ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕ್ರಿಯಾಶೀಲ ಆಡಳಿತ ಮತ್ತು ಸಕಾಲದಲ್ಲಿ ಅನುಷ್ಟಾನಕ್ಕೆ ಸಂಬಂಧಿಸಿದ ಐ.ಸಿ.ಟಿ.ಆಧಾರಿತ ಬಹುಮಾದರಿ ವೇದಿಕೆ –ಪ್ರಗತಿಯ ಮೂಲಕ ತಮ್ಮ ಇಪ್ಪತ್ತೇಳನೇ ಸಂವಾದ ಕಾರ್ಯಕ್ರಮವನ್ನು ನಡೆಸಿದರು.
ಇದುವರೆಗೆ ನಡೆದ 26 ಪ್ರಗತಿ ಸಭೆಗಳಲ್ಲಿ ಒಟ್ಟು 11 ಲಕ್ಷ ಕೋಟಿ ರೂ.ಗಳ ಮೊತ್ತದ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಲಾಗಿದೆಯಲ್ಲದೆ ವಿವಿಧ ವಲಯಗಳಿಗೆ ಸಂಬಂಧಿಸಿದ ಸಾರ್ವಜನಿಕ ಕುಂದು ಕೊರತೆಗಳನ್ನೂ ನಿವಾರಿಸಲಾಗಿದೆ.
ಇಂದು ಇಪ್ಪತ್ತೇಳನೇ ಸಭೆಯಲ್ಲಿ ಪ್ರಧಾನ ಮಂತ್ರಿಯವರು ರೈಲ್ವೇ, ರಸ್ತೆ ಮತ್ತು ಇಂಧನ ಕ್ಷೇತ್ರಗಳ ಎಂಟು ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಈ ಯೋಜನೆಗಳು ಬಿಹಾರ, ಜಾರ್ಖಂಡ್, ಛತ್ತೀಸ್ ಗಢ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರ, ಒಡಿಶಾ, ಚಂಡೀಗಢ, ಆಂಧ್ರ ಪ್ರದೇಶ, ದಿಲ್ಲಿ, ರಾಜಸ್ತಾನ, ಪಶ್ಚಿಮ ಬಂಗಾಲ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ವ್ಯಾಪ್ತಿಯನ್ನು ಹೊಂದಿವೆ.
ಈಗಿರುವ ಜಿಲ್ಲಾ ಆಸ್ಪತ್ರೆಗಳಿಗೆ ಲಗತ್ತಾಗಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಯೋಜನೆ ಜಾರಿಯ ಪ್ರಗತಿಯನ್ನು ಪ್ರಧಾನ ಮಂತ್ರಿಯವರು ಪರಿಶೀಲಿಸಿದರು. ಕೇಂದ್ರ ಸರಕಾರವು ಆರೋಗ್ಯ ವಲಯದಲ್ಲಿ ಹಲವು ಆರಂಭಿಕ ಕ್ರಮಗಳನ್ನು ಕೈಗೊಳ್ಳುತ್ತಿರುವುದರ ಬಗ್ಗೆ ಪ್ರಸ್ತಾವಿಸಿದ ಅವರು ಆರೋಗ್ಯ ಸಂಬಂಧಿ ಮೂಲಸೌಕರ್ಯ ಮೇಲ್ದರ್ಜೆಗೇರಿಸುವುದನ್ನು ತ್ವರಿತಗೊಳಿಸುವಂತೆ ಕರೆ ನೀಡಿದರು.
ಗ್ರಾಮ ಸ್ವರಾಜ್ ಅಭಿಯಾನದ ಮೊದಲ ಹಂತ 2018 ರ ಏಪ್ರಿಲ್ 14 ರಿಂದ ಮೇ 5 ರವರೆಗೆ ನಡೆದಿದ್ದು, 16,000 ಗ್ರಾಮಗಳಲ್ಲಿ ಕೇಂದ್ರ ಸರಕಾರದ ಪ್ರಮುಖ 7 ಯೋಜನೆಗಳ ಅನುಷ್ಟಾನದಲ್ಲಿ ದೊಡ್ಡ ಯಶಸ್ಸು ಗಳಿಸಿದೆ ಎಂದು ಪ್ರಧಾನ ಮಂತ್ರಿಯವರು ಹೇಳಿದರು. ಎರಡನೇ ಹಂತದ ಗ್ರಾಮ ಸ್ವರಾಜ್ ಕಾರ್ಯಕ್ರಮ ಈಗ ಅಭಿವೃದ್ದಿ ಆಶಯದ ಜಿಲ್ಲೆಗಳ 40,000 ಗ್ರಾಮಗಳಲ್ಲಿ ಜಾರಿಯಲ್ಲಿದೆ ಎಂದು ಹೇಳಿದ ಅವರು ಈ ಪ್ರಯತ್ನದಲ್ಲಿ ಭಾಗಿಯಾಗಿರುವ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಗಳು ಆಗಸ್ಟ್ 15 ರೊಳಗೆ ಸಾಧ್ಯವಿರುವ ಅತ್ಯುತ್ತಮ ಫಲಿತಾಂಶ ಸಾಧಿಸಲು ಕಾರ್ಯಪ್ರವೃತ್ತವಾಗಬೇಕು ಎಂದರು.
ಸೌಭಾಗ್ಯ ಯೋಜನಾ ಅಡಿಯಲ್ಲಿ ಇದುವರೆಗೆ ಸಾಧಿಸಲಾದ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನ ಮಂತ್ರಿಗಳು 4 ಕೋಟಿ ಕುಟುಂಬಗಳಿಗೆ ವಿದ್ಯುತ್ ಒದಗಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳು ನಡೆಯಬೇಕು ಎಂದೂ ಹೇಳಿದರು.