



ಮಾಹಿತಿ ಸಂವಹನ ತಂತ್ರಜ್ಞಾನ – ಐಸಿಟಿ ಆಧರಿತ ಕ್ರಿಯಾಶೀಲ ಆಡಳಿತ ಮತ್ತು ಸಕಾಲದಲ್ಲಿ ಅನುಷ್ಠಾನಗೊಳಿಸುವ ಬಹುಹಂತದ ವೇದಿಕೆ ಪ್ರಗತಿಯ 25ನೇ ಸಂವಾದ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ವಹಿಸಿದ್ದರು.
25ನೇ ಈ ಪ್ರಗತಿ ಸಭೆಯಲ್ಲಿ ಸುಮಾರು ಹತ್ತು ಲಕ್ಷ ಕೋಟಿ ಬಂಡವಾಳ ಹೂಡಿಕೆಯ 227 ಯೋಜನೆಗಳ ಪ್ರಗತಿ ಪರಾಮರ್ಶೆ ನಡೆಸಲಾಯಿತು. ಹಲವು ವಲಯಗಳನ್ನೊಳಗೊಂಡಂತೆ ಸಾರ್ವಜನಿಕ ದೂರುಗಳ ಇತ್ಯರ್ಥಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಪರಿಶೀಲಿಸಲಾಯಿತು.
ಪ್ರಧಾನಮಂತ್ರಿಗಳು 25ನೇ ಪ್ರಗತಿ ಸಂವಾದ ಸಭೆ ಪೂರ್ಣಗೊಳಿಸಿದ್ದಕ್ಕಾಗಿ ಸಂಬಂಧಿಸಿದ ಎಲ್ಲರನ್ನು ಅಭಿನಂದಿಸಿದರು. ಪ್ರಗತಿ ಕಾರ್ಯತಂತ್ರದ ಪರಿಣಾಮ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಮನ್ವಯತೆ ಹೆಚ್ಚಾಗಿದೆ ಎಂದು ಅವರು ಹೇಳಿದರು. ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಗತಿಯ ಈ ಕ್ರಮ ಅತ್ಯಂತ ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಪ್ರಧಾನಿ ಹೇಳಿದರು. ಸ್ಥಗಿತಗೊಂಡಿರುವ ಯೋಜನೆಗಳ ಪರಾಮರ್ಶೆಯಲ್ಲದೆ, ಹಲವು ಸಾಮಾಜಿಕ ವಲಯದ ಯೋಜನೆಗಳ ಪರಾಮರ್ಶೆ ಮತ್ತು ಸುಧಾರಣೆಗೆ ಈ ವೇದಿಕೆ ನೆರವಾಗಿದೆ ಎಂದು ತಿಳಿಸಿದರು.
ಇಂದಿನ 25ನೇ ಈ ಪ್ರಗತಿ ಸಂವಾದ ಸಭೆಯಲ್ಲಿ ಪ್ರಧಾನಮಂತ್ರಿಗಳು ನಿವೃತ್ತ ಯೋಧರ ಕಲ್ಯಾಣ ಕುರಿತ ದೂರುಗಳ ನಿರ್ವಹಣೆ ಮತ್ತು ಪ್ರಗತಿಯ ಬಗ್ಗೆ ಪರಿಶೀಲಿಸಿದರು. ದೂರುಗಳ ಇತ್ಯರ್ಥವನ್ನು ಚುರುಕುಗೊಳಿಸುವ ಅಗತ್ಯತೆ ಇದೆ ಎಂದು ಬಲವಾಗಿ ಪ್ರತಿಪಾದಿಸಿದ ಪ್ರಧಾನಮಂತ್ರಿ, ಅತ್ಯಲ್ಪ ಅವಧಿಯಲ್ಲೇ ನಿವೃತ್ತ ಯೋಧರ ಸಮಸ್ಯೆಗಳನ್ನು ಸಕಾರಾತ್ಮಕವಾಗಿ ಬಗೆಹರಿಸಬೇಕಿದೆ ಎಂದರು.
ರೈಲ್ವೆ, ರಸ್ತೆ, ಪೆಟ್ರೋಲಿಯಂ, ಇಂಧನ, ಕಲ್ಲಿದ್ದಲು, ನಗರಾಭಿವೃದ್ಧಿ ಮತ್ತು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ವಲಯ ಸೇರಿದಂತೆ ಹತ್ತು ಮೂಲಸೌಕರ್ಯ ವಲಯಗಳ ಪ್ರಗತಿ ಕುರಿತು ಪ್ರಧಾನಮಂತ್ರಿ ಪರಾಮರ್ಶಿಸಿದರು. ಈ ಯೋಜನೆಗಳು ಹಿಮಾಚಲಪ್ರದೇಶ, ಉತ್ತರಪ್ರದೇಶ, ಒಡಿಶಾ, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ಅಸ್ಸಾಂ, ಸಿಕ್ಕಿಂ, ಪಶ್ಚಿಮಬಂಗಾಳ, ಬಿಹಾರ, ತಮಿಳುನಾಡು ಮತ್ತು ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಜಾರಿಯಾಗುತ್ತಿವೆ.
ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು, ಪ್ರಧಾನಮಂತ್ರಿ ಕೃಷಿ ಸಿಂಚಯ್ ಯೋಜನೆ ಅನುಷ್ಠಾನದ ಪ್ರಗತಿಯ ಬಗ್ಗೆ ಪರಿಶೀಲಿಸಿದರು. ಅಲ್ಲದೆ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಸ್ಕಾಲರ್ ಶಿಪ್ ಮತ್ತು ರಾಷ್ಟ್ರೀಯ ಫೆಲೋಶಿಪ್ ನೀಡಿಕೆ ಕಾರ್ಯಕ್ರಮದ ಜಾರಿಯ ಬಗ್ಗೆಯೂ ಅವರು ಪರಾಮರ್ಶೆ ನಡೆಸಿದರು.