ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಯಟ್ನಾಂನ ಹನೋಯ್ ನ ಕ್ವಾನ್ ಸು ಪಗೋಡಕ್ಕೆ ಭೇಟಿ ನೀಡಿದರು.
ಅಲ್ಲಿ ಗರ್ಭಗೃಹದಲ್ಲಿ ಅವರು ಪ್ರಾರ್ಥನೆ ಸಲ್ಲಿಸಿದರು ಮತ್ತು ಅವರಿಗೆ ಬೌದ್ಧ ಭಿಕ್ಷುಗಳು ಉತ್ತೇಜನಕಾರಿ ಸ್ವಾಗತ ನೀಡಿದರು.
ಬೌದ್ಧ ಭಿಕ್ಷುಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು, ತಾವು ಪಗೋಡಾಗೆ ಭೇಟಿ ನೀಡುವ ಸೌಭಾಗ್ಯ ಪಡೆದಿದ್ದಾಗಿ ಹೇಳಿದರು ಮತ್ತು ಭಾರತದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು 1959ರಲ್ಲಿ ಈ ಪಗೋಡಾಗೆ ಭೇಟಿ ನೀಡಿದ್ದನ್ನು ಸ್ಮರಿಸಿದರು.
ಭಾರತ ಮತ್ತು ವಿಯಟ್ನಾಂ ನಡುವೆ 2000 ವರ್ಷಗಳ ನಂಟಿದೆ ಎಂದ ಪ್ರಧಾನಮಂತ್ರಿಯವರು, ಕೆಲವರು ಯುದ್ಧ ಮಾಡಲು ಬಂದರು ಆದರೆ ಭಾರತ ಶಾಂತಿಯ ಸಂದೇಶದೊಂದಿಗೆ ಬಂತು – ಬುದ್ಧನ ಸಂದೇಶ ಅದರಲ್ಲಿತ್ತು ಎಂದರು.
ವಿಶ್ವ ಶಾಂತಿಯ ಮಾರ್ಗದಲ್ಲಿ ನಡೆಯಬೇಕು ಎಂದ ಪ್ರಧಾನಮಂತ್ರಿಯವರು, ಅದು ಸಂತಸ ಮತ್ತು ಪ್ರಗತಿಯನ್ನು ತರುತ್ತದೆ ಎಂದರು. ಭೌದ್ಧಮತ ಭಾರತದಿಂದ ವಿಯಟ್ನಾಂಗೆ ಸಾಗರ ಮಾರ್ಗವನ್ನು ಅನುಸರಿಸಿತು, ಮತ್ತು ಹೀಗಾಗಿ ವಿಯಟ್ನಾಂ ಬೌದ್ಧಮತದ ಪರಿಶುದ್ಧತೆಯನ್ನು ಸ್ವೀಕರಿಸಿತು ಎಂದರು. ಭಾರತಕ್ಕೆ ಭೇಟಿ ನೀಡಿರುವ ಬೌದ್ಧ ಭಿಕ್ಷುಗಳ ಮುಖದಲ್ಲಿ ಹೊಳಪು ಕಾಣುತ್ತಿದೆ ಮತ್ತು ಭಾರತಕ್ಕೆ ಭೇಟಿ ನೀಡಲು ಇಚ್ಛಿಸುವವರ ಮುಖದಲ್ಲಿ ದೊಡ್ಡ ಕುತೂಹಲ ಇದೆ ಎಂದು ಹೇಳಿದರು.
ಬುದ್ಧನ ನಾಡಿಗೆ ಭೇಟಿ ನೀಡುವಂತೆ ಅದರಲ್ಲೂ ತಾವು ಸಂಸತ್ತಿನಲ್ಲಿ ಪ್ರತಿನಿಧಿಸುವ ಕ್ಷೇತ್ರ ವಾರಾಣಸಿಗೆ ಭೇಟಿ ನೀಡುವಂತೆ ಪ್ರಧಾನಮಂತ್ರಿಯವರು ಅವರಿಗೆ ಆಹ್ವಾನ ನೀಡಿದರು.