ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ಉದ್ಘಾಟನಾ ಅಧಿವೇಶನದೊಂದಿಗೆ ರಾಜ್ಯಪಾಲರ 50 ನೇ ವಾರ್ಷಿಕ ಸಮ್ಮೇಳನ ಪ್ರಾರಂಭವಾಯಿತು. ಹೊಸದಾಗಿ ರೂಪುಗೊಂಡ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು ಸೇರಿದಂತೆ 17 ಮಂದಿ ಮೊದಲ ಬಾರಿಯ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಗೌರವಾನ್ವಿತ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಮಂತ್ರಿ, ಗೃಹ ಸಚಿವರು ಮತ್ತು ಜಲಶಕ್ತಿ ಸಚಿವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿಯವರು, 1949 ರಲ್ಲಿ ಮೊದಲ ಸಮ್ಮೇಳನವನ್ನು ಆಯೋಜಿಸಿದ ಸುದೀರ್ಘ ಇತಿಹಾಸವನ್ನು ನೆನಪಿಸುತ್ತಾ, ಸಮ್ಮೇಳನದ ಪ್ರಸ್ತುತ 50 ನೇ ಆವೃತ್ತಿಯು ಹಿಂದಿನ ಸಮ್ಮೇಳನಗಳ ಸಾಧನೆಗಳು ಮತ್ತು ಫಲಿತಾಂಶಗಳನ್ನು ಮೌಲ್ಯಮಾಪನ ಮಾಡುವ ಹಾಗೂ ಮುಂದಿನ ಮಾರ್ಗದ ನೀಲ ನಕ್ಷೆಯನ್ನು ರೂಪಿಸುವ ವಿಶಿಷ್ಟ ಸಂದರ್ಭವಾಗಿದೆ ಎಂದು ಹೇಳಿದರು. ಸಹಕಾರಿ ಮತ್ತು ಸ್ಪರ್ಧಾತ್ಮಕ ಫೆಡರಲ್ ರಚನೆಯನ್ನು ಸಾಕಾರಗೊಳಿಸುವಲ್ಲಿ ರಾಜ್ಯಪಾಲರಿಗೆ ವಿಶೇಷ ಪಾತ್ರವಿದೆ ಎಂದು ಅವರು ಹೇಳಿದರು.
ಈ ಸಮ್ಮೇಳನವು ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳಿಗೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಮತ್ತು ಪರಸ್ಪರರ ಅನುಭವಗಳಿಂದ ಕಲಿಯಲು ಹಾಗೂ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ವಿಭಿನ್ನ ಮತ್ತು ವೈವಿಧ್ಯಮಯ ಅಗತ್ಯತೆಗಳು ಮತ್ತು ಅವಶ್ಯಕತೆಗಳಿಗೆ ಸೂಕ್ತವಾದ ಅಂತರರಾಷ್ಟ್ರೀಯ ಅತ್ಯುತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ಅವುಗಳ ಆಡಳಿತಾತ್ಮಕ ರಚನೆಯಿಂದಾಗಿ ಕೇಂದ್ರಾಡಳಿತ ಪ್ರದೇಶಗಳು ಅಭಿವೃದ್ಧಿಯ ದೃಷ್ಟಿಯಿಂದ ಆದರ್ಶಪ್ರಾಯವಾಗಿ ಹೊರಹೊಮ್ಮಬಹುದು ಎಂದು ಪ್ರಧಾನಿ ಹೇಳಿದರು.
ಭಾರತವು ತನ್ನ ಸ್ವಾತಂತ್ರ್ಯದ 75 ನೇ ವರ್ಷಾಚರಣೆಯನ್ನು 2022 ರಲ್ಲಿ ಮತ್ತು 2047 ರಲ್ಲಿ 100 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತದೆ. ಆಡಳಿತ ಯಂತ್ರವನ್ನು ದೇಶದ ಜನರಿಗೆ ಹತ್ತಿರ ತರುವಲ್ಲಿ ಮತ್ತು ಸರಿಯಾದ ಮಾರ್ಗದರ್ಶನ ಮಾಡುವಲ್ಲಿ ರಾಜ್ಯಪಾಲರ ಪಾತ್ರವು ಇನ್ನಷ್ಟು ಮಹತ್ವದ್ದಾಗಿದೆ ಎಂದು ಪ್ರಧಾನಿ ಹೇಳಿದರು. ಭಾರತ ಸಂವಿಧಾನ ರಚನೆಯ 70 ವರ್ಷಗಳನ್ನು ನಾವು ಆಚರಿಸುತ್ತಿರುವಾಗ, ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರಗಳು ಭಾರತೀಯ ಸಂವಿಧಾನದ ಸೇವಾ ಅಂಶಗಳನ್ನು, ವಿಶೇಷವಾಗಿ ನಾಗರಿಕರ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಎತ್ತಿ ತೋರಿಸುವ ಕೆಲಸ ಮಾಡಬೇಕು. ಇದು ನಿಜವಾದ ಅರ್ಥದಲ್ಲಿ ಭಾಗವಹಿಸುವಿಕೆಯ ಆಡಳಿತವನ್ನು ತರಲು ಸಹಾಯ ಮಾಡುತ್ತದೆ ಎಂದರು.
ನಾವು ಮಹಾತ್ಮ ಗಾಂಧಿಯವರ 150 ನೇ ಜಯಂತಿಯನ್ನು ಆಚರಿಸುತ್ತಿರುವ ಈ ಸಂದರ್ಭವನ್ನು, ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳು ನಮ್ಮ ಸಂವಿಧಾನದ ಪ್ರಮುಖ ತಳಪಾಯವಾದ ಗಾಂಧಿವಾದಿ ಆಲೋಚನೆಗಳು ಮತ್ತು ಮೌಲ್ಯಗಳ ನಿರಂತರ ಪ್ರಸ್ತುತತೆಯನ್ನು ಯೋಜಿಸಲು ಬಳಸಿಕೊಳ್ಳಬಹುದು ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ವಿಶ್ವವಿದ್ಯಾನಿಲಯಗಳ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರು ನಮ್ಮ ಯುವಕರಲ್ಲಿ ರಾಷ್ಟ್ರ ನಿರ್ಮಾಣದ ಮೌಲ್ಯಗಳನ್ನು ಬೆಳೆಸಲು ಸಹಾಯ ಮಾಡಬಹುದು ಮತ್ತು ಹೆಚ್ಚಿನ ಸಾಧನೆಗಳತ್ತ ಅವರನ್ನು ಪ್ರೇರೇಪಿಸಲು ನೆರವಾಗಬಹುದು ಎಂದರು.
ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳು ತಮ್ಮ ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸುವಾಗ, ಸಾಮಾನ್ಯ ಜನರ ಅಗತ್ಯಗಳನ್ನು ಆಲಿಸುವಂತೆ ಪ್ರಧಾನ ಮಂತ್ರಿಯವರು ವಿನಂತಿಸಿಕೊಂಡರು. ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡುವಾಗ ಮತ್ತು ಅಸ್ತಿತ್ವದಲ್ಲಿರುವ ಯೋಜನೆಗಳು ಮತ್ತು ಉಪಕ್ರಮಗಳನ್ನು ಬಳಸಿಕೊಳ್ಳುವಾಗ ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಸಮುದಾಯಗಳು, ಮಹಿಳೆಯರು ಮತ್ತು ಯುವಕರು ಸೇರಿದಂತೆ ಸಮಾಜದ ದುರ್ಬಲ ವರ್ಗಗಳ ಉನ್ನತಿಗೆ ಕೆಲಸ ಮಾಡುವಂತೆ ಪ್ರಧಾನ ಮಂತ್ರಿಗಳು ರಾಜ್ಯಪಾಲರನ್ನು ಕೋರಿದರು.
ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಬಗ್ಗೆ ಪ್ರಧಾನ ಮಂತ್ರಿಯವರು ವಿಶೇಷವಾಗಿ ಪ್ರಸ್ತಾಪಿಸಿದರು. ಈ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಮತ್ತು ಬಡವರ ಮತ್ತು ದುರ್ಬಲರ ಸುಧಾರಣೆಗಾಗಿ ಹೊಸ ಅವಕಾಶಗಳು ಕಾಯುತ್ತಿವೆ. ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು 2025 ರ ವೇಳೆಗೆ ಭಾರತವನ್ನು ಈ ಕಾಯಿಲೆಯಿಂದ ಮುಕ್ತಗೊಳಿಸುವುದು ಮುಂತಾದ ನಿರ್ದಿಷ್ಟ ಉದ್ದೇಶಗಳಿಗೆ ರಾಜ್ಯಪಾಲರು ತಮ್ಮ ಕಚೇರಿಯನ್ನು ಬಳಸಬಹುದು ಎಂದು ಪ್ರಧಾನಿಯವರು ತಿಳಿಸಿದರು.
ಸಮಾವೇಶದ ಈ ಆವೃತ್ತಿಯಲ್ಲಿ ಐದು ಉಪ ಗುಂಪುಗಳು ಬುಡಕಟ್ಟು ಸಮಸ್ಯೆಗಳು, ಕೃಷಿಯಲ್ಲಿನ ಸುಧಾರಣೆಗಳು, ಜಲ ಜೀವನ ಅಭಿಯಾನ, ಹೊಸ ಶಿಕ್ಷಣ ನೀತಿ ಮತ್ತು ಸುಲಭ ಜೀವನಕ್ಕಾಗಿ ಆಡಳಿತ ಮುಂತಾದ ನಿರ್ದಿಷ್ಟ ವಿಷಯಗಳು ಮತ್ತು ಸವಾಲುಗಳ ಕುರಿತು ಪ್ರಮುಖ ಚರ್ಚೆಗಳು ನಡೆಸಲಿವೆ ಎಂಬ ಬಗ್ಗೆ ಪ್ರಧಾನಿಯವರು ಸಂತೋಷ ವ್ಯಕ್ತಪಡಿಸಿದರು. ಭಾಗವಹಿಸುವ ಎಲ್ಲಾ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳ ವರದಿಗಳನ್ನು ದೊಡ್ಡ ಸ್ವರೂಪದಲ್ಲಿ ಚರ್ಚಿಸಲಾಗುವುದು ಎಂದು ಪ್ರಧಾನಿಯವರು ತಿಳಿಸಿದರು.