ಗೌರವಾನ್ವಿತ ಅಧ್ಯಕ್ಷರಾದ ಪುಟಿನ್, ಅಧ್ಯಕ್ಷರಾದ ಕ್ಸಿ, ಅಧ್ಯಕ್ಷರಾದ ರಾಮಪೋಸ, ಅಧ್ಯಕ್ಷರಾದ ಬೋಲ್ಸೊನಾರೋ, ನಮಸ್ಕಾರ
ನಾನು ನಿಮ್ಮೆಲ್ಲರನ್ನೂ ಬ್ರಿಕ್ಸ್ ಸಮಾವೇಶಕ್ಕೆ ಸ್ವಾಗತಿಸುತ್ತಿದ್ದೇನೆ. 15 ನೇ ಬ್ರಿಕ್ಸ್ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಶೃಂಗ ಸಭೆಯ ಅಧ್ಯಕ್ಷತೆ ವಹಿಸಿರುವುದು ನಮಗೆ ಮತ್ತು ಭಾರತಕ್ಕೆ ತುಂಬಾ ಸಂತೋಷದ ವಿಷಯವಾಗಿದೆ. ಇಂದಿನ ಶೃಂಗಸಭೆಗೆ ನಮ್ಮಲ್ಲಿ ವಿಸ್ತಾರವಾದ ಕಾರ್ಯಸೂಚಿಯಿದೆ. ನೀವು ಒಪ್ಪಿದರೆ ಈ ಕಾರ್ಯಸೂಚಿಯನ್ನು ನಾವು ಅಳವಡಿಸಿಕೊಳ್ಳಬಹುದು. ಧನ್ಯವಾದಗಳು, ಈಗ ನಾವು ಕಾರ್ಯಸೂಚಿಯನ್ನು ಅಳವಡಿಸಿಕೊಂಡಿದ್ದೇವೆ.
ಗೌರವಾನ್ವಿತರೇ!
ಒಮ್ಮೆ ಈ ಕಾರ್ಯಸೂಚಿ ಅಳವಡಿಸಿಕೊಂಡ ನಂತರ ನಾವೆಲ್ಲರೂ ಸಂಕ್ಷಿಪ್ತವಾಗಿ ನಮ್ಮ ಆರಂಭಿಕ ಮಾತುಗಳನ್ನು ಆಡಬಹುದು. ಮೊದಲು ನನ್ನ ಆರಂಭಿಕ ಮಾತುಗಳನ್ನು ಆಡಲು ನಾನು ಸ್ವಾತಂತ್ರ್ಯ ತೆಗೆದುಕೊಳ್ಳುತ್ತೇನೆ. ಜತೆಗೆ ನಾನು ಗೌರವಾನ್ವಿತರಾದ ನಿಮ್ಮೆಲ್ಲರನ್ನೂ ಆರಂಭಿಕ ಮಾತುಗಳಿಗಾಗಿ ಆಹ್ವಾನಿಸುತ್ತೇನೆ.
ನಮ್ಮ ಅಧ್ಯಕ್ಷತೆಯಲ್ಲಿ ಭಾರತ ಬ್ರಿಕ್ಸ್ ರಾಷ್ಟ್ರಗಳ ಪಾಲುದಾರರೆಲ್ಲರಿಂದ ಸಂಪೂರ್ಣ ಸಹಕಾರ ಪಡೆದುಕೊಂಡಿದೆ ಮತ್ತು ಇದಕ್ಕಾಗಿ ನಿಮ್ಮೆಲ್ಲರಿಗೂ ನಾನು ತುಂಬಾ ಕೃತಜ್ಞನಾಗಿದ್ದೇನೆ. ಕಳೆದ ಒಂದೂವರೆ ದಶಕದಿಂದ ಬ್ರಿಕ್ಸ್ ವೇದಿಕೆ ಹಲವಾರು ಸಾಧನೆಗಳಿಗೆ ಸಾಕ್ಷಿಯಾಗಿದೆ. ಇಂದು ನಾವು ವಿಶ್ವದ ಉದಯೋನ್ಮುಖ ಆರ್ಥಿಕತೆಗಳಿಗೆ ಪ್ರಭಾವಿ ಧ್ವನಿಯಾಗಿದ್ದೇವೆ. ಈ ವೇದಿಕೆ ಅಭಿವೃದ್ಧಿಶೀಲ ರಾಷ್ಟ್ರಗಳ ಆದ್ಯತೆಗಳ ಮೇಲೆ ಗಮನ ಕೇಂದ್ರೀಕರಿಸಲು ಸಹ ಸಹಕಾರಿಯಾಗಿದೆ.
ಬ್ರಿಕ್ಸ್ ನ್ಯೂ ಡವಲಪ್ ಮೆಂಟ್ ಬ್ಯಾಕ್, ದಿ ಕಂಟಿಜೆನ್ಸ್ ರಿಸರ್ವ್ ಅರೆಂಜ್ಮೆಂಟ್ ಮತ್ತು ದಿ ಎನರ್ಜಿ ರಿಸರ್ಚ್ ಕೋಅಪರೇಷನ್ ನಂತಹ ಸಂಸ್ಥೆಗಳನ್ನು ಸೃಷ್ಟಿಸಿದೆ. ಇವೆಲ್ಲವೂ ಅತ್ಯಂತ ಬಲಿಷ್ಠ ಸಂಸ್ಥೆಗಳು. ನಾವು ಹೆಮ್ಮೆಪಡುವಷ್ಟು ಬಲಿಷ್ಠ ಸಂಸ್ಥೆಗಳು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದಾಗ್ಯೂ ನಾವು ಆತ್ಮ ತೃಪ್ತರಾಗದಿರುವುದು ಸಹ ಮುಖ್ಯವಾಗಿದೆ ಮತ್ತು ಮುಂದಿನ 15 ವರ್ಷಗಳಲ್ಲಿ ಬ್ರಿಕ್ಸ್ ಇನ್ನೂ ಹೆಚ್ಚಿನ ಫಲಿತಾಂಶ ಆಧಾರಿತವಾಗುವ ಕುರಿತು ಖಚಿತಪಡಿಸಿಕೊಳ್ಳಬೇಕು.
ಭಾರತ ತನ್ನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಮಾಡಿದ ವಿಷಯ ನಿಖರವಾಗಿ ಆದ್ಯತೆಯನ್ನು ಪ್ರದರ್ಶಿಸುತ್ತದೆ. ಬ್ರಿಕ್ಸ್@15 ನಿರಂತರತೆ, ಬಲವರ್ಧನೆ ಮತ್ತು ಒಮ್ಮತಕ್ಕಾಗಿ ಬ್ರಿಕ್ಸ್ ನ ಆಂತರಿಕ ಸಹಕಾರ, ಈ ನಾಲ್ಕು ಸಿಗಳು ಒಂದು ರೀತಿಯಲ್ಲಿ ನಮ್ಮ ಬ್ರಿಕ್ಸ್ ಪಾಲುದಾರಿಕೆಯ ಮೂಲ ತತ್ವಗಳಾಗಿವೆ.
ಈ ವರ್ಷ ಕೋವಿಡ್ ಒಡ್ಡಿದ ಸವಾಲುಗಳ ನಡುವೆಯೂ 150 ಕ್ಕೂ ಹೆಚ್ಚು ಬ್ರಿಕ್ಸ್ ಸಭೆಗಳು ಮತ್ತು ಕಾರ್ಯಕ್ರಮಗಳನ್ನು ನಡೆಸಲಾಗಿದೆ ಮತ್ತು ಈ ಪೈಕಿ 20ಕ್ಕೂ ಹೆಚ್ಚು ಸಚಿವ ಮಟ್ಟದ ಸಭೆಗಳು ಸಹ ನಡೆದಿವೆ. ಸಾಂಪ್ರಾದಾಯಿಕ ಪ್ರದೇಶಗಳಲ್ಲಿ ಸಹಕಾರ ಹೆಚ್ಚಿಸುವ ಜತೆಗೆ ನಾವು ಬ್ರಿಕ್ಸ್ ಕಾರ್ಯಸೂಚಿಯನ್ನು ಮತ್ತಷ್ಟು ವಿಸ್ತರಿಸಲು ಪ್ರಯತ್ನಗಳನ್ನು ಮಾಡಿದ್ದೇವೆ. ಈ ನಿಟ್ಟಿನಲ್ಲಿ ಬ್ರಿಕ್ಸ್ ಹಲವಾರು ಪ್ರಥಮಗಳನ್ನು ದಾಖಲಿಸಿದೆ, ಅಂದರೆ ಮೊದಲ ಬಾರಿಗೆ ಹಲವಾರು ಕೆಲಸಗಳನ್ನು ಮಾಡಿದೆ. ಇತ್ತೀಚೆಗೆ ಮೊಟ್ಟ ಮೊದಲ ಬ್ರಿಕ್ಸ್ ಡಿಜಿಟಲ್ ಶೃಂಗಸಭೆ ಆಯೋಜಿಸಲಾಗಿತ್ತು. ತಂತ್ರಜ್ಞಾನದ ಮೂಲಕ ಆರೋಗ್ಯ ಸೇವೆಯಲ್ಲಿ ಹೊಸತನದ ಹೆಜ್ಜೆ ಇಟ್ಟಿದೆ. ನವೆಂಬರ್ ನಲ್ಲಿ ನಮ್ಮ ಸಂಪನ್ಮೂಲ ಸಚಿವರು ಬ್ರಿಕ್ಸ್ ಮಾದರಿಯಲ್ಲಿ ಮೊದಲ ಬಾರಿಗೆ ಸಭೆ ನಡೆಸಿದ್ದರು. ಬಹುಪಕ್ಷೀಯ ವ್ಯವಸ್ಥೆಗಳನ್ನು ಬಲಪಡಿಸುವ ಮತ್ತು ಸುಧಾರಣೆ ತರುವ ಕುರಿತು ಬ್ರಿಕ್ಸ್ ಸಾಮೂಹಿಕ ಸ್ಥಾನ ಪಡೆದಿರುವುದು ಸಹ ಇದೇ ಮೊದಲ ಬಾರಿಯಾಗಿದೆ.
ಭಯೋತ್ಪಾದನೆ ನಿಗ್ರಹ ಕಾರ್ಯಯೋಜನೆಯನ್ನು ಬ್ರಿಕ್ಸ್ ಅಳವಡಿಸಿಕೊಂಡಿದೆ. ದೂರ ಸಂವೇದಿ ಉಪಗ್ರಹ ವಲಯದಲ್ಲಿ ಸಹಕಾರ ಕುರಿತು ಮಾಡಿಕೊಂಡಿರುವ ಒಪ್ಪಂದ ಸಹಕಾರ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ನಮ್ಮ ಕಸ್ಟಮ್ಸ್ ಇಲಾಖೆಗಳ ಸಹಕಾರದೊಂದಿಗೆ ಬ್ರಿಕ್ಸ್ ನ ಆಂತರಿಕ ವ್ಯಾಪಾರ ಸುಲಭವಾಗುತ್ತಿದೆ. ವರ್ಚುವಲ್ ಮೂಲಕ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಆರಂಭಿಸಲು ಸಹಮತವಿದೆ. ಬ್ರಿಕ್ಸ್ ಮೈತ್ರಿಕೂಟದಲ್ಲಿ ಹಸಿರು ಪ್ರವಾಸೋದ್ಯಮ ಮತ್ತೊಂದು ಹೊಸ ಕ್ರಮವಾಗಿದೆ.
ಗೌರವಾನ್ವಿತರೇ!
ಈ ಎಲ್ಲಾ ಹೊಸ ಕ್ರಮಗಳು ನಮ್ಮ ನಾಗರಿಕರಿಗಷ್ಟೇ ಲಾಭವಾಗುವುದಿಲ್ಲ ಆದರೆ ಮುಂಬರುವ ವರ್ಷಗಳಲ್ಲಿ ಬ್ರಿಕ್ಸ್ ಪ್ರಸ್ತುತವಾಗಿರಲು ಸಹಕಾರಿಯಾಗಲಿದೆ. ಬ್ರಿಕ್ಸ್ ಅನ್ನು ಇನ್ನಷ್ಟು ಉಪಕಾರಿಯಾಗಿಸಲು ಇಂದಿನ ಸಭೆ ಸೂಕ್ತ ದಿಕ್ಕಿನಲ್ಲಿ ಸಹಾಯ ಮಾಡುತ್ತದೆ ಎಂಬ ವಿಶ್ವಾಸ ತಮಗಿದೆ.
ನಾವು ಪ್ರಮುಖ ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳನ್ನು ಸಹ ಚರ್ಚಿಸುತ್ತೇವೆ. ನಿಮ್ಮ ಆರಂಭಿಕ ಮಾತುಗಳಿಗಾಗಿ ನಾನು ಈಗ ನಿಮ್ಮೆಲ್ಲರನ್ನೂ ಆಹ್ವಾನಿಸುತ್ತೇನೆ.