತಿರುವ ಸವಾಲುಗಳನ್ನು ಎದುರಿಸಲು ವಿಜ್ಞಾನಿಗಳು ಹೆಚ್ಚಿನ ಗಮನಹರಿಸಬೇಕು ಎಂದು ಕರೆ ನೀಡಿದರು. ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ವಿಜ್ಞಾನ ಎರಡನ್ನೂ ಸೇರಿಸಿ ವಿಶ್ವದರ್ಜೆಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು. ಅಲ್ಲದೆ ಅವರು ಆವಿಷ್ಕಾರಗಳಲ್ಲಿ ವಾಣಿಜ್ಯೀಕರಣದ ಪ್ರಾಮುಖ್ಯತೆಗಳನ್ನು ಕುರಿತು ಮಾತನಾಡಿದರು.
ಸಾಮಾನ್ಯ ಜನರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಸಿಎಸ್ಐಆರ್ ನಲ್ಲಿನ ವೈಜ್ಞಾನಿಕ ಸಮುದಾಯ ಕೆಲಸ ಮಾಡಬೇಕು ಎಂದು ಪ್ರಧಾನಮಂತ್ರಿ ಬೋಧಿಸಿದರು.