ಘನತೆವೆತ್ತ ಜಪಾನಿನ ಪ್ರಧಾನಮಂತ್ರಿಗಳಾದ ಶಿಂಜೊ ಅಬೆ ಅವರೇ, ಅವರೊಂದಿಗೆ ಆಗಮಿಸಿರುವ ಉನ್ನತ ಮಟ್ಟದ ನಿಯೋಗದಲ್ಲಿರುವ ಗೌರವಾನ್ವಿತ ಸದಸ್ಯರೇ ಮತ್ತು ಮಾಧ್ಯಮದ ಸ್ನೇಹಿತರೇ,
ಕೊನ್ನಿಚಿವಾ! (ಮೊದಲಿಗೆ, ನಿಮ್ಮೆಲ್ಲರಿಗೂ ನಮಸ್ಕಾರಗಳು)
ನನ್ನ ಅಸಾಧಾರಣ ಗೆಳೆಯರಾದ, ಜಪಾನಿನ ಪ್ರಧಾನಮಂತ್ರಿ ಶ್ರೀ ಶಿಂಜೊ ಅಬೆ ಅವರನ್ನು ಭಾರತದಲ್ಲಿ, ಅದರಲ್ಲೂ ಗುಜರಾತಿನಲ್ಲಿ ಸ್ವಾಗತಿಸುವ ಅವಕಾಶ ನನಗೆ ಸಿಕ್ಕಿರುವುದರಿಂದ ನಾನಂತೂ ಹಿಗ್ಗಿ ಹೋಗಿದ್ದೇನೆ. ನಾನು ಮತ್ತು ಪ್ರಧಾನಮಂತ್ರಿ ಶ್ರೀ ಅಬೆ, ಜಾಗತಿಕ ಮಟ್ಟದ ಅನೇಕ ಸಮಾವೇಶಗಳಲ್ಲಿ ಅನೇಕ ಸಲ ಭೇಟಿಯಾಗಿದ್ದೇವೆ, ನಿಜ. ಆದರೆ, ಅವರನ್ನು ಭಾರತಕ್ಕೆ ಬರಮಾಡಿಕೊಳ್ಳುತ್ತಿರುವುದು ನನಗೆ ಅತ್ಯಂತ ಸಂತಸದ ವಿಚಾರವಾಗಿದೆ. ನಿನ್ನೆ ದಿವಸ ಶ್ರೀ ಅಬೆ ಅವರೊಂದಿಗೆ ಸಬರಮತಿ ಆಶ್ರಮಕ್ಕೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿತ್ತು. ಇವತ್ತು ನಾವಿಬ್ಬರೂ `ದಂಡಿ ಕುಟೀರ’ಕ್ಕೆ ಭೇಟಿ ನೀಡಿದ್ದೆವು. ಇಂದು ಬೆಳಿಗ್ಗೆ ನಾನು ಮತ್ತು ಶ್ರೀ ಅಬೆ ಇಬ್ಬರೂ, ಜಪಾನ್ ದೇಶದ ಸಹಯೋಗದೊಂದಿಗೆ ಜಾರಿಗೆ ತರಲಿರುವ ಮುಂಬಯಿ-ಅಹಮದಾಬಾದ್ ನಡುವಿನ ಹೈಸ್ಪೀಡ್ ರೈಲು ಯೋಜನೆಯ ಶಂಕುಸ್ಥಾಪನೆಯನ್ನು ನೆರವೇರಿಸಿದೆವು. ಇದು ನಿಜಕ್ಕೂ ಬಹುದೊಡ್ಡ ಹೆಜ್ಜೆಯಾಗಿದೆ. ಏಕೆಂದರೆ, ಇದು ಇಷ್ಟಕ್ಕೇ ಸೀಮಿತವಲ್ಲ. ಬದಲಿಗೆ, ನಮ್ಮ ನಾಳಿನ ಅಗತ್ಯಗಳ ದೃಷ್ಟಿಯಿಂದ ಹೇಳುವುದಾದರೆ, ಈ ಹೊಸ ರೈಲು ವ್ಯವಸ್ಥೆಯನ್ನು ನಾನು `ನವಭಾರತದ ಜೀವನಾಡಿ’ ಎಂದೇ ಪರಿಗಣಿಸುತ್ತೇನೆ. ಭಾರತದ ನಿರಂತರ ಪ್ರಗತಿಯು ಈಗ ಕ್ಷಿಪ್ರಗತಿಯನ್ನು ದಕ್ಕಿಸಿಕೊಂಡಿದೆ.
ಸ್ನೇಹಿತರೇ,
ಪರಸ್ಪರ ನಂಬಿಕೆ ಮತ್ತು ವಿಶ್ವಾಸ, ಪರಸ್ಪರ ಹಿತಾಸಕ್ತಿಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವುದು ಮತ್ತು ನಿರಂತರವಾಗಿ ಉನ್ನತ ಮಟ್ಟದಲ್ಲಿ ಮಾತುಕತೆಗಳನ್ನು ನಡೆಸಿಕೊಂಡು ಬಂದಿರುವುದು ಭಾರತ ಮತ್ತು ಜಪಾನ್ ನಡುವಿನ ಬಾಂಧವ್ಯದ ವೈಶಿಷ್ಟ್ಯವಾಗಿದೆ. ನಮ್ಮ ಸಂಬಂಧವು ಕೇವಲ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಮಟ್ಟಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಬದಲಿಗೆ, ನಾವು ಜಾಗತಿಕ ವಿಚಾರಗಳಿಗೆ ಸಂಬಂಧಿಸಿದಂತೆಯೂ ನಿಕಟ ಸಂಬಂಧ ಹೊಂದಿದ್ದೇವೆ. ಕಳೆದ ವರ್ಷ ನಾನು ಜಪಾನಿಗೆ ಭೇಟಿ ನೀಡಿದ್ದಾಗ, ಪರಮಾಣು ಶಕ್ತಿಯ ಶಾಂತಿಯುತ ಬಳಕೆಯ ಉದ್ದೇಶದಿಂದ ಒಂದು ಐತಿಹಾಸಿಕ ಒಪ್ಪಂದ ಮಾಡಿಕೊಂಡೆವು. ಈ ಒಪ್ಪಂದವನ್ನು ಆಗುಮಾಡಿದ್ದಕ್ಕಾಗಿ ಜಪಾನಿನ ಜನತೆಗೆ, ಸಂಸತ್ತಿಗೆ ಮತ್ತು ವಿಶೇಷವಾಗಿ ಪ್ರಧಾನಮಂತ್ರಿ ಶ್ರೀ ಅಬೆ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಈ ಒಪ್ಪಂದವು ಶುದ್ಧ ಇಂಧನ ಮತ್ತು ಹವಾಮಾನ ಬದಲಾವಣೆ ವಿಚಾರಗಳಿಗೆ ಸಂಬಂಧಿಸಿದಂತೆ ಇರುವ ನಮ್ಮ ಬಾಂಧವ್ಯದಲ್ಲಿ ಹೊಸ ಅಧ್ಯಾಯವಾಗಿದೆ.
ಸ್ನೇಹಿತರೇ,
ಜಪಾನ್ ದೇಶವು 2016-17ನೇ ಸಾಲಿನಲ್ಲಿ ಭಾರತದಲ್ಲಿ 4.7 ಶತಕೋಟಿ ಡಾಲರ್‍ಗಳಷ್ಟು ಹೂಡಿಕೆ ಮಾಡಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇಕಡ 80ರಷ್ಟು ಹೆಚ್ಚಾಗಿದೆ. ಜಪಾನ್ ಈಗ ಭಾರತದಲ್ಲಿ ಅತ್ಯಧಿಕ ಬಂಡವಾಳ ಹೂಡುತ್ತಿರುವ ದೇಶಗಳಲ್ಲಿ ಮೂರನೇ ಸ್ಥಾನ ಪಡೆದಿದೆ. ಇದು, ಭಾರತದ ಆರ್ಥಿಕ ಅಭಿವೃದ್ಧಿ ಮತ್ತು ನಾಳಿನ ಉಜ್ವಲ ಭವಿಷ್ಯ ಕುರಿತು ಜಪಾನ್ ಹೊಂದಿರುವ ವಿಶ್ವಾಸ ಮತ್ತು ಆಶಾವಾದವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಅದು ಈಗ ತೊಡಗಿಸುತ್ತಿರುವ ಹೂಡಿಕೆಯನ್ನು ನೋಡಿದರೆ, ಮುಂಬರುವ ದಿನಗಳಲ್ಲಿ ಎರಡೂ ದೇಶಗಳ ನಡುವಿನ ಜನರ ನಡುವಿನ ಸಂಪರ್ಕವು ವೃದ್ಧಿಸಿ, ಅದರ ಜತೆಯಲ್ಲೇ ನಮ್ಮ ನಡುವಿನ ವಾಣಿಜ್ಯ ಸಂಬಂಧವೂ ಬೆಳೆಯಲಿದೆ ಎಂದು ಹೇಳಬಹುದು. ಈಗಾಗಲೇ ನಾವು, ಭಾರತಕ್ಕೆ ಬಂದಿಳಿಯುತ್ತಿರುವ ಜಪಾನೀಯರಿಗೆ ತತ್‍ಕ್ಷಣವೇ ವೀಸಾ ಕೊಡುತ್ತಿದ್ದೇವೆ. ಜತೆಗೆ, ಎರಡೂ ದೇಶದ ಅಂಚೆ ಇಲಾಖೆಗಳ ಸಹಭಾಗಿತ್ವದ ಮೂಲಕ `ಕೂಲ್ ಬಾಕ್ಸ್ ಸರ್ವೀಸ್’ ಎನ್ನುವ ಸೌಲಭ್ಯವನ್ನು ಸದ್ಯದಲ್ಲೇ ಜಾರಿಗೆ ತರಲಿದ್ದೇವೆ. ಇದರಿಂದಾಗಿ, ಭಾರತದಲ್ಲಿರುವ ಜಪಾನೀಯರು ತಮಗೆ ಇಷ್ಟವಾದ ತಿಂಡಿತೀರ್ಥಗಳನ್ನು ನೇರವಾಗಿ ತಮ್ಮ ದೇಶದಿಂದ ತರಿಸಿಕೊಳ್ಳುವುದು ಸಾಧ್ಯವಾಗಲಿದೆ. ಅಲ್ಲದೆ, ಜಪಾನಿನ ವ್ಯಾಪಾರು-ವಹಿವಾಟುದಾರರು/ಉದ್ಯಮಿ
ಗಳು ಭಾರತದಲ್ಲಿ ಹೆಚ್ಚುಹೆಚ್ಚು ಜಪಾನಿ ಹೋಟೆಲುಗಳನ್ನು ತೆರೆಯಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ! ಇಂದು ಭಾರತವು ಅನೇಕ ಹಂತಗಳಲ್ಲಿ ಭಾರೀ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ. ಇದು ಸುಗಮ ವ್ಯಾಪಾರ ವಹಿವಾಟು ಪರಿಸರ ನಿರ್ಮಾಣವೇ ಇರಬಹುದು ಅಥವಾ ಕೌಶಲ್ಯ ಭಾರತವೇ (ಸ್ಕಿಲ್ ಇಂಡಿಯಾ) ಇರಬಹುದು; ತೆರಿಗೆ ಸುಧಾರಣೆಗಳೇ ಇರಬಹುದು ಅಥವಾ `ಭಾರತದಲ್ಲೇ ನಿರ್ಮಿಸಿ’ (ಮೇಕ್ ಇನ್ ಇಂಡಿಯಾ) ಯೋಜನೆ ಇರಬಹುದು, ಒಟ್ಟಿನಲ್ಲಿ ಭಾರತವು ಸಂಪೂರ್ಣವಾಗಿ ಬದಲಾಗುತ್ತಿದೆ. ಇದು ಜಪಾನಿನ ಉದ್ಯಮಿಗಳಿಗೆ/ವಣಿಕ ಸಮುದಾಯದ ಪಾಲಿಗೆ ಉಜ್ವಲ ಅವಕಾಶವಾಗಿದೆ. ನಾವು ಕೈಗೆತ್ತಿಕೊಂಡಿರುವ ಅನೇಕ ಮಹತ್ತ್ವಾಕಾಂಕ್ಷಿ ಯೋಜನೆಗಳಿಗೆ ಜಪಾನಿನ ಹಲವು ಕಂಪನಿಗಳು ಕೈಜೋಡಿಸಿರುವುದು ನನಗೆ ಸಂತೋಷದ ವಿಚಾರವಾಗಿದೆ. ಇಂದು ಸಂಜೆ ನಡೆಯಲಿರುವ ಎರಡೂ ದೇಶಗಳ ಉದ್ಯಮಿಗಳ ಸಭೆಯಲ್ಲಿ ಇದರ ನೇರ ಲಾಭ ಏನೆಂಬುದನ್ನು ನೋಡಲಿದ್ದೇವೆ. ಅಲ್ಲದೆ, ಜಪಾನಿನ ಅಧಿಕೃತ ಅಭಿವೃದ್ಧಿ ನೆರವು ಕಾರ್ಯಕ್ರಮಗಳಲ್ಲಿ ಭಾರತವು ಅತ್ಯಂತ ದೊಡ್ಡ ಪಾಲು ಹೊಂದಿದೆ. ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇಂದು ಮಾಡಿಕೊಳ್ಳಲಾಗಿರುವ ಒಪ್ಪಂದಗಳನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.
ಸ್ನೇಹಿತರೇ,
ಇಂದು ನಾವು ನಡೆಸಿರುವ ಮಾತುಕತೆ ಮತ್ತು ಮಾಡಿಕೊಂಡಿರುವ ಒಪ್ಪಂದಗಳು ಎಲ್ಲ ರಂಗಗಳಲ್ಲೂ ಭಾರತ ಮತ್ತು ಜಪಾನ್ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಿದೆ ಎನ್ನುವ ವಿಶ್ವಾಸ ನನಗಿದೆ. ನನ್ನ ಈ ಮಾತುಗಳೊಂದಿಗೆ, ಪ್ರಧಾನಮಂತ್ರಿ ಶ್ರೀ ಅಬೆ ಅವರನ್ನೂ ಅವರೊಂದಿಗೆ ಆಗಮಿಸಿರುವ ಉನ್ನತ ಮಟ್ಟದ ನಿಯೋಗವನ್ನೂ ಮತ್ತೊಮ್ಮೆ ಹಾರ್ದಿಕವಾಗಿ ಸ್ವಾಗತಿಸುತ್ತೇನೆ.ಜಿಯೋ ದೇ
ಗೋಝೈಮಸ್ (ಸದ್ಯಕ್ಕೆ ಇಷ್ಟು ಸಾಕು)ಅರಿಗಾತೊ
ಗೋಝೈಮಸ್ (ಧನ್ಯವಾದಗಳು)ನಿಮ್ಮೆಲ್ಲರಿಗೂ ಧನ್ಯವಾದಗಳು.
Expanding the horizons of bilateral relationship.
— Raveesh Kumar (@MEAIndia) September 14, 2017
The two leaders witness the exchange of MoUs/Agreements between #IndiaJapan pic.twitter.com/OBARyOTGOy
द्धिपक्षीय संबंधों का विस्तार
— Raveesh Kumar (@MEAIndia) September 14, 2017
दोनों प्रधान मंत्रिओं के समक्ष #IndiaJapan के बीच समझौता ज्ञापनों का आदान-प्रदान हुआ pic.twitter.com/mpBDxqORkt