ಉಕ್ರೇನ್ ಅಧ್ಯಕ್ಷರಾದ ಘನತೆವೆತ್ತ ಶ್ರೀ ವೊಲೊಡಿಮಿರ್ ಜೆಲೆನ್ಸ್ಕಿ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಕರೆ ಮಾಡಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಡೆದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದರು.
ಅವರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿಯವರು, ಉಕ್ರೇನ್ ನೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಭಾರತದ ನಿಲುವನ್ನು ಪುನರುಚ್ಚರಿಸಿದರು.
ಎರಡೂ ದೇಶಗಳ ಜನರ ಅನುಕೂಲಕ್ಕಾಗಿ ಪರಸ್ಪರ ಲಾಭದಾಯಕ ಸಹಕಾರವನ್ನು ಹೊಸ ಕ್ಷೇತ್ರಗಳಿಗೆ ವಿಸ್ತರಿಸುವ ಮತ್ತು ನಿಕಟ ಸಂಬಂಧವನ್ನು ಮುಂದುವರಿಸುವ ಅಗತ್ಯದ ಬಗ್ಗೆ ಕೂಡಾ ಇಬ್ಬರೂ ನಾಯಕರು ಮಾತನಾಡಿದರು.
ಉಕ್ರೇನ್ ನಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತದ ಜನ-ಕೇಂದ್ರಿತ ವಿಧಾನದ ಬಗ್ಗೆ ಉಲ್ಲೇಖಿಸಿದರು, ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಸಂಘರ್ಷ ನಿವಾರಣೆಯ ತ್ವರಿತ, ಶಾಂತಿಯುತ ಮತ್ತು ಶಾಶ್ವತ ಪರಿಹಾರಕ್ಕಾಗಿ ಉಕ್ರೇನ್ ನ ಎಲ್ಲಾ ಪ್ರಯತ್ನಗಳಿಗೆ ಭಾರತದ ಬೆಂಬಲವಿದೆ ಎಂದು ಪುನರುಚ್ಚರಿಸಿದರು.
ಉಭಯ ನಾಯಕರು ಪರಸ್ಪರ ಸಂಪರ್ಕದಲ್ಲಿರಲು ಒಪ್ಪಿಕೊಂಡರು.