ತಜಿಕಿಸ್ತಾನ್ ಗಣರಾಜ್ಯದ ಅಧ್ಯಕ್ಷರಾದ
ಘನತೆವೆತ್ತ ಶ್ರೀ ಎಮೊಮಲಿ ರೆಹ್ಮಾನ್ ಅವರೇ,
ಮಹನೀಯರೇ ಮತ್ತು ಮಹಿಳೆಯರೇ,
ಮಾಧ್ಯಮದ ಸದಸ್ಯರೇ,
ನಾನು ಭಾರತದಲ್ಲಿ ಅಧ್ಯಕ್ಷ ರಹ್ಮಾನ್ ಮತ್ತು ಅವರ ನಿಯೋಗಕ್ಕೆ ಆತ್ಮೀಯವಾದ ಸ್ವಾಗತವನ್ನು ಕೋರುತ್ತೇನೆ. ತಜಿಕಿಸ್ತಾನ ಏಷ್ಯಾದ ಮೌಲ್ಯಯುತ ಗೆಳೆಯ ಹಾಗೂ ಕಾರ್ಯತಂತ್ರಾತ್ಮಕ ಪಾಲುದಾರ ರಾಷ್ಟ್ರವಾಗಿದೆ. ಅಧ್ಯಕ್ಷ ರಹ್ಮಾನ್ ಅವರಿಗೆ ಸ್ವತಃ ಭಾರತ ಚಿರಪರಿಚಿತವಾಗಿದೆ. ನಾನು ಮತ್ತೆ ಅವರಿಗೆ ಆತಿಥ್ಯ ನೀಡಲು ಹರ್ಷಿಸುತ್ತೇವೆ. ನಮ್ಮ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಅವರ ಕೊಡುಗೆ ಮತ್ತು ನಾಯಕತ್ವವನ್ನು ನಾವು ಪ್ರಶಂಸಿಸುತ್ತೇವೆ. ನಮ್ಮ ಕಾರ್ಯತಂತ್ರಾತ್ಮಕ ಪಾಲುದಾರಿಕೆಯು ಪರಸ್ಪರ ಗೌರವ, ನಂಬಿಕೆ ಮತ್ತು ಪ್ರಾದೇಶಿಕ ಭದ್ರತೆ ಮತ್ತು ಅಭಿವೃದ್ಧಿಯ ವಿನಿಮಯಿತ ಹಿತಾಸಕ್ತಿಗಳ ಬುನಾದಿಯ ಮೇಲೆ ನಿರ್ಮಾಣವಾಗಿದೆ. ನಮ್ಮಸಮಾಜಗಳು ಕೂಡ ಸ್ವಾಭಾವಿಕವಾಗಿ ರೂಢಿಗತವಾದ ಆಡಳವಾದ ಇತಿಹಾಸ ಮತ್ತು ಪರಂಪರೆಯ ಆಳವಾದ ಹಂಚಿಕೆಯ ಆನಂದವನ್ನು ಅನುಭವಿಸಿವೆ. ಹಿಂದಿನಿಂದಲೂ ನಮ್ಮ ಸಂಸ್ಕೃತಿ, ಧಾರ್ಮಿಕತೆ ಮತ್ತು ಭಾಷೆಯ ಅಂತರ ಸಮ್ಮಿಲನವು ಇಂದು ನಮ್ಮ ಜನರೊಂದಿಗಿನ ನಂಟನ್ನು, ಆಪ್ತವಾದ ಆತ್ಮೀಯ ಗೆಳೆತನದ ಲಕ್ಷಣವನ್ನು ಬಿಂಬಿಸುತ್ತದೆ.
-
ಸ್ನೇಹಿತರೆ,
ಅಧ್ಯಕ್ಷ ರಹ್ಮಾನ್ ಮತ್ತು ನಾನು, ಇಂದು ಬೆಳಗ್ಗೆ ಫಲಪ್ರದವಾದ ಮಾತುಕತೆ ನಡೆಸಿದ್ದೇವೆ. ಭದ್ರತೆ ಮತ್ತು ರಕ್ಷಣೆಯ ಪಾಲುದಾರಿಕೆಯೂ ಸೇರಿದಂತೆ ನಮ್ಮ ದ್ವಿಪಕ್ಷೀಯ ಕಾರ್ಯಕ್ರಮಗಳ ವಿವಿಧ ಸ್ತಂಭಗಳ ಅಡಿಯಲ್ಲಿ ಆಗಿರುವ ಪ್ರಗತಿ, ಸಾಧನೆಯನ್ನು ಪರಾಮರ್ಶಿಸಿದ್ದೇವೆ. ಭಾರತ ಮತ್ತು ತಜಿಕಿಸ್ತಾನ್ ವಿಸ್ತರಿತ ನೆರೆಯಲ್ಲಿ ಬದುಕುತ್ತಿದ್ದು, ಅವು ಭದ್ರತೆಯ ಭೀತಿ ಮತ್ತು ಸವಾಲುಗಳನ್ನು ಎದುರಿಸುತ್ತಿವೆ. ಭಯೋತ್ಪಾದನೆಯ ಭೀತಿ ಕೇವಲ ನಮ್ಮ ಎರಡು ರಾಷ್ಟ್ರಗಳಿಗಷ್ಟೇ ಅಪಾಯವನ್ನು ಒಡ್ಡಿಲ್ಲ. ಇದು ಇಡೀ ವಲಯದಲ್ಲಿ ಅಸ್ಥಿರತೆ ಮತ್ತು ಹಿಂಸಾಚಾರದ ದೊಡ್ಡ ಛಾಯೆಮೂಡಿಸಿದೆ. ಹೀಗಾಗಿ ಭಯೋತ್ಪಾದನೆ ನಿಗ್ರಹವು ನಮ್ಮ ಸಹಕಾರ ಕಾರ್ಯಕ್ರಮದ ಮಹತ್ವದ ಕ್ಷೇತ್ರಗಳಲ್ಲಿ ಒಂದಾಗಿದೆ. ಮಧ್ಯ ಏಷ್ಯಾ ವಲಯದಲ್ಲಿ ವಿಧ್ವಂಸಕತೆ, ಮೂಲಭೂತವಾದ ಮತ್ತು ಭಯೋತ್ಪಾದನೆಯ ವಿರುದ್ಧ ಪ್ರಧಾನವಾಗಿ ಹೋರಾಡುತ್ತಿರುವ ತಜಿಕಿಸ್ತಾನದ ಪಾತ್ರವನ್ನು ನಾವು ಪ್ರಶಂಸಿಸುತ್ತೇವೆ. ಅಧ್ಯಕ್ಷ ರಹ್ಮಾನ್ ಮತ್ತು ನಾನು, ಈ ದಿಕ್ಕಿನಲ್ಲಿ ಪರಸ್ಪರ ಒಪ್ಪಿತ ಆದ್ಯತೆಗಳ ಆಧಾರದಲ್ಲಿ ನಮ್ಮ ಕ್ರಮಗಳನ್ನು ಬಲಪಡಿಸಲು ನಿರ್ಧರಿಸಿದ್ದೇವೆ.
ನಾವು ಇದನ್ನು ಬಹು ಹಂತದಲ್ಲಿ ಮಾಡುತ್ತೇವೆ :-
ನಮ್ಮ ಒಟ್ಟಾರೆ ದ್ವಿಪಕ್ಷೀಯ ಭದ್ರತೆ ಸಹಕಾರವನ್ನು ಮರು ಜಾರಿ ಮಾಡುವ ಮೂಲಕ;
ದೊಡ್ಡ ಮಟ್ಟದಲ್ಲಿ ತರಭೇತಿ, ಸಾಮರ್ಥ್ಯ ವರ್ಧನೆ ಮತ್ತು ಮಾಹಿತಿಯ ವಿನಿಮಯದ ಮೂಲಕ; ಮತ್ತು,
ಪ್ರಾದೇಶಿಕ ಮತ್ತು ಬಹುಪಕ್ಷೀಯ ಸಂದರ್ಭಗಳಲ್ಲಿ ಸಕ್ರಿಯವಾದ ಸಹಯೋಗದ ಮೂಲಕ
ತಜಿಕಿಸ್ತಾನದೊಂದಿಗೆ ಭಯೋತ್ಪಾದನೆ ನಿಗ್ರಹ ಮತ್ತು ಪ್ರಾದೇಶಿಕ ಸುರಕ್ಷತೆ ವಿಚಾರದಲ್ಲಿ ಆಪ್ತವಾಗಿ ಕಾರ್ಯ ನಿರ್ವಹಿಸಲು ಶಾಂಘೈ ಸಹಕಾರ ಸಂಘಟನೆಯಲ್ಲಿನ ಭಾರತದ ಸದಸ್ಯತ್ವವು ಒಂದು ಮೌಲ್ಯಯುತ ವೇದಿಕೆಯಾಗಿದೆ. ಅಧ್ಯಕ್ಷ ರಹ್ಮಾನ್ ಮತ್ತು ನಾನು, ನಮ್ಮ ವಲಯದ ಅಭಿವೃದ್ಧಿಯ ಬಗ್ಗೆಯೂ ನಮ್ಮ ಅಭಿಪ್ರಾಯ ಹಂಚಿಕೊಂಡಿದ್ದೇವೆ. ನಾವು ಆಪ್ಘಾನಿಸ್ತಾನದ ಪ್ರಗತಿ, ಸ್ಥಿರತೆ ಮತ್ತು ಶಾಂತಿಯು ವಲಯಕ್ಕೆ ಮಹತ್ವದ್ದಾಗಿದೆ ಎಂಬುದನ್ನು ನಾವು ಒಪ್ಪಿಕೊಂಡಿದ್ದೇವೆ. ಭಾರತ ಮತ್ತು ತಜಿಕಿಸ್ತಾನ್ ಎರಡೂ ಆಪ್ಘಾನಿಸ್ತಾನದ ಜನತೆಗೆ ಮತ್ತು ಶಾಂತಿಯುತ ಮತ್ತು ಪ್ರಗತಿಪರ ರಾಷ್ಟ್ರದ ಅವರ ಆಶೋತ್ತರಗಳಿಗೆ ದೃಢ ಬೆಂಬಲ ನೀಡಲು ಕೈಜೋಡಿಸಿದ್ದೇವೆ.
ಸ್ನೇಹಿತರೇ,
ಅಧ್ಯಕ್ಷರು ಮತ್ತು ನಾನು, ನಮ್ಮ ಆರ್ಥಿಕ ಕಾರ್ಯಕ್ರಮಗಳ ಸ್ವರೂಪ ಮತ್ತು ಪ್ರಮಾಣದ ಹೆಚ್ಚಿಸುವ ಅಗತ್ಯ ಹೆಚ್ಚಿಸುವ ಅದರಲ್ಲೂ ಹೂಡಿಕೆ ಮತ್ತು ವಾಣಿಜ್ಯ ಹೆಚ್ಚಿಸಲು ಒಪ್ಪಿಗೆ ಸೂಚಿಸಿದ್ದೇವೆ. ಈ ನಿಟ್ಟಿನಲ್ಲಿ, ಜಲ ವಿದ್ಯುತ್, ಮಾಹಿತಿ ತಂತ್ರಜ್ಞಾನ, ಔಷಧ ಮತ್ತು ಆರೋಗ್ಯ ಸೇವೆಗಳ ಕ್ಷೇತ್ರಗಳು ಆದ್ಯತೆಯ ಕ್ರಿಯಾ ವಲಯಗಳಾಗಿವೆ. ನಮ್ಮ ರಾಷ್ಟ್ರಗಳ ಲಾಭಕ್ಕಾಗಿ ನಮ್ಮ ಆರ್ಥಿಕ ಪಾಲುದಾರಿಕೆಯ ಆಶ್ವಾಸನೆಯಂತೆ ಮೇಲ್ಮೈ ಸಂಪರ್ಕ ಮಹತ್ವದ್ದೆಂಬುದನ್ನು ಮನಗಂಡು ಅದರ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದ್ದೇವೆ. ಹಾಲಿ ಇರುವ ಬಂದರು, ಸಾಗಣೆ ಮೂಲಸೌಕರ್ಯ ಮತ್ತು ಆಫ್ಘಾನಿಸ್ತಾನ, ತಜಿಕಿಸ್ತಾನ ಮತ್ತು ಮಧ್ಯ ಏಷ್ಯಾವನ್ನು ರಸ್ತೆ ಮತ್ತು ರೈಲು ಜಾಲದ ಮೂಲಕ ಸಂಪರ್ಕಿಸುವ ಉಪಕ್ರಮಗಳಿಗೆ ಭಾರತ ಬೆಂಬಲ ನೀಡಲಿದೆ. ಈ ನಿಟ್ಟಿನಲ್ಲಿ, ನಾವು ಇರಾನ್ ನ ಚಹಬರ್ ಬಂದರಿನ ಮೂಲಕ ವಾಣಿಜ್ಯ ಮತ್ತು ಸಾರಿಗೆ ಸಂಪರ್ಕ ನಿರ್ಮಿಸಲು ಶ್ರಮಿಸಲಿದ್ದೇವೆ. ತಜಿಕಿಸ್ತಾನವೂ ಸೇರಿದಂತೆ ಇತರ ಸದಸ್ಯರೊಂದಿಗೆ ಸೇರಿ ಅಂತಾರಾಷ್ಟ್ರೀಯ ಉತ್ತರ ದಕ್ಷಿಣ ಸಾರಿಗೆ ಕಾರಿಡಾರ್ ಕಲ್ಪಿಸುವ ಕಾರ್ಯದಲ್ಲೂ ಭಾರತ ತನ್ನನ್ನು ತೊಡಗಿಸಿಕೊಂಡಿದೆ. ನಮ್ಮ ಅಶ್ಗಬತ್ ಒಪ್ಪಂದದಲ್ಲಿನ ನಮ್ಮ ಯೋಜಿತ ಪ್ರವೇಶವು ತಜಕಿಸ್ತಾನ ಮತ್ತು ಮಧ್ಯ ಏಷ್ಯಾದ ಸಂಪರ್ಕಕ್ಕೆ ನಮಗೆ ಹೆಚ್ಚಿನ ನೆರವು ನೀಡಲಿದೆ. ಭಾರತ ಮತ್ತು ತಜಿಕಿಸ್ತಾನ್ ಸಾಮರ್ಥ್ಯ ಮತ್ತು ಸಾಂಸ್ಥಿಕ ನಿರ್ಮಾಣದಲ್ಲಿ ಪ್ರಶಂಸನೀಯ ಪಾಲುದಾರಿಕೆ ಅನುಭವಿಸುತ್ತಿದೆ. ಅಧ್ಯಕ್ಷ ರಹ್ಮಾನ್ ಮತ್ತು ನಾನು, ಈ ಪಾಲುದಾರಿಕೆಯನ್ನು ಸ್ಥಿರ ಮತ್ತು ಬಲಪಡಿಸಲು ಒಪ್ಪಿಗೆ ಸೂಚಿಸಿದ್ದೇವೆ.
ಸ್ನೇಹಿತರೇ,
ಮುಂದಿನ ವರ್ಷ, ನಾವು ಭಾರತ ಮತ್ತು ತಜಿಕಿಸ್ತಾನಗಳ ನಡುವೆ ರಾಜತಾಂತ್ರಿಕ ಬಾಂಧವ್ಯ ರೂಪುಗೊಂಡ ಅಂಗವಾಗಿ 25ನೇ ವಾರ್ಷಿಕೋತ್ಸವ ಆಚರಿಸುತ್ತಿದ್ದೇವೆ. ಅಧ್ಯಕ್ಷ ರಹ್ಮಾನ್ ಅವರ ಈ ಭೇಟಿಯ ಸಂದರ್ಭದಲ್ಲಿ ನಾನು ಮತ್ತು ಅವರು, ನಮ್ಮ ದೇಶಗಳಿಗಾಗಿ ನಿರ್ಧಿರಿಸುವ ಕಾರ್ಯಕ್ರಮಗಳು ಮತ್ತು ವಿಸ್ತೃತ ಶ್ರೇಣಿಯ ಕಾರ್ಯಕ್ರಮಗಳಿಂದ ನಾನು ಉತ್ತೇಜಿತನಾಗಿದ್ದೇನೆ. ಇಂದು ಆಖೈರಾಗಿರುವ ಒಪ್ಪಂದಗಳು ಮತ್ತು ನಮ್ಮ ಮಾತುಕತೆ ಭಾರತ ಮತ್ತು ತಜಿಕಿಸ್ತಾನಗಳ ನಡುವೆ ವಿವಿಧ ವಲಯಗಳಲ್ಲಿನ ಪ್ರಾಯೋಗಿಕ ಸಹಕಾರವನ್ನು ಹೆಚ್ಚಿಸಲು ಸಹಕಾರಿ ಆಗುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ. ನಾನು ಮತ್ತೊಮ್ಮೆ ಅಧ್ಯಕ್ಷ ರಹ್ಮಾನ್ ಅವರನ್ನು ಸ್ವಾಗತಿಸುತ್ತೇನೆ ಮತ್ತು ಅವರಿಗೆ ಭಾರತದಲ್ಲಿ ಆಹ್ಲಾದಕರ ವಾಸ್ತವ್ಯ ಬಯಸುತ್ತೇನೆ.
ಧನ್ಯವಾದಗಳು.