ಭೂತಾನದ ಡೃಕ್ ನ್ಯಾಮ್ರಪ ಶೋಗ್ಪ ಪಕ್ಷದ ಅಧ್ಯಕ್ಷ ಡಾ. ಲೊಟೆ ಶೆರಿಂಗ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಮಾತನಾಡಿದರು. ಭೂತಾನದ ಮೂರನೇ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ಪಕ್ಷದ ವಿಜಯಕ್ಕಾಗಿ ಮತ್ತು ರಾಷ್ಟ್ರೀಯ ಶಾಸನ ಸಭೆಗೆ ಅವರನ್ನು ಚುನಾಯಿಸಿದ್ದಕ್ಕಾಗಿ, ಡಾ. ಲೊಟೆ ಶೆರಿಂಗ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದನೆ ತಿಳಿಸಿದರು. ಭೂತಾನದ ಪ್ರಜಾಪ್ರಭುತ್ವ ಬಲವರ್ಧನೆಗೆ ಪ್ರಮುಖ ಮೈಲಿಗಲ್ಲಾದ ಸಾರ್ವತ್ರಿಕ ಚುನಾವಣೆ ಯಶಸ್ವಿಯಾಗಿ ನೆರೆವೇರಿರುವುದನ್ನು ಪ್ರಧಾನ ಮಂತ್ರಿ ಶ್ರೀ. ಮೋದಿ ಸ್ವಾಗತಿಸಿದರು.
ಪರಸ್ಪರ ತಿಳುವಳಿಕೆಯ, ಸೌಹಾರ್ದ-ಸದಾಶಯ, ವಿಶ್ವಾಸಗಳ ಹಾಗೂ ಹಂಚಿಕೊಂಡ ಆಸಕ್ತಿಗಳ ಮತ್ತು ಮೌಲ್ಯಗಳ ಆಧಾರದಲ್ಲಿ ಭೂತಾನದ ಜತೆ ಇರುವ ಸ್ನೇಹಾಚಾರ ಮತ್ತು ಸಹಕಾರಗಳ ಅನನ್ಯ ಸಂಬಂಧಗಳನ್ನು ಇನ್ನಷ್ಟು ಬಲಿಷ್ಠಗೊಳಿಸಲು ಭಾರತ ಆದ್ಯತೆ ನೀಡುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.
ಎರಡೂ ದೇಶಗಳ ನಡುವಿನ ರಾಯಭಾರಿ ಸಂಬಂಧಗಳ ಸುವರ್ಣ ಮಹೋತ್ಸವ ಆಚರಣೆ ನಡೆಯುತ್ತಿರುವ, ಈ ಸಂದರ್ಭದಲ್ಲಿ ಭೂತಾನ ಸರಕಾರ ಮತ್ತು ಅಲ್ಲಿನ ಜನತೆಯ ಆದ್ಯತೆ ಹಾಗೂ ಆಸಕ್ತಿಗಳಿಗೆ ಅನುಗುಣವಾಗಿ, ಸಾಮಾಜಿಕ-ಆರ್ಥಿಕ ಪರಿವರ್ತನೆ ನಿಟ್ಟಿನಲ್ಲಿ ಭೂತಾನದ ನೂತನ ಸರಕಾರದ ರಾಷ್ಟ್ರೀಯ ಪ್ರಯತ್ನಗಳಿಗೆ, ಭಾರತದ ವೇಗಗತಿಯ ಸ್ಪಂದನೆಯ ಬದ್ಧತೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುನರುಚ್ಛರಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ ಭೇಟಿಗಾಗಿ ಡಾ. ಲೊಟೆ ಶೆರಿಂಗ್ ಅವರನ್ನು ಆಮಂತ್ರಿಸಿದರು.
ಪ್ರಧಾನಮಂತ್ರಿ ಅವರ ಶುಭಾಶಯ ಮತ್ತು ಆಭಿನಂದನೆಗಳಿಗಾಗಿ ಡಾ. ಲೊಟೆ ಶೆರಿಂಗ್ ಅವರು ಧನ್ಯವಾದ ವ್ಯಕ್ತಪಡಿಸಿದರು ಮತ್ತು ಆಮಂತ್ರಣ ಸ್ವೀಕರಿಸಿದ ಅವರು, ಭಾರತಕ್ಕೆ ಆದಷ್ಟು ಬೇಗ ಭೇಟಿ ನೀಡುವುದಾಗಿ ತಿಳಿಸಿದರು. ಭಾರತ ಮತ್ತು ಭೂತಾನದ ಜನತೆಯ ಪ್ರಯೋಜನಕ್ಕಾಗಿ ಅನನ್ಯ ಮತ್ತು ಬಹಮುಖದ ದ್ವಿಪಕ್ಷೀಯ ಸಹಕಾರಗಳನ್ನು ಮುಂದುವರಿಸಿ ಇನ್ನೂ ಎತ್ತರಕ್ಕೊಯ್ಯಲು ಇಬ್ಬರೂ ನಾಯಕರೂ ಪರಸ್ಪರ ಒಪ್ಪಿಕೊಂಡರು.